ಹಿಂದೊಮ್ಮೆ ಕಿರಿಯ ಐಪಿಎಸ್ ಅಧಿಕಾರಿಯೊಬ್ಬರು (ಕಿರಿಯ ಐಎಎಸ್-ಐಪಿಎಸ್ ಅಧಿಕಾರಿಗಳೂ ಇರುತ್ತಾರೆ. ಎಲ್ಲರೂ ಹಿರಿಯರಿರೋದಿಲ್ಲ) ಭೇಟಿಯಾಗಿದ್ದರು. ಕುಟುಂಬಸಮೇತ ಕಲ್ಯಾಣ ಕರ್ನಾಟಕದ ಪ್ರವಾಸಕ್ಕೆ ಬಂದಿದ್ದ ಅವರು ಬೀದರ್‌ನ ಕೆರೆ-ಕಟ್ಟೆಗಳನ್ನು ನೋಡಿದರು. ಆನಂತರ ತಮ್ಮ ಸ್ನೇಹಿತರಾಗಿದ್ದ ತನ್ನ ಜಿಲ್ಲಾ ಪೊಲೀಸ್ ಮುಖ್ಯಸ್ಥರ ಜೊತೆಗೆ ಕೋಟೆ-ಕಮಾನು ನೋಡಲು ಬಂದರು. ಅವರು ಬ್ಯಾಚ್‍ಮೇಟ್ ಆದ್ದರಿಂದ ಒಬ್ಬರ ಮೇಲೆ ಒಬ್ಬರಿಗೆ ಬಿಟ್ಟಿರಲಾರದ ಪ್ರೀತಿ.

ಇಂತಿಪ್ಪ ಆ ಇಬ್ಬರು ಬ್ಯಾಚ್‍ಮೇಟ್‍ಗಳು ಒಂದು ಸ್ಮಾರಕಕ್ಕೆ ಐದರಂತೆ ಒಟ್ಟು 300 ಪ್ರಶ್ನೆ ಕೇಳಿದರು. ಕೊನೆಗೆ ಅವರಿಗೆ ಒಂದು ಪ್ರಶ್ನೆ ಬಂತು. ಎಲ್ಲಾ ಸರಿ, ಈ `ಉರ್ದು’ ಅಂದರೆ ಏನು? ಆಗ ನಾನು ಅದು ಬಹಳ ಮಜಾ ವಿಷಯ. ಉರ್ದು ಅನ್ನುವುದು ಉರ್ದು ಭಾಷೆಯ ಪದ ಅಲ್ಲ, ಅದು ಟರ್ಕಿ ಪದ, ಅದಕ್ಕೆ ಅನೇಕ ಅರ್ಥಗಳು ಇವೆ. ಅದರಲ್ಲಿ ಸೈನಿಕರ ವಸತಿ, ಟೆಂಟು ಅಥವಾ ದಂಡು ಪ್ರದೇಶ, ಅಂತ ಹೇಳಿದೆ.

ಅವರಿಗೆ ಅರ್ಥವಾಗಲಿಲ್ಲ. ಅವರಿಗೆ ತಿಳಿದುಕೊಳ್ಳಲು ಅನುಕೂಲವಾಗಲಿ ಅಂತ ಉರ್ದು ಭಾಷೆಯ ಹುಟ್ಟಿನ ಕತೆ ಹೇಳಿದೆ. ಹದಿಮೂರನೇ ಶತಮಾನದಲ್ಲಿ ದೆಹಲಿಯ ರಾಜ ಇಲತಾತ್ಮಶನ ಮಗಳು ರಾಜಿಯ ಸುಲ್ತಾನಾ ಸಿದ್ಧಿ ಗುಲಾಮನನ್ನು ಪ್ರೀತಿಸಿ ಮದುವೆಯಾದ ನಂತರ ಅವರ ಮರ್ಯಾದಾ ಹತ್ಯೆಯಾಗುತ್ತದೆ. ಆ ನಂತರ ದೆಹಲಿಯ ಸುಲ್ತಾನರ ಗಾದಿ ಖಾಲಿಯಾಗುತ್ತದೆ. ಇಡೀ ದೇಶದ ಅಧಿಕಾರ ಕೇಂದ್ರ ದಖನ್‍ಗೆ ಅಂದರೆ ದಕ್ಷಿಣಕ್ಕೆ ಬದಲಾಗುತ್ತದೆ. ಸುಮಾರು ಎರಡು-ಮೂರು ನೂರು ವರ್ಷ ಅಧಿಕಾರ ದಕ್ಷಿಣದ ರಾಜ್ಯಗಳಲ್ಲಿಯೇ ಉಳಿದುಕೊಳ್ಳುತ್ತದೆ.

ಈ ನಡುವೆ ಮುಹಮ್ಮದ್ ಬಿನ್ ತುಘಲಕ್ ಏಳು ವರ್ಷ ದೆಹಲಿಯಿಂದ ದೌಲತಾಬಾದಿಗೆ ರಾಜಧಾನಿ ಬದಲಾಯಿಸಿ ಮತ್ತೆ ವಾಪಸು ಹೋಗುತ್ತಾರೆ. ಆ ನಂತರ ದಖನ್‍ನ ಬಹಮನಿ ಸಾಮ್ರಾಜ್ಯ ಒಡೆದುಹೋಗಿ ಐದು ರಾಜ್ಯಗಳಾದ ಮೇಲೆ, 16ನೇ ಶತಮಾನದಲ್ಲಿ ನಿಧಾನವಾಗಿ ಹೊಸ ಸುಲ್ತಾನರು ಬಂದು ದೆಹಲಿಯ ಪ್ರಭಾವವನ್ನು, ಅದರ ಪ್ರಾದೇಶಿಕ ಗಡಿಗಳನ್ನು ವಿಸ್ತರಿಸಿದರು. ಈ ನಡುವೆ ದಕ್ಷಿಣ ಹಾಗೂ ಉತ್ತರ ಭಾರತದ ನಡುವೆ ರಾಜಕೀಯ, ಆಡಳಿತ, ವ್ಯಾವಹಾರಿಕ ಹಾಗೂ ಸಾಂಸ್ಕೃತಿಕ ಸಂಬಂಧಗಳು ಗಟ್ಟಿಯಾದವು.

ಹದಿನೈದನೇ ಶತಮಾನದ ಆರಂಭದಲ್ಲಿ ಫಿರೋಜ್ ಷಾ, ಶಹಾಜಹಾನ್ ಹಾಗೂ ನಾಸಿರ್ ಮುಹಮ್ಮದ್ ಷಾ ಅವರ ಕಾಲದಲ್ಲಿ ಹೊಸ ಸೈನಿಕ ನೇಮಕಾತಿ ನೀತಿಯ ಪ್ರಯೋಗವಾಯಿತು. ಸುಲ್ತಾನರ ಸೈನ್ಯದಲ್ಲಿ ಕೇವಲ ಒಂದೇ ಪ್ರದೇಶದ ಸೈನಿಕರು ಇದ್ದರೆ ಬಂಡಾಯದ ಭೀತಿ ಇದ್ದುದರಿಂದ ಪ್ರತಿ ತುಕಡಿಯಲ್ಲಿ ಬೇರೆ ಬೇರೆ ಪ್ರದೇಶದಿಂದ ಬಂದ ಯುವಕರನ್ನು ಸೇರಿಸಲಾಯಿತು.

ಅವರು ಒಬ್ಬರಿಗೊಬ್ಬರು ಮಾತನಾಡಲು ಆರಂಭಿಸಿ ಒಂದು ಸಂಪರ್ಕ ಭಾಷೆ ಹುಟ್ಟು ಹಾಕಿದರು. ಅದು ಉರ್ದು. ಹೀಗಾಗಿಯೇ ಅದಕ್ಕೆ ದಂಡು ಪ್ರದೇಶದ ಭಾಷೆ, ಸೈನಿಕರ ಭಾಷೆ, ಲಷ್ಕರಿ ಜಬಾನ, ಖಡಿ ಬಾಲಿ, ಹಿಂದೂಸ್ತಾನಿ, ಅಂತಾರೆ. ಬೇರೆ ಬೇರೆ ಭಾಷೆ ಸೇರಿದ್ದರಿಂದ ರೇಖತಾ ಅಥವಾ ಮಿಶ್ರ ಭಾಷೆ ಅಂತಾರೆ ಅಂತಲೂ ಹೇಳಲಾಗುತ್ತದೆ.

ಅವರಿಗೆ ಅರ್ಥ ಆಗಲಿಲ್ಲ. ಯಾಕೆಂದರೆ ಅವರು ಈ ಭಾಷೆಯನ್ನು ಯಾರೋ ವಿದೇಶಿ ದಾಳಿಕೋರರು ನಮ್ಮ ಬಡ ಭಾರತೀಯರ ಮೇಲೆ ಹೇರಿದ್ದೆಂದು ತಿಳಿದುಕೊಂಡಿದ್ದರು. ಅದು ಅಪ್ಪಟ ಭಾರತೀಯ ಭಾಷೆ, ಅದು ದಖನ್ ಹಾಗೂ ಉತ್ತರ ಹಿಂದೂಸ್ತಾನದ ಪರಸ್ಪರ ಪ್ರಭಾವದಿಂದ ಹುಟ್ಟಿದ್ದೆಂದು ತಲೆಗೆ ಹೋಗಿರಲಿಲ್ಲ.

ಅವರಿಗೆ ಸಂದೇಹ ಹೋಗಿರಲಿಲ್ಲ. ನಾನು ಆಧುನಿಕ ಅಕಾಡೆಮಿಕ್ ಭಾಷೆಯಲ್ಲಿ ವಿವರಿಸಿದೆ. ಇದೆಲ್ಲ ತುಂಬ ವೆಲ್ ಡಾಕ್ಯುಮೆಂಟೆಡ್, ಅನೇಕರು ಬರೆದಿದ್ದಾರೆ, ಸೆಮಿನಾರ್ ಭಾಷಣ ಮಾಡಿದ್ದಾರೆ, ಅಂತ ಹೇಳಿದೆ. ಆದರೆ ಅದರಲ್ಲಿ ಒಬ್ಬ ಅಧಿಕಾರಿ ತುಂಬ ಆಸಕ್ತಿ ತೋರಿದ್ದರಿಂದ ನಾನು ಇಂಡೋ ಆರ್ಯನ್ ಭಾಷಾ ಇತಿಹಾಸದ ಪುಸ್ತಕಗಳು, ಅನ್ನ ಮೇರಿ ಶಿಮೆಲ್, ವಿನ್ಸೆಂಟ್ ಸ್ಮಿತ್, ಜಾರ್ಜ್ ಮೀಸೆಲ್, ಇತ್ಯಾದಿ ತಜ್ಞರ ಪುಸ್ತಕಗಳ ಬಗ್ಗೆ ಹೇಳಿದೆ.

`ನೀವು ತುಂಬ ಪ್ರಭಾವಿ ಅಧಿಕಾರಿ, ನಿಮಗೆ ಸರಳವಾಗಿ ಇವು ಸಿಕ್ಕಿ ಬಿಡುತ್ತವೆ’ ಅಂದೆ. ಅನೇಕ ವರ್ಷಗಳ ನಂತರ ಆ ಅಧಿಕಾರಿ ಪದ ಉನ್ನತಿ ಪಡೆದು ದೆಹಲಿಗೆ ಹೋದಾಗ ಅಲ್ಲಿಂದ ಫೋನು ಮಾಡಿದರು. ಅಲ್ಲಿ ಅವರಿಗೆ ಕಾಶ್ಮೀರದ ಒಬ್ಬ ತಜ್ಞರ ಭೇಟಿಯಾಗಿ, ಅವರು ಕಾಶ್ಮೀರಿ ದ್ರಾವಿಡ ಭಾಷೆ ಅಂತ ಹೇಳಿದಾಗ ಇವರಿಗೆ ಆಶ್ಚರ್ಯವಾಯಿತಂತೆ. ಅವರ ಜೊತೆ ಒಂದೆರಡು ಸಾರಿ ಚಹಾ ಕುಡಿದು, ಸಣ್ಣಗೆ ಉರ್ದುವಿನ ಸ್ವರೂಪ, ಅದರ ಬೆಳವಣಿಗೆಯ ಇತಿಹಾಸ ಎಲ್ಲ ಮಾತಾಡಿದ್ದರು. ಕೆಲವು ದಿನಗಳ ಹಿಂದೆ ನಾನು ಪುಸ್ತಕದ ಅಂಗಡಿಗೆ ಹೋಗಿ ನೀವು ಹೇಳಿದ ಪುಸ್ತಕ ತಂದೆ. ಓದುತ್ತಾ ಇದ್ದೇನೆ. ನನ್ನ ಅನೇಕ ಪೂರ್ವಗ್ರಹಗಳು ಪರಿಹಾರವಾದವು, ಅಂದ್ರು.

ನೀವು ಒಬ್ಬರು ಆಸಕ್ತಿ ವಹಿಸಿದ್ದರಿಂದ ಹೀಗೆ ಆಯಿತು. ಆದರೆ ನಿಮ್ಮ ಹಾಗೆಯೇ ವಿಚಾರಗಳನ್ನು ಇಟ್ಟುಕೊಂಡಿರುವ ಅನೇಕರ ಕತೆ ಏನು ಅಂತ ಅಂದೆ. ಹೌದು ಎಂದು ನಿಟ್ಟುಸಿರುಬಿಟ್ಟರು.

ಹಾಗಾದರೆ ಉರ್ದು ಭಾಷಿಕರು ಎನ್ನುವರು ಯಾರು? ಅದು ಪ್ರದೇಶದ ಭಾಷೆಯೇ ಅಥವಾ ಧರ್ಮದ ಭಾಷೆಯೇ? ಅದು ಭಾರತೀಯ ಭಾಷೆಯೇ, ಉತ್ತರದ್ದೇ, ದಕ್ಷಿಣದ್ದೇ? ಇಂತಹ ಪ್ರಶ್ನೆಗಳಿಗೆ ಉತ್ತರಿಸಲು ಇತಿಹಾಸಜ್ಞಾನ ಅಷ್ಟೊಂದು ಬೇಕಾಗಿಲ್ಲ. ಸ್ವಲ್ಪ ಸಾಮಾನ್ಯ ಜ್ಞಾನ ಸಾಕು.

ಇಪ್ಪತ್ತನೇ ಶತಮಾನದ ಮೊದಲಿಗೆ ಬನಾರಸಿ ದೇವನಾಗರಿ ಉತ್ಥಾನ ಸಮಿತಿಯವರು ಹಿಂದೂಸ್ತಾನಿ ಭಾಷೆಯನ್ನು ದೇವನಾಗರಿಯಲ್ಲಿಯೇ ಬರೆಯಬೇಕು ಎಂಬ ಆಂದೋಲನ ಆರಂಭಿಸಿದರು. ಅಲ್ಲಿಯವರೆಗೂ ಉರ್ದು ಅಥವಾ ಹಿಂದವಿ ಅಥವಾ ಹಿಂದೂಸ್ತಾನಿ ಭಾಷೆಯನ್ನು ಪರ್ಷಿಯನ್, ಅರೇಬಿಕ್, ಸಿಂಧಿ, ಉರ್ದು ಭಾಷೆ ಬರೆಯಲು ಬಳಸುವ ನಸತಾಲೀಕ ಲಿಪಿಯಲ್ಲಿಯೇ ಬರೆಯುತ್ತಿದ್ದರು. ಆಂಗ್ಲೋ-ರೋಮನ್ನರ ರಾಜಕೀಯ ಪ್ರಾಬಲ್ಯ ಇದ್ದ ಯೂರೋಪಿನ ದೇಶಗಳಲ್ಲೆಲ್ಲಾ ಆ ಲಿಪಿ ಬಳಕೆಯಾದಂತೆ, ಇಂಡೋ ಯುರೋಪಿಯನ್ ಪ್ರಾಬಲ್ಯ ಇದ್ದ ಕಡೆ ಎಲ್ಲಾ ಪರ್ಷಿಯನ್ ಲಿಪಿ ಚಾಲ್ತಿಯಲ್ಲಿ ಇದ್ದಿತು.

ಇದು ಕೇವಲ ಪರ್ಷಿಯನ್-ಅರೇಬಿಕ್ ಭಾಷೆಗಳಿಗೆ ಸೀಮಿತವಾಗಿಲ್ಲ. ಉತ್ತರ ಆಫ್ರಿಕಾದ ಭಾಷೆಗಳು, ರಷಿಯಾ ಖಂಡದ ದಕ್ಷಿಣದ ಭಾಷೆಗಳು ಹಾಗೂ ಉತ್ತರ ಭಾರತದ ಪ್ರಮುಖ ಭಾಷೆಯಾದ ಸಿಂಧಿ ಹಾಗೂ ಅದರ ಉಪ ಭಾಷೆಗಳು ಸಹಿತ ನಸತಾಲೀಕ ಲಿಪಿ ಉಪಯೋಗಿಸುತ್ತವೆ. ಸಿಖ್ ಧರ್ಮಗುರು ಅರ್ಜುನ್ ಸಿಂಗ್ ಅವರವರೆಗೂ ಪಂಜಾಬಿನಲ್ಲಿ ನಸತಾಲೀಕ ಅನ್ನು ಹೋಲುವ ಷಾಮುಖಿ ಎನ್ನುವ ಲಿಪಿ ಬಳಸಲಾಗುತ್ತಿತ್ತು.

‘ದೇವರನಾಗರಿಯಲ್ಲಿ ಬಳಸುವ ಈ ಲಿಪಿಯನ್ನು ಹಿಂದಿ ಭಾಷಿಕರು ಉಪಯೋಗಿಸಬೇಕು. ಅದೇ ಶ್ರೇಷ್ಠ’ ಎನ್ನುವ ವಾದ ಶುರುವಾಯಿತು. `ನಸತಾಲೀಕಿ ತುರ್ಕಿ, ಹಸ್ತ ಲಿಖಿ ಹಿಂದವಿ’, ಎನ್ನುವ ಘೋಷಣೆ ಕೇಳಿಬಂದವು. `ನೀವು ಬರೆಯುವುದು ಸೀದೆ ಹಾಥ ಅಥವಾ ಉಲ್ಟಾ ಹಾಥ ಎನ್ನುವುದರ ಮೇಲೆ ನೀವು ಯಾರು ಎನ್ನುವುದು ನಿರ್ಧಾರವಾಗುತ್ತದೆ’ ಎನ್ನುವ ಮಾತು ಜೋಕಿನಂತೆ ಆರಂಭವಾಗಿ, ಜನರನ್ನು ನಮ್ಮವರು, ಇತರರು ಎಂದು ವಿಭಾಗಿಸುವ ಷಡ್ಯಂತ್ರವಾಗಿ ಹೋಯಿತು.

ಭಾರತದ ಸಂವಿಧಾನರಚನಾ ಸಮಿತಿಯ ಭಾಷಾ ಸಭೆಯಲ್ಲಿ ಒಂಬತ್ತು ಜನ ಇದ್ದರು. ಅಲ್ಲಿ ಆಡಳಿತ ಭಾಷೆಯ ಚರ್ಚೆ ಬಂದಾಗ ಒಬ್ಬರು ಗೈರು ಹಾಜರಾದರು. ಹಿಂದೂಸ್ತಾನಿ-ಹಿಂದಿಗೆ ಸಮನಾಗಿ ವೋಟು ಬಿದ್ದವು. ಅಧ್ಯಕ್ಷ ಬಾಬು ರಾಜೇಂದ್ರ ಪ್ರಸಾದ್ ಅವರ ವೀಟೋ ಮತದಿಂದಾಗಿ ಹಿಂದಿ ಹಾಗೂ ದೇವನಾಗರಿ ಎನ್ನುವುದು ನಮ್ಮ ಆಡಳಿತ ಭಾಷೆ ಎನ್ನುವ ಪ್ರಸ್ತಾವನೆ ಪಾಸು ಆಯಿತು. ಇದನ್ನು ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಮನೋಜ್ ಯಾದವ್ ಅವರು ತಮ್ಮ ಹಿಂದಿ-ಉರ್ದು ಭಾಷೆಗಳ ಇತಿಹಾಸ ಎನ್ನುವ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.

ಕಳೆದ 50-60 ವರ್ಷಗಳಲ್ಲಿ, ರಾಜಕೀಯ ಕಾರಣಗಳಿಂದಾಗಿ ಉರ್ದು ಎನ್ನುವುದು ಮುಸಲ್ಮಾನರ ಭಾಷೆ ಎನ್ನುವ ನಂಬಿಕೆ ಹರಡಿದೆ. ಮುಂಚೆ ಈ ಪರಿಸ್ಥಿತಿ ಇರಲಿಲ್ಲ. ಭಾರತದ ಮೊದಲ ಪತ್ರಿಕೆ ಬೆಂಗಾಲ್ ಗಜೆಟ್ ಇಂಗ್ಲಿಷ್ ಭಾಷೆಯಲ್ಲಿ ಪ್ರಕಟವಾಯಿತು. ನಂತರದ್ದು ಸಮಾಚಾರ ದರ್ಪಣ, ಬೆಂಗಾಲಿ. ಮೂರನೇ ಪತ್ರಿಕೆ ಜಾಮ್ ಎ ಜಹಾನ್ ನುಮಾ (ಮುಂಜಾವಿನ ಮುನ್ನೋಟ) ಉರ್ದುವಿನದ್ದು. ಬೆಂಗಾಲಿ ಕವಿ ಹರಿಹರ ದತ್ತ ಅವರು ಇದನ್ನು ಆರಂಭಿಸಿದ್ದು 1822ರಲ್ಲಿ. ಅದರ ಸಂಪಾದಕರು ಸದಾ ಸುಖಲಾಲ್. ಮುನ್ಷಿ ಹರಸುಖ ರೇ ಅವರು 1850ರಲ್ಲಿ ಶುರು ಮಾಡಿದ ಕೋಹಿನೂರ್ ಬೇಗ ಜನಪ್ರಿಯವಾಯಿತು.

ಸ್ವಾಮಿ ದಯಾನಂದ ಸರಸ್ವತಿ ಅವರು ಹುಟ್ಟುಹಾಕಿದ ಆರ್ಯ ಸಮಾಜದ ಪತ್ರಿಕೆ ಮಿಲಾಪಯನ್ನು ಉರ್ದು ಹಾಗೂ ಹಿಂದಿಯಲ್ಲಿ ಛಾಪಿಸಲಾಗುತ್ತಿತ್ತು. ಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿ ಕಹಳೆ ಎನ್ನಿಸಿಕೊಂಡಿದ್ದ ಗದ್ದರ, ವತನ್, ಜಮೀನ್ದಾರ, ನಕಿಬೇ ಹ ಹಂದರ್ದ, ಅಲ್ ಹಿಲಾಲ, ಮದಿನಾ, ಪ್ರತಾಪ್, ತೇಜ, ಕೌಮೀ ಆವಾಜ ಪತ್ರಿಕೆಗಳು ಉರ್ದು ಭಾಷೆಯಲ್ಲಿ ಪ್ರಕಟಗೊಂಡವು. ಇವುಗಳಲ್ಲಿ ಕೆಲವು ಮಾತ್ರ ಮುಸ್ಲಿಮರ ಒಡೆತನ ಅಥವಾ ಸಂಪಾದಕತ್ವದಲ್ಲಿ ಇದ್ದವು.

ಇನ್ನು ಹನ್ನೆರಡನೇ ಶತಮಾನದಲ್ಲಿ ಆರಂಭವಾಗಿ 16ನೇ ಶತಮಾನದಲ್ಲಿ ಮುಕ್ತಾಯವಾದ ದೆಹಲಿ ಸುಲ್ತಾನ್‍ರ ಆಡಳಿತ ಅಥವಾ 16ರಿಂದ 19ನೇ ಶತಮಾನದವರೆಗೂ ಇದ್ದ ಮುಘಲ್ ಸಾಮ್ರಾಜ್ಯದಲ್ಲಿ ಆಡಳಿತ ಭಾಷೆಯಾಗಿ ಉರ್ದು ಇರಲಿಲ್ಲ. ಅಲ್ಲಿ ಇದ್ದದ್ದು ಪರ್ಷಿಯನ್ ಭಾಷೆ. ಈ ದೇಶದಲ್ಲಿ ಉರ್ದು ಆಡಳಿತ ಭಾಷೆಯಾಗಿ ಇದ್ದ ಏಕೈಕ ರಾಜ್ಯ ಹೈದರಾಬಾದು. ಅದೂ ಕೊನೆಯ ನಿಜಾಮ ಒಸಮಾನ ಅಲಿ ಖಾನ್ ಅವರ ಕಾಲದ 30 ವರ್ಷ ಮಾತ್ರ. ಪರ್ಷಿಯನ್‍ಅನ್ನು ಷಾಹಿ ಜುಬಾನ್ (ರಾಜರ ಭಾಷೆ) ಅಂತಲೂ, ಉರ್ದುವನ್ನು ಜುಬಾನ್- ಎ ಆವಾಮ (ಜನರ ಭಾಷೆ) ಅಂತಲೂ ಕರೆಯಲಾಗುತ್ತಿತ್ತು.

ನೀವು ಹೈದರಾಬಾದಿಗೆ ಹೋದಾಗ ಸಣ್ಣ ಹೋಟೆಲುಗಳಲ್ಲಿ ಚಹಾ ಕುಡಿದರೆ, ನೀವು ಕೇಳದೆ ಇದ್ದರೂ ಕೂಡ ನಿಮಗೆ ಬಿಸ್ಕೀಟು ಕೊಡುತ್ತಾರೆ. ನಿಮ್ಮ ಮೇಜಿನ ಮೇಲೆ ಒಂದು ಬುಟ್ಟಿ ಬಿಸ್ಕೀಟು ಇಟ್ಟು ಹೋಗುವ ವೇಟರು ನೀವು ಚಹಾ ಕೂಡಿದ ಮೇಲೆ ಆ ಬುಟ್ಟಿಯನ್ನು ವಾಪಸ್ ತೆಗೆದುಕೊಂಡು ಹೋಗುತ್ತಾನೆ. ನೀವು ತಿಂದಷ್ಟಕ್ಕೆ ಮಾತ್ರ ಬಿಲ್ಲು ಕೊಡುತ್ತಾನೆ. ಆ ಬಿಸ್ಕೀಟಿನ ಹೆಸರು ಒಸಮಾನಿಯ. ಅದು ಕೊನೆಯ ನಿಜಮರ ಹೆಸರು.

ಅದರ ಹಿಂದಿನ ಕತೆ ರೋಚಕವಾದದ್ದು. ಜಗತ್ತಿನ ಬೇಕರಿಗಳು ಯುರೋಪಿನ ಅಡುಗೆ ಶೈಲಿ ಬಳಸುವುದು ಹಾಗೂ ಅಲ್ಲಿ ತಯಾರಾದ ಆಹಾರ ಸಾಮಗ್ರಿ ಸಂರಕ್ಷಿಸಿ ಇಡಲು ಫ್ರಿಜ್ ಬೇಕಾಗುವುದನ್ನು ಗಮನಿಸಿದ ಒಸಮಾನ ಅಲಿ ಖಾನ್ ಅವರು ಟರ್ಕಿಯಂತಹ ಉಷ್ಣ ಪ್ರದೇಶದ ಬೇಕರಿಗಳನ್ನು ಅಧ್ಯಯನ ಮಾಡಲು ಹೈದರಾಬಾದಿನಿಂದ ಒಂದು ತಂಡವನ್ನು ಕಳಿಸಿದರು. ಅಲ್ಲಿಂದ ಕುಶಲ ಬೇಕರಿ ಕೆಲಸಗಾರರನ್ನು ಕರೆಸಿ ತಮ್ಮ ರಾಜ್ಯದಾದ್ಯಂತ ಅಂದರೆ ಇಂದಿನ ಆಂಧ್ರ-ಮಹಾರಾಷ್ಟ್ರ-ಕರ್ನಾಟಕ ರಾಜ್ಯಗಳ ಕೆಲವು ಪ್ರದೇಶಗಳಲ್ಲಿ ಸ್ಥಳೀಯ ಯುವಕರಿಗೆ ತರಬೇತಿ ನೀಡಿದರು. ಇದನ್ನು ಕಲಿತು ಬೇಕರಿ ಆರಂಭಿಸಿದ ಕುಟುಂಬಗಳು ರಾಜರ ಮೇಲಿನ ಅಭಿಮಾನಕ್ಕೆ ಆ ಬಿಸ್ಕೀಟಗೆ ಒಸಮಾನಿಯ ಅಂತ ಹೆಸರು ಇಟ್ಟರು. ದಖನ್‍ನ ಬೇಕರಿಯಲ್ಲಿ ತಯಾರಾಗುವ ಬಿಸ್ಕೀಟು, ಬ್ರೆಡ್ಡು, ಕೇಕ್, ಸಿಹಿ ತಿಂಡಿ, ಹಾಲಿನ ತಿಂಡಿ, ಎಲ್ಲವೂ ಈಸ್ಟ್ ಇಲ್ಲದೆ ತಯಾರು ಆಗುತ್ತವೆ. ಒಣಹವೆಯಲ್ಲಿ, ಫ್ರಿಜ್ ಇಲ್ಲದೆ ಅನೇಕ ದಿನ ಉಳಿಯುತ್ತವೆ. ತಮ್ಮದೇ ಆದ ವಿಶಿಷ್ಟ ರುಚಿ ಹೊಂದಿರುತ್ತವೆ.

ದಖನ್ ಪ್ರಾಂತದ ಅಭಿವೃದ್ಧಿಯಲ್ಲಿ ನಿಜಾಮರ ಕೊಡುಗೆ ಅನೇಕ. ಅವರು ನೀರಾವರಿ ಯೋಜನೆಗಳು, ಉದ್ದಿಮೆಗಳು, ಸುಧಾರಿತ ತಳಿ ಹಾಗೂ ಕಸಿಯಂತಹ ಕೃಷಿ ತಂತ್ರಜ್ಞಾನಕ್ಕೆ ಒತ್ತು ಕೊಟ್ಟರು. ಅವರ ಕಾಲದಲ್ಲಿ ರಸ್ತೆ, ಸೇತುವೆ, ನಗರ ಯೋಜನೆ, ನೈರ್ಮಲ್ಯ, ಒಳಚರಂಡಿ, ಸ್ಮಾರಕ ಹಾಗೂ ಇತರ ಕಟ್ಟಡಗಳು ರೂಪುಗೊಂಡವು. ವಜ್ರ, ಚಿನ್ನ, ಬೆಳ್ಳಿ ಆಭರಣ ತಯಾರಿಕೆ, ಖಾದಿ, ನೂಲು ತಯಾರಿಕೆ, ಕೈಮಗ್ಗ ಹಾಗೂ ಸುಧಾರಿತ ಮಗ್ಗ, ಗ್ರಾಮೋದ್ಯೋಗ, ನಿರ್ಮಲ, ಬಿದರಿ, ಜರದೋಜಿ ಮುಂತಾದ ಕರಕುಶಲ ಕಲೆಗಳನ್ನು ಬೆಂಬಲಿಸಿದರು. ದೇವಸ್ಥಾನ, ಚರ್ಚುಗಳನ್ನು ಕಟ್ಟಿದರು, ದಾನ-ದತ್ತಿ ಕೊಟ್ಟರು.

ಪ್ರಜೆಗಳಿಗೆ ಆಧುನಿಕ ಶಿಕ್ಷಣ ನೀಡಬೇಕು ಎಂದು ವಿಶ್ವವಿದ್ಯಾಲಯ, ವೈದ್ಯಕೀಯ ಕಾಲೇಜು, ಇಂಜಿನಿಯರಿಂಗ್ ಕಾಲೇಜು, ಮಹಿಳಾ ಕಾಲೇಜು, ಕೃಷಿ ತರಬೇತಿ ಕೇಂದ್ರ ಆರಂಭಿಸಿದರು. ಸುಮಾರು 250 ವರ್ಷ ಆಳಿದ ನಿಜಾಮರ ಆಡಳಿತದ ಕೊನೆಯ ಮೂರು ವರ್ಷ ಕರಾಳ ಕಾಲ ಎನ್ನಿಸಿಕೊಂಡಿತು. ಅವರ ಬೆಂಬಲಿಗರಾಗಿದ್ದ ಕೆಲವರು ರಜಾಕಾರ ಎಂಬ ಸ್ವಯಂಸೇವಕ ದಳ ಕಟ್ಟಿಕೊಂಡು ಕೋಮುಗಲಭೆ, ದಂಗೆ ಮಾಡಿಸಿ ಹಿಂಸಾಚಾರಕ್ಕೆ ಇಳಿದರು. ಇತಿಹಾಸ ಸರಿಯಾಗಿ ತಿಳಿಯದ ಯುವಜನರಿಗೆ ನಿಜಾಮರ ಬಗ್ಗೆ ಕಾಯಂ ತಪ್ಪು ಕಲ್ಪನೆ ಬರುವಂತೆ ಆಯಿತು.

ದೆಹಲಿ ಸುಲ್ತಾನರು ಭಾರತ ಮೂಲದವರು. ಬೇರೆ ಎಲ್ಲಿಂದಲೋ ದಂಡು ಎತ್ತಿ ಬಂದವರಲ್ಲ. ಅವರು ರಾಜಕೀಯ, ಆಡಳಿತ, ಕೃಷಿ, ಮೋಜಣಿ, ವ್ಯಾಪಾರದ ಲೆಕ್ಕಪತ್ರ ಪದ್ಧತಿ, ನೀರಾವರಿ, ಕಲೆ, ಸಾಹಿತ್ಯ, ಕರ ಕುಶಲ ಕಲೆ, ಪ್ರೋತ್ಸಾಹಿಸಿದರು.

ಕರ್ನಾಟಕದ ಬಹುಭಾಗವನ್ನು ಆಳಿದ ಬಹಮನಿ-ಅದಿಲ್ ಷಾಹಿ ಸುಲ್ತಾನರು ಭಾವೈಕ್ಯದ ಸಮಾಜ ನಿರ್ಮಾಣ ಮಾಡಲು ಶ್ರಮಿಸಿದರು. ಉತ್ತರದ ಜಾಜಿಯ ಸುಂಕ ದಕ್ಷಿಣದಲ್ಲಿ ಕಾಣದು. ಪ್ರಾಚೀನ ಕಾಲದಿಂದ ಹಿಡಿದು ಇಂದಿನವರೆಗೂ ಎಲ್ಲಾ ಧರ್ಮದ ಸ್ಮಾರಕಗಳು ಉಳಿದುಕೊಂಡಿರುವುದು ದಕ್ಷಿಣದಲ್ಲಿ ಮಾತ್ರ ಎಂದು ಏಶಿಯದ ತುಂಬ ಸಂಚಾರ ಮಾಡಿದ ಛಾಯಾಚಿತ್ರಗ್ರಾಹಕರಾದ ಕ್ಲಿರಿ ಆನ್ ಅವರು ತಮ್ಮ `ದಖನ್ ಚಿತ್ರಗಳು’ ಎಂಬ ಪುಸ್ತಕದಲ್ಲಿ ಹೇಳಿದ್ದಾರೆ.

ಬಹಮನಿ ಸಾಮ್ರಾಜ್ಯದ ಪ್ರಧಾನ ಮಂತ್ರಿಯಾಗಿದ್ದ ಮಹಮೂದ ಗವಾನ ಇಂದಿಗೆ 600 ವರ್ಷಗಳ ಹಿಂದೆ ಬೀದರಿನಲ್ಲಿ ವಿಶ್ವಮಟ್ಟದ ವಿಶ್ವವಿದ್ಯಾಲಯ ನಿರ್ಮಿಸಿದ. ಅಲ್ಲಿಗೆ ಕಲಿಯಲು-ಕಲಿಸಲು ಜಗತ್ತಿನ ಅನೇಕ ಕಡೆಗಳಿಂದ ವಿದ್ಯಾರ್ಥಿ-ಶಿಕ್ಷಕರು ಬಂದರು. ಅಲ್ಲಿ ಗಣಿತ, ಕಾವ್ಯ, ಅರ್ಥಶಾಸ್ತ್ರ, ಭೂಗೋಳ ಶಾಸ್ತ್ರ, ಯುದ್ಧ ಕಲೆ, ಸಾರ್ವಜನಿಕ ಆಡಳಿತ ಮುಂತಾದ ವಿಷಯಗಳನ್ನು ಕಲಿಸಲಾಗುತ್ತಿತ್ತು.

ಅಲ್ಲಿಯವರೆಗೆ ರಾಜ-ಸುಲ್ತಾನರ ಮನಸ್ಸಿಗೆ ಬಂದಂತೆ ನಡೆಸಲಾಗುತ್ತಿದ್ದ ಆಡಳಿತವನ್ನು ಶಿಸ್ತುಬದ್ಧ ವಿಷಯವಾಗಿ ಪರಿಗಣಿಸಲಾಯಿತು. ಸರಕಾರಿ ನೌಕರರ ಸಂಬಳ ಹೆಚ್ಚು ಮಾಡಲು ಆಡಳಿತ ಸುಧಾರಣಾ ಸಮಿತಿ, ಸಂಬಳ ನಿಗದಿ ಸಮಿತಿ ರಚಿಸಲಾಯಿತು. ಆಧುನಿಕಕಾಲದ ಜನ ಕಲ್ಯಾಣದ ಕೆಲಸಗಳು ಅಂತ ಅನ್ನಿಸಿಕೊಂಡಿರುವ ವಿಧವಾ ಪಿಂಚಣಿ, ವಿದ್ಯಾರ್ಥಿ ವೇತನ, ಮಹಿಳಾ ವಿದ್ಯಾರ್ಥಿ ನಿಲಯಗಳನ್ನು ಗವಾನನ ಕಾಲದಲ್ಲಿ ಆರಂಭಿಸಲಾಯಿತು. ಇದನ್ನು ಈಷಕಿ, ಅಫಣಾಸಿ ನಿಕೆಟಿನ, ಜಾಮಿ ಮುಂತಾದ ಹಿಂದಿನ ಇತಿಹಾಸಕಾರರು, ಹೆಲೆನ್ ಫಿಲೋನ್, ಜಾರ್ಜ್ ಮೈಕೆಲ್, ಸಾರಾ ಮೊಂಡಿನಿ ಮುಂತಾದ ಇಂದಿನ ಕಾಲದ ಸಂಶೋಧಕರು ಉಲ್ಲೇಖಿಸಿದ್ದಾರೆ.

ಸರಸ್ವತಿ ವಂದನೆಯಿಂದ ಆರಂಭವಾಗುವ ಕಿತಾಬ್ ಎ ನವರಸ ಪುಸ್ತಕ ದ ಲೇಖಕ ಬೀಜಪುರದ ಆದಿಲ್ ಷಾಹಿ ದೊರೆ ಇಬ್ರಾಹಿಂ. ಇವನು ಗಣಪತಿ ಸ್ತೋತ್ರವನ್ನು, ನಮ್ಮ ನೆಲದ ಜನಪದ ದೈವಗಳನ್ನು, ಸ್ಮರಿಸುತ್ತಾನೆ. ಇತರರಿಂದ ಜಗದ್ಗುರು ಎನ್ನಿಸಿಕೊಂಡ ಇಬ್ರಾಹಿಂ ತನ್ನನ್ನು ತಾನು `ಮುರಿದ’ (ಶಿಷ್ಯ) ಎಂದು ಕರೆದುಕೊಳ್ಳುತ್ತಾನೆ. ದಖನ್ ಸೇರಿದಂತೆ ಇಡೀ ಹಿಂದೂಸ್ತಾನ್‍ದ ಇತಿಹಾಸ ಬರೆಸಿದ ಆದಿಲ್ ಷಾಹಿ ದೊರೆಗಳು ಅದರಲ್ಲಿ ಕೇವಲ ರಾಜಕೀಯ ಇತಿಹಾಸ ತುಂಬಿಕೊಳ್ಳದಂತೆ, ಸಾಂಸ್ಕೃತಿಕ, ಸಾಮಾಜಿಕ ಸಂಗತಿಗಳು ಸಹಿತ ಸೇರಿಕೊಳ್ಳುವಂತೆ ನೋಡಿಕೊಂಡರು.

ಐದು ನದಿಗಳ ಜಿಲ್ಲೆ ಬಿಜಾಪುರದಲ್ಲಿ ಕುಡಿಯುವ ನೀರು ಹಾಗೂ ನೀರಾವರಿ ವ್ಯವಸ್ಥೆಗೆ ಅಡಿಗಲ್ಲು ಹಾಕಿದವರು ಆದಿಲ್ ಶಾಹಿ ದೊರೆಗಳು. ಜಿಲ್ಲೆಯ ಅನೇಕ ಕಡೆ ಭೂಮಿಯ ಕೆಳಗೆ ಮಣ್ಣಿನ ಪೈಪುಗಳನ್ನು ಹಾಕಿ, ಕೇವಲ ಗುರುತ್ವಾಕರ್ಷಣ ಶಕ್ತಿಯಿಂದ ನೀರು ಕೆಳಗಿನಿಂದ ಮೇಲೆ ಹರಿಯುವಂತೆ ಮಾಡುವ ತಂತ್ರಜ್ಞಾನವನ್ನು ಅವರು ರೂಪಿಸಿದರು. ಅವರು 17ನೇ ಶತಮಾನದಲ್ಲಿ ಕುಮಟಗಿಯಿಂದ ಬಿಜಾಪುರಕ್ಕೆ ಹಾಕಿದ ಕುಡಿಯುವ ನೀರಿನ ತೆರಕೋಟ ಕಾಲುವೆಗಳು ಇನ್ನೂ ಇವೆ.

ಹಳೆ ಮೈಸೂರಿನ ಬಹುಭಾಗವನ್ನು ಆಳಿದ ಹೈದರ್ ಅಲಿ ಹಾಗೂ ಟಿಪ್ಪುಸುಲ್ತಾನ್ ಅವರು ಜನಪರ ಆಡಳಿತ ನೀಡಿದವರು. ರಾಜಕೀಯಪ್ರೇರಿತ ಇತಿಹಾಸಕಾರರು ಏನೇ ಹೇಳಿದರೂ ಕೂಡ ಮೈಸೂರು ಸುಲ್ತಾನರ ಕೊಡುಗೆಗಳನ್ನು ಮರೆಸಲು ಸಾಧ್ಯ ಇಲ್ಲ. ಅವರು ಗಟ್ಟಿ ಆಡಳಿತ ನಡೆಸಿದರು. ವಿವಿಧ ಧರ್ಮ ಆಚರಣೆ ಮಾಡುವ ಜನರ ಮಧ್ಯೆ ಸಂಬಂಧ ಕೆಡದಂತೆ ನೋಡಿಕೊಂಡರು.

ಅರಾಜಕತೆ ಹಾಗೂ ಅಸಮರ್ಥ ನಾಯಕತ್ವದ ನೆವದಲ್ಲಿ ಬ್ರಿಟಿಷರು ರಾಜ-ರಾಣಿಯರ ಆಡಳಿತ ಕೊನೆಗಾಣಿಸತೊಡಗಿದಾಗ ಅದನ್ನು ಬಹಿರಂಗವಾಗಿ ವಿರೋಧಿಸಿದರು. ಭಾರತೀಯ ರಾಜವಂಶಸ್ಥರು ಈಸ್ಟ್ ಇಂಡಿಯಾ ಕಂಪನಿಗೆ ಕಪ್ಪ ಕೊಡಬೇಕು ಎನ್ನುವುದನ್ನು ಒಪ್ಪದೆ ಹೋರಾಟ ಮಾಡಿದರು. ಬ್ರಿಟಿಷರ ವಿರುದ್ಧ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೂಟ ಸ್ಥಾಪನೆಗೆ ಪ್ರಯತ್ನ ಮಾಡಿದರು. ಈ ನೆಲದಲ್ಲಿ ಬ್ರಿಟಿಷರ ವಿರುದ್ಧ ಸಕಾರಣವಾಗಿ ಯುದ್ಧ ಮಾಡಿದರು.

ಬ್ರಿಟಿಷರ ವಿರುದ್ಧ ಯುದ್ಧದಲ್ಲಿ ಹೊಸ ಆಯುಧ ಬಳಸಬೇಕು ಎಂದುಕೊಂಡು ಫ್ರೆಂಚ್ ಸರಕಾರದ ಜೊತೆ ಪತ್ರ ವ್ಯವಹಾರ ನಡೆಸಿ ರಾಕೆಟ್ ತಂತ್ರಜ್ಞಾನ ಅಭಿವೃದ್ಧಿಪಡಿಸಿದವನು ಟಿಪ್ಪು. ಅವನ ಕಾಲದ ರಾಕೆಟ್‍ಗಳನ್ನು ಇಟ್ಟ ಸಂಗ್ರಹಾಲಯವನ್ನು ಡಾ. ಅಬ್ದುಲ್ ಕಲಾಂ ಕೆಲವು ವರ್ಷಗಳ ಹಿಂದೆ ಉದ್ಘಾಟಿಸಿದರು. `ಭಾರತದ ಮಿಸೈಲ್ ಯುಗ ಟಿಪ್ಪುವಿನಿಂದ ಆರಂಭವಾಯಿತು’ ಎನ್ನುವ ಮಾತನ್ನು ಅವರು ಹೇಳಿದ್ದಾರೆ.

ಮೈಸೂರು ಸುಲ್ತಾನರ ಸಾಮಾಜಿಕ-ಆರ್ಥಿಕ, ಸಾಂಸ್ಕೃತಿಕ ಕೊಡುಗೆಗಳು ಸಹಾ ಅಷ್ಟೇ ವಿಶಿಷ್ಟವಾದವು. ಮೇಲುಜಾತಿ ರಾಜರು ಕೆಳಜಾತಿ ಹೆಣ್ಣುಮಕ್ಕಳ ಮೇಲೆ ಹಾಕಿದ ಸ್ತನ ಸುಂಕ ತೆಗೆದು ಹಾಕಿದವನು ಟಿಪ್ಪು. ಶೂದ್ರ ಮಹಿಳೆಯ ಮೊದಲ ಮದುವೆ ನಂಬೂದರಿಯ ಜೊತೆ ಎನ್ನುವ ನಿಯಮ ಮುರಿದವನು ಟಿಪ್ಪು.

ಬ್ರಿಟಿಷರ ವಿರುದ್ಧ ಟಿಪ್ಪು ಯುದ್ಧ ಮಾಡುವಾಗ ಬ್ರಿಟಿಷರ ಬೆಂಬಲಕ್ಕೆ ನಿಂತವರಲ್ಲಿ ಮರಾಠಾ ರಾಜರು ಇದ್ದರು. ಅರ್ಕಾಟ ನವಾಬರಂತಹ ಮುಸ್ಲಿಂ ರಾಜರೂ ಇದ್ದರು ಎನ್ನುವುದನ್ನು ನಾವು ಮರೆಯಬಾರದು. ಮರಾಠರ ಸೈನ್ಯ ನಾಶ ಮಾಡಿದ ಶೃಂಗೇರಿ ಮಠವನ್ನು ತಿಪ್ಪೆ ರುದ್ರಸ್ವಾಮಿಯ ಆಶೀರ್ವಾದದಿಂದ ಜನಿಸಿದ ಟಿಪ್ಪುಸುಲ್ತಾನ್ ಜೀರ್ಣೋದ್ಧಾರ ಮಾಡಿದ. ಆ ಮಠಕ್ಕೆ ದಾನ-ದತ್ತಿ ನೀಡಿದ. ಮಲಬಾರು-ಕರ್ನಾಟಕದ ಅನೇಕ ದೇವಸ್ಥಾನಗಳಿಗೆ ಒಂದು ಸಾವಿರಕ್ಕೂ ಹೆಚ್ಚು ಎಕರೆ ಭೂಮಿ ದಾನ ನೀಡಿ, ಧನಸಹಾಯ ಮಾಡಿದ. ಮೈಸೂರು ಸುಲ್ತಾನರು ಸುಧಾರಿತ ಕಬ್ಬು ಹಾಗೂ ಕಾಫಿ, ದನಕರು ತಳಿಗಳ ಪ್ರಚಾರ ಮಾಡಿದವರು. ಯುದ್ಧ ತಂತ್ರವಾಗಿ ಕಾವಲು ಗೋಪುರ, ತೋಪುಗಳು ಕಟ್ಟುವುದು, ಸುಧಾರಿತ ಕುದುರೆ ತಳಿಗಳ ಪಾಲನೆ, ಪಾರಿವಾಳ-ಗಿಡುಗ, ಉಡಗಳ ಬಳಕೆ ಮಾಡಿದರು.

ದೇಸೀ ಕುರಿ ಮತ್ತು ಆಡಿನ ತಳಿ ಅಭಿವೃದ್ಧಿ, ತೇರಾಕೋಟ ನೀರಾವರಿ ಕಾಲುವೆಗಳು, ಬತ್ತದ ನಾಟಿ ಪದ್ಧತಿಗಳ ಬಗ್ಗೆ ರೈತರಿಗೆ ತರಬೇತಿ ನೀಡಿದರು. ಹೊಸ ಪಂಚಾಂಗ, ನಾಣ್ಯ ಪದ್ಧತಿ, ಶಿಷ್ಯವೃತ್ತಿ ಸಹಿತ ಸೌಲಭ್ಯಗಳನ್ನು ಶುರು ಮಾಡಿದರು.

ಕಲೆ-ಸಾಹಿತ್ಯಕ್ಕೆ ಉರ್ದು ಭಾಷಿಕರ ಕೊಡುಗೆ ಮೌಲ್ಯಯುತವಾದದ್ದು. ಭಾರತದಲ್ಲಿ 2011ರ ಜನಗಣತಿ ಪ್ರಕಾರ ಸುಮಾರು 22,000 ಭಾಷೆಗಳು ಇವೆ. ಆದರೆ ಇದರಲ್ಲಿ ಕವಿಗೋಷ್ಠಿಯ ಪರಂಪರೆ ಅತಿ ಗಟ್ಟಿಯಾಗಿದ್ದು, ಇವತ್ತಿಗೂ ಜನಪ್ರಿಯವಾಗಿ ಇರುವುದು ಉರ್ದುವಿನಲ್ಲಿ ಮಾತ್ರ.

ಆಧುನಿಕ ಕಾಲದಲ್ಲಿ ಸವದತ್ತಿ ಯಲ್ಲಮ್ಮನ ಮೇಲೆ ಹಾಡು ಬರೆದ ಹಲಸಂಗಿ ಖಾಜಾ ಸಾಹೇಬರು, ಶಿಶುನಾಳ ಶರೀಫರು, ಅಬ್ದುಲ್ ಕರೀಂಖಾನರು, ನಿತ್ಯೋತ್ಸವದ ನಿಸ್ಸಾರ ಅಹ್ಮದ್ ಅವರು, ಮುಂಡರಗಿಯ ಫಕೀರೇಶರು, ನಾರಾಯಣಪುರದ ಮಲ್ಲಿಕಾರ್ಜುನ ಸ್ವಾಮಿ ದರ್ಗಾದ ಸಾಹೇಬರು, ಬಿಜಾಪುರದ ಖಾದರ ಲಿಂಗನ ಪದಗಳು ಕನ್ನಡ ಕಾವ್ಯದ ಅಮೂಲ್ಯ ರತ್ನಗಳು. ಇವಿಲ್ಲದೆ ಕನ್ನಡ ಸಾಹಿತ್ಯ ಅಪೂರ್ಣ.

ಮುಸಲ್ಮಾನರೆ ಇಲ್ಲದ ಹಳ್ಳಿಗಳಲ್ಲಿ ಮೊಹರಂ ಆಚರಿಸುವ ಈ ನಾಡಿನಲ್ಲಿ ಕೋಮು ಭಾವನೆ ಬರದಂತೆ ತಡೆಯುತ್ತಿರುವವು ಸಣ್ಣಸಣ್ಣ ಊರುಗಳಲ್ಲಿ ಇರುವ ದರ್ಗಾಗಳು, ಸೂಫಿಗಳ ಚಿಂತನೆಗಳು.

ಗೃಹ ನಿರ್ಮಾಣ ಹಾಗೂ ವಾಸ್ತು ಶಾಸ್ತ್ರಕ್ಕೆ ಉರ್ದು ಭಾಷಿಕ ದೊರೆಗಳ, ವಿಜ್ಞಾನಿಗಳ ಕೊಡುಗೆ ಮಹತ್ವದ್ದು. ಚಂಡೀಗಢದ ನಿರ್ಮಾಣಕ್ಕೆ ಬಂದ ಲಿ ಕೊರ್ಬುಸಿಯರ ಅವರು `ನೀವು ನಿಮ್ಮಲ್ಲಿ ವಾಸ್ತು ಶಾಸ್ತ್ರದ ಖಜಾನೆಯನ್ನು ಇಟ್ಟುಕೊಂಡು ಈ ಯುರೋಪಿಯನ್‍ನನ್ನು ಯಾಕೆ ಕರೆಯಿಸಿದಿರಿ? ಎಂದು ಕೇಳಿದರಂತೆ.

ಉರ್ದು ಭಾಷಿಕರು ಯಾರು ಎನ್ನುವ ಪ್ರಶ್ನೆಗೆ ಸಿದ್ಧ ಉತ್ತರಗಳು ಸಿಗದೇ ಹೋದಾಗ ಅವರ ವಿಶಿಷ್ಟ ಸಾಧನೆಗಳು ಯಾವುವು ಎನ್ನುವುದು ಸಮಾಜದ ಇತರ ಗುಂಪುಗಳಷ್ಟೇ ಸಹಜವಾದವುಗಳು ಎನ್ನುವ ಅರಿವು ನಮ್ಮನ್ನು ಬಹುಕಾಲ ಕಾಯಬಲ್ಲದು.

  • ಹೃಷಿಕೇಶ ಬಹಾದ್ದೂರ ದೇಸಾಯಿ

ಇಂಗ್ಲಿಷ್ ಪತ್ರಿಕೋದ್ಯಮದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹೃಷಿಕೇಶ ಅವರಿಗೆ ಕರ್ನಾಟಕದ ಬಹು ಸಂಸ್ಕೃತಿಗಳ ಬಗ್ಗೆ ಆಸಕ್ತಿ. ಅದರಲ್ಲಿಯೂ ಬಹಮನಿ ಸುಲ್ತಾನರು, ನಿಜಾಮರ ಕಾಲದ ಸಾಮಾಜಿಕ-ಆರ್ಥಿಕ-ಸಾಂಸ್ಕೃತಿಕ ಸಂಗತಿಗಳ ಬಗ್ಗೆ ವಿಶೇಷ ಅಧ್ಯಯನ ನಡೆಸಿದ್ದಾರೆ. ಉರ್ದು ಭಾಷೆಯಿಂದ ಕವಿತೆಗಳನ್ನು ಅನುವಾದಿಸುವುದು ಅವರ ಆಸಕ್ತಿಗಳಲ್ಲಿ ಒಂದು.


ಇದನ್ನೂ ಓದಿ: ರೈತಬಂಧು ಪ್ರವಾದಿ ಮುಹಮ್ಮದ್ (ಸ) : ಮಿಸ್ರಿಯಾ ಐ ಪಜೀರ್

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ಹೃಷಿಕೇಶ ಬಹಾದ್ದೂರ ದೇಸಾಯಿ
+ posts

1 COMMENT

LEAVE A REPLY

Please enter your comment!
Please enter your name here