Homeಅಂಕಣಗಳುರೈತಬಂಧು ಪ್ರವಾದಿ ಮುಹಮ್ಮದ್ (ಸ) : ಮಿಸ್ರಿಯಾ ಐ ಪಜೀರ್

ರೈತಬಂಧು ಪ್ರವಾದಿ ಮುಹಮ್ಮದ್ (ಸ) : ಮಿಸ್ರಿಯಾ ಐ ಪಜೀರ್

“ನಿನ್ನ ಕೈಗಳಲ್ಲಿ ದುಡಿದು ಸಂಪಾದಿಸಿದ ಆಹಾರವಾಗಿದೆ ಶ್ರೇಷ್ಠ ಆಹಾರ. ನೀನು ಸಂಪಾದಿಸುವ ಪ್ರತಿ ಸಂಪಾದನೆಯಲ್ಲೂ ನಿನ್ನ ಪರಿಶ್ರಮವಿರಬೇಕು” ಎಂದು ಎಚ್ಚರಿಸುತ್ತದೆ ಇಸ್ಲಾಂ.

- Advertisement -
- Advertisement -

ಪ್ರವಾದಿ ಮುಹಮ್ಮದ್(ಸ. ಅ)ರನ್ನು ಅರಿಯದವರು ಅವರಿಗೆ ಕೇವಲ ಧರ್ಮ ಪ್ರಬೋಧಕರೆಂಬ ಚೌಕಟ್ಟನ್ನು ಹಾಕಿಬಿಡುತ್ತಾರೆ. ಜೊತೆಗೆ ಪೂರ್ವಾಗ್ರಹಗಳನ್ನಿಟ್ಟುಕೊಂಡು ಇಸ್ಲಾಮನ್ನು ದ್ವೇಷಿಸುತ್ತಾರೆ. ಆದರೆ ಇತಿಹಾಸದ ಸರಿಯಾದ ತಿಳಿವು ಮಾತ್ರ ಈ ಪೂರ್ವಾಗ್ರಹಗಳನ್ನು ದೂರ ಮಾಡಬಲ್ಲದು.

ಮುಹಮ್ಮದ್ ಪೈಗಂಬರರದು (ಸ) ಬಹುಮುಖ ಆಯಾಮಗಳುಳ್ಳ ವ್ಯಕ್ತಿತ್ವ. ಧರ್ಮ ಪ್ರಬೋಧಕರಾಗಿ, ಮಾನವತಾವಾದಿಯಾಗಿ, ಸಮಾನತೆಯ ಹರಿಕಾರನಾಗಿ, ಮಾನವ ಹಕ್ಕುಗಳ ಪ್ರತಿಪಾದಕನಾಗಿ, ಸ್ತ್ರೀ ವಿಮೋಚಕನಾಗಿ, ಅತ್ಯುತ್ತಮ ಶಿಕ್ಷಕನಾಗಿ, ಪರಿಸರವಾದಿಯಾಗಿ – ಹೀಗೆ ಅವರ ವ್ಯಕ್ತಿತ್ವದ ಹರವು ವಿಸ್ತಾರಗೊಳ್ಳುತ್ತಲೇ ಹೋಗುತ್ತದೆ. ತಮ್ಮ ಬೋಧನೆಗಳನ್ನು ಪ್ರಾಯೋಗಿಕವಾಗಿ ಸ್ವತಃ ಜೀವನದಲ್ಲಿ ಅಳವಡಿಸಿಕೊಂಡು ಬದುಕುವುದರ ಮೂಲಕ ಇಡೀ ಮನುಕುಲಕ್ಕೆ ಮಾದರೀಯೋಗ್ಯರಾದರು. ಪ್ರಸಿದ್ಧ ಆಂಗ್ಲ ಸಾಹಿತಿ ಮೈಕಲ್.ಎಚ್.ಹರ್ಟ್ ತನ್ನ ಪ್ರಸಿದ್ಧ ಕೃತಿಯಾದ ‘ದಿ ಹಂಡ್ರೆಡ್ಸ್’ನಲ್ಲಿ ಪ್ರವಾದಿ ಮುಹಮ್ಮದರಿಗೆ ಪ್ರಥಮ ಸ್ಥಾನವನ್ನು ನೀಡಿದರು. ಅವರು ಅದಕ್ಕೆ ನೀಡಿದ ಕಾರಣ “ಜಗತ್ತಿನ ಇತಿಹಾಸದಲ್ಲಿ ಮಾನವಕುಲವನ್ನು ಅವರಂತೆ ಪ್ರಭಾವಿಸಿದ ವ್ಯಕ್ತಿ ಇನ್ನೊಬ್ಬರಿಲ್ಲ. ಬಹುತೇಕರು ಅವರನ್ನೋರ್ವ ಧರ್ಮ ಪ್ರಬೋಧಕರಾಗಿ ಮಾತ್ರ ಗುರುತಿಸುತ್ತಾರೆ. ವಾಸ್ತವದಲ್ಲಿ ಅವರ ವ್ಯಕ್ತಿತ್ವವನ್ನು ಕೇವಲ ಧಾರ್ಮಿಕ ಆಯಾಮದಡಿ ಹಿಡಿದಿಡಲು ಸಾಧ್ಯವಿಲ್ಲ” ಎಂಬುದಾಗಿತ್ತು.

ನಾನಿಲ್ಲಿ ಪೈಗಂಬರರ ಪರಿಸರ ಮತ್ತು ಕೃಷಿ ನೀತಿಯ ಬಗ್ಗೆ ಕ್ಷ-ಕಿರಣ ಬೀರುವ ಪುಟ್ಟ ಪ್ರಯತ್ನ ಮಾಡುತ್ತೇನೆ.

ಮೊನ್ನೆ ನನ್ನ ಪುಟ್ಟ ಮಗಳು ಕೋಲೊಂದರಿಂದ ಮನೆಯಂಗಳದ ದಾಸವಾಳ ಗಿಡಕ್ಕೆ ಬಡಿಯುತ್ತಾ ಎಲೆಗಳನ್ನು ಉದುರಿಸುತ್ತಿದ್ದಳು. ಹಾಗೆಲ್ಲಾ ಗಿಡಮರಗಳಿಗೆ ತೊಂದರೆ ಕೊಡಬಾರದು ನಮ್ಮಂತೆಯೇ ಅವುಗಳಿಗೂ ಜೀವವಿದೆ, ನೋವಾಗುತ್ತದೆ ಎಂದೆ. ಅಷ್ಟು ಹೇಳಿದ್ದೇ ತಡ, ಸಿಕ್ಕಸಿಕ್ಕ ವಸ್ತುಗಳಿಗೆಲ್ಲಾ ಬಡಿಯುತ್ತಾ ಇದಕ್ಕೆ ಜೀವವಿದೆಯೇ? ಎಂದು ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳತೊಡಗಿದಳು. ಕಿರಿಕಿರಿಯೆನಿಸಿದರೂ ಅವಳಿಗೆ ಜೀವಿಗಳು ಮತ್ತು ನಿರ್ಜೀವಿಗಳ ನಡುವಿನ ವ್ಯತ್ಯಾಸವನ್ನು ಮನವರಿಕೆ ಮಾಡಿಕೊಟ್ಟೆ. ಆ ಕೂಡಲೇ ಪಾಪ ಎಂದು ಗಿಡವನ್ನು ಅಪ್ಪಿಕೊಳ್ಳುತ್ತಾ ಇದೆಲ್ಲಾ ನಿನ್ನ ಅಮ್ಮ ನಿನಗೆ ಕಲಿಸಿದ್ದಾ ಎಂದು ಕೇಳಿದಳು. ಇದನ್ನು ಪ್ರತಿಪಾದಿಸಿ ಸಾರಿದವರು ಮುಹಮ್ಮದ್ ಪೈಗಂಬರರು(ಸ) ಎಂದೆ. ಒಮ್ಮೆ ಮುಹಮ್ಮದರು(ಸ) ಅನುಯಾಯಿಗಳ ಜೊತೆ ಮಸೀದಿಗೆ ಹೋಗುತ್ತಿದ್ದಾಗ ಅವರಲ್ಲೊಬ್ಬರು ಅಲ್ಲೇ ಪಕ್ಕದಲ್ಲಿದ್ದ ಗಿಡವೊಂದರಿಂದ ಎಲೆಗಳನ್ನು ಕಿತ್ತರು. ಇದನ್ನು ಗಮನಿಸಿದ ಪೈಗಂಬರರು, “ಇದೇನು ಮಾಡುತ್ತಿರುವಿರಿ? ವಿನಾಕಾರಣ ಎಲೆಗಳನ್ನು ಕೀಳದಿರಿ, ಅವುಗಳಿಗೂ ಜೀವವಿದೆ” ಎಂದಿದ್ದರು ಎಂದು ಅವಳದೇ ಭಾಷೆಯಲ್ಲಿ ವಿವರಿಸಿದೆ.

ಕೃಷಿಯು ಮನುಷ್ಯನ ಜೀವನದ ಅವಿಭಾಜ್ಯ ಅಂಗವಾಗಿದೆ. ನಿಮ್ಮೊಂದಿಗೆ ನಂಬಿಕೆಯಿಂದ ಜೋಪಾನವಾಗಿ ನೋಡಿಕೊಳ್ಳುವಂತೆ ನೀಡಿದ ಸ್ವತ್ತಾಗಿದೆ ಪರಿಸರ ಎಂದು ಇಸ್ಲಾಂ ಸಾರುತ್ತದೆ. ಇಸ್ಲಾಂ ಕೃಷಿಗೆ ಪ್ರಾಮುಖ್ಯತೆಯನ್ನು ನೀಡಿ ಅದನ್ನೊಂದು ಪುಣ್ಯ ಕರ್ಮವೆಂದು ಪರಿಗಣಿಸಿದೆ.

ನಾಳೆ ಲೋಕಾವಸಾನವಾಗುವುದೆಂದು ಖಾತರಿಯಿದ್ದರೂ ನಿನ್ನ ಬಳಿ ಗಿಡವೊಂದಿದ್ದರೆ ಅದನ್ನು ನೆಟ್ಟುಬಿಡು ಎಂದಿದ್ದಾರೆ ಪ್ರವಾದಿ ಮುಹಮ್ಮದ್(ಸ.ಅ). ಪ್ರಕೃತಿಯ ಮೇಲೆ ನಮಗಿರುವ ಜವಾಬ್ದಾರಿಯೇನೆಂಬುದು ಇದರಿಂದ ಮನದಟ್ಟಾಗುತ್ತದೆ.

ಮನುಷ್ಯನಂತೆಯೇ ಇತರ ಜೀವಿಗಳಿಗೂ ಈ ಪ್ರಕೃತಿಯ ಮೇಲೆ ಸಮಪಾಲಿನ ಹಕ್ಕಿದೆ ಎಂಬ ಪ್ರಜ್ಞೆಯನ್ನು ಹುಟ್ಟುಹಾಕಿದ ಅವರು “ಯಾರಾದರೂ ಒಂದು ಗಿಡ ನೆಟ್ಟರೆ/ಬೇಸಾಯ ಮಾಡಿದರೆ ಅದು ಮರವಾಗಿ ಬೆಳೆದು ಫಸಲು ನೀಡಲಾರಂಭಿಸಿದಾಗ, ಪಕ್ಷಿಗಳು, ಪ್ರಾಣಿಗಳು, ಮನುಷ್ಯರು ಅದರಲ್ಲಿನ ಫಲಗಳನ್ನು ತಿಂದರೆ ಅಥವಾ ಆ ಮರವನ್ನು ನೆರಳಿಗೋ, ಆವಾಸಕ್ಕಾಗಿಯೋ ಆಶ್ರಯಿಸಿದರೆ ದಾನದ ಪ್ರತಿಫಲವು ನೆಟ್ಟವನಿಗೆ ಲಭಿಸುವುದು” ಎನ್ನುವ ಮೂಲಕ ಹಸಿರು ಪರಿಸರವನ್ನು ಬೆಳೆಸಲು ಉತ್ತೇಜಿಸಿದರು.

ಯುದ್ಧದ ಸಂದರ್ಭದಲ್ಲಿಯೂ ಅಶಕ್ತರಿಗೆ, ವೃದ್ಧರಿಗೆ, ಸ್ತ್ರೀಯರಿಗೆ, ಮಕ್ಕಳಿಗೆ, ಮರಗಿಡಗಳಿಗೆ ಹಾಗೂ ಬೆಳೆಗಳಿಗೆ ಹಾನಿ ಮಾಡಬಾರದೆಂದು ಆಜ್ಞಾಪಿಸಿದ ಅವರ ಪರಿಸರದ ಬಗೆಗಿನ ಕಾಳಜಿ ಸರ್ವಕಾಲಕ್ಕೂ ಅನುಕರಣಾಯೋಗ್ಯವಾದುದು.

ಯಾರಲ್ಲಾದರೂ ಜಮೀನಿದ್ದರೆ ಅದನ್ನು ಕೃಷಿಗಾಗಿ ಬಳಸಬೇಕೆಂದೂ, ಒಂದು ವೇಳೆ ಉಳುಮೆ ಮಾಡುವುದಿಲ್ಲವೆಂದಾದರೆ ಯಾರಾದರೂ ಬೇಸಾಯ ಮಾಡುವವನಿಗೆ ಕೊಡಬೇಕು, ಕೃಷಿ ಭೂಮಿಯನ್ನು ಭೋಗಿಸಲು ಉಳುವ ಕೈಗಳಿಗಿಂತ ಮಿಗಿಲಾದ ಅರ್ಹ ಇನ್ನೊಬ್ಬನಿಲ್ಲ ಎಂಬುದು ಅವರ ಉಪದೇಶವಾಗಿತ್ತು. ಇಲ್ಲಿ ವಿ(ಶೇ)ಷ ಆರ್ಥಿಕ ವಲಯದ ಹೆಸರಲ್ಲಿ ಫಲವತ್ತಾದ ಕೃಷಿ ಭೂಮಿಯನ್ನು ಬಂಡವಾಳಶಾಹಿಗಳಿಗೆ ಆಳುವ ವರ್ಗವೇ ಧಾರೆಯೆರೆದು ಕೊಡುತ್ತಿದೆ. ಕೃಷಿ ಭೂಮಿಯ ನಾಶದಿಂದಾಗಿ ಕೃಷಿ ಉತ್ಪಾದನೆಯು ಕಡಿಮೆಯಾಗಿ ಬೆಲೆಯೇರಿಕೆಗೆ ಕಾರಣವಾಗುತ್ತಿದೆ. ಆಧುನಿಕ ಕೈಗಾರಿಕೆಗಳು, ಕಾಂಕ್ರೀಟು ಕಾಡುಗಳು ದುಡ್ಡಿನ ಗುಡ್ಡೆಗಳನ್ನು ನೀಡಬಹುದೇ ಹೊರತು ಹಸಿವು ಇಂಗಿಸಲಾರದು.

ರೈತ ಮತ್ತು ಮಾರುಕಟ್ಟೆಯ ನಡುವೆ ದಲ್ಲಾಳಿಯ ಮಧ್ಯಸ್ಥಿಕೆಯನ್ನು ಪ್ರವಾದಿವರ್ಯರು ವಿರೋಧಿಸಿದ್ದರು. ರೈತ ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗಬೇಕಾದುದು ಅವನ ಹಕ್ಕಾಗಿರುತ್ತದೆ. ನಾವು ನಮ್ಮ ರಾಜ್ಯದಲ್ಲೇ ಪ್ರತೀ ವರ್ಷ ಟೊಮ್ಯಾಟೊ ಬೆಳೆಗಾರರು ಸೂಕ್ತ ಬೆಲೆ ಸಿಗದೇ ರಸ್ತೆಗೆ ಸುರಿಯುವ ದೃಶ್ಯವನ್ನು ನೋಡುತ್ತಿರುತ್ತೇವೆ. ಟೊಮ್ಯಾಟೊ ಬೆಳೆಯದ ಊರಲ್ಲಿ ಅಂತಹ ಕಾಲದಲ್ಲೂ ಬಳಕೆದಾರ ಅದಕ್ಕೆ ದುಬಾರಿ ಬೆಲೆಯನ್ನೇ ಪಾವತಿಸುತ್ತಾನೆ. ಇಲ್ಲಿ ಬೆಳೆದ ರೈತ ದಿವಾಳಿಯಾದರೆ ಮಧ್ಯವರ್ತಿ ಕೊಬ್ಬುತ್ತಾನೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲಾಕ್‍ಡೌನ್ ಕಾಲದಲ್ಲಿ ಅತಿಹೆಚ್ಚು ಬೇಡಿಕೆಯಿದ್ದ ಫಲ ಕಲ್ಲಂಗಡಿ ಹಣ್ಣು. ಈ ಹಣ್ಣಿಗೆ ಅಷ್ಟು ಬೇಡಿಕೆ ಮಂಗಳೂರು ಮಾರುಕಟ್ಟೆಯಲ್ಲಿದ್ದಾಗ್ಯೂ ಕಲ್ಲಂಗಡಿ ಬೆಳೆಗಾರನಿಗೆ ಜುಜುಬಿ ಬೆಲೆ ಕೊಟ್ಟು ಖರೀದಿಸಲಾಗುತ್ತಿದ್ದುದು ಬಹಿರಂಗ ಸತ್ಯ. ಇಲ್ಲಿಯೂ ಬೆಳೆದ ಕೈಗಳನ್ನು ವಂಚಿಸಿ ದಲ್ಲಾಳಿ ಕೊಬ್ಬಿದ್ದ.

“ನಿನ್ನ ಕೈಗಳಲ್ಲಿ ದುಡಿದು ಸಂಪಾದಿಸಿದ ಆಹಾರವಾಗಿದೆ ಶ್ರೇಷ್ಠ ಆಹಾರ. ನೀನು ಸಂಪಾದಿಸುವ ಪ್ರತಿ ಸಂಪಾದನೆಯಲ್ಲೂ ನಿನ್ನ ಪರಿಶ್ರಮವಿರಬೇಕು” ಎಂದು ಎಚ್ಚರಿಸುತ್ತದೆ ಇಸ್ಲಾಂ. ಕೃಷಿ ಪ್ರಧಾನ ದೇಶವಾದ ಭಾರತದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಬಿತ್ತನೆ ಬೀಜ, ಗೊಬ್ಬರ, ಕೀಟನಾಶಕದ ಬೆಲೆಯೇರಿಕೆ, ಪ್ರಾಕೃತಿಕ ವಿಕೋಪ ಇವೆಲ್ಲದರ ಸುಳಿಯಲ್ಲಿ ಸಿಕ್ಕು ಯಾತನೆ ಅನುಭವಿಸುತ್ತಿರುವ ರೈತರಿಗೆ ದಲ್ಲಾಳಿಗಳ ಹಾವಳಿಯೂ ತಪ್ಪಿದ್ದಲ್ಲ. ಬೆವರು, ರಕ್ತ ಸುರಿಸಿ ಕಷ್ಟಪಟ್ಟು ಬೆಳೆದ ಬೆಳೆಯನ್ನು ದಲ್ಲಾಳಿಗಳು ಯಾವುದೇ ಪರಿಶ್ರಮ, ತ್ರಾಸವಿಲ್ಲದೇ ರೈತನ ಅಹವಾಲಿಗೆ ಬೆಲೆ ಕೊಡದೇ ತಾವಾಗಿಯೇ ನಿಗದಿಪಡಿಸಿದ ಬೆಲೆಗೆ ಕೊಂಡುಕೊಳ್ಳುತ್ತಾರೆ. ಒಂದರ್ಥದಲ್ಲಿ ಮಾರುಕಟ್ಟೆಯಲ್ಲಿ ದಲ್ಲಾಳಿಗಳೇ ಏಕಸ್ವಾಮ್ಯ ಮೆರೆಯುತ್ತಾರೆ.

ತರಕಾರಿ ಹಣ್ಣು- ಹಂಪಲುಗಳನ್ನು ಇಂದಲ್ಲ ನಾಳೆ ಬೆಲೆ ಹೆಚ್ಚಾಗಬಹುದೆಂದು ಶೇಖರಿಸಿಡಲಾಗದು. ಇಲ್ಲಿ ಬೆಳೆಗಾರರ ಅಸಹಾಯಕತೆಯ ಲಾಭ ಪಡೆದು ಆಧುನಿಕ ಬಂಡವಾಳಶಾಹಿತ್ವವು ಅವರನ್ನು ವಂಚಿಸುತ್ತದೆ. ಈ ರೀತಿಯ ವ್ಯವಹಾರವು ಇಸ್ಲಾಮಿನಲ್ಲಿ ನಿಷಿದ್ಧವಾಗಿದೆ. ಕ್ಷಾಮಕಾಲದಲ್ಲಿ ಕೃತಕ ಅಭಾವ ಸೃಷ್ಟಿಸಿ ಬೆಲೆಯೇರಿಸುವುದನ್ನೂ ಪ್ರವಾದಿವರ್ಯರು ಕಟುವಾಗಿ ವಿರೋಧಿಸಿದ್ದಾರೆ.

ನೈಸರ್ಗಿಕ ಸಂಪನ್ಮೂಲಗಳಾದ ನೀರು, ಮಣ್ಣು, ಉಪ್ಪು ಇವುಗಳನ್ನು ಯಾರೇ ಕೇಳಿದರೂ ನಿರಾಕರಿಸಬಾರದು ಎಂದು ಪ್ರವಾದಿಯವರು ಹೇಳಿದ್ದರು. ಯಾವಾಗ ಮನುಷ್ಯ ಪ್ರಕೃತಿಯ ಮೇಲೆ ಅಧಿಪತ್ಯ ಸಾಧಿಸಹೊರಟನೋ ಅಂದಿನಿಂದ ಗುಟುಕು ನೀರಿಗೂ ತತ್ವಾರ ಪಡಬೇಕಾದ, ಹಣ ಪಾವತಿಸಿ ಪಡೆಯಬೇಕಾದ ದುಸ್ಥಿತಿ ಬಂದೊದಗಿತು. ನಿನ್ನ ಮುಂದೆ ಸಾಗರವೇ ಹರಿದುಹೋಗುತ್ತಿದ್ದರೂ ಮೂರು ಬಾರಿಯಷ್ಟೇ ಅಂಗಸ್ನಾನವನ್ನು (ನಮಾಜಿಗೆ ಮುಂಚೆ ಮಾಡುವ ಕಡ್ಡಾಯವಾದ ಒಂದು ಕರ್ಮ) ನಿರ್ವಹಿಸಬೇಕು ಎಂದಿದ್ದಾರೆ. ಮುಂದಿನ ಪೀಳಿಗೆಗೆ ನೀರಿನ ಅಭಾವ ಕಾಡದಿರಲು ನೀರನ್ನು ಪೋಲು ಮಾಡದಿರಿ ಎಂಬ ಎಚ್ಚರಿಕೆಯೂ ಇದರಲ್ಲಡಗಿದೆ.

ಇಸ್ಲಾಂ ಹಾಗೂ ಪೈಗಂಬರರು ಬೇರೆ ಬೇರೆಯಲ್ಲ. ಅವರ ಬದುಕೇ ಇಸ್ಲಾಮಿನ ಪ್ರಾಯೋಗಿಕ ರೂಪ. ತಪ್ಪು ಕಲ್ಪನೆಗಳಿಂದಾಗಿ ಅತೀಹೆಚ್ಚು ಅಪಾರ್ಥಕ್ಕೊಳಪಡುತ್ತಿರುವ, ನಿಂದನೆಗೊಳಪಡುತ್ತಿರುವ ಪೈಗಂಬರರನ್ನು ಇಂದು ಹೆಚ್ಚು ಅಧ್ಯಯನ ಮಾಡಬೇಕಾಗಿದೆ.


ಇದನ್ನೂ ಓದಿ: ಎಲೆಮರೆಯಿಂದ: ಸಾಹಿತ್ಯದಿಂದಲೇ ಬದುಕು ಕಟ್ಟಿಕೊಂಡ ಕರಾವಳಿಯ ಮೌಲ್ವಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...