ಒಂಬತ್ತು-ಹತ್ತನೇ ಶತಮಾನದಲ್ಲಿ ವಿಶ್ವ ವಿಖ್ಯಾತರೆನಿಸಿಕೊಂಡ ಬಹುಮುಖ ಪ್ರತಿಭೆ,  ವಿದ್ವಾಂಸ, ಹಾಗೂ ಸಂಚಾರಿಯಾಗಿದ್ದಾರೆ ಅಲ್ ಬಿರೂನಿ. ಇವರ ಪೂರ್ಣ ಹೆಸರು ಅಬೂರೈಹಾನ್ ಮುಹಮ್ಮದುಬ್ನು ಅಹ್ಮದ್ ಅಲ್ ಬಿರೂನಿ. ಕ್ರಿಸ್ತ ಶಕ 970ರಲ್ಲಿ ರಷ್ಯಾದ ಖುರಾಸಾನ್ ಎಂಬಲ್ಲಿ ಜನಿಸಿದರು. ಖುರಾಸಾನ್‌ನ ಉನ್ನತ ವಿದ್ಯಾಲಯಗಳಲ್ಲಿ ಶಿಕ್ಷಣ ಪಡೆದ ಅಲ್ ಬಿರೂನಿ‌ ಧಾರ್ಮಿಕ ಅರಿವಿನ ಜೊತೆಗೆ ಗಣಿತ, ಇತಿಹಾಸ, ಭೂಗೋಳ ತತ್ವಶಾಸ್ತ್ರದಲ್ಲಿ ಪ್ರಾವೀಣ್ಯತೆಯನ್ನು ಪಡೆದರು. ಗ್ರೀಕ್, ರೋಮನ್, ಇರಾನಿಯನ್ ವಿಜ್ಞಾನದಲ್ಲಿ ಅಪಾರ ಪಾಂಡಿತ್ಯವನ್ನು ಕರಗತ ಮಾಡಿದ್ದ ಅಲ್ ಬಿರೂನಿ 20ನೇ ವಯಸ್ಸಿಗೆ ಪ್ರಸಿದ್ಧ ವಿದ್ವಾಂಸರಾಗಿ ಖ್ಯಾತಿ ಪಡೆದರು. ಅವರ ಪಾಂಡಿತ್ಯದ ಬಗ್ಗೆ ಅರಿತ ಜರ್ಜನ್ ಚಕ್ರವರ್ತಿ ಅವರನ್ನು ತನ್ನ ಅಸ್ಥಾನ ವಿದ್ವಾಂಸನಾಗಿ ನೇಮಿಸಿದರು.

ಇಸ್ಲಾಮಿ ಜಗತ್ತಿನ ಪೂರ್ವಭಾಗದಲ್ಲಿ ರಾಜಕೀಯ ಪ್ರಕ್ಷುಬ್ಧತೆ ಮತ್ತು ಆಂತರಿಕ ಕಲಹಗಳು ದಟ್ಟೈಸಿದ್ದ ನಿರ್ವಾತ ಸಮಯವಾಗಿತ್ತದು. ವಿದ್ವಾಂಸರು, ವಿಜ್ಞಾನಿಗಳು ಸುಲ್ತಾನರ ಅಧೀನದಲ್ಲಿ ಸೇವೆ ಸಲ್ಲಿಸುವುದು ಅಂದಿನ ಸಂಪ್ರದಾಯವಾಗಿತ್ತು. ಇಂದಿನ ಸರಕಾರಿ ಕೆಲಸದಂತೆ ಅಂದು ಇದು ಪ್ರತಿಷ್ಠೆಯ ವಿಚಾರವಾಗಿತ್ತು. ಅಲ್ ಬಿರೂನಿ ಆರಕ್ಕೂ ಮಿಕ್ಕ ಸುಲ್ತಾನರ ಅಧೀನದಲ್ಲಿ ಸೇವೆ ಸಲ್ಲಿಸಿದ್ದರು.

ಮಹ್ಮೂದ್ ಘಝ್ನಿಯ ಕೈ ಕೆಳಗೆ ಸೇವೆ ಸಲ್ಲಿಸುತ್ತಿದ್ದ ಸಮಯದಲ್ಲಿ ಆತನ ಪಡೆ ಭಾರತದ ಮೇಲೆ ದಂಡಯಾತ್ರೆ ನಡೆಸಿ ಪ್ರಭುತ್ವ ಸ್ಥಾಪಿಸಿತು. ಸ್ವಾಭಾವಿಕವಾಗಿಯೇ ಸುಲ್ತಾನರೊಂದಿಗೆ ಅಲ್ ಬಿರೂನಿ ಭಾರತ ತಲುಪಿದರು. 1017ರಿಂದ 1030ರ ತನಕ ಭಾರತದಲ್ಲಿ ನೆಲೆಸಿದರು. ಈ ಹದಿಮೂರು ವರ್ಷಗಳು ಅಲ್ ಬಿರೂನಿ ಬದುಕಿಗೆ ನಿರ್ಣಾಯಕ ತಿರುವನ್ನು ನೀಡಿತು. ಸ್ವತಃ ಅಲ್ ಬಿರೂನಿ ಈ ಬಗ್ಗೆ ಹೇಳುವುದು ಹೀಗೆ..; “ಅಲ್ಲಾಹನು ನನಗೆ ನೀಡಿದ ದೊಡ್ಡ ಅನುಗ್ರಹಕ್ಕೆ ಕೃತಜ್ಞನಾಗುತ್ತೇನೆ. ನನ್ನ ಗುರಿ ಈ ಮೂಲಕ ಸಫಲತೆಯನ್ನು ಕಂಡಿದೆ”. (Al biruni’s India vol. 1 p.24)

ಪ್ರಥಮವಾಗಿ ಅಲ್‌ಬಿರೂನಿ, ಹಿಂದೂಗಳನ್ನು ಕಂಡದ್ದು ಸುಲ್ತಾನ್ ಮುಹಮ್ಮದ್ ಘಝ್ನಿಯ ಅರಮನೆಯಲ್ಲಾಗಿತ್ತು. ಅವರ ಭಾಷೆ, ಸಂಸ್ಕೃತಿ, ವಿಶ್ವಾಸಾಚಾರಗಳು ಅಲ್‌ ಬಿರೂನ್‌ರಲ್ಲಿ ಜಿಜ್ಞಾಸೆಯನ್ನು ಹುಟ್ಟಿಸಿತ್ತು. ಭಾರತೀಯ ವೈದ್ಯಶಾಸ್ತ್ರ, ತತ್ವಶಾಸ್ತ್ರ, ಗಣಿತ, ವಿಜ್ಞಾನವು ಅವರ ಜ್ಞಾನ ದಾಹವನ್ನು ಮತ್ತಷ್ಟು ಉತ್ಕಟಗೊಳಿಸಿತು. ಆದರೆ ಭಾರತೀಯರೊಂದಿಗೆ ಸಂಪರ್ಕ ಸಾಧಿಸಲು, ವಿಚಾರ ವಿನಿಮಯ ನಡೆಸಲು ಭಾಷಾ ದೌರ್ಬಲ್ಯವು ಬಲುದೊಡ್ಡ ಸಮಸ್ಯೆಯಾಗಿ ಪರಿಣಮಿಸಿತು. ಭಾರತೀಯ ಮೇಲ್ವರ್ಗದವರ ಭಾಷೆ ಸಂಸ್ಕೃತವಾಗಿತ್ತು. ಅರಬಿ, ಪರ್ಶಿಯನ್, ಹಿಬ್ರೂ, ಸುರಿಯಾನಿ ಭಾಷೆಯಲ್ಲಿ ಅಲ್ ಬಿರೂನಿ ನಿಪುಣರಾಗಿದ್ದರೂ ಸಂಸ್ಕೃತ ಇದೆಲ್ಲಕ್ಕಿಂತಲೂ ಭಿನ್ನವಾಗಿತ್ತು. ಕೇವಲ ಬ್ರಾಹ್ಮಣರು ಮಾತ್ರ ಈ ಭಾಷೆಯನ್ನು ಬಳಸುತ್ತಿದ್ದರಿಂದ ಮತ್ತು ಹಿಂದೂ ಪುರಾಣ, ಉಪನಿಷತ್ತುಗಳು ಈ ಭಾಷೆಯಲ್ಲಿರುವುದರಿಂದ ಇದು ಅಂದಿನ ಕುಲೀನ ಭಾಷೆಯೆಂಬ ಭಾವನೆ ಜನರಲ್ಲಿತ್ತು. ಬ್ರಾಹ್ಮಣತೇರರ ಭಾಷೆ ಬಹುರೂಪದ್ದೂ, ವಿಭಿನ್ನವಾದದ್ದೂ ಆಗಿತ್ತು. ಮಿಕ್ಕ ಗ್ರಂಥಗಳು ಶ್ಲೋಕಗಳಾದ್ದರಿಂದ ಪುಸ್ತಕಗಳಿಂದ ಸಂಸ್ಕೃತ ಕಲಿಯುವ ವಿಧಾನವೂ ಅಂದು ಇರಲಿಲ್ಲ.

ಅವರಿಗೆ ಎದುರಾದ ಇನ್ನೊಂದು ಸಮಸ್ಯೆಯೆಂದರೆ ಧಾರ್ಮಿಕವಾದ ಜಟಿಲ ಪದ್ಧತಿಗಳು..!  ಬ್ರಾಹ್ಮಣದ ಬೋಧನೆಯು ಹಿಂದೂಧರ್ಮದ ಮೂಲವಾಗಿತ್ತು. ಶಿಕ್ಷಣ, ಬೋಧನೆ, ರಾಜಾಡಳಿತ, ಕಾನೂನು ಮುಂತಾದ ಪ್ರತಿಷ್ಟಿತ ಕ್ಷೇತ್ರಗಳು ಬ್ರಾಹ್ಮಣರ ಸುಪರ್ಧಿಯಲ್ಲಿತ್ತು. ಹಿಂದೂಧರ್ಮದಲ್ಲಿ ಜಾತಿ ವ್ಯವಸ್ಥೆ ಜಾರಿಯಲ್ಲಿದ್ದು ಮೇಲ್ಜಾತಿಯವರು ಸಮಾಜದಲ್ಲಿ ಶ್ರೇಷ್ಟರಾಗಿ ಗುರುತಿಸಿಕೊಳ್ಳುತ್ತಿದ್ದರು.

ಮಹಮ್ಮದ್ ಘಝ್ನಿಯ ದಾಳಿಯು ಉಂಟುಮಾಡಿದ್ದ ಆಘಾತವು ಭಾರತೀಯ ವಂಶಜರಿಗೆ ಮುಸ್ಲಿಮರ ಬಗ್ಗೆ ಸಹಜವಾಗಿಯೇ ದ್ವೇಷ, ಅಸಮಾಧಾನ ಮೂಡಲು ಕಾರಣವಾಗಿತ್ತು. ಅವುಗಳನ್ನು ಎತ್ತಿ ತೋರಿದ ಸವರ್ಣೀಯರು ಇಸ್ಲಾಮನ್ನು ಹಿಂಸೆಯ ಪ್ರತೀಕವಾಗಿಸಲು ಪ್ರಯತ್ನ ನಡೆಸಿದರು. ಈ ಮನೋಭಾವನೆಯು ಸಾರ್ವತ್ರಿಕವಾಗಿ ವ್ಯಾಪಿಸಿದ್ದವು. ಈ ಪ್ರಕ್ರಿಯೆಗಳೆಲ್ಲಾ ಅಲ್ ಬಿರೂನಿಯ ಭಾರತ ಪರ್ಯಟನೆಯ ಮೇಲೆ ಕೆಟ್ಟ ಪರಿಣಾಮವನ್ನು ಬೀರಿದವು.

ಆಗಷ್ಟೇ ಅಧಿಕಾರಕ್ಕೇರಿದ ಮಹಮ್ಮದ್ ಘಝ್ನಿ ಮತ್ತು ಹಿಂದೂ ಅರಸರ ನೆರವು ಅಲ್ ಬಿರೂನಿಗೆ ಲಭಿಸಿತು. ಜ್ಞಾನದೊಂದಿಗೆ ಇದ್ದ ಅಪರಿಮಿತ ತುಡಿತದಿಂದಾಗಿ ಸರ್ವ ವಿಘ್ನಗಳನ್ನು ಧಿಕ್ಕರಿಸುತ್ತಲೇ ಅಲ್ ಬಿರೂನಿ ತನ್ನ ಪರ್ಯಟನೆ ಆರಂಭಿಸಿದರು. ಗುಡ್ಡಕಾಡು ನದಿಗಳನ್ನು ಹಾದು ಅವರು ಭಾರತದ ಮೂಲೆ ಮೂಲೆಗಳಿಗೆ ತಲುಪಿದರು.

‘ನಮ್ಮ ಧರ್ಮವೇ ಉತ್ಕೃಷ್ಟ ಧರ್ಮವೆಂದು ಇಲ್ಲಿನವರು ನಂಬುತ್ತಾರೆ, ಅಲ್ಲದೇ ವಿದೇಶಿಗಳು ಅಜ್ಞಾನಿಗಳೆಂಬ ಭಾವನೆಯನ್ನು ಜನರಲ್ಲಿ ಬಿತ್ತುತ್ತಾರೆ. ಆದ್ದರಿಂದಲೇ ಭಾರತೀಯ ಜ್ಞಾನ ಜಗತ್ತು ಶುಷ್ಕಗೊಂಡಿದೆಯೆಂದೂ, ಇಂತಹ ಮೌಢ್ಯತೆಯನ್ನು ನಿವಾರಿಸಿದರೆ ಉಚ್ರಾಯತೆಯನ್ನು ಕಾಣಬಹುದು’ ಎಂದು ಅಲ್ ಬಿರೂನಿ ಉಲ್ಲೇಖಿಸುತ್ತಾರೆ. ಅಂದಿನ ಕಾಲಕ್ಕೆ ಹಿಂದೂ ಧರ್ಮ ನಂಬಿಕೆಯ ಪ್ರಕಾರ ಸಮುದ್ರ ಪ್ರಯಾಣವು ಧರ್ಮಬಾಹಿರವಾಗಿತ್ತು. ಭಾರತೀಯ ಜ್ಞಾನ ಪರಂಪರೆಯು ಹಿನ್ನಡೆಯನ್ನು ಅನುಭವಿಸಲು ಇಂಥಹ ಹಲವು ಮೂಢ ನಂಬಿಕೆಗಳೇ ಕಾರಣವೆಂಬುದಾಗಿತ್ತು ಅಲ್ ಬಿರೂನಿಯವರ ಆಂಬೋಣ.

ತಾಯ್ನಾಡು ಖುರಾಸಾನ್‌ನಲ್ಲಿ ಪ್ರಾಥಮಿಕವಾಗಿ ಸಂಸ್ಕೃತ ಭಾಷೆಯನ್ನು ಕಲಿತಿದ್ದರಾದರೂ ಅದು ಪ್ರಾಯೋಗಿಕವಾಗಿರಲಿಲ್ಲ. ಆದರೆ ಇವರ ಇಂಗಿತಕ್ಕೆ ತಕ್ಕಂತೆ ಸಂಸ್ಕೃತ ಕಲಿಕೆಗೆ ಹೆಚ್ಚಿನ ಪ್ರೇರಣೆ ನೀಡಿದ್ದು ಸಾಯವಬಾಲ ಎಂಬ ಕಾಶ್ಮೀರದ ಬ್ರಾಹ್ಮಣ ಮಿತ್ರನಾಗಿದ್ದ. ಅರಮನೆಯಲ್ಲಿದ್ದ ಹಿಂದು ಪಂಡಿತರ ಮತ್ತು ಮುನಿಗಳ ಒಡನಾಟದಿಂದಾಗಿ ಸಂಸ್ಕೃತದಲ್ಲಿ ಮತ್ತಷ್ಟು ಪ್ರಾವೀಣ್ಯತೆಯನ್ನು ಪಡೆದರು. ಅವರ ನೆರವಿನಿಂದ ಅಲ್ಲಿದ್ದ ಕೆಲವು ಸಂಸ್ಕೃತ‌ ಗ್ರಂಥಗಳ ಅಧ್ಯಯನ ಮಾಡಿದರು. ಆ ಬಳಿಕ ಕಪಿಲ, ಪತಂಜಲಿ, ಬ್ರಹ್ಮಗುಪ್ತ, ವರಾಹಮಿಹಿರ ಮುಂತಾದ ಪ್ರಾಚೀನ ವಿಧ್ವಾಂಸರು  ರಚಿಸಿದ ಸಂಸ್ಕೃತ ಗ್ರಂಥಗಳನ್ನು ಅರೇಬಿಕ್‌ ಭಾಷೆಗೆ ಅನುವಾದಿಸಿದರು.

ಅಷ್ಟೇ ಅಲ್ಲದೆ ಯೂಕ್ಲಿಡ್, ಟಾಲೆಮಿ ಮುಂತಾದ ಗ್ರೀಕ್ ವಿದ್ವಾಂಸರ ಕೃತಿಗಳನ್ನು ಶ್ಲೋಕರೂಪದಲ್ಲಿ ಸಂಸ್ಕೃತಕ್ಕೆ ಅನುವಾದಿಸಿದರು. ಸಂಸ್ಕೃತದಲ್ಲಿ ಅಲ್ ಬಿರೂನಿ ಸಾಧಿಸಿದ ಪಾಂಡಿತ್ಯದ ಮುಂದೆ ಹಿಂದೂ ವಿದ್ವಾಂಸರೆ ಅಪ್ರತಿಭರಾಗುತ್ತಿದ್ದರು. ವೈದ್ಯಶಾಸ್ತ್ರ, ತತ್ವಶಾಸ್ತ್ರ, ಖಗೋಳಶಾಸ್ತ್ರ, ಜೀವಶಾಸ್ತ್ರಗಳಲ್ಲಿ ಅಪಾರ ಆಸಕ್ತಿ ಹೊಂದಿದ್ದ ಅಲ್‌ಬಿರೂನಿ ಈ ಕುರಿತಾದ ಸಂಸ್ಕೃತ ಗ್ರಂಥಗಳನ್ನು ಅಧ್ಯಯನ ನಡೆಸಿ ಅರೇಬಿಕ್‌ನಲ್ಲಿ ಬೃಹತ್ ಗ್ರಂಥಗಳನ್ನು ರಚಿಸಿದರು. ಖಯಾಲಿಲ್ ಖುಸೂಫೈನ್‌ ಇಂದಲ್ ಹಿಂದ್, (ಭಾರತೀಯ ವೀಕ್ಷಣೆಯಲ್ಲಿ ಗ್ರಹಗಳು) ತರ್ಜುಮತ್ ಮಾಫಿ ಬ್ರಹ್ಮ ಸಿದ್ದಾಂತ್ ಮಿನ್ ತುರುಕುಲ್ ಹಿಸಾಬ್ (ಬ್ರಹ್ಮ ಸಿದ್ದಾಂತದ ಪ್ರಕಾರ  ಭಾರತೀಯ ಗಣಿತರೂಪ) ಆ ಪೈಕಿ ಕೆಲವು.

ಹೀಗೆ ಭಾರತೀಯ ವಿಜ್ಞಾನ, ಖಗೋಳಶಾಸ್ತ್ರ, ವೈದ್ಯಶಾಸ್ತ್ರ, ಜೀವಶಾಸ್ತ್ರ ಮುಂತಾದ ವಿಭಿನ್ನ ವಿಷಯಗಳಲ್ಲಿ 26 ಗ್ರಂಥಗಳನ್ನು ಅಲ್‌ಬಿರೂನಿ ರಚಿಸಿದ್ದಾರೆ. (ಈ 26 ಗ್ರಂಥಗಳೂ ಕೇವಲ ಭಾರತದ ಕುರಿತಾಗಿಯೇ ರಚಿಸಿದ್ದೆಂಬುದು ಗಮನಿಸಬೇಕಾದ ಅಂಶ) ಈ ಕಾರಣದಿಂದಲೇ ಅಂದಿನ ಭಾರತೀಯ ವಿಧ್ವಾಂಸರು ಅಲ್‌ಬಿರೂನಿಯನ್ನು ಜ್ಞಾನದ ಸಾಗರವೆಂದು ಕರೆದರು. ಗಾಂಧಾರ ದೇಶದ ಸಾಹಿ ರಾಜನ ಆಸ್ಥಾನಕ್ಕೆ ತೆರಳಿದ್ದ ಅಲ್ ಬಿರೂನಿಗೆ ವಿಶೇಷ ಗೌರವವನ್ನೊಳಗೊಂಡ ಸನ್ಮಾನವೂ ಲಭಿಸಿತ್ತು.

ಮುಹಮ್ಮದ್ ಘಜ್ನಿಯ ನಾಣ್ಯದಲ್ಲಿ ಅರಬಿ ಮತ್ತು ಸಂಸ್ಕೃತಿಗಳ ಲಿಖಿತವು ಪಡಿಮೂಡಿದೆ. ನಾಣ್ಯದ ಒಂದು ಭಾಗದಲ್ಲಿ ಅದರ ಮೌಲ್ಯ, ಹಿಜ್ರ ವರ್ಷವು ಅರಬಿಯಲ್ಲಿ ಮುದ್ರಿತಗೊಂಡಿದ್ದರೆ, ಮತ್ತೊಂದೆಡೆ ಸಂಸ್ಕೃತ ಭಾಷೆಯಲ್ಲಿ ಇದರ ನೇರ ಅನುವಾದವೂ ಕಾಣಬಹುದು.ಈ ಪ್ರಕ್ರಿಯೆಯ ಹಿಂದೆ ಕಾರ್ಯಾಚರಿಸಿದ್ದು ಅಲ್ ಬಿರೂನಿಯ ಚಿಂತನೆಗಳಾಗಿತ್ತು. ‘ಲಾಇಲಾಹ ಇಲ್ಲಲ್ಲಾಹ್ ಮುಹಮ್ಮದ್ ರಸೂಲುಲ್ಲಾಹ್’ ಎಂಬುದನ್ನು ಸಂಸ್ಕೃತದಲ್ಲಿ ‘ಅವ್ಯಕ್ತಂ ಏಕ, ಮುಹಮ್ಮದಾ ಅವತಾರಂ (ಆರಾಧ್ಯನು ಏಕನಾಗಿರುವನು, ಮುಹಮ್ಮದರು ಅವನ ಅವತಾರರಾಗಿರುವರು.) ಎಂದಿದೆ. ರಸೂಲುಲ್ಲಾ ಎಂಬುದಕ್ಕೆ ದೂತ ಎಂಬ ಪದ ಬಳಸದೆ ಅವತಾರ ಎಂದು ಸಂಭೋಧಿಸಿದರ ಬಗ್ಗೆ ಆ ಕಾಲದ ವಿಧ್ವಾಂಸರು ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಹಿಜಿರಾ ವರ್ಷ ಎಂಬುದಕ್ಕೆ ‘ಜಿನಯನ ಸಂವದಿ’ ಎಂದೂ, ಬಿಸ್ಮಿಲ್ಲಾ ಎಂಬುದಕ್ಕೆ ‘ಅವ್ಯಕ್ತೀಯ ನಾಮ’ ಎಂದೂ ಬಿರೂನಿ ಅರ್ಥ ನೀಡಿದ್ದಾರೆ.

ತಾರೀಖುಲ್ ಹಿಂದ್

ಪ್ರಾಚೀನ ಭಾರತದ ಕುರಿತು ಸಮಗ್ರವಾಗಿ ಬೆಳಕು ಚೆಲ್ಲುವ ಆರಂಭಿಕ ಗ್ರಂಥವಾಗಿದೆ ಅಲ್ ಬಿರೂನಿಯ ತಾರೀಖುಲ್ ಹಿಂದ್‌. ಸುಮಾರು ಹದಿಮೂರು ವರ್ಷಗಳ ಕಾಲದ ನಿರಂತರ ಪರ್ಯಟನೆ, ಅಧ್ಯಯನ, ಅನುಭವಗಳ ಮೂಸೆಯಿಂದ ಭಾರತದ ಸಂಸ್ಕೃತಿ, ಸಂಪ್ರದಾಯ, ನಾಗರಿಕತೆ, ಆಚಾರ-ವಿಚಾರ, ನಂಬಿಕೆ, ವಿಶ್ವಾಸಗಳ ಬಗ್ಗೆ ಇದರಲ್ಲಿ ಪ್ರತಿಪಾದಿಸುತ್ತಾರೆ. 1030ರಲ್ಲಿ, ಅಂದರೆ ಹದಿಮೂರು ವರ್ಷಗಳ ಸುತ್ತಾಟದ ನಂತರ ಭಾರತದಿಂದ ನಿರ್ಗಮಿಸುವ ಸಮಯದಲ್ಲಿ ಈ ಗ್ರಂಥವನ್ನು ಅವರು ರಚಿಸಿದ್ದು.

ಸುಮಾರು‌ 80 ಅಧ್ಯಾಯಗಳನ್ನು ಹೊಂದಿರುವ ಈ ಗ್ರಂಥವು ಸರಳವಾದ ಮುನ್ನುಡಿಯನ್ನು ಒಳಗೊಂಡಿದೆ. ಸೃಷ್ಟಿಕರ್ತನ, ಪ್ರಪಂಚದ ಕುರಿತಾದ ಹಿಂದೂ ಧಾರ್ಮಿಕ ದೃಷ್ಟಿಕೋನವನ್ನು ಇದರಲ್ಲಿ ಪರಾಮರ್ಶಿಸಲಾಗಿದೆ. ಧರ್ಮ, ಸಾಹಿತ್ಯ, ಭಾರತದ ಭೌಗೋಳಿಕತೆ, ಚರಿತ್ರೆ, ಜನಪದ ಕಥೆ, ಹಿಂದೂ ಆಚಾರ-ವಿಚಾರ, ಹಬ್ಬ ಉತ್ಸವಗಳು, ಹಿಂದೂ ಕಾನೂನು ವ್ಯವಸ್ಥೆ, ಸಾಮಾಜಿಕ ವ್ಯವಸ್ಥೆ, ಗಣಿತ, ಖಗೋಳ ಮುಂತಾದವುಗಳ ಉಗಮದ ಬಗ್ಗೆ ಇದರಲ್ಲಿ ಚರ್ಚಿಸಲಾಗಿದೆ. ಪೌರಾಣಿಕ ಭಾರತದ ಸರ್ವ ಮಜಲುಗಳನ್ನೂ ತಾರೀಖುಲ್ ಹಿಂದ್‌ ಹೃದಯಸ್ಪರ್ಶಿಯಾಗಿ ತೆರೆದಿಟ್ಟಿದೆ. ಆರ್ಯನ್ ನಾಗರಿಕತೆ ಮತ್ತು ಅವರ ಭಾರತದ ಪ್ರವೇಶದ ಕುರಿತೂ ವಿಸ್ತೃತವಾಗಿ  ಚರ್ಚೆ ನಡೆಸಿದ್ದಾರೆ. ಆರ್ಯರಿಗೆ ಸಂಬಂಧಿಸಿದ ವಿಷಯಗಳಿಗೆ ಆಧುನಿಕ ಚರಿತ್ರಕಾರರು ಅವಲಂಬಿಸುವ ಮಧ್ಯಯುಗದ ಏಕೈಕ ಐತಿಹಾಸಿಕ ಗ್ರಂಥವಾಗಿದೆ ಇದು.

ಭಾರತದ ಮಧ್ಯಕಾಲೀನ ಯುಗದ ವೈಭವವನ್ನು ಜಗತ್ತಿಗೆ ಅನಾವರಣ ಮಾಡಿದ್ದು ಇದೇ ಗ್ರಂಥ. ನಂತರದ ಕಾಲದಲ್ಲಿ ಇದು ಪ್ರವಾಸಿಗಳಿಗೆ, ರಾಜರುಗಳಿಗೆ ಭಾರತಕ್ಕೊಂದು ದಿಕ್ಸೂಚಿಯಾಯಿತು. ಆ ಬಳಿಕ ಸುಲ್ತಾನರು ತಮ್ಮ ಆಡಳಿತಕ್ಕಾಗಿ ಹಲವಾರು ಪ್ರಾಂತ್ಯಗಳನ್ನಾಗಿ ವಿಭಾಗಿಸಲು ಇದರಲ್ಲಿ ವಿವರಿಸಲ್ಪಟ್ಟ ಭೌಗೋಳಿಕತೆಗೆ ಸಂಬಂಧಿಸಿದ ವಿಚಾರಗಳು ನೆರವು ನೀಡಿತು. ಹಲವು ಸಂಸ್ಕೃತ ಪದಗಳಿಗೆ ಸಮಾನವಾದ ಅರಬಿ ಪದಗಳು ಇಲ್ಲದ್ದರಿಂದ ನೇರವಾಗಿ ಸಂಸ್ಕೃತ ಪದಗಳನ್ನು ಬಳಸಿದರು. ಹೀಗೆ 2500ಕ್ಕೂ ಅಧಿಕ ಸಂಸ್ಕೃತ ಪದಗಳು ಇದರಲ್ಲಿ ಬಳಸಲಾಗಿದೆ. 1837ರಲ್ಲಿ ಲಂಡನ್ ಮೂಲದ ಅಡ್ವರ್ಡ್ ಸಚ್ವಾಳ್ಳ ಎಂಬಾತ ಇದನ್ನು ಪ್ರಥಮವಾಗಿ ಗ್ರಂಥ ರೂಪದಲ್ಲಿ ಮುದ್ರಿಸಿದ. 1887ರಲ್ಲಿ ಈತನೇ ಇದನ್ನು ಇಂಗ್ಲೀಷಿಗೆ ಅನುವಾದಿಸಿದ. 1910ರಲ್ಲಿ ಮತ್ತು 1914ರಲ್ಲಿ ಪುನಃ ಇದು ಮುದ್ರಣವಾಯಿತು. ಅದೇ ರೀತಿ ಭಾರತವನ್ನು ಸಮಗ್ರವಾಗಿ ಪ್ರತಿಪಾದಿಸುವ ಅವರ ಇನ್ನೊಂದು ಗ್ರಂಥವಾಗಿದೆ ತಹ್‌ಖೀಖ್. ಪುರಾತನ ಭಾರತದ ಎನ್ಸೈಕ್ಲೋಪೀಡಿಯಾ ಎಂದು ವಿಧ್ವಾಂಸರು ಇದನ್ನು ಬಣ್ಣಿಸಿದ್ದಾರೆ.

ನಿಷ್ಠುರ ಚರಿತ್ರೆಗಾರ

ಮಧ್ಯಕಾಲದ ಚರಿತ್ರೆಗಾರರಲ್ಲಿ ಮಿಕ್ಕವರೂ ಆಸ್ಥಾನದ ಅಧೀನದಲ್ಲಿದ್ದರಿಂದ ತಮ್ಮ ಪ್ರಭುಗಳ ಮಹಿಮೆಯನ್ನು ಕೊಂಡಾಡಲು, ಅವರ ಶೌರ್ಯ, ಕೀರ್ತಿಯ ಬಗ್ಗೆ ಹೊಗಳಲಷ್ಟೇ ತಮ್ಮ ಲೇಖನಿಯನ್ನು ಬಳಸಿದರು. ಅವರ ಪ್ರಮಾದ, ದುರುಳುತನ, ಲಂಪಟತನ, ದಾರ್ಷ್ಟ್ಯತೆಯನ್ನು ಮನಃಪೂರ್ವಕ ಮುಚ್ಚಿಟ್ಟರು. ಆದರೆ 114ರಷ್ಟು ಬೃಹತ್ ಗ್ರಂಥಗಳನ್ನು ಬರೆದಿದ್ದ ಅಲ್ ಬಿರೂನಿ ಇಂಥಾ ಆಷಾಢಭೂತಿತನದಿಂದ ಹೊರಗೆ ಉಳಿದುಕೊಂಡರು. ಮಹ್‌ಮೂದ್ ಘಝ್ನಿಯ ಬಗ್ಗೆ ಅವರು ನಡೆಸಿದ ಕಟುವಿಮರ್ಶೆಯೆ ಇದಕ್ಕೊಂದು ಜ್ವಲಂತ ಉದಾಹರಣೆ.
ಘಝ್ನಿಯ ಬಗ್ಗೆ ಅಲ್‌ಬಿರೂನಿ ಹೀಗೆ ಬರೆಯುತ್ತಾರೆ. “ಆತ ಭಾರತದ ಸೊಬಗನ್ನೇ ಕೆಡಿಸಿದ. ಆತನ ದಾಳಿಯಿಂದಾಗಿ ಅಲ್ಲಿನ ‘ನಾಗರಿಕ ಬದುಕು’ ಛಿದ್ರವಾಯಿತು.” (ಆಧಾರ: ಇಂದ್ಯನ್ ಚರಿತ್ರತ್ತಿಲೆ ಮುಸ್ಲಿಂ ಸಾನಿಧ್ಯಂ ಪುಟ-53)

ತಾನು ಗ್ರಹಿಸಿ, ಮತ್ತು ಸ್ಪಷ್ಟವಾಗಿ ಅರಿತ ವಿಷಯಗಳನ್ನಷ್ಟೇ ಅಲ್ ಬಿರೂನಿ ಬರೆದಿದ್ದಾರೆ. ಅವರು ತನ್ನ ತಾರೀಖುಲ್ ಹಿಂದ್‌ನ ಮುನ್ನುಡಿಯಲ್ಲಿ ಇದನ್ನು ಸ್ಪಷ್ಟಪಡಿಸುತ್ತಾರೆ. ಅಲ್ ಬಿರೂನಿಯ ಪ್ರಾಮಾಣಿಕತೆ, ಇಸ್ಲಾಮೇತರರ ಬಗ್ಗೆ ಅಧ್ಯಯನ ನಡೆಸುವಾಗ ಅವರು ಪಾಲಿಸಿದ ನಿಷ್ಪಕ್ಷಪಾತ ಮುಂತಾದ ಸೂಕ್ಷ್ಮ ಅಂಶಗಳನ್ನು ಆಧುನಿಕ ಚರಿತ್ರಕಾರರೇ ಒಪ್ಪಿಕೊಂಡಿದ್ದಾರೆ. ಡಾ. ಎಂ ಜೆಫೆರಿ ಬರೆಯುವುದು ಹೀಗೆ; “ಅಲ್ ಬಿರೂನಿಯಂತೆ ಇತರ ಧರ್ಮೀಯರ ಬಗ್ಗೆ ಯಾವುದೇ ಪೂರ್ವಗ್ರಹವಿಲ್ಲದೆ, ಅಧ್ಯಯನ ನಡೆಸಿ, ಪ್ರಾಮಾಣಿಕವಾಗಿ ಬರೆಯುವ ಚರಿತ್ರೆಗಾರರನ್ನು ಆಧುನಿಕ ಯುಗದಲ್ಲಿ ಕಾಣಲು ಅಸಾಧ್ಯವಾಗಿದೆ.” (ಆಧಾರ: Calcutta Iran society 1951. p 60)

ಭಾರತದಲ್ಲಿ ಸುಮಾರು ಹದಿಮೂರು ವರ್ಷಗಳ ಕಾಲ ಪರ್ಯಟನೆ ನಡೆಸಿದ ಅಲ್ ಬಿರೂನಿ 1030ರಲ್ಲಿ ತನ್ನ ತಾಯ್ನಾಡಿಗೆ ಮರಳಿದರು. ಅರಿವಿಗಾಗಿ ವಿಶ್ವದಾದ್ಯಂತ ಅಲೆದಾಡಿದ ಆ ಮಹಾನ್ ಪ್ರತಿಭೆ ಜ್ಞಾನದ ವಿಶಾಲ ಜಗತ್ತಿಗೆ ತನ್ನನ್ನು ತೆರೆದುಕೊಂಡಿದ್ದರು. 1048ರಲ್ಲಿ ತನ್ನ ಸಾರ್ಥಕ ಎಪ್ಪತ್ತು ವರ್ಷಗಳನ್ನು ಮುಗಿಸಿ ಇಹಲೋಕ ತ್ಯಜಿಸಿದರು.

  • ಟಿ.ಎಂ ಅನ್ಸಾರ್ ಸ‌ಅದಿ ತಂಬಿನಮಕ್ಕಿ

ಇದನ್ನೂ ಓದಿ: ಬಹುಜನ ಭಾರತ: ಬಂಧನದಲ್ಲಿ ಕಳೆದುಹೋಗುವ ಮುಸಲ್ಮಾನ ಬದುಕುಗಳು- ಪರಿಹಾರ ಇಲ್ಲವೇ?

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ಟಿ.ಎಂ ಅನ್ಸಾರ್ ಸ‌ಅದಿ ತಂಬಿನಮಕ್ಕಿ

LEAVE A REPLY

Please enter your comment!
Please enter your name here