Homeಚಳವಳಿಅಗಲಿಹೋದ ಪ್ರತಿಭಟನೆಯ ದನಿ: ಈಸೂರು ಲೋಕೇಶ್

ಅಗಲಿಹೋದ ಪ್ರತಿಭಟನೆಯ ದನಿ: ಈಸೂರು ಲೋಕೇಶ್

- Advertisement -
- Advertisement -

ಹಳ್ಳಿಗಾಡ ಹಸುಗೂಸೆ, ಹಸುಕಾಯೋ ಜೀತಗಾರನೆ
ಹಾಲು ಕುಡಿದು ದಿನವೆಷ್ಟಾಯಿತೋ
ಓ ಹಾಲುಗೆನ್ನೆಯ ಜೀತಗಾರ
ಹಾಲು ಮರೆತು ದಿನವೆಷ್ಟಾಯಿತೋ”
ದಲಿತ ಸಂಘದ ಹುಡುಗರು ದನಿ ಎತ್ತರಿಸಿ ಹಾಡುತ್ತಿದ್ದ ಬಾಲಕನೊಬ್ಬನ ಕುರಿತ ಜೀತದ ಹಾಡು ಈಸೂರು ಲೋಕೇಶನನ್ನ ನೋಡಿಯೇ ಬರೆದಂತಿತ್ತು.

ತುಡುಗುದನಗಳು ಒಟ್ಟಾಗಿ ಸೇರಿ ಬಾರಿಬಾರಿಗು,
ಹೊಲಕೆ ನುಗ್ಗಿ ಪೈರುಗಳನು ಹಾಳುಮಾಡಿದವೊ
ಓ ಹಾಲುಗೆನ್ನೆಯ ಜೀತಗಾರ ಒಡೆಯ ಬಂದು ನಿನ್ನ ಬಡಿದನೇ
ಎಂದು ಸಾಗುವ ಈ ಹಾಡು ಲೋಕೇಶನ ಬದುಕನ್ನ ಕುರಿತದ್ದು. ಜೀತಗಾರನ ಮಗನಾದ ಲೋಕೇಶನೂ ಬಾಲ್ಯದಲ್ಲಿಯೇ ದನಕಾಯುವ ಜೀತಗಾರನಾಗಿದ್ದ. ನಂತರ ಶಾಲೆಗೆ ಹೋಗತೊಡಗಿದರೂ ಕೂಲಿ ಕೆಲಸ ಬಿಡುವಂತಿರಲಿಲ್ಲ. ಒಮ್ಮೆ ಹಾಗೆ ದನ ಕಾಯ್ದುಕೊಂಡು ಬರುವಾಗ ಕುಸ್ತಿ ನಡೆಯುತ್ತಿತ್ತು. ಕುತೂಹಲಕ್ಕಾಗಿ ಅಲ್ಲಿಗೆ ಹೋದ ಲೋಕೇಶ, ತನಗಿಂತಲೂ ಬಲವಾದವರನ್ನ ಎತ್ತಿ ಬಿಸಾಡಿದ. ಈ ಸುದ್ಧಿ ಕೇಳಿದ ಕುಸ್ತಿಪ್ರಿಯರಾದ ಲಂಕೇಶ್, ಈಸೂರು ಲೋಕೇಶನಿಗೆ ಪ್ರೋತ್ಸಾಹಧನವಾಗಿ ಪ್ರತಿ ತಿಂಗಳು ಸಹಾಯ ಮಾಡತೊಡಗಿದರು.

ಲಂಕೇಶರ ಮುಖಾಂತರ ನಾನು ಶಿವಮೊಗ್ಗಕ್ಕೆ ಬಂದಕೂಡಲೇ ಪರಿಚಯವಾದವನು ಲೋಕೇಶ. ಆಗ ವಿಚಿತ್ರ ಭಯದಲ್ಲಿದ್ದ ನನಗೆ ಲೋಕೇಶ ಗೆಳೆಯನಾಗಿರುವುದು ಒಂದು ಹೆಮ್ಮೆಯ ಸಂಗತಿಯಾಗಿತ್ತು. ಅದಾಗಲೇ ಲೋಕೇಶ ಕಾಲೇಜು ಸೇರಿದ್ದ. ರಹಮತ್ ತರೀಕೆರೆ ಪಾಠ ಮಾಡುವಾಗ ಯಾರೋ ಹುಡುಗರು ಹೊರಗೆ ಗಲಾಟೆ ಮಾಡುತ್ತಿದ್ದರು. “ಒಂದು ನಿಮಿಷ ಸಾರ್” ಎಂದು ರಹಮತ್ ಪರವಾನಗಿ ಪಡೆದು ಹೊರಬಂದ ಲೋಕೇಶ್ ಆ ಹುಡುಗರನ್ನ ನಾಯಿಗೆ ಹೊಡೆದಂತೆ ಹೊಡೆದು ಓಡಿಸಿ ಒಳಬಂದು “ಈಗ ಪಾಠ ಮಾಡಿ ಸಾ” ಎಂದಿದ್ದ. ಇದು ಆತನ ವ್ಯಕ್ತಿತ್ವದ ಪ್ರಧಾನಗುಣವಾಗಿತ್ತು. ಸಭೆ ಸಮಾರಂಭ ನಡೆಯುವಾಗ ಯಾರೇ ಕಿರಿಕಿರಿ ಮಾಡಿದರೂ ದಿಗ್ಗನೆದ್ದು ತಕ್ಕಶಾಸ್ತಿ ಮಾಡಿಬಿಡುತ್ತಿದ್ದ, ಶಿವಮೊಗ್ಗ ಕರ್ನಾಟಕ ಸಂಘದಲ್ಲೂ ಲಂಕೇಶರ ಸಭೆ ನಡೆಯುವಾಗ ಹಾಗೇ ಮಾಡಿದ್ದ, ಆದರೆ ನಾನು ಹೋಗಿ “ಪ್ರಶ್ನೆ ಮಾಡಿದವನು ಲಂಕೇಶರ ಕಟ್ಟಾ ಅಭಿಮಾನಿ” ಎಂದಾಗ ಸುಮ್ಮನಾಗಿದ್ದ.

ಎಂಬತ್ತರ ದಶಕದಲ್ಲಿ ದಲಿತ ಸಂಘರ್ಷ ಸಮಿತಿ ಈ ನಾಡಿನಲ್ಲಿ ತುಂಬಾ ಪ್ರಬಲವಾದ ಸಂಘಟನೆಯಾಗಿ ರೂಪುಗೊಂಡು ಸಭೆ ಸಮಾರಂಭ ಸೆಮಿನಾರುಗಳನ್ನು ನಡೆಸುತ್ತಿತ್ತು. ಬೌದ್ಧಿಕ ಚಿಂತನೆಯ ಸರಕು ದೇವನೂರು, ಸಿದ್ಧಲಿಂಗಯ್ಯ ಇವರ ಕಡೆಯಿಂದ ಸರಬರಾಜಾಗುತ್ತಿದ್ದರೆ, ಚಳವಳಿಯ ಮುಂಚೂಣಿ ನಾಯಕರಾಗಿ ಬಿ.ಕೃಷ್ಣಪ್ಪನವರಿದ್ದರು. ಆಗ ದಲಿತ ಸಂಘದಲ್ಲಿ ಸಕ್ರಿಯನಾಗಿದ್ದ ಲೋಕೇಶ್‍ಗೆ ಚಳವಳಿಯ ನಾಯಕನಾಗಿ ರೂಪುಗೊಳ್ಳುವ ಎಲ್ಲ ಅವಕಾಶಗಳೂ ದೊರಕಿದವು. ಆದರೆ ಆತನಲ್ಲಿ ಸೂಕ್ಷ್ಮತೆಯ ಕೊರತೆಯಿತ್ತು. ದಸಂಸದ ಸಭೆಯೊಂದರಲ್ಲಿ ಚೆಡ್ಡಿಗಳು ಮಾಡುವ ಅನಾಹುತಗಳ ಚರ್ಚೆ ನಡೆಯಿತು. ಇದರಿಂದ ಚೆಡ್ಡಿಗಳ ಬಗ್ಗೆ ಸಿಟ್ಟಾದ ಆತನ ಮೈಕಾವು ಇನ್ನು ಇಳಿದಿರಲಿಲ್ಲ. ಆಗ ಯಾರೋ ಹುಡುಗ ಪೈಲ್ವಾನ್ ದೇಹದ ಈತನನ್ನು ದುರುಗುಟ್ಟಿ ನೋಡಿದ. ಹೀಗೆ ನೋಡುವ ಈತ ಗ್ಯಾರಂಟಿ ಆರೆಸ್ಸೆಸ್ಸಿಗನೇ ಇರಬೇಕೆಂದು ಭಾವಿಸಿದ ಲೋಕೇಶ್ ಹಲ್ಲೆಗೆ ಮುಂದಾಗಿದ್ದ. ಆಗ ಸಹ ಚಿಂತಕರು ಸಮಾಧಾನ ಮಾಡಿದ್ದರು.

ಒಮ್ಮೆ ನನ್ನ ಆಫೀಸಿನಿಂದ ಹೊರಗೆ ಕರೆದ ಲೋಕೇಶ ಒಂದು ಮೂಲೆಗೆ ಕರೆದೊಯ್ದು “ಸಾರ್ ಒಬ್ಬ ಪತ್ರಕರ್ತನಿಂದ ನಿಮ್ಮ ಕೊಲೆ ಸಂಚು ನಡೆದದೆ ಹುಶಾರಾಗಿರಿ ಒಬ್ಬರೇ ಓಡಾಡಬೇಡಿ” ಎಂದ. “ಅದ್ಯಾರೋ ಮಾರಾಯ ನನ್ನ ಕೊಲೆ ಮಾಡಸೋನು” ಎಂದೆ. ಶಿವಮೊಗ್ಗದ ಸಮಸ್ಯೆಯಂತಿದ್ದ ಪತ್ರಕರ್ತನ ಹೆಸರೇಳಿದ. ಪಕಾರೆಂದು ನಗಾಡಿದ ನಾನು “ಅವುನು ನಾನು ಸ್ನೇಹಿತರು ಕಣಯ್ಯ, ಒಂದುವೇಳೆ ನಿನ್ನ ಅನುಮಾನ ನಿಜ ಆಗಿದ್ರೆ ಯಾವ ತರ ಕೊಲೆ ನ್ಯಡಿಬೇಕು ಅಂತ ಅವುನ ಜೊತೇಲೆ ಚರ್ಚೆ ಮಾಡ್ತಿನಿ” ಎಂದೆ. “ನಿಮ್ಮದ್ಯಾವಾಗ್ಲು ತಮಾಸಿನೆ ಸಾರ್. ಯಾವುದ್ಕು ಉಷಾರಾಗಿರಿ” ಎಂದು ಹೊರಟುಹೋಗಿದ್ದ.

ಅವನ ಅನುಮಾನಗಳೇ ಈ ತರದವು, ಒಮ್ಮೆ ಬಗಲ ಚೀಲದಿಂದ ಕುಡುಗೋಲು ತೆಗೆದು ತೋರಿದ್ದ. ವೈರಿಗಳಿಗೆ ತಕ್ಕ ಉತ್ತರ ಕೊಡಲು ಇಟ್ಟುಕೊಂಡಿದ್ದ. ಆ ಕುಡುಗೋಲು ನೋಡಿದೆ, ಅದರಂತ ಮಂಡಗತ್ತಿಯನ್ನೇ ನೋಡಿರಲಿಲ್ಲ. ಗರಗಸದಂತೆ ಆಡಿಸಿದರೂ ಅದರಿಂದ ಜೀವಹತ್ಯೆಯಾಗುತ್ತಿರಲಿಲ್ಲ. ಗಾಯ ಮಾಡಬಹುದಿತ್ತಷ್ಟೇ. ಇದನ್ನ ಅವನಿಗೇ ಹೇಳಿದಾಗ, ಮುಗ್ಧತೆ ಮತ್ತು ದಡ್ಡತನದಲ್ಲಿ ನಕ್ಕಿದ್ದ.

ದಲಿತ ಸಂಘರ್ಷ ಸಮಿತಿಯಲ್ಲಿ ಸಿದ್ಧಾಂತವನ್ನ ಮೀರಿದ ಬೇರೆ ಗುಣಗಳು ವ್ಯಕ್ತವಾಗತೊಡಗಿದವು. ಎಡಗೈ ಬಲಗೈ ಗುದುಮುರುಗಿ ಬಿರುಸಾದಾಗ, ಲೋಕೇಶ್ ತರದವರಿಗೆ ಈಗ ನಾವೆಲ್ಲಿರಬೇಕು. ನಮಗೇನು ಕೆಲಸ ಎಂಬ ಸಮಸ್ಯೆಗಳು ಎದುರಾದವು. ಅದೇ ಸಮಯದಲ್ಲಿ ಕೃಷ್ಣಪ್ಪನವರ ಮಗಳು ಭರತನಾಟ್ಯದ ರಂಗಪ್ರವೇಶ ಕಾರ್ಯಕ್ರಮ ರೂಪುಗೊಳ್ಳುತ್ತಿತ್ತು. ಇದರಿಂದ ಕೆಲವರು ದೂರಾಗತೊಡಗಿದರು. ಅದರಲ್ಲಿ ಲೋಕೇಶನೂ ಒಬ್ಬ. ನಾನು ಲಂಕೇಶರಿಗೆ ಈ ವಿಷಯ ಹೇಳಿದಾಗ, ಅವರು ಕೃಷ್ಣಪ್ಪನವರ ಮಗಳ ಬಗ್ಗೆ ಮೆಚ್ಚುಗೆ ಮಾತನಾಡಿ, “ಆ ಭರತನಾಟ್ಯ ಕಾರ್ಯಕ್ರಮ ನೋಡಿ ಬರಿ” ಎಂದರು. ಅಲ್ಲದೆ “ಆ ಕಲೆ ತಿಳಿದವರನ್ನು ವಿಚಾರಿಸಿ ಬರೆ” ಎಂದರು. ನಂತರ ಆ ಲೋಕೇಶ ಈಗ್ಲು ಕುಸ್ತಿ ಮಾಡ್ತನ ಅಂದರು. ನನಗೆ ಗೊತ್ತಿಲ್ಲ ಸಾ ಎಂದೆ. ನಾನು ವಿಚಾರಿಸುವುದಕ್ಕೂ ಮೊದಲೇ ಸ್ವಾಭಿಮಾನಿಯಾದ ಲೋಕೇಶ ಒಮ್ಮೆ ಸಿಕ್ಕಿದಾಗ “ಸಾರ್ ಮೇಷ್ಟ್ರಿಗೇಳಿ ಅವುರು ಕೊಡ್ತಾಯಿರೊ ಹಣ ನಿಲ್ಲಸಕ್ಕೇಳಿ ಸಾ” ಎಂದ. “ಯಾಕಯ್ಯಾ ಎಂದೆ”. “ಅವರು ನಾನಿನ್ನೂ ಕುಸ್ತಿ ಮಾಡ್ತಿನಿ ಅಂತ ತಿಳಕಂಡವುರೆ, ನಾನು ಕುಸ್ತಿಬಿಟ್ಟು ಚಳವಳಿಲಿದ್ದಿನಿ” ಎಂದ.

ಸಹ್ಯಾದ್ರಿ ಕಾಲೇಜಿನಲ್ಲಿ ಡಿಗ್ರಿ ಮುಗಿಸಿ ಮೈಸೂರಿನಲ್ಲಿ ಎಂ.ಎ ಮಾಡಲು ಹಾತೊರೆಯುತ್ತಿದ್ದ ಲೋಕೇಶ್ “ರಾಮದಾಸರಿಗೇಳಿ ಎಂಎ ಡಿಗ್ರಿ ಬರಂಗೆ ಮಾಡಿ ಸಾರ್”, ಎಂದು ನಕ್ಕ. “ಇದೇನು ಮಾರಾಯ ರಾಮದಾಸು ಅಂದ್ರೆ ಏನು ತಿಳಕಂಡಿದ್ದಿ, ಇರ್ಲಿ ಯಾವುದ್ಕೂ ಬೀರೂರಿಗೆ ಬಾ” ಎಂದೆ. ಬೀರೂರಲ್ಲಿ ಪ್ರಗತಿರಂಗದ ಸಭೆ ಇತ್ತು. ಅಲ್ಲಿಗೆ ಬಂದ ಲೋಕೇಶ್ ಎಂಎ ಡಿಗ್ರಿ ಬಗ್ಗೆ ಮಾತನಾಡಲು ಸಾಧ್ಯವಾಗಲಿಲ್ಲ. ಆದರೆ ಲಂಕೇಶರು “ಹೊನ್ನಾಳಿ, ಶಿಕಾರಿಪುರ, ನ್ಯಾಮತಿ ಇಲ್ಲೆಲ್ಲ ಪ್ರಗತಿರಂಗದ ಪ್ರಚಾರ ಮಾಡಿ ಓಡಾಡಯ್ಯ” ಎಂದರು. ಲೋಕೇಶ್ ಹೊಸ ಹುರುಪಿನಿಂದ ಓಡಾಡತೊಡಗಿದ, ಅವನ ಉತ್ಸಾಹ ನೋಡಿ ನಾನು ಲಂಕೇಶರಿಗೆ ಬರೆದಾಗ ಅವರು “ಆ ಲೋಕೇಶನಿಗೆ ಈ ಜನುಮದಲ್ಲಿ ರಾಜಕಾರಣ ಅಂದ್ರೇನು ಅನ್ನದು ಗೊತ್ತಾಗದಿಲ್ಲ ನಿನಿಗೆ ಅವುನೆ ಮಹಾ ನಾಯಕನಾಗಿ ಕಂಡಿರದು ಆಶ್ಚರ್ಯ” ಎಂದು ಬರೆದರು!

ಲೋಕೇಶ ಹುಟ್ಟು ಹೋರಾಟಗಾರ. ಜಿಲ್ಲೆಯಲ್ಲಿ ಎಲ್ಲೇ ಅನ್ಯಾಯ ನಡೆದರೂ ದಿಗ್ಗನೆ ಪ್ರತ್ಯಕ್ಷವಾಗಿ ಚಳುವಳಿ ರೂಪಿಸುತ್ತಿದ್ದ. ಹಲವು ಗೆಳೆಯರು ಸೇರಿ ಸಿಎಲ್‍ಎಫ್ ಎಂಬ ಸಂಘಟನೆ ಕಟ್ಟಿ, ಹೋರಾಟ ಮಾಡಿ ರಾಜ್ಯದ ಗಮನ ಸೇರಿದರು.

ಅದಕ್ಕೂ ಮೊದಲು ತನ್ನನ್ನು ಕರ್ನಾಟಕದ ಗದ್ದರ್ ಎಂದು ಭಾವಿಸಿದ್ದ ಲೋಕೇಶ್, ಅದೇ ವೇಷದಲ್ಲಿ ಕ್ರಾಂತಿಗೀತೆ ಹಾಡುತ್ತ ಶಿವಮೊಗ್ಗದಲ್ಲಿ ಮೆರವಣಿಗೆ ಮಾಡಿ, ಗಾಂಧಿ ಪಾರ್ಕಿನ ಸಭೆಯಲ್ಲಿ ನಾನು ನಕ್ಸಲ್ ಎಂದು ಘೋಷಿಸಿಕೊಂಡ. ಅಂದು ಕರ್ನಾಟಕದಲ್ಲಿ ನಕ್ಸಲ್ ವಾಸನೆಯೂ ಇರಲಿಲ್ಲ. ಆದರೂ ಪೋಲೀಸರು ಲೋಕೇಶ್ ಮೇಲೆ ಕಣ್ಣಿಟ್ಟಿದ್ದರು. ಸಹ್ಯಾದ್ರಿ ಕಾಲೇಜಿನ ವಿದ್ಯಾರ್ಥಿಗಳ ಚಳುವಳಿಯಲ್ಲಿ ಮಂಚೂಣಿಯಲ್ಲಿದ್ದುದನ್ನ ಕಂಡ ಪೋಲೀಸರು, ಲೋಕೇಶನನ್ನ ಅರೆಸ್ಟು ಮಾಡಿ ವರ್ಕ್ ಮಾಡಿದರು. ಒಬ್ಬ ಇನ್ಸ್‍ಸ್ಪೆಕ್ಟರ್ “ಏನು ಬಾಡಿನ್ರಿ ಅವುಂದು, ಹೊಡದರ ರಬ್ಬರ್‍ಗೊಡದಂಗಾಕ್ಕೆತ್ರಿ ಅವುನವುನ್” ಎಂದಿದ್ದ.

ಈ ಟ್ರೀಟ್‍ಮೆಂಟಿನ ನಂತರ ಲೋಕೇಶನಲ್ಲಾದ ಬದಲಾವಣೆ ಎಂದರೆ, ಎಲ್‍ಎಲ್‍ಬಿ ಮುಗಿಸಿ ಲಾಯರಾಗಿ ಬಡ ಜನರಿಗೆ ಕಾನೂನಿನ ನೆರವು ಕೊಡಬೇಕೆಂಬುದಾಗಿತ್ತು. ವಕೀಲನಾದ ಮೇಲೆ ಪೊಲೀಸರ ಎದುರು ಚಳುವಳಿಗಾರನಾಗಿ ನಿಲ್ಲುವುದರ ಜೊತೆಗೆ ವಕೀಲನಾಗಿ ಎದುರುಗೊಂಡ. ಜಿಲ್ಲೆಯಲ್ಲಿನ ಎಲ್ಲ ಪ್ರಕರಣಗಳ ಎದುರು ಎದೆಯೊಡ್ಡಿ ನಿಂತ. ಸ್ವಪ್ನ ಸಾವಿನ ಪ್ರಕರಣ, ಶೇಖರ್ ನಾಯ್ಕನ ಪ್ರಕರಣ, ಕಾನೂನು ಬಾಹಿರ ಟ್ಯೂಷನ್‍ಗಳ ಮೇಲಿನ ದಾಳಿ, ತುಂಗಾ ಮೂಲ ಉಳಿಸಿ ಚಳುವಳಿಗಳಲ್ಲದೆ, ಪಾರ್ವತಿ ಹಾಜಿಮಾ ಹತ್ಯೆ ನಡೆದಾಗ ಧೈರ್ಯವಾಗಿ ಹೋಗಿ ಹೆಗಲುಕೊಟ್ಟಿದ್ದ.

ಲೋಕೇಶ್ ಒಳ್ಳೆ ಮಾತುಗಾರನಾಗಿ ರೂಪುಗೊಂಡಿದ್ದಷ್ಟೇ ಅಲ್ಲ, ಒಳ್ಳೆ ಹಾಡುಗಾರ ಕೂಡ. ಆದ್ದರಿಂದ ಸಾರ್ವಜನಿಕ ಹಾಸ್ಟಲ್‍ನ ಹುಡುಗರನ್ನ ಸಂಘಟನೆಗೆ ತೊಡಗಿಸುತ್ತಿದ್ದ. ಅವನು ನಮಗಷ್ಟೇ ಪರಿಚಯವನಾಗುತ್ತಿರಲಿಲ್ಲ, ನಮ್ಮ ಬಂದು ಬಳಗಕ್ಕೆಲ್ಲಾ ಹಿತೈಶಿಯಾಗಿಬಿಡುತ್ತಿದ್ದ. ಒಮ್ಮೆ ಒಬ್ಬನೇ ಓಡಾಡಿ ತೋಳುಬಲದ ಸಾಬರನ್ನೆಲ್ಲಾ ಕರೆತಂದು ಅಂಬೇಡ್ಕರ್ ಭವನದಲ್ಲಿ ಟಿಪ್ಪು ಜಯಂತಿ ಮಾಡಿದ್ದ, ಅತಿಥಿಯಾಗಿ ಮಂಡ್ಯದ ಹೆಚ್.ಎಲ್.ಕೇಶವಮೂರ್ತಿಯವರನ್ನ ಕರೆದಿದ್ದ. ಈಗ ಅವನಿದ್ದರೆ ಖಂಡಿತ ಟಿಪ್ಪು ಜಯಂತಿ ಅದ್ದೂರಿಯಾಗಿ ನೆರವೇರುವಂತೆ ಮಾಡುತ್ತಿದ್ದ. ಆದರೆ ಶಿವಮೊಗ್ಗ ಜಿಲ್ಲೆಯ ಪ್ರತಿಭಟನೆಯ ದನಿಯೊಂದು ಇಷ್ಟು ಬೇಗ ಮುಳುಗಿ ಹೋಗುತ್ತದೆಂದು ಯಾರೂ ಊಹಿಸಿರಲಿಲ್ಲ. ಯಾವಾಗಲೂ ಚೈತನ್ಯ ಚಿಲುಮೆಯಾಗಿದ್ದ ಲೋಕೇಶ್ ಕೋರ್ಟ್ ಹಾಲಿನಲ್ಲಿ ಸಿಕ್ಕರೆ ದಡೂತಿ ಪೆಂಗ್ವಿನ್ ತರ ನಿಧಾನವಾಗಿ ನಡೆಯುತ್ತಿದ್ದ. ಕೋರ್ಟಿನಲ್ಲಿ ಲೋಕೇಶ್ ವಾದಮಂಡಿಸುತ್ತಿದ್ದಾನೆಂದರೆ ಅದೊಂದು ಮೋಜಿನ ಪ್ರಸಂಗದಂತಿರುತ್ತಿತ್ತು.

ಆತನ ನ್ಯಾಯ ಬೇಡಿಕೆಯ ವಿಷಯದಲ್ಲಿ ನ್ಯಾಯಾಧೀಶರು ಕೂಡ ತಮ್ಮ ನಗುವನ್ನು ಹತ್ತಿಕ್ಕಿಕೊಂಡು ಲೋಕೇಶನ ವಾದವನ್ನು ಗಮನಿಸುತ್ತಿದ್ದರು. ತನ್ನ ವಿಶೇಷ ಅಧ್ಯಯನದಿಂದ ವಾದಮಾಡಿ ಗೆಲ್ಲುವುದಕ್ಕಿಂತಲೂ ನ್ಯಾಯಾಧೀಶರಿಂದ ಮೀಸಲಾತಿ ರೂಪದ ನ್ಯಾಯ ಬೇಡಿಕೆಯನ್ನು ಪ್ರದರ್ಶಿಸುತ್ತಿದ್ದ, ಇದು ಜಡ್ಜ್ ಗಳ ತುಟಿಯಂಚಿನಲ್ಲಿ ನಗು ಮೂಡಿಸುತ್ತಿತ್ತು. ಆಗ ಲೋಕೇಶನಲ್ಲೂ ಒಂದು ಮುಗ್ಧತನದ ನಗುಹೊರಹೊಮ್ಮುತ್ತಿತ್ತು. ಇದು ಬೇರೆ ವಕೀಲರುಗಳಿಗೆ ಹೊಟ್ಟೆಕಿಚ್ಚು ಮೂಢಿಸುತ್ತಿತ್ತು. ಈಸೂರು ನಮ್ಮ ನಾಡಿನ ಪ್ರತಿಭಟನೆಗೆ ಸಂಕೇತವಾದ ಒಂದು ಹಳ್ಳಿ, ಆ ಮಣ್ಣಿನಿಂದ ನೇರವಾಗಿ ಎದ್ದು ಬಂದಿದ್ದ ಲೋಕೇಶನಿಂದ ಪ್ರತಿಭಟನೆಯನ್ನು ಎದುರಿಸಿದವರೂ ಕೂಡ ಮರುಗುವ ಸಾವಿದು. ಎರಡು ಹೆಣ್ಣು ಮಕ್ಕಳ ತಂದೆಯಾದ ಆತ ಯಾವ ಆಸ್ತಿಯನ್ನೂ ಮಾಡಿ ಹೋಗಿಲ್ಲ. ಯಾರಿಗೂ ಮಣಿಯದಿದ್ದ ಈ ಪೈಲ್ವಾನನನ್ನು ಸಕ್ಕರೆ ಕಾಯಿಲೆ ಮಣಿಸಿಹಾಕಿದ್ದೊಂದು ವಿಪರ್ಯಾಸ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಈಸೂರು ಲೋಕೇಶ ಅವರು ನಿಧನರಾಗಿದ್ದು ನನಗೆ ಅತೀವ ದುಃಖವಾಯಿತು ಅವರು ಇತ್ತೇಚೆಗಷ್ಟೆ ಸಂವಿಧಾನ ರಕ್ಷಣಾ ಹೋರಾಟ ಸಮಿತಿ ಎಂಬ ಸಂಘಟನೆ ಹುಟ್ಟು ಹಾಕಿ ಅವರೇ ಅದರ ಜಿಲ್ಲಾಧ್ಯಕ್ಷರಾಗಿದ್ದರು ಆ ಸಂಘಟನೆಯ ಶಿಕಾರಿಪುರ ತಾಲ್ಲೂಕು ಘಟಕ ಒಂದು ಒಳ್ಳೆಯ ನೀರಾವರಿ ಯೋಜನೆಯ ಜಾರಿಗಾಗಿ ಚೋರಡಿಯಿಂದ ಶಿಕಾರಿಪುರದವರೆಗೆ ಕಾಲ್ನಡಿಗೆ ಜಾಥಾ ಹಾಗೂ ಮೂರುದಿನ ಉಪವಾಸ ಸತ್ಯಾಗ್ರಹ ಧರಣಿ ತಹಶಿಲ್ದಾರ ಕಛೇರಿಯೆದುರು ನಡೆದಿತ್ತು ನಮಗೂ ಅಂದರೆ ಶಿಕಾರಿಪುರ ಆಮ್ ಆದ್ಮಿ ಪಾರ್ಟಿ ಗೂ ಆಹ್ವಾನಿಸಿದ್ದರಿಂದ ನಾವೂ( ಆಪ್) ಹೋರಾಟದಲ್ಲಿ ಪಾಲ್ಗೊಂಡಿದ್ದೆವು.ಈ ಹಿನ್ನೆಲೆಯಲ್ಲಿ ಹೋರಾಟ ಕಾರ್ಯಕ್ರಮದ ಒಂದು ತಿಂಗಳು ನಂತರ ನಾನು ಈಸೂರು ಲೋಕೇಶ್ ಅವರನ್ನು ಸವಳಂಗದ ಅವರ ಕಛೇರಿಯಲ್ಲಿ ಭೇಟಿಯಾಗಿ ಜನರಾಜಕಾರಣದ ಕುರಿತು ಮಾತನಾಡಿದ್ದೆ

    ಈಸೂರು ಲೋಕೇಶ ಅವರಿಗೆ ನನ್ನ ಮನದಾಳದ ಶ್ರದ್ಧಾಂಜಲಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...