Homeಮುಖಪುಟನೆನೆಯಬೇಕಿದೆ ಮಹಾತ್ಮನ ಮಡದಿಯನು.... : ಡಿ.ಉಮಾಪತಿ

ನೆನೆಯಬೇಕಿದೆ ಮಹಾತ್ಮನ ಮಡದಿಯನು…. : ಡಿ.ಉಮಾಪತಿ

- Advertisement -
- Advertisement -

ಬಹುಜನ ಭಾರತ: ಡಿ.ಉಮಾಪತಿ

ಇಂದು ಗಾಂಧೀ ಜಯಂತಿ. ಗಾಂಧೀ ಹುಟ್ಟಿ 150 ವರ್ಷಗಳು. ಹಾಗೆಯೇ ಕಸ್ತೂರ ಬಾ ಜನಿಸಿಯೂ 150 ವರ್ಷಗಳು. ಗಾಂಧೀ ಏರಿದ ಎತ್ತರದ ಎಲ್ಲ ಶ್ರೇಯಸ್ಸು ಕಸ್ತೂರ ಬಾ ಅವರದು ಎಂದಿದ್ದ ಈ ದಂಪತಿಗಳ ಹಿರಿಯ ಮಗ ಹರಿಲಾಲ್. ಪುಣೆಯ ಸೆರೆಮನೆ ವಾಸದಲ್ಲಿ ಪತಿಯ ಬಾಹುಗಳಲ್ಲೇ ಪ್ರಾಣಬಿಟ್ಟರು ಕಸ್ತೂರಬಾ.

ಹದಿಮೂರನೆಯ ವಯಸ್ಸಿಗೆ ಮದುವೆ. 1888ರಲ್ಲಿ ತಮ್ಮ 19ನೆಯ ವರ್ಷದಲ್ಲಿ ಮೊದಲ ಮಗ ಹರಿಲಾಲನ ಜನನ. ಮಣಿಲಾಲ್, ರಾಮದಾಸ್ ನಂತರ ಕಿರಿಯ ಮಗ ದೇವದಾಸ್ ಜನಿಸಿದ್ದು 1900ರಲ್ಲಿ. ಆನಂತರ ಪತ್ನಿಯ ಅಭಿಪ್ರಾಯವನ್ನು ಕೇಳುವ ಗೋಜಿಗೆ ಹೋಗದ ಗಾಂಧೀ ಅವರಿಂದ ಬ್ರಹ್ಮಚರ್ಯ ಪಾಲನೆಯ ಏಕಪಕ್ಷೀಯ ನಿರ್ಧಾರ. ಆಗ ಕಸ್ತೂರಬಾ ಅವರ ವಯಸ್ಸು 31. ದಾಂಪತ್ಯ ಜೀವನದ ಈ ಗುರುತರ ನಿರ್ಧಾರ ಕುರಿತು ತಮ್ಮ ನಿಲುಮೆ ಏನಿತ್ತೆಂದು ಆಕೆಯ ಬಾಯಿಂದಲೇ ಹೊರಬಿದ್ದ ಮಾತುಗಳು ಎಲ್ಲಿಯೂ ದಾಖಲಾಗಿಲ್ಲ.

ಕಡುಕೋಪದ ಗಳಿಗೆಗಳಲ್ಲಿ ಕಸ್ತೂರಬಾ ಅವರನ್ನು ಮನೆಯಿಂದ ಹೊರಹಾಕಲು ತಾವು ಮುಂದಾದದ್ದನ್ನು ಗಾಂಧಿಯೇ ಹೇಳಿಕೊಂಡಿದ್ದಾರೆ. ಆಶ್ರಮದ ಕಕ್ಕಸುಗಳನ್ನು ತೊಳೆಯಬೇಕೆಂಬ ಪತಿಯ ಆದೇಶವನ್ನು ಅವರು ತಿರಸ್ಕರಿಸುತ್ತಾರೆ. ಅಹಿಂಸೆ ಮತ್ತು ಸತ್ಯಾಗ್ರಹದ ಮೂಲತತ್ವಗಳನ್ನು ಗಾಂಧೀ ಕಲಿತದ್ದು ತಮ್ಮ ಪತ್ನಿಯಿಂದಲೇ..

ಪತಿಗಿಂತ ನಾಲ್ಕು ತಿಂಗಳು 22 ದಿವಸಗಳಷ್ಟು ವಯಸ್ಸಿನಲ್ಲಿ ದೊಡ್ಡವರು ಕಸ್ತೂರಬಾ. ಏಪ್ರಿಲ್ ಹನ್ನೊಂದರಂದು ಆಕೆಯ ಜನ್ಮದಿನದಿಂದು ಬಾ ಅವರನ್ನು ದೇಶ ನೆನೆದದ್ದನ್ನು ಕಂಡವರಿಲ್ಲ. ಗಾಂಧೀಯನ್ನು ಬಿಟ್ಟು ಕಸ್ತೂರಬಾಗೆ ಸ್ವತಂತ್ರ ಅಸ್ತಿತ್ವ ಇಲ್ಲ. ಗಾಂಧೀಯನ್ನು ನೆನೆದರೆ ಕಸ್ತೂರಬಾ ಅವರನ್ನು ನೆನೆದಂತೆಯೇ ಎಂಬುದು ನಮ್ಮ ಗಂಡಾಳಿಕೆಯ ಸಾಮೂಹಿಕ ಸಾಕ್ಷಿಪ್ರಜ್ಞೆ. ಗುರುತಿಸದೆ ಮಣ್ಣಾಗಿರುವ ಸಾವಿರಾರು ಅಜ್ಞಾತ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿಯರ ಪ್ರತೀಕ ಕಸ್ತೂರಬಾ ಎನ್ನುತ್ತಾರೆ ಹಿರಿಯ ಸರ್ವೋದಯ ಕಾರ್ಯಕರ್ತ ಬಿಜು ನೇಗಿ.

ಹಿರಿಯರು ನಿಶ್ಚಯಿಸಿದಂತೆ ಮೋಹನದಾಸನನ್ನು ವರಿಸಿದ ಕಸ್ತೂರ್ ಕಪಾಡಿಯಾ ವೈವಾಹಿಕ ಜೀವನದ 62 ವರ್ಷಗಳನ್ನು ಗಾಂಧಿಯೊಂದಿಗೆ ಕಳೆದರು. ಕಸ್ತೂರ ಬಾ ಆದರು. ಗುಜರಾತಿನ ಪಟ್ಟಣವೊಂದರ ಶಾಲಾಬಾಲಕನಿಂದ ಲಂಡನ್ನಿನಲ್ಲಿ ಬ್ಯಾರಿಸ್ಟರ್ ಪದವಿ ಪಡೆದು ಸ್ವರಾಜ್ಯ ಗಳಿಕೆಯ ಹೋರಾಟದ ನಾಯಕನಾಗಿ ಪತಿಯ ರೂಪಾಂತರದಲ್ಲಿ ಜೊತೆಗಿದ್ದು ಏರಿಳಿತಗಳನ್ನು ಹಂಚಿಕೊಂಡವರು. ಪತಿಯ ಪ್ರಯೋಗಗಳಲ್ಲಿ ಪಾಲುಗೊಂಡು, ಆಶ್ರಮವಾಸದ ಕಾಠಿಣ್ಯವನ್ನು ಅನುಭವಿಸಿ, ಹಲವು ಬಾರಿ ಸೆರೆವಾಸ ಅನುಭವಿಸಿದವರು. ಇತಿಹಾಸದ ಈ ಹಂತದ ಮಧ್ಯಭೂಮಿಕೆಯಲ್ಲಿದ್ದರೂ ಅವರ ವ್ಯಕ್ತಿತ್ವ ಮಸುಕಾಗಿ ಮಹಾತ್ಮನ ನೆರಳಿನಲ್ಲಿ ಮಸುಕಾಗಿದೆ. ಮಹಾತ್ಮನ ಮಡದಿಯ ಹುಡುಕಾಟ ಕಠಿಣವಾದದ್ದು. ಆಕೆಯ ಕಾಲದ ಬಹುಪಾಲು ಮಹಿಳೆಯರಂತೆ ಆಕೆಯೂ ನಿರಕ್ಷರಸ್ಥೆ. ಅನಿಸಿದ್ದನ್ನು ಅಕ್ಷರಕ್ಕೆ ಇಳಿಸಲಾಗಲಿಲ್ಲ. ಬಾ ಅವರನ್ನು ಕುರಿತು ಬೇರೆಯವರು ಬರೆದದ್ದು ಮಾತ್ರವೇ ಲಭ್ಯ. ಪತಿಯ ಆತ್ಮಚರಿತ್ರೆಯ ಪದಗಳನ್ನು ಸೋಸಿ ಸೋಸಿ ಆಕೆಯನ್ನು ಸಮೀಪಿಸಬೇಕಿದೆ ಎನ್ನುತ್ತಾರೆ ಐರೋಪ್ಯ ಬರೆಹಗಾರ್ತಿ ಎಮ್ಮಾ ಟಾರ್ಲೋ.

ತಮ್ಮ ತವರಿನಿಂದ ದೊರೆತ ಬಾಗಿನಗಳನ್ನು ದೇಶಸೇವೆಗೆ ಒಪ್ಪಿಸುವಂತೆ ಬಾ ಅವರನ್ನು ಬಲವಂತ ಮಾಡಿದ್ದರು ಗಾಂಧೀ. ಮಕ್ಕಳನ್ನು ಸಾಧುಗಳನ್ನು ಮಾಡಿ ಅವರ ಹೆಂಡತಿಯರನ್ನು ಆಭರಣಗಳಿಂದ ದೂರ ಇರಿಸಿದ್ದ ಬಾಪೂ ಅವರ ಮೇಲೆ ಸಿಡಿದಿದ್ದರು ಕಸ್ತೂರಬಾ. ಒಮ್ಮೆ ಕಸ್ತೂರಬಾಗೆ ಕಂಠಾಭರಣದ ಉಡುಗೊರೆ ದೊರೆತದ್ದು ನನ್ನ (ದೇಶ) ಸೇವೆಗೋ ಅಥವಾ ನಿನ್ನ ಸೇವೆಗೋ ಎಂದು ದನಿಯೇರಿಸಿದ್ದರು ಬಾಪೂ. ತಿರುಗಿ ಬಾ ನೀಡಿದ ಉತ್ತರ ಹೀಗಿತ್ತು- ‘ಒಪ್ಪುತ್ತೇನೆ. . . ಆದರೆ ನೀವು ಸಲ್ಲಿಸಿದ ಸೇವೆ ನಾನು ಸಲ್ಲಿಸಿದ ಸೇವೆಯೆಂದೇ ಲೆಕ್ಕ. ನಿಮಗಾಗಿ ನಾನು ಹಗಲಿರುಳು ದೇಹ ಸವೆಸಿ ದುಡಿದಿದ್ದೇನೆ. ಅದು ಸೇವೆ ಅಲ್ಲವೇನು. . . .’

ಅಂದಿನಿಂದಲೇ ಅಜ್ಜಿಯ ಬದುಕಿನ ಕತೆಯನ್ನು ತಾತನ ಬದುಕು ಮಬ್ಬಿಗೆ ಸರಿಸಿಬಿಟ್ಟಿತು ಎಂದಿದ್ದಾರೆ ಮೊಮ್ಮಗ ಅರುಣ್ ಗಾಂಧೀ. ಹದಿಮೂರನೆಯ ವಯಸ್ಸಿಗೆ ವಿವಾಹದ ನಂತರ. ಕಸ್ತೂರ್ ಕಪಾಡಿಯಾ ಕಸ್ತೂರಬಾ ಗಾಂಧೀ. ಪೋರಬಂದರು ತೊರೆದು ರಾಜಕೋಟ್ ಮನೆಯಲ್ಲಿ ವಾಸ. ಹೊಸ ಊರು, ಹೊಸ ಮನೆ, ಹೊಸ ಹೆಸರು. ಮೋಹನದಾಸ್ ಶಾಲಾ ವಿದ್ಯಾರ್ಥಿ ಮತ್ತು ಗೃಹಸ್ಥ ಎರಡೂ ಆಗಿದ್ದ. ಪತ್ನಿ ತಾನು ಹೇಳಿದಂತೆ ಕೇಳಬೇಕು ಎಂಬ ಇರಾದೆಗೆ ಬಿದ್ದಿದ್ದ. ಮನೆ ಬಿಟ್ಟು ಹೊರಗೆ ಹೋಗುವುದಾದರೆ ತನ್ನ ಅನುಮತಿ ಪಡೆಯಲೇಬೇಕು. ಎಲ್ಲಿ, ಯಾವಾಗ, ಯಾರನ್ನು, ಯಾಕೆ ಭೇಟಿ ಮಾಡಿ ಮಾತನಾಡಿದೆ ಎಂದು ತಿಳಿಸಬೇಕು. ತನಗೇ ನಿಷ್ಠಳಾಗಿರಬೇಕು ಎಂದು ವಿಧಿಸಿದ್ದ. ಕಸ್ತೂರಬಾ ಎದುರು ವಾದಿಸುತ್ತಿದ್ದಿಲ್ಲ. . . .ಪ್ರಶ್ನಿಸುತ್ತಿರಲಿಲ್ಲ. ಗಂಡ ಹೇಳುವುದು ಸಕಾರಣ ಅಲ್ಲ ಎನಿಸಿದ್ದನ್ನು ಮೌನವಾಗಿ ತಳ್ಳಿ ಹಾಕುತ್ತಿದ್ದರು. ರಾತ್ರಿ ಆಯಿತೆಂದರೆ ಪತಿಯಿಂದ ಪ್ರಶ್ನೆಗಳ ಪ್ರವಾಹವನ್ನೇ ಎದುರಿಸಬೇಕಿತ್ತು. ಈ ಮಾತುಗಳನ್ನು ಆಡುತ್ತಿರುವುದು ತನ್ನ ಪತಿಯೇ ಎಂಬ ಸೋಜಿಗ ಬೆರೆತ ವ್ಯಥೆ ಆಕೆಯನ್ನು ಕಾಡಿತ್ತು. ಪತಿ ಸತ್ಯದೊಂದಿಗೆ ಪ್ರಯೋಗಗಳನ್ನು ಮಾಡಿದರೆ, ಆ ಪ್ರಯೋಗಗಳ ಅನುಭವಿಸಿದ್ದು ಪತ್ನಿ.

ಬಾ ಅವರನ್ನು ನಿಯಂತ್ರಿಸುವ ಎಲ್ಲ ಪ್ರಯತ್ನಗಳಲ್ಲೂ ಗಾಂಧೀ ವಿಫಲರಾದದ್ದಾಗಿ ಹೇಳಿಕೊಂಡಿದ್ದಾರೆ. ನಾನೆಷ್ಟೇ ಒತ್ತಡ ಹೇರಿದರೂ ಆಕೆ ಕಟ್ಟಕಡೆಗೆ ತನಗೆ ತಿಳಿದಂತೆಯೇ ಮಾಡುವವಳು. ಈ ಕಾರಣದಿಂದಾಗಿ ಮನಸ್ತಾಪಗಳು ಆಗುತ್ತಿದ್ದವು. ಆದರೆ ನನ್ನ ಬದುಕು ವಿಸ್ತಾರಗೊಂಡಂತೆ ನನ್ನ ಪತ್ನಿ ಅರಳಿ ನನ್ನ ಕೆಲಸದಲ್ಲೇ ತನ್ನನ್ನು ತಾನು ಕಳೆದುಕೊಂಡಳು ಎಂದಿದ್ದಾರೆ. ಬಾ ಅವರ ಕೆಚ್ಚು ಮತ್ತು ದೃಢಸಂಕಲ್ಪಗಳೇ ಬದುಕಿನುದ್ದಕ್ಕೂ ಗಾಂಧೀ ಹೋರಾಟದ ಬೆನ್ನೆಲುಬಾಗಿದ್ದವು. 1908ರಲ್ಲಿ ದಕ್ಷಿಣ ಆಫ್ರಿಕೆಯಲ್ಲಿ ಮಾತ್ರವಲ್ಲದೆ 1932, 1933, 1939 ಹಾಗೂ 1943ರಲ್ಲಿ ಗಾಂಧೀ ಸತ್ಯಾಗ್ರಹಗಳಲ್ಲಿ ಪಾಲ್ಗೊಂಡು ಸೆರೆವಾಸ ಅನುಭವಿಸಿದ್ದರು. ಆಕೆಯ ವಿನಃ ನಾನು ಕತ್ತಲ ಕೂಪದಲ್ಲಿರುತ್ತಿದ್ದೆ. ನನ್ನಲ್ಲಿ ಎಚ್ಚರದ ಬೆಂಕಿ ಆರದಂತೆ ಕಾಪಾಡಿದಳು. ನನ್ನ ಎಲ್ಲ ರಾಜಕೀಯ ಹೋರಾಟಗಳಲ್ಲೂ ಜೊತೆಗೆ ನಿಂತಳು. ಸಾಧಾರಣ ಅರ್ಥದಲ್ಲಿ ಆಕೆ ಅನಕ್ಷರಸ್ಥಳು. ಆದರೆ ನಿಜವಾದ ಶಿಕ್ಷಣದ ಮಾದರಿಯಾಗಿದ್ದಳು.

ಕಸ್ತೂರ ಬಾ ಬಾಳಸಂಗಾತಿ ಆಗದೆ ಹೋಗಿದ್ದಿದ್ದರೆ ಗಾಂಧೀ ಬ್ಯಾರಿಸ್ಟರೂ ಆಗುತ್ತಿರಲಿಲ್ಲ, ಮಹಾತ್ಮಾ ಎಂದೂ ಎನಿಸಿಕೊಳ್ಳುತ್ತಿರಲಿಲ್ಲ. ಇಂಗ್ಲೆಂಡಿಗೆ ಹೋಗಲು ಗಾಂಧೀ ಬಳಿ ಹಣ ಇರಲಿಲ್ಲ. ಕಸ್ತೂರಬಾ ಅವರ ಒಡವೆ ಮಾರಬೇಕಾಯಿತು ಗಾಂಧೀ. ದೇವರಂತೆ ಪೂಜಿಸಬೇಕಾದ ಪರಿಪೂರ್ಣ ಚಿತ್ರವಲ್ಲ, ಪ್ರೀತಿಯಿಂದ ವಿಮರ್ಶಾತ್ಮಕವಾಗಿ ಅಧ್ಯಯನ ಮಾಡಬೇಕಿರುವ ವ್ಯಕ್ತಿ ಎಂದಿದ್ದಾರೆ ಗಾಂಧೀ ಮೊಮ್ಮಗ ಗೋಪಾಲಕೃಷ್ಣ ಗಾಂಧೀ.

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದೆಹಲಿ ಮಹಿಳಾ ಆಯೋಗದ 223 ಗುತ್ತಿಗೆ ನೌಕರರು ಹುದ್ದೆಯಿಂದ ವಜಾ!

0
ದೆಹಲಿ ಮಹಿಳಾ ಆಯೋಗದ 223 ಗುತ್ತಿಗೆ ನೌಕರರನ್ನು ಲೆಫ್ಟಿನೆಂಟ್ ಗವರ್ನರ್ ವಿ.ಕೆ ಸಕ್ಸೇನಾ ಅವರು ಹುದ್ದೆಯಿಂದ ವಜಾಗೊಳಿಸಿದ್ದಾರೆ. ಈ ಹಿಂದೆ ಮಹಿಳಾ ಆಯೋಗದ ಅಧ್ಯಕ್ಷೆಯಾಗಿದ್ದ ಎಎಪಿಯ ರಾಜ್ಯಸಭೆ ಸಂಸದೆ ಸ್ವಾತಿ ಮಲಿವಾಲ್ ಅವರು...