Homeಮುಖಪುಟಅಸ್ಸಾಂ: ಉದ್ಯೋಗದಲ್ಲಿ ಇಡಬ್ಲ್ಯೂಎಸ್‌ ಮೀಸಲಾತಿ ರದ್ದುಗೊಳಿಸಿದ ಬಿಜೆಪಿ ಸರ್ಕಾರ

ಅಸ್ಸಾಂ: ಉದ್ಯೋಗದಲ್ಲಿ ಇಡಬ್ಲ್ಯೂಎಸ್‌ ಮೀಸಲಾತಿ ರದ್ದುಗೊಳಿಸಿದ ಬಿಜೆಪಿ ಸರ್ಕಾರ

- Advertisement -
- Advertisement -

ಆರ್ಥಿಕವಾಗಿ ದುರ್ಬಲ ವರ್ಗದ (ಇಡಬ್ಲ್ಯೂಎಸ್‌) ಅಭ್ಯರ್ಥಿಗಳಿಗೆ ರಾಜ್ಯ ಸರ್ಕಾರಿ ಉದ್ಯೋಗಗಳಲ್ಲಿ ನೀಡಲಾಗಿರುವ 10% ಮೀಸಲಾತಿಯನ್ನು ರದ್ದುಗೊಳಿಸಲು ಅಸ್ಸಾಂ ಸರ್ಕಾರ ನಿರ್ಧರಿಸಿದೆ ಎಂದು ‘ದಿ ಹಿಂದೂ’ ವರದಿ ಮಾಡಿದೆ.

“ಇಡಬ್ಲ್ಯೂಎಸ್‌ [ಆರ್ಥಿಕವಾಗಿ ದುರ್ಬಲ ವರ್ಗ] ಉದ್ಯೋಗ ಕೋಟಾದಲ್ಲಿನ ತಡೆಯು ಈಗಾಗಲೇ ಜಾಹೀರಾತು ಮಾಡಲಾದ ಹುದ್ದೆಗಳ ಮೇಲೆ ಪರಿಣಾಮ ಬೀರುವುದಿಲ್ಲ. ಶಿಕ್ಷಣ ಸಂಸ್ಥೆಗಳಲ್ಲಿನ ಪ್ರವೇಶದಲ್ಲಿ ಇಡಬ್ಲ್ಯೂಎಸ್‌ ಮೀಸಲಾತಿ ಜಾರಿಯಲ್ಲಿರುತ್ತದೆ” ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು ಮತ್ತು ಇತರ ಹಿಂದುಳಿದ ವರ್ಗಗಳಿಗೆ ನೀಡಲಾದ ಮೀಸಲಾತಿ ಸೌಲಭ್ಯವನ್ನು ಪಡೆಯದ ಸಮುದಾಯಗಳಿಗೆ ಇಡಬ್ಲ್ಯೂಎಸ್ ಮೀಸಲಾತಿಯನ್ನು ಕೇಂದ್ರ ಸರ್ಕಾರ 2019ರಲ್ಲಿ ಜಾರಿಗೆ ತಂದಿತು. ಜೊತೆಗೆ ಎಂಟು ಲಕ್ಷ ರೂ. ಆದಾಯ ಮಿತಿಯವರೆಗೂ ಈ ಕೋಟಾ ಅನ್ವಯವಾಗುತ್ತದೆ ಎಂದು ಕಾನೂನು ರೂಪಿಸಿ ಸಂವಿಧಾನ ತಿದ್ದುಪಡಿ ಮಾಡಲಾಯಿತು.

ಐದು ಎಕರೆಗಿಂತ ಹೆಚ್ಚು ಕೃಷಿ ಭೂಮಿ ಅಥವಾ 1,000 ಚದರ ಅಡಿ ವಸತಿ ಭೂಮಿ ಹೊಂದಿರುವ ಕುಟುಂಬಗಳ ವ್ಯಕ್ತಿಗಳು ಈ ಕೋಟಾಕ್ಕೆ ಅರ್ಹರಾಗಿರುವುದಿಲ್ಲ. ಕೇಂದ್ರ ಸರ್ಕಾರ ವಿಧಿಸಿರುವ ಮಾನದಂಡಗಳು ಎಸ್.ಸಿ., ಎಸ್‌.ಟಿ., ಒಬಿಸಿ ವರ್ಗಗಳಲ್ಲಿನ ಅವಕಾಶ ವಂಚಿತ ಸಮುದಾಯಗಳನ್ನು ಅಣಕಿಸುವಂತಿವೆ ಎಂಬ ಟೀಕೆಗಳು ಸರ್ವೇಸಾಮಾನ್ಯವಾಗಿವೆ.

ಇಡಬ್ಲ್ಯೂಎಸ್ ಕೋಟಾ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ ಎಂದು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಯಿತು. ಆದಾಗ್ಯೂ, ನವೆಂಬರ್ 7 ರಂದು ಸುಪ್ರೀಂ ಕೋರ್ಟ್‌ನ ಐದು ನ್ಯಾಯಾಧೀಶರ ಸಂವಿಧಾನ ಪೀಠವು 3:2 ತೀರ್ಪು ನೀಡಿತು. 10% ಇಡಬ್ಲ್ಯೂಎಸ್‌ ಕೋಟಾವನ್ನು ಎತ್ತಿಹಿಡಿಯಿತು.

ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ 10% ಉದ್ಯೋಗ ಮೀಸಲಾತಿಯನ್ನು ಜಾರಿಗೊಳಿಸಿದ 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪೈಕಿ ಬಿಜೆಪಿ ಆಡಳಿತ ನಡೆಸುತ್ತಿರುವ ಅಸ್ಸಾಂ ಕೂಡ ಸೇರಿದೆ.

ಆಂಧ್ರ ಪ್ರದೇಶ, ದೆಹಲಿ, ಗೋವಾ, ಗುಜರಾತ್, ಜಮ್ಮು ಮತ್ತು ಕಾಶ್ಮೀರ, ಜಾರ್ಖಂಡ್, ಕರ್ನಾಟಕ, ಮಹಾರಾಷ್ಟ್ರ, ಮಿಜೋರಾಂ, ತೆಲಂಗಾಣ ಮತ್ತು ಉತ್ತರಾಖಂಡ ರಾಜ್ಯಗಳಲ್ಲಿ ಇಡಬ್ಲ್ಯೂಎಸ್‌ ಜಾರಿಗೊಳಿಸಲಾಗಿದೆ ಎಂದು ‘ದಿ ಹಿಂದೂ’ ವರದಿ ಮಾಡಿದೆ.

ಇಡಬ್ಲ್ಯೂಎಸ್‌ ಕೋಟಾಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ತೆಗೆದುಕೊಂಡಿರುವ ಕ್ರಮವನ್ನು ಅಸ್ಸಾಂನಲ್ಲಿ ವಿರೋಧ ಪಕ್ಷಗಳು ಟೀಕಿಸಿವೆ. ಈ ನಿರ್ಧಾರವು ಸುಪ್ರೀಂ ಕೋರ್ಟ್ ತೀರ್ಪಿಗೆ ವಿರುದ್ಧವಾಗಿದೆ ಎಂದು ತೃಣಮೂಲ ಕಾಂಗ್ರೆಸ್ ಅಭಿಪ್ರಾಯಪಟ್ಟಿದೆ.

“ಇಡಬ್ಲ್ಯೂಎಸ್‌ ಬರುವ ಸಮುದಾಯಗಳಿಗೆ 10% ಉದ್ಯೋಗ ಕೋಟಾವನ್ನು ಸ್ಥಗಿತಗೊಳಿಸುವ ಸರ್ಕಾರದ ನಿರ್ಧಾರವನ್ನು ನಾವು ವಿರೋಧಿಸುತ್ತೇವೆ” ಎಂದು ತೃಣಮೂಲ ಕಾಂಗ್ರೆಸ್ ಅಸ್ಸಾಂ ಅಧ್ಯಕ್ಷ ರಿಪುನ್ ಬೋರಾ ಹೇಳಿದ್ದಾರೆ ಎಂದು ‘ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದೆ.

ಕಾಂಗ್ರೆಸ್ ಶಾಸಕ ಮತ್ತು ವಿರೋಧ ಪಕ್ಷದ ನಾಯಕ ದೇಬಬ್ರತ ಸೈಕಿಯಾ ಪ್ರತಿಕ್ರಿಯಿಸಿ, “ಅಸ್ಸಾಂ ಸರ್ಕಾರ ತಂದಿರುವ ಆರ್ಥಿಕ ಬಿಕ್ಕಟ್ಟಿನ ಕಾರಣ ವೆಚ್ಚ ಕಡಿತದ ಕ್ರಮವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ” ಎಂದಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read