Homeಎಕಾನಮಿಸ್ವಾಯತ್ತತೆ ಮತ್ತು ಆರ್ಥಿಕತೆ; ಅಚ್ಚರಿಗೊಳಿಸುವ ವಾಸ್ತವ: ಬಿ.ಸಿ.ಬಸವರಾಜುರವರ ಲೇಖನ

ಸ್ವಾಯತ್ತತೆ ಮತ್ತು ಆರ್ಥಿಕತೆ; ಅಚ್ಚರಿಗೊಳಿಸುವ ವಾಸ್ತವ: ಬಿ.ಸಿ.ಬಸವರಾಜುರವರ ಲೇಖನ

- Advertisement -
- Advertisement -

ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ಆರ್ಟಿಕಲ್ 370 ಮತ್ತು 35ಎ ಅಡಿಯಲ್ಲಿ ನೀಡಲಾಗಿದ್ದ ವಿಶೇಷ ಅಧಿಕಾರಗಳನ್ನು ರದ್ದು ಮಾಡಲಾಯಿತು. ಆರ್ಟಿಕಲ್ 370ರ ಅಡಿಯಲ್ಲಿ ರಕ್ಷಣೆ, ವಿದೇಶಾಂಗ ನೀತಿ ಮತ್ತು ಸಂಪರ್ಕ ಬಿಟ್ಟು ಉಳಿದ ಎಲ್ಲ ಆಡಳಿತಾತ್ಮಕ ವಿಷಯಗಳಲ್ಲಿ ಜಮ್ಮು ಮತ್ತು ಕಾಶ್ಮೀರ ಸರ್ಕಾರಕ್ಕೆ ತನ್ನದೇ ನಿರ್ಧಾರ ತೆಗೆದುಕೊಳ್ಳುವ ಸ್ವಾಯತ್ತತೆಯಿತ್ತು. ಅಂದರೆ, ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಪಟ್ಟಂತೆ ಶಿಕ್ಷಣ, ಆರೋಗ್ಯ, ಮೂಲಸೌಕರ್ಯ ಆಭಿವೃದ್ಧಿ, ಪ್ರವಾಸೋದ್ಯಮ, ವ್ಯವಸಾಯ ಹೀಗೆ ಯಾವುದೇ ಕ್ಷೇತ್ರಗಳಲ್ಲಿ ನೀತಿಗಳನ್ನು ರೂಪಿಸುವ ಅಧಿಕಾರ ಸಂಪೂರ್ಣವಾಗಿ ರಾಜ್ಯ ಸರ್ಕಾರದ ಕೈಯಲ್ಲಿತ್ತು. ಈ ಕ್ಷೇತ್ರಗಳಿಗೆ ಸಂಬಂಧಪಟ್ಟಂತೆ ಇತರೆ ರಾಜ್ಯಗಳಿಗೆ ಅನ್ವಯವಾಗುವ ಕೇಂದ್ರದ ಕಾನೂನುಗಳು ಜಮ್ಮು ಮತ್ತು ಕಾಶ್ಮೀರಕ್ಕೆ ಅನ್ವಯವಾಗುತ್ತಿರಲಿಲ್ಲ. ಹಾಗೆಯೇ 35ಎ ಅಡಿಯಲ್ಲಿ ಆ ರಾಜ್ಯದ ಕಾಯಂ ನಿವಾಸಿಗಳನ್ನು ಗುರುತಿಸುವ ಮತ್ತು ಅವರ ಹಕ್ಕುಗಳೇನಿರಬೇಕೆಂದು ತೀರ್ಮಾನಿಸುವ ಹಕ್ಕು ರಾಜ್ಯ ಸರ್ಕಾರದ್ದೇ ಆಗಿತ್ತು.

ಸಂಸತ್ತಿನಲ್ಲಿ ಕಾಶ್ಮೀರದ ವಿಶೇಷ ಸ್ವಾಯತ್ತತೆಯನ್ನು ರದ್ದುಪಡಿಸುವ ವಿಧೇಯಕ ಮಂಡಿಸಿದ ಕೇಂದ್ರಸರ್ಕಾರವು ಈ 370 ಮತ್ತು 35ಎ ಆರ್ಟಿಕಲ್‍ಗಳಿಂದಾಗಿಯೇ ಜಮ್ಮು ಮತ್ತು ಕಾಶ್ಮೀರ ರಾಜ್ಯವು ದೇಶದ ಬೇರೆ ರಾಜ್ಯಗಳಿಗಿಂತ ಅಭಿವೃದ್ಧಿಯಲ್ಲಿ ಹಿಂದುಳಿದಿತ್ತು. ಈಗ ಈ ವಿಶೇಷ ಆರ್ಟಿಕಲ್‍ಗಳನ್ನು ರದ್ದುಪಡಿಸುತ್ತಿರುವುದರಿಂದ ಇನ್ನು ಮುಂದೆ ಜಮ್ಮು ಮತ್ತು ಕಾಶ್ಮೀರ ರಾಜ್ಯವು ದೇಶದ ಇನ್ನಿತರ ರಾಜ್ಯಗಳಂತೆಯೇ ಹೆಚ್ಚು ಅಭಿವೃದ್ಧಿ ಹೊಂದಲಿದೆ ಹಾಗೂ ಈ ರಾಜ್ಯಕ್ಕೆ ಟೆರರಿಸಂನಿಂದಲೂ ಮುಕ್ತಿ ದೊರೆಯಲಿದೆ ಎಂದು ಪ್ರತಿಪಾದಿಸಿತು.

ಕೇಂದ್ರ ಸರ್ಕಾರದ ಈ ನಡೆಯಿಂದ ಟೆರರಿಸಂ ಅಂತ್ಯವಾಗುತ್ತದೆಯೇ ಎಂಬುದಕ್ಕೆ ಕಾಲವೇ ಉತ್ತರಿಸಬೇಕು. ಆದರೆ, ಕೇಂದ್ರ ಸರ್ಕಾರ ಹೇಳಿರುವಂತೆ ಜಮ್ಮು ಮತ್ತು ಕಾಶ್ಮೀರಕ್ಕೆ ಆರ್ಟಿಕಲ್ 370 ಮತ್ತು 35ಎ ಅಡಿಯಲ್ಲಿ ಇದ್ದ ಸ್ವಾಯತ್ತತೆಯಿಂದಾಗಿಯೇ ಆ ರಾಜ್ಯವು ದೇಶದ ಬೇರೆ ರಾಜ್ಯಗಳಿಗಿಂತ ಹಿಂದುಳಿದಿತ್ತು ಎಂಬುದು ನಿಜವೇ ಎಂದು ಪರಿಶೀಲಿಸೋಣ.

ಬಹುತೇಕರಿಗೆ ತಿಳಿದಿರುವಂತೆ ಒಂದು ಪ್ರದೇಶ (ಒಂದು ದೇಶ ಅಥವಾ ರಾಜ್ಯವಾಗಬಹುದು) ಅಭಿವೃದ್ಧಿ ಹೊಂದಿದೆಯೇ ಇಲ್ಲವೇ ಎಂಬುದನ್ನು ಆ ಪ್ರದೇಶದ ಒಟ್ಟು ದೇಶೀಯ ಉತ್ಪನ್ನದ (ಜಿಡಿಪಿ – ಗ್ರಾಸ್ ಡೊಮೆಸ್ಟಿಕ್ ಪ್ರಾಡಕ್ಟ್) ಆಧಾರದ ಮೇಲೆ ಮೊದಲು ನಿರ್ಧರಿಸಲಾಗುತ್ತಿತ್ತು. ಆ ಲೆಕ್ಕದಲ್ಲಿ ಭಾರತ ಒಟ್ಟು 2.61 ಟ್ರಿಲಿಯನ್ ಡಾಲರ್ ಜಿಡಿಪಿಯೊಂದಿಗೆ ಇವತ್ತು ವಿಶ್ವದಲ್ಲಿ ಆರನೇ ಶ್ರೀಮಂತ ದೇಶ ಎನಿಸಿದೆ. ಆದರೆ, ಭಾರತದ ಪ್ರಜೆಗಳ ಜೀವನಮಟ್ಟ (ಅಂದರೆ ಶಿಕ್ಷಣ, ಅರೋಗ್ಯ, ಮೂಲಸೌಕರ್ಯ ಇತ್ಯಾದಿ) ನೋಡಿದರೆ ನಮ್ಮ ದೇಶ ವಿಶ್ವದ ಆರನೇ ಶ್ರೀಮಂತ ದೇಶ ಎಂದು ದೇಶದ ಬಗ್ಗೆ ಹೆಮ್ಮೆ, ಅಭಿಮಾನ ಇರುವ ನಮಗೇ ಅನಿಸುವುದಿಲ್ಲ.

ಹಾಗಾಗಿ ಕೆಲ ದಶಕಗಳಿಂದೀಚೆಗೆ ಯಾವುದೇ ಪ್ರದೇಶದ ಅಭಿವೃದ್ಧಿಯನ್ನು ಆ ಪ್ರದೇಶದ ಮನುಷ್ಯರ ಜೀವನಮಟ್ಟ ನೋಡಿ ಅಳೆಯಲಾಗುತ್ತಿದೆ. ಅದನ್ನು ನಮಗೆ ಗೊತ್ತಿರುವ ಹಾಗೆ ಮಾನವ ಅಭಿವೃದ್ಧಿ ಸೂಚ್ಯಂಕದ ಮೂಲಕ ಅಳೆಯಲಾಗುತ್ತಿದೆ. ಯಾವ ದೇಶ ಈ ಮಾನವ ಅಭಿವೃದ್ದಿ ಸೂಚ್ಯಂಕದಲ್ಲಿ ಉತ್ತಮವಾಗಿರುತ್ತದೆಯೋ ಅಂಥಾ ದೇಶ ಸಮಗ್ರ ಅಭಿವೃದ್ದಿ ಹೊಂದಿದ ದೇಶ ಎಂದು ಗುರುತಿಸಲಾಗುತ್ತಿದೆ. ಈಗ ಭಾರತವನ್ನೇ ತೆಗೆದುಕೊಂಡರೆ, ಇದು ವಿಶ್ವದ ಆರನೇ ಶ್ರೀಮಂತ ದೇಶವಾಗಿಯೂ ಕೂಡ ಮಾನವ ಅಭಿವೃದ್ದಿ ಸೂಚ್ಯಂಕದ (HDI – Human development index) ಪ್ರಕಾರ ನೂರ ಮೂವತ್ತನೇ ಸ್ಥಾನದಲ್ಲಿದೆ. ಅಂದರೆ, ಒಟ್ಟಾರೆ ಅಭಿವೃದ್ದಿಯಲ್ಲಿ ಭಾರತ ತುಂಬ ಹಿಂದುಳಿದಿದೆ.

ಹಾಗೆಯೇ ನಮ್ಮ ದೇಶದೊಳಗೆ ಇರುವ ರಾಜ್ಯಗಳ ಅಭಿವೃದ್ಧಿಯ ಮಟ್ಟವನ್ನೂ ಮಾನವ ಅಭಿವೃದ್ಧಿ ಸೂಚ್ಯಂಕದಿಂದಲೇ ಗುರುತಿಸಲಾಗುತ್ತದೆ. ಈ ಮಾನವ ಅ

ಭಿವೃದ್ದಿ ಸೂಚ್ಯಂಕವು ಒಂದು ರಾಜ್ಯದಲ್ಲಿ ಒಟ್ಟಾರೆ ಜೀವನಮಟ್ಟ ಉತ್ತಮವಾಗಿದೆಯೇ ಇಲ್ಲವೇ ಎಂಬುದನ್ನು ಸೂಚಿಸುತ್ತದೆ. ಇಲ್ಲಿ ಮನುಷ್ಯರ ಸಾಮಾನ್ಯ ಜೀವಿತಾವಧಿ, ಶಿಶು ಮರಣ (ಹುಟ್ಟುವ ಸಾವಿರ ಮಕ್ಕಳಲ್ಲಿ ಎಷ್ಟು ಮಕ್ಕಳು ಸಾಯುತ್ತಾರೆ), ಲಿಂಗಾನುಪಾತ (ಸಾವಿರ ಗಂಡುಮಕ್ಕಳಿಗೆ ಎಷ್ಟು ಹೆಣ್ಣು ಮಕ್ಕಳಿದ್ದಾರೆ), ಬಡತನದ ಮಟ್ಟ (ಶೇಕಡ ಎಷ್ಟು ಮಂದಿ ಬಡತನ ರೇಖೆಗಿಂತ ಕೆಳಗಿದ್ದಾರೆ), ಸಾಕ್ಷರತಾ ಪ್ರಮಾಣ, ಮಾನವ ಫಲವತ್ತತೆಯ ಪ್ರಮಾಣ (ಒಬ್ಬ ಮಹಿಳೆಗೆ ಸರಾಸರಿ ಹುಟ್ಟುವ ಮಕ್ಕಳ ಸಂಖ್ಯೆ) ಇತ್ಯಾದಿ ಮಾನದಂಡಗಳನ್ನು ಬಳಸಿ ಒಂದು ರಾಜ್ಯದ ಅಭಿವೃದ್ಧಿ ಮಟ್ಟವನ್ನು ನಿರ್ಧರಿಸಲಾಗುತ್ತದೆ.

ಈ ಮೇಲಿನ ಅಂಶಗಳು ಮತ್ತು ಇನ್ನೂ ಹಲವು ಸಂಬಂಧಿತ ಅಂಶಗಳನ್ನು ಪರಿಗಣಿಸಿ ಆಯಾ ರಾಜ್ಯದ ಮಾನವ ಅಭಿವೃದ್ದಿ ಸೂಚ್ಯಂಕವನ್ನು ಲೆಕ್ಕ ಹಾಕಲಾಗುತ್ತದೆ. ಈ ನಿಟ್ಟಿನಲ್ಲಿ 2017 ರಲ್ಲಿ ಜಮ್ಮು ಮತ್ತು ಕಾಶ್ಮೀರದ HDI 0.684 ಇದ್ದು ಇದು ಭಾರತದ ಒಟ್ಟು ಸರಾಸರಿ HDI 0.64ರ ಆಸುಪಾಸಿನಲ್ಲಿದೆ.

ಈ ಮಾನವ ಅಭಿವೃದ್ಧಿ ಸೂಚ್ಯಂಕವನ್ನು ಬಿಡಿಬಿಡಿಯಾಗಿ ಅವಲೋಕಿಸಿದಾಗ ಕೂಡ ಜಮ್ಮು ಮತ್ತು ಕಾಶ್ಮೀರ ಭಾರತದ ಬಹುತೇಕ ರಾಜ್ಯಗಳಿಗಿಂತ ಮುಂದಿರುವುದು ಮತ್ತು ಹಲವಾರು ಅಂಶಗಳಲ್ಲಿ ಭಾರತದ ರಾಷ್ಟ್ರೀಯ ಸರಾಸರಿಗಿಂತ ಮೇಲಿರುವುದು ಸ್ಪಷ್ಟವಾಗಿ ಕಂಡುಬರುತ್ತದೆ.

ಉದಾಹರಣೆಗೆ:

1) ಶಿಶುಮರಣ ಪ್ರಮಾಣ ಕಾಶ್ಮೀರದಲ್ಲಿ ಸಾವಿರಕ್ಕೆ 24 ಇದ್ದರೆ, ಭಾರತದ ಸರಾಸರಿ 34 ರಷ್ಟಿದೆ. ಗುಜರಾತ್‍ನಲ್ಲಿ 30, ಮಧ್ಯಪ್ರದೇಶದಲ್ಲಿ 47, ಬಿಹಾರದಲ್ಲಿ 38 ಹಾಗೂ ಉತ್ತರ ಪ್ರದೇಶದಲ್ಲಿ 43ರಷ್ಟಿದೆ.

2) ಮನುಷ್ಯನ ಸಾಮಾನ್ಯ ಜೀವಿತಾವಧಿ ಕಾಶ್ಮೀರದಲ್ಲಿ 72.6 ವರ್ಷಗಳಿದ್ದು ಭಾರತದ ಸರಾಸರಿ 67.3 ವರ್ಷಗಳಿಗಿಂತ ಹೆಚ್ಚಾಗಿದೆ. ಗುಜರಾತ್ 68.7, ಬಿಹಾರ 68.1, ಉತ್ತರಪ್ರದೇಶ 64.1 ಹಾಗೂ ಮಧ್ಯಪ್ರದೇಶ 64.2 ವರ್ಷಗಳಷ್ಟಿದೆ. ಈ ಜೀವಿತಾವಧಿಯ ವಿಷಯದಲ್ಲಿ ಕಾಶ್ಮೀರ ಮೂರನೇ ಸ್ಥಾನದಲ್ಲಿದ್ದರೆ, ಗುಜರಾತ್ ಹತ್ತನೇ ಸ್ಥಾನದಲ್ಲಿದೆ.

ಇದನ್ನು ಓದಿ: ಜಮ್ಮು ಕಾಶ್ಮೀರದಂತೆ ಇನ್ನು ಹತ್ತು ರಾಜ್ಯಗಳಿಗೆ ಈಗಲೂ ವಿಶೇಷ ಸ್ಥಾನಮಾನ ಚಾಲ್ತಿಯಲ್ಲಿದೆ. ನಿಮಗಿದು ಗೊತ್ತೆ?

3) ಕಾಶ್ಮೀರದಲ್ಲಿ ಒಟ್ಟು ಶೇ.10.35ರಷ್ಟು ಪ್ರಜೆಗಳು ಬಡತನರೇಖೆಗಿಂತ ಕೆಳಗಿದ್ದರೆ, ಇಡೀ ದೇಶದ ಸರಾಸರಿ 22% ಆಗಿದೆ. ಇದು ಗುಜರಾತಲ್ಲಿ 16.63%, ಬಿಹಾರದಲ್ಲಿ 33.74%, ಮಧ್ಯಪ್ರದೇಶದಲ್ಲಿ 31.65% ಹಾಗೂ ಉತ್ತರಪ್ರದೇಶದಲ್ಲಿ 29.43% ರಷ್ಟಿದೆ. ಒಟ್ಟು ರಾಜ್ಯಗಳಲ್ಲಿ ಕಾಶ್ಮೀರ ಏಳನೇ ಸ್ಥಾನದಲ್ಲಿದ್ದರೆ ಗುಜರಾತ್ ಹದಿನಾಲ್ಕನೇ ಸ್ಥಾನದಲ್ಲಿದೆ.

4) ರಾಜ್ಯದಲ್ಲಿ ಸಂಪೂರ್ಣವಾಗಿ ರೋಗನಿರೋಧಕ ಪಡೆದ (Fully immunized) ಮಕ್ಕಳ ಶೇಕಡಾವಾರು ನೋಡಿದಾಗ ಕಾಶ್ಮೀರ 75.1% ಇದ್ದರೆ ಭಾರತದ ಸರಾಸರಿ 62% ಇದೆ. ಈ ವಿಷಯದಲ್ಲಿ ಗುಜರಾತ್ 50.4%, ಬಿಹಾರ 61.7%, ಮಧ್ಯಪ್ರದೇಶ 53.6% ಹಾಗೂ ಉತ್ತರ ಪ್ರದೇಶ 51.4%ರಷ್ಟು ಸಾಧನೆ ಮಾಡಿವೆ.

5) ಲಿಂಗಾನುಪಾತದಲ್ಲಿ ಕಾಶ್ಮೀರದಲ್ಲಿ ಪ್ರತಿ ಸಾವಿರ ಗಂಡುಮಕ್ಕಳಿಗೆ 899 ಹೆಣ್ಣುಮಕ್ಕಳಿದ್ದರೆ, ಭಾರತದ ಸರಾಸರಿ 900 ಇದೆ. ಗುಜರಾತಲ್ಲಿ ಇದು 854, ಉತ್ತರಪ್ರದೇಶ 879, ಮಧ್ಯ ಪ್ರದೇಶ 919 ಮತ್ತು ಬಿಹಾರ 916 ಇದೆ.

6) ರಾಷ್ಟ್ರೀಯ ಕುಟುಂಬ ಆರೋಗ್ಯ ಸರ್ವೆಯ ಪ್ರಕಾರ ಕಾಶ್ಮೀರದಲ್ಲಿ 8.7%ರಷ್ಟು ಮಹಿಳೆಯರು ಹದಿನೆಂಟು ವರ್ಷ ತುಂಬುವ ಮೊದಲೇ ವಿವಾಹವಾದರೆ ದೇಶದ ಸರಾಸರಿ 26.8%ರಷ್ಟಿದೆ. ಗುಜರಾತಲ್ಲಿ ಇದು 24.9% ಇದ್ದರೆ, ಬಿಹಾರದಲ್ಲಿ 42.5%ರಷ್ಟಿದೆ.

7) ಮಾನವ ಅಭಿವೃದ್ಧಿ ಇಲಾಖೆಯ ಅಂಕಿಅಂಶಗಳ ಪ್ರಕಾರ, ಕಾಶ್ಮೀರದಲ್ಲಿ ಹನ್ನೊಂದು ಮತ್ತು ಹನ್ನೆರಡನೇ ತರಗತಿಗೆ ಸೇರುವ ಮಕ್ಕಳು 58.6% ಇದ್ದರೆ (ಆ ವಯಸ್ಸಿನ ಒಟ್ಟು ಮಕ್ಕಳ ಶೇಕಡಾವಾರು) ರಾಷ್ಟ್ರೀಯ ಸರಾಸರಿ 56.6% ರಷ್ಟಿದೆ. ಇದಕ್ಕೆ ಜಮ್ಮು ಮತ್ತು ಕಾಶ್ಮೀರ ಸರ್ಕಾರ ತನ್ನ ಸ್ವಾಯತ್ತ ಅಧಿಕಾರ ಉಪಯೋಗಿಸಿ ಎಂಟನೆಯ ತರಗತಿಯವರೆಗೆ ಎಲ್ಲ ಮಕ್ಕಳಿಗೂ ಉಚಿತ ಮತ್ತು ಕಡ್ಡಾಯ ಶಿಕ್ಷಣ ನೀತಿ ಜಾರಿಮಾಡಿದ್ದು ಕಾರಣ ಎನ್ನಲಾಗುತ್ತದೆ (2002ರಿಂದ ಇದನ್ನು ಜಾರಿಮಾಡಲಾಯಿತು).

(ಈ ಮೇಲಿನ ಅಂಕಿಅಂಶಗಳಲ್ಲಿ ಅತಿಸಣ್ಣ ಕೇಂದ್ರಾಡಳಿತ ಪ್ರದೇಶಗಳಾದ ಡಮನ್ ಅಂಡ್ ದಿಯು, ಲಕ್ಷದ್ವೀಪ, ಅಂಡಮಾನ್‍ಗಳಂತಹವನ್ನು ತೆಗೆದರೆ ಕಾಶ್ಮೀರದ ಸ್ಥಾನ ಇನ್ನೂ ಮೇಲಕ್ಕೇರುತ್ತದೆ)

ಒಟ್ಟಾರೆಯಾಗಿ ಮೇಲಿನ ಮತ್ತು ಇತರ ಸಂಬಂಧಿತ ಅಂಶಗಳನ್ನು ನೋಡಿದಾಗ, ಜಮ್ಮು ಮತ್ತು ಕಾಶ್ಮೀರ ರಾಜ್ಯ ಮಾನವ ಅಭಿವೃದ್ಧಿಯ ಲೆಕ್ಕಾಚಾರದ ಪಟ್ಟಿಯಲ್ಲಿ ಕೇರಳ, ತಮಿಳುನಾಡಿನಂತಹ ಹೆಚ್ಚು ಒಟ್ಟಾರೆ ಅಭಿವೃದ್ಧಿ ಹೊಂದಿರುವ ರಾಜ್ಯಗಳ ಜೊತೆಗೆ ನಿಲ್ಲುತ್ತದೆ. ಮಾನವ ಅಭಿವೃದ್ಧಿಯ ಸೂಚ್ಯಂಕ ಹೆಚ್ಚಿರುವುದು ಒಂದು ರಾಜ್ಯದ ಅಭಿವೃದ್ಧಿ ಆ ರಾಜ್ಯದ ಪ್ರಜೆಗಳಿಗೆ ಆದಷ್ಟೂ ಸಮಾನವಾಗಿ ಹಂಚಿಕೆಯಾಗಿರುವುದನ್ನು ತೋರಿಸುತ್ತದೆ. ಇದೇ ನಿಜವಾದ ಅಭಿವೃದ್ಧಿಯಾಗಿರುವ ಕಾರಣಕ್ಕೇ ವಿಶ್ವದ ದೇಶಗಳ ಬೆಳವಣಿಗೆಯನ್ನೂ HDI ಮೇಲೆಯೇ ನಿರ್ಧರಿಸಲಾಗುತ್ತಿದೆ.

ಅಂದರೆ, ಆರ್ಟಿಕಲ್ 370ಯಿಂದ ಸ್ವಾಯತ್ತತೆ ಕಾಶ್ಮೀರದ ಅಭಿವೃದ್ಧಿಗೆ ಮಾರಕವಾಗಿರದೆ, ಪೂರಕವಾಗಿತ್ತು ಎಂದು ಅತ್ಯಂತ ಸ್ಪಷ್ಟವಾಗಿ ಗುರುತಿಸಬಹುದು. ಇಡೀ ದೇಶದಲ್ಲಿ ಭೂಸುಧಾರಣೆ (Land reforms) ಅತ್ಯಂತ ಪರಿಣಾಮಕಾರಿಯಾಗಿ ಜಾರಿಗೆ ಬಂದದ್ದು ಕಾಶ್ಮೀರದಲ್ಲಿ ಎಂಬುದನ್ನೂ ಓದುಗರು ಗಮನಿಸಬಹುದು. ಕಾಶ್ಮೀರದಲ್ಲಿ ಬಡತನ ರೇಖೆಗಿಂತ ಕೆಳಗಿರುವ ಜನರ ಸಂಖ್ಯೆ ಅತಿ ಕಡಿಮೆಯಿರುವುದನ್ನು ಈ ಹಿನ್ನೆಲೆಯಲ್ಲಿ ಅರ್ಥಮಾಡಿಕೊಳ್ಳಬಹುದು. ಕಾಶ್ಮೀರ ಸರ್ಕಾರ ತನ್ನ ಸ್ವಾಯತ್ತತೆ ಬಳಸಿಕೊಂಡು ಜಮೀನು ಹಂಚಿಕೆ ಮಾಡಿದ್ದು ಇದಕ್ಕೆ ಕಾರಣ.

ಈ ಎಲ್ಲ ವಾಸ್ತವ ಅಂಕಿಅಂಶಗಳ ಹಿನ್ನೆಲೆಯಲ್ಲಿ ಅಷ್ಟು ಆಂತರಿಕ ಸಂಘರ್ಷದ ನಡುವೆಯೂ ಜಮ್ಮು ಕಾಶ್ಮೀರ ರಾಜ್ಯದ ಈ ಮಟ್ಟಿನ ಬೆಳವಣಿಗೆಗೆ ಆರ್ಟಿಕಲ್ 370ಯಿಂದ ಒದಗಿದ ಸ್ವಾಯತ್ತತೆಯೇ ಮುಖ್ಯ ಕಾರಣ ಎಂದು ಅರ್ಥ ಮಾಡಿಕೊಳ್ಳಬಹುದು. ಹಾಗಾದರೆ, ಕಾಶ್ಮೀರದ ರೀತಿಯ ಸ್ವಾಯತ್ತತೆ ಇಲ್ಲದ ಕೇರಳ, ತಮಿಳುನಾಡು ತರದ ರಾಜ್ಯಗಳು ಕಾಶ್ಮೀರಕ್ಕಿಂತ ಅಭಿವೃದ್ಧಿ ಹೊಂದಿವೆಯಲ್ಲ ಎಂಬ ಪ್ರಶ್ನೆ ಸಹಜವಾಗಿ ಮೂಡಬಹುದು.

ವಾಸ್ತವವೆಂದರೆ, ಅಂತಹ ಸ್ವಾಯತ್ತತೆ ಇದ್ದಿದ್ದರೆ ಕೇರಳ, ತಮಿಳುನಾಡು ಮತ್ತು ಇತರ ರಾಜ್ಯಗಳು ಈಗ ಇರುವುದಕ್ಕಿಂತಲೂ ಇನ್ನೂ ಹೆಚ್ಚು ಅಭಿವೃದ್ಧಿ ಹೊಂದಿರುತ್ತಿದ್ದವು ಎಂಬುದು ಸತ್ಯ. ಏಕೆಂದರೆ, ನಮ್ಮ ಭಾರತ ದೇಶ ರಾಜ್ಯಗಳ ಒಕ್ಕೂಟ. ಇಲ್ಲಿ ಪ್ರತಿಯೊಂದು ರಾಜ್ಯವೂ ವಿಭಿನ್ನ. ಭಾಷೆ, ಸಂಸ್ಕೃತಿ, ಜನಜೀವನ ಎಲ್ಲವೂ ಒಂದೊಂದು ರಾಜ್ಯದಲ್ಲಿ ಒಂದೊಂದು ರೀತಿ. ಆಯಾ ರಾಜ್ಯದ ಭಾಷೆ, ನೈಸರ್ಗಿಕ ಸಂಪನ್ಮೂಲ, ಜನಜೀವನದ ರೀತಿಗಳಿಗನುಗುಣವಾಗಿ ಆ ರಾಜ್ಯದ ಅಭಿವೃದ್ಧಿ ಮಾದರಿಯನ್ನು ರೂಪಿಸಿಕೊಳ್ಳುವ ಸಾಮಥ್ರ್ಯ ಆಯಾ ರಾಜ್ಯದ ಪ್ರಜೆಗಳಿಗೆ ಮಾತ್ರ ಇರುತ್ತದೆ.

ಹಾಗಾಗಿ, ಪ್ರತಿ ರಾಜ್ಯಕ್ಕೆ ಸಂಬಂಧಿಸಿದ ಅಭಿವೃದ್ಧಿ ಮಾದರಿ ಮತ್ತು ನೀತಿನಿಯಮಗಳನ್ನು ಕೇಂದ್ರ ಸರ್ಕಾರ ರೂಪಿಸುವುದಕ್ಕಿಂತ ಆಯಾ ರಾಜ್ಯವೇ ರೂಪಿಸಿಕೊಳ್ಳುವುದು ವಾಸ್ತವಕ್ಕೆ ಹೆಚ್ಚು ಹತ್ತಿರವಾಗಿರುತ್ತದೆ ಮತ್ತು ಅಭಿವೃದ್ಧಿ ಪಥದತ್ತ ವೇಗವಾಗಿ ಕೊಂಡೊಯ್ಯುತ್ತದೆ.

ಆಗ, ಪ್ರತಿ ರಾಜ್ಯವೂ ಅಭಿವೃದ್ಧಿ ಹೊಂದಿ ರಾಜ್ಯಗಳ ಒಕ್ಕೂಟವಾದ ನಮ್ಮ ಹೆಮ್ಮೆಯ ಭಾರತವು ಅಖಂಡ ಅಭಿವೃದ್ಧಿ ಹೊಂದಿದ ದೇಶವಾಗಿ ಹೊರಹೊಮ್ಮಲು ಅನುಕೂಲವಾಗುತ್ತದೆ.

ಇದನ್ನು ಓದಿ: ಕಾಶ್ಮೀರದ ಮಾಧ್ಯಮಗಳನ್ನು ಬಂಧನದಲ್ಲಿಡಲಾಗಿದೆ: ಸುಪ್ರೀಂ ಕೋರ್ಟ್ ನಲ್ಲಿ ಅನುರಾಧಾ ಭಾಸಿನ್ ಪ್ರಶ್ನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚರ್ಚ್‌ಗಳಲ್ಲಿ ‘ದಿ ಕೇರಳ ಸ್ಟೋರಿ’ ಪ್ರದರ್ಶನ: ಕೋಮು ಅಜೆಂಡಾ ಬಗ್ಗೆ ಎಚ್ಚರಿಸಿದ ತಲಶ್ಶೇರಿ ಬಿಷಪ್

0
ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಕೇರಳದ ಕೆಲ ಚರ್ಚ್‌ಗಳಲ್ಲಿ ವಿವಾದಿತ 'ದಿ ಕೇರಳ ಸ್ಟೋರಿ' ಸಿನಿಮಾ ಪ್ರದರ್ಶನ ಮಾಡಲಾಗಿತ್ತು. ಮುಸ್ಲಿಮರ ಬಗ್ಗೆ ಸುಳ್ಳು ಪ್ರತಿಪಾದಿತ ಈ ಸಿನಿಮಾ ಪ್ರದರ್ಶನದ ಮೂಲಕ ಮುಸ್ಲಿಮರ ಬಗ್ಗೆ ಕ್ರಿಶ್ಚಿಯನ್ನರಲ್ಲಿ...