Homeಕರ್ನಾಟಕಚುಚ್ಚಿದರೆ ತೀವ್ರ ನೋವು, ಬಡವರ ಪಾಲಿಗೆ ಹೂವು... ನೀರಿಲ್ಲದಿದ್ದರೂ ಜಾಲಿಯಾಗಿ ಬೆಳೆಯುವ ಜಾಲಿ...

ಚುಚ್ಚಿದರೆ ತೀವ್ರ ನೋವು, ಬಡವರ ಪಾಲಿಗೆ ಹೂವು… ನೀರಿಲ್ಲದಿದ್ದರೂ ಜಾಲಿಯಾಗಿ ಬೆಳೆಯುವ ಜಾಲಿ…

- Advertisement -
- Advertisement -

| ಶಿವಾ |

ಕರ್ನಾಟಕ ಪ್ರಗತಿರಂಗದ ಸಭೆಗಳಲ್ಲಿ ಪಾಲ್ಗೊಳ್ಳಲು ಬಳ್ಳಾರಿ ಜಿಲ್ಲೆಯ ವಿವಿಧ ಪಟ್ಟಣ, ಹಳ್ಳಿಗಳನ್ನು ಸುತ್ತಿ ಬಂದಿದ್ದ ಪಿ. ಲಂಕೇಶರು, ‘ಮರೆಯುವ ಮುನ್ನ’ದಲ್ಲಿ ಬಳ್ಳಾರಿಯ ಜಾಲಿಮುಳ್ಳುಗಳ ಕುರಿತೇ ಒಂದು ಆಹ್ಲಾದಕರ ಟಿಪ್ಪಣಿ ಬರೆದಿದ್ದರು. ಈ ಮುಳ್ಳು ಜಾಲಿ ಗಿಡವೇ ಇಲ್ಲಿನ ಬಡವರಿಗೆ ಉರುವಲು, ದೇಹಭಾಧೆ ತೀರಿಸಿಕೊಳ್ಳಲು ಮರೆ… ಎಂಬರ್ಥದಲ್ಲಿ ಬರೆದು, ಜನರು ಸ್ಥಳೀಯ ವಾತಾವರಣದಲ್ಲಿ ಬದುಕು ಕಟ್ಟಿಗೊಳ್ಳುವ ಹಿಂದಿನ ವಾಸ್ತವವನ್ನು ತೆರದಿದಿಟ್ಟಿದ್ದರು. ಉತ್ತರ ಕರ್ನಾಟಕದ ತುಂಬ ಹರಡಿರುವ ಈ ಮುಳ್ಳು ಜಾಲಿಯ ‘ಜೀವಪರತೆ’ಯನ್ನು ಇಲ್ಲಿ ನೀಡಲಾಗಿದೆ…

ಇದು ಜಾಲಿ ! ಎಲ್ಲೆಂದರಲ್ಲಿ ಜಾಲಿಯಾಗಿ ಬೆಳೆಯುವ ಜಾತಿಯ ಮುಳ್ಳು ಪೊದೆಯಿದು.
ಉತ್ತರ ಕರ್ನಾಟಕ ಬಹುತೇಕ ಭಾಗಗಳಲ್ಲಿ ಇದು ಬೇರು ಬಿಟ್ಟು, ತನ್ನದೆಯಾದ ದಟ್ಟ ಪೊದೆಯಾಕಾರದ ಕಾಡನ್ನು ಬೆಳೆಯುವ ಛಾತಿಯನ್ನು ಹೊಂದಿದೆ. ಬಯಲು ಪ್ರದೇಶದಲ್ಲಿ ಹಾಗೂ ನದಿದಡ, ಹಳ್ಳಕೊಳ್ಳ, ಕೋಟೆ, ಕಂದಕ ಸೇರಿದಂತೆ ಖಾಲಿ ಪ್ರದೇಶದಲ್ಲಿ ನೀರಿಲ್ಲದೆ, ಸಂರಕ್ಷಣೆಯಿಲ್ಲದೆ ಬೆಳೆಯುವ ಜಾಲಿ, ಬಹುಪಯೋಗಿ ಮುಳ್ಳಿನ ಕಂಟಿಯಾಗಿದೆ.

ಜಾಲಿ ಜಾತಕ:
ಸ್ವತಂತ್ರ ಪೂರ್ವದಲ್ಲಿ ಈಸ್ಟ್ ಇಂಡಿಯಾ ಕಂಪನಿಯ ಬ್ರಿಟಿಷ್ ಅಧಿಕಾರಿಗಳು ಭಾರತಕ್ಕೆ ಬರುವಾಗ ತಮ್ಮ ಹಡಗುಗಳಿಗೆ ಇಂಧನ ಪೂರೈಸಲು ಮತ್ತು ಅಗ್ಗಿಷ್ಟಿಕೆಯನ್ನು ಉರಿಸಿಕೊಳ್ಳಲು ಈ ಜಾಲಿಯ ಮರವನ್ನು ಆಶ್ರಯಿಸುತ್ತಿದ್ದರು. ಮೂಲತಃ ಇದು ದಕ್ಷಿಣ ಆಫ್ರಿಕಾದ ಅಮೇಜಾನ್ ಕಾಡುಗಳಲ್ಲಿ ಕಂಡು ಬರುವ, ಕ್ಯಾಕ್ಟಸ್ ಮುಳ್ಳು ಜಾತಿಯ ಸಸ್ಯ ಸಂಕುಲವಿದು.

ರಾಜ್ಯದ ಬಳ್ಳಾರಿ ಭಾಗದಲ್ಲಿ ಈ ಜಾಲಿ ಮರವು ಮೊದಲ ಬಾರಿಗೆ ಬೇರು ಬಿಟ್ಟ ಉದಾಹರಣೆಯಿದೆ. ಈಗಲೂ ಈ ಮುಳ್ಳು ಪೊದೆಯನ್ನು ಬಳ್ಳಾರಿ ಜಾಲಿಯಂದು ಉತ್ತರ ಕರ್ನಾಟಕದ ರೈತರು ಗುರುತಿಸುತ್ತಾರೆ. ಬಳ್ಳಾರಿ ಜಾಲಿ, ಇದು ಮೂಲತಃ ಹಂದಿ ಸಾಕಾಣಿಕೆಗೆ ಬಳಕೆಯಾಗುವ ಪೊದೆಯಾಗಿದೆ. ಜಾಲಿಗಿಡದ ಹೊಂಬಣ್ಣದ ಹಣ್ಣಾದ ಕಾಯಿಗಳು ಬೆಲ್ಲದ ರುಚಿಯನ್ನು ಹೊಂದಿರುತ್ತವೆ. ಅದರೊಳಗಿರುವ ಬೀಜಗಳು ವಿಷಕಾರಿಯಾಗಿರುತ್ತವೆ. ಇದರ ಕಾಯಿಗಳನ್ನು ಹಂದಿಗಳಿಗೆ ಆಹಾರವಾಗಿ ಬಳಸಲಾಗುತ್ತದೆ. ಇದರೊಂದಿಗೆ ಜಾಲಿಗಿಡ, ರೈತರ ಪಾಲಿಗೆ ಹೊಲದ ಬದುಗಳಲ್ಲಿ ಜೀವಂತ ಬೇಲಿಯಾಗಿದೆ. ಗ್ರಾಮೀಣ ಪ್ರದೇಶದ ಬಡವರು ಇದನ್ನು ಉರುವಲಾಗಿ ಬಳಸುತ್ತಾರೆ.

ಬಹುಪಯೋಗಿ ಜಾಲಿ ಜಾಲ:
ಜಾಲಿ ಅನೇಕ ಪ್ರಭೇದಗಳನ್ನು ಒಳಗೊಂಡಿದೆ. ದೊಡ್ಡ ಜಾಲಿ, ಸಣ್ಣ ಜಾಲಿ, ರಾಮಜಾಲಿ, ಕರಿಜಾಲಿ, ಹಿಕ್‍ಜಾಲಿ, ಜೀನಿಕಂಟಿ ಎಂದು ಕರೆಯಲ್ಪಡುತ್ತದೆ. ಬಿದರಿನಂತೆ ಇದು ಮೆದುವಾಗಿ ಬಾಗುವ ಗುಣವನ್ನು ಹೊಂದಿದೆ. ಹಸಿ ಕಟ್ಟಿಗೆಯನ್ನು ಬಿಲ್ಲಿನಂತೆ ಬಾಗಿಸಬಹುದು. ಬಲಿತ ಕಟ್ಟಿಗೆಯನ್ನು ಉರುವಲು ಇದ್ದಿಲನ್ನಾಗಿ ಪರಿವರ್ತಿಸುತ್ತಾರೆ.

ಉತ್ತರ ಕರ್ನಾಟಕ ಸೇರಿದಂತೆ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಇಂಗಳೇಶ್ವರ, ತೆಲಗಿ, ಜಾಯವಾಡಗಿ ಹಾಗೂ ಇಂಡಿ ತಾಲೂಕಿನ ಭತಗುಣಕಿ, ನಂದ್ರಾಳ, ಹಲಸಂಗಿ, ಅಜನಾಳ, ಹೊರ್ತಿ, ಬುದಿಹಾಳ, ಬೇನೂರ ಆಸು ಪಾಸಿನ ಗ್ರಾಮಗಳಲ್ಲಿ ಜಾಲಿಕಟ್ಟಿಗೆಯಿಂದ ಇದ್ದಿಲು ತಯಾರಿಸಲಾಗುತ್ತದೆ.

ಕಾಶ್ಮೀರದಿಂದ ಕನ್ಯಾಕುಮಾರಿಗೆ:
ಬರದ ಭೂಮಿಯಲ್ಲಿ ಬರಬರನೇ ಮೇಲೆದ್ದು, ದಟ್ಟ ಪೊದೆಯಾಗಿ ಬೆಳೆಯುವ ಈ ಜಾಲಿ ಗಿಡಗಳು ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೂ ಹರಡಿಕೊಂಡಿವೆ. ನೀರು ಹಾಗೂ ಸಂರಕ್ಷಣೆಯ ಅವಶ್ಯಕತೆ ಇಲ್ಲದೆ, ಬಯಲು ಪ್ರದೇಶದ ಸಿಕ್ಕ ಸಿಕ್ಕಲ್ಲಿ ಬೆಳೆದು ನಿಲ್ಲುವ ಜಾಲಿಗಿಡ, ತನ್ನದೆ ಆದ ವಿಶೇಷತೆಯನ್ನು ಹೊಂದಿ, ಭಾರತೀಯರ ಮನೆ, ಮನದಲ್ಲಿ ಅಚ್ಚಾಗಿ ಉಳಿದುಕೊಂಡಿದೆ.

ವರ್ಷದ ಹನ್ನೆರಡು ತಿಂಗಳು ಬೆಳೆದು ನಿಲ್ಲುವ ಈ ಜಾಲಿ ಗಿಡ, ಜಮ್ಮು- ಕಾಶ್ಮೀರದ ಬಾರಾಮುಲ್ಲಾ, ಅನಂತನಾಗ, ನೇಪಾಳ ಗಡಿಭಾಗದ ಗೋರಕಪುರ, ಗೌರಿಪಾಂಟಾ ಹಾಗೂ ಪಾಕಿಸ್ತಾನ, ಬಾಂಗ್ಲಾ ದೇಶಗಳಲ್ಲೂ ಕಂಡು ಬರುತ್ತದೆ.
ಅಲ್ಲದೆ ಶ್ರೀಲಂಕಾ, ಮಾಲ್‍ಡ್ವೀಸ್ ದ್ವೀಪಗಳು ಸೇರಿದಂತೆ ದಕ್ಷಿಣ ಆಫ್ರಿಕಾದ ಅಮೇಜಾನ್ ತಪ್ಪಲು ಪ್ರದೇಶಗಳಲ್ಲೂ ವ್ಯಾಪಿಸಿಕೊಂಡಿದೆ.

ವಿಷಕಾರಿ ನಂಜು ಮುಳ್ಳು:
ಈ ಜಾಲಿಗಿಡ ತನ್ನ ಮೈತುಂಬಾ ಮುಳ್ಳುಗಳನ್ನು ತುಂಬಿಕೊಂಡರೂ ಎಲೆಗಳು ಮಾತ್ರ ಚಿಕ್ಕದಾಗಿರುತ್ತವೆ. ಕಾಯಿಗಳಂತೂ ಗೇಣುದ್ದ ಸಪೂರವಾಗಿ ಬೆಳೆದಿರುತ್ತವೆ. ಜಾಲಿ ಮುಳ್ಳು ಮನುಷ್ಯನ ಕೈ, ಕಾಲಿಗೆ ಚುಚ್ಚಿದರೆ, ನಂಜಾಗಿ ತೀವ್ರ ನೋವುಂಟು ಮಾಡುತ್ತದೆ.
ಈ ಸಸ್ಯ ಗಿಡವಾಗಿ, ಮರವಾಗಿ ಬೆಳೆದರೂ ಕೂಡ, ತಂಪಾದ ನೆರಳು ನೀಡುವುದಿಲ್ಲ. ಈ ಗಿಡಗಳ ಸುತ್ತಮುತ್ತ ವಾತಾವರಣ ಬಿಸಿಯಾಗಿರುವುದು ಸಾಮಾನ್ಯ. ಆದರೂ ಈ ಜಾಲಿಗಿಡ ದೇಶದ ತುಂಬಾ ಕಂಡು ಬರುವುದು ವಿಶೇಷ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ವಿವರಿಸಲು ಸಮಯಾವಕಾಶ ಕೋರಿ ಪ್ರಧಾನಿಗೆ ಖರ್ಗೆ ಪತ್ರ

0
ಲೋಕಸಭೆ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆ 'ನ್ಯಾಯಪತ್ರ'ದ ಕುರಿತು ಪ್ರಧಾನಿ ಮೋದಿ ಸರಣಿ ಹೇಳಿಕೆಗಳನ್ನು ಕೊಡುತ್ತಿದ್ದು, ಈ ಹಿನ್ನೆಲೆ ಪ್ರಣಾಳಿಕೆಯ ಕುರಿತು ವಿವರಿಸಲು ಸಮಯ ಕೋರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪತ್ರ ಬರೆದಿದ್ದಾರೆ. ಖರ್ಗೆ...