Homeಚಳವಳಿಈ ಧರ್ಮದವರು ನಮಗೆ ಪಾಠ ಬೋಧಿಸುವುದು ಬೇಡ: ಬನಾರಸ್ ವಿ.ವಿ.ಯಲ್ಲಿ ABVPಯ ತಗಾದೆ

ಈ ಧರ್ಮದವರು ನಮಗೆ ಪಾಠ ಬೋಧಿಸುವುದು ಬೇಡ: ಬನಾರಸ್ ವಿ.ವಿ.ಯಲ್ಲಿ ABVPಯ ತಗಾದೆ

ಇನ್ನೂ ಪಾಠ ಆರಂಭಿಸದ ಮುಸ್ಲಿಂ ಸಂಸ್ಕೃತ ಪ್ರೊಫೆಸರ್ ವಿರುದ್ಧ ಬನಾರಸ್ ಹಿಂದೂ ವಿ.ವಿ.ಯಲ್ಲಿ ಪ್ರತಿಭಟನೆ!!!! ಇದು ಎಬಿವಿಪಿ-ಆರೆಸ್ಸೆಸ್‌ನ ಕೋಮುವಾದಿ ಪ್ರಹಸನ!

- Advertisement -
- Advertisement -

ಕೃಪೆ: ದಿ ಕ್ವಿಂಟ್‌

ಐಶ್ವರ್ಯ ಎಸ್. ಅಯ್ಯರ್

ಅನುವಾದ: ನಿಖಿಲ್ ಕೋಲ್ಪೆ

ಇದನ್ನು ಪಕ್ಕಾ ರಾಜಕೀಯ ಪ್ರೇರಿತ ಕೋಮುವಾದ ಎನ್ನದೇ ಬೇರೆ ದಾರಿಯೇ ಇಲ್ಲ. ಇನ್ನೂ ಪಾಠವನ್ನೇ ಮಾಡದ, ಪರಿಚಯವೇ ಆಗದ ಹೊಸ ಸಂಸ್ಕೃತ ಪ್ರಾಧ್ಯಾಪಕರೊಬ್ಬರ ವಿರುದ್ಧ ಬನಾರಸ್ ಹಿಂದೂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಕಾರಣ ಅವರು ಮುಸ್ಲಿಂ ಎಂಬುದು ಮಾತ್ರ!

“ನೀವು ನನಗೊಂದು ಅವಕಾಶ ಕೊಡಿ. ಆಗ ನಿಮ್ಮ ಪ್ರತಿಭಟನೆಗೆ ಅಗತ್ಯವೇ ಇಲ್ಲವೆಂದು ನಿಮಗೆ ತಿಳಿಯಲೂ ಬಹುದು” ಹೀಗೆಂದು ಉತ್ತರ ಪ್ರದೇಶದ ಬನಾರಸ್ ಹಿಂದೂ ವಿಶ್ವವಿದ್ಯಾಲಯ (ಬಿಎಚ್‌ಯು)ದ ವಿದ್ಯಾರ್ಥಿಗಳಿಗೆ ಮನವಿ ಮಾಡಿದವರು ರಾಜಸ್ಥಾನದ ಜೈಪುರ ಜಿಲ್ಲೆಯವರಾದ 28ರ ಹರೆಯದ ಫಿರೋಜ್ ಖಾನ್.

ಅವರು ನವೆಂಬರ್ 7ರಂದು ಇಲ್ಲಿ ಬಂದಿಳಿದಿದ್ದರು. ಆದರೆ, ಹಿಂದಿನ ದಿನವೇ ಅವರ ಇಮೇಲ್ ಬಾಕ್ಸಿಗೆ ಅವರನ್ನು ಬಿಎಚ್‌ಯುವಿನ ಸಹಾಯಕ ಸಂಸ್ಕೃತ ಪ್ರಾಧ್ಯಾಪಕರಾಗಿ ನಿಯುಕ್ತಿಗೊಳಿಸಿದ ಪತ್ರ ತಲಪಿತ್ತು. ಆಗಲೇ ಬಿಜೆಪಿಯ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ (ಎಬಿವಿಪಿ)ನ ವಿದ್ಯಾರ್ಥಿಗಳು ಪ್ರತಿಭಟನೆ ಆರಂಭಿಸಿದ್ದರು. ಆದುದರಿಂದ, ದೇಶದ ಪ್ರತಿಷ್ಟಿತ ಮತ್ತು ಹಳೆಯ ವಿಶ್ವವಿದ್ಯಾಲಯದಲ್ಲಿ ಪಾಠ ಮಾಡುವ ಅವರ ಕಾತರವು ತಕ್ಷಣವೇ ಆತಂಕವಾಗಿ ಬದಲಾಯಿತು.

ಈ ವಿದ್ಯಾರ್ಥಿಗಳ ಪ್ರತಿಭಟನೆಗೆ ಕಾರಣವೇನು ಗೊತ್ತೆ? “ಹಿಂದೂವೊಬ್ಬ ಹೇಗೆ ಮದರಸದಲ್ಲಿ ಪಾಠ ಮಾಡಲು ಸಾಧ್ಯವಿಲ್ಲವೋ, ಹಾಗೆಯೇ ಮುಸ್ಲಿಮನೊಬ್ಬ ‘ಗುರುಕುಲ’ದಲ್ಲಿ ಪಾಠಮಾಡಲು ಸಾಧ್ಯವಿಲ್ಲ ಎಂಬುದು!(ವಿಶ್ವವಿದ್ಯಾಲಯವೊಂದು ‘ಗುರುಕುಲ’ವಾದದ್ದು ಯಾವಾಗ ಎಂದು ಅವರೇ ಬಲ್ಲರು!). ಈಗ, ಸಂಸ್ಕೃತ ವಿಭಾಗಕ್ಕೇ ಬೀಗ ಜಡಿಯಲಾಗಿದ್ದು, ಖಾನ್ ಅವರು ಒಂದೇ ಒಂದು ಪಾಠವನ್ನೂ ಮಾಡಿಲ್ಲ. ಆದರೂ, ಅವರು ಪರಿಸ್ಥಿತಿ ಸುಧಾರಿಸಿ, ತಿಳಿಯಾಗುವ ಬಗ್ಗೆ ವಿಶ್ವಾಸ ಕಳೆದುಕೊಂಡಿಲ್ಲ.

ಅವರು ಬಹಿರಂಗಪಡಿಸಲು ಇಚ್ಚಿಸದ ಸ್ಥಳವೊಂದರಲ್ಲಿ ‘ದಿ ಕ್ವಿಂಟ್’ ಜೊತೆ ಮುಕ್ತವಾಗಿ ಮಾತನಾಡಿ, “ಬಹುಶಃ ನಾನು ಬಿಎಚ್‌ಯು ವಿದ್ಯಾರ್ಥಿಗಳ ಯೋಚನಾ ರೀತಿಯನ್ನು ಬದಲಿಸಲೂ ಸಾಧ್ಯವಾಗಬಹುದು. ಇದನ್ನು ಹೇಗೆ ಮಾಡುವುದು ಎಂದು ನನಗೆ ಗೊತ್ತಿಲ್ಲ. ಅವರು ನನ್ನನ್ನು ಸರಿಯಾಗಿ ತಿಳಿದುಕೊಂಡರೆ, ನನ್ನನ್ನು ಮೆಚ್ಚಿಕೊಳ್ಳಬಹುದು” ಎಂದರು.

ಫಿರೋಜ್ ಜೈಪುರ ಜಿಲ್ಲೆಯ ಬಗ್ರು ಎಂಬ ಪಟ್ಟಣದಲ್ಲಿ ಜನಿಸಿದವರು. ನಾಲ್ವರು ಗಂಡುಮಕ್ಕಳಲ್ಲಿ ಮೂರನೆಯವರು. ಅವರು ರಾಷ್ಟ್ರೀಯ ಸಂಸ್ಕೃತ ಸಂಸ್ಥಾನ್‌ನಿಂಧ ಸಂಸ್ಕೃತ ಸಾಹಿತ್ಯದಲ್ಲಿ ಬಿ.ಎಡ್. ಮತ್ತು ಸ್ನಾತಕೊತ್ತರ ಪದವಿ ಪಡೆದಿದ್ದಾರೆ. ಅಲ್ಲಿ ಅವರು ಅತಿಥಿ ಉಪನ್ಯಾಸಕರಾಗಿಯೂ ಕೆಲಸ ಮಾಡಿದ್ದಾರೆ. ಬಾಲ್ಯದಲ್ಲಿಯೇ ಅವರನ್ನು ಸಂಸ್ಕೃತ ಶಾಲೆಗೆ ಸೇರಿಸಲಾಗಿತ್ತು.

ತನ್ನ ಅಜ್ಜ ಮತ್ತು ತಂದೆಯ ಬಗ್ಗೆ ಮಾತನಾಡುತ್ತಾ, ಪಿರೋಜ್ ಹೇಳುತ್ತಾರೆ: “ನನ್ನ ಅಜ್ಜ ಹಿಂದೂ ಭಕ್ತಿಗೀತೆಗಳನ್ನು ಹಾಡುತ್ತಿದ್ದರು. ಅವರೀಗ ಇಲ್ಲ. ಆದರೆ, ಸುತ್ತಮುತ್ತಲಿನ ಹಳ್ಳಿಗಳಲ್ಲಿ ಯಾವುದೇ ಕಾರ್ಯಕ್ರಮ ಇದ್ದರೂ, ಅಜ್ಜನನ್ನು ಹಾಡಲು ಕರೆಯುತ್ತಿದ್ದರು. ತಂದೆಯವರು ಅವರಿಂದ ಕಲಿತರು. ನಮ್ಮ ಮನೆಯಿಂದ 2-3 ಕಿ.ಮೀ. ದೂದದಲ್ಲಿ ಒಂದು ಹಸುಗಳ ಹಟ್ಟಿಯಿದೆ. ಅದನ್ನು ರಾಮದೇವ್ ಗೋಶಾಲೆ ಎಂದು ಕರೆಯುತ್ತಾರೆ. ನನ್ನ ತಂದೆಯವರು ಪ್ರತೀ ದಿನ ಅಲ್ಲಿಗೆ ಹೋಗಿ ಹಿಂದೂ ಭಕ್ತಿಗೀತೆಗಳನ್ನು ಹಾಡುತ್ತಾರೆ”.

ಫಿರೋಜ್ ಅವರ ತಂದೆ ಸಂಸ್ಕೃತದಲ್ಲಿ ಪರಿಣಿತರಾಗಿದ್ದು, ಶಾಲೆ ಕಲಿಯುವ ಸಮಯದಲ್ಲಿ ಮಗನಿಗೆ ನೆರವಾಗುತ್ತಿದ್ದರಃ. ಫಿರೋಜ್, ಸಂಸ್ಕೃತದಲ್ಲಿ ಪಂಡಿತನಾಗಬೇಕು ಎಂದು ಬಯಸಿದ್ದರು. ಆದರೆ ಈಗ, ತನ್ನ ಮಗ ಒಮ್ಮೆ ಮನೆಗೆ ಹಿಂತಿರುಗಿ ಬರಲಿ ಎಂದು ಕಾತರರಾಗಿದ್ದಾರೆ.

“ನಮ್ಮ ತಂದೆಗೆ ಚಿಂತೆಯಿಂದ ನಿದ್ದೆ ಬರುತ್ತಿಲ್ಲ. ನೀನು ಮರಳಿ ಬಾ. ನಮಗೆ ಇರುವ ಸ್ವಲ್ಪದರಲ್ಲೇ ಬದುಕಬಹುದು. ಮನೆಯಿಂದ ದೂರ ಇರುವ ಅಗತ್ಯ ಇಲ್ಲ ಎಂದು ಅಣ್ಣ ಪಾಪಾಸು ಕರೆಯುತ್ತಾರೆ. ನಾನು ಏನನ್ನೂ ಹೇಳುವುದಿಲ್ಲ. ಆದರೆ, ನಾನಿಲ್ಲಿ ಉಳಿಯಬೇಕೆಂದು ನನ್ನ ನಂಬಿಕೆ” ಎನ್ನುತ್ತಾರೆ ಫಿರೋಜ್.

ಅವರ ನೇಮಕಾತಿ ವಿರುದ್ದ ನೇರವಾಗಿ ಪ್ರತಿಭಟಿಸುತ್ತಿರುವ ವಿದ್ಯಾರ್ಥಿಗಳ ಜೊತೆ ಮಾತುಕತೆ ನಡೆಸುವ ಉದ್ದೇಶ ಇದೆಯೇ ಎಂದು ಕೇಳಿದಾಗ, ತಾನು ಮಾತುಕತೆಗೆ ಮುಕ್ತವಾಗಿದ್ದು, ಆಡಳಿತವು ಬಯಸಿದರೆ ಮಾತುಕತೆಗೆ ಸಿದ್ಧ ಎನ್ನುತ್ತಾರೆ. ಸದ್ಯಕ್ಕೆ ತಾನು ಯಾವಾಗ ಪಾಠ ಮಾಡಲು ಆರಂಭಿಸಬಹುದು ಎಂಬ ಬಗ್ಗೆ ತನಗೇ ಗೊತ್ತಿಲ್ಲ ಎನ್ನುತ್ತಾರೆ.

ಬಿಎಚ್‌ಯುವಿನ ಅವಕಾಶವನ್ನು ಬಿಟ್ಟುಕೊಡಲು ಸಿದ್ಧವಿಲ್ಲದಿರುವುದಕ್ಕೆ ಇನ್ನೊಂದು ಕಾರಣವೂ ಇದೆ. ಅದೆಂದರೆ, ಬಿಎಚ್‌ಯುವಿಗೆ ಅವರು ನೀಡಿದ ಮೊದಲ ಭೇಟಿಯ ನೆನಪುಗಳು. ಹಿಂದಕ್ಕೆ ಹೋಗುತ್ತಾ ಅವರು ಹೇಳುತ್ತಾರೆ: “2017ರಲ್ಲಿ ಬಿಎಚ್‌ಯು ತನ್ನ ಸಂಸ್ಕೃತ ಉತ್ಸವಕ್ಕೆ ನನ್ನನ್ನು ಆಹ್ವಾನಿಸಿತ್ತು. ನಾನು ಓಂಕಾರನಾಥ ಠಾಕೂರ್ ಅಪೇಕ್ಷಾ ಸದನದಲ್ಲಿ ಹಾಡಿದ್ದೆ. ಪ್ರತಿಯೊಂದೂ ಸ್ಮರಣೀಯವಾಗಿತ್ತು. ಅವರು ನನ್ನನ್ನು ತಮ್ಮ ಅತಿಥಿಗೃಹದಲ್ಲಿ ಇರಿಸಿಕೊಂಡು ನನ್ನ ಬೇಕು ಬೇಡಗಳನ್ನೆಲ್ಲಾ ಪೂರೈಸಿ ಸತ್ಕರಿಸಿದ್ದರು. ನನಗೆ ಬಹಳ ಗೌರವ ಕೊಟ್ಟಿದ್ದರು.”

ತಾನು ಸಂಸ್ಕೃತ ಕಲಿಯುವುದಕ್ಕಾಗಿ ವಿನಿಯೋಗಿಸಿದ ಇಷ್ಟು ವರ್ಷಗಳನ್ನು ನೆನಪಿಸಿಕೊಂಡ ಅವರು, ಇವತ್ತಿನ ತನಕ ಯಾರೂ ಸಂಸ್ಕೃತ ತನ್ನ ಸ್ವಂತ ಭಾಷೆಯಲ್ಲ ಎಂಬ ಭಾವನೆ ಬರುವಂತೆ ಮಾಡಿರಲಿಲ್ಲ ಎನ್ನುತ್ತಾರೆ. “ನನಗೆ ಯಾವುದೇ ತೊಂದರೆ ಉಂಟಾದಾಗ ಹಿಂದೂಗಳಾಗಿದ್ದ ಗುರುಗಳ ಬಳಿಗೆ ಹೋಗುತ್ತಿದ್ದೆ. ಅವರು ನನಗೆ ತಮ್ಮ ಶಕ್ತಿ ಮೀರಿ ನೆರವಾಗುತ್ತಿದ್ದರು. ನಾನು ಬೇರೆಯವನು ಎಂಬ ಭಾವನೆ ಬರುವಂತೆ ನನ್ನ ಗುರುಗಳು, ನನ್ನ ಮಿತ್ರರು, ನನ್ನ ಶಿಷ್ಯರಾದಿಯಾಗಿ ಯಾರೂ, ಎಂದೂ ಮಾಡಲಿಲ್ಲ. ಆದರೆ, ಈಗೇಕೆ ಹಾಗಾಗುತ್ತಿದೆ?” ಎಂದು ಅವರು ಕೇಳುತ್ತಾರೆ.

ಅವರ ಸಂಸ್ಕೃತ ಎಷ್ಟು ನಿರರ್ಗಳವಾಗಿದೆ ಎಂದು ಕೇಳಿದಾಗ, ತಾನು ನಿಯಮಿತವಾಗಿ ದೂರದರ್ಶನದಲ್ಲಿ ಸುದ್ದಿ ಓದುತ್ತಿದ್ದೆ ಎನ್ನುತ್ತಾರವರು. “ದೂರದರ್ಶನಲ್ಲಿ ಸಂಸ್ಕೃತ ವಾರ್ತಾವಳಿ ಎಂಬ ಕಾರ್ಯಕ್ರಮವಿದೆ. ಅದರಲ್ಲಿ ಬಾಲಿವುಡ್ ಹಾಡುಗಳನ್ನು ಸಂಸ್ಕೃತಕ್ಕೆ ಅನುವಾದಿಸಬೇಕಾಗುತ್ತದೆ. ಅವರು ಹಾಡುಗಳನ್ನು ಅನುವಾದಕ್ಕಾಗಿ ನನಗೆ ಕಳುಹಿಸುತ್ತಿದ್ದರು. ನಾನು ಹಾಡಿದ ಹಾಡುಗಳನ್ನು ಅವರು ಪ್ರಸಾರ ಮಾಡುತ್ತಿದ್ದರು” ಎಂದು ಹೇಳುತ್ತಾರೆ. ಅದಲ್ಲದೇ, 2019ರ ಆಗಸ್ಟ್‌ನಲ್ಲಿ ಅವರು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರಿಂದ ಸಂಸ್ಕೃತ ಯುವ ಪ್ರತಿಭಾ ಪುರಸ್ಕಾರ್ ಎಂಬ ಪ್ರಶಸ್ತಿಯನ್ನೂ ಸ್ವೀಕರಿಸಿದ್ದರು.

ಬಿಎಚ್‌ಯು ಆಡಳಿತವು ಮತ್ತೆ ಮತ್ತೆ ಸ್ಪಷ್ಟನೆ ನೀಡಿದ್ದು, ತಾನು ಧರ್ಮದ ಆಧಾರದಲ್ಲಿ ತಾರತಮ್ಯ ಮಾಡುವುದಿಲ್ಲ ಎಂದಿದೆಯಲ್ಲದೆ, ಈ ತನಕ ಫಿರೋಜ್ ಅವರ ಬೆಂಬಲಕ್ಕೆ ನಿಂತಿದೆ. ಅದಲ್ಲದೇ ಹಿಂದೂ, ಮುಸ್ಲಿಮರೆನ್ನದೇ ಬಹುತೇಕ ವಿದ್ಯಾರ್ಥಿಗಳೂ ಅವರ ಬೆಂಬಲಕ್ಕೆ ನಿಂತಿದ್ದಾರೆ. ಬೇರೆ ಧರ್ಮದವರಿಂದ ಪಾಠ ಕಲಿಯುವುದಿಲ್ಲ ಎಂಬ ಸಂಕುಚಿತ ನಿಲುವಿಗೆ ದಿಗ್ಭ್ರಮೆ ವ್ಯಕ್ತಪಡಿಸಿರುವ ಅವರು, ಪ್ರತಿಭಟನೆ ನಡೆಸುತ್ತಿರುವವರು ಕೇವಲ ಎಬಿವಿಪಿ ಮತ್ತು ಆರೆಸ್ಸೆಸ್‌ಗೆ ಸೇರಿದವರು ಎನ್ನುತ್ತಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಿಜೆಪಿ ತೊರೆದು ಪ್ರಾದೇಶಿಕ ಪಕ್ಷದತ್ತ ಅಣ್ಣಾಮಲೈ : ದ್ರಾವಿಡ ಮಣ್ಣಿನಲ್ಲಿ ವಿಫಲವಾದ ಹಿಂದುತ್ವ ರಾಜಕೀಯ

ಮಾಜಿ ಐಪಿಎಸ್‌ ಅಧಿಕಾರಿ ಹಾಗೂ ಬಿಜೆಪಿ ತಮಿಳುನಾಡು ರಾಜ್ಯ ಘಟಕದ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ ಬಿಜೆಪಿ ತೊರೆದಿದ್ದು, ಹೊಸ ಪ್ರಾದೇಶಿಕ ಪಕ್ಷ ಕಟ್ಟಲು ಮುಂದಾಗಿದ್ದಾರೆ ಎಂದು ವರದಿಯಾಗಿದೆ. ಮಂಗಳವಾರ...

45 ಲೀಟರ್ ಟ್ಯಾಂಕಿಗೆ 52 ಲೀಟರ್ ಬಿಲ್ ಕೊಟ್ಟ ಚತುರ ಕಳ್ಳರು: ಕಾನ್ಪುರದಲ್ಲಿ ಪೆಟ್ರೋಲ್ ಬಂಕ್ ವಂಚನೆ ಪತ್ತೆ

ಉತ್ತರ ಪ್ರದೇಶದ ಕಾನ್ಪುರದಲ್ಲಿ ಹೊಸ ಕಾರು ಖರೀದಿಸಿದ ಮಾಲೀಕರೊಬ್ಬರು ಸ್ಥಳೀಯ ಪೆಟ್ರೋಲ್ ಬಂಕ್‌ಗೆ ಹೋದಾಗ ಅವರಿಗೆ ಒಂದು ಶಾಕಿಂಗ್ ಅನುಭವವಾಗಿದೆ. ಅವರ ಕಾರಿನ ಗರಿಷ್ಠ ಇಂಧನ ಟ್ಯಾಂಕ್ ಸಾಮರ್ಥ್ಯ ಕೇವಲ 45 ಲೀಟರ್...

ಆರು ಮಕ್ಕಳಿದ್ದರೆ ನೀವು ಮತದಾನದ ಹಕ್ಕನ್ನು ಕಳೆದುಕೊಳ್ಳಬಹುದು: ಮತದಾರರ ಪಟ್ಟಿ ‘ಕ್ಲೀನ್’ ಮಾಡಲು ECI ಹೊಸ ಪ್ಲಾನ್!

ಭಾರತದಲ್ಲಿ 'ಆರು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದಾರೆ' ಎಂಬ ಕಾರಣಕ್ಕೆ ಯಾರಾದರೂ ಮತದಾನದ ಹಕ್ಕನ್ನು ಕಳೆದುಕೊಳ್ಳಲು ಸಾಧ್ಯವೇ? ಮೇಲ್ನೋಟಕ್ಕೆ ಹೌದು ಎನ್ನುವಂತಿದೆ ಉತ್ತರ ಪ್ರದೇಶದ ವಾರಾಣಸಿಯ ಕ್ಯಾಂಟೋನ್ಮೆಂಟ್ ಕ್ಷೇತ್ರದ ಮತದಾರ ಸೋನು...

ಕದನ ವಿರಾಮವೆಂಬ ಕಳ್ಳಾಟ : ಗಾಝಾದಿಂದ ಸಿರಿಯಾವರೆಗೆ ಮುಂದುವರಿದ ಇಸ್ರೇಲ್ ನರಮೇಧ

ಬರೋಬ್ಬರಿ ಎಪ್ಪತ್ತು ಸಾವಿರದಷ್ಟು (ವರದಿಗಳ ಪ್ರಕಾರ 67, 900) ಜನರನ್ನು ಹತ್ಯೆಗೈದು, ಶೇಕಡ 90ರಷ್ಟು ಜನರನ್ನು ನಿರಾಶ್ರಿತರನ್ನಾಗಿ ಮಾಡಿದ ಬಳಿಕ, ಅಕ್ಟೋಬರ್ 10, 2025ರಂದು ಗಾಝಾ ಮೇಲಿನ ಆಕ್ರಮಣಕ್ಕೆ ಸಂಬಂಧಿಸಿದಂತೆ ಇಸ್ರೇಲ್ ಕದನ...

ಚುನಾವಣಾ ಆಯೋಗಕ್ಕೆ ಪೌರತ್ವ ನಿರ್ಧಾರ ಮಾಡುವ ಹಕ್ಕಿದೆಯೇ? SIR ತೀರ್ಪಿನ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿದ್ದೇನು?

ಮೇ 27 ರಂದು 'ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಮತ್ತು ಭಾರತೀಯ ಚುನಾವಣಾ ಆಯೋಗ (ECI)' ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಚುನಾವಣಾ ಪಟ್ಟಿಗಳ 'ವಿಶೇಷ ತೀವ್ರ ಪರಿಷ್ಕರಣೆ'...

ಮಹಾರಾಷ್ಟ್ರ: 80 ಲಕ್ಷ ಮಹಿಳೆಯರು ‘ಲಡ್ಕಿ ಬಹಿನ್’ ಯೋಜನೆಗೆ ಅನರ್ಹ: ಆರ್ಥಿಕ ಬಿಕ್ಕಟ್ಟಿಗೆ ಸಾಕ್ಷಿ ಎಂದು ವಿಪಕ್ಷಗಳ ಆರೋಪ

ಮುಂಬೈ: ಮಹಾರಾಷ್ಟ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದ 'ಮುಖ್ಯಮಂತ್ರಿ ಮಾಝಿ ಲಡ್ಕಿ ಬಹಿನ್' ಇ-ಕೆವೈಸಿ (e-KYC) ಪ್ರಕ್ರಿಯೆ ಪೂರ್ಣಗೊಳಿಸಲು ನೀಡಿದ್ದ ಗಡುವು ಮುಗಿದಿದ್ದು, ಸುಮಾರು 80 ಲಕ್ಷ ಮಹಿಳೆಯರು ಯೋಜನೆಯಿಂದ ಅನರ್ಹರಾಗಿದ್ದಾರೆ. ರಾಜ್ಯ ಸರ್ಕಾರವು...

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...