Homeಕರ್ನಾಟಕಗುರುತಿನ ಚೀಟಿ ನವೀಕರಣಕ್ಕೆ ಆಗ್ರಹಿಸಿ ಬೀದಿ ವ್ಯಾಪಾರಿಗಳಿಂದ ‘ಬಿಬಿಎಂಪಿ ಚಲೋ’

ಗುರುತಿನ ಚೀಟಿ ನವೀಕರಣಕ್ಕೆ ಆಗ್ರಹಿಸಿ ಬೀದಿ ವ್ಯಾಪಾರಿಗಳಿಂದ ‘ಬಿಬಿಎಂಪಿ ಚಲೋ’

- Advertisement -
- Advertisement -

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯ ಬೀದಿ ವ್ಯಾಪಾರಿಗಳಿಗೆ ವಿತರಿಸುವ ಗುರುತಿನ ಚೀಟಿ ಹಾಗೂ ವ್ಯಾಪಾರ ಪ್ರಮಾಣ ಪತ್ರ ನವೀಕರಣ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಬೆಂಗಳೂರು ಜಿಲ್ಲಾ ಬೀದಿ ವ್ಯಾಪಾರಿಗಳ ಸಂಘಟನೆಗಳ ಒಕ್ಕೂಟದಿಂದ ಮಂಗಳವಾರ ‘ಬಿಬಿಎಂಪಿ ಚಲೋ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಜಯನಗರ ಬಿಡಿಎ ಕಾಂಪ್ಲೆಕ್ಸ್, ಕೆಆರ್ ಮಾರ್ಕೆಟ್, ಬನಶಂಕರಿ ಸೇರಿದಂತೆ ನಗರದ ವಿವಿಧ ಪ್ರದೇಶಗಳಲ್ಲಿ ಬೀದಿ ಬದಿ ವ್ಯಾಪಾರ ಮಾಡುತ್ತಿರುವರಿಗೆ ಬಿಬಿಎಂಪಿ ನೀಡಿರುವ ಗುರುತಿನ ಚೀಟಿ ಕಾಲಾವಧಿ (ಐದು ವರ್ಷ) ಮುಗಿದಿದ್ದು, ಇದೀಗ ವ್ಯಾಪಾರ ಮಾಡದಂತೆ ಅಧಿಕಾರಿಗಳು ಹಾಗೂ ಮಾರ್ಷಲ್‌ಗಳು ವ್ಯಾಪಾರಿಗಳಿಗೆ ತೊಂದರೆ ಕೊಡುತ್ತಿದ್ದಾರೆ. ಆದ್ದರಿಂದ, ಕೂಡಲೇ ಬೀದಿ ವ್ಯಪಾರಿಗಳ ಸರ್ವೆ ನಡೆಸಿ ಗುರುತಿನ ಚೀಟಿ ನೀಡಬೇಕು ಎಂದು ಆಗ್ರಹಿಸಿ ಪ್ರತಿಭಟಿಸಲು ಮುಂದಾಗಿದ್ದಾರೆ.

ಈ ಕುರಿತು ‘ನಾನು ಗೌರಿ’ ಪ್ರತಿನಿಧಿ ಜತೆಗೆ ಮಾತನಾಡಿದ ‘ಜಿಲ್ಲಾ ಬೀದಿ ವ್ಯಾಪಾರಿಗಳ ಸಂಘ’ದ ಅಧ್ಯಕ್ಷ ಬಾಬು. ‘ಜಯನಗರ ಬಿಬಿಎಂಪಿ ಕಾಂಪ್ಲೆಕ್ಸ್ ಸೇರಿದಂತೆ ಕೂಡಲೇ ವಿವಿಧ ಪ್ರದೇಶಗಳಲ್ಲಿ ವ್ಯಾಪಾರಿಗಳ ಎತ್ತಂಗಡಿ ಮಾಡುತ್ತಿರುವುದನ್ನು ನಿಲ್ಲಿಸಬೇಕು. ಐದು ವರ್ಷಗಳ ಹಿಂದೆ ನೀಡಿದ್ದ ಗುರುತಿನ ಚೀಟಿ ಅವಧಿ ಕಳೆದ ಫೆಬ್ರವರಿಯಲ್ಲೇ ಮುಗಿದಿದ್ದು, 2022ರ ಡಿಸೆಂಬರ್‌ನಲ್ಲಿ ನವೀಕರಣಕ್ಕೆ ಮನವಿ ಪತ್ರ ಕೊಟ್ಟಿದ್ದರೂ ಅಧಿಕಾರಿಗಳು ಗಮನ ಹರಿಸಿಲ್ಲ’ ಎಂದರು.

ಜನಯನಗರ ಕಾಂಪ್ಲೆಕ್ಸ್‌ ಬಳಿಯಲ್ಲಿ ಬಿಬಿಎಂಪಿ ನಿಯೋಜಿಸಿರುವ ಮಾರ್ಷಲ್‌ಗಳು

‘ಜಯನಗರ 4ನೇ ಬ್ಲಾಕ್‌ನಲ್ಲಿರುವ ಕಾಂಪ್ಲೆಕ್ಸ್ ಸುತ್ತಮುತ್ತ ಇದ್ದ ಬೀದಿ ವ್ಯಾಪಾರಿಗಳನ್ನು ಒಂದು ವರ್ಷದ ಮುಂಚೆಯೇ ಅಲ್ಲಿಂದ ಎತ್ತಂಗಡಿ ಮಾಡಿಸಿದ್ದಾರೆ. ಅಂಗಡಿ ತೆರವುಗೊಳಿಸಿದ ನಂತರ ಕೈನಲ್ಲಿ ವಸ್ತುಗಳನ್ನು ಹಿಡಿದು ಮಾರಾಟ ಮಾಡಲು ಸಹ ಅಧಿಕಾರಿಗಳು ಹಾಗೂ ಮಾರ್ಷಲ್‌ಗಳು ಅಡ್ಡಿಪಡಿಸುತ್ತಿದ್ದಾರೆ. ಅವರನ್ನು ಮುಂದೆ ಬಿಟ್ಟು ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ. ಕೈನಲ್ಲಿ ವಸ್ತು ಹಿಡಿದು ವ್ಯಾಪಾರ ಮಾಡುವವರನ್ನು ಓಡಿಸುತ್ತಾರೆ. ಪ್ರತಿದಿನ ಮಾರ್ಷಲ್‌ಗಳ ಜತೆಗೆ ಘರ್ಷಣೆ ನಡೆಯುತ್ತಲೇ ಇರುತ್ತದೆ’ ಎಂದರು.

‘ಬಿಬಿಎಂಪಿ ಕೂಡಲೇ ಹೊಸದಾಗಿ ಬೀದಿ ವ್ಯಾಪಾರಿಗಳ ಸಮೀಕ್ಷೆ ಮಾಡಬೇಕು; ಅದನ್ನು ಯಾವುದೇ ಮೂರನೇ ವ್ಯಕ್ತಿ ಸಂಸ್ಥೆಗಳಿಗೆ ವಹಿಸಬಾರದು. ಐದು ವರ್ಷಗಳ ಹಿಂದೆ ಸಮೀಕ್ಷೆ ಮಾಡಿ ಗುರುತಿನ ಚೀಟಿ ನೀಡಲಾಗಿದ್ದು, ಫೆಬ್ರವರಿಯಲ್ಲೇ ಅದರ ಅವಧಿ ಮುಗಿದಿದೆ. ಸರ್ಕಾರದ ಸೌಲಭ್ಯಗಳಿಗಿಂತ ನಮಗೆ ಭದ್ರತೆ ಮುಖ್ಯವಾಗಿದ್ದು, ನಮಗೆ ಆದಷ್ಟು ಬೇಗ ಗುರುತಿನ ಚೀಟಿ ಕೊಡಬೇಕು. ಅದಕ್ಕಾಗಿ ಬಿಬಿಎಂಪಿ ಚಲೋ ಹಮ್ಮಿಕೊಂಡಿದ್ದೇವೆ. ಬೀದಿ ವ್ಯಾಪಾರಿಗಳನ್ನು ಸಂಘಟಿಸುತ್ತಿದ್ದೇವೆ’ ಎಂದು ಮಾಹಿತಿ ನೀಡಿದರು.

ಬೀದಿ ವ್ಯಾಪಾರಿಗಳ ಸಂಘ ಕೊಟ್ಟಿರುವ ಮನವಿ ಪತ್ರ

ಬೀದಿ ವ್ಯಾಪಾರ ಸಂವಿಧಾನ ಕೊಟ್ಟಿರುವ ಹಕ್ಕು:

‘ಬೆಂಗಳೂರಿನಲ್ಲಿ ಎಲ್ಲರಿಗೂ ಬದುಕುವ ಹಕ್ಕಿದ್ದು, ನಗರವನ್ನು ನಿರ್ಮಾಣ ಮಾಡಿರುವುದೆ ಶ್ರಮಿಕ ವರ್ಗ. ಬೀದಿಗಳಲ್ಲಿ ವ್ಯಾಪಾರ ಮಾಡುತ್ತಾ ನಮ್ಮ ಕುಟುಂಬಗಳನ್ನು ಸಾಕುವ ನಾವು, ಬೀದಿ-ರಸ್ತೆಗಳಲ್ಲಿ ಮಾರಾಟ ಮಾಡದಿದ್ದರೆ, ನಗರದ ಮಧ್ಯಮ ವರ್ಗದವರು ಮತ್ತು ಬಡವರು ಎಲ್ಲಿ ಹೋಗುತ್ತಾರೆ? ಎಲ್ಲರಿಗೂ ಆನ್‌ಲೈನ್, ಮಾಲ್‌ಗಳಲ್ಲಿ ಮತ್ತು ಮಾರ್ಟ್‌ಗಳಲ್ಲಿ ಕೊಳ್ಳಲು ಸಾಧ್ಯವೇ? ಇದನ್ನು ಸರ್ಕಾರಗಳು ಹಾಗೂ ಶ್ರೀಮಂತರು ಅರ್ಥ ಮಾಡಿಕೊಳ್ಳಲು ಏಕೆ ಕಷ್ಟ ಪಡುತ್ತಿದ್ದಾರೆ’ ಎಂದು ಬೀದಿ ವ್ಯಾಪಾರಿಗಳ ಸಂಘಟನೆ ಪ್ರಶ್ನಿಸಿದೆ.

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಸಂಘಟನೆ, ‘ಸಂವಿಧಾನವೆ ನಮಗೆ ಬೀದಿ ವ್ಯಾಪಾರ ಮಾಡುವ ಹಕ್ಕು ಕೊಟ್ಟಿದೆ. ಬೀದಿ ವ್ಯಾಪಾರಿಗಳ ಜೀವನೋಪಾಯದ ರಕ್ಷಣೆ ಮತ್ತು ನಿಯಂತ್ರಣ ಕಾಯ್ದೆ-2014 ಜಾರಿಗೊಳಿಸಲಾಗಿದೆ. ಬೀದಿಯಲ್ಲಿ ವ್ಯಾಪಾರ ಮಾಡುವುದು ನಮ್ಮ ಹಕ್ಕು, ಬೀದಿಬದಿ ವ್ಯಾಪಾರಸ್ಥರ ಹಕ್ಕುಗಳನ್ನು ರಕ್ಷಿಸಬೇಕೆಂದು ಹಲವಾರು ನ್ಯಾಯಾಲಯದ ತೀರ್ಪುಗಳು ಸಹ ಹೇಳಿರುತ್ತದೆ’ ಎಂದು ಹೇಳಿದೆ.

‘ಆದರೆ, ಬಿಬಿಎಂಪಿ ಕಾನೂನನ್ನು ಬಹಿರಂಗವಾಗಿ ಉಲ್ಲಂಘಿಸಿ ನಮ್ಮನ್ನು ಎತ್ತಂಗಡಿ ಮಾಡುತ್ತಿದೆ. ಸೆಪ್ಟೆಂಬರ್ 2017 ರಲ್ಲಿ ಬಿಬಿಎಂಪಿ ವತಿಯಿಂದ 20 ಸಾವಿರ ಬೀದಿ ವ್ಯಾಪಾರಿಗಳನ್ನು ಗುರುತಿಸಿ, ಅವರಿಗೆ ಗುರುತಿನ ಚೀಟಿ ಮತ್ತು ವ್ಯಾಪಾರದ ಪ್ರಮಾಣ ಪತ್ರವನ್ನು ವಿತರಿಸಲಾಯಿತು. ಬೆಂಗಳೂರಿನಲ್ಲಿ 1.5 ಲಕ್ಷಕ್ಕೂ ಹೆಚ್ಚು ಜನರು ಬೀದಿ ವ್ಯಾಪಾರದ ಮೇಲೆ ಅವಲಂಬಿತರಾಗಿದ್ದಾರೆ. ಆದರೆ, ಉಳಿದ ವ್ಯಾಪಾರಿಗಳನ್ನು ಬಿಬಿಎಂಪಿ ಸಮೀಕ್ಷೆ ಒಳಗೊಳ್ಳಲಿಲ್ಲ. ಕಾನೂನಿನ ಪ್ರಕಾರ ಪ್ರತಿ 5 ವರ್ಷಕ್ಕೆ ಬೀದಿ ವ್ಯಾಪಾರಿಗಳ ಸಮೀಕ್ಷೆ ನಡೆಸಬೇಕು. ಈಗ 5 ವರ್ಷಗಳು ಕಳೆದಿದ್ದು, ಬಿಬಿಎಂಪಿಯು ಸಮೀಕ್ಷೆ ಶುರು ಮಾಡಲು ಮುಂದಾಗುತ್ತಿಲ್ಲ. ಮುಂಚೆ ನೀಡಿದ ಗುರುತಿನ ಚೀಟಿ ಹಾಗೂ ವ್ಯಾಪಾರದ ಪ್ರಮಾಣ ಪತ್ರದ ಸಿಂಧುತ್ವ ಮುಗಿದಿರುತ್ತದೆ. ಅದರ ನವೀಕರಣದ ಕುರಿತು ಬಿಬಿಎಂಪಿಯು ಯಾವುದೇ ರೀತಿಯ ಕ್ರಮ ವಹಿಸುತ್ತಿಲ್ಲ’ ಎಂದು ಅಳಲು ತೋಡಿಕೊಂಡಿದ್ದಾರೆ.

‘ಬೆಂಗಳೂರು ನಗರ ಅತಿವೇಗದಲ್ಲಿ ಬೆಳೆಯುತ್ತಿದೆ. ಮೆಟ್ರೋ, ಮಾಲುಗಳು, ಸ್ಮಾರ್ಟ್ ಫುಟ್ಪಾತ್ ಗಳು, ಕ್ಲೀನ್ ಸಿಟಿಯಾಗಿ ಹೆಸರುಗಳಿಸುತ್ತಿದೆ. ಈ ‘ಬ್ರಾಂಡ್ ಬೆಂಗಳೂರು’ನಲ್ಲಿ ಬೀದಿ ವ್ಯಾಪಾರಿಗಳಿಗೆ ಜಾಗವಿಲ್ಲವೇ? ಕಡಲೇಕಾಯಿ ಪರಿಷೆ, ಚಿತ್ರಸಂತೆ ಸೇರಿದಂತೆ ಬೆಂಗಳೂರಿನಲ್ಲಿ ಹೆಸರಾಂತ ಮೇಳಗಳು ನಡೆಯುತ್ತವೆ. ಇಲ್ಲಿ ಮಾಧ್ಯಮ ವರ್ಗದವರು ಮತ್ತು ಶ್ರೀಮಂತರು ಹೋಗುತ್ತಾರೆ. ಆದರೆ, ದಿನನಿತ್ಯ ತಮ್ಮ ಹೊಟ್ಟೆಪಾಡಿಗಾಗಿ ಬೀದಿ ವ್ಯಾಪಾರ ಮಾಡುವವರನ್ನು ಏಕೆ ಭಿನ್ನವಾಗಿ ಪರಿಗಣಿಸಲಾಗುತ್ತದೆ? ಬೀದಿ ವ್ಯಾಪಾರಿಗಳನ್ನು ಒಳಗೊಳ್ಳದಿದ್ದರೆ, ಇದು ಎಂಥಹ ನಗರವಾಗಿ ಬೆಳೆಯಬೇಕು ಎಂದು ನಾವೆಲ್ಲರೂ ಉತ್ತರಿಸಬೇಕಾಗಿದೆ’ ಎಂದು ಹೇಳಿದೆ.

ಜಯನಗರದಲ್ಲಿ ಬೀದಿ ವ್ಯಾಪಾರಿಗಳ ಅಂಗಡಿಗಳನ್ನು ತೆರವುಗೊಳಿಸುತ್ತಿರುವ ಬಿಬಿಎಂಪಿ ನೌಕರರು.

ಬೀದಿ ವ್ಯಾಪಾರಿಗಳ ಬೇಡಿಕೆಗಳೇನು?

1. ಜಯನಗರ, ಮಹದೇವಪುರ, ಮಲ್ಲೇಶ್ವರ, ಬನಶಂಕರಿ, ಮೂಡಲಪಾಳ್ಯ ಹಾಗು ಇತರೆ ಪ್ರದೇಶಗಳಲ್ಲಿ ಎತ್ತಂಗಡಿ ಮಾಡಿದ ವ್ಯಾಪಾರಿಗಳಿಗೆ ಅದೇ ಸ್ಥಳದಲ್ಲಿ ವ್ಯಾಪಾರ ಮಾಡುವಂತೆ ಕೂಡಲೇ ಕ್ರಮ ತೆಗೆದುಕೊಳ್ಳಬೇಕು. ಇಷ್ಟು ದಿವಸ ಅವರಿಗೆ ಆದ ನಷ್ಟಕ್ಕೆ ಪಾಲಿಕೆ ಪರಿಹಾರ ಕೊಡಬೇಕು.

2. ಪಟ್ಟಣ ವ್ಯಾಪಾರ ಸಮಿತಿ ಅಡಿಯಲ್ಲಿ ಪ್ರತಿ ಬೀದಿ ವ್ಯಾಪಾರಿಗಳ ಸಮೀಕ್ಷೆ ನಡೆಯಬೇಕು.

3. ಸಮೀಕ್ಷೆಯು ಬಿಬಿಎಂಪಿಯ ನೇತೃತ್ವದಲ್ಲಿ ನಡೆಯಬೇಕು; ಯಾವುದೇ ಕಾರಣಕ್ಕೂ ಹೊರಗುತ್ತಿಗೆಗೆ ನೀಡಬಾರದು.

4. ಸಮೀಕ್ಷೆ ನಡೆಯುವ ತನಕ ಯಾವುದೇ ಬೀದಿ ವ್ಯಾಪಾರಿಗಳನ್ನು ಒಕ್ಕಲೆಬ್ಬಿಸಬಾರದು.

5. ಈಗಾಗಲೇ ನೀಡಿರುವ ಗುರುತಿನ ಚೀಟಿ/ವ್ಯಾಪಾರದ ಪ್ರಮಾಣ ಪತ್ರಗಳನ್ನು ಶೀಘ್ರದಲ್ಲೇ ನವೀಕರಿಸಬೇಕು.

6. ಸಮೀಕ್ಷೆ ಕುರಿತು ಬೀದಿ ವ್ಯಾಪಾರಿಗಳ ಸಂಘಟನೆಗಳೊಂದಿಗೆ ಸಭೆ ನಡೆಸಿ, ಸಲಹೆ-ಸೂಚನೆ ಪಡೆಯಬೇಕು.

ಇದನ್ನೂ ಓದಿ; ‘ಕೋವಿಡ್ ರೂಪಾಂತರಿ ಉಲ್ಬಣಕ್ಕೆ ಡಬ್ಲ್ಯೂಎಚ್ಒ ಆತಂಕ; 60 ವರ್ಷ ಮೇಲ್ಪಟ್ಟವರಿಗೆ ರಾಜ್ಯದಲ್ಲಿ ಮಾಸ್ಕ್ ಕಡ್ಡಾಯ’

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೋಕಸಭೆ ಚುನಾವಣೆ 2024: ಚುನಾವಣಾ ಪ್ರಚಾರಕ್ಕಾಗಿ ಕ್ರೌಡ್‌ಫಂಡಿಂಗ್ ಪ್ರಾರಂಭಿಸಿದ ಕನ್ಹಯ್ಯಾ ಕುಮಾರ್

0
ಈಶಾನ್ಯ ದೆಹಲಿಯ 'ಇಂಡಿಯಾ ಬ್ಲಾಕ್' ಕಾಂಗ್ರೆಸ್ ಅಭ್ಯರ್ಥಿ ಕನ್ಹಯ್ಯಾ ಕುಮಾರ್ ಬುಧವಾರ ತಮ್ಮ ಪ್ರಚಾರಕ್ಕಾಗಿ ಕ್ರೌಡ್‌ಫಂಡಿಂಗ್ ಉಪಕ್ರಮವನ್ನು ಪ್ರಾರಂಭಿಸಿದ್ದಾರೆ. 'ಇದು ಪ್ರಜಾಪ್ರಭುತ್ವವನ್ನು ಉಳಿಸಲು ಜನರ ಹೋರಾಟವಾಗಿದ್ದು, ಅವರ ಬೆಂಬಲ ಅಗತ್ಯವಿದೆ' ಎಂದು ಹೇಳಿದ್ದಾರೆ. ಈ...