Homeಮುಖಪುಟಜ್ಞಾನವಾಪಿ ಮಸೀದಿ ವಿವಾದ: ವೈಜ್ಞಾನಿಕ ಸಮೀಕ್ಷೆ ವರದಿ ಕೋರ್ಟ್‌ಗೆ ಸಲ್ಲಿಕೆ

ಜ್ಞಾನವಾಪಿ ಮಸೀದಿ ವಿವಾದ: ವೈಜ್ಞಾನಿಕ ಸಮೀಕ್ಷೆ ವರದಿ ಕೋರ್ಟ್‌ಗೆ ಸಲ್ಲಿಕೆ

- Advertisement -
- Advertisement -

ಜ್ಞಾನವಾಪಿ ಮಸೀದಿ ವಿವಾದಕ್ಕೆ ಸಂಬಂಧಿಸಿ ಮಹತ್ವದ ಬೆಳವಣಿಗೆ ನಡೆದಿದ್ದು, ಭಾರತೀಯ ಪುರಾತತ್ವ ಇಲಾಖೆಯು ಉತ್ತರಪ್ರದೇಶದ ವಾರಣಾಸಿಯ ಜಿಲ್ಲಾ ನ್ಯಾಯಾಲಯಕ್ಕೆ ಜ್ಞಾನವಾಪಿ ಮಸೀದಿ ಕುರಿತ ವೈಜ್ಞಾನಿಕ ಸಮೀಕ್ಷೆಯ ವರದಿಯನ್ನು ಸಲ್ಲಿಸಿದೆ.

ಇಂದು ಮಧ್ಯಾಹ್ನ ವೈಜ್ಞಾನಿಕ ಸಮೀಕ್ಷೆ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ  ಸಲ್ಲಿಸಲಾಗಿದೆ. ವರದಿಯನ್ನು ಬಹಿರಂಗಗೊಳಿಸಲಾಗುತ್ತದೆಯೇ? ಸರ್ವೆ ಮಾಹಿತಿಯನ್ನು ಹಿಂದೂ ಪರ  ಮತ್ತು ಮುಸ್ಲಿಂ ಪರ ಅರ್ಜಿದಾರರ ಜೊತೆ ಹಂಚಿಕೊಳ್ಳಲಾಗುತ್ತದೆಯೇ ಎಂಬುದು ಸ್ಪಷ್ಟವಾಗಿಲ್ಲ. ಮುಂದಿನ ವಿಚಾರಣೆಯನ್ನು ಗುರುವಾರಕ್ಕೆ ನಿಗದಿಪಡಿಸಲಾಗಿದೆ.

ಜ್ಞಾನವಾಪಿ ಮಸೀದಿಯ ವೈಜ್ಞಾನಿಕ ಸರ್ವೆ ಕಾರ್ಯ ಪೂರ್ಣಗೊಳಿಸಿರುವ ಭಾರತೀಯ ಪುರಾತತ್ವ ಇಲಾಖೆಯು, ತನ್ನ ವರದಿಯನ್ನು ವಿಚಾರಣೆ ನಡೆಯುತ್ತಿರುವ ಜಿಲ್ಲಾ ನ್ಯಾಯಾಲಯಕ್ಕೆ ಸಲ್ಲಿಸಿದೆ. ಈ ಪ್ರಕರಣ ಮುಂದಿನ ವಿಚಾರಣೆ ಡಿ. 21ರಂದು ನಡೆಯಲಿದೆ.

ಹಿಂದೂ ಅರ್ಜಿದಾರರ ಪರ ವಕೀಲ ಮದನ್ ಮೋಹನ್ ಯಾದವ್ ಅವರು ಈ ಕುರಿತು ಮಾಹಿತಿ ನೀಡಿದ್ದು, ಎಎಸ್‌ಐ ಸ್ಥಾಯಿ ಸಮಿತಿಯ ಅಮಿತ್ ಶ್ರೀವಾಸ್ತವ ಅವರು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ತಮ್ಮ ವರದಿಯನ್ನು ಸಲ್ಲಿಸಿದ್ದಾರೆ. ವರದಿ ಸಲ್ಲಿಸಿದ ಸಂದರ್ಭದಲ್ಲಿ ಎಎಸ್‌ಐನ ನಾಲ್ವರು ಹಿರಿಯ ಅಧಿಕಾರಿಗಳು ಇದ್ದರು. ಡಿ.21ರಂದು ನಡೆಯಲಿರುವ ವಿಚಾರಣೆ ಸಂದರ್ಭದಲ್ಲಿ ಲಕೋಟೆಯನ್ನು ತೆರೆದು ಎರಡೂ ಕಡೆಯವರಿಗೆ ಅದರ ಪ್ರತಿಯನ್ನು ನ್ಯಾಯಾಲಯ ನೀಡಲಿದೆ ಎಂದು ಯಾದವ್ ತಿಳಿಸಿದರು.

ಕಾಶಿ ವಿಶ್ವನಾಥ ದೇವಾಲಯದ ಪಕ್ಕದಲ್ಲಿ ದೇವಾಲಯದ ಮೂಲ ತಳಪಾಯದ ಮೇಲೆ 17ನೇ ಶತಮಾನದಲ್ಲಿ ಜ್ಞಾನವಾಪಿ ಮಸೀದಿಯನ್ನು ನಿರ್ಮಿಸಲಾಗಿದೆ ಎಂದು ಹಿಂದೂ ಪರ ಅರ್ಜಿದಾರರು ವಾದವನ್ನು ಮಂಡಿಸಿದ್ದರು.

ಏನಿದು ವಿವಾದ?

ಜ್ಞಾನವಾಪಿ ಮಸೀದಿಯನ್ನು 1669ರಲ್ಲಿ ಮೊಘಲ್ ದೊರೆ ಔರಂಗಜೇಬನು ಪ್ರಾಚೀನ ವಿಶ್ವೇಶ್ವರ ದೇವಾಲಯವನ್ನು ಕೆಡವಿ ನಿರ್ಮಿಸಿದನು ಎಂಬುವುದು ಹಿಂದೂಪರರ ವಾದ. ಜ್ಞಾನವಾಪಿ ಮಸೀದಿಯ ಪ್ರಕರಣವು 1991ರಿಂದ ನ್ಯಾಯಾಲಯದಲ್ಲಿದೆ. ಕಾಶಿ ವಿಶ್ವನಾಥ ದೇವಾಲಯದ ಅರ್ಚಕರ ವಂಶಸ್ಥರಾದ ಪಂಡಿತ್ ಸೋಮನಾಥ ವ್ಯಾಸ್ ಸೇರಿದಂತೆ ಮೂವರು ವಾರಣಾಸಿಯ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯದಲ್ಲಿ ಔರಂಗಜೇಬನು ದೇವಾಲಯ ಧ್ವಂಸಗೊಳಿಸಿದ್ದಾನೆ ಎಂದು ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಇದಲ್ಲದೆ ವಿಶ್ವನಾಥ ದೇವರ ಜ್ಯೋತಿರ್ಲಿಂಗವು ಜ್ಞಾನವಾಪಿ ಮಸೀದಿಯ ಆವರಣದಲ್ಲಿದೆ ಎಂದು ಹೇಳುವ ಇನ್ನೊಂದು ಅರ್ಜಿಯೂ ನ್ಯಾಯಾಲಯದಲ್ಲಿದೆ.

2021ರ ಆ.18ರಂದು ವಾರಣಾಸಿಯ ಅದೇ ನ್ಯಾಯಾಲಯದಲ್ಲಿ, ಶೃಂಗಾರ ಗೌರಿ, ಹನುಮಾನ್ ಮತ್ತು ಗಣೇಶ ಚಿತ್ರಗಳು ಇವೆಯೆಂದು ಮತ್ತು ಪೂಜೆಗೆ ಅನುಮತಿ ಕೋರಿ ಐವರು ಮಹಿಳೆಯರು ಅರ್ಜಿಯನ್ನು ಸಲ್ಲಿಸಿದ್ದರು, ಇದರ ಬೆನ್ನಲ್ಲಿ ಪ್ರಸ್ತುತ ಸ್ಥಿತಿಯನ್ನು ತಿಳಿಯಲು ಆಯೋಗವನ್ನು ರಚಿಸಲಾಗಿತ್ತು.

ಏ.2021ರಲ್ಲಿ ವಾರಣಾಸಿ ನ್ಯಾಯಾಲಯವು ಸಮೀಕ್ಷೆಯನ್ನು ನಡೆಸಿ ಅದರ ವರದಿಯನ್ನು ಸಲ್ಲಿಸಲು ASIಗೆ ನಿರ್ದೇಶನ ನೀಡಿತ್ತು. ಆದರೆ ಉತ್ತರ ಪ್ರದೇಶ ಸುನ್ನಿ ಸೆಂಟ್ರಲ್ ವಕ್ಫ್ ಬೋರ್ಡ್ ಮತ್ತು ಜ್ಞಾನವಾಪಿ ಮಸೀದಿಯನ್ನು ನಡೆಸುತ್ತಿರುವ ಅಂಜುಮನ್ ಇಂತೇಜಾಮಿಯಾ ಮಸೀದಿ ಸಮಿತಿಯು  ಅರ್ಜಿಯನ್ನು  ವಿರೋಧಿಸಿತು ಮತ್ತು ಮಸೀದಿಯ ಸಮೀಕ್ಷೆಗಾಗಿ ವಾರಣಾಸಿ ನ್ಯಾಯಾಲಯದ ಆದೇಶವನ್ನು ವಿರೋಧಿಸಿತ್ತು.  ಪ್ರಕರಣವು ನಂತರ ಅಲಹಾಬಾದ್ ಹೈಕೋರ್ಟ್‌ಗೆ ತಲುಪಿತ್ತು.

ಇದನ್ನು ಓದಿ: ಶಾಹಿ ಈದ್ಗಾ ಮಸೀದಿ ಸರ್ವೆ: ಹೈಕೋರ್ಟ್‌ ಆದೇಶಕ್ಕೆ ತಡೆ ನೀಡಲು ಸುಪ್ರೀಂ ನಕಾರ

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read