Homeಮುಖಪುಟಭದ್ರತಾ ಲೋಪದ ಬಗ್ಗೆ ಅಮಿತ್ ಶಾ ಪ್ರತಿಕ್ರಿಯೆಗೆ ಪಟ್ಟು; ಪ್ರತಿಪಕ್ಷಗಳ 30 ಸಂಸದರು ಅಮಾನತು

ಭದ್ರತಾ ಲೋಪದ ಬಗ್ಗೆ ಅಮಿತ್ ಶಾ ಪ್ರತಿಕ್ರಿಯೆಗೆ ಪಟ್ಟು; ಪ್ರತಿಪಕ್ಷಗಳ 30 ಸಂಸದರು ಅಮಾನತು

- Advertisement -
- Advertisement -

ಸಂಸತ್ತಿನ ಭದ್ರತಾ ಲೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸದನವನ್ನು ಉದ್ದೇಶಿಸಿ ಮಾತನಾಡಬೇಕೆಂದು ಒತ್ತಾಯಿಸಿ ಸಂಸತ್ತಿನಲ್ಲಿ ಪ್ರತಿಭಟನೆ ನಡೆಸಿದ ಕನಿಷ್ಠ 30 ಪ್ರತಿಪಕ್ಷಗಳ ಸಂಸದರನ್ನು ಚಳಿಗಾಲದ ಅಧಿವೇಶನದ ಉಳಿದ ಅವಧಿಗೆ ಲೋಕಸಭೆಯಿಂದ ಅಮಾನತುಗೊಳಿಸಲಾಗಿದೆ.

ಗೃಹ ಸಚಿವರ ಹೇಳಿಕೆಗೆ ಒತ್ತಾಯಿಸಿದ 13 ವಿರೋಧ ಪಕ್ಷದ ಸಂಸದರನ್ನು ಕಳೆದ ವಾರ ಅಮಾನತು ಮಾಡಲಾಗಿತ್ತು. ಇದಲ್ಲದೆ ಇನ್ನೂ ಮೂವರು ಸಂಸದರನ್ನು ವಿಶೇಷಾಧಿಕಾರ ಸಮಿತಿ ವರದಿ ಬರುವವರೆಗೆ ಅಮಾನತುಗೊಳಿಸಲಾಗಿದೆ. ಒಟ್ಟು 46 ವಿರೋಧ ಪಕ್ಷದ ಸಂಸದರನ್ನು ಅಮಾನತುಗೊಳಿಸಲಾಗಿದೆ. ಅವರಲ್ಲಿ 43 ಮಂದಿ ಭದ್ರತಾ ಲೋಪದ ಬಗ್ಗೆ ಗೃಹ ಸಚಿವರು ಪ್ರತಿಕ್ರಿಯಿಸುವಂತೆ ಆಗ್ರಹಿಸಿ ಪ್ರತಿಭಟಿಸಿದವರಾಗಿದ್ದಾರೆ.

ಅಮಾನತುಗೊಂಡ ಸಂಸದರಲ್ಲಿ ಲೋಕಸಭೆಯ ವಿಪಕ್ಷ ನಾಯಕ ಅಧೀರ್ ರಂಜನ್ ಚೌಧರಿ ಮತ್ತು  ಉಪನಾಯಕ ಗೌರವ್ ಗೊಗೊಯ್, ತೃಣಮೂಲ ಸಂಸದರಾದ ಕಲ್ಯಾಣ್ ಬ್ಯಾನರ್ಜಿ, ಕಾಕೋಲಿ ಘೋಷ್ ದಸ್ತಿದಾರ್, ಸೌಗತ ರೇ, ಸತಾಬ್ದಿ ರಾಯ್ ಮತ್ತು ಡಿಎಂಕೆ ಸಂಸದರಾದ ಎ ರಾಜಾ ಮತ್ತು ದಯಾನಿಧಿ ಮಾರನ್ ಸೇರಿದ್ದಾರೆ.

ಅಮಾನತು ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅಧೀರ್ ರಂಜನ್ ಚೌಧರಿ, ಸರ್ಕಾರವು ಸರ್ವಾಧಿಕಾರದ ರೀತಿಯಲ್ಲಿ ವರ್ತಿಸುತ್ತಿದೆ ಮತ್ತು ಸಂಸತ್ತನ್ನು ಬಿಜೆಪಿ ಪ್ರಧಾನ ಕಚೇರಿಯಂತೆ ಪರಿಗಣಿಸುತ್ತಿದೆ. ಅಧಿವೇಶನ ಆರಂಭವಾದಾಗಿನಿಂದ ಪ್ರತಿಪಕ್ಷಗಳು ಸರ್ಕಾರಕ್ಕೆ ಸಹಕಾರ ನೀಡುತ್ತಿವೆ. ಆದರೆ ಸರಕಾರವು ಸರ್ವಾಧಿಕಾರದ ಉತ್ತುಂಗವನ್ನು ಮೀರಿದೆ. ಅವರಿಗೆ ಬಹುಮತವಿದೆ, ಅವರು ಅಧಿಕಾರವನ್ನು ಹಿಡಿದಿದ್ದಾರೆ. ಅವರು ಸಂಸತ್ತನ್ನು ಪಕ್ಷದ ಕಚೇರಿಯಂತೆ ನಡೆಸಲು ಬಯಸುತ್ತಾರೆ. ಆದರೆ ಅದು ಸಂಭವಿಸಬಾರದು ಎಂದು ಅವರು ಹೇಳಿದ್ದಾರೆ.

ಈ ಕುರಿತು ಮಾತನಾಡಿದ ಗೌರವ್ ಗೊಗೊಯ್, ಬಿಜೆಪಿ ಸರ್ಕಾರವು ಪ್ರತಿಪಕ್ಷಗಳನ್ನು ಕೆಡವಲು ಪ್ರಯತ್ನಿಸುತ್ತಿದೆ ಮತ್ತು ಗೃಹ ಸಚಿವರು ಭದ್ರತಾ ಲೋಪದ ಹೊಣೆಗಾರಿಕೆಯನ್ನು ತೆಗೆದುಕೊಳ್ಳಲು ಹೆದರುತ್ತಿದ್ದಾರೆ. ಲೋಕಸಭೆಯ ಹೊರಗೆ ತಮ್ಮ ಪ್ರತಿಭಟನೆಯನ್ನು ಮುಂದುವರೆಸುತ್ತೇವೆ ಎಂದು ಹೇಳಿದ್ದಾರೆ.

ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಎಕ್ಸ್‌ನಲ್ಲಿ ಮಾಡಿದ ಪೋಸ್ಟ್‌ನಲ್ಲಿ ಭದ್ರತಾ ಲೋಪದ ಬಗ್ಗೆ ಗೃಹ ಸಚಿವರು ಪ್ರತಿಕ್ರಿಯಿಸುವಂತೆ ಆಗ್ರಹಿಸಿದ ತಮ್ಮ ಬೇಡಿಕೆಯನ್ನು ಈಡೇರಿಸದ ಕಾರಣ ಪ್ರತಿಭಟನೆ ನಡೆಸುತ್ತಿದ್ದೇವೆ. ಸಂಸತ್ತಿನಲ್ಲಿ ಅಧಿವೇಶನ ನಡೆಯುತ್ತಿದೆ. ಆಘಾತಕಾರಿ ಘಟನೆಗಳ ಕುರಿತು ಉಭಯ ಸದನಗಳಲ್ಲಿ ಗೃಹ ಸಚಿವರು ಹೇಳಿಕೆ ನೀಡಬೇಕು ಎಂದು  ಪ್ರತಿ ಪಕ್ಷಗಳು ಒತ್ತಾಯಿಸುತ್ತಿವೆ. ಇದು ಸರಳ, ನೇರ ಮತ್ತು ನ್ಯಾಯಸಮ್ಮತ ಬೇಡಿಕೆಯಾಗಿದೆ. ಆದರೆ ಗೃಹ ಸಚಿವರು ತಮ್ಮ ಕರ್ತವ್ಯ ಮತ್ತು ಜವಾಬ್ದಾರಿಯ ಹೇಳಿಕೆ ನೀಡಲು ನಿರಾಕರಿಸಿದ್ದಾರೆ ಎಂದು ರಮೇಶ್ ಪೋಸ್ಟ್‌ನಲ್ಲಿ ಹೇಳಿಕೊಂಡಿದ್ದಾರೆ.

ಗೃಹ ಸಚಿವರ ಹೇಳಿಕೆಗೆ ಪ್ರತಿಪಕ್ಷಗಳ ಬೇಡಿಕೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ, ಸದನದ ಒಳಗಿನ ಭದ್ರತೆಯು ಸೆಕ್ರೆಟರಿಯೇಟ್ ವ್ಯಾಪ್ತಿಗೆ ಒಳಪಟ್ಟಿದೆ ಮತ್ತು ಕೇಂದ್ರವು ಇದರಲ್ಲಿ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.

ಲೋಕಸಭೆಯ ಚಳಿಗಾಲದ ಅಧಿವೇಶನದ ವೇಳೆ ಇಬ್ಬರು ಅಪರಿಚಿತರು ವೀಕ್ಷಕರ ಗ್ಯಾಲರಿಯಿಂದ ಹಠಾತ್ ಆಗಿ ಸಂಸದರು ಕುಳಿತುಕೊಳ್ಳುವ ಆಸನದ ಕಡೆಗೆ ನುಗ್ಗಿ ಘೋಷಣೆಗಳನ್ನು ಕೂಗುತ್ತಾ ಹಳದಿ ಬಣ್ಣದ ಗ್ಯಾಸ್ ಸ್ಪ್ರೇ ಹರಡಿದ್ದರು. 2001ರ ಸಂಸತ್ ದಾಳಿಯ 22ನೇ ವಾರ್ಷಿಕದ ದಿನದಂದೇ ಈ ಭದ್ರತಾ ಲೋಪ ಸಂಭವಿಸಿದೆ. ಪ್ರಕರಣಕ್ಕೆ ಸಂಬಂಧಿಸಿ ಈವರೆಗೆ 6 ಮಂದಿಯನ್ನು ಬಂಧಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನು ಓದಿ: ದೆಹಲಿ ಗಲಭೆ ಪ್ರಕರಣ: ಪೊಲೀಸರನ್ನು ಪ್ರತಿನಿಧಿಸುತ್ತಿದ್ದ ಪಬ್ಲಿಕ್ ಪ್ರಾಸಿಕ್ಯೂಟರ್ ರಾಜೀನಾಮೆ

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read