Homeದಲಿತ್ ಫೈಲ್ಸ್ಬೆಳ್ತಂಗಡಿ: ದಲಿತ ಯುವಕನ ಕೊಲೆ ಪ್ರಕರಣದಲ್ಲಿ ನಾಲ್ವರ ಬಂಧನ

ಬೆಳ್ತಂಗಡಿ: ದಲಿತ ಯುವಕನ ಕೊಲೆ ಪ್ರಕರಣದಲ್ಲಿ ನಾಲ್ವರ ಬಂಧನ

- Advertisement -
- Advertisement -

ಬೆಳ್ತಂಗಡಿ ತಾಲೂಕಿನ ಶಿಬಾಜೆಯಲ್ಲಿ ದಲಿತ ಯುವಕನೊಬ್ಬ ಅಸಹಜವಾಗಿ ಸಾವನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಧರ್ಮಸ್ಥಳ ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.

ಶಿಬಾಜೆ ನಿವಾಸಿಗಳಾಗಿರುವ ತಿಮ್ಮಪ್ಪ ಪೂಜಾರಿ, ಲಕ್ಷ್ಮಣ ಪೂಜಾರಿ, ಆನಂದ ಗೌಡ ಹಾಗೂ ಮಹೇಶ್ ಪೂಜಾರಿ ಎಂಬವರನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ.

ಶಿಬಾಜೆ ಗ್ರಾಮದ ಸಾರಾ ಫಾರ್ಮ್‌ನಲ್ಲಿ ಕೆಲಸ ಮಾಡುತ್ತಿದ್ದ ಮೂಡಿಗೆರೆ ಮೂಲದ ದಲಿತ ಯುವಕ ಶ್ರೀಧರ (30) ಎಂಬವರ ಮೃತದೇಹ ಕಳೆದ ಡಿ.18ರಂದು ಬೆಳಗ್ಗೆ ಇವರು ಕೆಲಸ ಮಾಡುವ ತೋಟದ ಮೂಲೆಯಲ್ಲಿ ಪತ್ತೆಯಾಗಿತ್ತು. ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿತ್ತು.

ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ನಾಲ್ವರು ಆರೋಪಿಗಳ ವಿರುದ್ಧ ಕೊಲೆ ಹಾಗೂ ದಲಿತ ದೌರ್ಜನ್ಯ ಪ್ರಕರಣ ದಾಖಲಾಗಿತ್ತು. ಘಟನೆಯ ಬಳಿಕ ನಾಲ್ವರು ಆರೋಪಿಗಳು ತಲೆ ಮರೆಸಿಕೊಂಡಿದ್ದರು. ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ ದಲಿತ ಸಂಘಟನೆಗಳು ಪುತಿಭಟನೆಗೂ ಮುಂದಾಗಿದ್ದರು. ಇದೀಗ ಪೊಲೀಸರು ನಾಲ್ವರು ಆರೋಪಿಗಳನ್ನೂ ಬಂಧಿಸಿರುವುದಾಗಿ ತಿಳಿದು ಬಂದಿದೆ.

ಶಿಬಾಜೆ ಗ್ರಾಮದ ಎ.ಸಿ.ಕುರಿಯನ್ ಮಾಲಿಕತ್ವದ ಸಾರಾ ಫಾರ್ಮ್ ತೋಟದಲ್ಲಿ ಘಟನೆ ನಡೆದಿತ್ತು. ಫಾರ್ಮ್ ತೋಟದಲ್ಲಿ ಮೇಲ್ವಿಚಾರಕನಾಗಿ ಶ್ರೀಧರ ಕೆಲಸ ಮಾಡುತ್ತಿದ್ದರು.

ಶ್ರೀಧರ ಮೇಲೆ ಡಿ. 17ರಂದು ನಾಲ್ವರು ಮಾರಣಾಂತಿಕ ಹಲ್ಲೆ ನಡೆಸಿದ್ದರು. ಈ ವೇಳೆ ತೋಟದ ಸಿಬ್ಬಂದಿ ಅಬ್ರಾಹಂ ಮತ್ತು ಪರಮೇಶ್ವರ್ ರಕ್ಷಣೆ ಮಾಡಿದ್ದರು. ಇದಾದ ನಂತರ ಏಟು ತಿಂದ ಶ್ರೀಧರ ವಿಶ್ರಾಂತಿ ಪಡೆಯುತ್ತಿದ್ದರು. ಈ ವೇಳೆ ಆರೋಪಿಗಳು ತೋಟಕ್ಕೆ ಅಳವಡಿಸಿದ್ದ ತಂತಿ ಬೇಲಿ ತುಂಡರಿಸಿ ಬಂದು, ಕೊಲೆ ಮಾಡಿ ತೋಟದ ಅಣತೆ ದೂರದಲ್ಲಿ ಎಸೆದಿದ್ದರು. ಜೊತೆಗೆ ಕೊಲೆಯಾದ ಶ್ರೀಧರ ಬಳಿ ಇದ್ದ 9500 ರೂ. ಹಣವನ್ನು ದೋಚಿ ಪರಾರಿಯಾಗಿದ್ದರು ಎಂದು ವರದಿಯಾಗಿತ್ತು.

ಡಿ.18ರಂದು ಬೆಳಗ್ಗೆ ಕೊಠಡಿ ಬಳಿ ಬಂದು ನೋಡಿದಾಗ ಶ್ರೀಧರ ನಾಪತ್ತೆಯಾಗಿದ್ದರು. ಈ ಹಿನ್ನೆಲೆ ಶ್ರೀಧರನನ್ನು ಹುಡುಕಿದಾಗ ತೋಟದ 250 ರಿಂದ 300 ಮೀಟರ್ ದೂರದಲ್ಲಿ ನಗ್ನ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿತ್ತು. ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ವರ್ಷದಲ್ಲಿ ಎರಡನೇ ಪ್ರಕರಣ

ಬೆಳ್ತಂಗಡಿ ತಾಲ್ಲೂಕಿನಲ್ಲಿ ದಲಿತರ ದೌರ್ಜನ್ಯಗಳು ಹೆಚ್ಚಾಗುತ್ತಿವೆ. ಶ್ರೀಧರ ಕೊಲೆ ಜೊತೆಗೆ 2022ನೇ ಇಸವಿಯಲ್ಲಿ ಇಂಥದ್ದೇ ಮತ್ತೊಂದು ಘಟನೆ ಫೆಬ್ರುವರಿಯಲ್ಲಿ ನಡೆದಿತ್ತು. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಧರ್ಮಸ್ಥಳ ಬಳಿಯ ಕನ್ಯಾಡಿ ಗ್ರಾಮದ ಪರಶಿಷ್ಟ ಜಾತಿಗೆ ಸೇರಿದ ದಿನೇಶ್ (40) ಎಂಬ ಯುವಕನನ್ನು ಅದೇ ಗ್ರಾಮದ ಕೃಷ್ಣ ಎಂಬ ಬಜರಂಗದಳ ಮುಖಂಡನೊಬ್ಬ ಜಮೀನು ವಿವಾದಕ್ಕೆ ಸಂಬಂಧಿಸಿ ಹತ್ಯೆ ಮಾಡಿದ್ದನು. ಈ ಕುರಿತು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಬಗ್ಗೆ 45 ಸೆಕೆಂಡ್‌ಗಳ ಸಿಸಿಟಿವಿ ದೃಶ್ಯಾವಳಿ ಇರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಅದರಲ್ಲಿ ದಿನೇಶ್ ಎಂಬ ದಲಿತ ಯುವಕನನ್ನು ಬಜರಂಗದಳ ಮುಖಂಡ ಕೃಷ್ಣ ಎಳೆದಾಡಿ, ಥಳಿಸುತ್ತಿರುವುದು ಸೆರೆಯಾಗಿತ್ತು.

ಇದನ್ನೂ ಓದಿರಿ: ದಲಿತರು ಕುಡಿಯುವ ನೀರಿನಲ್ಲಿ ಮಲ ಬೆರೆಸಿದ ಪ್ರಕರಣ: ಸಂತ್ರಸ್ತರಿಗೆ ಪೊಲೀಸರಿಂದ ಬೆದರಿಕೆ- ಪ.ರಂಜಿತ್ ಆರೋಪ

ಫೆಬ್ರವರಿ 23ರಂದು ಕೃಷ್ಣ ಎಂಬ ಬಜರಂಗದಳ ಮುಖಂಡನು ದಿನೇಶ್‌ಗೆ, “ನಿನ್ನ ಜಮೀನನ ದಾಖಲೆಗಳನ್ನು ನಾನು ಮಾಡಿಕೊಟ್ಟಿದ್ದೇನೆ. ಆದರೆ ನೀನು ಯಾವಾಗಲೂ ಕಾಂಗ್ರೆಸ್ ಕಾಂಗ್ರೆಸ್ ಎಂದು ಬೊಬ್ಬೆ ಹಾಕುತ್ತೀಯ” ಎಂದು ಬೈದಿದ್ದನು. ಆಗ ದಿನೇಶ್, “ಇಲ್ಲ ನನ್ನ ಜಮೀನಿನ ದಾಖಲೆಗಳನ್ನು ಕಾಂಗ್ರೆಸ್‌ನವರು ಮಾಡಿಕೊಟ್ಟಿದ್ದಾರೆ” ಸಾರ್ವಜನಿಕವಾಗಿ ಹೇಳಿದ್ದರು. ಇದರಿಂದ ರೊಚ್ಚಿಗೆದ್ದ ಕೃಷ್ಣ, ದಿನೇಶ್‌ಗೆ ಮನಬಂದಂತೆ ಥಳಿಸಿದ್ದನು. ಆತನ ಹೊಟ್ಟೆ ಮೇಲೆ ಕೈಯಿಂದ ಗುದ್ದಿ, ಕಾಲಿನಿಂದ ಒದ್ದಿದ್ದನು. ಪೆಟ್ಟು ತಿಂದ ದಿನೇಶ್ ತನ್ನ ಬಳಿ ಹಣವಿಲ್ಲದ ಕಾರಣ ಹೊಟ್ಟೆ ನೋವೆಂದು ಮನೆಯಲ್ಲಿ ಅಳುತ್ತಾ, ಒದ್ದಾಡುತ್ತಿದ್ದರು. ಆಗ ಕಾರಣ ಕೇಳಿದಾಗ ಕೃಷ್ಣ ಥಳಿಸಿದ್ದನ್ನು ಮನೆಯವರಿಗೆ ತಿಳಿಸಿದ್ದರು.

ಇದರಿಂದ ಕುಪಿತಗೊಂಡ ಮನೆಯವರು ಕೃಷ್ಣನ ಬಳಿ ಜಗಳವಾಡಿ, “ನೀನೇ ಆಸ್ಪತ್ರೆಗೆ ತೋರಿ” ಎಂದು ತಾಕೀತು ಮಾಡಿದ್ದರು. ಕೃಷ್ಣ ಸಂತ್ರಸ್ತ ದಿನೇಶ್‌ ರನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿ, ಮೆಟ್ಟಿಲಿನಿಂದ ಬಿದ್ದು ಗಾಯಗೊಂಡಿದ್ದಾರೆ ಎಂದು ವೈದ್ಯರ ಬಳಿ ಸುಳ್ಳು ಹೇಳಿದ್ದನು. ಆದರೆ ಹೊಟ್ಟೆಯಲ್ಲಿನ ಒಳನೋವುಗಳಿಂದ ಬಳಲುತ್ತಿದ್ದ ದಿನೇಶ್ ಚಿಕಿತ್ಸೆ ಫಲಕಾರಿಯಾಗದೆ ಫೆಬ್ರವರಿ 25ರ ಬೆಳಗ್ಗಿನ ಜಾವ 2.30ರಲ್ಲಿ ನಿಧನರಾಗಿದ್ದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ರೇವಣ್ಣ ಸಹಚರ ಸತೀಶ್ ಬಾಬಣ್ಣಗೆ ನ್ಯಾಯಾಂಗ ಬಂಧನ

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣ ಬಯಲಾದ ಬೆನ್ನಲ್ಲಿ ಮೈಸೂರಿನಲ್ಲಿ ಮಹಿಳೆಯನ್ನು ಅಪಹರಿಸಿದ ಪ್ರಕರಣಕ್ಕೆ ಸಂಬಂಧಿಸಿ ಪ್ರಕರಣದ ಎರಡನೇ ಆರೋಪಿ ಸತೀಶ್ ಬಾಬಣ್ಣ ಬಂಧನವಾಗಿದ್ದು, ಅವರನ್ನು ನ್ಯಾಯಾಲಯ 14...