Homeಕರ್ನಾಟಕಬೆಂಗಳೂರು-ಧಾರವಾಡ 'ವಂದೇ ಭಾರತ್' ಎಕ್ಸ್‌ಪ್ರೆಸ್ ರೈಲು ಪ್ರಯಾಣ ದರ ದುಬಾರಿ: ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ವಿರೋಧ

ಬೆಂಗಳೂರು-ಧಾರವಾಡ ‘ವಂದೇ ಭಾರತ್’ ಎಕ್ಸ್‌ಪ್ರೆಸ್ ರೈಲು ಪ್ರಯಾಣ ದರ ದುಬಾರಿ: ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ವಿರೋಧ

- Advertisement -
- Advertisement -

ಬೆಂಗಳೂರು-ಧಾರವಾಡ ನಡುವೆ ಸಂಚರಿಸಲಿರುವ ‘ವಂದೇ ಭಾರತ್’ ಎಕ್ಸ್‌ಪ್ರೆಸ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಜೂನ್ 27ರಂದು) ಚಾಲನೆ ನೀಡಿದ್ದಾರೆ. ಈ ರೈಲಿನ ಪ್ರಯಾಣ ದರ ದುಬಾರಿಯಾಗಿದ್ದು, ರಾಜ್ಯದ ಸಾಮಾನ್ಯ ಜನರು ಈ ರೈಲಿನಿಂದ ದೂರ ಉಳಿಯಬೇಕಾದ ಅನಿವಾರ್ಯತೆ ಇದೆ ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಸಾಮಾಜಿಕ ಮಾಧ್ಯಮದಲ್ಲಿ ಈ ಬಗ್ಗೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ.

ಧಾರವಾಡದಿಂದ ಹೊರಡಲಿರುವ ‘ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಜೂನ್ 27ರಂದು ಬೆಳಿಗ್ಗೆ 10ಕ್ಕೆ ವಿಡಿಯೊ ಸಂವಾದದ ಮೂಲಕ ಚಾಲನೆ ನೀಡಲಿದರು. ಉದ್ಘಾಟನೆಯ ದಿನದಂದು ಧಾರವಾಡದಿಂದ ಬೆಂಗಳೂರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣಕ್ಕೆ ತಲುಪುವ ನಡುವೆ 14 ರೈಲು ನಿಲ್ದಾಣಗಳಲ್ಲಿ ನಿಲುಗಡೆಯಾಗಲಿವೆ. ಸಂಜೆ 5.05ಕ್ಕೆ ಬೆಂಗಳೂರಿಗೆ ಬರುವುದರಿಂದ ಮತ್ತೆ ಧಾರವಾಡಕ್ಕೆ ಅಂದು ಹಿಂದಿರುಗುವುದಿಲ್ಲ ಎಂದು ನೈರುತ್ಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ದೇಶದ ವಿವಿಧೆಡೆ ಐದು ‘ವಂದೇ ಭಾರತ್’ ರೈಲುಗಳಿಗೆ ಅಂದು ಏಕಕಾಲಕ್ಕೆ ಪ್ರಧಾನಿ ಚಾಲನೆ ನೀಡಲಿದ್ದಾರೆ. ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಕೆಎಸ್‌ಆರ್ ಬೆಂಗಳೂರು ನಿಲ್ದಾಣದಿಂದ ಬೆಳಗ್ಗೆ 5.45 ಕ್ಕೆ ಹೊರಡಲಿದ್ದು, ಮಧ್ಯಾಹ್ನ 12.10 ಕ್ಕೆ ಧಾರವಾಡ ತಲುಪಲಿದೆ. ಧಾರವಾಡದಿಂದ ಮಧ್ಯಾಹ್ನ 1.15ಕ್ಕೆ ಹೊರಟು ರಾತ್ರಿ 7.45ಕ್ಕೆ ಬೆಂಗಳೂರು ತಲುಪಲಿದೆ.

ಬೆಂಗಳೂರು ಮತ್ತು ಹುಬ್ಬಳ್ಳಿ-ಧಾರವಾಡ ನಡುವಿನ ಪ್ರಯಾಣದ ಸಮಯ ಸರಿಸುಮಾರು 6 ಗಂಟೆ 30 ನಿಮಿಷಗಳು. ಈ ಹೊಸ ರೈಲು ಮಂಗಳವಾರ ಹೊರತುಪಡಿಸಿ ಎಲ್ಲಾ ದಿನಗಳಲ್ಲಿ ಕಾರ್ಯನಿರ್ವಹಿಸುತ್ತದೆ.

ಬೆಂಗಳೂರು-ಧಾರವಾಡ ಸಂಚರಿಸುವ ವಂದೇ ಭಾರತ್’ ಎಕ್ಸ್‌ಪ್ರೆಸ್ ರೈಲಿನ ದರ ಪಟ್ಟಿ ನೋಡಿದರೆ ನೀವು ಶಾಕ್ ಆಗುವುದು ನಿಶ್ಚಿತ. ಎರಡು ವಿಭಾಗ, ಪ್ರತ್ಯೇಕ ದರ- ಬೆಂಗಳೂರು-ಧಾರವಾಡ ವಂದೇ ಭಾರತ್ ಎಕ್ಸ್‌ಪ್ರೆಸ್ ಎಕ್ಸಿಕ್ಯೂಟಿವ್ ಚೇರ್ (EC) ಮತ್ತು AC ಚೇರ್ ಕಾರ್ (CC) ಎಂಬ ಎರಡು ವಿಭಾಗಗಳನ್ನು ಒಳಗೊಂಡಿದೆ.

ಬೆಂಗಳೂರಿನಿಂದ ಧಾರವಾಡಕ್ಕೆ ಎಕ್ಸಿಕ್ಯೂಟಿವ್ ಚೇರ್ ಟಿಕೆಟ್ ದರ ರೂ. 2010 ಆದರೆ ಚೇರ್ ಕಾರ್ ಟಿಕೆಟ್ ಬೆಲೆ ರೂ. 1165. ಆಗಿದೆ.

ಧಾರವಾಡದಿಂದ ಬೆಂಗಳೂರಿಗೆ ಎಕ್ಸಿಕ್ಯೂಟಿವ್ ಚೇರ್ ಟಿಕೆಟ್ ದರ ರೂ. 2440 ಆದರೆ AC ಚೇರ್ ಕಾರ್ ಟಿಕೆಟ್ ದರ ರೂ. 1330. ಆಗಿದೆ.

ಧಾರವಾಡ- ಬೆಂಗಳೂರು ದರ ತುಟ್ಟಿ ಏಕೆ?

ಧಾರವಾಡ – ಬೆಂಗಳೂರು ಪ್ರಯಾಣಿಕರಿಗೆ ತಮ್ಮ ಪ್ರಯಾಣದ ಸಮಯದಲ್ಲಿ ತಿಂಡಿ, ಊಟವನ್ನು ನೀಡಲಾಗುತ್ತದೆ. ಹೀಗಾಗಿ ಧಾರವಾಡದಿಂದ ಬೆಂಗಳೂರಿಗೆ ಆಗಮಿಸುವ ಟಿಕೆಟ್ ದರ ಹೆಚ್ಚಾಗಿದೆ. ಆದರೆ ಬೆಂಗಳೂರು – ಧಾರವಾಡ ಪ್ರಯಾಣಿಕರಿಗೆ ಉಪಹಾರ ಮತ್ತು ತಿಂಡಿ ಮಾತ್ರ ಸಿಗುತ್ತದೆ.

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಪಕ್ಕದ ಯಶವಂತಪುರ ರೈಲು ನಿಲ್ದಾಣಕ್ಕೆ ಎಕ್ಸಿಕ್ಯೂಟಿವ್ ಚೇರ್ ಟಿಕೆಟ್ ದರ ರೂ. 545 ಆದರೆ ಚೇರ್ ಕಾರ್ ಟಿಕೆಟ್ ಬೆಲೆ ರೂ.410 ಆಗಿದೆ.

ಇನ್ನು ಧಾರವಾಡದಿಂದ ಪಕ್ಕದ ಹುಬ್ಬಳ್ಳಿಗೆ ಎಕ್ಸಿಕ್ಯೂಟಿವ್ ಚೇರ್ ಟಿಕೆಟ್ ದರ ರೂ. 545 ಆದರೆ ಚೇರ್ ಕಾರ್ ಟಿಕೆಟ್ ಬೆಲೆ ರೂ.410 ಆಗಿದೆ.

 

ಧಾರವಾಡ- ಬೆಂಗಳೂರು ಪ್ರಯಾಣ ದರ ದುಬಾರಿ: ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ವಿರೋಧ

ಫೇಸ್‌ಬುಕ್‌ನಲ್ಲಿ ಧಾರವಾಡ- ಬೆಂಗಳೂರು ಪ್ರಯಾಣ ದರದ ಪಟ್ಟಿ ಹಂಚಿಕೊಂಡಿರುವ ಬಳಕೆದಾರರು, ”ಇದೇನು ರೈಲು ಸಾರಿಗೆಯೋ ಅಥವಾ ವಿಮಾನ ಸಾರಿಗೆಯೋ.?” ಎಂದು ಪ್ರಶ್ನೆ ಮಾಡಿದ್ದಾರೆ.

ಮತ್ತೋರ್ವ ಫೇಸ್‌ಬುಕ್ ಬಳಕೆದಾರರು, ”ಇಡೀ ನಮ್ಮ ದೇಶದ ಸಾರಿಗೆ ವ್ಯವಸ್ಥೆಯಲ್ಲಿ ಅತ್ಯಂತ ಕಡಿಮೆ ಸಾರಿಗೆ ಪ್ರಯಾಣ ದರ ಅಂದರೆ ರೈಲು ದರ ಇತ್ತು. ಈಗ ವಂದೆ ಮಾತರಂ ರೈಲಿನ ಹೆಸರಿನಲ್ಲಿ ಇಲ್ಲೂ ಹಗಲು ದರೋಡೆ ಶುರು ಮಾಡಿದ್ದಾರೆ ನೋಡಿ 15-20 ಕಿಮಿ ಗೆ 410 ರೂ, ಅಂದರೆ ಏನು… ಇದರಲ್ಲಿ ಬಡ ಮತ್ತು ಮಧ್ಯಮ ವರ್ಗದವರು ಪ್ರಯಾಣಿಸಲು ಸಾಧ್ಯವೇ.? #ಆಚೇದೀನ್.‌..” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದರದ ಬಗ್ಗೆ ಅಸಮಧಾನ ವ್ಯಕ್ತಪಡಿಸುವ ಮತ್ತೋರ್ವ ಫೇಸ್‌ಬುಕ್‌ ಬಳಕೆದಾರರು, ”ಇದು ವಂದೇ ಭಾರತ ಎಕ್ಸ್‌ಪ್ರೆಸ್‌ ರೈಲು…ಕಣ್ರಪ್ಪ ನಮ್ಮಂತವರಿಗಲ್ಲ.. ಮೆಜೆಸ್ಟಿಕ್ ನಿಂದ ಯಶವಂತಪುರಕ್ಕೆ 410 ರುಪಾಯಿ. ಹುಬ್ಬಳ್ಳಿಯಿಂದ ಧಾರವಾಡಕ್ಕೆ 410 ರುಪಾಯಿ. ಬೋಲೋ ಭಾರತ್ ಮಾತಾ ಕಿ.ಜೈ” ಎಂದು ಪೋಸ್ಟ್ ಮಾಡಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...