Homeನ್ಯಾಯ ಪಥಧರ್ಮಾಂಧ ಮುಸ್ಲಿಂ ಪ್ರಭುತ್ವಗಳು ಮತ್ತು ಪಶ್ಚಿಮದ ದೇಶಗಳ ಇಸ್ಲಮಾಫೋಬಿಯಾದ ನಡುವೆ..

ಧರ್ಮಾಂಧ ಮುಸ್ಲಿಂ ಪ್ರಭುತ್ವಗಳು ಮತ್ತು ಪಶ್ಚಿಮದ ದೇಶಗಳ ಇಸ್ಲಮಾಫೋಬಿಯಾದ ನಡುವೆ..

- Advertisement -
- Advertisement -

ಭಾರತ ಮೂಲದ ಬ್ರಿಟಿಷ್ ಲೇಖಕ ಸಲ್ಮಾನ್ ರಶ್ದಿ ಅವರ ಮೇಲೆ ಕಳೆದ ವಾರ ಮಾರಣಾಂತಿಕವಾಗಿ ಹಲ್ಲೆ ನಡೆಸಲಾಯಿತು. ಚೂರಿಯಿಂದ ಹತ್ತಾರು ಬಾರಿ ಇರಿದ ಹದಿ ಮಟಾರ್ ಎಂಬ ವ್ಯಕ್ತಿ 24 ವರ್ಷದವನು. ಅಂದರೆ ರಶ್ದಿ ತಮ್ಮ ವಿವಾದಾತ್ಮಕ ಕಾದಂಬರಿ ’ದ ಸಟಾನಿಕ್ ವರ್ಸಸ್ ಬರೆದಾಗ ಈ ಹಲ್ಲೆಕೋರ ಇನ್ನೂ ಹುಟ್ಟಿರಲಿಲ್ಲ. ಈ ವ್ಯಕ್ತಿಯ ಸಾಮಾಜಿಕ ಜಾಲತಾಣಗಳಲ್ಲಿನ ಪೋಸ್ಟ್‌ಗಳ ಪ್ರಕಾರ ಇರಾನಿನ ’ಶಿಯಾ ತೀವ್ರವಾದದ’ ಅನುಯಾಯಿಯಾಗಿರಬಹುದೆಂಬ ಪ್ರಾಥಮಿಕ ವರದಿಗಳನ್ನು ಹಲವು ಮಾಧ್ಯಮಗಳು ಪ್ರಕಟಿಸಿವೆ.

ಸಲ್ಮಾನ್ ರಶ್ದಿ 1988ರಲ್ಲಿ ’ದ ಸಟಾನಿಕ್ ವರ್ಸಸ್ ಕಾದಂಬರಿ ಬರೆದಾಗ ಅದು ಇಸ್ಲಾಂ ಧರ್ಮವನ್ನು ಅವಮಾನಿಸುತ್ತದೆ ಎಂಬ ಕಾರಣಕ್ಕೆ ಅಂದಿನ ಇರಾನಿನ ಪರಮೋಚ್ಚ ಮುಖಂಡ ಅಯಾತೊಲ್ಲ ಖೊಮೇನಿ ರಶ್ದಿ ವಿರುದ್ಧ ಫತ್ವಾ ಹೊರಡಿಸಿದ್ದ. ಈ ಫತ್ವಾ ಎಂತಹ ಗಂಭೀರ ತಿರುವು ಪಡೆದಿತ್ತೆಂದರೆ ರಶ್ದಿ ತಲೆಮರೆಸಿಕೊಂಡು ಬದುಕಬೇಕಾಯಿತು. ’ಈ ಕಾದಂಬರಿಯ ಯಾವುದೇ ಭಾಷೆಯ ಪ್ರಕಾಶಕನನ್ನು ಹುಡುಕಿ ಕೊಲ್ಲಿ, ನಿಮಗೆ ಸ್ವರ್ಗದ ಬಾಗಿಲು ತೆಗೆಯುತ್ತದೆ’ ಎಂಬ ಕರೆ ಕೊಟ್ಟಿದ್ದಲ್ಲದೆ ಮಿಲಿಯನ್ ಡಾಲರ್ ಮೊತ್ತದ ದೊಡ್ಡ ಬಹುಮಾನವನ್ನೂ ಘೋಷಿಸಿದ್ದ. ಜಪಾನಿ ಅನುವಾದಕನನ್ನು1991ರಲ್ಲಿ ಮತಾಂಧರು ಕೊಂದುಹಾಕಿದ್ದರ ಜೊತೆಗೆ ಹಲವು ಹಲ್ಲೆಗಳು ನಡೆದುಹೋದವು. ಫತ್ವಾ ಹೊರಡಿಸಿದ್ದ ಖೊಮೇನಿ ಕೂಡ 1989ರಲ್ಲಿ ಮರಣ ಹೊಂದಿದ. ಈ ಫತ್ವಾ ಕಾರಣಕ್ಕೆ ಹಾಗೂ ಮುಂದುವರಿದು ನಡೆದ ಕೆಲವು ಘಟನೆಗಳಿಂದ ಇರಾನ್ ಮತ್ತು ಪಶ್ಚಿಮ ದೇಶಗಳ ಸಂಬಂಧ ತೀವ್ರಮಟ್ಟದಲ್ಲಿ ಹಳಸಿಹೋಗಿತ್ತು.

ಈಗ ಇರಾನ್ ಸರ್ಕಾರದ ವಕ್ತಾರ ರಶ್ದಿ ಮೇಲಿನ ದಾಳಿಗೆ ತನ್ನ ಪಾತ್ರವೇನಿಲ್ಲ ಎಂದು ಹೇಳಿದ್ದರೂ, ಈಗಲೂ ಈ ದಾಳಿಗೆ ರಶ್ದಿ ಮತ್ತು ಬೆಂಬಲಿಗರೇ ಕಾರಣ – ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಮುಸ್ಲಿಂ ಧರ್ಮದ ವಿರುದ್ಧ ಮಾಡಿದ ಅವಹೇಳನಕ್ಕೆ ತಂದ ಶಾಸ್ತಿ ಎಂಬರ್ಥದಲ್ಲಿ ಮಾತನಾಡಿದ್ದಾರೆ; ದಾಳಿಯನ್ನು ಖಂಡಿಸುವ ಗೋಜಿಗೂ ಹೋಗಿಲ್ಲ. ಇದು ಜಗತ್ತಿನಾದ್ಯಂತ ಧರ್ಮಾಧಾರಿತ ಪ್ರಭುತ್ವವನ್ನು ಕಟ್ಟಿಕೊಂಡಿರುವವರು ಮತ್ತು ಆ ದಾರಿಯಲ್ಲಿರುವವರು ವರ್ತಿಸುವ ಸಾಮಾನ್ಯ ಆದರೆ ಕ್ರೂರ ರೀತಿ. ಹೊರಗಿನ ಶತ್ರುಗಳನ್ನು ಕಲ್ಪಿಸಿಕೊಳ್ಳುವುದಷ್ಟೇ ಅಲ್ಲದೆ ತಮ್ಮದೇ ನೆಲದಲ್ಲಿ ತಮ್ಮದೇ ಜನರನ್ನು ಈ ಪ್ರಭುತ್ವಗಳು ದಮನಿಸುತ್ತಿರುವುದಕ್ಕೆ ಸಾವಿರಾರು ಉದಾಹರಣೆಗಳಿವೆ. ಇರಾನ್‌ನಲ್ಲಿ ಇತ್ತೀಚೆಗೆ ಖ್ಯಾತ ಚಿತ್ರ ನಿರ್ದೇಶಕ ಜಫರ್ ಫನಾಹಿಯವರನ್ನು ಆರು ವರ್ಷಗಳ ಸೆರೆಮೆನೆವಾಸಕ್ಕೆ ಗುರಿಪಡಿಸಿದ್ದು ಚರ್ಚೆಯಾಗಿತ್ತು. ಇದಕ್ಕೆ ಮುಖ್ಯ ಕಾರಣ ಪ್ರಭುತ್ವದ ದಮನಕಾರಿ ನೀತಿಗಳನ್ನು ಕಲೆಯ ಮೂಲಕ ಅವರು ವಿಶ್ಲೇಷಿಸಿದ್ದು.

ಇದು ಯಾವುದೋ ಬಿಡಿ ಉದಾಹರಣೆಯೇನಲ್ಲ. ಸೌದಿ ಅರೇಬಿಯಾ ಪತ್ರಕರ್ತ ಜಮಾಲ್ ಖಶ್ಶೋಗಿಯವರನ್ನು ಟರ್ಕಿಯ ರಾಯಭಾರ ಕಚೇರಿಯಲ್ಲಿ ಹತ್ಯೆಗಯ್ಯಲಾಗಿತ್ತು. ಈ ಹತ್ಯೆಯಲ್ಲಿ ಸೌದಿ ರಾಜನ ಪಾತ್ರವಿದೆ ಎಂಬ ಆರೋಪಗಳು ಕೇಳಿಬಂದಿದ್ದವು. ಈ ಮುಸ್ಲಿಂ ಪ್ರಭುತ್ವಗಳು ’ಧರ್ಮ ರಕ್ಷಣೆ’ಯ ಹೆಸರಿನಲ್ಲಿ ಜನಸಾಮಾನ್ಯರನ್ನು ದಾರಿತಪ್ಪಿಸುವ ಕೆಲಸವನ್ನು ಒಂದು ಕಡೆಗೆ ಮತ್ತು ದಿಟ್ಟ ಪತ್ರಕರ್ತರು, ಸಾಮಾಜಿಕ ಕಾರ್ಯಕರ್ತರನ್ನು ದಮನಗೊಳಿಸುವುದನ್ನ ಮತ್ತೊಂದೆಡೆ ಎಗ್ಗಿಲ್ಲದೆ ಮಾಡಿಕೊಂಡುಬರುತ್ತಿವೆ. ಹೀಗಿದ್ದರೂ ಇಂತಹ ಮುಸ್ಲಿಂ ಪ್ರಭುತ್ವಗಳು 24 ವರ್ಷದ ದಾಳಿಕೋರ ಹದಿ ಮಟಾರ್‌ನಂತಹವರನ್ನು ಪ್ರಭಾವಿಸುತ್ತಿರುವುದು ದುರಂತ. ಆದರೆ ಇದಕ್ಕೆ ಪಶ್ಚಿಮ ದೇಶಗಳ ಯುದ್ಧ ನೀತಿಗಳು ಮತ್ತು ಅಲ್ಲಿನ ಸಮಾಜಗಳಲ್ಲಿ ತೀವ್ರತಮವಾಗಿ ಬೆಳೆದಿರುವ ಇಸ್ಲಮಾಫೋಬಿಯಾ ಕೂಡ ಕಾರಣವೆಂಬುದನ್ನು ಮರೆಯುವಂತಿಲ್ಲ.

ನ್ಯಾಟೋ ದೇಶಗಳು ಆಫ್ಘಾನಿಸ್ಥಾನ, ಸಿರಿಯಾ ದೇಶಗಳಲ್ಲಿ ನಡೆಸಿದ ಯುದ್ಧಗಳು, ಇರಾನ್, ಪ್ಯಾಲೆಸ್ಟೀನ್‌ಗಳಲ್ಲಿ ನಡೆಸಿರುವ ಹಸ್ತಕ್ಷೇಪ ಈ ಎಲ್ಲಾ ಕಾರಣಗಳಿಂದ ಅಸಂಖ್ಯಾತ ಮುಸ್ಲಿಮರನ್ನು ತಮ್ಮ ತಾಯ್ನಾಡಿನಿಂದ ಒಕ್ಕಲೆಬ್ಬಿಸುವಂತೆ ಮಾಡಿತು. ಪಶ್ಚಿಮದ ದೇಶಗಳು ನಡೆಸಿದ ಯುದ್ಧಗಳ ಕಾರಣದಿಂದಾಗಿ ೨೦-೨೧ನೇ ಶತಮಾನ ಹಲವು ಮಾನವ ವಲಸೆಗಳಿಗೆ ಕಾರಣವಾಯಿತು. ಈ ವಲಸೆಗಳನ್ನು ಪಶ್ಚಿಮ ದೇಶಗಳ ಬಲಪಂಥೀಯ ಮುಖಂಡರು ತಮ್ಮ ಕೀಳುಮಟ್ಟದ ರಾಜಕಾರಣಕ್ಕೆ ಬಳಸಿಕೊಂಡು ಜನರಲ್ಲಿ ಇಸ್ಲಮಾಫೋಬಿಯಾ ಬಿತ್ತಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಂಡರು. ಜಾರ್ಜ್ ಬುಷ್, ಟ್ರಂಪ್‌ನಂತಹ ಪಾಪ್ಯುಲಿಸ್ಟ್ ಮುಖಂಡರು ಅದಕ್ಕೆ ಧಾರಾಕಾರವಾಗಿ ನೀರೆರೆದರು. ಇವೆಲ್ಲವೂ ಸಮಸ್ಯೆಗಳನ್ನು ಸಂಕೀರ್ಣಗೊಳಿಸಿವೆ. ಜನಸಾಮಾನ್ಯರಿಗೆ ತಿಳಿವಳಿಕೆಯ ಕಡೆಗೆ ನಡೆಯುವ ಹಾದಿಯನ್ನು ದುರ್ಗಮಗೊಳಿಸಿದೆ. ಒಂದು ಕಡೆಗೆ ಮುಸ್ಲಿಂ ಪ್ರಭುತ್ವಗಳು ತಮ್ಮ ಧಾರ್ಮಿಕ ತೀವ್ರವಾದವನ್ನು ಪ್ರಶ್ನಿಸಿಕೊಂಡು-ತೊರೆದು ಜನಪರ ನೀತಿಗಳೆಡೆಗೆ ಮುಖ ಮಾಡಬೇಕಿದ್ದರೆ, ಲಿಬರಲ್ ದೇಶಗಳು ಎಂದು ಕರೆದುಕೊಂಡು ಯುದ್ಧನೀತಿಗಳನ್ನು ಎಗ್ಗಿಲ್ಲದೆ ಅನುಸರಿಸಿ ಇಸ್ಲಮಾಫೋಬಿಯಾ ಪೋಷಿಸುವ ದೇಶಗಳು ಕೂಡ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ತಮ್ಮ ನೀತಿಗಳನ್ನು ಬದಲಿಸಿಕೊಳ್ಳಬೇಕಿದೆ. ತಾವು ಯುದ್ಧಗೈದಿರುವ ರಾಷ್ಟ್ರಗಳ ಭರವಸೆಯನ್ನು ಮರಳಿ ಪಡೆಯಲು ಕೆಲಸ ಮಾಡಬೇಕಿದೆ.

ಸಲ್ಮಾನ್ ರಶ್ದಿ ಪಶ್ಚಿಮ ದೇಶಗಳ ಯುದ್ಧಗಳನ್ನು ತಾವು ಇಸ್ಲಾಂಅನ್ನು ಟೀಕಿಸಿದ ಮಟ್ಟಕ್ಕೆ ವಿರೋಧಿಸಿರಲಿಲ್ಲವೇ? ಬಹುಶಃ ಉತ್ತರ ಹೌದಿರಬಹುದು. ಆದರೆ ಅದು ಅವರ ಮೇಲಿನ ಹಲ್ಲೆಗೆ ಅಥವಾ ಅವರ ಕೊಲೆಗೆ ಹಾತೊರೆಯುವುದಕ್ಕೆ ಕಾರಣವಾಗಬಾರದು. ಕಾದಂಬರಿಕಾರರಾಗಿ ತಮ್ಮದೇ ಆದ ಅನ್ವೇಷಣೆಯಲ್ಲಿದ್ದ ರಶ್ದಿಯವರ ದೃಷ್ಟಿಕೋನವನ್ನು ವಿಚಾರಗಳ ಮೂಲಕ ಎದುರಿಸುವ ಅಗತ್ಯವಿತ್ತು ಅದನ್ನು ವಿರೋಧಿಸುವವರಿಗೆ. ಆ ಮೂಲಕವೇ ಅಮೆರಿಕ-ಯುಕೆಯಂತಹ ಪ್ರಭುತ್ವ ನಡೆಸಿರುವ ದೌರ್ಜನ್ಯಗಳ ಬಗ್ಗೆ ಗಮನ ಸೆಳೆದು ಕೆಲವರನ್ನಾದರೂ ಬದಲಿಸುವ ಪ್ರಯತ್ನ ಮಾಡಬೇಕಿತ್ತು. ಈ ಮಾರ್ಗದ ಬದಲು ಹಲ್ಲೆ-ಹತ್ಯೆಗಳ ಮೂಲಕ ಧ್ವನಿಯನ್ನು ಅಡಗಿಸುವ ಮಾರ್ಗ ಯಾವುದೇ ಕಾಲಕ್ಕೂ ವಿವೇಕಕ್ಕೆ ಎಡೆಮಾಡಿಕೊಡುವುದಿಲ್ಲ.

ಸಲ್ಮಾನ ರಶ್ದಿ ಶೀಘ್ರ ಗುಣಮುಖರಾಗಲಿ ಮತ್ತು ಮತಾಂಧ ಮುಸ್ಲಿಂ ಪ್ರಭುತ್ವಗಳನ್ನು ಮತ್ತೆ ಪ್ರಶ್ನೆಸುವಂತಾಗಲಿ. ಹಾಗೆಯೇ ಇಸ್ಲಮಾಫೋಬಿಯಾಕ್ಕೆ ಕಾರಣವಾಗಿರುವ ಪಶ್ಚಿಮದ ಸಮಾಜಗಳಿಗೂ ವಿವೇಕ ಮೂಡಬೇಕಿದೆ.

  • ಗುರುಪ್ರಸಾದ್ ಡಿ ಎನ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...