Homeಕರ್ನಾಟಕಸತ್ತಂತಿಹರನು ಬಡಿದೆಬ್ಬಿಸಿದ ಜೋಡೊ ಜಾಥಾ

ಸತ್ತಂತಿಹರನು ಬಡಿದೆಬ್ಬಿಸಿದ ಜೋಡೊ ಜಾಥಾ

- Advertisement -
- Advertisement -

’ಭಾರತ ಜೋಡೊ ಯಾತ್ರೆಯ ಮುಂದಾಳು ರಾಹುಲ್ ಗಾಂಧಿ, ಕರ್ನಾಟಕ ಪ್ರವೇಶ ಮಾಡಿದ್ದು, ಯಾತ್ರೆಯ ಮಾರ್ಗ ನಾಗಮಂಗಲದ ಮುಖಾಂತರ ಹಾದುಹೋಗಲಿದ್ದು, ಸಮೀಪದಲ್ಲಿರುವ ಆಯುರ್ವೇದಿಕ್ ಆಸ್ಪತ್ರೆ ಆವರಣದಲ್ಲಿ ಒಂದು ದಿನ ತಂಗಲಿದ್ದಾರೆ’ ಎಂಬ ಸುದ್ದಿ ನನಗೆ ತಲುಪಿದ ಕೂಡಲೇ ಶಿವಮೊಗ್ಗದಿಂದ ಓಡಿದೆ. ರಾಹುಲ್ ಗಾಂಧಿ ನಾನು ಮೆಚ್ಚುವ ರಾಜಕಾರಣಿ. ಉಗ್ರರ ಗುಂಡಿಗೆ ಬಲಿಯಾದ ಅಜ್ಜಿ ಇಂದಿರಾಗಾಂಧಿಯವರ ಅಂತ್ಯಸಂಸ್ಕಾರದ ವೇಳೆ ಅಪ್ಪನನ್ನು ತಬ್ಬಿ ಹಿಡಿದ ದೃಶ್ಯ ಇನ್ನೂ ನನ್ನ ಮನಸ್ಸಿನಲ್ಲಿದೆ. ಮುಂದೆ ರಾಜೀವಗಾಂಧಿ ಎಲ್‌ಟಿಟಿಇ ಉಗ್ರರ ಸಂಚಿಗೆ ಛಿದ್ರವಾಗಿ ಅವರ ಮುಖವನ್ನು ಕೂಡ ನೋಡಲಾಗದ ಭೀಕರ ಸನ್ನಿವೇಶವನ್ನು ರಾಹುಲ್ ಎದುರಿಸಿದ್ದಾರೆ. ಈ ಜಗತ್ತಿಗೆ ಅಹಿಂಸೆ ಬೋಧಿಸುವ ನಾವು ಹಿಂಸೆಗೆ ಗಾಂಧಿ, ಇಂದಿರಾಗಾಂಧಿ ಮತ್ತು ರಾಜೀವಗಾಂಧಿಯನ್ನ ಬಲಿಕೊಟ್ಟಿರುವುದು ವಿಪರ್ಯಾಸ. ಈ ಹಿಂಸೆಯನ್ನ ಮಾನಸಿಕ ರೂಪ ತಳೆದಿದೆ ಕೂಡ. ರಾಹುಲ್ ತಾಯಿ ಸೋನಿಯಾ ಗಾಂಧಿಯವರ ವಿದೇಶಿ ಮೂಲ ಹಿಡಿದು ಅವರನ್ನು ಇನ್ನಿಲ್ಲದಂತೆ ಸಂಘ ಪರಿವಾರದವರು ಜರಿದರು. ಕಳೆದ ಎಂಟು ವರ್ಷದಿಂದ ರಾಹುಲ್ ಗಾಂಧಿಯವರನ್ನು ಕೂಡ ತುಂಬ ಹೀಯಾಳಿಸಿದ್ದಾರೆ; ಎಳಸು, ಅಪ್ರಬುದ್ಧ, ಅನನುಭವಿ, ಗಾಂಧಿ ಕುಟುಂಬದ ಹೆಸರಿನೊಂದಿಗೆ ಮೆರೆಯುತ್ತಿದ್ದಾನೆ ಎಂದೆಲ್ಲಾ ಮತೀಯವಾದಿ ಮಾಧ್ಯಮ ಆಡಿಕೊಂಡಿದೆ. ನಾನು ಆರಂಭದಿಂದ ಗಮನಿಸಿದಂತೆ ರಾಹುಲ್ ಗಾಂಧಿ ಸ್ವಚ್ಛಮನಸ್ಸಿನ ರಾಜಕೀಯ ನಾಯಕ. ಅಧಿಕಾರವನ್ನ ವಿಷ ಎಂದು ಹೇಳಿ ಮನಮೋಹನ ಸಿಂಗ್ ಸರಕಾರದ ಸಂಪುಟ ಸೇರಲು ನಿರಾಕರಿಸಿದರು. ಸಿಂಗ್ ಅವರ ಸರಕಾರಕ್ಕೆ ಯಾವೊಂದು ಅವಾಂತರವನ್ನೂ ತಂದೊಡ್ಡಲಿಲ್ಲ. ಪ್ರೀತಿಯಿಂದ ಮಾತ್ರ ಎಲ್ಲರನ್ನು ಗೆಲ್ಲಬಹುದೆಂದು ಭಾವಿಸಿರುವ ರಾಹುಲ್‌ಗಾಂಧಿ ತನ್ನ ತಂದೆಯನ್ನ ಕೊಂದವರನ್ನ ಕ್ಷಮಿಸಿದರು; ಸಂಸತ್‌ನಲ್ಲಿ ಪ್ರೀತಿ ಪ್ರೇಮದ ಭಾವುಕತೆಗೆ ತುತ್ತಾಗಿ ಮೋದಿಯನ್ನ ಆಲಂಗಿಸಿದರು. ಇದನ್ನು ಕೊಡ ಮತೀಯವಾದಿ ಮಾಧ್ಯಮದವರು ಆಡಿಕೊಂಡರು. ಅವರು ಈಚೆಗೆ ಆಡಿರುವ ಮಾತೊಂದು ನಮ್ಮನ್ನು ಯೋಚಿಸುವಂತೆ ಪ್ರೇರೇಪಿಸುತ್ತದೆ: ’ಮೋದಿ ಪ್ರೀತಿ ವಿಶ್ವಾಸದಿಂದ ವಂಚಿತರಾದ ವ್ಯಕ್ತಿ; ಅದರ ಪರಿಣಾಮ ಅವರ ಕ್ರಿಯೆಯಲ್ಲಿ ಕಾಣುತ್ತಿದೆ’ ಎಂದಿದ್ದಾರೆ.

ಎಲ್ಲರನ್ನು ಪ್ರೀತಿಸುವ ಅವರ ವ್ಯಕ್ತಿತ್ವ ಜೋಡೋ ಯಾತ್ರೆಯಲ್ಲಿ ಕೂಡ ವ್ಯಕ್ತವಾಗುತ್ತಿರುವುದನ್ನು ಕಾಣುತ್ತಿದ್ದೆವು. ಈಗ ಭಾರತದ ಬಹುತ್ವ ಉಳಿಸುವ ಅಭಿಯಾನಕ್ಕಾಗಿ ಮುಂದಾಳತ್ವ ವಹಿಸಿರುವ ರಾಹುಲ್, ನಮ್ಮ ನಾಗಮಂಗಲ ಹಾದು ಹೋಗುತ್ತಾರೆಂದು ಗೊತ್ತಾಗಿ ಹೋಗುವಷ್ಟರಲ್ಲಿ ರಾಜೀವ ಎಂಬ ಯಾತ್ರಿ ನಾಗಮಂಗಲಕ್ಕೆ ಬಂದು ಆಗಲೇ ಕಾಯುತ್ತಿದ್ದರು. ರಾಹುಲ್ ಗಾಂಧಿ ಜೋಡೋ ಯಾತ್ರೆ ಮಾಡಬೇಕಾದರೆ, ಮುಂದಿನ ಊರುಗಳ ಮಾಹಿತಿಯನ್ನ ಮೊದಲೇ ಸಂಗ್ರಹಿಸುತ್ತಾರಂತೆ. ಅಪರೂಪದ ಕೃಷಿಕರು, ಜಾನಪದ ಕಲಾವಿದರು, ಸಾಹಿತಿಗಳು, ಸ್ವಾತಂತ್ರ್ಯ ಹೋರಾಟಗಾರರು; ಸ್ಥಳದ ಇತಿಹಾಸ, ದೇವಸ್ಥಾನ ಇವೆಲ್ಲಾ ಮಾಹಿತಿಗಳನ್ನು ಮೊದಲೇ ತಿಳಿದುಕೊಳ್ಳುತ್ತಾರಂತೆದ್ಧೀ ಕೆಲಸಕ್ಕಾಗಿ ಅವರು ರಾಜಕಾರಣಿಗಳನ್ನು ನಂಬದೆ ಸಾಮಾಜಿಕ ಬದ್ಧತೆಯ ಕಾರ್ಯಕರ್ತರ ಮೊರೆಹೋಗಿದ್ದಾರಂತೆ. ಹೀಗೆಂದು ಹೇಳಿದ ರಾಜೀವ್ ನನ್ನಿಂದ ಮಾಹಿತಿ ತೆಗೆದುಕೊಂಡು ಹೋದರು. ’ನಾಳೆ ನಾಗಮಂಗಲದ ಗಡಿ ಕರಡ್ಯಾದಿಂದ ಜಾಥಾ ಶುರುವಾಗಲಿದೆ ಅವರ ಭೇಟಿ ಸಾಧ್ಯವೇ’ ಎಂದು ಕೇಳಿದಾಗ ಬನ್ನಿ ನೋಡೋಣ ಎಂದು ಹೋದರು.

ಮರುದಿನ ಬೆಳಿಗ್ಗೆ ಆರು ಗಂಟೆಗೆ ವಕೀಲ ರಮೇಶಗೌಡರ ಜೊತೆಗೂಡಿ ರಾಹುಲ್ ಗಾಂಧಿಯನ್ನ ಎದುರುಗೊಳ್ಳಲು ಹೋದಾಗ ಕರಡ್ಯಾ ಸಮೀಪಿಸಿತು. ಜಾಥಾವನ್ನು ಸಮಾಧಾನವಾಗುವಷ್ಟು ನೋಡಲು ಅವಕಾಶ ಒದಗಿಸಿದ ಸೇತುವೆಯ ಮೇಲೆ ಕುಳಿತಾಗ, ಹಲವು ಘೋಷಣೆಗಳನ್ನು ಕೂಗುತ್ತಾ ಸಮವಸ್ತ್ರ ತೊಟ್ಟ ತಂಡಗಳು ನಮ್ಮ ಮುಂದೆ ಹೋದವು. ಮಾಜಿ ಮಂತ್ರಿ ಚಲುವರಾಯಸ್ವಾಮಿ ನಾವಿರುವಲ್ಲಿಗೆ ಬಂದು ರಾಹುಲ್ ಗಾಂಧಿಯವರನ್ನು ಎದುರುಗೊಳ್ಳಲು ತಯಾರಾಗಿ ನಿಂತರು, ರಾಹುಲ್ ಗಾಂಧಿ ಬಿರುಬಿರನೆ ನಡೆಯುತ್ತಾ ಸಮೀಪಿಸಿದಾಗ ಚಲುವರಾಯಸ್ವಾಮಿ ನನ್ನನ್ನು ಮತ್ತು ರಮೇಶಗೌಡರನ್ನ ಕರೆದುಕೊಂಡು ಹೋಗಿ ಪರಿಚಯಿಸಿದರು. “ನಾನು ಗೌರಿ ಲಂಕೇಶ್ ಪತ್ರಿಕೆಯಲ್ಲಿ ಕಾಲಮಿಸ್ಟ್ ಆಗಿದ್ದೆ” ಎಂದೆ. ಕೂಡಲೇ ನನ್ನನ್ನು ಎಡಬದಿಗೆ ಕರೆದುಕೊಂಡು ಕಾಲಮ್ಮಿನ ವಿಷಯ ಕುರಿತು ಕೇಳಿದರು. ನಾನು ’ರೂರಲ್ ಲಾಂಗ್ವೇಜ್‌ನಲ್ಲಿ ಪಾಲಿಟಿಕ್ಸ್ ಮಾತಾಡೋ ರೂರಲ್ ಜನ’ ಅಂತ ಏನೇನೂ ಹೇಳುವಾಗ ರಾಹುಲ್ “ಇಂಗ್ಲಿಷ್ ಹಿಂದಿ ಆತ ಹೈ” ಎಂದರು.

“ತೋಡ ತೋಡ ಆತಾಹೈ” ಎಂದೆ. ಅಷ್ಟರಲ್ಲಿ ರಮೇಶಗೌಡರಿಗೆ ಟ್ರಾನ್ಸ್‌ಲೇಟ್ ಇಟ್ ಎಂದು ನನ್ನ ಉತ್ತರಗಳನ್ನ ತರ್ಜುಮೆಮಾಡಿ ಹೇಳಲು ಸೂಚಿಸಿದರು.

“ಗೌರಿ ಹೇಗಿದ್ದರು” ಎಂದರು. ನಾನು ಗೌರಿಯ ಆಕಾರ ಮತ್ತು ಹವ್ಯಾಸಗಳನ್ನ ಹೇಳುತ್ತಿದ್ದೆ. ಅಷ್ಟರಲ್ಲಿ ರಾಹುಲ್ ಪ್ರಶ್ನೆಯ ಇಂಗಿತವರಿತ ರಮೇಶಗೌಡರು “ಆಕೆ ಮಹಾನ್ ಜಾತ್ಯತೀತ ವ್ಯಕ್ತಿಯಾಗಿದ್ದರು. ಮತಾಂಧರನ್ನ ತುಂಬಾ ವಿರೋಧಿಸುತ್ತಿದ್ದರು. ಏನು ಗ್ರಹಿಸಿದ್ರು ಅದನ್ನ ಬರೀತಿದ್ರು. ಅವರ ಸಂಸಾದಕೀಯದ ಟೈಟಲ್ಲೇ ’ಕಂಡಹಾಗೆ’. ಕನ್ನಯ್ಯಕುಮಾರನ್ನ ತನ್ನ ಮಗ ಅಂತ ಕರೆದು ಕರ್ನಾಟಕಕ್ಕೆ ಕರೆಸಿಕೊಂಡು ಮನೆಗೂ ಕರೆಕೊಂಡು ಹೋಗ್ತಿದ್ರು. ಆಕೆಯ ಮೇಲೆ ಅವರ ತಂದೆ ಲಂಕೇಶ್ ಪ್ರಭಾವ ತುಂಬಾ ಇತ್ತು. ಎರಡು ದಶಕ ಕರ್ನಾಟಕದ ಯುವ ಜನರನ್ನ ಎಚ್ಚರವಾಗಿಟ್ಟಿದ್ರು. ಒಂದು ರೀತಿ ಲಂಕೇಶರ ಮುಂದುವರಿಕೆ ಗೌರಿ” ಎಂದರು.

“ಆಕೆಯನ್ನ ಕೊಂದಿದ್ದೇಕೆ?”

“ಸನಾತನವಾದಿಗಳು ಆಕೆಯ ವಿಚಾರಧಾರೆಯನ್ನ ದ್ವೇಷ ಮಾಡಿದ್ರು. ಹಿಂದೂ ಧರ್ಮದ ಜಾತೀಯತೆ ಅಸ್ಪೃಶ್ಯತೆಯನ್ನು ಟೀಕೆ ಮಾಡಿ ಮೂಲಭೂತವಾದಿಗಳನ್ನ ಹೀಯಾಳಿಸಿದ್ರಿಂದ ಅವರೆಲ್ಲಾ ಸಂಚು ಮಾಡಿ ಹತ್ಯೆ ಮಾಡಿದ್ರು. ಇದರಲ್ಲಿ ಸಂಘ ಪರಿವಾರದ ಕೈವಾಡಗಳು ಇದ್ದವು”.

ಇದನ್ನ ಗಂಭೀರವಾಗಿ ಕೇಳುತ್ತ ನಡೆದ ರಾಹುಲ್ ರಸ್ತೆಯ ಎಡಬಲದಲ್ಲಿ ಜಮಾಯಿಸಿದ್ದ ಜನಗಳ ಕಡೆ ಕೈ ಬೀಸುವುದನ್ನ ನಿಲ್ಲಿಸಿದ್ದರು. ಆಗ ಎಚ್ಚರಿಸಿದ ಚಲುವರಾಯಸ್ವಮಿ “ಸಾರ್ ಜನಗಳ ಕಡೆ ನೋಡಿ” ಎಂದರು. ನಿಜಕ್ಕೂ ಇದು ಬಹುಮುಖ್ಯವಾದ ಕೆಲಸ. ರಾಹುಲ್ ಗಾಂಧಿಯನ್ನ ನೋಡಲು ಬಂದವರ ಕಡೆಗೆ ಕೈ ಬೀಸುವುದು ಮುಖ್ಯವಾದದ್ದು. ಅದನ್ನು ಮಾಡದೆ ಸುಮ್ಮನೆ ನಡೆದರೆ ಆಗುವ ಅನಾಹುತಗಳೇ ಬೇರೆ; ಅದರ ಪರಿಣಾಮವನ್ನ ಚಲುವರಾಯಸ್ವಾಮಿ ಹೊರಬೇಕಾಗುತ್ತದೆ. ಆದ್ದರಿಂದ ನಾವು ಹಿಂದೆ ಸರಿಯಲು ಹವಣಿಸಿದವು. ಆಗ ರಾಹುಲ್ ಗಾಂಧಿ “ನಾನು ಕೇಳಿಸಿಕೊಳ್ತಿನಿ, ಮಾತನಾಡಿ” ಎಂದರು.

“ಕಾಂಗ್ರೆಸ್ ಪಾರ್ಟಿಯನ್ನ ಬಿಟ್ಟವರ ಬಗ್ಗೆ ಜನಗಳು ಏನಂತಾರೆ ಎಂದರು.”

“ಅವರೆಲ್ಲಾ ಸ್ಕ್ರ್ಯಾಪ್ ಮಾಲು ಸಾರ್, ನೋಡಿ ಎಸ್.ಎಂ.ಕೃಷ್ಣ ಕಾಂಗ್ರೆಸ್‌ನಿಂದ ಪ್ರಧಾನಿ ಹುದ್ದೆ ಬಿಟ್ಟು ಇನ್ನೆಲ್ಲಾ ಸ್ಥಾನಮಾನಗಳನ್ನ ಅನುಭವಿಸಿ ಈಗ ಬಿಜೆಪಿಯಲ್ಲಿದ್ದಾರೆ. ಅಲ್ಲಿ ಯಾವ ಗೌರವನೂ ಇಲ್ಲ”.

“ಅದರೂ ಬಿಜೆಪಿಗೋದದ್ದು ಅವರ ಪ್ರಾಬ್ಲಂ ಅಷ್ಟೆ. ಅದು ಬಿಜೆಪಿ ಪ್ರಾಬ್ಲಂ ಅಲ್ಲ. ನಿಮ್ಮ ಕಾಲಂನ ಜಿಸ್ಟ್ ಹೇಳಿ ಮತ್ತೆ ಮೂರು ಎಪಿಸೋಡ್‌ಗಳನ್ನ ಟ್ರಾನ್ಸ್‌ಲೇಟ್ ಮಾಡಿಕೊಡಿ” ಎಂದರು.

“ಅದು ಟ್ವಂಟಿ ಇಯರ್‍ಸ್ ಬರೆದ ಕಾಲಂ. ಅದರಲ್ಲಿ ಮೂರು ಹುಡುಕದು ಕಷ್ಟ. ಆದ್ರು ಪಟೇಲ್ರು, ದೇವೆಗೌಡ್ರು, ಸೋನಿಯಾಗಾಂಧಿ ಎಸ್‌ಎಂ ಕೃಷ್ಣರ ಮೇಲೆ ಬರೆದಿರೋದನ್ನ ಟ್ರಾನ್ಸ್ಲೇಟ್ ಮಾಡಿಕೊಡ್ತೀವಿ ಸಾರ್” ಎಂದೆ. ಅದನ್ನು ತಲುಪಿಸುವ ಜವಾಬ್ದಾರಿಯನ್ನು ರಮೇಶ್ ಗೌಡರಿಗೆ ವಹಿಸಿದರು. ಆಗ ಅವರ ಕೈಲಿದ್ದ ನೀರಿನ ಬಾಟಲಿಯನ್ನು ನನಗೆ ಕೊಟ್ಟರು. ಬಿರಿಡಿ ಬಿಚ್ಚಿ ಕುಡಿದರೆ ಅದು ಎಳನೀರಾಗಿತ್ತು. ನನ್ನ ಪಕ್ಕ ಇದ್ದ ಸೆಕ್ಯುರಿಟಿ ಅದನ್ನ ಕಸಿದುಕೊಂಡ. ರಾಹುಲ್ ಗಾಂಧಿ ವಿಶೇಷ ಅಂದರೆ ನಾವು ಉತ್ತರಿಸಿದ ಕೂಡಲೇ ಅವರ ಪ್ರಶ್ನೆ ರೆಡಿಯಿರುತ್ತಿತ್ತು. ಆ ಪ್ರಶ್ನೆಗಳಿಗೂ ಕೂಡ ತಡಬಡಾಯಿಸುತ್ತಿದ್ದರು.

ರಾಹುಲ್ ಗಾಂಧಿ ಎರಡೂ ಬದಿ ನೋಡುತ್ತಾ ಜನಸಾಗರದತ್ತ ಕೈಬೀಸಬೇಕಾದ್ದರಿಂದ ನಾವು ಹಿಂದೆ ಸರಿದುಕೊಂಡೆವು. ಅನಿರೀಕ್ಷಿತವಾಗಿ ಸಿಕ್ಕ ನಮ್ಮ ಅವಕಾಶದ ಗುಂಗಿನಲ್ಲೇ ನಡೆದು ಬರುತ್ತಿರಬೇಕಾದರೆ ಕಡ್ಲೆ ಪಾಯಸದಲ್ಲಿ ಜಿರಲೆ ಸಿಕ್ಕಿದಂತೆ ಫ್ಲೆಕ್ಸ್ ಒಂದರಲ್ಲಿ ಸಾವರ್ಕರ್‌ನ ಫೋಟೋ ಕಾಣಿಸಬೇಕೆ! ಇದು ಕುಚೇಷ್ಟೆ ಅನ್ನಿಸಿತು. ಏಕೆಂದರೆ ಈ ಬಿಜೆಪಿಗಳು ಸಂಚು ರೂಪಿಸುವಲ್ಲಿ ಜಗದ್ವಿಖ್ಯಾತರು. ಇತಿಹಾಸ ಕಂಡರಿಯದಷ್ಟು ಜನಸ್ತೋಮ ಸಾಗುವ ಜಾಗದಲ್ಲಿ ಸಾವರ್ಕರ್ ಫೋಟೋ ಹಾಕುವುದು ದುಸ್ತರ! ಅದಕ್ಕೆ ಗುಳ್ಳೆ ನರಿ ತಲೆಯೋಡಿಸುವುದೇ ಉತ್ತಮ ಎಂದು ಚಿಂತಿಸಿ ಡಿ.ಕೆ ಶಿವಕುಮಾರ್ ಮತ್ತು ಸಿದ್ಧರಾಮಯ್ಯನವರ ಫೋಟೊ ನಡುವೆ ಸಾವರ್ಕರ್ ಚಿತ್ರಹಾಕಿ ಫ್ಲೆಕ್ಸ್ ಕಟ್ಟಿವೆ. ನಾಲ್ಕೈದು ಜಾಗದಲ್ಲಿ ಇಂತಹ ಫ್ಲೆಕ್ಸುಗಳಿದ್ದವು. ಆಶ್ಚರ್ಯವೆಂದರೆ ನದಿಯಂತೆ ಸಾಗುತ್ತಿದ್ದ ಜನಸ್ತೋಮ ಆಕಡೆ ತಿರುಗಿಯೂ ನೋಡಲಿಲ್ಲ. ನೋಡಿದರೂ ಆತ ಯಾರೋ ದಿವಂಗತ ಕಾಂಗ್ರೆಸ್ಸಿಗನೆಂದು ಭಾವಿಸಿರಬಹುದು! ಆದರೆ ಕಿಡಿಗೇಡಿ ಪತ್ರಕರ್ತರು ಇಂತಹ ಫ್ಲೆಕ್ಸ್ ಫೋಟೋ ತೆಗೆದು ಜೋಡೋ ಯಾತ್ರೆಯಲ್ಲಿ ಗೋಡ್ಸೆ ಫೋಟೋ ಎಂದು ವಾಟ್ಸಾಪ್ ಮಾಡಿದ್ದವು. ’ಏ ಅದು ಗೋಡ್ಸೆ ಫೋಟೋ ಅಲ್ಲ ಸಾವರ್ಕರ್‌ದು ಎಂದು ನಾವೇ ತಿದ್ದಿ ಸರಿಮಾಡಬೇಕಾಯ್ತು. ನಾವೆಲ್ಲಾ ನಮ್ಮ ಮುಂದಿರುವ ಬದುಕನ್ನ ಅರಸುತ್ತಾ ಬಾಳುವೆ ನಡೆಸುತ್ತಿರಬೇಕಾದರೆ, ಮತಾಂಧರು ಸಂಚು ರೂಪಿಸುತ್ತಾ ಕುಳಿತಿರುತ್ತಾರೆ. ಅವರೆ ಈ ಜಾಥಾದೊಳಗೆ ನಕ್ಸಲೈಟರಿದ್ದಾರೆ, ಇದರೊಳಗೆ ಪಾಕಿಸ್ತಾನಕ್ಕೆ ಜೈಕಾರ ಹಾಕಿದ ಘೋಷಣೆ ಕೇಳಿ ಬಂದಿದೆ ಎಂಬ ಸುಳ್ಳುಕಂತೆ ಕಟ್ಟುತ್ತಾ ಕುಳಿತಿರುವವರು. ಕೆಲವೊಮ್ಮೆ ಛದ್ಮವೇಶವದಲ್ಲಿ ಅವರು ಪತ್ರಕರ್ತರಾಗಿಯೂ ಜೀವಿಸುತ್ತಿರುತ್ತಾರೆ.

ಈ ಯಾತ್ರೆಯಲ್ಲಿ ಬಹಳ ಅಪರೂಪದ ದೃಶ್ಯಗಳಿದ್ದವು. ಕನ್ಹಯ್ಯ ಕುಮಾರ್ ತನ್ನದೇ ಟೀಮಿನ ಜೊತೆಗೆ ನಡೆಯುತ್ತಿದ್ದರು. ಉತ್ತರ ಭಾರತದಲ್ಲಿ ಲೋಹಿಯಾ ನಂತರ ಕಾಣಿಸಿಕೊಂಡ ತೀಕ್ಷ್ಣಮತಿ ಯೋಗೇಂದ್ರ ಯಾದವ್ ಅವರು ದೆಹಲಿಯಲ್ಲಿ ಒಂದು ವರ್ಷ ನಡೆದ ರೈತರ ಪ್ರತಿಭಟನೆಯನ್ನ ಮುನ್ನಡೆಸಲು ತಮ್ಮೆಲ್ಲಾ ಸಹಕಾರ ಧಾರೆಯೆರೆದಿದ್ದವರು. ಶಿವಮೊಗ್ಗಕ್ಕೂ ಎರಡು ಮೂರು ಬಾರಿ ಬಂದಿದ್ದರು. ಅವರ ಹೋರಾಟ ಮತ್ತು ವಿದ್ವತ್ತಿನ ಬಗ್ಗೆ ಮೊದಲೇ ಗೊತ್ತಿದ್ದ ರಮೇಶಗೌಡ ತಮ್ಮ ಮನೆಯಲ್ಲಿ ಉಳಿದುಕೊಳ್ಳಲು ಯೋಗೇಂದ್ರ ಯಾದವ್ ಅವರನ್ನು ವಿನಂತಿಸಿಕೊಂಡರು. ಯಾದವ್ ಒಪ್ಪಿಕೊಂಡು ಉಳಿದಿದ್ದರು. ರಮೇಶ್ ಗೌಡರ ಮಕ್ಕಳಾದ ಭೂಮಿ ಮತ್ತು ಭಗತ್, ಕನ್ಹಯ್ಯ ಕುಮಾರ್ ಜೊತೆ ಮಾತನಾಡಿ ಫೋಟೋ ತೆಗೆಸಿಕೊಳ್ಳಬೇಕೆಂಬ ಮನವಿ ಮಾಡಿದಾಗ ಯಾದವರಿಗೆ ಆಶ್ಚರ್ಯವಾಯ್ತು. ಜಾಥಾದ ಮುಂದಾಳು ರಾಹುಲ್ ಗಾಂಧಿ ಬಿಟ್ಟು ಕನ್ಹಯ್ಯ ಕುಮಾರ್ ಜೊತೆಗೆ ಫೋಟೋ ಬೇಕೆಂದು ಕೇಳಿದ್ದಕ್ಕೆ. ಮರುದಿನ ಕನ್ಹಯ್ಯ ಕುಮಾರನನ್ನು ತೋರಿಸುವುದಾಗಿ ಹೇಳಿದರು. ಶಿವಮೊಗ್ಗದಿಂದ ಬಂದಿದ್ದ ಬಿ.ಎಲ್ ರಾಜು ನನ್ನ ಒಂದು ಕಟ್ಟೆ ಪುರಾಣವನ್ನು ಇಂಗ್ಲಿಷ್‌ಗೆ ತರ್ಜುಮೆ ಮಾಡಿದ್ದರು. “ಸೋನಿಯಾ ಗಾಂಧಿಗೆ ಯಾರಾರ ಬೋದ್ರೆ ಬರ್ಲಲ್ಲೇ ವಡಿತಿನಿ” ಎಂದು 1999ರಲ್ಲಿ ಬರೆದ ಆ ಲೇಖನ ವರ್ತಮಾನಕ್ಕೂ ಸೂಕ್ತ ಎಂದು ಯೋಚಿಸಿ ರಾಹುಲ್ ಗಾಂಧಿಗೆ ತಲುಪಿಸುವಂತೆ ಹೇಳಿ ಯೋಗೇಂದ್ರ ಯಾದವರ ಕೈಗೆ ಕೊಟ್ಟೆವು.

ರಾಹುಲ್ ಗಾಂಧಿ ಭೇಟಿಯ ಲಿಸ್ಟಿನಲ್ಲಿ ನಾಗತಿಹಳ್ಳಿ ಚಂದ್ರಶೇಖರನ ಹೆಸರೂ ಇದ್ದುದದಿಂದ ಚಂದ್ರಶೇಖರ ಬೆಂಗಳೂರಿನಿಂದ ಬಂದು ಭೇಟಿಮಾಡಿದರು. ರಾಹುಲ್ ಗಾಂಧಿ ಉಳಿದುಕೊಂಡ ಜಾಗದಲ್ಲಿ ತುಂಬಾ ಸೆಕ್ಯುರಿಟಿ ಇರುವುದರಿಂದ ಭೇಟಿಗಳು ಅಷ್ಟು ಸುಲಭವಲ್ಲ. ಆದರೂ ಕಷ್ಟಪಟ್ಟು ಭೇಟಿ ದೊರಕಿಸಿಕೊಂಡರು. ಕವಿತಾ ಲಂಕೇಶರನ್ನು ರಾಹುಲ್ ಗಾಂಧಿಗೆ ಭೇಟಿಮಾಡಿಸುವ ಜವಾಬ್ದಾರಿಯನ್ನು ಕನ್ಹಯ್ಯ ಕುಮಾರ್ ವಹಿಸಿಕೊಂಡಿದ್ದರು. ಕವಿತಾಗೆ ಫೋನ್ ಮಾಡಿದಾಗ ’ಭೇಟಿಮಾಡಿ ಮಾತಾಡುವಂತದ್ದೇನಿಲ್ಲ. ಆದರೆ ನಾವು ಬಂದು ಕೆಲವು ಕಿಲೋಮೀಟರ್ ನಡೆಯಬೇಕಿದೆ’ ಎಂದರು. ರಾಹುಲ್ ಗಾಂಧಿಯವರ ಜತೆಗೆ ಕವಿತಾ ಮತ್ತು ಇಂದಿರಾ ಲಂಕೇಶ್ ಹೆಜ್ಜೆ ಹಾಕಿದ ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಶೇರ್ ಆಗಿದ್ದನ್ನು ನೀವೆಲ್ಲಾ ನೋಡಿರುತ್ತೀರಿ.

ಅದು ನಿಜ. ಈ ಶತಮಾನದ ಐತಿಹಾಸಿಕ ನಡಿಗೆಯಲ್ಲಿ ನಾವು ಭಾಗವಹಿಸಿದ್ದೆವು ಎಂಬ ಮಾತು ನಮ್ಮ ಬದುಕಿನಲ್ಲಿ ಮಹತ್ವದ ನೆನಪಾಗಿ ಉಳಿಯುವುದರಲ್ಲಿ ಸಂಶಯವಿಲ್ಲ. ಹಲವು ಉದಾತ್ತ ಮನಸ್ಸುಗಳು ಜಾಥಾದ ಮುಂಚೂಣಿ ಬಗ್ಗೆ ತಲೆಕೆಡಿಸಿಕೊಳ್ಳದೆ ತಮಗಾದಂತಹ ವೇಗದಲ್ಲಿ ನಡೆಯುತ್ತಿದ್ದರು. ನಾವು ನಡೆಯುವ ಅಗತ್ಯವಿಲ್ಲ ಎಂಬಂತೆ ರಸ್ತೆ ಬದಿಯಲ್ಲಿ ನಿಂತಿದ್ದ ಅಸಂಖ್ಯಾತ ಸ್ಥಳೀಯ ಜನರನ್ನು ನೋಡಿದೆ. ಜನಜಂಗುಳಿಯಲ್ಲಿ ನಡೆಯುವುದರಿಂದ ಎಷ್ಟು ದೂರ ಕ್ರಮಿಸಿದರೂ ಗೊತ್ತೇ ಆಗುವುದಿಲ್ಲ. ರಾತ್ರಿ ಆದಿ ಚುಂಚನಗಿರಿಯಲ್ಲಿ ಉಳಿದಿದ್ದ ರಾಹುಲ್ ಗಾಂಧಿಯವರು ಬೆಳಿಗ್ಗೆ ಏಳು ಗಂಟೆಗೆ ಹೊರಡುತ್ತಾರೆಂದು ತಿಳಿದುಕೊಂಡು ಸರಿಯಾದ ಸಮಯಕ್ಕೆ ಹೋದರೆ, ಆರೂವರೆಗೆ ಅವರು ಅಲ್ಲಿಂದ ನಿರ್ಗಮಿಸಿದ್ದರು. ನಾವು ಎಷ್ಟೇ ವೇಗವಾಗಿ ನಡೆಯಲು ಪ್ರಯತ್ನಿಸಿದರೂ, ರಾಹುಲ್ ಗಾಂಧಿ ಮತ್ತು ನಮ್ಮ ನಡುವೆ ಅರ್ಧಗಂಟೆ ದಾರಿ ಹಾಗೆಯೇ ಉಳಿಯುತ್ತಿತ್ತು. ಆದ್ದರಿಂದ ರಮೇಶ್ ಗೌಡರ ಮಕ್ಕಳಾದ ಭೂಮಿ-ಭಗತ್‌ರಿಗೆ ರಾಹುಲ್ ಗಾಂಧಿ ಮತ್ತು ಕನ್ಹಯ್ಯ ಕುಮಾರ್ ಭೇಟಿ ಮಾಡಿಸುವುದಕ್ಕೆ ಕಳುಹಿಸಿಕೊಟ್ಟು ನಾವು ನಡೆಯತೊಡಗಿದೆವು. ಯೋಗೇಂದ್ರ ಯಾದವ್ ಮಕ್ಕಳಿಗೆ ಕನ್ಹಯ್ಯರನ್ನು ಪರಿಚಯಿಸಿ ಆನಂತರ ನಮಗಾಗಿ ಕಾಯುತ್ತಿದ್ದರು. ಯೋಗೇಂದ್ರ ಯಾದವ್ ಸಮಾಜವಾದಿ ನಾಯಕ ಮತ್ತು ವಿದ್ವಾಂಸರು. ನಡಿಗೆಯಲ್ಲಿ ಅವರ ಉಪನ್ಯಾಸ ನಡೆದೇ ಇರುತ್ತದೆ. ಅವರು ಎತ್ತರದ ವ್ಯಕ್ತಿಯಾದ್ದರಿಂದ ಅವರು ಸಾಮಾನ್ಯವಾಗಿಯೇ ನಡೆದರೂ ನಾವು ಅವರ ವೇಗಕ್ಕೆ ಹೆಜ್ಜೆಹಾಕುವುದು ಕಷ್ಟ.

ಕುವೆಂಪುರವರ ’ಸತ್ತಂತಿಹರನ ಬಡಿದೆಚ್ಚರಿಸು’ ಎಂಬ ಸಾಲು ನೆನಪಿಸುವಂತೆ ತಿಂದುಂಡು ಸುಖವಾಗಿದ್ದ ಕಾಂಗ್ರೆಸ್ಸಿಗರು ಜಾಥಾ ಕಾರಣಕ್ಕೆ ಓಡುತ್ತಾ ನಡೆಯುತ್ತಿದ್ದಾರೆ. ನಾನು ರಾಹುಲ್ ಗಾಂಧಿ ಜೊತೆ ನಡೆಯುತ್ತಾ ಕೈಬೀಸಿದ್ದನ್ನು ಮಾಧ್ಯಮದಲ್ಲಿ ನೋಡಿದ್ದ ಗೆಳೆಯರೊಬ್ಬರು ಫೋನುಮಾಡಿ, “ಅದೇನು ಅಷ್ಟೊಂದು ಮಾತಾಡ್ತಿದ್ದಲ್ಲ, ನಿನಗೆ ಇಂಗ್ಲಿಷ್-ಹಿಂದಿ ಸರಿಯಾಗಿ ಬರಲ್ಲವಲ್ಲ” ಎಂದು ಕೇಳಿದರು. ಅದಕ್ಕೆ ನಾನು “ಅದೆ ನಾನು ಚಂದ್ರೆಗೌಡ ಅಂತ ಸಾರ್, ಮದಿವಾಗಿದ್ದಿನಿ. ಯರಡು ಮಕ್ಕಳವೆ. ಅವು ಮದಿವಾಗಿ ಅವುಕು ಮಕ್ಕಳವೆ. ಇದು ನನ್ನ ಸಾಧನೆ ಅಂತ ಹೇಳಿದೆ” ಎಂದೆ.

ಬಿ. ಚಂದ್ರೇಗೌಡ

ಬಿ. ಚಂದ್ರೇಗೌಡ
ಲಂಕೇಶ್‌ರ ಪತ್ರಿಕೆಯಲ್ಲಿ ಬಯಲುಸೀಮೆಯ ಕಟ್ಟೆ ಪುರಾಣದ ಮೂಲಕ ಕನ್ನಡಿಗರೆಲ್ಲರ ಗಮನಕ್ಕೆ ಬಂದ ಚಂದ್ರೇಗೌಡರು, ನಾಟಕಕಾರರು, ನಟರಷ್ಟೇ ಅಲ್ಲ ವಿಶಿಷ್ಟ ರಾಜಕೀಯ ನೋಟವುಳ್ಳವರೂ ಸಹಾ. ಕರ್ನಾಟಕದ ಸಾಂಸ್ಕೃತಿಕ ಹಾಗೂ ರಾಜಕೀಯ ಇತಿಹಾಸದ ಆಗುಹೋಗುಗಳು ಅವರಲ್ಲಿ ದಾಖಲಾಗಿರುವ ಬಗೆಯೂ ವಿಶಿಷ್ಟವೇ..


ಇದನ್ನೂ ಓದಿ: ಭಾರತ್‌ ಜೋಡೋ – ಹೃದಯ ಬೆಸೆಯುವ ಯಾತ್ರೆ: ಜಿ.ಪಿ.ಬಸವರಾಜು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ದೇವಾಲಯ ಪ್ರವೇಶಿಸಿದ ದಲಿತ ಯುವಕನಿಗೆ ಡಿಎಂಕೆ ಮುಖಂಡನಿಂದ ಬೆದರಿಕೆ; ವಿಡಿಯೊ ವೈರಲ್‌

0
ಹಿಂದೂ ಮತ್ತು ಧಾರ್ಮಿಕ ದತ್ತಿ ಇಲಾಖೆ (ಎಚ್‌ಆರ್ ಮತ್ತು ಸಿಇ) ನಿರ್ವಹಿಸುತ್ತಿರುವ ದೇವಸ್ಥಾನಕ್ಕೆ ಪ್ರವೇಶಿಸಿದ್ದಕ್ಕಾಗಿ ದಲಿತ ಯುವಕನನ್ನು ಡಿಎಂಕೆ ಒಕ್ಕೂಟದ ಕಾರ್ಯದರ್ಶಿಯೊಬ್ಬರು ನಿಂದಿಸಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ. ಪೊಲೀಸರ ಪ್ರಕಾರ, ತಮಿಳುನಾಡಿನ ತಿರುಮಲೈಗಿರಿ (ಸೇಲಂ ಜಿಲ್ಲೆ)ಯಲ್ಲಿರುವ...