Homeಮುಖಪುಟ'ನ್ಯಾಯಾಂಗದ ಸ್ವಾತಂತ್ರ್ಯಕ್ಕೆ ದೊಡ್ಡ ಅಪಾಯ': ಮಾಜಿ ನ್ಯಾಯಾಧೀಶರನ್ನು ರಾಜ್ಯಪಾಲರನ್ನಾಗಿಸಿದ್ದಕ್ಕೆ ಕಾಂಗ್ರೆಸ್ ಪ್ರತಿಕ್ರಿಯೆ

‘ನ್ಯಾಯಾಂಗದ ಸ್ವಾತಂತ್ರ್ಯಕ್ಕೆ ದೊಡ್ಡ ಅಪಾಯ’: ಮಾಜಿ ನ್ಯಾಯಾಧೀಶರನ್ನು ರಾಜ್ಯಪಾಲರನ್ನಾಗಿಸಿದ್ದಕ್ಕೆ ಕಾಂಗ್ರೆಸ್ ಪ್ರತಿಕ್ರಿಯೆ

- Advertisement -
- Advertisement -

ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಮೂರ್ತಿ ಎಸ್‌ ಅಬ್ದುಲ್‌ ನಜೀರ್‌ ಅವರನ್ನು ಆಂಧ್ರಪ್ರದೇಶದ ಗವರ್ನರ್‌ ಆಗಿ ನೇಮಕ ಮಾಡಿರುವುದನ್ನು ಕಾಂಗ್ರೆಸ್‌ ಭಾನುವಾರ ಟೀಕಿಸಿದ್ದು, ಇದು ನ್ಯಾಯಾಂಗದ ಸ್ವಾತಂತ್ರ್ಯಕ್ಕೆ ದೊಡ್ಡ ಅಪಾಯ ಎಂದು ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.

ಎಸ್‌ ಅಬ್ದುಲ್‌ ನಜೀರ್‌ ಅವರು ಜನವರಿ 4 ರಂದು ಸುಪ್ರೀಂ ಕೋರ್ಟ್‌ನಿಂದ ನಿವೃತ್ತರಾಗಿದ್ದು, ಒಂದು ತಿಂಗಳ ನಂತರ ನಜೀರ್ ಅವರನ್ನು ಗವರ್ನರ್‌ ಹುದ್ದೆಗೆ ನೇಮಿಸಲಾಯಿತು. ಇವರು ಬಾಬರಿ ಮಸೀದಿಯ ವಿವಾದಿತ ಸ್ಥಳದಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಅವಕಾಶ ನೀಡುವ ಅಯೋಧ್ಯೆ ಭೂ ವಿವಾದ ಪ್ರಕರಣದಲ್ಲಿ ತೀರ್ಪು ನೀಡಿದ ಸಂವಿಧಾನ ಪೀಠದ ಭಾಗವಾಗಿದ್ದರು. ಜನವರಿ 2 ರಂದು ಕೇಂದ್ರದ 2016ರ ನೋಟು ಅಮಾನ್ಯೀಕರಣದ ಪ್ರಕ್ರಿಯೆಯನ್ನು ಎತ್ತಿಹಿಡಿದ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ಪೀಠದ ಭಾಗವಾಗಿ ಮಾಜಿ ನ್ಯಾಯಾಧೀಶರು ಕೂಡ ಇದ್ದರು.

ಬಾಬ್ರಿ ಮಸೀದಿ ದ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಮಮಂದಿರದ ಪರವಾಗಿ ತೀರ್ಪು ನೀಡಿದ ಐವರು ನ್ಯಾಯಮೂರ್ತಿಗಳಲ್ಲಿ ಈಗಾಗಲೇ ಮೋದಿ ಸರ್ಕಾರ, ನ್ಯಾ. ರಂಜನ್ ಗೊಗೋಯ್ ಅವರನ್ನು ನಿವೃತ್ತಿಯಾದ ನಾಲ್ಕೇ ತಿಂಗಳಲ್ಲಿ- 2020ರ ಮಾರ್ಚ್‌ನಲ್ಲಿ ರಾಜ್ಯಸಭಾ ಸದಸ್ಯರನ್ನಾಗಿ ನೇಮಿಸಿತು. ನ್ಯಾ. ಅಶೋಕ್ ಭೂಷಣ್ ಅವರನ್ನು ನಿವೃತ್ತಿಯಾದ ನಾಲ್ಕೇ ತಿಂಗಳಲ್ಲಿ ಮೋದಿ ಸರ್ಕಾರ ದೇಶದ ಅತ್ಯಂತ ದೊಡ್ಡ ಕಾರ್ಪೊರೇಟ್‌ಗಳ ಕೋಟ್ಯಂತರ ಮೌಲ್ಯದ ವ್ಯಾಜ್ಯಗಳನ್ನು ಬಗೆಹರಿಸುವ National Company Law Appellate Tribunalನ ಅಧ್ಯಕ್ಷರನ್ನಾಗಿ 2021ರ ನವಂಬರ್‌ನಲ್ಲಿ ನೇಮಿಸಿತು. ಜಸ್ಟೀಸ್ ಬೋಬ್ಡೆ ಅವರು ಮುಖ್ಯ ನ್ಯಾಯಾಧೀಶರಾಗಿ ನಿವೃತ್ತರಾದ ಮೇಲೆ ನಾಗಪುರದ ಪರವಾಗಿ ಸಿಕ್ಕಾಪಟ್ಟೆ ಬ್ಯಾಟಿಂಗ್ ಮಾಡುತ್ತಿದ್ದಾರೆ. ಹೀಗಾಗಿ ಪ್ರಾಯಶಃ ದೇಶಕ್ಕೆ ಇನ್ನೂ ದೊಡ್ಡದಾದ ಆಶ್ಚರ್ಯ ಕಾದಿರಬಹುದು. ಇದೀಗ ಎಸ್‌ ಅಬ್ದುಲ್‌ ನಜೀರ್‌ ಅವರನ್ನು ಆಂಧ್ರಪ್ರದೇಶದ ಗವರ್ನರ್‌ ಆಗಿ ನೇಮಕ ಮಾಡಿದೆ.

ಇದನ್ನೂ ಓದಿ: ಕೇಂದ್ರದ ಪರ ತೀರ್ಪು ಕೊಟ್ಟ ನ್ಯಾಯಮೂರ್ತಿಗಳಿಗೆ ನಿವೃತ್ತಿಯ ನಂತರ ಲಾಭವಾಗಿದೆಯೇ?

ಈ ಬಗ್ಗೆ ಭಾನುವಾರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು, ಮಾಜಿ ಕೇಂದ್ರ ಸಚಿವ ಮತ್ತು ಭಾರತೀಯ ಜನತಾ ಪಕ್ಷದ ಅರುಣ್ ಜೇಟ್ಲಿ ಅವರ ವೀಡಿಯೊವನ್ನು ಹಂಚಿಕೊಂಡಿದ್ದು,ಈ ವಿಡಿಯೋದಲ್ಲಿ ”ನಿವೃತ್ತಿ ಪೂರ್ವ ತೀರ್ಪುಗಳು ನಿವೃತ್ತಿಯ ನಂತರದ ಉದ್ಯೋಗಗಳ ಬಯಕೆಯಿಂದ ಪ್ರಭಾವಿತವಾಗಿವೆ” ಎಂದು ಹೇಳಿದ್ದಾರೆ. ಕಳೆದ 3-4 ವರ್ಷಗಳಲ್ಲಿ ಇದಕ್ಕೆ ಸಾಕಷ್ಟು ಪುರಾವೆಗಳು ಖಚಿತವಾಗಿ” ಎಂದು ವೀಡಿಯೊ ಜೊತೆಗೆ ರಮೇಶ್ ಟ್ವೀಟ್ ಮಾಡಿದ್ದಾರೆ.

ಕಾಂಗ್ರೆಸ್ ವಕ್ತಾರ ಅಭಿಷೇಕ್ ಮನು ಸಿಂಘ್ವಿ ಕೂಡ ಪತ್ರಿಕಾಗೋಷ್ಠಿಯಲ್ಲಿ, ಜೇಟ್ಲಿ ಅವರ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಇಂತಹ ನೇಮಕಾತಿಗಳು ಈ ಹಿಂದೆ ಹಲವಾರು ಬಾರಿ ನಡೆದಿವೆ ಮತ್ತು ಸ್ವೀಕಾರಾರ್ಹವಾಗಿವೆ ಎಂಬ ವಾದಗಳನ್ನು ಅವರು ತಳ್ಳಿಹಾಕಿದರು ಎಂದು ಪಿಟಿಐ ವರದಿ ಮಾಡಿದೆ.

”ನಾವು ಈ ವ್ಯಕ್ತಿಗಳ ಬಗ್ಗೆ ಮಾತನಾಡುತ್ತಿಲ್ಲ, ವೈಯಕ್ತಿಕವಾಗಿ ಈ ವ್ಯಕ್ತಿಯ [ನಜೀರ್] ಬಗ್ಗೆ ನನಗೆ ತುಂಬಾ ಗೌರವವಿದೆ. ನನಗೆ ಅವರ ಬಗ್ಗೆ ತಿಳಿದಿದೆ. ತಾತ್ವಿಕವಾಗಿ ನಾವು ಅದನ್ನು ವಿರೋಧಿಸುತ್ತೇವೆ, ಇದು ನ್ಯಾಯಾಂಗದ ಸ್ವಾತಂತ್ರ್ಯಕ್ಕೆ ದೊಡ್ಡ ಬೆದರಿಕೆ ಎಂದು ನಾವು ನಂಬುತ್ತೇವೆ ಎಂದು ಹೇಳಿದ್ದಾರೆ.

ಶಿವಸೇನೆಯ ಸಂಸದೆ ಪ್ರಿಯಾಂಕಾ ಚತುರ್ವೇದಿ ಟ್ವೀಟ್ ಮಾಡಿದ್ದು, ”ಗೌರವಾನ್ವಿತ ನ್ಯಾಯಾಧೀಶರು ತಮ್ಮ ನಿವೃತ್ತಿಯ ನಂತರ ಸರ್ಕಾರದಲ್ಲಿ ನಮಗೆ ಯಾವ ಹುದ್ದೆ ಸಿಗಬಹುದು ಎಂದು ಯೋಚಿಸುತ್ತಾರೋ ಅದರಂತೆ ಗೌರವಾನ್ವಿತ ನ್ಯಾಯಾಲಯಗಳು ಕಾರ್ಯನಿರ್ವಹಿಸಲು ಪ್ರಾರಂಭಿಸಿತ್ತವೆ. ಮುಂದೆ ನಾವೇ ಮಹಾನ್ ಬನಾನಾ ರಿಪಬ್ಲಿಕ್ ಎಂದು ಘೋಷಿಸಿಕೊಳ್ಳಬಹುದು.”ಎಂದು ಹೇಳಿದ್ದಾರೆ.

ನಿವೃತ್ತಿಯೋತ್ತರ ನ್ಯಾಯಮೂರ್ತಿಗಳ ಬದುಕಿನ ಕುರಿತು ಅಧ್ಯಯನ ಕೂಡ ಆಗಿದೆ. ”2004ರಿಂದ 2014ರ ನಡುವಿನ ಅವಧಿಯನ್ನು ಮುಖ್ಯವಾಗಿಟ್ಟುಕೊಂಡು ಸಿಂಗಾಪುರ ವಿಶ್ವವಿದ್ಯಾನಿಲಯ ಸಂಶೋಧನೆಯೊಂದನ್ನು ಮಾಡಿತು. ಕೇಂದ್ರ ಸರ್ಕಾರ ಪಾರ್ಟಿಯಾಗಿದ್ದ ಪ್ರಕರಣಗಳ ಪೈಕಿ ಸರ್ಕಾರದ ಪರ ತೀರ್ಪು ನೀಡಿದ ನ್ಯಾಯಮೂರ್ತಿಗಳಿಗೆ ನಿವೃತ್ತಿಯ ನಂತರ ಯಾವುದಾದರೂ ಲಾಭವಾಗಿದೆಯೇ ಎಂಬುದನ್ನು ಈ ಸಂಶೋಧನೆ ಶೋಧಿಸಿತು. ಸುಮಾರು 2,500 ತೀರ್ಪುಗಳನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಕೇಂದ್ರದ ಪರ ತೀರ್ಪು ಕೊಟ್ಟ ಶೇ. 92 ನ್ಯಾಯಮೂರ್ತಿಗಳು ನಿವೃತ್ತಿಯ ನಂತರ ಫಲಾನುಭವಿಗಳಾಗಿದ್ದಾರೆ” ಎಂದು ವರದಿ ಹೇಳಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read