Homeಮುಖಪುಟಬಯೋಪಿಕ್ ವಿವಾದ: '800' ಚಿತ್ರ ಕೈಬಿಡುವಂತೆ ವಿಜಯ್ ಸೇತುಪತಿಗೆ ಪತ್ರ ಬರೆದ ಮುತ್ತಯ್ಯ ಮುರುಳೀಧರನ್!

ಬಯೋಪಿಕ್ ವಿವಾದ: ‘800’ ಚಿತ್ರ ಕೈಬಿಡುವಂತೆ ವಿಜಯ್ ಸೇತುಪತಿಗೆ ಪತ್ರ ಬರೆದ ಮುತ್ತಯ್ಯ ಮುರುಳೀಧರನ್!

ಒಬ್ಬ ಉತ್ತಮ ಕಲಾವಿದನ ಭವಿಷ್ಯ ಈ ಚಿತ್ರದಿಂದ ಹಾಳಾಗುವುದು ಬೇಡ ಎಂಬ ಕಾರಣಕ್ಕೆ ಸೇತುಪತಿ ಅವರನ್ನು ಈ ಚಿತ್ರದಿಂದ ಹೊರಗುಳಿಯುವಂತೆ ಕೇಳಿಕೊಳ್ಳುತ್ತಿದ್ದೇನೆ ಎಂದು ಮುರಳೀಧರನ್ ತಿಳಿಸಿದ್ದಾರೆ.

- Advertisement -
- Advertisement -

ಮುತ್ತಯ್ಯ ಮುರುಳೀಧರನ್ ಜೀವನ ಚರಿತ್ರೆ ಆಧಾರಿತ ಚಲನಚಿತ್ರ “800” ಕುರಿತು ತಮಿಳುನಾಡಿನಾಡಿನಲ್ಲಿ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ, ಮುಖ್ಯಪಾತ್ರಧಾರಿಯಾಗಿ ಅಭಿನಯಿಸಿರುವ ನಟ ವಿಜಯ್ ಸೇತುಪತಿಗೆ ಪತ್ರಬರೆದಿರುವ ಮುತ್ತಯ್ಯ ಮುರುಳೀಧರನ್, ಈ ಚಿತ್ರದಿಂದ ಹೊರಗುಳಿಯುವಂತೆ ಅವರನ್ನು ಕೇಳಿಕೊಂಡಿದ್ದಾರೆ.

ಖ್ಯಾತ ಕ್ರಿಕೆಟ್ ಬೌಲರ್ ಶ್ರೀಲಂಕಾದ ಮುತ್ತಯ್ಯ ಮುರುಳೀಧರನ್ ಅವರ ಜೀವನಚರಿತ್ರೆ ಆಧಾರಿತ ಚಲನಚಿತ್ರ “800” ನಿರ್ಮಾಣವಾಗುತ್ತಿದ್ದು, ತಮಿಳಿನ ಪ್ರತಿಭಾವಂತ ನಟ ವಿಜಯ್ ಸೇತುಪತಿ ಮುತ್ತಯ್ಯ ಮುರುಳೀಧರನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದು ವಿಜಯ್ ಸೇತುಪತಿ ಮತ್ತು ಮುತ್ತಯ್ಯ ಮುರುಳೀಧರನ್ ಅಭಿಮಾನಿಗಳ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿತ್ತು.

ಆದರೆ, ಇದರ ನಡುವೆಯೇ ಕೆಲವರು ಇದನ್ನು ವಿರೋಧಿಸಿ, ವಿಜಯ್ ಸೇತುಪತಿ ಈ ಸಿನಿಮಾವನ್ನು ಒಪ್ಪಿಕೊಂಡಿರುವುದಕ್ಕೆ, ಅವರನ್ನು ಮತ್ತು ಈ ಸಿನಿಮಾವನ್ನು ಬಹಿಷ್ಕರಿಸಬೇಕು ಎಂಬ ಅಭಿಯಾನವನ್ನು ಕೈಗೊಂಡಿದ್ದರು. ಹಾಗಾಗಿ ಈ ಚಿತ್ರಕ್ಕೆ ತಮಿಳುನಾಡಿನ ಹಲವೆಡೆ ವಿರೋಧ ವ್ಯಕ್ತವಾಗಿತ್ತು.

ಇದರ ಪರಿಣಾಮ, ಇಂದು ಸ್ವತಃ ಪತ್ರಬರೆದಿರುವ ಮಾಜಿ ಕ್ರಿಕೆಟಿಗ, “ನನ್ನ ಜೀವನ ಚರಿತ್ರೆಯಾಧಾರಿತ ಚಿತ್ರ ತಮಿಳಿನಲ್ಲಿ ಸಿದ್ಧವಾಗುತ್ತಿದ್ದು, ಇದಕ್ಕೆ ತಮಿಳುನಾಡಿನಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಜೊತೆಗೆ ಈ ಸಿನಿಮಾವನ್ನು ಕೈಬಿಡುವಂತೆ ವಿಜಯ್ ಸೇತುಪತಿಗೆ ತೀವ್ರ ಒತ್ತಡ ಬರುತ್ತಿರುವುದನ್ನು ಗಮನಿಸಿ ಈ ನಿರ್ಧಾರಕ್ಕೆ ಬಂದಿದ್ದೇನೆ. ಜೊತೆಗೆ ತಮಿಳು ಚಲನಚಿತ್ರದಲ್ಲಿ ಒಬ್ಬ ಉತ್ತಮ ಕಲಾವಿದನ ಭವಿಷ್ಯ ಇದರಿಂದ ಹಾಳಾಗುವುದು ಬೇಡ ಎಂಬ ಕಾರಣಕ್ಕೆ ಅವರನ್ನು ಈ ಚಿತ್ರದಿಂದ ಹೊರಗುಳಿಯುವಂತೆ ಕೇಳಿಕೊಳ್ಳುತ್ತಿದ್ದೇನೆ” ಎಂದು ಹೇಳಿದ್ದಾರೆ.

“ಪ್ರತಿ ಬಾರಿಯೂ ಇಂತಹ ತಡೆಗಳನ್ನು ಎದುರಿಸಿಯೇ ಇಂದು ಈ ಮಟ್ಟಕ್ಕೆ ಬೆಳೆದಿದ್ದೇನೆ. ಭವಿಷ್ಯದ ಪೀಳಿಗೆಗೆ ಮತ್ತು ಕ್ರಿಕೆಟ್ ಆಡಬಯಸುವ ಯುವಕರಿಗೆ ಸ್ಪೂರ್ತಿಯಾಗಲೆಂದೇ ನನ್ನ ಜೀವನ ಚರಿತ್ರೆಯನ್ನು ಚಿತ್ರವಾಗಿಸಲು ಸಮ್ಮತಿಸಿದ್ದೆ. ಆದರೆ ಈಗ ಅದಕ್ಕೂ ತೊಡಕು ಉಂಟಾಗುತ್ತಿದೆ. ಆದರೆ ಈ ಸಿನಿಮಾವನ್ನು ಮುಂದಿನ ಜನಾಂಗಕ್ಕೆ ಸ್ಪೂರ್ತಿಯಾಗುವಂತೆ ತಲುಪಿಸುವುದಾಗಿ ನಿರ್ಮಾಪಕರು ದೃಢವಾದ ಆಶ್ವಾಸನೆಯನ್ನು ನೀಡಿದ್ದಕ್ಕಾಗಿ ಅವರಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ. ಈ ವಿವಾದ ಏರ್ಪಟ್ಟಾಗಿನಿಂದ ನನಗೆ ಬೆಂಬಲ ನೀಡಿದ ಪತ್ರಿಕೋದ್ಯಮಕ್ಕೂ, ಗಣ್ಯರಿಗೂ, ಅಭಿಮಾನಿಗಳಿಗೂ ಧನ್ಯವಾದಗಳನ್ನು ತಿಳಿಸುತ್ತೇನೆ” ಎಂದು ಬರೆದಿದ್ದಾರೆ.

ಇದನ್ನೂ ಓದಿ: ಮುತ್ತಯ್ಯ ಮುರುಳೀಧರನ್ ಪಾತ್ರದಲ್ಲಿ ವಿಜಯ್ ಸೇತುಪತಿ: ‘800’ ಚಿತ್ರ ಬಾಯ್ಕಾಟ್ ಎಂದ ತಮಿಳಿಗರು!

ಇವರು ಬರೆದಿರುವ ಪತ್ರವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿರುವ ವಿಜಯ್ ಸೇತುಪತಿ, “ಧನ್ಯವಾದಗಳು, ನಮಸ್ಕಾರ” ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಮುತ್ತಯ್ಯ ಮರುಳೀಧರನ್ ಬಯೋಪಿಕ್: ತನ್ನ ವಿವಾದಾತ್ಮಕ ಹೇಳಿಕೆಗೆ ಸ್ಪಷ್ಟನೆ ನೀಡಿದ ಮಾಜಿ ಕ್ರಿಕೆಟಿಗ

ಮುತ್ತಯ್ಯ ಮುರುಳೀಧರನ್ ಶ್ರೀಲಂಕಾದಲ್ಲಿನ ಮುಗ್ಧ ತಮಿಳರ ಸಾವನ್ನು ಸಮರ್ಥಿಸಿಕೊಂಡಿದ್ದಾರೆ ಎಂಬ ಕಾರಣಕ್ಕೆ ತಮಿಳುನಾಡಿನಲ್ಲಿ ಇವರ ಬಯೋಪಿಕ್‌ಗೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಆದರೆ ಇದಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿರುವ ಮುತ್ತಯ್ಯ, “ಮುಗ್ಧರ ಹತ್ಯೆಯನ್ನು ನಾನು ಎಂದಿಗೂ ಸಮರ್ಥಿಸುವುದಿಲ್ಲ” ಎಂದಿದ್ದರು.

“ಇದುವರೆಗೂ ಯುದ್ಧದಲ್ಲಿ ಎರಡೂ ಕಡೆ ಸಂಭವಿಸಿದ್ದ ಪ್ರಾಣಹಾನಿಗಳು 2009 ರಲ್ಲಿ ಯುದ್ಧ ಕೊನೆಗೊಳ್ಳುವುದರ ಮೂಲಕ ನಿಂತಿದ್ದರಿಂದ ಈ ದಿನವನ್ನು ನನ್ನ ಜೀವನದಲ್ಲಿ ಅತ್ಯಂತ ಸಂತೋಷದಾಯಕ ದಿನ ಎಂದು ಹೇಳಿದ್ದೆ. ಆದರೆ ಈಗ ಈ ಹೇಳಿಕೆಯನ್ನು ತಿರುಚಿ, ತಮಿಳರನ್ನು ಕೊಂದ ದಿನ ನನ್ನ ಜೀವನದಲ್ಲಿ ಸಂತೋಷದಾಯಕ ದಿನ ಎಂದು ಬಿಂಬಿಸಲಾಗುತ್ತಿದೆ. ಮುಗ್ಧರನ್ನು ಕೊಲ್ಲುವುದನ್ನು ನಾನು ಎಂದಿಗೂ ಬೆಂಬಲಿಸುವುದಿಲ್ಲ. ಯುದ್ಧದ ನೋವು ನನಗೆ ತಿಳಿದಿದೆ. ನಾನು 30 ವರ್ಷಗಳಿಗೂ ಹೆಚ್ಚು ಕಾಲ ಯುದ್ಧದ ನಡುವೆಯೇ ಶ್ರೀಲಂಕಾದಲ್ಲಿ ಬೆಳೆದಿದ್ದೇನೆ. ನಾನು ಏಳು ವರ್ಷದವನಿದ್ದಾಗ ನನ್ನ ತಂದೆಯನ್ನು ಹತ್ಯೆ ಮಾಡಲಾಯಿತು. ಅನೇಕ ಬಾರಿ ನಾವು ಬೀದಿಯಲ್ಲಿರಬೇಕಾಯಿತು” ಎಂದು ನಿನ್ನೆ ಹೇಳಿದ್ದರು.

ಹಿರಿಯ ನಿರ್ದೇಶಕ ಭಾರತಿರಾಜ, “ಲಂಕಾ ತಮಿಳರು ಸಾಯುತ್ತಿರುವಾಗ ಮುತ್ತಯ್ಯ ಪಿಟೀಲು ನುಡಿಸುತ್ತಿದ್ದರು. ತಮ್ಮ ಜನರು ಸಾಯುವಾಗ ನಗುತ್ತಿರುವ ಅವರು ಕ್ರೀಡಾಪಟುವಾಗಿ ಸಾಧಿಸಿದರೆ ಏನು ಪ್ರಯೋಜನ? ಮುತ್ತಯ್ಯ ನಮ್ಮ ನಂಬಿಕೆಗೆ ದ್ರೋಹ ಬಗೆದಿದ್ದಾರೆ” ಎಂದು ತೀವ್ರವಾಗಿ ಪ್ರತಿಕ್ರಿಯಿಸಿದ್ದರು.

ಇದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ ಪಿಎಂಕೆ ಮುಖ್ಯಸ್ಥ ಡಾ.ಪಿ.ರಾಮದಾಸ್, “ವಿಜಯ್ ಸೇತುಪತಿ ಈ ಚಿತ್ರವನ್ನು ತಿರಸ್ಕರಿಸಿದರೆ, ಅವರು ತಮಿಳರ ಹೆಮ್ಮೆಯ ಇತಿಹಾಸದಲ್ಲಿ ಸ್ಥಾನ ಪಡೆಯುತ್ತಾರೆ; ಬದಲಿಗೆ ಅವರು ಅದನ್ನು ಮಾಡಿದರೆ, ನಮ್ಮ ವಿರೋಧವನ್ನು ಧಿಕ್ಕರಿಸಿದರೆ, ದ್ರೋಹಿಗಳ ಇತಿಹಾಸದಲ್ಲಿ ಸ್ಥಾನ ಪಡೆಯುತ್ತಾರೆ” ಎಂದು ಹೇಳಿದ್ದರು.

ಈ ಎಲ್ಲಾ ಕಾರಣಗಳಿಂದ ಈ ಚಿತ್ರದಿಂದ ಹಿಂದೆ ಸರಿಯುವಂತೆ ಮುತ್ತಯ್ಯ ಪತ್ರ ಬರೆದಿರುವುದು, ವಿಜಯ್ ಸೇತುಪತಿ ಮತ್ತು ಮುತ್ತಯ್ಯ ಮುರುಳೀಧರನ್ ಅಭಿಮಾನಿಗಳಲ್ಲಿ ನಿರಾಸೆಯನ್ನುಂಟುಮಾಡಿದೆ.


ಇದನ್ನೂ ಓದಿ: ನಾವು ಜಾತ್ಯಾತೀತರು, ಜಾತ್ಯಾತೀತರಾಗೇ ಇರುತ್ತೇವೆ- ತನಿಷ್ಕ್ ಜಾಹೀರಾತು ನಿರ್ದೇಶಕಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಮೊದಲು ಜಾತಿಗಣತಿ ಮಾಡುತ್ತೇವೆ: ರಾಹುಲ್‌ ಗಾಂಧಿ

0
ಜಾತಿ ಗಣತಿ ನನ್ನ ಜೀವನದ ಪ್ರಮುಖ ಗುರಿಯಾಗಿದೆ. ಕಾಂಗ್ರೆಸ್‌ ಸರಕಾರ ಅಧಿಕಾರಕ್ಕೆ ಬಂದರೆ ಮೊದಲು ಜಾತಿಗಣತಿಯನ್ನು ಮಾಡುತ್ತೇವೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ. ಸಂಪತ್ತು ಮರುಹಂಚಿಕೆ ವಿವಾದದ ಬಗ್ಗೆ ಪ್ರಧಾನಿ ನರೇಂದ್ರ...