Homeಮುಖಪುಟಟೀಕಾಕಾರರಿಗೆ ಕಿರುಕುಳ ನೀಡಲು ಬಿಜೆಪಿ ಪಾಸ್‌ಪೋರ್ಟ್‌ನ್ನು ಆಯುಧಗೊಳಿಸುತ್ತಿದೆ: ಮೆಹಬೂಬಾ ಮುಫ್ತಿ

ಟೀಕಾಕಾರರಿಗೆ ಕಿರುಕುಳ ನೀಡಲು ಬಿಜೆಪಿ ಪಾಸ್‌ಪೋರ್ಟ್‌ನ್ನು ಆಯುಧಗೊಳಿಸುತ್ತಿದೆ: ಮೆಹಬೂಬಾ ಮುಫ್ತಿ

- Advertisement -
- Advertisement -

‘ಸಂವಿಧಾನ ಮತ್ತು ರಾಷ್ಟ್ರೀಯ ಏಕತಾ ಸಮಾವೇಶ’ದಲ್ಲಿ ಭಾಗವಹಿಸಲು ಕರ್ನಾಟಕ ಸರ್ಕಾರದಿಂದ ಆಹ್ವಾನಿತರಾಗಿದ್ದ ಯುಕೆಯಲ್ಲಿನ ಭಾರತೀಯ ಮೂಲದ ಪ್ರಾಧ್ಯಾಪಕಿ ನಿತಾಶಾ ಕೌಲ್ ಅವರನ್ನು ಬೆಂಗಳೂರಿನ ವಿಮಾನ ನಿಲ್ಧಾಣದಿಂದ ವಾಪಾಸ್ಸು ಕಳುಹಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ, ಬಿಜೆಪಿಯು ತನ್ನ ಟೀಕಾಕಾರರಿಗೆ ‘ಕಿರುಕುಳ ನೀಡಲು ಮತ್ತು ದಂಡನೆಗೆ ಒಳಪಡಿಸಲು’ ಪಾಸ್‌ಪೋರ್ಟ್‌ಗಳನ್ನು ‘ಅಸ್ತ್ರಗಳಾಗಿ’ ಬಳಸುತ್ತಿದ್ದು, ಪ್ರಯಾಣದ ಮೇಲೆ ‘ಅಕ್ರಮವಾಗಿ’ ನಿಷೇಧ ಹೇರುತ್ತಿದೆ ಎಂದು ವಾಗ್ದಾಳಿಯನ್ನು ನಡೆಸಿದ್ದಾರೆ.

ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಮೆಹಬೂಬಾ ಮುಫ್ತಿ, ಬಿಜೆಪಿ ತನ್ನ ಟೀಕಾಕಾರರಿಗೆ ಕಿರುಕುಳ ನೀಡಲು ಮತ್ತು ಶಿಕ್ಷಿಸಲು ಪಾಸ್‌ಪೋರ್ಟ್‌ಗಳನ್ನು ಅಸ್ತ್ರಗಳಾಗಿ ಬಳಸುತ್ತಿದ್ದು, ಪ್ರಯಾಣದ ಮೇಲೆ ಅಕ್ರಮವಾಗಿ ನಿಷೇಧ ಹೇರುತ್ತಿದೆ. ಆತಿಶ್ ತಸೀರ್, ಅಶೋಕ್ ಸ್ವೈನ್ ಮತ್ತು ಈಗ ನಿತಾಶಾ ಕೌಲ್ ಅವರಿಗೆ ನಿಷೇಧವನ್ನು ವಿಧಿಸಲಾಗಿದೆ. ನಿತಾಶಾ ಅವರು ದ್ವೇಷಪೂರಿತ ವಿಭಜಕ ಸಿದ್ಧಾಂತವನ್ನು ಒಪ್ಪದ ಕಾರಣದಿಂದಲೇ ಆಕೆಗೆ ನಿರ್ಬಂಧವನ್ನು ವಿಧಿಸಲಾಗಿದೆ, ನಾವು ಅವರ ಜೊತೆ ನಿಲ್ಲಬೇಕಿದೆ ಎಂದು ಮುಫ್ತಿ ಎಕ್ಸ್‌ನಲ್ಲಿ ಹೇಳಿದ್ದಾರೆ.

ಲಂಡನ್ ಮೂಲದ ಕಾಶ್ಮೀರಿ ಪಂಡಿತ್ ಶಿಕ್ಷಣ ತಜ್ಞೆ ನಿತಾಶಾ ಕೌಲ್ ತನ್ನ ಎಕ್ಸ್‌ನಲ್ಲಿನ ಪೋಸ್ಟ್‌ಗಳ ಸರಣಿಯಲ್ಲಿ, ಬೆಂಗಳೂರು ವಿಮಾನ ನಿಲ್ದಾಣದಲ್ಲಿ ವಲಸೆ ಅಧಿಕಾರಿಗಳು ತನಗೆ ಯಾವುದೇ ಕಾರಣವನ್ನು ನೀಡದೆ ನನಗೆ ಭಾರತಕ್ಕೆ ಪ್ರವೇಶವನ್ನು ನಿರಕರಿಸಿದ್ದಾರೆ. ಭಾರತ ಸರ್ಕಾರದಿಂದ ನಿರ್ಬಂಧದ ಬಗ್ಗೆ ಈ ಮೊದಲು ಯಾವುದೇ ಸೂಚನೆ ಅಥವಾ ಮಾಹಿತಿಯನ್ನು ನೀಡಲಾಗಿಲ್ಲ. 24 ಗಂಟೆಗಳ ಕಾಲ ಹೋಲ್ಡಿಂಗ್ ಸೆಲ್‌ನಲ್ಲಿ ತನಗೆ ಆಹಾರ ಮತ್ತು ನೀರಿನ ವ್ಯವಸ್ಥೆ ಮಾಡಿಲ್ಲ ಮತ್ತು ವಿಮಾನ ನಿಲ್ದಾಣಕ್ಕೆ ಡಜನ್‌ಗಟ್ಟಲೆ ಕರೆಗಳನ್ನು ಮಾಡಿದರೂ ಒಂದು ದಿಂಬು ಮತ್ತು ಹೊದಿಕೆಯಂತಹ ಮೂಲಭೂತ ಸೌಲಭ್ಯಗಳನ್ನು ನಿರಾಕರಿಸಲಾಗಿದೆ ಎಂದು ಅವರು ಹೇಳಿದ್ದಾರೆ. ನಿತಾಶಾ ಕೌಲ್ ಬೆಂಗಳೂರಿಗೆ ಬಂದಿಳಿದ 24 ಗಂಟೆಯ ನಂತರ ಬ್ರಿಟಿಷ್ ಏರ್‌ವೇಸ್ ವಿಮಾನದ ಮೂಲಕ ಅವರನ್ನು ಲಂಡನ್‌ಗೆ ವಾಪಸ್‌ ಕಳುಹಿಸಲಾಗಿದೆ.

ಕಳೆದ ವರ್ಷ ಸ್ವೀಡನ್ ಮೂಲದ ಪ್ರೊಫೆಸರ್ ಅಶೋಕ್ ಸ್ವೈನ್ ಅವರ ಸಾಗರೋತ್ತರ ಭಾರತೀಯ (ಒಸಿಐ) ಕಾರ್ಡ್‌ನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿತ್ತು. ಸ್ವೀಡನ್‌ನ ಉಪ್ಸಲಾ ವಿಶ್ವವಿದ್ಯಾಲಯದ ಶಾಂತಿ ಮತ್ತು ಸಂಘರ್ಷ ಸಂಶೋಧನಾ ವಿಭಾಗದಲ್ಲಿ ಪ್ರಸ್ತುತ ಪ್ರಾಧ್ಯಾಪಕರಾಗಿ ಮತ್ತು ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿರುವ ಸ್ವೈನ್ ಅವರು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನು ಟೀಕಿಸಿದ್ದರು.

ಪತ್ರಕರ್ತ ತವ್ಲೀನ್ ಸಿಂಗ್ ಮತ್ತು ದಿವಂಗತ ಪಾಕಿಸ್ತಾನಿ ರಾಜಕಾರಣಿ ಮತ್ತು ಉದ್ಯಮಿ ಸಲ್ಮಾನ್ ತಸೀರ್ ಅವರ ಪುತ್ರ ಮತ್ತು ಬರಹಗಾರ ಆತಿಶ್ ತಸೀರ್ ಯುಕೆ ಪ್ರಜೆ. ಅವರ ಸಾಗರೋತ್ತರ ಭಾರತೀಯ (ಒಸಿಐ) ಕಾರ್ಡ್‌ನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿತ್ತು. ಟೈಮ್ ಮ್ಯಾಗಜೀನ್ ಕವರ್ ಸ್ಟೋರಿಯಲ್ಲಿ ತಸೀರ್, ಪ್ರಧಾನಿ ಮೋದಿಯನ್ನು ‘ಭಾರತದ ಡಿವೈಡರ್‌ ಇನ್ ಚೀಫ್” ಎಂದು ಕರೆದಿದ್ದರು ಮತ್ತು ಭಾರತವು ಅವರ ಸರ್ಕಾರವನ್ನು ಇನ್ನೂ ಐದು ವರ್ಷಗಳನ್ನು ಸಹಿಸಬಹುದೇ? ಎಂದು ಪ್ರಶ್ನಿಸಿದ್ದರು.

ಇದನ್ನು ಓದಿ: ‘ಸಂವಿಧಾನ, ಏಕತಾ ಸಮಾವೇಶ’ಕ್ಕೆ ಕರ್ನಾಟಕ ಸರಕಾರ ಆಹ್ವಾನಿಸಿದ್ದ UK ಪ್ರಾಧ್ಯಾಪಕಿಗೆ ಭಾರತಕ್ಕೆ ಪ್ರವೇಶ ನಿರಾಕರಣೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read