Homeಮುಖಪುಟಸಂವಿಧಾನ ಮತ್ತು ಮನಿ ಲಾಂಡರಿಂಗ್ ತಡೆ ತಿದ್ದುಪಡಿ ಕಾಯ್ದೆ ತೀರ್ಪಿನ ವಿರೋಧಭಾಸಗಳು

ಸಂವಿಧಾನ ಮತ್ತು ಮನಿ ಲಾಂಡರಿಂಗ್ ತಡೆ ತಿದ್ದುಪಡಿ ಕಾಯ್ದೆ ತೀರ್ಪಿನ ವಿರೋಧಭಾಸಗಳು

ಈ ವಿಶೇಷ ಕಾಯ್ದೆಗಳು ವ್ಯಕ್ತಿಗಳ ವಿರುದ್ಧ ಪ್ರಭುತ್ವಗಳಿಗೆ ಭಾರೀ ಅಧಿಕಾರಗಳನ್ನು ನೀಡುತ್ತವೆ. ಈ ಕಾಯ್ದೆಗಳು ದುರ್ಬಳಕೆ ಆಗುವುದಿಲ್ಲ ಎಂಬುದಕ್ಕೆ ಯಾವುದೇ ಖಾತ್ರಿಯಿಲ್ಲ.

- Advertisement -
- Advertisement -

27 ಜುಲೈ 2022ರಂದು ವಿಜಯ್ ಮದನ್‌ಲಾಲ್ ಚೌಧರಿ ವರ್ಸಸ್ ಭಾರತ ಸರ್ಕಾರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ 2002 (ಪಿಎಂಎಲ್‌ಎ)ಯ ಸಾಂವಿಧಾನಿಕ ಸಿಂಧುತ್ವವನ್ನು ಎತ್ತಿಹಿಡಿದಿದೆ. ಈ ಕಾಯ್ದೆಯ ಹಲವು ಅಂಶಗಳನ್ನು ಸುಮಾರು ೨೦೦ಕ್ಕೂ ಹೆಚ್ಚು ಅರ್ಜಿದಾರರು ಪ್ರಶ್ನಿಸಿದ್ದರೂ, ಇವೆಲ್ಲವನ್ನೂ ಈ ಒಂದೇ ತೀರ್ಪಿನಲ್ಲಿ ನಿರ್ಧರಿಸಲಾಗಿದೆ. ಈ ತೀರ್ಪು ನಾಗರಿಕರ ಹಕ್ಕುಗಳ ಮೇಲೆ ಮತ್ತು ಅಕ್ರಮ ಹಣ ವರ್ಗಾವಣೆಯ ಆರೋಪಗಳ ಕುರಿತ ತನಿಖೆಯ ಸಂದರ್ಭಗಳಲ್ಲಿ ಸರ್ಕಾರಗಳು ಹೊಂದಿರುವ ಅಧಿಕಾರಗಳ ಮೇಲೆ ದೂರಗಾಮಿ ಪರಿಣಾಮಗಳನ್ನು ಬೀರುತ್ತದೆ.

ಪಿಎಂಎಲ್‌ಎ ಕಾಯ್ದೆಯು ಅಕ್ರಮ ಹಣ ವರ್ಗಾವಣೆಯ ಅಪರಾಧವನ್ನು ತನಿಖೆ ಮಾಡುವ ಮತ್ತು ಶಿಕ್ಷಿಸುವ ಉದ್ದೇಶ ಹೊಂದಿದೆ. ಹಣ ವರ್ಗಾವಣೆಯು ಅಕ್ರಮವಾಗುವುದು ಯಾವಾಗೆಂದರೆ, ಕ್ರಿಮಿನಲ್ ಅಪರಾಧವೊಂದರಿಂದ ಹುಟ್ಟಿದ ಹಣ ಅಥವಾ ಇನ್ನಿತರ ಮೌಲ್ಯಯುತ ವಸ್ತುಗಳನ್ನು ಅವುಗಳ ಕಾನೂನುಬಾಹಿರ ಮೂಲವನ್ನು ಮುಚ್ಚಿಡುವಂತೆ ವಿಲೇವಾರಿ ಮಾಡಿದ್ದರೆ ಅಥವಾ ಪರಿವರ್ತನೆ ಮಾಡಿದ್ದರೆ ಅದು ಅಕ್ರಮವೆನಿಸಿಕೊಳ್ಳುತ್ತದೆ. ಈ ಕಾಯ್ದೆಯು ಆರಂಭದಲ್ಲಿ ಹುಟ್ಟಿಕೊಂಡದ್ದು ಜಗತ್ತಿನಾದ್ಯಂತ ಗಂಭೀರ ಮಟ್ಟ ಮುಟ್ಟಿದ್ದ ಅಕ್ರಮ ಹಣ ವರ್ಗಾವಣೆಯ ಕ್ರಿಮಿನಲ್ ಅಪರಾಧವನ್ನು ತಡೆಯುವ ಜಾಗತಿಕ ಪ್ರಯತ್ನಗಳ ಭಾಗವಾಗಿ. ಅದೇನೇ ಆದರೂ ಈ ವಿಶೇಷ ಶಾಸನವು ಒಂದು ಆರೋಪವನ್ನು ತನಿಖೆ ನಡೆಸುವ ಮತ್ತು ಶಿಕ್ಷಿಸುವ ಸರ್ಕಾರಿ ಅಂಗಗಳಿಗೆ ಎಂತಹ ಪರಮಾಧಿಕಾರವನ್ನು ನೀಡುತ್ತದೆಂದರೆ, ಆರೋಪಿಗಳ ಅನೇಕ ಹಕ್ಕುಗಳು ಅಗಾಧ ಒತ್ತಡಕ್ಕೆ ಸಿಲುಕುತ್ತವೆ. ಈ ಕಾಯ್ದೆಯಿಂದ ಆರೋಪಿಗಳ ಮೂಲಭೂತ ಹಕ್ಕುಗಳು ಉಲ್ಲಂಘನೆಯಾಗುತ್ತವೆಂಬ ಅದೇ ನಿರ್ದಿಷ್ಟ ಕಾರಣಕ್ಕೆ ಪ್ರಶ್ನಿಸಲ್ಪಟ್ಟಿತ್ತು. ಆದರೆ, ಈಗ ಸುಪ್ರೀಂ ಕೋರ್ಟು ಜಾರಿ ನಿರ್ದೇಶನಾಲಯಕ್ಕೆ ನೀಡಲ್ಪಟ್ಟಿರುವ ಅಧಿಕಾರವನ್ನು ಎತ್ತಿಹಿಡಿದಿದೆ. ಹೀಗೆ ಮಾಡುವ ಮೂಲಕ, ನೀತಿ ಮತ್ತು ಅಗತ್ಯದ ಪ್ರಕಾರ ಪರಿಗಣಿಸಿ ಆರೋಪಿಗಳ ಹಕ್ಕುಗಳನ್ನು ತೀವ್ರವಾಗಿ ನಿರ್ಬಂಧಿಸುವ ವಿಶೇಷ ಕಾಯ್ದೆಗಳನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿರುವ ಪ್ರಕರಣಗಳ ಉದ್ದನೆಯ ಪಟ್ಟಿಗೆ ಈ ತೀರ್ಪು ಕೂಡ ಸೇರಿಕೊಂಡಿದೆ.

ಇದನ್ನೂ ಓದಿ: ಆಗಸ್ಟ್‌ 26 ರಂದು ಕೊಡಗು ಎಸ್‌ಪಿ ಕಚೇರಿ ಮುತ್ತಿಗೆ ಘೋಷಿಸಿದ ಸಿದ್ದರಾಮಯ್ಯ

ಮೊದಲಿಗೆ, ಸುಪ್ರೀಂ ಕೋರ್ಟು ಪಿಎಂಎಲ್‌ಎಯು ಕ್ರಿಮಿನಲ್ ಕಾನೂನಿನ ಶಾಸನವಲ್ಲ ಬದಲಿಗೆ ಒಂದು ಅನನ್ಯ ಕಾಯ್ದೆ (sui generis-unique) ) ಎಂದು ಹೇಳಿತು. ದಂಡ ಶಾಸನಗಳು ಕ್ರಿಮಿನಲ್ ಕಾನೂನಿನ ಮೂಲಭೂತ ರಕ್ಷಣೆ ಮತ್ತು ತತ್ವಗಳಿಗೆ ಪೂರಕವಾಗಿಯೇ ಇರಬೇಕಾಗುತ್ತದೆ. ಉದಾಹರಣೆಗೆ, ಒಂದು ಕ್ರಿಮಿನಲ್ ಶಾಸನವು ಆರೋಪಿಯನ್ನು ತನ್ನ ವಿರುದ್ಧವೇ ಸಾಕ್ಷಿಯನ್ನಾಗಿಸುವ ಒತ್ತಡ ಹೇರಲಾಗದು, ಮತ್ತು ಒಂದು ಕ್ರಿಮಿನಲ್ ವಿಚಾರಣೆಯಲ್ಲಿ ಪ್ರಭುತ್ವವು ತನ್ನ ಆರೋಪಗಳನ್ನು ಸಾಧಾರಣ ಸಂದೇಹದಾಚೆಗೆ ಸಾಬೀತುಪಡಿಸಬೇಕಿರುತ್ತದೆ. ಆರೋಪಿಗೂ ಕೂಡಾ ವಿಚಾರಣೆಯ ಸಂದರ್ಭದಲ್ಲಿ ಮೌನವಾಗಿರುವ ಹಕ್ಕಿದೆ ಹಾಗೂ ಅನುಮಾನದ ಪ್ರಯೋಜನದ ಅವಕಾಶವನ್ನೂ ಕೋರ್ಟಿನಿಂದ ಪಡೆಯುವ ಹಕ್ಕಿದೆ.

ಆದರೆ, ಒಂದು ವೇಳೆ ಪಿಎಂಎಲ್‌ಎಯು ಕ್ರಿಮಿನಲ್ ಕಾನೂನಿನ ಶಾಸನವೇ ಅಲ್ಲದೆ ಇದ್ದರೆ, ಈ ಎಲ್ಲ ಸಾಂವಿಧಾನಿಕ ರಕ್ಷಣೆಗಳು ಅಗತ್ಯವಾಗಿ ಅನ್ವಯಿಸಬೇಕೆಂದೇನೂ ಇಲ್ಲ. ಇದು ಇನ್ನಷ್ಟು ಗೊಂದಲಮಯಗೊಳಿಸುತ್ತದೇಕೆಂದರೆ, ಪಿಎಂಎಲ್‌ಎ ಕಾಯ್ದೆಯು ಭಾರೀ ಪ್ರಮಾಣದಲ್ಲಿ ವಿಶೇಷ ಕ್ರಿಮಿನಲ್ ಶಾಸನವನ್ನು ಹೋಲುತ್ತದೆ. ಅದು ತನಿಖಾ ಸಂಸ್ಥೆಗೆ ಆರೋಪಿಯನ್ನು ಬಂಧಿಸುವ, ಹುಡುಕಾಡುವ, ವಶಕ್ಕೆ ಪಡೆಯುವ, ಆರೋಪಿಯ ಆಸ್ತಿಯನ್ನು ಪ್ರಕರಣಕ್ಕೆ ಜೋಡಿಸುವ ಮತ್ತು ಕಾನೂನಾತ್ಮಕ ಶಿಕ್ಷೆ ವಿಧಿಸುವಂತಹ ಎಲ್ಲ ಅಧಿಕಾರಗಳನ್ನೂ ನೀಡಿದೆ. ಕ್ರಿಮಿನಲ್ ಕಾನೂನು ಮಾಡಬೇಕೆಂದು ನಿರೀಕ್ಷಿಸುವುದು ಈ ಶಾಸನದ ಕೆಲಸವನ್ನೇ ಎಂದು ಯಾರಾದರೂ ಭಾವಿಸುವುದು ಸಹಜವೇ ಆಗಿದೆ. ಕ್ರಿಮಿನಲ್ ಕಾನೂನುಗಳು ಸಾಂವಿಧಾನಿಕ ಮತ್ತು ತಾತ್ವಿಕ ಪರಿಗಣನೆಗಳಿಂದ ನಿಯಂತ್ರಿಸಲ್ಪಡಬೇಕೆಂಬುದಕ್ಕೆ ಕಾರಣ, ಅವು ವ್ಯಕ್ತಿಗಳ ವಿರುದ್ಧ ಪ್ರಭುತ್ವಗಳಿಗೆ ಭಾರೀ ಅಧಿಕಾರಗಳನ್ನು ನೀಡುತ್ತವೆ ಎಂಬುದೇ ಆಗಿದೆ. ಪಿಎಂಎಲ್‌ಎ ಶಾಸನವು ಇವೇ ವ್ಯಾಪಕ ಅಧಿಕಾರಗಳನ್ನು ಬೇರೆ ಯಾವುದೇ ಖಾತ್ರಿಗಳಿಲ್ಲದೆ (ಪ್ರಭುತ್ವಕ್ಕೆ) ದೊರಕಿಸುತ್ತದೆ.

ಇದಕ್ಕೆ ಸಂಬಂಧಿಸಿದ ಒಂದು ಅಂಶವೇನೆಂದರೆ, ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಕಾನೂನಿನ ಅಡಿಯಲ್ಲಿ ಪೊಲೀಸ್ ಅಧಿಕಾರಿಗಳಲ್ಲ ಎಂಬ ಕೇಂದ್ರ ಸರ್ಕಾರದ ವಾದವನ್ನು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿದೆ. ಈ ಅಧಿಕಾರಿಗಳಿಗೆ, ಆರೋಪಿಯನ್ನು ಬಂಧಿಸುವ, ಹುಡುಕಾಡುವ, ವಶಕ್ಕೆ ಪಡೆಯುವ, ವಿಚಾರಣೆ ನಡೆಸುವ, ತನಿಖೆಯನ್ನು ಪೂರ್ಣಗೊಳಿಸುವ ಎಲ್ಲ ಅಧಿಕಾರಗಳು ಇದ್ದಾಗಲೂ ಅವು ಪೊಲೀಸರಿಗಿರುವಂತಹ ಅಧಿಕಾರಗಳಲ್ಲ ಬದಲಿಗೆ ವಿಶೇಷ ಅಧಿಕಾರಗಳು. ಸಾಮಾನ್ಯ ಪುರಾವೆಯ ಕಾನೂನಿನ ಮತ್ತು ಕ್ರಿಮಿನಲ್ ಪ್ರಕ್ರಿಯೆಯ ಪ್ರಕಾರ ವಿಚಾರಣಾಧೀನರು ಪೊಲೀಸ್ ಅಧಿಕಾರಿಗಳ ಮುಂದೆ ಮಾಡುವ ಎಲ್ಲ ಹೇಳಿಕೆಗಳೂ ರಕ್ಷಿಸಲ್ಪಟ್ಟಿರುತ್ತವೆ ಮತ್ತು ಅವುಗಳನ್ನು ವಸ್ತುನಿಷ್ಟ ಸಾಕ್ಷಿಯಾಗಿ ಬಳಸಲು ಆಗುವುದಿಲ್ಲ. ಒಬ್ಬ ಆರೋಪಿಯು ಪೊಲೀಸ್ ಕಸ್ಟಡಿಯಲ್ಲಿರುವಾಗ ಅಥವಾ ವಿಚಾರಣೆಯ ಸಮಯದಲ್ಲಿ ಪೊಲೀಸರ ಮುಂದೆ ಒಂದು ಒಪ್ಪಿಗೆಯನ್ನು ಮಾಡಿಕೊಂಡರೆ ಅದನ್ನು ಸಾಕ್ಷಿಯ ಸಮಯದಲ್ಲಿ ಪರಿಗಣಿಸಲು ಬರುವುದಿಲ್ಲ. ಇದು ಅಧಿಕಾರಿಗಳು ಆರೋಪಿಗಳನ್ನು ಹಿಂಸಿಸಿ ಅಪರಾಧಗಳಿಗೆ ತಪ್ಪೊಪ್ಪಿಸುವುದನ್ನು ತಡೆಯುವುದಕ್ಕಾಗಿ ಇರುವಂಥದ್ದು. ಸಾರಾಂಶದಲ್ಲಿ, ಪಿಎಂಎಲ್‌ಎ ಅಡಿಯಲ್ಲಿ ಆರೋಪಿಗಳಿಗೆ ಈ ರಕ್ಷಣೆ ಸಿಗುವುದಿಲ್ಲ, ಈ ಆರೋಪಿಗಳು ಇನ್ನಿತರ ಕ್ರಿಮಿನಲ್ ಕಾನೂನುಗಳ ಆರೋಪಿಗಳಿಗಿಂತ ದುರ್ಬಲ ಸ್ಥಿತಿಯಲ್ಲಿ ಇರುತ್ತಾರೆ.

ಸಾಮಾನ್ಯವಾಗಿ ನಾವು ಯಾವುದನ್ನು ಕ್ರಿಮಿನಲ್ ಕಾಯ್ದೆಯ ನಿಬಂಧನೆಗಳು ಎಂದು ಭಾವಿಸಿದ್ದೇವೋ (ಆದರೆ ಕೋರ್ಟ್ ತದ್ವಿರುದ್ಧವಾಗಿ ಆದೇಶಿಸಿರುವಂತಹ), ಪಿಎಂಎಲ್‌ಎ ತೀರ್ಪು ಅಂತಹ ಉದಾಹರಣೆಗಳಿಂದ ತುಂಬಿಹೋಗಿದೆ. ಇಲ್ಲಿ ನಾವು ಅರ್ಥಮಾಡಿಕೊಳ್ಳಬೇಕಾದ ಕೇಂದ್ರ ಪರಿಕಲ್ಪನೆ ಏನೆಂದರೆ ಕ್ರಿಮಿನಲ್ ಕಾನೂನಿನ ಪ್ರಕ್ರಿಯೆಯಲ್ಲಿ ಹಕ್ಕುಗಳು ಅತ್ಯಂತ ಮುಖ್ಯವಾದವುಗಳಾಗಿವೆ ಎಂಬುದು. ಮೇಲ್ನೋಟಕ್ಕೆ ಸಣ್ಣವೆಂದು ಕಾಣುವ ಇಂತಹ ಹಕ್ಕುಗಳೇ ಪ್ರಭುತ್ವದ ಬೃಹತ್ ಶಕ್ತಿಯಿಂದ ಆರೋಪಿಗಳನ್ನು ರಕ್ಷಿಸಬಲ್ಲಂಥವು ಮತ್ತು ಪ್ರಭುತ್ವ ಯಾರ ಪರವಾಗಿಲ್ಲವೋ ಅಂತಹವರನ್ನು ಕ್ರಿಮಿನಲ್ ಕಾನೂನುಗಳನ್ನು ಬಳಸಿ ಅನ್ಯಾಯಯುತವಾಗಿ ಗುರಿಪಡಿಸುವುದನ್ನು ಅಥವಾ ಶಿಕ್ಷಿಸುವುದನ್ನು ತಡೆಯಬಲ್ಲಂಥವು. ಈ ಹಕ್ಕುಗಳು ಸಾಮಾನ್ಯ ಕ್ರಿಮಿನಲ್ ಕಾನೂನುಗಳ ಅಡಿಯಲ್ಲಿ ನೀಡಲ್ಪಟ್ಟಿರುವಂಥವು, ಉದಾಹರಣೆಗೆ ದಂಡಸಂಹಿತೆಯ ಪ್ರಕ್ರಿಯೆ ೧೯೭೩ (ಸಿಆರ್‌ಪಿಸಿ) ಅಥವಾ ಭಾರತೀಯ ಸಾಕ್ಷ್ಯಾಧಾರ ಕಾಯ್ದೆ ೧೮೭೨. ಇವು ಈಗ ಪಿಎಂಎಲ್‌ಎಯಂತಹ ವಿಶೇಷ ಶಾಸನಗಳಿಂದ ಅಥವಾ ಭಯೋತ್ಪಾದನೆ ವಿರೋಧಿ ಕಾನೂನುಗಳಾದಂತಹ ಯುಎಪಿಎ ಅಂತಹವುಗಳ ಸಂದರ್ಭದಲ್ಲಿ ಕಸಿದುಕೊಳ್ಳಲಾಗಿರುವ ಹಕ್ಕುಗಳೇ ಆಗಿವೆ.

ಇದನ್ನೂ ಓದಿ: ಮಹಿಳೆ ಪ್ರಚೋದನಕಾರಿ ಉಡುಗೆ ತೊಟ್ಟರೆ ಪುರುಷರ ವಿರುದ್ಧದ ಲೈಂಗಿಕ ಕಿರುಕುಳ ಪ್ರಕರಣ ನಿಲ್ಲುವುದಿಲ್ಲ: ಕೇರಳ ಕೋರ್ಟ್

ಪೊಲೀಸರಿಂದ ಬಂಧನರಾದವರು ತಮ್ಮ ವಿರುದ್ಧದ ಆರೋಪಗಳನ್ನು ತಿಳಿಯುವ ಸವಲತ್ತು ಹೊಂದಿರಬೇಕು. ಆ ಆರೋಪಗಳ ವಿವರ ಮತ್ತು ಮಾಹಿತಿಗಳನ್ನು ಒಳಗೊಂಡ ಎಫ್‌ಐಆರ್ ಪ್ರತಿಯನ್ನು ಪಡೆಯುವ ಹಕ್ಕು ಅವರು ಹೊಂದಿರುತ್ತಾರೆ. ಈ ಹಕ್ಕುಗಳು ಯಾವುದೇ ನ್ಯಾಯವ್ಯವಸ್ಥೆಯ ತಳಹದಿಯಾಗಿರಬೇಕು. ಮತ್ತೀಗ, ಪಿಎಂಎಲ್‌ಎನಂತಹ ಕಾನೂನುಗಳಲ್ಲಿ ಇಂತಹ ಮೂಲ ಹಕ್ಕುಗಳನ್ನು ಕಸಿದುಕೊಳ್ಳಲಾಗಿದೆ. ಇದನ್ನು ಸಣ್ಣ ಭಾಷಾ ಮತ್ತು ತಾಂತ್ರಿಕ ಬದಲಾವಣೆಯಿಂದ ಸಾಧಿಸಲಾಗಿದೆ. ಪಿಎಂಎಲ್‌ಎನಲ್ಲಿ ಎಫ್‌ಐಆರ್‌ಗೆ ಸರಿಸಮನಾದುದು ಎನ್‌ಫೋರ್ಸ್‌ಮೆಂಟ್ ಕೇಸ್ ಇನ್‌ಫರ್ಮೇಶನ್ ರಿಪೋರ್ಟ್ (ಇಸಿಐಆರ್). ಇದಿದ್ದರೂ, ಇಡಿ ತಾನು ಬಂಧಿಸುವ ಅಥವಾ ತನಿಖೆ ಮಾಡುವ ಆರೋಪಿಗೆ ಇದನ್ನು ಒದಗಿಸುವುದು ಕಡ್ಡಾಯವಲ್ಲ. ಆರೋಪಿಗೆ ಆ ದಾಖಲೆ ಒದಗಿಸುವ ಅಗತ್ಯವಿಲ್ಲ ಎಂಬುದನ್ನು ಸುಪ್ರೀಂ ಕೋರ್ಟ್ ಮಾನ್ಯ ಮಾಡಿದೆ. ಹೀಗಾಗಿ, ತನ್ನ ವಿರುದ್ಧ ಪೂರ್ಣ ಪ್ರಮಾಣದ ತನಿಖೆ ಪ್ರಾರಂಭವಾಗಿದ್ದರೂ, ಆರೋಪಿಯನ್ನು ಕತ್ತಲಲ್ಲಿ ಇಡುವ ಕ್ರಮ ಇದಾಗಿದೆ.

ಇಲ್ಲಿ ನಮಗೆ ನಾವೇ ಕೇಳಿಕೊಳ್ಳಬೇಕಾದ ಪ್ರಶ್ನೆ ಇದು. ಪಿಎಂಎಲ್‌ಎಯಂತಹ ಕಾನೂನುಗಳು ಕಾನೂನಾತ್ಮಕ ಪರೀಕ್ಷೆಗಳನ್ನು ಹೇಗೆ ಮತ್ತು ಏಕೆ ದಾಟುತ್ತಿವೆ ಮತ್ತು ಸುಪ್ರೀಂ ಕೋರ್ಟ್ ಇಂತಹವನ್ನು ಹೇಗೆ ಎತ್ತಿ ಹಿಡಿಯುತ್ತಿದೆ? ಸಾಮಾನ್ಯ ಕಾನೂನುಗಳಾದ ಸಿಆರ್‌ಪಿಸಿಯಂತಹವುಗಳಲ್ಲಿ ಇರುವ ಸುರಕ್ಷತಾ ಪ್ರಕ್ರಿಯೆ ಮತ್ತು ಕ್ರಮಗಳನ್ನು ಪಿಎಂಎಲ್‌ಎ ಅಥವಾ ಯುಎಪಿಎಯಂತಹವುಗಳಲ್ಲಿ ಕೂಡ ಪ್ರಭುತ್ವಗಳು ಖಾತ್ರಿಪಡಿಸುವುದು ಅಗತ್ಯ ಎಂದೇಕೆ ಕೋರ್ಟ್‌ಗೆ ಅನಿಸುತ್ತಿಲ್ಲ? ಇದಕ್ಕೆ ನನ್ನ ಉತ್ತರ, ಇಂತಹ ಎಲ್ಲ ಪ್ರಕರಣಗಳಲ್ಲಿ ಸರ್ಕಾರವು ರಾಷ್ಟ್ರೀಯ ಭದ್ರತೆಯ ವಾದವನ್ನು ಮುಂದಿಡುತ್ತದೆ ಮತ್ತು ತನ್ನ ವರ್ತನೆಯನ್ನು ಸಮರ್ಥಿಸಿಕೊಳ್ಳಲು ಪ್ರಭುತ್ವದ ಹಿತಾಸಕ್ತಿಯ ಪರಿಧಿಯನ್ನು ಅತಿಕ್ರಮಿಸುತ್ತದೆ. ಇಲ್ಲಿ ಬಳಸಲ್ಪಟ್ಟಿರುವ ತರ್ಕವೆಂದರೆ, ಚರ್ಚೆಯಲ್ಲಿರುವ ಅಪರಾಧವು ಎಷ್ಟು ಅಪಾಯಕಾರಿಯಾದುದು ಮತ್ತು ದೇಶದ ಭದ್ರತೆಗೆ ಎಂತಹ ಗಂಭೀರ ಆತಂಕವೆಂದರೆ ಈ ವಿಶೇಷ ಅಧಿಕಾರವನ್ನು ಪ್ರಭುತ್ವಕ್ಕೆ ಕೊಡಬೇಕು ಎಂಬುದು; ಆದುದರಿಂದ, ಪ್ರಭುತ್ವಕ್ಕೆ ಅಂತಹ ವ್ಯಕ್ತಿಗಳನ್ನು ಗುರುತಿಸಲು, ಜಾಮೀನನ್ನು ನಿರಾಕರಿಸಿ ವಶದಲ್ಲಿಟ್ಟುಕೊಳ್ಳಲು, ವಿಚಾರಣೆಯ ಸಂದರ್ಭದಲ್ಲಿ ಆರೋಪಿಗೆ ಲಭ್ಯವಾಗಿರಬೇಕಿರುವ ಮೌನವಾಗಿರುವ ಹಕ್ಕು ಮುಂತಾದವನ್ನು ನಿರಾಕರಿಸಿ ವಿಚಾರಣೆ ನಡೆಸಲು ಅವಕಾಶ ನೀಡಬೇಕೆಂಬುದು. ಇದೊಂದು ಅನುಕೂಲಸಿಂಧುವಾದ. ಇಂತಹ ಎಲ್ಲ ಅಪರಾಧಗಳೂ ಅಸ್ತಿತ್ವದ ಆತಂಕಗಳೆಂಬ ವಾದ ಹೂಡುವ ಮೂಲಕ ಸತತವಾಗಿ ಮೂಲಭೂತ ಹಕ್ಕುಗಳ ಮತ್ತು ರಕ್ಷಣೆಗಳನ್ನು ನೆಲಸಮಗೊಳಿಸಬಹುದಾಗಿದೆ. ಅಕ್ರಮ ಹಣ ವರ್ಗಾವಣೆಯು ಭಯೋತ್ಪಾದನೆಯಷ್ಟೇ ಹೀನ ಕೃತ್ಯವೆಂಬ ವಾದವನ್ನು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿರುವುದು ಇನ್ನಷ್ಟು ಆಶ್ಚರ್ಯದ ವಿಷಯ. ಏಕೆಂದರೆ ಪಿಎಂಎಲ್‌ಎ ಕಾಯ್ದೆಯೇ ಖುದ್ದು ಅಷ್ಟು ಗಂಭೀರವಲ್ಲದ ಕಳ್ಳತನ, ಕಾಪಿರೈಟ್ ಕಾಯ್ದೆ 1957ರ ಅಡಿಯ ಪ್ರಕರಣಗಳು ಮುಂತಾದವನ್ನೂ ಒಳಗೊಂಡಿದೆ.

ಈ ವಿಶೇಷ ಕಾಯ್ದೆಗಳನ್ನು ಸಮರ್ಥಿಸಲು ಆ ಆರೋಪಗಳು ದೇಶಕ್ಕೆ ಅತ್ಯಂತ ಗಂಭೀರ ಆತಂಕಗಳು ಎಂಬ ವಾದವನ್ನು ಬಳಸಲಾಗುತ್ತಿದೆ. ಈ ವಿಶೇಷ ಕಾಯ್ದೆಗಳು ವ್ಯಕ್ತಿಗಳ ವಿರುದ್ಧ ಪ್ರಭುತ್ವಗಳಿಗೆ ಭಾರೀ ಅಧಿಕಾರಗಳನ್ನು ನೀಡುತ್ತವೆ. ಈ ಕಾಯ್ದೆಗಳು ದುರ್ಬಳಕೆ ಆಗುವುದಿಲ್ಲ ಎಂಬುದಕ್ಕೆ ಯಾವುದೇ ಖಾತ್ರಿಯಿಲ್ಲ. ಆದರೆ ಈ ನಿರ್ದಿಷ್ಟ ಎಚ್ಚರಿಕೆಯೇ ಈ ಎಲ್ಲ ಸಂದರ್ಭಗಳಲ್ಲಿ ಕಾಣೆಯಾಗಿದೆ. ಕೆಲವು ನಿರ್ದಿಷ್ಟ ಅಪರಾಧಗಳ ಬಗ್ಗೆ ವ್ಯವಹರಿಸಲು ಪ್ರಭುತ್ವ ಇಂತಹ ಬಲಶಾಲಿ ವಿಶೇಷ ಕಾನೂನುಗಳನ್ನು ಹೊಂದಿರುವುದು ನ್ಯಾಯಸಮ್ಮತವೇ ಎಂಬುದನ್ನು ನಾವು ಚಿಂತಿಸಬೇಕಿದೆ. ನೀತಿಯ ಮತ್ತು ಅಗತ್ಯದ ವಾದದ ಮೇಲೆ ಸಾಂವಿಧಾನಿಕ ಮೌಲ್ಯಗಳು ಮತ್ತು ಮೂಲಭೂತ ಹಕ್ಕುಗಳನ್ನು ತನ್ನಂತೆ ತಾನೇ ನಿರ್ಬಂಧದಲ್ಲಿರುವುದು ಸೂಕ್ತವೇ ಮತ್ತು ಅವು ನಮ್ಮಂತಹ ಪ್ರಜೆಗಳ ಮೇಲೆ ಉಂಟುಮಾಡುವ ಪರಿಣಾಮಗಳೇನು ಎಂಬುದರ ಬಗ್ಗೆ ನಾವು ಗಂಭೀರವಾದ ಚಿಂತನೆ ನಡೆಸಬೇಕಾಗಿದೆ.

ಕುನಾಲ್ ಅಂಬಸ್ತ
ಎನ್‌ಎಲ್‌ಎಸ್‌ಐಯುನಲ್ಲಿ
ಸಹ ಪ್ರಾಧ್ಯಾಪಕರು

ಕನ್ನಡಕ್ಕೆ: ಮಲ್ಲಿಗೆ ಸಿರಿಮನೆ


ಇದನ್ನೂ ಓದಿ: ಸಲ್ಮಾನ್ ರಶ್ದಿ ಮೇಲೆ ದಾಳಿ ಭಯದ ವಾತಾವರಣ ಸೃಷ್ಟಿಸುವ ಹುನ್ನಾರ: IMSD

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ.ಬಂಗಾಳ: ಲೈಂಗಿಕ ದೌರ್ಜ್ಯನ್ಯದ ಆರೋಪದ ಬೆನ್ನಲ್ಲಿ ರಾಜಭವನಕ್ಕೆ ಪೊಲೀಸರಿಗೆ ಪ್ರವೇಶ ನಿಷೇಧಿಸಿದ ಗವರ್ನರ್‌

0
ಪಶ್ಚಿಮ ಬಂಗಾಳದ ರಾಜ್ಯಪಾಲ ಸಿ.ವಿ.ಆನಂದ ಬೋಸ್ ವಿರುದ್ಧ ನಿನ್ನೆ ರಾಜಭವನದ ಮಹಿಳಾ ಉದ್ಯೋಗಿಯೋರ್ವರು ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿದ್ದರು. ಇದರ ಬೆನ್ನಲ್ಲಿ ರಾಜ್ಯಪಾಲರು ತನಿಖೆಯ ನೆಪದಲ್ಲಿ ಪೊಲೀಸರು ರಾಜಭವನಕ್ಕೆ ಪ್ರವೇಶಿಸದಂತೆ ನಿಷೇಧಿಸಿದ್ದಾರೆ, ಇದಲ್ಲದೆ...