Homeಮುಖಪುಟ25ವರ್ಷ ಶಿಕ್ಷೆಗೆ ಗುರಿಯಾದರೂ ವಿಧಾನಸಭೆಯಿಂದ ಅನರ್ಹಗೊಳ್ಳದ ಬಿಜೆಪಿ ಶಾಸಕ!

25ವರ್ಷ ಶಿಕ್ಷೆಗೆ ಗುರಿಯಾದರೂ ವಿಧಾನಸಭೆಯಿಂದ ಅನರ್ಹಗೊಳ್ಳದ ಬಿಜೆಪಿ ಶಾಸಕ!

- Advertisement -
- Advertisement -

2014ರಲ್ಲಿ ಉತ್ತರಪ್ರದೇಶದ ಸೋನ್‌ಭದ್ರಾದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರಪ್ರದೇಶದ ಬಿಜೆಪಿ ಶಾಸಕ ರಾಮದುಲರ್ ಗೊಂಡ್‌ಗೆ ನ್ಯಾಯಾಲಯ 25 ವರ್ಷಗಳ ಜೈಲು ಶಿಕ್ಷೆ ವಿಧಿಸಿ 3 ದಿನಗಳು ಕಳೆದಿವೆ. ಅವರಿಗೆ ಅತ್ಯಾಚಾರ, ಕ್ರಿಮಿನಲ್ ಬೆದರಿಕೆ ಮತ್ತು ಪೋಕ್ಸೊ ಪ್ರಕರಣದಲ್ಲಿ ನ್ಯಾಯಾಲಯ ಶಿಕ್ಷೆಯನ್ನು ವಿಧಿಸಿದೆ. ಆದರೆ ನ್ಯಾಯಾಲಯದ ತೀರ್ಪು ಹೊರಬಂದು 3 ದಿನಗಳೇ ಕಳೆದರೂ ರಾಜ್ಯ ಶಾಸಕಾಂಗ ಸಭೆಯು ಅಪರಾಧಿ ಶಾಸಕನನ್ನು ಇನ್ನು ಕೂಡ ಅನರ್ಹ ಮಾಡಿಲ್ಲ.

ಕಳೆದ ವರ್ಷ ಕ್ರಿಮಿನಲ್‌ ಪ್ರಕರಣದಲ್ಲಿ ಆಪಾದಿತ ಸಮಾಜವಾದಿ ಪಕ್ಷದ  ಶಾಸಕರೋರ್ವರನ್ನು ವಿಧಾನಸಭೆಯಿಂದ ತಕ್ಷಣಕ್ಕೆ ಅಮಾನತು ಮಾಡಲಾಗಿತ್ತು. ಇದೀಗ ಉತ್ತರಪ್ರದೇಶ ಬಿಜೆಪಿ ಸರಕಾರದ ಧ್ವಂದ್ವ ನೀತಿ ಪ್ರತಿಪಕ್ಷಗಳ ಆಕ್ರೋಶಕ್ಕೆ ಕಾರಣವಾಗಿದೆ.

ರಾಮದುಲರ್ ಗೊಂಡ್‌ ಉತ್ತರಪ್ರದೇಶದ ದುಡ್ಡಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದಾರೆ. ಗೊಂಡ್ ಅವರು 2022ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು. 2014ರಲ್ಲಿ ರಾಮದುಲರ್ ಗೊಂಡ್‌ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಕ್ಕಾಗಿ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಎಹ್ಸಾನ್ ಉಲ್ಲಾ ಖಾನ್ ಅವರ ಪೀಠ ಡಿ.12 ರಂದು ಗೊಂಡ್‌ನನ್ನು ತಪ್ಪಿತಸ್ಥರೆಂದು ಘೋಷಿಸಿತ್ತು. ಡಿ.15 ರಂದು ನ್ಯಾಯಾಲಯ ತನ್ನ ತೀರ್ಪಿನಲ್ಲಿ ಗೊಂಡನಿಗೆ 25 ವರ್ಷಗಳ ಜೈಲು ಶಿಕ್ಷೆ ಮತ್ತು 10 ಲಕ್ಷ ರೂಪಾಯಿ ದಂಡ ವಿಧಿಸಿ ಆದೇಶಿಸಿತ್ತು.

ಪ್ರಜಾಪ್ರತಿನಿಧಿ ಕಾಯಿದೆ 1951ರ ಪ್ರಕಾರ, ಎರಡು ಅಥವಾ ಅದಕ್ಕಿಂತ ಹೆಚ್ಚು ವರ್ಷಗಳ ಕಾಲ ಜೈಲು ಶಿಕ್ಷೆಗೆ ಗುರಿಯಾದ ಶಾಸಕರು ಅಂತಹ ಅಪರಾಧ ನಿರ್ಣಯದ ದಿನಾಂಕದಿಂದ ಅನರ್ಹರಾಗುತ್ತಾರೆ ಮತ್ತು ಅವನ ಅಥವಾ ಅವಳ ಬಿಡುಗಡೆಯ ನಂತರ ಮುಂದಿನ 6 ತಿಂಗಳ ಅವಧಿವರೆಗೆ ಅನರ್ಹರಾಗಿರುತ್ತಾರೆ.

ಈ  ಕುರಿತು ಎಸ್‌ಪಿ ಅಧ್ಯಕ್ಷ ಅಖಿಲೇಶ್ ಯಾದವ್ ಅವರು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದು, ಅಪರಾಧಿಯೆಂದು ರಾಮದುಲರ್ ಗೊಂಡ್‌ಗೆ ನ್ಯಾಯಾಲಯ ಶಿಕ್ಷೆಯನ್ನು ವಿಧಿಸಿದ್ದರೂ, ಅವರನ್ನು ವಿದಾನಸಭೆಯಿಂದ ಇನ್ನೂ ಏಕೆ ಅನರ್ಹಗೊಳಿಸಲಾಗಿಲ್ಲ ಎಂದು ಪ್ರಶ್ನಿಸಿದ್ದಾರೆ. ಅವರು ಬಿಜೆಪಿ ಶಾಸಕರಾಗಿರುವ ಕಾರಣ ಅವರಿಗೆ ವಿಶೇಷ ಗೌರವ ಮತ್ತು ನಿರ್ಭಯವನ್ನು ನೀಡಲಾಗುತ್ತಿದೆಯೇ? ಬುಲ್ಡೋಜರ್ ಕಾರ್ಯಾಚರಣೆ ಇಂದು ಅಥವಾ ನಾಳೆ ನಡೆಯುತ್ತದೆಯೇ ಎಂದು ಸಾರ್ವಜನಿಕರು ಕೇಳುತ್ತಿದ್ದಾರೆ ಎಂದು ಯಾದವ್‌ ಹೇಳಿದ್ದಾರೆ.

15 ವರ್ಷಗಳ ಹಿಂದಿನ  ಹಲ್ಲೆ ಪ್ರಕರಣದಲ್ಲಿ ಮೊರಾದಾಬಾದ್‌ನ ನ್ಯಾಯಾಲಯವು ಈ ಮೊದಲು ಶಾಸಕ ಅಬ್ದುಲ್ಲಾ ಅಜಮ್ ಅವರನ್ನು ದೋಷಿ ಎಂದು ಘೋಷಿಸಿ 2 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಇದರ ಬೆನ್ನಲ್ಲೇ ಫೆ.15ರಂದು ಹಿರಿಯ ಎಸ್‌ಪಿ ನಾಯಕ ಅಜಂ ಖಾನ್ ಅವರ ಪುತ್ರ ಅಬ್ದುಲ್ಲಾ ಅಜಮ್ ಅವರನ್ನು ರಾಂಪುರದ ಸುವಾರ್ ಕ್ಷೇತ್ರದ ಶಾಸಕ ಸ್ಥಾನದಿಂದ ಅನರ್ಹಗೊಳಿಸಿ ಯುಪಿ ಸೆಕ್ರೆಟರಿಯೇಟ್ ಅಧಿಸೂಚನೆಯನ್ನು ಹೊರಡಿಸಿತ್ತು. ಆದರೆ ಬಿಜೆಪಿ ಶಾಸಕನಿಗೆ 25 ವರ್ಷಗಳ ಶಿಕ್ಷೆ ವಿಧಿಸಿದ್ದರೂ ಅಮಾನತು ಮಾಡದಿರುವುದು ಟೀಕೆಗೆ ಕಾರಣವಾಗಿದೆ.

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...