ರೈತ ಹೋರಾಟ

ಕೇಂದ್ರ ಸರ್ಕಾರದ ಕರಾಳ ಕೃಷಿ ಕಾಯ್ದೆಗಳನ್ನು ಹಿಂತೆಗೆದುಕೊಳ್ಳಬೇಕೆಂದು ಒತ್ತಾಯಿಸಿ ಲಕ್ಷಾಂತರ ರೈತರು ಕಳೆದ ಎರಡು ತಿಂಗಳಿನಿಂದ ಶಾಂತಿಯುತ ಹೋರಾಟ ಮಾಡುತ್ತಿದ್ದಾರೆ. ಆದರೆ ಕೆಲವು ಮುಖ್ಯವಾಹಿನಿಯ ಮಾಧ್ಯಮಗಳು ಈ ರೈತರನ್ನು, ಖಾಲಿಸ್ತಾನಿಗಳು, ಪ್ರತ್ಯೇಕತಾವಾದಿಗಳು, ಭಯೋತ್ಪಾದಕ ಸಂಘಟನೆಗಳಿಂದ ಪ್ರಭಾವಿತವಾಗಿದ್ದಾರೆ ಎಂದು ಮುಂತಾಗಿ ಬಿಂಬಿಸುತ್ತಿವೆ. ಇದುವರೆಗೂ ಕೇವಲ ಹೀಗೆಯೇ ಬಿಂಬಿಸುತ್ತಿದ್ದ ಮುಖ್ಯವಾಹಿನಿಯ ಮಾಧ್ಯಮಗಳು ಈಗ ಮೌನ ಮುರಿದು, ತಮ್ಮ ಬಹುಮುಖ್ಯ ಚರ್ಚೆಗಳನ್ನು ರೈತರ ಪ್ರತಿಭಟನೆಯ ಮೇಲೆ ಕೇಂದ್ರೀಕರಿಸಿವೆ. ಈ ಮೂಲಕ “ರೈತ ಪ್ರತಿಭಟನೆಯು ರಾಜಕೀಯ ಪ್ರೇರಿತ ಮತ್ತು ಭಯೋತ್ಪಾದಕರ ಕೈವಾಡವಿದೆ” ಎನ್ನುತ್ತಾ ಕೂಗಾಡುತ್ತಿದ್ದಾರೆ. ಇದು ಆಶ್ಚರ್ಯಕರವಲ್ಲದಿದ್ದರೂ ಆಸಕ್ತಿದಾಯಕವಾಗಿದೆ.

ಎಲ್ಲರಿಗೂ ತಿಳಿದಿರುವಂತೆ, ಕೆಲವು ಸಿಖ್ಖರು ಸಿಖ್ ಧರ್ಮದ ಧ್ವಜ ‘ನಿಶಾನ್ ಸಾಹೀಬ್’ಅನ್ನು ಕೆಂಪುಕೋಟೆಯಲ್ಲಿ ಹಾರಿಸಿದ್ದಾರೆ. ಆದರೆ ಇದು ರೈತರ ಹೋರಾಟವನ್ನು ದಿಕ್ಕುತಪ್ಪಿಸುವ ಸಲುವಾಗಿ ಬಿಜೆಪಿ ಕೈಗೊಂಡ ತಂತ್ರ ಎಂಬುದು ಶೀಘ್ರವೇ ತಿಳಿದುಬಂದಿದೆ. ಈ ಘಟನೆಯಲ್ಲಿ ಚರ್ಚೆಗೊಳಪಡುತ್ತಿರುವ ಪ್ರಮುಖ ವ್ಯಕ್ತಿ ದೀಪ್ ಸಿಧು.

ಪ್ರಧಾನಿ ಮೋದಿ ಸರ್ಕಾರ ಜಾರಿಗೆ ತಂದಿರುವ ಈ ಕಾಯ್ದೆಗಳ ವಿರುದ್ಧ ದೇಶದಾದ್ಯಂತ ಇಷ್ಟುದೊಡ್ಡ ಪ್ರತಿಭಟನೆ ನಡೆಯುತ್ತದೆ ಎಂದು ಬಿಜೆಪಿ ಊಹಿಸಿರಲಿಲ್ಲ. ಈ ಕಾನೂನುಗಳು ಕಾರ್ಪೊರೇಟ್‌ಗಳ ಪರ ಮತ್ತು ರೈತರ ವಿರೋಧಿಯಾಗಿದೆ ಎಂಬುದು ಪ್ರತಿಭಟನಾ ನಿರತ ರೈತರ ವಾದವಾಗಿದೆ. ಹಾಗಾಗಿಯೇ ಕಳೆದ 2 ತಿಂಗಳಿನಿಂದ ಲಕ್ಷಾಂತರ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಸಿಖ್ ಧ್ವಜ ಹಾರಿಸಿದವ ಬಿಜೆಪಿ ಕಾರ್ಯಕರ್ತ ಎಂಬುದು ಸಾಬೀತಾಗಿದೆ: ಸಿದ್ದರಾಮಯ್ಯ

ಇದರ ಭಾಗವಾಗಿ 72 ನೇ ಗಣರಾಜ್ಯೋತ್ಸವವನ್ನು ರೈತ ಗಣರಾಜ್ಯೋತ್ಸವವೆಂದು ಆಚರಿಸುವ ಮೂಲಕ ರಾಷ್ಟ್ರ ರಾಜಧಾನಿಯಲ್ಲಿ ಶಾಂತಿಯುತ ಟ್ರ್ಯಾಕ್ಟರ್ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿತ್ತು. ಅದರಂತೆ ದೆಹಲಿ ಪೊಲೀಸರು ನೀಡಿದ ಉದ್ದೇಶಿತ ಮಾರ್ಗದಲ್ಲಿಯೇ ಮೆರವಣಿಗೆ ನಡೆಸುವುದಾಗಿ ರೈತರು ಒಪ್ಪಿಕೊಂಡು ರ್ಯಾಲಿಯನ್ನೂ ನಡೆಸಿದರು. ಆದರೆ ರೈತರ ಒಂದು ಗುಂಪು ಮಾತ್ರ ನಿಗದಿತ ಸಮಯಕ್ಕೂ ಮೊದಲೇ ಪೊಲೀಸರು ಹಾಕಿದ್ದ ಬ್ಯಾರಿಕೇಡ್‌ಗಳನ್ನು ಮುರಿದು ಟ್ರ್ಯಾಕ್ಟರ್ ಪೆರೇಡ್ ನಡೆಸಿತು. ಇದು ಕೊನೆಗೆ ಹಿಂಸಾತ್ಮಕ ರೂಪ ಪಡೆದು ಕೆಂಪುಕೋಟೆಯಲ್ಲಿ ಸಿಖ್ ಧರ್ಮದ ಧ್ವಜ ಹಾರಿಸುವಲ್ಲಿಗೆ ಕೊನೆಯಾಯಿತು. ಆದರೆ ವಿಪರ್ಯಾಸವೆಂದರೆ, ಈ ಧ್ವಜವನ್ನು (ಜಗತ್ತಿನಾಧ್ಯಂತ ಇರುವ ಪ್ರತಿಯೊಂದು ಗುರುದ್ವಾರಗಳ ಮೇಲೆ ಹಾರಿಸಲಾಗಿರುವ) ಬಿಜೆಪಿ ಪ್ರಣೀತ ಮಾಧ್ಯಮಗಳು ಖಾಲಿಸ್ತಾನ್ ಚಳುವಳಿಯ ಧ್ವಜ ಎಂದು ಬಿಂಬಿಸಿದವು.

ಟೈಮ್ಸ್‌ ನೌ ಸುದ್ದಿ ಸಂಸ್ಥೆಯು, “Farmers’ stir: Intel reports suggest ISI gave Rs 5 cr to Babbar…” (ರೈತರ ಪ್ರತಿಭಟನೆಗೆ ಐಎಸ್‌ಐ ಉಗ್ರ ಸಂಘಟನೆ 5 ಕೋಟಿ ನೀಡಿದೆ)” ಎಂದು ಸುಳ್ಳು ವರದಿಯೊಂದನ್ನು ಮಾಡಿತ್ತು. ಆದರೆ ಈ ಸುದ್ದಿಯನ್ನು ಈಗಾಗಲೇ ಡಿಲೀಟ್ ಮಾಡಿದೆ. ಇದರ ಲಿಂಕ್ ಇಲ್ಲಿದೆ. ಇದರ ಸ್ಕ್ರೀನ್‌ಶಾಟ್ ಅನ್ನು ಈ ಕೆಳಗೆ ನೀಡಲಾಗಿದೆ.

ರೈತ ಹೋರಾಟವನ್ನು ದಿಕ್ಕುತಪ್ಪಿಸಲು ಮೂರೂ ಬಿಟ್ಟ ಮಾಧ್ಯಮಗಳು ಮಾಡುತ್ತಿರುವ ನಾಚಿಕೆಗೇಡಿನ ಕೆಲಸಕ್ಕೆ ಇದೇ ಪುರಾವೆ.

ಇದನ್ನೂ ಓದಿ: ದೂರದಲ್ಲಿ ನಿಂತು ಸರಿತಪ್ಪುಗಳ ಕುರಿತು ತೀರ್ಪು ನೀಡುವ ’ಲಿಬರಲ್‌’ಗಳ ದುಸ್ಥಿತಿ

ಕೆಂಪುಕೋಟೆಯ ಸುತ್ತಲೂ ನಿಯೋಜಿಸಲಾಗಿರುವ ಭಾರೀ ಪೊಲೀಸ್‌ ಪಡೆಯು, ಸಿಧು ಮತ್ತು ಅವನ 50-60 ಜನರ ಗುಂಪನ್ನು ತಡೆಯಲು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಆದರೆ ಮತ್ತೊಂದೆಡೆ ಸಿಂಘು ಗಡಿಯಲ್ಲಿ ಶಾಂತಿಯುತ ಪ್ರತಿಭಟನೆ ಮಾಡುತ್ತಿರುವ ರೈತರನ್ನು ಮಾಧ್ಯಮಗಳು ಗುರಿಮಾಡಿಕೊಂಡಿದೆ ಎಂದು ದೆಹಲಿಯಲ್ಲಿರುವ ನಾನು ಗೌರಿ (ಕನ್ನಡ) ಮತ್ತು ಗೌರಿ ಲಂಕೇಶ್ ನ್ಯೂಸ್ (ಇಂಗ್ಲಿಷ್) ತಂಡ ವರದಿ ಮಾಡಿದೆ.

ಯಾವುದೇ ಘಟನೆಯನ್ನು ಕೋಮುವಾದೀಕರಣಗೊಳಿಸುವುದು ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್)ನ ಭಾಗವಾಗಿರುವ ಬಿಜೆಪಿಯ ವಿಶಿಷ್ಟ ಲಕ್ಷಣವಾಗಿದೆ. ಒಬ್ಬರ ಗಮನವನ್ನು ವಾಸ್ತವ ಸಮಸ್ಯೆಯಿಂದ ಬೇರೆಡೆಗೆ ವಿಷಯಾಂತರ ಮಾಡಲು, ಧಾರ್ಮಿಕ ಭಾವನೆಗಳನ್ನು ಕೆರಳಿಸಲು ಪ್ರಯತ್ನಿಸುತ್ತಿರುತ್ತದೆ. ಬಿಜೆಪಿಯ ಈ ಪ್ರವೃತ್ತಿಯನ್ನು ಕರ್ನಾಟಕದದ ಪರ್ಯಾಯ ಕಾನೂನು ವೇದಿಕೆ ತನ್ನ ವರದಿಯಲ್ಲಿ ದಾಖಲಿಸಿದೆ.

ಈ ವರದಿಯ ಪ್ರಕಾರ, ಕರ್ನಾಟಕದಲ್ಲಿ ಇದುವರೆಗೂ ನಡೆದಿರುವ ಹೆಚ್ಚಿನ ಕೋಮು ಗಲಭೆಗಳನ್ನು, ‘ಮಸೀದಿಯ ಆವರಣದಲ್ಲಿ ಸತ್ತ ಹಂದಿಯನ್ನು ಎಸೆಯುವುದು, ದೇವಸ್ಥಾನಗಳ ಮೇಲೆ ಪಾಕಿಸ್ತಾನದ ಹಸಿರುವ ಧ್ವಜವನ್ನು ಹಾರಿಸುವುದು’ ಮುಂತಾದ ಕುತಂತ್ರಗಳನ್ನು ಮಾಡಿ ಪ್ರಚೋದಿಸಿದೆ. ಹಾಗಾಗಿ ದೀಪ್ ಸಿಧು ಮತ್ತು ಅವನ ಗುಂಪು ಮಾಡಿರುವ ಕೃತ್ಯವು ಈ ಸಂಘಪರಿವಾರದ ಅನೈತಿಕ ತಂತ್ರದ ಭಾಗವಾಗಿದೆ. ದೆಹಲಿ ಪೊಲೀಸರು ಬಿಜೆಪಿ ಮತ್ತು ಅದರ ಪ್ರಜಾಪ್ರಭುತ್ವ ವಿರೋಧಿ ತಂತ್ರಗಳ ಜೊತೆ ಶಾಮೀಲಾಗಿದೆ ಎಂಬುದು ಇದರಿಂದ ತಿಳಿದುಬರುತ್ತದೆ.

ಕೃಪೆ: ಗೌರಿ ಲಂಕೇಶ್ ನ್ಯೂಸ್


ಇದನ್ನೂ ಓದಿ: 10 ರೈತ ನಾಯಕರ ಮೇಲೆ FIR: ಧ್ವಜ ಹಾರಿಸಿದ ದೀಪ್ ಸಿಧು ಹೆಸರು ಕೈಬಿಟ್ಟ…

LEAVE A REPLY

Please enter your comment!
Please enter your name here