Homeಮುಖಪುಟಕರ್ಪೂರಿ ಠಾಕೂರ್‌ಗೆ 'ಭಾರತ ರತ್ನ' ಘೋಷಣೆ: ಬಿಜೆಪಿಯ ಓಟ್‌ ಬ್ಯಾಂಕ್ ತಂತ್ರ?

ಕರ್ಪೂರಿ ಠಾಕೂರ್‌ಗೆ ‘ಭಾರತ ರತ್ನ’ ಘೋಷಣೆ: ಬಿಜೆಪಿಯ ಓಟ್‌ ಬ್ಯಾಂಕ್ ತಂತ್ರ?

- Advertisement -
- Advertisement -

ಸಮಾಜವಾದಿ ನಾಯಕ, ಬಿಹಾರದ ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್ ಅವರಿಗೆ ಮರಣೋತ್ತರ ‘ಭಾರತ ರತ್ನ’ ಪ್ರಶಸ್ತಿ ನೀಡಲಾಗುವುದು ಎಂದು ರಾಷ್ಟ್ರಪತಿ ಭವನ ಮಂಗಳವಾರ ಪ್ರಕಟಿಸಿದೆ.

ಕರ್ಪೂರಿ ಠಾಕೂರ್ ಅವರ ಜನ್ಮ ಶತಮಾನೋತ್ಸವ ಆಚರಣೆಯ ಒಂದು ದಿನ ಮೊದಲು ರಾಷ್ಟ್ರಪತಿ ದ್ರೌಪದಿ ಮುರ್ಮು ದೇಶದ ಅತ್ಯುನ್ನತ ಪ್ರಶಸ್ತಿ ಘೋಷಣೆ ಮಾಡಿದ್ದಾರೆ.

ಸ್ವಾತಂತ್ರ ಹೋರಾಟಗಾರರಾಗಿದ್ದ ಕರ್ಪೂರಿ ಠಾಕೂರ್ ಅವರು, ಶಿಕ್ಷಣ, ರಾಜಕೀಯ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ್ದರು. ಎರಡು ಬಾರಿ ಬಿಹಾರದ ಮುಖ್ಯಮಂತ್ರಿಯಾಗಿದ್ದರು. ದೇಶದ ಪ್ರಮುಖ ರಾಜಕಾರಣಿಗಳಾದ ಲಾಲು ಪ್ರಸಾದ್ ಯಾದವ್, ಬಿಹಾರ ಸಿಎಂ ನಿತೀಶ್ ಕುಮಾರ್, ರಾಮ್‌ ವಿಲಾಸ್ ಪಾಸ್ವಾನ್ ಹಾಗೂ ಸುನಿಲ್ ಕುಮಾರ್ ಮೋದಿ ರಾಜಕೀಯದಲ್ಲಿ ಕರ್ಪೂರಿ ಠಾಕೂರ್ ಅವರ ಶಿಷ್ಯಂದಿರು.

ಕರ್ಪೂರಿ ಠಾಕೂರ್ ಹುಟ್ಟಿದ್ದು 1924ರ ಜನವರಿ 24ರಂದು. ತಂದೆ ಶ್ರೀ ಕೋಗುಲ್‌ ಠಾಕೂರ್, ತಾಯಿ ರಾಮ್‌ದುಲಾರಿ ದೇವಿ. ಅವರ ತಂದೆ ಕ್ಷೌರಿಕ ವೃತ್ತಿ ಮಾಡುತ್ತಿದ್ದರು. ಕೃಷಿಕರೂ ಆಗಿದ್ದರು.

ಬಿಎ ಪದವಿ ಪಡೆದು ತಮ್ಮ ಹಳ್ಳಿಯಲ್ಲಿ ಶಿಕ್ಷಕರಾಗಿದ್ದ ಠಾಕೂರ್ ಅವರು, ಕ್ವಿಟ್‌ ಇಂಡಿಯಾ ಚಳವಳಿ ಪ್ರಾರಂಭವಾದಾಗ ಅದರಲ್ಲಿ ಪಾಲ್ಗೊಂಡಿದ್ದರು. ಜಯಪ್ರಕಾಶ್ ನಾರಾಯಣ್ ರಚಿಸಿದ್ದ ‘ಆಜಾದ್ ದಾಸ್ತಾ’ದ ಸಕ್ರಿಯ ಸದಸ್ಯರಾಗಿದ್ದರು. ಕ್ವಿಟ್‌ ಇಂಡಿಯಾ ಚಳವಳಿ ಸಂದರ್ಭದಲ್ಲಿ 26 ತಿಂಗಳು ಅವರು ಜೈಲುವಾಸ ಅನುಭವಿಸಿದ್ದರು. ಸ್ವಾತಂತ್ರ್ಯ ಬರುವ ಮೊದಲು ಎರಡು ಸಲ ಹಾಗೂ ಬಂದ ನಂತರ 18 ಸಲ ಅವರು ಜೈಲು ಶಿಕ್ಷೆಗೆ ಒಳಗಾಗಿದ್ದರು.

ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ 1952ರಲ್ಲಿ ಬಿಹಾರದ ತೈಪುರ್ ಕ್ಷೇತ್ರದಿಂದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ್ದ ಠಾಕೂರ್, ಮೊದಲ ಬಾರಿಗೆ ಗೆಲುವು ದಾಖಲಿಸಿದ್ದರು. 1967ರಲ್ಲಿ ಮಹಾಮಾಯಾ ಪ್ರಸಾದ್ ಅವರ ಸಚಿವ ಸಂಪುಟದಲ್ಲಿ ಶಿಕ್ಷಣ ಸಚಿವ ಹಾಗೂ ಉಪ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದರು. 1970ರಲ್ಲಿ ಕರ್ಪೂರಿ ಠಾಕೂರ್ ಅವರ ನೇತೃತ್ವದ ಸರ್ಕಾರ ಬಿಹಾರದಲ್ಲಿ ಅಧಿಕಾರಕ್ಕೆ ಬಂದಿತ್ತು.

ತನ್ನ ರಾಜಕೀಯ ಅವಧಿಯಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಕರ್ಪೂರಿ ಠಾಕೂರ್ ಹಲವು ಕೊಡುಗೆಗಳನ್ನು ನೀಡಿದ್ದರು. ಆ ಮೂಲಕ ಮಧ್ಯಮ ಮತ್ತು ಬಡ ವರ್ಗದ ಯುವಜನರಿಗೆ ಸಹಾಯ ಮಾಡಿದ್ದರು. ಕರ್ಪೂರಿ ಠಾಕೂರ್ ಅವರು ಮೆಟ್ರಿಕ್ಯುಲೇಷನ್ ತೇರ್ಗಡೆಯಾಗಲು ಇದ್ದ ಇಂಗ್ಲಿಷ್‌ನ ಅಗತ್ಯವನ್ನು ತಪ್ಪಿಸಿದ್ದರು. ಎಂಟನೇ ತರಗತಿಯವರೆಗೆ ಉಚಿತ ಶಿಕ್ಷಣ ಸೌಲಭ್ಯ ಕಲ್ಪಿಸಿದ್ದರು. ಉರ್ದು ಭಾಷೆಗೆ ಬಿಹಾರದಲ್ಲಿ ಎರಡನೇ ಸ್ಥಾನಮಾನ ನೀಡಿದ್ದರು.

ಕರ್ಪೂರಿ ಠಾಕೂರ್ 1978ರಲ್ಲಿ ಬಿಹಾರದ ಮುಖ್ಯಮಂತ್ರಿಯಾಗಿದ್ದಾಗ ಸರ್ಕಾರಿ ಉದ್ಯೋಗದಲ್ಲಿ ದಮನಿತರಿಗೆ ಶೇ 26ರಷ್ಟು ಮೀಸಲಾತಿಯನ್ನು ಜಾರಿಗೆ ತಂದರು. ರಾಜ್ಯದ ಸರ್ಕಾರಿ ನೌಕರರಿಗೆ ಸಮಾನ ವೇತನ ನೀಡಲು ವೇತನ ಆಯೋಗದ ಮೂಲಕ ಸಮಾನ ವೇತನ ಪದ್ದತಿ ಜಾರಿಗೆ ತಂದರು. ಅಂತರ್ಜಾತಿ ವಿವಾಹಗಳನ್ನು ಪ್ರೋತ್ಸಾಹಿಸಿದ್ದರು.

ತನ್ನ ಉತ್ತಮ ಕೆಲಸಗಳ ಕಾರಣಕ್ಕೆ ಜನರಿಂದ ‘ಜನ ಸೇವಕ್‌’ ಎಂದು ಬಿರುದು ಪಡೆದಿದ್ದ ಕರ್ಪೂರಿ ಠಾಕೂರ್, 1988ರಲ್ಲಿ ಹೃದಯಾಘಾತದಿಂದ ನಿಧನರಾದರು.

‘ಬಿಜೆಪಿಯ ಓಟ್‌ ಬ್ಯಾಂಕ್ ತಂತ್ರ?

ಕರ್ಪೂರಿ ಠಾಕೂರ್ ಅವರಿಗೆ ರಾಷ್ಟ್ರಪತಿ ‘ಭಾರತ ರತ್ನ’ ಪ್ರಶಸ್ತಿ ಘೋಷಣೆ ಮಾಡಿರುವುದರ ಹಿಂದೆ ಬಿಜೆಪಿಯ ರಾಜಕೀಯ ಲೆಕ್ಕಾಚಾರ ಇರಬಹುದು ಎಂದು ಕೆಲ ಮಾಧ್ಯಮಗಳು ವಿಶ್ಲೇಷಿವೆ. ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ ಪ್ರತಿಪಕ್ಷಗಳ ‘ಇಂಡಿಯಾ ಒಕ್ಕೂಟ’ ಸಾಮಾಜಿಕ ನ್ಯಾಯವನ್ನು ಪ್ರಮುಖ ಅಸ್ತ್ರವಾಗಿ ಬಳಸಿಕೊಳ್ಳುತ್ತಿದೆ. ಇದಕ್ಕೆ ಪ್ರತ್ಯುತ್ತರ ನೀಡಲು ಬಿಜೆಪಿ ಸಾಮಾಜಿಕ ನ್ಯಾಯದ ಮುಂದಾಳುಗೆ ಪ್ರಶಸ್ತಿ ಘೋಷಣೆ ಮಾಡಿದೆ ಎನ್ನಲಾಗಿದೆ.

ಅಲ್ಲದೆ, ಕರ್ಪೂರಿ ಅವರಿಗೆ ಭಾರತ ರತ್ನ ಘೋಷಣೆ ಮಾಡಿರುವುದರ ಹಿಂದೆ ಅತೀ ಹಿಂದುಳಿದ ವರ್ಗಗಳ ಮತ ಬ್ಯಾಂಕ್ ಸೆಳೆಯುವ ತಂತ್ರವೂ ಅಡಗಿದೆ ಎಂದು ಹೇಳಲಾಗ್ತಿದೆ. ಹಿಂದುಳಿದ ವರ್ಗಗಳ ಮತ ಬ್ಯಾಂಕ್ ಪ್ರಸ್ತುತ  ಇಂಡಿಯಾದ ಒಕ್ಕೂಟದ ಪಕ್ಷಗಳ ಬಳಿಯೇ ಇದೆ. ಅವುಗಳನ್ನು ತಮ್ಮತ್ತ ಸೆಳೆಯುವ ಬಿಜೆಪಿಯ ತಂತ್ರದ ಭಾಗವೇ ಪ್ರಶಸ್ತಿ ಎಂದು ಹೇಳಲಾಗಿದೆ.

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಪ್ರಶಸ್ತಿ ಘೋಷಣೆಯನ್ನು ಸ್ವಾಗತಿಸಿದ್ದಾರೆ. ಆದರೆ, ಅವರ ಪಕ್ಷ ಜೆಡಿಯುನ ಮಿತ್ರ ಪಕ್ಷ ಆರ್‌ಜೆಡಿ “ಇದು ಬಿಜೆಪಿಯ ರಾಜಕೀಯ ಗಿಮಿಕ್” ಎಂದಿದೆ.

“ಕರ್ಪೂರಿ ಠಾಕೂರ್ ಅವರ 100ನೇ ಜನ್ಮ ಜಯಂತಿಯ ಸಂದರ್ಭದಲ್ಲಿ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಗೌರವ ಘೋಷಣೆ ಮಾಡಿರುವುದು ಸಮಾಜದ ದಲಿತರು, ವಂಚಿತ ಮತ್ತು ನಿರ್ಲಕ್ಷಿತ ವರ್ಗಗಳಲ್ಲಿ ಸಕಾರಾತ್ಮಕ ಭಾವನೆಗಳನ್ನು ಮೂಡಿಸಲಿದೆ. ಕರ್ಪೂರಿ ಠಾಕೂರ್‌ಗೆ ಭಾರತ ರತ್ನ ನೀಡಬೇಕೆಂದು ನಾನು ಯಾವಾತ್ತೋ ಒತ್ತಾಯಿಸಿದ್ದೆವು. ಸರ್ಕಾರದ ನಿರ್ಧಾರವು ಸಂತೋಷವನ್ನುಂಟು ಮಾಡಿದೆ” ಎಂದು ನಿತೀಶ್ ಕುಮಾರ್ ಹೇಳಿದ್ದಾರೆ.

ಇದನ್ನೂ ಓದಿ : ನಾವು ಬ್ಯಾರಿಕೇಡ್‌ಗಳನ್ನು ಮುರಿದಿದ್ದೇವೆ, ಆದರೆ ಕಾನೂನನ್ನು ಮೀರುವುದಿಲ್ಲ: ರಾಹುಲ್ ಗಾಂಧಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read