Homeಮುಖಪುಟ8 ವರ್ಷಗಳ ನರೇಂದ್ರ ಮೋದಿ ಸರ್ಕಾರದ ವಿಚ್ಛಿದ್ರಕಾರಿ ಸಾಧನೆಗಳು

8 ವರ್ಷಗಳ ನರೇಂದ್ರ ಮೋದಿ ಸರ್ಕಾರದ ವಿಚ್ಛಿದ್ರಕಾರಿ ಸಾಧನೆಗಳು

- Advertisement -
- Advertisement -

ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಎಷ್ಟೊಂದು ಸ್ವಮೋಹಿಯೆಂದರೆ ಇವರು ಯಾವತ್ತು ’ನಮ್ಮ ಸರ್ಕಾರ’, ’ಬಿಜೆಪಿ ಸರ್ಕಾರ’ ಅಥವಾ ’ಭಾರತ ಸರ್ಕಾರ’ ಎನ್ನಲಿಲ್ಲ. ’ಮೋದಿ ಸರ್ಕಾರ’ ಎಂದೇ ಕರೆದುಕೊಳ್ಳುತ್ತಿದ್ದಾರೆ. ದ್ವೇಷವನ್ನು ಬಿತ್ತುವ ಕೆಲಸ ಮಾಡಿರುವುದೇ ಇವರ ಎಂಟು ವರ್ಷಗಳ ಸಾಧನೆಯಾಗಿದೆ. ಈತನ ಸಾಧನೆಗಳು ಎಷ್ಟು ಪೊಳ್ಳು ಎನ್ನುವುದಕ್ಕೆ ಇವರು ಕಳೆದ ಎಂಟು ವರ್ಷಗಳಲ್ಲಿ ಒಂದೇ ಒಂದು ಪತ್ರಿಕಾಗೋಷ್ಠಿ ಎದುರಿಸದಿರುವುದೇ ಸಾಕ್ಷಿ. ಮಾಂಸಾಹಾರ-ಸಸ್ಯಾಹಾರ ಎನ್ನುವ ಹೆಸರಿನಲ್ಲಿ ಸಮಾಜವನ್ನು ಒಡೆಯುತ್ತಿರುವುದು ಇವರ ಮಹತ್ತರ ಸಾಧನೆಯಾಗಿದೆ. ಜನರು ಯಾವ ಧರ್ಮಕ್ಕೆ ಸೇರಿದ್ದಾರೆ ಎಂಬುದನ್ನು ಅವರು ಧರಿಸಿರುವ ಬಟ್ಟೆಯ ಮೇಲೆ ಗುರುತಿಸಬಹುದು ಎನ್ನುವ ಪ್ರಧಾನಮಂತ್ರಿ ಯಾವ ಬಗೆಯ ಸಂದೇಶವನ್ನು ನಮ್ಮ ಮಕ್ಕಳಿಗೆ ನೀಡಬಹುದು? ಕಳೆದ 8 ವರ್ಷಗಳಲ್ಲಿ ಮೋದಿ ಸರ್ಕಾರವು ಮಾಡಿರುವ ಸಾಧನೆಗಳಿಗಿಂತ ಅದು ಮಾಡಿರುವ ಅನಾಹುತಗಳು ಅದೆಷ್ಟೋಪಟ್ಟು ಅಧಿಕವಾಗಿವೆ. ’ನುಡಿಯೊಳಗಾಗಿ ನಡೆಯದಿದ್ದರೆ ಕೂಡಲಸಂಗಮ ಒಲಿಯುವುದಿಲ್ಲ’ ಎಂಬುದು ಬಸವ ಸೂತ್ರ. ಮೋದಿ ಸರ್ಕಾರದ ಸಾಧನೆಯೆಂದರೆ ನುಡಿದದ್ದನ್ನು ನಡೆಯದಿರುವುದೇ ಆಗಿದೆ.

(1) ಮೋದಿಯವರನ್ನು ಸೇರಿಸಿಕೊಂಡು ಬಾಬಾ ರಾಮದೇವ್, ಶ್ರೀ ರವಿಶಂಕರ ಗುರೂಜಿ, ನಳಿನ್ ಕುಮಾರ್ ಕಟೀಲ್ ಮುಂತಾದವರು 2013-14ರಲ್ಲಿ ರೂಪಾಯಿಯ ವಿನಿಮಯ ದರ ಅಂದಿನ ಡಾಲರ್ ಎದುರಿಗೆ ರೂ. 60ರಷ್ಟಿದ್ದುದನ್ನು ರೂ. 30ಕ್ಕೆ ಅಥವಾ ರೂ. 40ಕ್ಕೆ ಇಳಿಸುವುದಾಗಿ ’ನುಡಿದಿದ್ದರು’. ಅದು ನಡೆಯಲ್ಲಿ ಜಾರಿಗೆ ಬಂದಿತೆ? ತದ್ವಿರುದ್ಧವಾಗಿ ಡಾಲರಿನ ಎದುರಿಗೆ ರೂಪಾಯಿಯ ವಿನಿಮಯ ದರ ಸ್ವಾತಂತ್ರ್ಯಾನಂತರ
ಕಂಡರಿಯದ ಪಾತಾಳಕ್ಕಿಳಿದಿದೆ. ಒಂದು ಡಾಲರಿಗೆ ಇಂದು ರೂ. 77.5 ನೀಡಬೇಕಾಗಿದೆ. ಇದು ನಮ್ಮ ಸರ್ಕಾರದ ವೈಫಲ್ಯ ಎನ್ನುವುದನ್ನು ಒಪ್ಪಿಕೊಳ್ಳುವ ಮುತ್ಸದ್ಧಿತನ ಮೋದಿಯವರಿಲ್ಲ. ಅವರು ಮುಂದಿನ ಚುನಾವಣೆ ಬಗ್ಗೆ ಗಮನ ನೀಡುವ ರಾಜಕಾರಣಿಯೇ ವಿನಾ ಮುಂದಿನ ಜನಾಂಗದ ಬಗ್ಗೆ ಯೋಚಿಸುವ ಮುತ್ಸದ್ಧಿಯಲ್ಲ.

(2) ವಾರ್ಷಿಕ ಎರಡು ಕೋಟಿ ಉದ್ಯೋಗಗಳನ್ನು ಸೃಷ್ಟಿಸುವುದಾಗಿ ಮೋದಿ ಮತ್ತು ಮೋದಿ ಸರ್ಕಾರದವರು ’ನುಡಿದಿದ್ದರು’. ಇಲ್ಲಿಯೂ ಸ್ವಾತಂತ್ರ್ಯಾನಂತರ ಕಂಡುಕಾಣರಿಯದ ರೀತಿಯ ನಿರುದ್ಯೋಗವನ್ನು ಭಾರತ ಇಂದು ಎದುರಿಸುತ್ತಿದೆ. ಅರ್ಥಶಾಸ್ತ್ರಜ್ಞರು ಹೇಳುತ್ತಿರುವಂತೆ ’ಜಾಬ್-ಲೆಸ್ ಗ್ರೋಥ್’ ಎಂಬುದು ಹೋಗಿ ಇಂದು ನಾವು ’ಜಾಬ್-ಲಾಸ್ಟ್ ಗ್ರೋಥ್’ ಎದುರಿಸುವಂತಾಗಿದೆ. ಇದು ಮೋದಿ ಸರ್ಕಾರವು ಅನುಸರಿಸುತ್ತಿರುವ ಖುಲ್ಲಂಖುಲ್ಲಾ ಖಾಸಗೀಕರಣ-ಕಾರ್ಪೊರೆಟೀಕರಣದ ಪರಿಣಾಮವಾಗಿದೆ. ಇದು ಸರ್ಕಾರದ ವಿವೇಚನಾರಹಿತ ನೀತಿಗಳ ಪರಿಣಾಮವಾಗಿದೆ ಎಂಬುದನ್ನು ತಜ್ಞರು ಹೇಳುತ್ತಿದ್ದಾರೆ. ಮಹಿಳೆಯರ ನಿರುದ್ಯೋಗ ಪ್ರಮಾಣವು ಮಿತಿಮೀರಿದೆ ಎಂಬುದು ವರದಿಗಳಿಂದ ತಿಳಿಯುತ್ತದೆ.

(3)ಹೇಳಿಕೊಳ್ಳಬಹುದಾದಂತಹ ಒಂದು ಉದ್ಯೋಗ ಕಾರ್ಯಕ್ರಮವನ್ನು ಮೋದಿ ಸರ್ಕಾರವು ಕಳೆದ 8 ವರ್ಷಗಳಲ್ಲಿ ಜಾರಿಗೊಳಿಸಲಿಲ್ಲ. ಈ ಸರ್ಕಾರಕ್ಕೆ ಉದ್ಯೋಗ ನೀತಿ ಎಂಬುದೇ ಇದ್ದಂತಿಲ್ಲ. ಎಂಜಿಎನ್‌ಆರ್‌ಈಜಿಎ ಎಂಬ ಕಾರ್ಯಯೋಜನೆಯನ್ನು ಪ್ರಧಾನಿಗಳು ಕಾಂಗ್ರೆಸ್ಸಿನ ’ವೈಫಲ್ಯದ ಸ್ಮಾರಕ’ ಎಂದು ಅಸಹ್ಯಕರವಾಗಿ ಲೋಕಸಭೆಯಲ್ಲಿ ಹೀಯಾಳಿಸಿದ್ದರು. ಆದರೆ ಅದೇ ಕಾರ್ಯಕ್ರಮವು ಕೋವಿಡ್ ಪೆಂಡಮಿಕ್ ಸಂದರ್ಭದಲ್ಲಿ ಕೋಟ್ಯಂತರ ಗ್ರಾಮೀಣವಾಸಿಗಳಿಗೆ ಜೀವನೋಪಾಯವನ್ನು ಒದಗಿಸಿತು ಎಂಬುದನ್ನು ಸರ್ಕಾರ
ಮರೆತಿರಬಹುದು. ನಮಗೆ ಇದನ್ನು ಮರೆಯುವುದಕ್ಕೆ ಯಾವುದೇ ಕಾರಣವಿಲ್ಲ.

(4) ಮೋದಿ ಸರ್ಕಾರದ ಆರ್ಥಿಕ ಸಲಹೆಗಾರ ಮಂಡಳಿಯು ನೀಡಿರುವ ’ಭಾರತದಲ್ಲಿ ಅಸಮಾನತೆಯ ಸ್ಥಿತಿಗತಿ’ ಎಂಬ ವರದಿಯಲ್ಲಿ ವರಮಾನದಲ್ಲಿನ ಅಸಮಾನತೆಯು ಏರಿಕೆಯಾಗುತ್ತಿರುವುದನ್ನು ದಾಖಲಿಸಲಾಗಿದೆ. ಈ ವರದಿಯಲ್ಲಿ ಮೋದಿ ಸರ್ಕಾರದ ಸಾಧನೆಗಳನ್ನು ಪಟ್ಟಿ ಮಾಡಲು ಮಂಡಳಿಯು ಬಹಳಷ್ಟು ಕಷ್ಟಪಟ್ಟಿದೆ. ಆದರೆ ಏರಿಕೆಯಾಗುತ್ತಿರುವ ಅಸಮಾನತೆಯನ್ನು ಮರೆಮಾಚಲು ಅದಕ್ಕೆ ಸಾಧ್ಯವಾಗಿಲ್ಲ. ಇದೇ ವಿಷಯವನ್ನು ಕುರಿತು ಆಕ್ಸ್‌ಫಾಮ್ ಸಂಸ್ಥೆಯು 2022ರಲ್ಲಿ ಪ್ರಕಟಿಸಿರುವ ವರದಿಯ ಶೀರ್ಷಿಕ ’ಇನೀಕ್ವಾಲಿಟಿ ಕಿಲ್ಸ್’ ಎಂಬುದಾಗಿದೆ ಮತ್ತು ಇದರಲ್ಲಿ ಭಾರತವನ್ನು ’ಅತಿ ಅಸಮಾನತೆಯ ದೇಶ’ ಎಂದು ಕರೆದಿದೆ. ಈ ಅಸಮಾನತೆಯ ಬಗ್ಗೆ ಪ್ರಧಾನಮಂತ್ರಿ ಒಂದು ಬಾರಿಯೂ ಮಾತನಾಡಿಲ್ಲ. ಇನ್ನು ಕ್ರಮಗಳನ್ನು ತೆಗೆದುಕೊಳ್ಳುವುದು ದೂರವೇ ಉಳಿಯಿತು!

(5) ನಮ್ಮ ಪ್ರಧಾನಮಂತ್ರಿ ಏರಿಕೆಯಾಗುತ್ತಿರುವ ಅಸಮಾನತೆಯ ಬಗ್ಗೆ ಏಕೆ ಮಾತನಾಡುವುದಿಲ್ಲ? ಉತ್ತರ ಸ್ಪಷ್ಟವಾಗಿದೆ. ಇವರು ಯಾವುದನ್ನು ನಾವು ’ಸನಾತನ ಅಸಮಾನತೆ’ ಎಂದು ಕರೆಯುತ್ತಿದ್ದೇವೆಯೋ ಆ ಚಾತುರ್ವರ್ಣ ವ್ಯವಸ್ಥೆಗೆ ಬದ್ಧರಾಗಿದ್ದಾರೆ. ಅದು ಸೈದ್ಧಾಂತಿಕವಾಗಿಯೇ ಅಸಮಾನತೆಯ ಪ್ರಣಾಳಿಕೆ. (ಅ). ನಾಲ್ಕು ವರ್ಣಗಳಲ್ಲಿ ಮೊದಲ ಮೂರು ದ್ವಿಜ ವರ್ಣಗಳಾದರೆ ನಾಲ್ಕನೆಯದು ಅದ್ವಿಜ ವರ್ಣ. (ಆ). ಅದ್ವಿಜ ವರ್ಣಗಳಲ್ಲಿನ ಜನರು ಮೇಲಿನ ತ್ರೈವರ್ಣೀಕರ ಸೇವೆ ಮಾಡಿಕೊಂಡಿರಬೇಕು. ಈ ಸೇವೆಗೆ ಪ್ರತಿಫಲವನ್ನು ನಿರೀಕ್ಷಿಸಬಾರದು. (ಇ). ತ್ರೈವರ್ಣೀಕ ಮಹಿಳೆಯರನ್ನು ಸೇರಿಸಿಕೊಂಡು ಎಲ್ಲ ಮಹಿಳೆಯರಿಗೆ ಧಾರ್ಮಿಕ ಹಕ್ಕುಗಳಿಲ್ಲ, ಅವರು ವೇದಗಳನ್ನು ಪಠಿಸುವಂತಿಲ್ಲ. ಇವರಿಗೆ ಮೋಕ್ಷವಿಲ್ಲ. (ಈ). ಚಾತುರ್ವರ್ಣ ವ್ಯವಸ್ಥೆಯು ಎಷ್ಟೊಂದು ಅಮಾನವೀಯವಾಗಿತ್ತೆಂದರೆ ಸಮಾಜದಲ್ಲಿನ ಶೇ.25ರಷ್ಟಿದ್ದ ದಲಿತರಿಗೆ ಚಾತುರ್ವರ್ಣದಲ್ಲಿ ’ಅವಕಾಶ’ವನ್ನೇ ನೀಡಿರಲಿಲ್ಲ. (ಉ). ದಲಿತರು ಸಮಾಜದ ಅಂಚಿನಲ್ಲಿ ವಂಚಿತ ಬದುಕನ್ನು ಬದುಕಬೇಕಾಗಿತ್ತು.

(6) ಪ್ರಸಿದ್ಧ ಸಮಾಜ ವಿಜ್ಞಾನಿ ಪ್ರತಾಪ್‌ಭಾನು ಮೆಹತ ಅವರು ಕರಣ್ ಥಾಪರ್ ಅವರಿಗೆ ನೀಡಿದ್ದ ಒಂದು ಸಂದರ್ಶನದಲ್ಲಿ ಯಾವುದೇ ಅನುಮಾನಕ್ಕೆ ಅವಕಾಶವಿಲ್ಲದಂತೆ ಮೋದಿ ಅವರ ಆಳ್ವಿಕೆಯನ್ನು ಮೂರು ಲಕ್ಷಣಗಳಿಂದ ಗುರುತಿಸುತ್ತಾರೆ. (ಅ). ಮೆಜಾರಿಟೇರಿಯನಿಸಮ್ (ಅಲ್ಪಸಂಖ್ಯಾತರನ್ನು ಎರಡನೆಯ ದರ್ಜೆಯ ಪ್ರಜೆಗಳಂತೆ ನಡೆಸಿಕೊಳ್ಳುವ ಬಹುಸಂಖ್ಯಾತ ಜನವರ್ಗದ ನಡೆವಳಿಕೆ) (ಆ). ಅಥಾರಿಟೇರಿಯನಿಸಮ್ (ವಿರೋಧ ಪಕ್ಷವನ್ನು, ಸರ್ಕಾರದ ಪಾಲಿಸಿಗಳನ್ನು ಟೀಕಿಸುವ ವಿದ್ವಾಂಸರನ್ನು, ಭಿನ್ನಮತೀಯರನ್ನು ಎಲ್ಲ ರೀತಿಯ ಅಪ್ರಜಾಪ್ರಭುತ್ವ ಕ್ರಮಗಳಿಂದ ದಮನಿಸುವ ಆಳ್ವಿಕೆ) (ಇ). ಕಮ್ಯುನಲಿಸಮ್ (ಸಮಾಜದಲ್ಲಿ ಒಂದು ಧರ್ಮದವರ ದಬ್ಬಾಳಿಕೆ ಮತ್ತು ಅಲ್ಪಸಂಖ್ಯಾತರನ್ನು ಧಾರ್ಮಿಕ ಆಕ್ರಮಣದ ಮೂಲಕ ಶೋಷಣೆ ಮಾಡುವುದು). ಇಂದು ಮೋದಿ ಆಡಳಿತದ ಪ್ರಧಾನ ಮೂರು ಗುಣಗಳು. ಇವುಗಳ ಮೆರೆದಾಟವನ್ನು ಹೆಜ್ಜೆಹೆಜ್ಜೆಗೂ, ಕರ್ನಾಟಕವನ್ನು ಸೇರಿಸಿಕೊಂಡಂತೆ ಎಲ್ಲ ’ಡಬಲ್ ಎಂಜಿನ್’ ಸರ್ಕಾರಗಳಿರುವ ರಾಜ್ಯಗಳಲ್ಲಿ ಕಾಣಬಹುದು.

(7) ಮೋದಿ ಅವರ ಎಂಟು ವರ್ಷಗಳ ಆಳ್ವಿಕೆಯ ಮತ್ತೊಂದು ಮಹತ್ತರ ಸಾಧನೆಯೆಂದರೆ ಸಂವಿಧಾನದತ್ತ ’ಒಕ್ಕೂಟ ವ್ಯವಸ್ಥೆ’ಯನ್ನು ದುರ್ಬಲಗೊಳಿಸುತ್ತಿರುವುದು. ಕರ್ನಾಟಕಕ್ಕೆ ಬಂದು ಮೋದಿ ಸರ್ಕಾರದ ಎರಡನೆಯ ಹಂತದ ನಾಯಕ ಮತ್ತು ಗೃಹ ಮಂತ್ರಿ ಅಮಿತ್ ಶಾ ’ಹಿಂದಿ ರಾಷ್ಟ್ರೀಯ ಭಾಷೆ’ ಎಂದು ಹೇಳಿ ಪ್ರ್ರಾದೇಶಿಕ ಭಾಷೆಗಳನ್ನು ಮೂಲೆಗೆ ತಳ್ಳುವಂತಹ ಭಾಷಾ ಧಮಕಿ ಹಾಕುತ್ತಾರೆ. ಪ್ರಧಾನಮಂತ್ರಿ ತಮಿಳುನಾಡಿಗೆ ಹೋಗಿ ತಮಿಳು ಪ್ರಾಚೀನ ಭಾಷೆ, ಅದು ಒಂದು ರಾಷ್ಟ್ರೀಯ ಭಾಷೆ ಎಂದು ಉದ್ಗರಿಸುತ್ತಾರೆ. ಇವರಿಗೆ ಒಕ್ಕೂಟ ತತ್ವದ ಬಗ್ಗೆ ಅರಿವಿಲ್ಲ ಎಂಬುದು ಇದರಿಂದ ತಿಳಿಯುತ್ತದೆ. ಸಂವಿಧಾನದಲ್ಲಿ ಕೃಷಿಯ ಬಗ್ಗೆ ಕಾಯಿದೆ ರೂಪಿಸುವ ಅಧಿಕಾರನ್ನು ರಾಜ್ಯಗಳಿಗೆ ನೀಡಿದ್ದರೆ ಮೋದಿ ಸರ್ಕಾರವು ಇಂತಹ ಸೂಕ್ಷ್ಮ ಸಂಗತಿಗಳನ್ನು ಬುಲ್‌ಡೋಜರ್ ಮಾಡಿ ಕೃಷಿಯನ್ನು ಕಾರ್ಪೊರೆಟೀಕರಣಕ್ಕೆ ಅನುವು ಮಾಡಿಕೊಡುವಂತಹ ಮೂರು ಕೃಷಿ ಕಾಯಿದೆಗಳನ್ನು ಜಾರಿಗೊಳಿಸುತ್ತದೆ. ಅವನ್ನು ಈಗ ರದ್ದುಪಡಿಸಲಾಗಿದೆ ಎನ್ನುವುದು ಬೇರೆ ಸಂಗತಿ. ಎರಡು-ಮೂರು ದಶಕಗಳಿಂದ ರಾಜ್ಯಗಳು, ಅದರಲ್ಲೂ ದಕ್ಷಿಣ ಭಾರತ ರಾಜ್ಯಗಳು ತಮ್ಮದೆ ರೀತಿಯಲ್ಲಿ ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಶಿಕ್ಷಣಕ್ಕೆ ಅತ್ಯುತ್ತಮ ರೀತಿಯ ಪ್ರವೇಶ ಪರೀಕ್ಷೆ ನಡೆಸಿಕೊಂಡು ಬರುತ್ತಿದ್ದವು. ಇದರಿಂದ ರಾಜ್ಯಗಳಲ್ಲಿ ಸ್ಥಳೀಯ ಭಾಷೆಯಲ್ಲಿ ಕಲಿತ ಮತ್ತು ಸ್ಥಳೀಯ ಪಠ್ಯಕ್ರಮವನ್ನು ಅನುಸರಿಸಿದ ಗ್ರಾಮೀಣವಾಸಿ ಮಕ್ಕಳಿಗೆ, ಒಬಿಸಿ. ಪ.ಜಾ. ಮತ್ತು ಪ.ಪಂ. ಮಕ್ಕಳಿಗೆ ಸಾಮಾಜಿಕ ನ್ಯಾಯವನ್ನು ನೀಡುವ ಮಹತ್ವದ ಕೆಲಸವನ್ನು ನಿಯತ್ತಿನಿಂದ ಮಾಡಿಕೊಂಡುಬರುತ್ತಿದ್ದವು. ಈ ವ್ಯವಸ್ಥೆಯು ಒಕ್ಕೂಟ ತತ್ವಕ್ಕೆ ತಕ್ಕುದಾಗಿತ್ತು
ಮತ್ತು ಸಂವಿಧಾನಾತ್ಮಕ ಮೌಲ್ಯಗಳಿಗೆ ಅನುಗುಣವಾಗಿತ್ತು. ಸಾಮಾಜಿಕ ನ್ಯಾಯಕ್ಕೆ ಮತ್ತು ಸಮಾನತೆ ಮೌಲ್ಯಗಳ ಬಗ್ಗೆ ಬದ್ಧತೆಯಿಲ್ಲದ ಮೋದಿ ಇಂತಹ ವ್ಯವಸ್ಥೆಯನ್ನು ರದ್ದುಪಡಿಸಿ ರಾಷ್ಟ್ರಮಟ್ಟದ ’ಎನ್‌ಇಇಟಿ’ ಎಂಬ ವ್ಯವಸ್ಥೆಯನ್ನು ಜಾರಿಗೆ ತಂದಿದ್ದಾರೆ. ಇದರಿಂದ ರಾಜ್ಯಗಳಲ್ಲಿ ಸ್ಥಳೀಯ ಭಾಷೆಯಲ್ಲಿ ಸ್ಥಳೀಯ ಶಿಕ್ಷಣ ಕ್ರಮದಲ್ಲಿ ಕಲಿತ ಮಕ್ಕಳಿಗೆ, ವಿಶೇಷವಾಗಿ ಒಬಿಸಿ, ಪ.ಜಾ. ಮತ್ತು ಪ.ಪಂ. ಮಕ್ಕಳಿಗೆ ಅನ್ಯಾಯವಾಗುತ್ತಿದೆ. ಈ ವ್ಯವಸ್ಥೆಯನ್ನು ಮೋದಿ ಸರ್ಕಾರವು ಉದ್ದೇಶಪೂರ್ವಕವಾಗಿ ಉಳ್ಳವರಿಗೆ, ಉನ್ನತ ಜಾತಿವರ್ಗಗಳಿಗೆ ಅನುಕೂಲ ಮಾಡಿಕೊಡುವುದಕ್ಕಾಗಿಯೇ ರೂಪಿಸಿರುವ ಕ್ರಮವಾಗಿದೆ. ’ಒಂದು ದೇಶ, ಒಂದು ತೆರಿಗೆ’ ಹೆಸರಿನಲ್ಲಿ ಸಂವಿಧಾನವು ರಾಜ್ಯಗಳಿಗೆ ನೀಡಿದ್ದ ತೆರಿಗೆ ವಿಧಿಸುವ ಮತ್ತು ಅದರ ಉತ್ಪತ್ತಿಯನ್ನು ಬಳಸಿಕೊಳ್ಳುವ ಅಧಿಕಾರವನ್ನು ’ಜಿಎಸ್‌ಟಿ’ ಎಂಬ ವ್ಯವಸ್ಥೆಯ ಮೂಲಕ ಹರಣ ಮಾಡಲಾಗಿದೆ. ಈಗ ರಾಜ್ಯಗಳು ಒಕ್ಕೂಟ ರ್ಕಾರದ ಮುಂದೆ ಸಂಪನ್ಮೂಲಕ್ಕಾಗಿ ಕೈಯ್ಯೊಡ್ಡಿ ನಿಲ್ಲಬೇಕಾದ ಸ್ಥಿತಿಯನ್ನು ನಿರ್ಮಾಣ ಮಾಡಲಾಗಿದೆ.

(8) ಡಿಮಾನಿಟೈಸೇಶನ್ – ನೋಟು ಅಮಾನ್ಯೀಕರಣ ಎಂಬ ಜನ-ವಿರೋಧಿ ಕ್ರಮವನ್ನು ಹಣಕಾಸಿಗೆ ಸಂಬಂಧಿಸಿದ ಪ್ರಾಥಮಿಕ ನಿಯಮವನ್ನೂ ಪಾಲಿಸದೆ ಜಾರಿಗೊಳಿಸಿದ ಪರಿಣಾಮವಾಗಿ ನಮ್ಮ ಆರ್ಥಿಕತೆಯು ಇನ್ನಿಲ್ಲದ ಸಮಸ್ಯೆಗಳನ್ನು ಇಂದಿಗೂ ಅನುಭವಿಸುತ್ತಿದೆ. ಇದೂ ಕೂಡ ಒಕ್ಕೂಟ ತತ್ವವನ್ನು ಅನುಸರಿಸದೆ
ಜಾರಿಗೊಳಿಸಿದ ಕ್ರಮವಾಗಿತ್ತು. ಇಡೀ ದೇಶದಲ್ಲಿ ನೂರಾರು ಹಿರಿಯ ನಾಗರಿಕರು ಬ್ಯಾಂಕುಗಳ ಮುಂದೆ, ಎಟಿಎಮ್‌ಗಳ ಮುಂದೆ ಸರದಿ ನಿಂತು ಪ್ರಾಣ ಕಳೆದುಕೊಂಡರು. ಡಿಮಾನಿಟೈಸೇಶನ್ ಘೋಷಿಸಿದ ಸಂದರ್ಭದಲ್ಲಿ ಪ್ರಧಾನರು ನೀಡಿದ್ದ ಅದರ ಉದ್ದೇಶಗಳಾವುದು ಅನುಷ್ಠಾನಕ್ಕೆ ಬಂದಿಲ್ಲ. ಇಡೀ ಅರ್ಥಶಾಸ್ತ್ರದ ಮತ್ತು ಹಣಕಾಸು ತಜ್ಞರ ಜಗತ್ತು ಇದನ್ನು ಒಂದು ಅಮೋಘ ವೈಫಲ್ಯದ ಕ್ರಮ ಎಂದು ಬಣ್ಣಿಸಿದ್ದಾರೆ. ಆದರೆ ಇದನ್ನು ಒಪ್ಪಿಕೊಂಡು ಅದರ ದುಷ್ಪರಿಣಾಮಗಳನ್ನು ಪರಿಹರಿಸುವ ಕ್ರಮಗಳನ್ನು ತೆಗೆದುಕೊಳ್ಳಲಿಲ್ಲ.

(9) ಇದರ ನಂತರ ಅವರು ಮಾಡಿದ ಮತ್ತೊಂದು ಮಹಾ ಅವಘಡ ಎಂದರೆ ಜನರಿಗೆ, ರಾಜ್ಯ ಸರ್ಕಾರಗಳಿಗೆ ಯಾವ ಮುನ್ಸೂಚನೆಯನ್ನು ನೀಡದೆ ಕೋವಿಡ್ ಪೆಂಡಮಿಕ್ ನಿಯಂತ್ರಿಸುವ ಕ್ರಮವಾಗಿ ದೇಶದಾದ್ಯಂತ ಲಾಕ್‌ಡೌನ್ ಘೋಷಿಸಿದ್ದು. ಇದೊಂದು ಅವಿವೇಕದ, ದ್ರಾಷ್ಟ್ಯತನದ ತೀರ್ಮಾನವಾಗಿತ್ತು. ಲಕ್ಷಾಂತರ ಜನರು ಸೋಂಕಿಗೆ ಬಲಿಯಾಗಿ ಪ್ರಾಣ ಕಳೆದುಕೊಂಡರೆ, ಎಷ್ಟೋ ಜನ ಲಾಕ್‌ಡೌನ್ ಕಾರಣಕ್ಕೆ ಹಸಿವಿನಿಂದ ಸತ್ತರು. ಅನೇಕ ದಶಕಗಳಿಂದ ಭಾರತವು ವ್ಯಾಕ್ಸಿನೇಶನ್ ಅಭಿಯಾನವನ್ನು ಉಚಿತವಾಗಿ ನಡೆಸಿಕೊಂಡು ಬಂದಿತ್ತು. ಆದರೆ ಕೋವಿಡ್‌ನ ವ್ಯಾಕ್ಸಿನೇಶನ್ ಅಭಿಯಾನದಲ್ಲಿ ಮೊದಲು ಹಿರಿಯ ನಾಗರಿಕರಿಗೆ ಉಚಿತ, ಉಳಿದವರಿಗೆ ರಾಜ್ಯ ಸರ್ಕಾರಗಳು ಕೊಂಡು ನೀಡಬೇಕು ಎಂಬ ಕ್ರಮವನ್ನು ಜಾರಿಗೊಳಿಸಿತು. ಆದರೆ ಯಾವಾಗ ಸರ್ವೋಚ್ಚ ನ್ಯಾಯಾಲಯ ಇದರಲ್ಲಿ ಮಧ್ಯಪ್ರವೇಶಿಸಿ ಕೆಲವು ಅಹಿತಕರ ಪ್ರಶ್ನೆಗಳನ್ನು ಕೇಳತೊಡಗಿತೋ ಅದರಿಂದ ಎಚ್ಚರಗೊಂಡ ಸರ್ಕಾರ ಉಚಿತ ವ್ಯಾಕ್ಸಿನೇಶನ್ ಕಾರ್ಯಕ್ರಮ ಜಾರಿಗೊಳಿಸಿತು. ಕೋವಿಡ್ ವ್ಯಾಕ್ಸಿನೇಶನ್ ಎಂಬುದು ಸರ್ವೋಚ್ಚ ನ್ಯಾಯಾಲಯದ ಕ್ರಮದಿಂದ ಉಚಿತವಾಗಿ ಲಭ್ಯವಾಯಿತೇ ವಿನಾ ನರೇಂದ್ರ ಮೋದಿ ಅವರ ಸರ್ಕಾರ ತೆಗೆದುಕೊಂಡ ಕ್ರಮದಿಂದಲ್ಲ!

(10)ನಮ್ಮ ಆರ್ಥಿಕತೆಯು ಇಂದು ಅತ್ಯಂತ ಅಪಾಯಕರ ಸ್ಥಿತಿಯಲ್ಲಿದೆ. ಬೆಲೆಯೇರಿಕೆಯು ಮಿತಿಮೀರುತ್ತಿದೆ. ಜಿಡಿಪಿ ಬೆಳವಣಿಗೆಯು ಎಲ್ಲರಿಗೂ ತಿಳಿದಿರುವಂತೆ 2017-18ರಿಂದಲೇ (ಕೋವಿಡ್ ಪೂರ್ವದಲ್ಲಿಯೇ) ಕುಸಿಯುತ್ತಾ ನಡೆದಿದೆ. ನಿರುದ್ಯೋಗವು ಜನರ ಬದುಕನ್ನು ಮೂರಾಬಟ್ಟೆ ಮಾಡುತ್ತಿದೆ. ಈ ಸರ್ಕಾರಕ್ಕೆ ಒಂದು ಆರ್ಥಿಕ ನೀತಿಯಿದೆ ಎಂಬುದರ ಬಗ್ಗೆ ಅನುಮಾನವಿದೆ. ನೊಬೆಲ್ ಪ್ರಶಸ್ತಿ ವಿಜೇತ ಭಾರತೀಯ ಅರ್ಥಶಾಸ್ತ್ರಜ್ಞರು ಮತ್ತು ಇತರೆ ತಜ್ಞರು ಇಂದಿನ ಆರ್ಥಿಕ ಬಿಕ್ಕಟ್ಟಿನ ಮೂಲ ಬೇಡಿಕೆಯ ಕೊರತೆಯಲ್ಲಿದೆ ಎಂದು ಹೇಳುತ್ತಿದ್ದಾರೆ. ಇದನ್ನು ಒಪ್ಪದ ಮೋದಿ ಸರ್ಕಾರವು ಪೂರೈಕೆ ಪ್ರಣೀತ ನೀತಿಗಳನ್ನು ಅನುಸರಿಸುತ್ತಿದೆ. ಬಂಡವಾಳ ಹೂಡಿಕೆಯೇ ಅಭಿವೃದ್ಧಿ ಎಂದು ಇವರು ಭಾವಿಸಿದಂತಿದೆ. ಇಂದಿನ ನಮ್ಮ ಆರ್ಥಿಕ ಕ್ರೈಸಿಸ್‌ಗೆ ಇವರ ಬಳಿಯಲ್ಲಿ ಪರಿಹಾರಗಳೇ ಇಲ್ಲವೆಂದು ಕಾಣುತ್ತದೆ. ಡಿಮಾನಿಟೈಸೇಶನ್ ಕ್ರಮದಿಂದ ಮತ್ತು ಜಿಎಸ್‌ಟಿ ಕ್ರಮದಿಂದ ಸರಿಸುಮಾರು 12 ಕೋಟಿ ಜನರು ಅವಲಂಬಿಸಿರುವ 650 ಲಕ್ಷ ’ಎಮ್‌ಎಸ್‌ಎಮ್‌ಈ’ ಉದ್ದಿಮೆಗಳು ನೆಲಕಚ್ಚಿವೆ. ಆದರೆ ಸರ್ಕಾರವು ಬೃಹತ್ ಉದ್ದಿಮೆಗಳಿ ಬಗ್ಗೆ, ಬೃಹತ್ ಬಂಡವಾಳ ಹೂಡಿಕೆ ಬಗ್ಗೆ ಮಾತ್ರ ಗಮನ ನೀಡುತ್ತಿದೆ. ಕಾರ್ಪೊರೆಟ್ ತೆರಿಗೆಗಳಲ್ಲಿ ಗಣನೀಯ ಕಡಿತ ಮಾಡಿದೆ. ಬಡವರು, ಕಾರ್ಮಿಕರು, ಅಸಂಘಟಿತ ದುಡಿಮೆಗಾರರು, ಮಹಿಳೆಯರು, ಸಣ್ಣಪುಟ್ಟ ವ್ಯಾಪಾರಿಗಳು ಮತ್ತು ರೈತಾಪಿಗಳ ಮೇಲೆ ವಿಧಿಸುವ ಜಿಎಸ್‌ಟಿಯನ್ನು (ಪರೋಕ್ಷ ತೆರಿಗೆಯನ್ನು) ಇನ್ನಿಲ್ಲದಂತೆ ಹೆಚ್ಚಿಸಲಾಗಿದೆ. ಉಳ್ಳವರಿಗೆ ತೆರಿಗೆ ವಿನಾಯಿತಿ; ಉಳಿದವರಿಗೆ ತೆರಿಗೆ ಭಾರ. ಇದು ಮೋದಿ ತೆರಿಗೆ ನೀತಿ. ಇದರಿಂದ ಉಳ್ಳವರ ಸಂಪತ್ತು ಪೆಂಡಮಿಕ್ ಸಂದರ್ಭದಲ್ಲಿಯೂ ಅನೇಕ ಪಟ್ಟು ಏರಿಕೆಯಾಗಿದೆ, ಆದರೆ ಬಡವರ ಬದುಕು ಮತ್ತಷ್ಟು ಬಡತನಕ್ಕೆ ನೂಕಲ್ಪಟ್ಟಿದೆ. ಇದು ಮೋದಿ ಅವರು 8 ವರ್ಷಗಳ ಆಳ್ವಿಕೆಯ ಸಾಧನೆ.

ಕೊನೆಯದಾಗಿ ಮೋದಿ ಅವರ ಮಹತ್ವದ ಸಾಧನೆಯೆಂದರೆ ಸಮಾಜವನ್ನು ಒಡೆದು ಆಳ್ವಿಕೆ ನಡೆಸುವ ಕ್ರಮವಾಗಿದೆ. ಭಾರತ ಹಿಂದೆಂದೂ ಇಂತಹ ಒಡೆದು ಆಳ್ವಿಕೆ ನಡೆಸುವಂತಹ ನಾಯಕರನ್ನು ಪಡೆದಿರಲಿಲ್ಲ. ಅಯೋಧ್ಯಗೆ ಹೋಗಿ ಯಜ್ಞದಲ್ಲಿ ಭಾಗವಹಿಸುತ್ತಾರೆ, ಮತ್ತೆಲ್ಲಿಯೋ ಗಂಗೆಯಲ್ಲಿ ಚೊಂಬು ಹಿಡಿದುಕೊಂಡು ಮಜ್ಜನ ಮಾಡುತ್ತಾರೆ. ಜಾತ್ಯತೀತತೆಗೆ ಇದಕ್ಕಿಂತ ಇನ್ನೇನು ಕಂಟಕ ಬೇಕು? ಸರ್ಕಾರವೊಂದು ಯಾವ ಎಗ್ಗಿಲ್ಲದೆ ಒಂದು ಧಾರ್ಮಿಕತೆಯೊಂದಿಗೆ ಸಮೀಕರಿಸಿಕೊಂಡರೆ ಅಲ್ಲಿ ಸರ್ವಧರ್ಮಸಮಭಾವ ಎಲ್ಲಿಂದ ಬರಬೇಕು? ಎಲ್ಲಕ್ಕಿಂತ ಮುಖ್ಯವಾಗಿ ಮೋದಿ ಅವರ ಸಾಧನೆಯೆಂದರೆ ಕಳೆದ ಅನೇಕ ದಶಕಗಳಿಂದ ನಾಡು ಬೆಳೆಸಿಕೊಂಡು ಬಂದಿದ್ದ ವೈಜ್ಞಾನಿಕ-ವೈಚಾರಿಕ ಮನೋಭಾವವನ್ನು ಮೂಲೆಗುಂಪು ಮಾಡಿದ್ದು ಎಂದು ಹೇಳಬಹುದು. ಅಂಧಶ್ರದ್ಧೆಯನ್ನು ಸರ್ಕಾರ ಪೋಷಿಸುತ್ತಿದೆ.

ಇದಕ್ಕೆಲ್ಲ ಉತ್ತರ: ಸ್ವಾತಂತ್ರ್ಯಪೂರ್ವದಲ್ಲಿ ಲಾಹೋರ್ ನಗರದಲ್ಲಿ ಜನವರಿ 19ನೆಯ 1929ರಲ್ಲಿ ಕಾಂಗ್ರೆಸ್ ಅಧಿವೇಶನದಲ್ಲಿ ತೆಗೆದುಕೊಂಡ ’ಪೂರ್ಣಸ್ವರಾಜ್’ ನಿರ್ಣಯವು ನಮಗೆ ದಾರಿಯಾಗಬಹುದು.

“We believe that it is the inalienable right of the Indian people, as of any other people, to have freedom and to enjoy the fruits of their toil and have the necessities of life, so that they may have full opportunities of growth. We believe also that if any government deprives people of these rights and oppresses them, the people have a further right to alter it or to abolish it”

ಡಾ. ಟಿ. ಆರ್. ಚಂದ್ರಶೇಖರ

ಡಾ. ಟಿ. ಆರ್. ಚಂದ್ರಶೇಖರ
ಅಭಿವೃದ್ಧಿ ಅರ್ಥಶಾಸ್ತ್ರದ ಪ್ರಾಧ್ಯಾಪಕರಾಗಿ ಹಂಪಿ ವಿ.ವಿಯಲ್ಲಿ ಸೇವೆ ಸಲ್ಲಿಸಿರುವ ಚಂದ್ರಶೇಖರ್ ಅವರು ಅರ್ಥಶಾಸ್ತ್ರದ ವಿಷಯದಲ್ಲಿ ಹಲವು ಪುಸ್ತಕಗಳನ್ನು ರಚಿಸಿದ್ದಾರೆ. ಇತಿಹಾಸ-ಸಂಸ್ಕೃತಿಗಳ ಬಗ್ಗೆಯೂ ತಮ್ಮ ವಿಶಿಷ್ಟ ಚಿಂತನೆಗಳನ್ನು ಪ್ರಸ್ತುತಪಡಿಸುತ್ತಿರುವ ಮುಂಚೂಣಿ ಚಿಂತಕರು


ಇದನ್ನೂ ಓದಿ: ಜನಸಾಮಾನ್ಯರನ್ನು ಕೆರಳಿಸಿದ ಪಠ್ಯಪುಸ್ತಕ ಪರಿಷ್ಕರಣೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಭಾರತೀಯತೆಯ ಪ್ರಪ್ರಥಮ ವಿರೋಧಿಗಳು ಎಂದರೆ ಪ್ರಗತಿಪರ ಚಿಂತಕರು, ತೆರಿಗೆದಾರರ ಹಣದಿಂದ ಸಂಬಳ ಪಡೆಯುತ್ತಾ ದೇಶೀಯತೆಯನ್ನು ವಿರೋಧಿಸುವ ಪರಮ,,,,,, ಪರದೇಶದ ಸಂಸ್ಕೃತಿ ಪ್ರದೇಶದವರ ಇತಿಹಾಸವನ್ನು ಓದುವುದು ನಮ್ಮ ಕರ್ಮ, ಇದೆಲ್ಲವೂ ಅವರಂತಹವರ ಅತೀ ಬುದ್ಧಿವಂತ ತನದ ರಚಿತ ದೇಶ ತನ್ನತನವನ್ನ ಉಳಿಸಿಕೊಳ್ಳುವತ್ತ ನಡೆಯುತ್ತಿದ್ದರೆ ಕೂಗುಮಾರಿ ಗಳಾಗಿದ್ದಾರೆ, ಗೆಳೆಯರೇ ಮಾಧ್ಯಮ ಬೆಳೆದಿದೆ ಬೆರಳಂಚಿನಲ್ಲಿ ಎಲ್ಲವೂ ತಿಳಿಯುತ್ತಿದೆ ಎಷ್ಟೇ ವ್ಯವಸ್ಥಿತವಾಗಿ ಅಪಪ್ರಚಾರ ಮಾಡಿದರು ಪ್ರತಿಫಲ ಶೂನ್ಯ ಶೂನ್ಯ ನೆನಪಿಡಿ ವಂದನೆಗಳು

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...