ಪ್ರಕರಣಗಳ ಸಂಖ್ಯೆ ಇಳಿಕೆಯಾದರೂ ಗದಗ ಸಂಪೂರ್ಣ ಲಾಕ್‌ಡೌನ್‌: ಸಚಿವ ಸಿ.ಸಿ ಪಾಟೀಲ್ ಆದೇಶ

ಮೇ 27 ರ ಬೆಳಗಿನ 10 ಗಂಟೆಯಿಂದ ಜೂನ್ 1ರ ಬೆಳಗಿನ 6 ಗಂಟೆವರೆಗೆ ಗದಗ ಜಿಲ್ಲೆಯಲ್ಲಿ ಸಂಪೂರ್ಣ ಲಾಕ್‌ಡೌನ್ ಹೇರುವ ಘೋಷಣೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲರು ಘೋಷಿಸಿದ್ದಾರೆ. ಗದಗ ಜಿಲ್ಲೆಯಾದ್ಯಂತ ಸಂಪೂರ್ಣ ಅಂದರೆ ಕಠಿಣ ಲಾಕ್‌ಡೌನ್ ವಿಧಿಸಿದೆ ಜಿಲ್ಲಾಡಳಿತ.

ಈಗಾಗಲೇ ರಾಜ್ಯಾದ್ಯಂತ ಜೂನ್ 7ರ ವರೆಗೆ ಲಾಕ್‌ಡೌನ್ ಮುಂದುವರೆಸಲಾಗಿದೆ. ಈ ನಡುವೆ ಗದಗ ಜಿಲ್ಲೆಯಲ್ಲಿ 5 ದಿನ ಕಂಪ್ಲೀಟ್ ಲಾಕ್‌ಡೌನ್ ಮಾಡುವ ಅಗತ್ಯವಿತ್ತೆ..? ಎಂಬ ಪ್ರಶ್ನೆ ಮೂಡಿದೆ. ಪಕ್ಕದ ಕೊಪ್ಪಳ, ರಾಯಚೂರು ಜಿಲ್ಲೆಗಳಲ್ಲಿ ಈ ‘ಸಾಹಸವನ್ನು’ ಈಗಾಗಲೇ ಮಾಡಲಾಗಿದೆ.

ಗದಗ ಜಿಲ್ಲೆಯಲ್ಲಿ ಕಳೆದ ಒಂದು ವಾರದಲ್ಲಿ ಜಿಲ್ಲಾಧಿಕಾರಿ ಸುಂದರೇಶಬಾಬು ಪ್ರತಿನಿತ್ಯ ಪ್ರಕಟಿಸುವ ಕೋವಿಡ್ ಸಂಬಂಧಿತ ಅಂಕಿಅಂಶಗಳ ಪ್ರಕಾರ, ಇಲ್ಲಿ ದೈನಂದಿನ ಪಾಸಿಟಿವ್ ಕೇಸು ಇಳಿಮುಖ ಹಾದಿಯಲ್ಲಿವೆ.  ಮೇ 18 ರಂದು ದೈನಂದಿನ ಪಾಸಿಟಿವ್ ಕೇಸುಗಳ ಸಂಖ್ಯೆ 543 ಇದ್ದರೆ, ಮೇ 24ರಂದು ಅದು 277 ಇದೆ. ಗುಣಮುಖರಾದವರ ಸಂಖ್ಯೆ ಏರುಗತಿಯಲ್ಲಿದೆ. ಮೇ 18 ರಂದು 243 ಜನ ಗುಣಮುಖರಾಗಿದ್ದರೆ, ಮೇ 24ರಂದು 470 ಜನರು ಗುಣಮುಖರಾಗಿದ್ದಾರೆ. ಸಾವುಗಳ ಸಂಖ್ಯೆ ಕೂಡ ಇಳಿಮುಖದಲ್ಲಿದೆ. ಮೇ 18 ರಂದು ದೈನಂದಿನ 5 ಸಾವು ಇದ್ದದ್ದು ಈಗ 3ಕ್ಕೆ ಇಳಿದಿದೆ.

ಇದನ್ನೂ ಓದಿ: ಕೊರೊನಾ ವಿರುದ್ಧದ ಹೋರಾಟಕ್ಕೆ ಸರ್ವ ಪಕ್ಷ ಸಮಿತಿ ರಚಿಸಿದ ಸ್ಟಾಲಿನ್‌ ಸರ್ಕಾರ: ದ್ವೇಷ ರಾಜಕಾರಣಕ್ಕೆ ತಾತ್ಕಾಲಿಕ ತೆರೆ

ಹೀಗಿರುವಾಗ, ಮತ್ತೇಕೆ ಸಂಪೂರ್ಣ ಲಾಕ್‌ಡೌನ್ ಏಕೆ ಬೇಕು.? ತಾವು ತೆಗೆದುಕೊಂಡ ಕ್ರಮದಿಂದಲೇ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿತು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅಥವಾ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾರನ್ನು ಮೆಚ್ಚಿಸುವ ತಂತ್ರವೇ..? ಎಂದು ಜನ ಪ್ರಶ್ನಿಸುತ್ತಿದ್ದಾರೆ.

‘ಬಿಜೆಪಿ ನಾಯಕರು ಮನೆ ಬಿಟ್ಟು ಹೊರಬಂದು ಜನರ ನೆರವಿಗೆ ಧಾವಿಸಿ’ ಎಂದು ನಡ್ಡಾ ಈ ಅರ್ಥದಲ್ಲೇ ಹೇಳಿದರೆ..? ತಾವು ಜಿಲ್ಲೆಯಲ್ಲಿಯೇ ಇದ್ದೇವೆ ಎಂದು ತೋರಿಸಲು ಸಚಿವ ಪಾಟೀಲರು ಇಂತಹ ಕ್ರಮಕ್ಕೆ ಮುಂದಾದರೆ..? ಈ ಹುಚ್ಚಾಟದಿಂದ ಈಗಾಗಲೇ ತೊಂದರೆಗೆ ಸಿಲುಕಿರುವ ಬಡಜನರು ಇನ್ನಷ್ಟು ತೊಂದರೆಗೆ ಸಿಲುಕವುದಿಲ್ಲವೇ..? ಈ ಅವಧಿಯಲ್ಲಿ ಸೋಂಕಿತರ ಪ್ರಮಾಣ ಕಡಿಮೆಯಾಗದಿದ್ದಲ್ಲಿ ಲಾಕ್‌ಡೌನ್ ಮುಂದುವರೆಸಲಾಗುವುದು ಎಂದು ಪಾಟೀಲರು ‘ಎಚ್ಚರಿಕೆ’ ನೀಡಿದ್ದಾರೆ.

ಜನರ ಸಹಕಾರ ಇದ್ದಾಗ ಮಾತ್ರ ಕೊರೊನಾ ನಿಯಂತ್ರಣ ಸಾಧ್ಯ ಎಂದಿರುವ ಸಚಿವ ಸಿ.ಸಿ ಪಾಟೀಲರು ಎಲ್ಲ ಮಾರುಕಟ್ಟೆಗಳನ್ನು ಬಂದ್ ಮಾಡಿದ್ದಾರೆ. ತರಕಾರಿ, ಹಾಗೂ ಹಣ್ಣು ಹೂವು ವ್ಯಾಪಾರಸ್ಥರು ತಳ್ಳುಗಾಡಿಗಳಲ್ಲಿ ವ್ಯಾಪಾರ ಮಾಡಬೇಕು. ಮುಂಜಾನೆ 6 ರ ವರೆಗೆ ಹಾಲಿನ ಅಂಗಡಿ ಓಪನ್. ದಿನಸಿ ಪದಾರ್ಥಗಳನ್ನು ಹೋಂ ಡಿಲೇವರಿ ಮಾಡಬೇಕು ಎಂದು ಆದೇಶ ನೀಡಲಾಗಿದೆ.

ರೈತಾಪಿ ವಸ್ತುಗಳ ಖರೀದಿಗೆ ಬೆಳಿಗ್ಗೆ 10 ರವರೆಗೆ ಮಾತ್ರ ಅವಕಾಶ. ಆದರೆ, ಎಲ್ಲ ಮಾರುಕಟ್ಟೆ, ಸಂಚಾರ ಬಂದ್ ಮಾಡಿದ ಮೇಲೆ ಹಳ್ಳಿಗಳ ರೈತರು ಹೇಗೆ ಖರೀದಿ ಮಾಡಲು ಸಾಧ್ಯ? ಹೋಟೆಲ್, ಮಾಂಸದಂಗಡಿಗಳೂ ಸಂಪೂರ್ಣ ಬಂದ್ ಎಂದಿದ್ದಾರೆ.

ಇದನ್ನೂ ಓದಿ: ಸೋಂಕು ನಿಗ್ರಹಕ್ಕೆ ತಮಿಳುನಾಡಿನಲ್ಲಿ ಸರ್ವಪಕ್ಷ ಸಮಿತಿ: ಕರ್ನಾಟಕದಲ್ಲೂ ಸಾಧ್ಯವಿದೆ, ಕೇಂದ್ರದಲ್ಲಿ ಬಿಲ್‌ಕುಲ್ ಇಲ್ಲ!

ಅಂಚೆ ಕಚೇರಿ ಹಾಗೂ ಬ್ಯಾಂಕ್ ಸಿಬ್ಬಂದಿಗಳು ಬಾಗಿಲು ಮುಚ್ಚಿ ಕಚೇರಿ ಕೆಲಸ ಮಾಡಬೇಕಂತೆ. ಜನರಿಗೆ ಡಿಪಾಸಿಟ್  ಮಾಡಲು ಹಾಗೂ ಹಣ ತೆಗೆಯಲು ಅವಕಾಶವಿಲ್ಲ ಎನ್ನಲಾಗಿದೆ.

ಕೋವ್ಯಾಕ್ಸಿನ್ ಎರಡನೇ ಡೋಸ್‌ಗೆ ಮಾತ್ರ ಅವಕಾಶ, ಕೋವಿಶೀಲ್ಡ್ ತೆಗೆದುಕೊಂಡು 12 ರಿಂದ 16 ವಾರವಾಗಿದ್ದರೆ ಎರಡನೇ ಡೋಸ್‌ಗೆ ಅವಕಾಶ. ವಾಹನ ಸಂಚಾರವೇ ಸಂಪೂರ್ಣ ಲಾಕ್ ಆದಾಗ ಲಸಿಕೆ ಹಾಕಿಸಿಕೊಳ್ಳಲು ಜನರು ಮುಂದೆ ಬರುವರೇ..? ಎಂಬ ಪ್ರಶ್ನೆಗಳು ಸಾರ್ವಜನಿಕರಲ್ಲಿ ಮನೆ ಮಾಡಿವೆ.

ಕೇಸುಗಳ ಸಂಖ್ಯೆ ಹೆಚ್ಚಿರುವ ಬೆಂಗಳೂರಿನಲ್ಲೇ ಸಂಪೂರ್ಣ ಲಾಕ್‌ಡೌನ್ ಇಲ್ಲ. ಗದಗ ಜಿಲ್ಲೆಯಲ್ಲಿ ಕೇಸುಗಳ ಸಂಖ್ಯೆ ಇಳಿಮುಖದಲ್ಲಿದೆ ಮತ್ತು ಗುಣಮುಖರಾಗುತ್ತಿರುವವರ ಸಂಖ್ಯೆ ದಿನವೂ ಏರುತ್ತಿದೆ. ಹಾಗಿದ್ದರೂ ಈ ಹುಚ್ಚಾಟವೇಕೆ..? ಅಥವಾ ಟೆಸ್ಟಿಂಗ್ ಕಡಿಮೆ ಮಾಡಿದ್ದಾರಲ್ಲವೇ..? ಕೇಸುಗಳ ಸಂಖ್ಯೆ ಕಡಿಮೆಯಾಗಲು ಅದೂ ಕಾರಣವೇ..? ಎಂದು ಗದಗ ಜಿಲ್ಲೆಯ ಜನರು ಕೇಳುತ್ತಿದ್ದಾರೆ.


ಇದನ್ನೂ ಓದಿ: ಟೂಲ್‌ಕಿಟ್-ಟ್ವೀಟ್: ಕಾಂಗ್ರೆಸ್ ನಾಯಕರಿಗೆ ನೋಟಿಸ್ ಜಾರಿ, ಸಂಬಿತ್ ಪಾತ್ರಾಗೆ ಸಮನ್ಸ್ ಸಾಧ್ಯತೆ

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ಮಲ್ಲನಗೌಡರ್‌ ಪಿ.ಕೆ
+ posts

LEAVE A REPLY

Please enter your comment!
Please enter your name here