Homeಪುಸ್ತಕ ವಿಮರ್ಶೆಪುಸ್ತಕ ವಿಮರ್ಶೆ; ಬೆಳುದಿಂಗಳಿಗೆ ಕೆಂಡದ ಅನುಭವ ಏನೆಂದು ಪರಿಚಯಿಸುವ ಕತೆಗಳು...

ಪುಸ್ತಕ ವಿಮರ್ಶೆ; ಬೆಳುದಿಂಗಳಿಗೆ ಕೆಂಡದ ಅನುಭವ ಏನೆಂದು ಪರಿಚಯಿಸುವ ಕತೆಗಳು…

- Advertisement -
- Advertisement -

“ಒಳಗೆ ಬರುವಾ ಮೊದಲು
ನಿನ್ನ ಮೆದುಳನ್ನು ಬಗೆದು ನನ್ನ ನಾಯಿಗೆ ಹಾಕು”
– ಎನ್ ಕೆ ಹನುಮಂತಯ್ಯ

ಸಾವಿರ ವರ್ಷಗಳ ಕನ್ನಡ ಸಾಹಿತ್ಯವನ್ನು ನೋಡಿದರೆ ಈ ಹೊಸ ಬಗೆಯ ಭಾಷೆ, ನುಡಿಗಟ್ಟು, ಶೈಲಿ, ರೂಪಕ, ಪ್ರತಿಮೆಗಳನ್ನು ಕನ್ನಡ ಸಾಹಿತ್ಯ 12ನೇ ಶತಮಾನದ ವಚನ ಸಾಹಿತ್ಯದಲ್ಲಿ ಕಂಡದ್ದು ಬಿಟ್ಟರೆ, ಮತ್ತೆ ಕಾಣುತ್ತಿರುವುದು 70-80-90ರ ದಶಕದ ಈಚೆಗಷ್ಟೇ. ಈ ಹೊಸ ಬಗೆಯ ಭಾಷೆ, ಶೈಲಿ, ನುಡಿಗಟ್ಟು ರೂಪಕಗಳು ಸಾಹಿತ್ಯವನ್ನು ಓದುವ ವರ್ಗಕ್ಕೆ ಹೊಸ ದೃಷ್ಟಿಯನ್ನು ತಂದುಕೊಡುವುದಲ್ಲದೆ, ಏಕಕಾಲಕ್ಕೆ ಆ ಸಾಹಿತ್ಯದ ಹೊಸ ಮೀಮಾಂಸೆಯನ್ನೂ ಕಟ್ಟ್ಟುತ್ತಿರುತ್ತದೆ.

’ಒಳಗೆ ಬರುವಾ ಮೊದಲು’ ಕವಿತೆ ದಲಿತ ಸಾಹಿತ್ಯಕ್ಕೆ ಹೇಗೆ ಪ್ರವೇಶ ಮಾಡಬೇಕೆಂಬುದರ ಕೀಲಿ ಕೈ ಎಂದು ವಿಮರ್ಶಕರು ಹೇಳುತ್ತಾರೆ. ವಾಸ್ತವದಲ್ಲಿ ಅದು ಕೇವಲ ’ದಲಿತ ಕಾವ್ಯ’ಕ್ಕಷ್ಟೇ ಹೇಗೆ ಪ್ರವೇಶಿಕೆ ಮಾಡಬೇಕೆಂಬುದನ್ನು ಹೇಳುವುದಿಲ್ಲ! ಅದು ಇಡೀ 90ರ ದಶಕದಿಂದಾಚೆಗಿನ ಕನ್ನಡ ಸಾಹಿತ್ಯಕ್ಕೆ, ಕನ್ನಡ ಸಾಂಸ್ಕೃತಿಕ ಓದುಗನ ಪ್ರವೇಶಿಕೆ ಹೇಗಿರಬೇಕೆಂಬ ಸೂಕ್ಷ್ಮತೆಯನ್ನು, ತಿಳಿವನ್ನೂ ಕೊಡುವುದರ ಜೊತೆಗೆ ಜಲಕಣ್ಣನ್ನು ಶೋಧಿಸಲು ಜನಪದರು ಬಳಸುವ ಸನ್ನೆಗೋಲಿನಂತೆ ಇದೆ.

ಇಷ್ಟು ದೀರ್ಘವಾದ ಪೀಠಿಕೆಯ ಕಾರಣವಿಷ್ಟೆ. ಇತ್ತೀಚೆಗೆ ಕತೆಗಾರ ಗುರುಪ್ರಸಾದ್ ಕಂಟಲಗೆರೆ ಅವರ ಎರಡನೇ ಕಥಾ ಸಂಕಲನ ’ಕೆಂಡದ ಬೆಳುದಿಂಗಳು’ ಪ್ರಕಟವಾಗಿದೆ. ಶೀರ್ಷಿಕೆ ಕೇಳಿದ ಕೂಡಲೇ, ಕೇಳಿದವರು ಅದನ್ನು ಕಲ್ಪಿಸಿಕೊಂಡು, ಅರ್ಥೈಸಿಕೊಳ್ಳುವುದು ಅಷ್ಟು ಸರಳವಲ್ಲ.

ಕೆಂಡ – ಬೆಳುದಿಂಗಳು ಪರಸ್ಪರ ವೈರುಧ್ಯದ ಅನುಭವ ನೀಡುವಂತವು. ಕನ್ನಡ ಸಾಹಿತ್ಯದಲ್ಲಿ ಬೆಳುದಿಂಗಳ ರೂಪಕ ಎಲ್ಲರಿಗೂ ಗೊತ್ತಿರುವಂತಹದ್ದೆ. ಸೂರ್ಯೋದಯ, ಸೂರ್ಯಾಸ್ತ, ಚಂದ್ರೋದಯಗಳ ವರ್ಣನೆಯಿಂದ ಕನ್ನಡ ಕಾವ್ಯ ಜಗತ್ತು ತುಂಬಿ ಹೋಗಿದೆ. ಈ ’ಬೆಳುದಿಂಗಳ’ ವರ್ಣನೆ ಮತ್ತು ಅದರ ಅನುಭವಗಳ ಲೋಕವಂತೂ ವಿಸ್ತೃತವಾಗಿದೆ.

ಆದರೆ ’ಕೆಂಡದ ಬೆಳುದಿಂಗಳು’ ಕಟ್ಟಿಕೊಡುವ ಅನುಭವಲೋಕ ಎಂತಹದ್ದು? ಆ ಜಗತ್ತು ಯಾರದ್ದು? ಅದು ಈ ಲೋಕದ ಜನ ಕಂಡುಂಡ ಅನುಭವವೇ? ಹೌದು ಕೆಂಡದ ಬೆಳುದಿಂಗಳನುಂಡ, ಅನುಭವಿಸಿದ, ಅನುಭವಿಸುತ್ತಿರುವ ಲೋಕ ನಮ್ಮ ಕಣ್ಣೆದುರೇ ಇದೆ. ಇಲ್ಲೇ ಈ ಮಣ್ಣಿನಲ್ಲೇ ಎಲ್ಲರಂತೆಯೇ ಹುಟ್ಟಿರುವ, ಎಲ್ಲರಂತೆಯೇ ಉಸಿರಾಡುತ್ತಿರುವ, ಆದರೆ ಉಳಿದೆಲ್ಲರಿಗಿಂತ ಹೆಚ್ಚು ದುಡಿಯುವ, ಅರೆ ಹೊಟ್ಟೆಯಲ್ಲಿಯೇ ಬದುಕು ದೂಡುತ್ತಿರುವ ’ಜೀವ’ಗಳ ಅನುಭವಗಳಿವು.

ಎಲ್ಲರಂತೆಯೇ ಬದುಕಬೇಕು, ಹಾಗೆ ಬದುಕುವುದು ಅವರ ಹಕ್ಕು. ಆದರೆ ಈ ವ್ಯವಸ್ಥೆ ಜಾತಿಯ ಹೆಸರಿನಲ್ಲಿ, ಅಸ್ಪೃಶ್ಯತೆಯ ಹೆಸರಿನಲ್ಲಿ, ಆಹಾರದ ಹೆಸರಿನಲ್ಲಿ ಅವರನ್ನು ಸಮಾಜದ ಹೊರಗಿಟ್ಟು ಶತಶತಮಾನಗಳಿಂದಲೂ ಕೀಳಾಗಿ, ಅಮಾನವೀಯವಾಗಿ, ಕ್ರೂರವಾಗಿ ನಡೆಸಿಕೊಳ್ಳುತ್ತಲೇ ಈ ಜೀವಗಳ ಬದುಕಿನ ದಾರಿಯುದ್ದಕ್ಕೂ ಕೆಂಡವನ್ನೇ ಹಾಸಿವೆ-ಹೊದ್ದಿವೆ. ಆ ಕೆಂಡದ ಮೇಲೆ ಬದುಕುತ್ತಾ ಬಂದಿರುವ ಈ ಜೀವಗಳಿಗೆ ಕೆಂಡವನ್ನೆ ’ಬೆಳುದಿಂಗಳು’ ಎಂದು ನಂಬಿಸಿ ಕೆಂಡವನ್ನೇ ಸುರಿಯುತ್ತಿದೆ ವ್ಯವಸ್ಥೆ. ಹೀಗೆ ಬದುಕಿನುದ್ದಕ್ಕೂ ಕೆಂಡವನ್ನೆ ಉಂಡು, ಕೆಂಡವನ್ನೇ ಕುಡಿದು ಸಮಾಜಕ್ಕೆ ಮಾತ್ರ ಬೆಳದಿಂಗಳನ್ನೇ ನೀಡುತ್ತಾ ಬಂದಿವೆ ಈ ಜೀವಗಳು. ಆ ಕೆಂಡದ ಬೇಗೆಯ ತಾಪ ಸಹಿಸಲು ಅಸಾಧ್ಯವಾದಾಗ ಅದೇ ಕೆಂಡವನ್ನೇ ಸುರಿದು ಇಂಥ ಹೀನ ಸಮಾಜವನ್ನು ಸುಟ್ಟು ಹಾಕುವ ಸಿಟ್ಟೂ ಆ ಎದೆಗಳ ಒಳಗೆ ಜ್ವಾಲಾಮುಖಿಯ ಹಾಗೆ ಬಚ್ಚಿಟ್ಟುಕೊಂಡಿರುವ ಎಚ್ಚರ ಮತ್ತು ಸೂಚನೆಗಳನ್ನೂ ಸಾಂಕೇತಿಕವಾಗಿ ನೀಡುತ್ತವೆ ಇಲ್ಲಿನ ಜೀವಗಳು.

’ಕೆಂಡದ ಬೆಳುದಿಂಗಳು’ ಎಂಬ ರೂಪಕ ಅರ್ಥವಾಗಲು, ಅನುಭವವಾಗಲು, ಆ ಅನುಭವ ಅರಿವಾಗಲು ಇಲ್ಲಿನ ಹತ್ತು ಕತೆಗಳನ್ನು ಹೃದಯದ ಕಣ್ಣುಗಳಿಂದ ಓದಬೇಕಿದೆ. ಈ ಮುಖೇಡಿ, ಹೃದಯಹೀನ ಸಮಾಜಕ್ಕೆ ಮಾನವೀಯತೆಯ ಮುಖವನ್ನು ತೋರಿಸುತ್ತಲೇ, ಅವಮಾನದ ಕೆಂಡಗಳನ್ನು ಮಡಿಲಲ್ಲಿ ಹೊತ್ತ ಈ ಜೀವಗಳು, ಜಾಗತಿಕ ವಿದ್ಯಮಾನಗಳ ಹಿನ್ನೆಲೆಯಲ್ಲಿ ತಮ್ಮ ಜಾತಿಯೊಳಗಿನ ಅನನ್ಯತೆಯ ಹುಡುಕಾಟವನ್ನು ನಡೆಸುತ್ತಲೇ, ವ್ಯಾಖ್ಯಾನಿಸುವ ಪ್ರಯತ್ನವನ್ನು ಈ ಸಂಕಲನದ ಕತೆಗಳು ಮಾಡುತ್ತವೆ.

ಇಲ್ಲಿನ ಹತ್ತು ಕತೆಗಳಲ್ಲಿ ’ಇವ ನಮ್ಮವ’, ’ಶವರ್ ಮನೆ’, ’ಪ್ರತಿಮೆ ತೆರವು’ – ಈ ಮೂರು ಕತೆಗಳಲ್ಲಿ, ನಗರಗಳು, ಆಧುನಿಕತೆಯ ಮುಖವಾಡ ಧರಿಸಿದ್ ದೇಹ, ಆದರೆ, ಒಳಗೆ ಮೇಲ್ಜಾತಿಗಳ ಕೊಳಕು ಆತ್ಮ ಹೊಂದಿರುವ ನಿರ್ಜೀವ ಭೌಗೋಳಿಕ ಪ್ರದೇಶಗಳಷ್ಟೇ. ಇವುಗಳು ಸೃಷ್ಟಿಸಿರುವ, ಸೃಷ್ಟಿಸುತ್ತಿರುವ ಅಸ್ಪೃಶ್ಯತೆಯ ಹೊಸ ರೂಪಗಳು, ಅವುಗಳ ನೂರಾರು ಮುಖಗಳು ಜಾತೀಯತೆಯ ಗಟ್ಟಿ ಕಾಂಕ್ರಿಟ್ ಬಿಲಗಳಾಗಿವೆ ಎಂಬುದನ್ನು ಗಟ್ಟಿಧ್ವನಿಯಲ್ಲಿ ಈ ಕಥೆಗಳು ಹೇಳುತ್ತವೆ.

ಗುರುಪ್ರಸಾದ್ ಕಂಟಲಗೆರೆಯವರೊಳಗಿನ ಪ್ರತಿಭೆ ತನ್ನೆಲ್ಲಾ ಸತ್ವವನ್ನು ಬಸಿದು ’ಜಾತಿ ಮಾಂಸ’, ’ಚಾಕರಿ’, ’ಕುರುವು’, ’ಶ್ರೀ ಮನದ ಹೂದೋಟ’ ಮತ್ತು ’ಬೇರಿಗಂಟದ ಮರ’ ಕತೆಗಳನ್ನು ಕಟ್ಟಿದೆ.

’ಚಾಕರಿ’ ಕತೆಯ ಚಂಗ, ಸತ್ಯ, ಶಿವ, ಮತ್ತು ಪ್ರಕಾಶ ಮಂಗನ ಹಳ್ಳಿಯ ದಲಿತಕೇರಿಯ ಎಚ್ಚೆತ್ತ ಹುಡುಗರು. ಮಂಗನ ಹಳ್ಳಿಯ ಊರೊಟ್ಟಿನ ಜನ ಕೇರಿಯ ಜನರ ಮೇಲೆ ಹೇರಿರುವ ಶತಮಾನಗಳ ಅಸ್ಪೃಶ್ಯತೆಯ ಹೊರೆಯನ್ನು ಹೇಗಾದರೂ ಮಾಡಿ ಇಳಿಸಿ ತನ್ನ ಕೇರಿಯ ಜನರು ಕೂಡ ಊರೊಟ್ಟಿನ ಜನಗಳ ಹಾಗೆ ನಿರಾಳದ, ನೆಮ್ಮದಿಯ, ಭದ್ರತೆಯ ಬದುಕನ್ನು ಬದುಕಬೇಕೆಂಬ ಹಂಬಲವುಳ್ಳವರು. “ಅದಕ್ಕೆ ಅಡ್ಡಿಯಾಗಿರುವ ಪಟೇಲನ ಮಗ ಪಾಲನ ಹುನ್ನಾರವನ್ನು ವಿಫಲಗೊಳಿಸಲು, ಅಂಬೇಡ್ಕರ್ ಜಯಂತಿಯಂದು ಸಮಾನತೆಯ ಪಾಠ ಮಾಡುತ್ತಿದ್ದ ತಿಪ್ಪಯ್ಯನನ್ನು ಊರಿಗೆ ಕರೆಸಿ ’ಊರಿನ ದೇವಾಲಯಗಳಿಗೆ ದಲಿತರೆಲ್ಲರಿಗೂ ಪ್ರವೇಶ ಸಿಗಬೇಕೆಂದರೆ, ಹೋರಾಟಕ್ಕಿಳಿಯಬೇಕು, ಕಾನೂನು ನಮ್ಮ ಪರವಾಗಿದೆ’ ಎಂದು ಭಾಷಣ ಮಾಡಿಸುತ್ತಾರೆ. ಭಾಷಣದ ಸಾಲುಗಳನ್ನು ಕಾರ್ಯಗತಗೊಳಿಸುವುದರ ಬಗ್ಗೆ ತಲೆಕೆಡಿಸಿಕೊಳ್ಳದ ಯುವಕರು, ಮುಂದೆ ಬರುವ ಬಸವೇಶ್ವರನ ಜಾತ್ರೆಗೆ ದೇವರ ಉತ್ಸವ ಕೇರಿಯ ಒಳಗೆ ಬರುವಂತೆ ಮಾಡಬೇಕು. ಅದಕ್ಕಾಗಿ ನಮ್ಮ ಕುಳ್ವಾಡಿ ನರಸಯ್ಯನ ಮೂಲಕ ಡಂಗುರ ಹೊಡೆಸಿ, ಕೇರಿಯ ಜನ ಪರೇವಿಗೆ ಕೊಡಬಹುದಾದದನ್ನು ಗುಡಿತಕೆ ತಂದು ಕೊಡಲು ಹೇಳುತ್ತಾರೆ.

ಜಾತ್ರೆಯ ದಿನ ಬಸವ ದೇವರನ್ನು ತಮ್ಮ ಕೇರಿಗೆ ಬರಿಸಿಕೊಳ್ಳಲು ಯುವಕರ ಗುಂಪು ವಿಫಲವಾಗುತ್ತದೆ. ಆದರೆ ಯುವಕರ ಮಾತಿನಿಂದ ಎಚ್ಚೆತ್ತಿದ್ದ ಕೇರಿಯ ಜನ ತಮ್ಮ ಹಟ್ಟಿಗೆ ಬರದ ದೇವರಿಗೆ ಹಣ್ಣು ಕಾಯಿ ಮಾಡಿಸಲು ಹೋಗುವುದಿಲ್ಲ. ಆದರೆ ಕುಲ್ವಾಡಿ ನರಸಯ್ಯನ ಕುಟುಂಬವೊಂದು ಮಾತ್ರ ಕೇರಿಯ ಹುಡುಗರ ಮತ್ತು ಕೇರಿಯ ಜನಗಳ ಮಾತು ಕೇಳದೆ ಊರ ಮುಂದಕ್ಕೆ ಹೋಗಿ ಪೂಜೆ ಮಾಡಿಸಿಕೊಂಡು ಬರುತ್ತೆ. ಜಾತ್ರೆಯ ಮಾರನೇ ದಿನ ನಡೆದ ಪರೇವಿನಲ್ಲಿ ಆಕಸ್ಮಿಕವಾಗಿ ನಡೆದ ನಾಯಿಗಳ ಗಲಾಟೆ ಬಿಡಿಸಲು ಹೋದ ಕುಳ್ವಾಡಿ ನರಸಯ್ಯನ ಎಕ್ಕಡ ಸಿದ್ಧವಾಗುತ್ತಿದ್ದ ಸಾರಿನ ಪಾತ್ರೆಗೆ ಬಿದ್ದು ಹೋಗುತ್ತೆ.

ಇದಕ್ಕೆ ಕುಲ್ವಾಡಿ ನರಸಯ್ಯನ ಮೇಲೆ ಆಪಾದನೆ ಹೊರಿಸಿದ ಊರ ಮಂದಿ ನರಸಯ್ಯನಿಗೆ ಇಪ್ಪತ್ತೊಂದು ಸಾವಿರ ದಂಡ ಹಾಕುತ್ತಾರೆ. ದಂಡ ಕಟ್ಟಲು ಹಣವಿಲ್ಲದ ನರಸಯ್ಯನಿಗೆ ಹಣ ಹೊಂಚಿಕೊಡುವ ಕೇರಿಯ ಹುಡುಗರು ನರಸಯ್ಯನಿಗೆ ಹಣ ಕೊಟ್ಟು ಇನ್ನು ಮೇಲಾದರೂ ನಮ್ಮ ಮಾತು ಕೇಳಿಕೊಂಡು ಊರ ಮಂದಿಯ ಕೆಲಸ ಕಾರ್ಯಗಳಿಗೆ ಹೋಗಬೇಡ ಎಂದು ಮಾತು ಕೊಡುವಂತೆ ನರಸಯ್ಯನನ್ನು ಒತ್ತಾಯಿಸುತ್ತಾರೆ. ಇದಕ್ಕೆ ಒಪ್ಪಿದ ನರಸಯ್ಯ ಊರ ಹಿರೀಕರ ಮಾತಿನಂತೆ ದಂಡ ಕಟ್ಟಿ ಊರ ಮಂದಿಯ ಮುಖಕ್ಕೆ ಹೊಡೆದಂತೆ, ಅವರ ಮಾತಿಗೆ ಸೊಪ್ಪು ಹಾಕದೆ ನಮ್ಮ ಮಾತುಗಳನ್ನು ಕೇಳಿಕೊಂಡು ಕೇರಿಯ ಜನದೊಟ್ಟಿಗೆ ನರಸಯ್ಯ ಇರುತ್ತಾನೆ. ಹಾಗೆಂದು ಇದೀಗ ಬಂದು ನಮ್ಮೊಂದಿಗೆ ಕೂಡಿಕೊಳ್ಳುತ್ತಾನೆ ಎಂದು ಕಾಯುತ್ತಿದ್ದ ಹುಡುಗರಿಗು ಇದೇನು ಇಷ್ಟೊತ್ತಾದ್ರೂ ಕುಲ್ವಾಡಿ ನರಸಯ್ಯ ಬರಲಿಲ್ಲವಲ್ಲ ಎಂದು ಆತನ ಮನೆಗೆ ಬಂದು ವಿಚಾರಿಸಲಾಗಿ ಆತನ ಮೊಮ್ಮಗ ತಾತ ಇನ್ನೂ ಬಂದಿಲ್ಲ ಮಧ್ಯಾಹ್ನ ತಮಟೆ ಬೇಕು ಎಂದು ಹೇಳಿ ಕಳಿಸಿತ್ತು. ನಾನೇ ಹೋಗಿ ಕೊಟ್ಟು ಬಂದೆ ಎಂದ. ಅಷ್ಟರಲ್ಲಿ ಆ ಕಡೆಯಿಂದ ಟಂಕು ಣಕ್ಕ ಟಂಕುಣಕ್ಕ ಶಬ್ದದೊಂದಿಗೆ ಕೇಳ್ರಪ್ಪೋ ಬಸವಣ್ಣನ ಜಾತ್ರೇಲಿ ದೇವ್ರಿಗೆ ಮುಟ್ಟಾಗಿರೋದರಿಂದ ಪುಣ್ಯವಾದ್ನೆ ಮಾಡಿಸ್ಬೇಕು ಗುಡಿ ಗೌಡ್ರು ತೀರ್ಮಾನಿಸೌವ್ರೆ ಮನಿಗೊಂದಾಳಂಗೆ ಗುಡಿತಕ್ಕೆ ಬರ್ರ್‍ಅಪ್ಪೊ’ ಎನ್ನುವ ದನಿ ಕುಳ್ವಾಡಿ ನರಸಿಲಯ್ಯನದೇ ಆಗಿತ್ತು”. ಹೀಗೆ ಕತೆ ಕೊನೆಯಾಗುತ್ತೆ.

ಈ ಕತೆಯ ಕ್ಲೈಮ್ಯಾಕ್ಸ್ ಈ ಕತೆಯ ವಿಶೇಷತೆ. ಅಂಬೇಡ್ಕರ್ ಚಿಂತನೆಯನ್ನು ಕೇರಿಯ ಜನರಲ್ಲಿ ಬಿತ್ತಿ, ಊರಿನ ಮಂದಿಯ ಶೋಷಣೆಯಿಂದ ಕೇರಿಯನ್ನು ಮುಕ್ತಗೊಳಿಸಬೇಕೆಂಬ ಆ ಯುವಕರ ಆಲೋಚನೆಗಳಿಗೆ ಅದೇ ಕೇರಿಯ ಎಲ್ಲರೂ ಒಗ್ಗೂಡಿದರೆ ಕುಲ್ವಾಡಿ ನರಸಯ್ಯನ ಕುಟುಂಬ ಇವರ ಮಾತುಗಳಿಗೆ ಒಪ್ಪದೇ ಸಾಂಪ್ರದಾಯಿಕವಾಗಿ ಗೌಡರ ಮಾತುಗಳನ್ನೆ ಒಪ್ಪಿ ನಡೆಯುತ್ತದೆ. ಕತೆಯ ಕಡೆಯಲ್ಲಿ ಕುಲ್ವಾಡಿ ನರಸಯ್ಯ ತೆಗೆದುಕೊಳ್ಳುವ ತೀರ್ಮಾನ ವಿಚಿತ್ರವಾದರೂ ಆತನ ತೀರ್ಮಾನ ಕಟು ವಾಸ್ತವದ್ದು ಆಗಿದೆ.ಅಂಬೇಡ್ಕರ್ ಅವರ ಚಿಂತನೆ ಕೇರಿಯ ಹುಡುಗರ ಪ್ರಜ್ಞೆಯಲ್ಲಿ ಇದೆಯಷ್ಟೆ. ಅದು ಊರಿನಲ್ಲಿ ಕ್ರಿಯೆಯ ಹಂತಕ್ಕೆ ಬಂದಿಲ್ಲ. ಅಂಬೇಡ್ಕರ್ ಅವರ ಆಶಯ ಕ್ರಿಯಾತ್ಮಕವಾಗಬೇಕೆಂದರೆ ಅಧಿಕಾರ ಬೇಕು. ಆ ದಾರಿಯಲ್ಲಿ ಕೇರಿಯ ಹುಡುಗರ ಕ್ರಿಯೆ ಇರಬೇಕಿತ್ತು. ಚಿಂತನೆಗಳು ಕ್ರಿಯಾರೂಪಕ್ಕೆ ಬಾರದ ಹೊರತು ಯಾವುದೇ ಪ್ರಯೋಜನಗಳಿಲ್ಲ ಎಂಬುದರ ಅರಿವು ಹೊಸಕಾಲದ ಯುವಕರಗಿಂತ ಹಳೆ ತಲೆಮಾರಿನ ಕುಲ್ವಾಡಿ ನರಸಯ್ಯನಿಗೆ ಗೊತ್ತಿದೆ. ಆ ಕಾರಣಕ್ಕಾಗಿಯೇ ಆತ ಮತ್ತೆ ಊರಿನ ಜನರ, ಗೌಡರ ’ಚಾಕರಿ’ ಮಾಡಲು ಹೋಗುವುದು.ಈ ಕಾರಣಕ್ಕೆ ’ಚಾಕರಿ’ ಕತೆ ಇವತ್ತಿನ ದಲಿತ ಸಮುದಾಯ ಹೋರಾಟದ ಕಡುವಾಸ್ತವವನ್ನು ಪರೋಕ್ಷವಾಗಿ ನಮ್ಮ ಮುಂದಿಡುತ್ತಿದೆ.

ಈ ಸಂಕಲನದ ಮತ್ತೊಂದು ಮಹತ್ವದ ಕತೆ ’ಕುರುವು’. ಈ ಕತೆಯ ಮುಖ್ಯಪಾತ್ರ ದಲಿತ ಸಮುದಾಯದ ನರಸಿಂಹ. ಕಪ್ಪಗೆ ಕಟ್ಟುಮಸ್ತಾಗಿದ್ದು, ದಪ್ಪನೆ ಮೀಸೆಯ ಕಾರಣಕ್ಕಾಗಿ ಮೀಸೆ ನರಸಿಂಹನೆಂದೇ ಪ್ರಸಿದ್ಧನಾಗಿದ್ದ. ಸುತ್ತ ಮೂವತ್ತಮೂರು ಹಳ್ಳಿ ಜನರಿಗೆ ತೋಪಿನ ಕೆಂಪಮ್ಮ ಶಕ್ತಿಶಾಲಿ ದೇವತೆ ಎಂಬ ನಂಬಿಕೆ ಇತ್ತು. ಇಂಥ ದೇವತೆ ಅಪ್ಪಣೆ ಕೊಡೊದ್ರಲ್ಲಿ ಎತ್ತಿದ ಕೈ. ಹಾಗಾಗಿ ಸುತ್ತೆಂಟು ಹಳ್ಳಿಯ ಜನ ಅಪ್ಪಣೆ ಕೇಳಲು ಬರುತ್ತಿದ್ದರು.

ಕಾರ್ತೀಕ ಮಾಸದಲ್ಲಿ ನಡೆಯುವ ಜಾತ್ರೆಗೆ ಬಂದಿದ್ದ ನರಸಿಂಹ ಕೆಂಪಮ್ಮ ದೇವತೆಗೆ ’ನಾನೊಂದು ’ಕುರುವು’ (ಗುರುತು) ಮಾಡ್ಕಂಡಿದಿನಿ ತೋರ್ಸವ್ವ’ ಎಂದು ಭಕ್ತಿ ಭಾವದಿಂದ ಕೈ ಮುಗಿದು ಅಡ್ಡ ಬೀಳುತ್ತಾನೆ. ನರಸಿಂಹನ ಕುರುವು ಹುಡುಕಿಕೊಂಡು ಇಡೀ ಊರಿನ ಜಾಗಗಳನ್ನು ತೋರಿಸಿದರೂ ಇದಲ್ಲ ತಾಯಿ ತನ್ನ ಕುರುವು ಎನ್ನುತ್ತಾನೆ.

ಕಡೆಗೆ ಜಿದ್ದಿಗೆ ಬಿದ್ದ ಕೆಂಪವ್ವ ದೇವತೆ ಊರಿನ ಮಧ್ಯದ ತಿಪ್ಪೆಗುಂಡಿಗೆ ಇಳಿದು, ಮುಂದೆ ಚರಂಡಿಯಲ್ಲಿ ಮಿಂದು, ಅದನ್ನು ದಾಟಿ ಕೆಳಗಲ ಹಟ್ಟಿಯೊಳಗೆ (ಕೇರಿ) ಇದ್ದ ಮಾರಿ ಕಲ್ಲಿನ ಬಳಿ ಬಂದು ಮೂರು ಸುತ್ತು ಹಾಕಿ ನಿಂತಾಗ, ’ಇದೇ ತಾಯಿ ತನ್ನ ಕುರುವು’ ಎನ್ನುತ್ತಾನೆ.

ಅಷ್ಟರಲ್ಲಿ ಕೆಂಪವ್ವ ದೇವತೆಯನ್ನು ಹೊತ್ತಿದ್ದ ಊರಿನ ಮೇಲ್ಜಾತಿಯ ಜನಕ್ಕೆ ನರಸಿಂಹನ ಕುರುವಿನ ಉಪಾಯ ಅರ್ಥವಾಗಿ, ದಿಗಿಲಾಗಿ ಕೆಂಪವ್ವನನ್ನು ಅಲ್ಲೇ ಬಿಟ್ಟು ಹೊರಟುಹೋಗುತ್ತಾರೆ.

ತನ್ನ ಬುದ್ಧಿವಂತಿಕೆಯಿಂದ ಊರಿನ ದೇವತೆಯನ್ನು ಕೇರಿಗೆ ಬರುವ ಹಾಗೆ ಮಾಡಿದ್ದೂ ಅಲ್ಲದೆ, ಕಡೆಗೆ, ತಾನು ಮಾಡಿದ ಈ ಕಾರ್ಯಕ್ಕೆ ಊರಿನ ಮಂದಿ ಸಿಟ್ಟಿಗೆದ್ದು, ತನ್ನ ಮನೆಯ ಕಡೆ ನುಗ್ಗಲು ಬರುತ್ತಿದ್ದಾಗ ಮನೆಗೆ ಬಂದು ಮಲಗಿ ಮಕ್ಕಳೊಡನೆ ಕಾಲು ಒತ್ತಿಸಿಕೊಳ್ಳುತ್ತಿದ್ದ ನರಸಿಂಹ, ತಲೆದಿಂಬಿನಲ್ಲಿರಿಸಿಕೊಂಡಿದ್ದ ರೋಟಿಕುಡ್ಲು ಮೇಲೆ ಕೈಯಾಡಿಸಿ ಬಿಗಿಗೊಳಿಸಿಕೊಳ್ಳುತ್ತಾನೆ.

ಕುರುವು ಕತೆ ಮೇಲ್ಜಾತಿಗಳ ಶೋಷಣೆಗೆ ಪ್ರತಿಯಾಗಿ, ತನ್ನ ಸಮುದಾಯದ ಹಕ್ಕಿಗಾಗಿ, ತಮ್ಮಗಳ ಅಸ್ತಿತ್ವಕ್ಕಾಗಿ, ಜೀವ ಉಳಿಸಿಕೊಳ್ಳುವ ಸಲುವಾಗಿ ಹೋರಾಡಲು, ಅಂತಿಮವಾಗಿ ಕೊಲ್ಲಲು ಸಿದ್ಧನಾಗುವ ನರಸಿಂಹ ಚಿತ್ರ ಕೂಡ ವಾಸ್ತವದಲ್ಲಿ ದಲಿತ ಸಮುದಾಯ ಉಳಿವಿಗಾಗಿ ಹೋರಾಡಲೇಬೇಕಾದ ಅನಿವಾರ್ಯತೆಯ ಚಿತ್ರಣವನ್ನು ಕಟ್ಟಿಕೊಡುತ್ತದೆ.

ಈ ಸಂಕಲನದ ಮತ್ತೊಂದು ವಿಶಿಷ್ಟ ಕತೆ ’ಶ್ರೀ ಮನದ ಹೂದೋಟ’. ಈ ಸಂಕಲನದ ಉಳಿದ ಕತೆಗಳಲ್ಲಿ ತಳ ಸಮುದಾಯ ಅನುಭವಿಸುವ ಶೋಷಣೆಯ ಬಹುರೂಪಗಳು ಬೇರೆ ಬೇರೆ ರೂಪಗಳಲ್ಲಿ ಮರು ನೇಯ್ಗೆಗೊಂಡಿವೆ. ಆದರೆ ’ಶ್ರೀ ಮನದ ಹೂದೋಟ’ದ ವಸ್ತು ಮಾತ್ರ ಭಿನ್ನವಾಗಿದೆ. ಇತ್ತೀಚಿನ ಕನ್ನಡ ಕಥಾ ಪ್ರಪಂಚದಲ್ಲಿಯೇ ಒಂದು ವಿಶಿಷ್ಟವಾದ ಕತೆ ಇದು. ಕನ್ನಡ ಕಥಾ ಪರಂಪರೆಯ ವಿಸ್ತೃತ ಓದಿನ ಅರಿವು ಇರುವ ಲೇಖಕನೊಬ್ಬ ಮಾತ್ರ ಬರೆಯಬಲ್ಲ ಕತೆ ಇದು.

ಕತೆಯ ವಸ್ತು ಧರ್ಮ ವಿಧಿಸುವ ಕಟ್ಟುಪಾಡುಗಳು ಹೇಗೆ ಮನುಷ್ಯನ ಮೂಲಭೂತ ತುಡಿತಗಳ ಮುಂದೆ ಅಸಹಾಯಕವಾಗಿ ನಿಲ್ಲುತ್ತವೆ ಎಂಬುದನ್ನು ಶ್ರೀ ಮಠದ ಕಿರಿಯ ಸ್ವಾಮಿಯ ಪಾತ್ರದ ಮೂಲಕ ಕಣ್ಣಿಗೆ ಕಟ್ಟುವಂತೆ ಚಿತ್ರಿಸಲಾಗಿದೆ. ಈ ಕತೆಯಲ್ಲಿ ಕಿರಿಯ ಶ್ರೀಗಳ ವರ್ತನೆಯನ್ನು ಕಟ್ಟಿಕೊಟ್ಟಿರುವುದು ಮತ್ತು ಕತೆಯಲ್ಲಿ ಇಡಿಕಿರಿದಿರುವ ಮಠದ ವಾತಾವರಣ ವಿವರಗಳೇ ಅದೆಷ್ಟು ಅಥೆಂಟಿಕ್ ಅಗಿವೆ ಎಂದರೆ, ಗಟ್ಟಿ ಕತೆಗಾರನೊಬ್ಬ ಮಾತ್ರ ಹೀಗೆ ನೈಜವನ್ನು ಮರು ಸೃಷ್ಟಿಸಬಲ್ಲ. ಆಹಾರದ ರಾಜಕಾರಣದ ಎದುರು ಎಂತಹ ಸ್ಥಿತಿಯೇ ಬರಲಿ ತಮ್ಮ ಆಹಾರದ ಅಸ್ಮಿತೆಯನ್ನು ಉಳಿಸಿಕೊಳ್ಳುವ ಹಿನ್ನಲೆಯಲ್ಲಿ ಬಹುತ್ವವನ್ನು ಕಾಪಾಡುವ ಉದ್ದೇಶದ ಕತೆ ’ಜಾತಿ ಮಾಂಸ’ ಕೂಡ ತನ್ನ ಚಿತ್ರಕಶಕ್ತಿಯಿಂದ ವಿಶೇಷವಾದ ಕತೆ. ಇಲ್ಲಿನ ಎರಡನೇ ಹೆಂಡ್ತಿ ಕತೆ ವಸ್ತು ಹಾಗೂ ಆಶಯದ ದೃಷ್ಟಿಯಿಂದ ಸಂಕಲನದ ಅತಿ ದುರ್ಬಲ ಕತೆಯೂ ಹೌದು.

’ಕೆಂಡದ ಬೆಳುದಿಂಗಳು’ ಸಂಕಲನ ಸಮಾಜದಲ್ಲಿ ಮಾನವೀಯತೆಯ ಕನಸನ್ನು ವಾಸ್ತವೀಕರಿಸಲು ಹೊರಟು ಅದೇ ಸಮಾಜದಿಂದ ಗಾಯಗೊಂಡ, ನೋವುಂಡ ಕಲೆಗಾರನೊಬ್ಬನ ಪ್ರಯತ್ನದಂತೆ ಕಾಣುತ್ತದೆ. ಜಾತ್ಯತೀತ ಸಂವೇದನೆ, ಧರ್ಮಾತೀತವಾದ ಹಾಗೂ ಮತೀಯರಹಿತವಾದ ಆಶಯ ಈ ಸಂಕಲನದ್ದು. ಅಷ್ಟೇ ಅಲ್ಲದೇ ಅಂಬೇಡ್ಕರ್ ರೂಪಿಸಿದ ಎಲ್ಲಾ ಬಗೆಯ ವೈಚಾರಿಕತೆಯು ಪ್ರಜ್ಞೆಯ ಹಂತದಿಂದ ಕ್ರಿಯಾರೂಪಕ್ಕೆ ಬರದೇ ಇಲ್ಲಿ ಏನೂ ಆಗುವುದಿಲ್ಲ ಎಂಬ ಕೆಂಡದ ಸತ್ಯವನ್ನು ಹೇಳುತ್ತಲೇ ಕನ್ನಡ ಸಾಹಿತ್ಯ ಮೀಮಾಂಸೆಗೆ ತನ್ನದೇ ಆದ ಕೊಡುಗೆಯನ್ನು ಪ್ರಾಮಾಣಿಕವಾಗಿ ಕೊಟ್ಟಿರುವ ಸಂಕಲನವೂ ಹೌದು.

ಎಚ್ ಎಸ್ ರೇಣುಕಾರಾಧ್ಯ

ಎಚ್ ಎಸ್ ರೇಣುಕಾರಾಧ್ಯ
ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಮಸುವಿನಕೊಪ್ಪಲು ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕ. ಸಾಹಿತ್ಯ, ಸಂಸ್ಕೃತಿ, ಕ್ರೀಡೆ, ರಾಜಕಾರಣ ಆಸಕ್ತಿಯ ಕ್ಷೇತ್ರಗಳು.


ಇದನ್ನೂ ಓದಿ: ಪುಸ್ತಕ ವಿಮರ್ಶೆ; ಸೋಲಿಗ ಬುಡಕಟ್ಟು ಸಮುದಾಯದ ಆಪ್ತ ಚಿತ್ರಣ; ಪರಿಸರ-ಜೀವಶಾಸ್ತ್ರ ವೈವಿಧ್ಯತೆಯ ಭಂಡಾರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದ್ವೇಷ ಭಾಷಣ: ಮೋದಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಚುನಾವಣಾ ಆಯೋಗಕ್ಕೆ ಪತ್ರ ಬರೆದ 2,200ಕ್ಕೂ...

0
ರಾಜಸ್ಥಾನದ ಬನ್ಸ್ವಾರದಲ್ಲಿ ಮುಸ್ಲಿಮರ ವಿರುದ್ಧ ದ್ವೇಷದ ಹೇಳಿಕೆಗಳನ್ನು ನೀಡಿದ ಬಿಜೆಪಿಯ ಸ್ಟಾರ್ ಪ್ರಚಾರಕ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕ್ರಮ ಕೈಗೊಳ್ಳುವಂತೆ 2,200ಕ್ಕೂ ಹೆಚ್ಚು ನಾಗರಿಕರು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ. ಆದರೆ...