Homeಕರ್ನಾಟಕಬೀದರ್‌: ಆಟವಾಡುತ್ತಿದ್ದಾಗ ಕಾರು ಹರಿದು ಮಗು ಮೃತ್ಯು : ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಬೀದರ್‌: ಆಟವಾಡುತ್ತಿದ್ದಾಗ ಕಾರು ಹರಿದು ಮಗು ಮೃತ್ಯು : ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆ

- Advertisement -
- Advertisement -

ಬೀದರ್‌ನಲ್ಲಿ ಹೃದಯವಿದ್ರಾಹಕ ಘಟನೆಯೊಂದು ನಡೆದಿದ್ದು,  ಆಟವಾಡುತ್ತಿದ್ದಾಗ ಕಾರು ಹರಿದು ಎರಡು ವರ್ಷದ ಬಾಲಕ ಮೃತಪಟ್ಟಿದ್ದಾನೆ. ಘಟನೆಯಲ್ಲಿ ಚಾಲಕನ ನಿರ್ಲಕ್ಷ್ಯದ ಆರೋಪ ಕೇಳಿ ಬಂದಿದೆ.

ಬೀದರ್ ನಗರದ ಹಾರೂರಗೇರಿ ಸಮೀಪದ ಡಾ.ಗುರುಪಾದಪ್ಪ ನಾಗಮಾರಪಳ್ಳಿ ಆಸ್ಪತ್ರೆ ಎದುರು ಮಂಗಳವಾರ ಸಂಜೆ ಘಟನೆ ನಡೆದಿದೆ. ಸಿಸಿಟಿವಿಯಲ್ಲಿ ಘಟನೆಯ ದೃಶ್ಯ ಸೆರೆಯಾಗಿದ್ದು, ಇದೀಗ ಈ ಕುರಿತ ವಿಡಿಯೋ  ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದೆ.

ವಕೀಲ ಸತೀಶ ಪಾಟೀಲ ಹಾಗೂ ಸಂಗೀತಾ ದಂಪತಿಯ ಎರಡನೇ ಮಗ ಬಸವಚೇತನ ಮೃತ ಬಾಲಕ. ಬಾಲಕ ಮನೆ ಮುಂದೆ ಓಡಾಡುವಾಗ ಈ ಘಟನೆ ಸಂಭವಿಸಿದೆ.

 

ಘಟನೆಯ ವಿವರ: ಸತೀಶ ಪಾಟೀಲ ಅವರು ಹಾರೂರಗೇರಿಯಲ್ಲಿನ ಸಹೋದರಿಯ ಮನೆಗೆ ಬಂದಿದ್ದರು. ಸತೀಶ ಸಹೋದರಿ, ಸಂಬಂಧಿಕರ  ಜೊತೆ ಮಾತನಾಡುತ್ತಿದ್ದು ಬಳಿಕ ಅವರನ್ನು ಬೀಳ್ಕೊಟ್ಟು ಮನೆಯೊಳಗೆ ಬಂದಿದ್ದರು. ಆದರೆ ಅವರನ್ನು ಹುಡುಕಿಕೊಂಡು ಚಾಕೊಲೇಟ್‌ ತಿನ್ನುತ್ತ ಬಸವಚೇತನ ಮನೆ ಹೊರಗೆ ಹೋಗಿದ್ದ. ಒಂದು ಬದಿ ನಿಂತಿದ್ದ ಬಾಲಕ ಮತ್ತೊಂದು ಕಡೆಗೆ ನಿಧಾನವಾಗಿ ಹೋಗುತ್ತಿದ್ದ. ಈ ವೇಳೆ ದಂತ ವೈದ್ಯ ಡಾ. ಸುನೀಲ ಭಂಡಾರಿ ಅವರ ಇನ್ನೋವಾ ಕಾರು ಚಲಾಯಿಸಿಕೊಂಡು ಬಂದಿದ್ದಾರೆ. ಬಾಲಕ ಬರುವುದನ್ನು ಸುನೀಲ ಭಂಡಾರಿ ಗಮನಿಸಿಲ್ಲ. ಕಾರು ಬಾಲಕನ ಮೇಲೆ ಹರಿದಿದ್ದು, ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಆವರಣದಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾದಲ್ಲಿ ಘಟನೆಯ ದೃಶ್ಯ ದಾಖಲಾಗಿದ್ದು, ಮಗು ವಾಹನದಡಿಗೆ ಬಿದ್ದ ನಂತರ ಚಾಲಕ ಸ್ಥಳದಿಂದ ಹೇಗೆ ಪರಾರಿಯಾಗಿದ್ದಾನೆ ಎಂಬುದನ್ನು ತೋರಿಸಿದೆ. ಘಟನೆಯ ವೇಳೆ ಸ್ಥಳದಲ್ಲಿದ್ದ ಜನ ಬಾಲಕನ ಬಳಿ ಧಾವಿಸಿ ರಕ್ಷಣೆಗೆ ಪ್ರಯತ್ನಿಸಿದ್ದರು.

ಘಟನೆಗೆ ಕಾರು ಚಾಲಕ ಸುನೀಲ್‌ ಭಂಡಾರಿಯ ನಿರ್ಲಕ್ಷ್ಯದ ಚಾಲನೆ ಕಾರಣ ಎಂಬ ಆರೋಪ ಕೇಳಿ ಬಂದಿದೆ. ಗಾಂಧಿ ಗಂಜ್ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

ಇದೇ ರೀತಿಯ ಹೃದಯವಿದ್ರಾವಕ ಘಟನೆಯೊಂದು ಇತ್ತೀಚೆಗೆ ಕಾಸರಗೋಡಿನ ಉಪ್ಪಳದ ಸೋಂಕಾಲ್‌ ಬಳಿ ನಡೆದಿತ್ತು. ಪಾರ್ಕಿಂಗ್‌ ಮಾಡುತ್ತಿದ್ದಾಗ ಒಂದೂವರೆ ವರ್ಷದ ಮಗು ಚಿಕ್ಕಪ್ಪನ ಕಾರಿನಡಿಗೆ ಬಿದ್ದು ಮೃತಪಟ್ಟಿತ್ತು. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ವ್ಯಾಪಕವಾಗಿ ವೈರಲ್‌ ಆಗಿತ್ತು. ಉತ್ತರಪ್ರದೇಶದ  ಶಹಜಹಾನ್‌ಪುರದಲ್ಲಿ ಕಾರನ್ನು ಹಿಮ್ಮುಖವಾಗಿ ತೆಗೆಯುವಾಗ ಕಾರಿನ ಚಕ್ರಗಳ ಅಡಿಯಲ್ಲಿ ಸಿಲುಕಿ 3 ವರ್ಷದ ಮಗು ಮೃತಪಟ್ಟಿತ್ತು. ಪ್ರಕರಣದಲ್ಲಿ ಚಾಲಕನ ನಿರ್ಲಕ್ಷ್ಯದ ಆರೋಪ ಕೇಳಿ ಬಂದಿತ್ತು. ಇತ್ತೀಚೆಗೆ ಬೆಂಗಳೂರಿನಲ್ಲಿ ಟೆಕ್ಕಿಯೊಬ್ಬರು ಅಪಾರ್ಟ್‌ಮೆಂಟ್‌ ಗೇಟ್‌ ಮುಂಭಾಗದಲ್ಲಿ ಮಗು ಆಟವಾಡುತ್ತಿರುವುದನ್ನು ಗಮನಿಸದೆ ಕಾರು ಚಲಾಯಿಸಿದ ಪರಿಣಾಮ ಮಗು ಕಾರಿನಡಿಗೆ ಬಿದ್ದು ಮೃತಪಟ್ಟಿತ್ತು. ಬೆಳ್ಳಂದೂರಿನ ಸಮೃದ್ದಿ ಅಪಾರ್ಟ್‌ಮೆಂಟ್‌ನಲ್ಲಿ ಘಟನೆ ನಡೆದಿದ್ದು, ಈ ಕುರಿತ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಇಂತಹ ಹಲವು ಘಟನೆಗಳು ಮತ್ತೆ ಮತ್ತೆ ಮರುಕಳಿಸುತ್ತಿದ್ದು, ವಾಹನ ಚಾಲನೆಯ ವೇಳಿನ ನಿರ್ಲಕ್ಷ್ಯ ಮತ್ತು ಪೋಷಕರು ತಮ್ಮ ಪುಟ್ಟ ಮಕ್ಕಳ ಬಗ್ಗೆ ಕೆಲವೊಮ್ಮೆ ಗಮನಹರಿಸದಿರುವುದು ಇಂತಹ ಘಟನೆಗಳಿಗೆ ಕಾರಣವಾಗುತ್ತಿದೆ.

ಇದನ್ನು ಓದಿ: ರೈಲ್ವೆ ನಿಲ್ದಾಣಗಳಲ್ಲಿ ಮೋದಿ ಪೋಟೋ ಇರುವ ಸೆಲ್ಫಿ ಬೂತ್‌ ನಿರ್ಮಾಣ: ಸಾರ್ವಜನಿಕ ನಿಧಿ ಬಳಕೆ

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...