ಅಸ್ಸಾಂಜ್ ಗಡಿಪಾರು ಮನವಿ ತಿರಸ್ಕೃತ

ಸದ್ಯಕ್ಕೆ ಬ್ರಿಟಿಷ್ ಪೊಲೀಸರ ವಶದಲ್ಲಿರುವ ಆಸ್ಟ್ರೇಲಿಯಾ ಮೂಲದ ಪತ್ರಕರ್ತ, ವಿಕಿಲೀಕ್ಸ್ ಸಂಸ್ಥಾಪಕ-ಸಂಪಾದಕ ಜೂಲಿಯನ್ ಅಸ್ಸಾಂಜ್ ಅವರ ಗಡಿಪಾರು ಮನವಿಯನ್ನು ಬ್ರಿಟನ್ ನ್ಯಾಯಲಯ ತಿರಸ್ಕರಿಸಿದೆ. ಅಮೆರಿಕದ ರಹಸ್ಯ ದಾಖಲೆಗಳನ್ನು ಬಯಲಿಗೆಳೆದ ಗೂಢಚರ್ಯೆ ಆರೋಪವನ್ನು ಎದುರಿಸುತ್ತಿರುವ ಅಸ್ಸಾಂಜ್ ಅವರು ಮಾಡಿದ ಪತ್ರಿಕೋದ್ಯಮ ಈ ಶತಮಾನದಲ್ಲಿ ಹಲವು ಕಾರಣಗಳಿಗೆ ಪ್ರಮುಖವಾದದ್ದು.

ಇಟಾಲಿಯನ್ ಚಿಂತಕ ದಿವಂಗತ ಅಂಬರ್ಟೋ ಇಕೋ ಅವರು ಗುರುತಿಸುವಂತೆ ಇತ್ತೀಚಿನವರೆಗೂ ಪ್ರಭುತ್ವಗಳು ಮಾತ್ರ ನಾಗರಿಕರ ಮೇಲೆ ಕಣ್ಗಾವಲು ಇರಿಸಬಹುದು ಅದರ ವಿರುದ್ಧದ ಪ್ರಕ್ರಿಯೆ ಸಾಧ್ಯವಿಲ್ಲ ಎಂಬ ನಂಬಿಕೆಯನ್ನು ಬುಡಮೇಲು ಮಾಡಿದ್ದು ವಿಕಿಲೀಕ್ಸ್‌ನ ದಾಖಲೆಗಳು ಮತ್ತು ಪತ್ರಿಕೋದ್ಯಮ. ಪ್ರಭುತ್ವದ ಕೆಲಸ ಕಾರ್ಯಗಳ ಮೇಲೆ, ರಹಸ್ಯಗಳ ಮೇಲೆ ನಾಗರಿಕರು ಕೂಡ ಕಣ್ಣಿಡಬಹುದು, ಎಲ್ಲ ನಾಗರಿಕರು ಅಲ್ಲದಿದ್ದರೂ ಅವರ ಪ್ರತಿನಿಧಿಯೊಬ್ಬ ಅದನ್ನು ಮಾಡಿ ಪ್ರಭುತ್ವದ ಕರಾಳತೆಯನ್ನು ಬಯಲಿಗೆಳೆಯಬಹುದು ಎಂದು ತೋರಿಸಿಕೊಟ್ಟಿದ್ದು ಅಸ್ಸಾಂಜ್ ಅವರ ಈ ಎಪಿಸೋಡ್.

ವಿಕಿಲೀಕ್ಸ್ ಹೆಚ್ಚು ಗಮನ ಹರಿಸಿದ್ದು ಮತ್ತು ಗುರಿಯಾಗಿಸಿಕೊಂಡಿದ್ದು ಅಂದಿನ ಅಮೆರಿಕ ಆಡಳಿತ ವ್ಯವಸ್ಥೆ ಮತ್ತು ಅದರ ಯುದ್ಧಪಿಪಾಸು ಸ್ವಭಾವದ ವಿರುದ್ಧ. ಅಮೆರಿಕ ಇರಾಕ್ ಮತ್ತು ಆಫ್ಘಾನಿಸ್ತಾನಗಳಲ್ಲಿ ನಡೆಸುತ್ತಿದ ಯುದ್ಧ ಕ್ರೌರ್ಯಗಳು, ಅಲ್ಲಿ ಆ ಪಡೆಗಳು ಸಾಮಾನ್ಯ ನಾಗರಿಕರ ವಿರುದ್ಧ ನಡೆಸಿದ ದೌರ್ಜನ್ಯಗಳು ಮತ್ತು ಸಾಮಾನ್ಯ ನಿಶ್ಯಸ್ತ್ರ ನಾಗರಿಕರನ್ನು ವಿಡಿಯೋ ಗೇಮ್ ಮಾದರಿಯಲ್ಲಿ ಕೊಂದ ಸಂಗತಿಗಳನ್ನು ವಿಕಿಲೀಕ್ಸ್ ಬಯಲು ಮಾಡಿದ್ದು ಮಾನವೀಯತೆ ಬಗ್ಗೆ ಎಚ್ಚರ ಉಳಿಸಿಕೊಂಡಿದ್ದ ಒಂದು ವಲಯಕ್ಕಾದರೂ ಬೆಚ್ಚಿ ಬೀಳಿಸಿತ್ತು. ಅಮೆರಿಕದ ಇಂತಹ ಕೃತ್ಯಗಳ ಬಗ್ಗೆ ಸಾಮಾನ್ಯ ನಂಬಿಕೆಯೊಂದು ಜನರಲ್ಲಿ ಮನೆಮಾಡಿತ್ತಾದರೂ, ಅದನ್ನು ದೃಢಪಡಿಸಿದ, ಅದಕ್ಕೆ ಪೂರಕ ದಾಖಲೆಗಳನ್ನು ನೀಡಿ ಸಾಬೀತುಪಡಿಸಿದ್ದ ಈ ಪತ್ರಿಕೋದ್ಯಮ ಪ್ರಭುತ್ವಗಳನ್ನು ಮೊಟ್ಟಮೊದಲ ಬಾರಿಗೆ ಈ ಮಟ್ಟದಲ್ಲಿ ಬೆಚ್ಚಿ ಬೀಳಿಸಿತ್ತು.

ವಿಕಿಲೀಕ್ಸ್ ಬಯಲು ಮಾಡಿದ ಒಂದು ಮಹತ್ವದ ಪ್ರಕರಣವನ್ನು ಇಲ್ಲಿ ನೆನಪಿಸಿಕೊಳ್ಳುವುದು ಉಚಿತವೆನಿಸುತ್ತದೆ. ಇರಾಕ್ ಮೇಲೆ ಅಮೆರಿಕ ಯುದ್ಧ ನಡೆಸುವ ಸಮಯದಲ್ಲಿ ನಡೆದ ಘಟನೆ ಅದು. ಜುಲೈ 2007ರಲ್ಲಿ ಜರುಗಿದ ಶೂಟಿಂಗ್ ಘಟನೆಯ ಒಂದು ವಿಡಿಯೋ ವಿಕಿಲೀಕ್ಸ್‌ನಲ್ಲಿ ಪ್ರಕಟಗೊಂಡ ಮೇಲೆ ಭಾರಿ ಸದ್ದು ಮಾಡಿತ್ತು. ಅಮೆರಿಕ ಯುದ್ಧ ವಿಮಾನದ ತಂಡ ಸುಳ್ಳು ಸುಳ್ಳೇ ಮಾಹಿತಿ ನೀಡಿ, ಸುಮಾರು 12 ಜನ ಅಮಾಯಕರನ್ನು ಗುಂಡಿಕ್ಕಿ ಕೊಲ್ಲುವ ಮತ್ತು ಹತ್ಯೆ ಮಾಡಿದ ಮೇಲೆ ವಾಯುಪಡೆಯ ಸೈನಿಕರು ಗಹಗಹಿಸಿ ನಗುತ್ತಾ ಮಾತನಾಡುವ ವಿಡಿಯೋ ಇದಾಗಿತ್ತು. ಈ ಶೂಟಿಂಗ್‌ನಲ್ಲಿ ರಾಯ್ಟರ್ಸ್ ಸುದ್ದಿ ಸಂಸ್ಥೆಯ 22 ವರ್ಷದ ಫೋಟೋ ಜರ್ನಲಿಸ್ಟ್ ನಮೀರ್ ನೂರ್-ಎಲ್ದೀನ್ ಮತ್ತು ಅವರ ಚಾಲಕ 40 ವರ್ಷದ ಸಯೀದ್ ಅವರನ್ನು ಹತ್ಯೆ ಮಾಡಲಾಗಿತ್ತು. ಈ ಘಟನೆಯ ವಿಡಿಯೋ ಕೋರಿ ಪೆಂಟಗನ್‌ಗೆ ರಾಯ್ಟರ್ಸ್ ಮಾಡಿದ ಮನವಿಯನ್ನು ತಿರಸ್ಕರಿಸಿದ್ದ ಅಮೆರಿಕ ಸರ್ಕಾರ ಅಲ್ಲಿ ನಡೆದಿದ್ದ ಹತ್ಯೆಗಳನ್ನು ಸಮರ್ಥಿಸಿಕೊಂಡಿತ್ತು. ಆದರೆ ಮಿಲಿಟರಿ ಎನ್ಕ್ರಿಪ್ಶನ್ ಮುರಿದು ಈ ವಿಡಿಯೋವನ್ನು ವಿಕಿಲೀಕ್ಸ್ ಪ್ರಕಟ ಮಾಡಿದ ಮೇಲೆ ಅಮೆರಿಕ ಸರ್ಕಾರದ ಧೂರ್ತತನ ಬಟಾಬಯಲಾಗಿತ್ತು. ಇದರ ಪ್ರಕಟಣೆ ಅಮೆರಿಕವನ್ನು ಅತಿಹೆಚ್ಚು ಕೆರಳಿಸಿತು. ಏಕವ್ಯಕ್ತಿ ಅಸ್ಸಾಂಜ್ ವಿರುದ್ಧ ಯುದ್ಧ ಹೂಡಿ ಅವರನ್ನು ಬಂಧಿಸಲು ಅಮೆರಿಕ ಇವತ್ತಿಗೂ ಹವಣಿಸುತ್ತಲೇ ಇದೆ. ಹಲವು ವರ್ಷಗಳ ಕಾಲ ತಲೆಮರೆಸಿಕೊಂಡು ನಂತರ 2012ರಿಂದ ಬ್ರಿಟನ್‌ನ ಈಕ್ವೆಡಾರ್ ರಾಯಭಾರ ಕಚೇರಿಯಲ್ಲಿ ಅಸ್ಸಾಂಜ್ ಆಶ್ರಯ ಪಡೆದಿದ್ದರು.

ಈ ರಾಜಕೀಯ ಆಶ್ರಯವನ್ನು ಈಕ್ವೆಡಾರ್ ಹಿಂತೆಗೆದುಕೊಂಡ ನಂತರ, ಅವರನ್ನು ಬ್ರಿಟಿಷ್ ಪೊಲೀಸರು ಜಾಮೀನು ಉಲ್ಲಂಘನೆಗೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ಬಂಧಿಸಿದ್ದರು. ಈಗ ಅಮೆರಿಕದ ಜೈಲುಗಳಲ್ಲಿ ಸುರಕ್ಷತೆಯ ಕೊರತೆಯ ಕಾರಣದಿಂದಾಗಿ ಗಡಿಪಾರು ಮನವಿ ತಿರಸ್ಕೃತವಾಗಿರುವ ಹಿನ್ನೆಲೆಯಲ್ಲಿ ಅಸ್ಸಾಂಜ್ ತಮ್ಮನ್ನು ಸ್ವತಂತ್ರಗೊಳಿಸಲು ಅರ್ಜಿ ಹಾಕಲಿದ್ದಾರೆ ಎನ್ನಲಾಗಿದೆ.

ಭಾರತದ ಮಟ್ಟಿಗೂ ಈ ವಿಕಿಲೀಕ್ಸ್ ಹಲವು ವಿಷಯಗಳನ್ನು ಹೊರಹಾಕಿತ್ತು. ರಾಯಭಾರಿ ಕಚೇರಿ ಎಂದರೆ ರಾಜತಾಂತ್ರಿಕ ಸಂಬಂಧಗಳಿಗಾಗಿ ಇರುವುದಲ್ಲ, ಬದಲಾಗಿ ದೇಶದಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಅಮೆರಿಕದ ಸರ್ಕಾರಕ್ಕೆ ವರದಿ ಮಾಡುವ, ಇಲ್ಲಿ ಔತಣಕೂಟಗಳನ್ನು ಏರ್ಪಡಿಸಿ ಮುಖಂಡರ ಮಾತುಗಳನ್ನು ಕದ್ದಾಲಿಸುವ, ಅವುಗಳನ್ನು ವಾಪಸ್ ತಮ್ಮ ದೇಶಕ್ಕೆ ವರದಿ ಮಾಡುವ, ಇಲ್ಲಿನ ಯೋಜನೆಗಳ ಮೇಲೆ ಹಸ್ತಕ್ಷೇಪ ಮಾಡಲು ಪ್ರಯತ್ನಿಸುವ ಏರ್ಪಾಡುಗಳು ಈ ರಾಯಭಾರಿ ಕಚೇರಿಗಳು ಎಂಬ ಸಾಮಾನ್ಯ ತಿಳಿವಳಿಕೆಯನ್ನು ವಿಕಿಲೀಕ್ಸ್ ದಾಖಲೆಗಳ ಸಮೇತ ಸಾಬೀತುಪಡಿಸಿತ್ತು.

ಹೀಗೆ ಪ್ರಭುತ್ವಗಳ ರಹಸ್ಯಗಳನ್ನು ಹೊರಗೆ ಎಳೆಯುವ (ಹಿಲರಿ ಕ್ಲಿಂಟನ್ ವಿರುದ್ಧ ಅಮೆರಿಕದ ಚುನಾವಣೆಯಲ್ಲಿಯೂ ಇದು ಪ್ರಭಾವ ಬೀರಿತ್ತು ಕೂಡ) ಸಾಧ್ಯತೆಯ ಬಗ್ಗೆ ವಿಕಿಲೀಕ್ಸ್ ನಂಬಿಕೆ ಹುಟ್ಟಿಸಿತ್ತಾದರೂ ಪ್ರಭುತ್ವಗಳ ಕ್ರೂರತನಕ್ಕೆ ಅದು ಸಾಟಿಯಿಲ್ಲ ಎಂಬುದು ಮತ್ತೆ ಸಾಬೀತಾಗಿದೆ. ವಿಸಲ್‌ಬ್ಲೋವರ್‌ಗಳಾದ ಅಸ್ಸಾಂಜ್ ಆಗಲಿ, ಸ್ನೋಡೆನ್ ಆಗಲಿ ತಲೆಮರೆಸಿಕೊಳ್ಳುವ, ಬೇರೊಂದು ದೇಶದಲ್ಲಿ ರಾಜಕೀಯ ಆಶ್ರಯ ಪಡೆಯುವ ಸ್ಥಿತಿಯಿಂದ ಹೊರಬರದ ಪರಿಸ್ಥಿತಿಯಲ್ಲಿ ಇದ್ದಾರೆ. ಇಂತಹ ಸ್ಥಿತಿ ಹೊಸದಾಗಿ ಹುಟ್ಟಿಕೊಳ್ಳಬಹುದಾದ ಜನಪರ ಹ್ಯಾಕರ್‌ಗೆ ಸ್ಫೂರ್ತಿ ನೀಡಲು ಎಲ್ಲಿ ಸಾಧ್ಯವಿದೆ?

ಅಷ್ಟೇ ಅಲ್ಲ, ಬ್ಲ್ಯಾಕ್‌ವಾಟರ್ ಯುದ್ಧ ಅಪರಾಧ ಎಂದೇ ಕುಖ್ಯಾತವಾದ ಪ್ರಕರಣವನ್ನು ಕೂಡ ವಿಕಿಲೀಕ್ಸ್ ಪ್ರಕಟಿಸಿತ್ತು. ಇರಾಕ್ ಯುದ್ಧದಲ್ಲಿ ಖಾಸಗಿ ರಕ್ಷಣಾ ಪಡೆಯನ್ನು ಅಮೆರಿಕ ಬಳಸಿಕೊಂಡಿತ್ತು. ಈ ಬ್ಲ್ಯಾಕ್‌ವಾಟರ್ ಪಡೆ ಸೆಪ್ಟಂಬರ್ 2007ರಲ್ಲಿ ಬಾಗ್ದಾದ್‌ನ ನಿಸ್ಸೋರ್ ವೃತ್ತದಲ್ಲಿ 17 ಸಾಮಾನ್ಯ ನಾಗರಿಕರ ಮಾರಣಹೋಮ ನಡೆಸಿತ್ತು. ಇಂತಹ ಸುಮಾರು 14 ಪ್ರತ್ಯೇಕ ಬ್ಲ್ಯಾಕ್‌ವಾಟರ್ ಕ್ರೌರ್ಯಗಳ ಬಗ್ಗೆ ವಿಕಿಲೀಕ್ಸ್ ಇರಾಕ್ ಫೈಲ್ಸ್ ವರದಿ ಮಾಡಿತ್ತು. ಇಂತಹ ಒಂದು ಪ್ರಕರಣದ ವಿಚಾರಣೆಯಾಗಿ ಬ್ಲ್ಯಾಕ್‌ವಾಟರ್‌ನ ನಾಲ್ಕು ಜನ ಸದಸ್ಯರಿಗೆ ಅಮೆರಿಕದ ನ್ಯಾಯಾಲಯವೊಂದು ಜೀವಾವಧಿ ಶಿಕ್ಷೆ ವಿಧಿಸಿತ್ತು. ಆದರೆ ಈಗ ಅಧ್ಯಕ್ಷ ಸ್ಥಾನ ತೊರೆಯುತ್ತಿರುವ ಡೊನಾಲ್ಡ್ ಟ್ರಂಪ್, ತಮ್ಮ ಇತ್ತೀಚಿನ ಆದೇಶದಲ್ಲಿ ಈ ನಾಲ್ವರಿಗೆ ಕ್ಷಮಾದಾನ ನೀಡಿ ಬಿಡುಗಡೆಗೊಳಿಸಿದ್ದಾರೆ. ಅಮೆರಿಕ ಆಡಳಿತ ವ್ಯವಸ್ಥೆಯ ಈ ಪ್ರಹಸನ ಅಲ್ಲಿನ ಎಷ್ಟು ನಾಗರಿಕರಿಗೆ ಆಕ್ರೋಶ ತರಿಸದೆಯೋ ತಿಳಿಯದು!

ಇವೆಲ್ಲಾ ಹಿನ್ನಡೆಗಳ ಹೊರತಾಗಿಯೂ ಎಲ್ಲೋ ಯಾವುದೋ ಮೂಲೆಯಲ್ಲಿ ಜಗತ್ತಿನ ಎಲ್ಲ ಪ್ರಭುತ್ವಗಳ ಕ್ರೌರ್ಯಗಳನ್ನು ಕಣ್ಗಾವಲಿನಲ್ಲಿ ಇರಿಸಿರುವ ಯಾರೋ ಒಬ್ಬ ಹ್ಯಾಕರ್ ಖಂಡಿತಾ ಇದ್ದಾನೆ. ಹೆಚ್ಚು ಜನರೂ ಇರಬಹುದು. ಅಸ್ಯಾಂಜ್ ಅಂತಹ ಸ್ನೋಡೆನ್ ಅಂತಹ ವ್ಯಕ್ತಿಗಳ ಧೈರ್ಯ ಅವರಿಗೆ ಒಂದು ದಿನ ಸ್ಫೂರ್ತಿ ತರಬಲ್ಲದು. ನಿರಂಕುಶಪ್ರಭುತ್ವದ ಅಹಂಕಾರಕ್ಕೆ ಪೆಟ್ಟು ನೀಡಲು ಅವರೆಲ್ಲಾ ಕಾಯುತ್ತಿದ್ದಾರೆ. ಈ ಭಯ ಆ ಪ್ರಭುತ್ವಗಳಿಗೂ ಇದೆ ಎಂಬುದಂತೂ ನಿಜ.


ಇದನ್ನೂ ಓದಿ: ಅಂದು ಟ್ಯಾಗೋರ್ ದ್ವೇಷ, ಇಂದು ಅವರನ್ನೇ ಅಪ್ರಾಪ್ರಿಯೇಟ್ ಮಾಡಿಕೊಳ್ಳಲು ಯತ್ನ

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ಗುರುಪ್ರಸಾದ್ ಡಿ. ಎನ್
+ posts

LEAVE A REPLY

Please enter your comment!
Please enter your name here