ಒಮ್ಮೆ ಮೈಸೂರಿನ ರಂಗಾಯಣದಲ್ಲಿ ನಡೆಯುವ ಬಹುರೂಪಿ ನಾಟಕೋತ್ಸವ ನೋಡಲು ಹೋದಾಗ, ಸ್ನೇಹಿತರೆಲ್ಲರೂ ಸೇರಿ ಸಂಜೆ ಒಂದು ಸಿನಿಮಾಗೆ ಹೋಗಿದ್ದೆವು. ಅದು ತೆಲುಗು ಸಿನಿಮಾ. ಸಾಮಾನ್ಯವಾಗಿ ತೆಲುಗು ಸಿನಿಮಾಗಳ ಹೂರಣದ ಬಗ್ಗೆ ಒಂದು ಮಟ್ಟದ ಊಹೆ ನಿಮಗೆ ಇದ್ದೇ ಇದೆ, ಆದುದರಿಂದ ಅದನ್ನು ನಾನು ಹೆಚ್ಚು
ವಿವರಿಸುವುದಿಲ್ಲ. ಸಿನಿಮಾ ನೋಡುತ್ತಿರಬೇಕಾದರೆ, ಸಿನಿಮಾದ ನಾಯಕ ನಾಯಕಿಗೆ ಏನೋ ಹೇಳಬೇಕಾದರೆ “Butterfly Effect” ಅಂದ. ನನ್ನ ಕಿವಿ ನೆಟ್ಟಗೆ ಆಯಿತು. ಏನು Butterfly Effect ಬಗ್ಗೆ ಮಾತಾಡುತ್ತಿದ್ದಾರಲ್ಲಾ, ಇದು ನಾವು ಓದಿರುವ Butterfly Effectಆ? ಅಥವಾ ಇದರಲ್ಲೇನಾದರೂ ಸಿನಿಮೀಯ ಸಾರಾಂಶ ಇದೆಯಾ ಅಂತ ಯೋಚನೆ ಮಾಡುವಷ್ಟರಲ್ಲಿ, ಆತ ಭೌತವಿಜ್ಞಾನದಲ್ಲಿ ಬರುವ Butterfly Effect ಅನ್ನು ಓದಿಕೊಂಡು ಸಿನಿಮಾದಲ್ಲಿ ಸಂದರ್ಭಕ್ಕನುಸಾರವಾಗಿ ಬಳಸಿರುವುದನ್ನು ಕಂಡು ನಿಜವಾಗಲೂ ಆಶ್ಚರ್ಯವಾಯಿತು!

ಏನಿದು ಸಿನಿಮಾ ಬಗ್ಗೆ ಮಾತನಾಡುತ್ತಿದ್ದಾನಲ್ಲಾ ಜತೆಗೆ Butterfly Effect ಸೇರಿಸುತ್ತಿರುವುದೇಕೆ ಅಂತ ನೀವು ಯೋಚಿಸಬಹುದು. ಈ Butterfly Effectಗೂ ಈ ವರ್ಷಧ ಭೌತವಿಜ್ಞಾನದ ನೊಬೆಲ್ ಪ್ರಶಸ್ತಿಗೂ ಸಂಬಂಧವಿದೆ!

ಭೂಮಿಗೆ ವಾತಾವರಣ (Atmosphere) ಇದೆ. ಈ ವಾತಾವರಣದಲ್ಲಿ ಹಲವು ಅನಿಲಗಳು, ಧೂಳು, ನೀರಿನ ಕಣಗಳು, ಮೋಡಗಳು, ಓಜೋನ್ ಪದರ ಇರುವುದು ತಿಳಿದಿರುವ ವಿಚಾರ. ಸೂರ್ಯನ ಕಿರಣಗಳು ಭೂಮಿಯ ವಾತಾವರಣದ ಮೂಲಕ ಹಾದು, ನೆಲಕ್ಕೆ ಬಡಿದು ಪ್ರತಿಫಲನವಾಗುತ್ತಿರುತ್ತದೆ. ಭೂಮಿಯ ವಾತಾವರಣದ ಒಳಗೆ ಬರುವ ಸೂರ್ಯನ ಕಿರಣಗಳ ಶಕ್ತಿ ಮತ್ತು ಪ್ರತಿಫಲನಗೊಂಡು ಹೊರಹೋಗುವ ಸೂರ್ಯನ ಕಿರಣಗಳ ಶಕ್ತಿ ಒಂದೇ ಇರುವುದಿಲ್ಲ. ಹೊರಹೋಗುವ ಕಿರಣಗಳು, ಹೆಚ್ಚಾಗಿ ಅವೆಗೆಂಪು ಕಿರಣಗಳಾಗಿರುತ್ತದೆ (Infrared Radiation). ವಾತಾವರಣದಲ್ಲಿರುವ ಅನಿಲಗಳಾದ ಇಂಗಾಲದ ಡೈಆಕ್ಸೈಡ್, ಮಿಥೇನ್, ನೀರಿನ ಆವಿಯು, (ಇವುಗಳನ್ನು ಹಸಿರು ಮನೆ ಅನಿಲಗಳು ಎಂದು ಕರೆಯುತ್ತಾರೆ) ಪ್ರತಿಫಲನಗೊಂಡ ಸೂರ್ಯನ ಕಿರಣಗಳನ್ನು ಹೀರಿಕೊಂಡು, ತನ್ನ ಸುತ್ತಲ ಪ್ರದೇಶವನ್ನು ಬಿಸಿ ಮಾಡುತ್ತವೆ. ಇದರಿಂದ ತಾಪಮಾನ ಏರಿಕೆಯಾಗುತ್ತದೆ. ಈ ಪ್ರಕ್ರಿಯ ಭೂಮಿಯಲ್ಲಿ ಯಾವಾಗಲೂ ನಡೆಯುವ ಸಾಮಾನ್ಯ ವಿದ್ಯಮಾನ. ಆದರೆ, ವಾತಾವರಣದಲ್ಲಿ ಈ ಹಸಿರು ಮನೆ ಅನಿಲಗಳು ಹೆಚ್ಚಾದರೆ, ತಾಪಮಾನ ಏನಾಗುತ್ತದೆ? ಹೌದು, ಹೆಚ್ಚಾಗುತ್ತದೆ! ಈ ಹಸಿರು ಮನೆ ಅನಿಲ ಹೇಗೆ ಹೆಚ್ಚಳವಾಗುತ್ತದೆ?

ಭೂಮಿಯ ವಾತಾವರಣ/ಹವಾಮಾನ ಅತ್ಯಂತ ಸಂಕೀರ್ಣವಾದುದು. ಈ ವಾತಾವರಣದ ಚಲನವಲನ (dynamics) ಬಗ್ಗೆ ವೈಜ್ಞಾನಿಕವಾಗಿ ಅಧ್ಯಯನಗಳು ನಡೆದಾಗ ಮಾತ್ರ ನಾವು ಹವಾಮಾನದ ಬಗ್ಗೆ ತಿಳಿಯಬಹುದು ಹಾಗೂ ಅದರ ಬಗ್ಗೆ ಮುನ್ಸೂಚನೆ ನೀಡಬಹುದು. ಈ ಬಗ್ಗೆ ಹಲವಾರು ವಿಜ್ಞಾನಿಗಳು ಅಧ್ಯಯನ ಕೈಗೊಂಡಿದ್ದು, ಹಲವು ವಿದ್ಯಮಾನಗಳನ್ನು ವಿವರಿಸಲು ಅವರಿಗೆ ಸಾಧ್ಯವಾಗಿದೆ. ಆದರೂ ಅಧ್ಯಯನದ ದೃಷ್ಟಿಯಿಂದ, ಭೂಮಿಯ ಹವಾಮಾನದ ಚಲನವಲನಗಳನ್ನು ವಿವರಿಸುವುದು ಕ್ಲಿಷ್ಟಕರವಾದ ಕೆಲಸ.

ಪ್ರತಿದಿನ ಪತ್ರಿಕೆಗಳಲ್ಲಿ ಅಥವಾ ವಾರ್ತೆಯಲ್ಲಿ ನೀವು ಹವಾಮಾನದ ಮುನ್ಸೂಚನೆಯನ್ನು ನೋಡಿರಬಹುದು/ ಕೇಳಿರಬಹುದು. ಇಂದಿನ ಅಥವ ಮುಂದಿನ ಒಂದು ವಾರದ ತಾಪಮಾನ, ಗಾಳಿಯ ವೇಗ, ಮೋಡ, ಗುಡುಗು ಮಿಂಚಿನ ಮುನ್ಸೂಚನೆ ಹಾಗು ಮಳೆ ಬರುವ ಸಂಭವಗಳನ್ನು ಅಲ್ಲಿ ನೀಡಿರುತ್ತಾರೆ. ಎಷ್ಟೋ ಬಾರಿ, ಹವಾಮಾನ ಮುನ್ಸೂಚನೆಯಲ್ಲಿ ಇಂದು ಭಾರಿ ಮಳೆಯಾಗಲಿದೆ ಎಂದು ತಿಳಿಸಿದ್ದರೆ, ಅಂದು ಮಳೆಯೇ ಆಗದೆ ಬಿಸಿಲಿನ ಅನುಭವವಾಗಿ, ಹವಾಮಾನ ಇಲಾಖೆಯನ್ನು ತೆಗಳುವುದನ್ನೂ ನಾವು ಮಾಡಿರುತ್ತೇವೆ. ಇದಕ್ಕೆಲ್ಲಾ ಕಾರಣ ಹವಾಮಾನ ಇಲಾಖೆಯಲ್ಲ, ಬದಲಾಗಿ ಅಧ್ಯಯನದಲ್ಲಿರುವ ಅತೀ ಸಂಕೀರ್ಣವಾದ ವಿದ್ಯಮಾನ (Complex Phenomena) ಮತ್ತು ಇದನ್ನು ವಿವರಿಸುವುದಕ್ಕಿರುವ ಗಣಿತದ ಸಮೀಕರಣಗಳು (Mathematical Models).

ಹವಾಮಾನದ ಚಲನವಲನವನ್ನು ಅಧ್ಯಯನ ಮಾಡಬೇಕೆಂದರೆ, ಹವಮಾನದ ಮೇಲೆ ಪರಿಣಾಮ ಬೀರುವ ಪ್ರತಿಯೊಂದು ಅಂಶದ (all parameters that affects weather) ಬಗ್ಗೆಯೂ ಸಂಪೂರ್ಣ ಮಾಹಿತಿ ಇರಬೇಕಾಗುತ್ತದೆ. ಈ ಎಲ್ಲಾ ಅಂಶಗಳ ಬಗ್ಗೆ ಮಾಹಿತಿ ಪಡೆದರೂ ಕೂಡ, ಅವುಗಳಲ್ಲಿ ಯಾವುದಾದರೊಂದು ಅಂಶದಲ್ಲಿ ಅತಿ ಸಣ್ಣ ಬದಲಾವಣೆಯಾದರೂ, ಹವಾಮಾನದಲ್ಲಿ ಅತಿ ದೊಡ್ಡ ಬದಲಾವಣೆಯನ್ನು ಕಾಣಬಹುದಾಗಿರುತ್ತದೆ. ಇದನ್ನ ಭೌತ ವಿಜ್ಞಾನದಲ್ಲಿ Butterfly Effect ಎಂಬ ಪರಿಕಲ್ಪನೆಯಲ್ಲಿ ವಿವರಿಸಬಹುದು.

Butterfly Effect: ಜನಪ್ರಿಯವಾದ ಮತ್ತು ಸರಳ ಉದಾಹರಣೆಗೆ ಧಾರವಾಢದಲ್ಲಿ ಒಂದು ಚಿಟ್ಟೆಯು ತನ್ನ ರೆಕ್ಕೆ ಬಿಚ್ಚಿ ಹಾರಿದರೆ, ದೂರದ ಅಮೆರಿಕದ ನ್ಯೂಜೆರ್ಸಿಯಲ್ಲಿ ಬಿರುಗಾಳಿ (tornedo) ಉಂಟಾಗಬಹುದು. ಅಂದರೆ, ಚಿಟ್ಟೆ ತನ್ನ ರೆಕ್ಕೆ ಬಡಿತದಿಂದ ವಾತಾವರಣದಲ್ಲಿ ಉಂಟುಮಾಡಿದ ಸಣ್ಣ ಪಲ್ಲಟಗಳಿಗೆ ದೂರದ ಪ್ರದೇಶದಲ್ಲಿನ ವಾತಾವರಣದಲ್ಲಿ tornedo ಉಂಟುಮಾಡುವಷ್ಟು ಸಾಮರ್ಥ್ಯವಿರುತ್ತದೆ. ಅಷ್ಟು ಸಂವೇದನಾಶೀಲವಾಗಿದೆ ಭೂಮಿಯ ವಾತಾವರಣ. ಇದನ್ನು ಅಧ್ಯಯನ ಮಾಡುವ ಗಣಿತದ ಸಮೀಕರಣಗಳೂ ಅಷ್ಟೇ ಸಂವೇದನಾಶೀಲವಾಗದೆ.

ಅಂದರೆ, ಆ ಸಮೀಕರಣದಲ್ಲಿ ಅತ್ಯಂತ ಸಣ್ಣ ಬದಲಾವಣೆಯಾದರೂ, ಅದಕ್ಕೆ ಉತ್ತರ ಹುಡುಕುವುದು ಅತ್ಯಂತ ಸಂಕೀರ್ಣವಾದುದು. ಆದುದರಿಂದ, ಇದೊಂದು ಸಂಕೀರ್ಣವಾದ ವಿದ್ಯಮಾನ. ಇಂತಹ ಹಲವು ಸಂಕೀರ್ಣ ವಿದ್ಯಮಾನಗಳು ಭೌತವಿಜ್ಞಾನದಲ್ಲಿ ಇದ್ದರೂ, ಹವಾಮಾನ ಅಧ್ಯಯನವು ಅತ್ಯಂತ ಹೆಚ್ಚು ಸಂಕೀರ್ಣವಾದುದು ಎಂಬುದು ಇಲ್ಲಿ ಮುಖ್ಯ. ಆದರೆ, ಇಂದಿನ ದಿನಗಳಲ್ಲಿ ಭೂಮಿಯ ಹವಾಮಾನದ ಅಧ್ಯಯನ ಹಿಂದೆಂದಿಗಿಂತಲೂ ಹೆಚ್ಚು ಪ್ರಸ್ತುತವಾದುದ್ದು. ಇದನ್ನು ಅಧ್ಯಯನ ಮಾಡುವವರನ್ನು ಹವಾಮಾನ ವಿಜ್ಞಾನಿಗಳು (Climate Scientists) ಎಂದೇ ಕರೆಯುತ್ತಾರೆ. ಅವರ ಗಣಿತದ ಮಾದರಿಗಳು ಇಂದು, ಇಂತಹ ಸಂಕೀರ್ಣ ವಿದ್ಯಮಾನದ ಸಮೀಕರಣಗಳನ್ನು ಬಿಡಿಸಿ ಹವಾಮಾನದ ಬಗ್ಗೆ ವಿವರಿಸುತ್ತವೆ.

ಸೊಕುರೊ ಮನಾಬೆಯವರು (90 ವರ್ಷ) ಜಪಾನ್ ದೇಶದವರು, ಪ್ರಸ್ತುತ ಅವರು ಅಮೆರಿಕದ ಪ್ರಿನ್ಸ್‌ಟನ್ ವಿಶ್ವವಿದ್ಯಾನಿಲಯದಲ್ಲಿ ಹಿರಿಯ ಹವಾಮಾನ ತಜ್ಞರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 1960ರ ಇವರ ಅಧ್ಯಯನದ ವಿಷಯ, ಇಂಗಾಲದ ಡೈಆಕ್ಸೈಡ್ ಅನಿಲವು ಹೆಚ್ಚಳವಾದರೆ ಹೇಗೆ ವಾತಾವರಣದಲ್ಲಿ ತಾಪಮಾನ ಏರಿಕೆಯಾಗುತ್ತದೆ ಎಂಬುದು. ಇವರ ಅಂದಿನ ಅಧ್ಯಯನದ ಪ್ರಕಾರ ವಾತಾವರಣದಲ್ಲಿ ಇಂಗಾಲದ ಡೈಆಕ್ಸೈಡ್ ದುಪ್ಪಟ್ಟಾದರೆ, ಭೂಮಿಯ ವಾತಾವರಣದ ಸರಾಸರಿ ತಾಪಮಾನ 2 ಡಿಗ್ರಿ ಸೆಲ್ಸಿಯಸ್ ಅಷ್ಟು ಹೆಚ್ಚಳವಾಗುತ್ತದೆ ಎಂದು. ಭೂಮಿಯ ವಾತಾವರಣದಲ್ಲಿ ಗುರುತಿಸಿರುವ ಏರಿಕೆಯ ತಾಪಮಾನಕ್ಕೆ ಕಾರಣ ಇಂಗಾಲದ ಡೈಆಕ್ಸೈಡ್ ಅನಿಲ ಕಾರಣವೇ ಹೊರತು ಸೂರ್ಯನ ಕಿರಣಗಳ ಏರಿಳಿತಗಳಲ್ಲ ಎಂಬುದನ್ನು ತಮ್ಮ ಅಧ್ಯಯನದ ಮೂಲಕ ತಿಳಿಸಿದವರು ಮನಾಬೆಯವರು. ಸೂರ್ಯನ ಕಿರಣಗಳ ಏರಿಳಿತ ಇದಕ್ಕೆ ಕಾರಣವಾಗಿದ್ದರೆ, ವಾತಾವರಣ ತಾಪಮಾನ ಪೂರ್ತಿಯಾಗಿ ಏರಿಕೆಯಾಗಬೇಕಿತ್ತು, ಆದರೆ, ನೆಲದ ಹತ್ತಿರದಲ್ಲಿರುವ ವಾತಾವರಣದಲ್ಲಿ ಏರಿಕೆಯ ತಾಪಮಾನವಿದ್ದು, ಎತ್ತರಕ್ಕೆ ಹೋದಂತೆ ತಂಪಾಗಿದೆ, ಇದಕ್ಕೆ ಕಾರಣ ಇಂಗಾಲದ ಡೈಆಕ್ಸೈಡ್ ಎಂದು ಮನಾಬೆಯರು ತಿಳಿಸಿದರು. ಮನುಷ್ಯನು ಹವಾಮಾನದ ರಹಸ್ಯವನ್ನು ಭೇದಿಸುವ ದಾರಿಯಲ್ಲಿ ನಡೆದ ಹಲವು ಮೈಲುಗಲ್ಲುಗಳಲ್ಲಿ ಈ ಅಧ್ಯಯನವೂ ಒಂದು ಮತ್ತು ಬಹಳ ಮುಖ್ಯವಾದದ್ದು ಎಂದು ಪರಿಗಣಿಸಲಾಗಿತ್ತು.

ಜರ್ಮನಿಯ ಕ್ಲೌಸ್ ಹೆಸಲ್ಮನ್ (90 ವರ್ಷ) ಕೂಡ Climate ಹಾಗೂ Weather ನಡುವಿನ ಸಂಬಂಧಗಳನ್ನು ತಿಳಿಯಲು ಹಲವು ಅಧ್ಯಯನಗಳನ್ನು ಕೈಗೊಂಡರು. ಇವರ ಅಧ್ಯಯನ Butterfly Effectಗೆ ಸಂಬಂಧಿಸಿದ್ದು. ಅಂದರೆ, ಭೂಮಿಯ ವಾತಾವರಣದ ಪ್ರತಿಯೊಂದು ಬಿಂದುವಿನಲ್ಲಿ ತಾಪಮಾನ, ಒತ್ತಡ, ಗಾಳಿ ಬೀಸುವ ದಿಕ್ಕು ಮತ್ತು ತೇವಾಂಶ (humidity) ಇಂತಹ ಮಾಹಿತಿ ವಿವರಣೆಯನ್ನು ಪಡೆದು, ಗಣಿತದ ಸಮೀಕರಣದಲ್ಲಿ ಸೇರಿಸಿ-ಬಿಡಿಸಿ ಹವಾಮಾನವನ್ನು ಗುರುತಿಸುವುದು ಹಾಗೂ ಮುನ್ಸೂಚನೆ ನೀಡುವುದು. ಇದು ಅಸಾಧ್ಯದ ಕೆಲಸ, ಏಕೆಂದರೆ, ವಾತಾವರಣದ ಪ್ರತಿ ಬಿಂದುವಿನ ತಾಪಮಾನ, ಒತ್ತಡ, ಗಾಳಿ ಬೀಸುವ ದಿಕ್ಕು, humidityಗಳನ್ನು ಕಂಡುಹಿಡಿಯುವುದು ಕಷ್ಟ. ಕಂಡುಹಿಡಿದರೂ ಕೂಡ ಅವುಗಳು ಪ್ರತಿ ಕ್ಷಣವು ಬದಲಾವಣೆಯಾಗಿತ್ತಿರುತ್ತದೆ. ಅತಿ ಸಣ್ಣ ಬದಲಾವಣೆಗಳೂ ಕೂಡ ವಾತಾವರಣವನ್ನು ಕ್ಷಣ ಮಾತ್ರದಲ್ಲಿ ಬದಲಾಯಿಸಬಹುದು.

ಹಾಗಾಗಿ, ಇದೊಂದು ಅಸ್ತವ್ಯಸ್ತವಾಗಿರುವ ವ್ಯವಸ್ಥೆ (Chaotic System). ಇದನ್ನು ಅಧ್ಯಯನ ಮಾಡಲು Chaos Theory ಇದ್ದರೂ ಕೂಡು ಇದರಿಂದ ನಿಖರವಾದ ಫಲಿತಾಂಶ ಬರುವುದು ಕಷ್ಟ ಮತ್ತು ಅಸಾಧ್ಯ. ಆದರೂ ಈ Chaosನಲ್ಲಿಯೂ ಕೂಡ ದೀರ್ಘಕಾಲದ ಬದಲಾವಣೆಯನ್ನು ಗಮನಿಸಿ, ಫಲಿತಾಂಶ ಕಂಡುಕೊಳ್ಳುವುದಕ್ಕೆ ಹೊಸ ಹವಾಮಾನ ಮಾದರಿಯನ್ನು ಹೆಸಲ್ಮನ್ ಹುಟ್ಟು ಹಾಕಿದರು. ಹೆಸಲ್ಮನ್‌ನ ಅಧ್ಯಯನದಿಂದಾಗಿ, ಭೂಮಿಯಲ್ಲಿ ದೀರ್ಘಕಾಲದಿಂದ ನಡೆಯುತ್ತಿರುವ ಹವಾಮಾನ ಬದಲಾವಣೆಯನ್ನು ಗ್ರಹಿಸುವ ಅವಕಾಶ ಮಾನವನಿಗೆ ಒದಗಿದೆ. ಇದರ ಜೊತೆಗೆ, ಬಹಳ ಪ್ರಮುಖವಾದ ಅಧ್ಯಯನ ಎಂದರೆ, ಈ ಹವಾಮಾನದ ಮೇಲೆ ಮಾನವನ ಪರಿಣಾಮ ಏನು ಎಂಬುದರ ಬಗ್ಗೆ. ಭೂಮಿಗೆ ಬರುವ ಸೂರ್ಯನ ಕಿರಣಗಳು, ಭೂಮಿಯಲ್ಲಿರು ಜ್ವಾಲಾಮುಖಿಗಳು ಹಾಗೂ ಹಸಿರು ಮನೆ ಅನಿಲಗಳ ಬಗ್ಗೆ ಹಲವು ಅಧ್ಯಯನ ನಡೆಸಿದ ಹೆಸಲ್ಮನ್ ಅವರು, 19ನೇ ಶತಮಾನದ ಮಧ್ಯದಿಂದ ಈಚೆಗೆ ವಾತಾವರಣದಲ್ಲಿ ಇಂಗಾಲದ ಡೈಆಕ್ಸೈಡ್ ಶೇ.40ರಷ್ಟು ಹೆಚ್ಚಾಗಿದ್ದು, ಕಳೆದ 150 ವರ್ಷಗಳಲ್ಲಿ ಭೂಮಿಯ ಸರಾಸರಿ ತಾಪಮಾನ 1 ಡಿಗ್ರಿ ಸೆಲ್ಸಿಯಸ್ ಏರಿಕೆಯಾಗಿದೆ ಎಂಬ ಅಂಶವನ್ನು ತಿಳಿಸಿದರು. ಭೂಮಿಯ ಅಸ್ತಿತ್ವದ ಎಷ್ಟೋ ಸಾವಿರಾರು ವರ್ಷಗಳಲ್ಲಿಯೂ ಇಷ್ಟು ಪ್ರಮಾಣದ ಇಂಗಾಲದ ಡೈಆಕ್ಸೈಡ್ ಇದ್ದಿರಲಿಲ್ಲ. ಭೂಮಿಯ ತಾಪಮಾನ ಏರಿಕೆಗೆ ಅತೀ ಹೆಚ್ಚು ಸಹಾಯ ಮಾಡುತ್ತಿರುವುದು ಮನುಷ್ಯ!

ಇಟಲಿಯ ಜಾರ್ಜಿಯೋ ಪರಿಸಿಯವರು (73 ವರ್ಷಗಳು) ಸಂಕೀರ್ಣ ವ್ಯವಸ್ಥೆಯ (Complex System) ಬಗ್ಗೆ ಹಲವು ಅಧ್ಯಯನಗಳನ್ನು ಕೈಗೊಂಡಿದ್ದಾರೆ. ಇವರ ಅಧ್ಯಯನವನ್ನು ಹೆಚ್ಚಾಗಿ Disorder Systemಗಳನ್ನು (ಅವ್ಯವಸ್ಥೆ ಇರುವ ವಿದ್ಯಮಾನಗಳಿಗೆ) ವಿವರಿಸುವುದಕ್ಕೆ ಬಳಸಲಾಗುತ್ತದೆ. ಪರಿಸಿಯವರು ಇಂತಹ Disorder Systemಗಳಲ್ಲಿ ಗುಪ್ತ ನಿಯಮಗಳಿವೆ ಎಂಬುದನ್ನು ತಮ್ಮ ಅಧ್ಯಯನದ ಮೂಲಕ ತಿಳಿಸಿದರು. ಹವಾಮಾನ ವ್ಯವಸ್ಥೆಯು ಕೂಡ disorder system ಆಗಿರುವುದರಿಂದ, ಪರಿಸಿಯವರ ಸಂಕೀರ್ಣ ವ್ಯವಸ್ಥೆಯಲ್ಲಿನ ಹಲವು ಮಾದರಿಗಳು ಹವಾಮಾನದ ಅಧ್ಯಯನಗಳಿಗೆ ಉಪಯೋಗವಾಗಿವೆ. ಹಸಿರು ಮನೆ ಅನಿಲಗಳಲ್ಲಿ ಮನುಷ್ಯನು ನಿಯಂತ್ರಿಸ ಬಹುದಾದ ಅನಿಲ ಎಂದರೆ ಅದು ಇಂಗಾಲದ ಡೈಆಕ್ಸೈಡ್ ಮಾತ್ರ. ಆದರೆ, ಪ್ರಪಂಚದ ಅಭಿವೃದ್ಧಿ ಹಾಗೂ ಆಧುನಿಕತೆಯ ಅತೀ ವೇಗದ ಬೆಳವಣಿಗೆಯ ಹೆಸರಿನಲ್ಲಿ ಇಂಗಾಲದ ಡೈಆಕ್ಸೈಡ್ ಅನಿಲವನ್ನು ಅನಿಯಂತ್ರಿತವಾಗಿ ವಾತಾವರಣಕ್ಕೆ ಸೇರಿಸುವುದರಲ್ಲಿ ಎಲ್ಲಾ ದೇಶಗಳು ಯಶಸ್ವಿಯಾಗುತ್ತಿವೆ. ಇಂಗಾಲದ
ಡೈಆಕ್ಸೈಡ್‌ನಿಂದ ಹಸಿರು ಮನೆ ಪರಿಣಾಮವಾಗಿ, ಭೂಮಿಯ ವಾತಾವರಣದ ಸರಾಸರಿ ತಾಪಮಾನದ ಏರಿಕೆಯಾಗುತ್ತಿರುವುದನ್ನು ಗುರುತಿಸಲಾಗಿದೆ. ಈಗ ನಾವು ಹಸಿರು ಮನೆ ಪರಿಣಾಮವನ್ನು ನಿಯಂತ್ರಸದಿದ್ದರೆ ಭವಿಷ್ಯದಲ್ಲಿ ಮನುಷ್ಯನೂ ಸೇರಿದಂತೆ ಎಲ್ಲಾ ಜೀವರಾಶಿಗಳಿಗೂ ಇದು ಮಾರಕವಾಗಲಿದೆ.

ಪ್ರತಿ ವರ್ಷ ಅಕ್ಟೋಬರ್ ತಿಂಗಳು ನೊಬೆಲ್ ಪ್ರಶಸ್ತಿ ಘೋಷಿಸುವ ತಿಂಗಳು. ನೊಬೆಲ್ ಪ್ರಶಸ್ತಿಯನ್ನು ಆರು ವಿಭಾಗಗಳಾದ ಭೌತವಿಜ್ಞಾನ, ರಸಾಯನ ವಿಜ್ಞಾನ, ವೈದ್ಯಕೀಯ ವಿಜ್ಞಾನ, ಸಾಹಿತ್ಯ ಮತ್ತು ಆರ್ಥಿಕ ವಿಜ್ಞಾನ ವಿಷಯಗಳಲ್ಲಿ ಮನುಕುಲಕ್ಕೆ ಉಪಯೋಗವಾಗುವಂತಹ ವಿದ್ಯಮಾನ, ಅನ್ವೇಷಣೆ, ಸಾಹಿತ್ಯ, ಆರ್ಥಿಕ ವಿಷಯಗಳ ಅಧ್ಯಯನ-ಸಂಶೋಧನೆ-ಬರಹ-ಪ್ರತಿಪಾದನೆಗೆ ನೀಡಲಾಗುತ್ತಿದೆ. ಈ ವರ್ಷದ ಭೌತ ವಿಜ್ಞಾನದ ಪ್ರಶಸ್ತಿಯನ್ನು ಹವಾಮಾನ ವಿಜ್ಞಾನಿಗಳಾದ ಸೊಕುರೊ ಮನಾಬೆ, ಕ್ಲೌಸ್ ಹೆಸಲ್ಮನ್ ಹಾಗೂ ಜಾರ್ಜಿಯೋ ಪರಿಸಿ ಇವರಿಗೆ ನೀಡಲಾಗಿದೆ. ಇದೇ ಪ್ರಥಮ ಬಾರಿಗೆ ಹವಾಮಾನ ವಿಜ್ಞಾನಿಗಳಿಗೆ ನೊಬೆಲ್ ಪ್ರಶಸ್ತಿ ನೀಡಲಾಗಿದೆ ಎಂದು ನೊಬೆಲ್ ಸಮಿತಿಯು ತಿಳಿಸಿದೆ (ಅಮೆರಿಕದ ಪರಿಸರವಾದಿ ಮತ್ತು ಮಾಜಿ ಉಪಾಧ್ಯಕ್ಷ ಅಲ್ ಗೋರ್ ನೀಡಿದ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಹೊರತುಪಡಿಸಿ). ಈ ಪ್ರಶಸ್ತಿಯು ಇಂದಿನ ಹವಾಮಾನದ ಬಗ್ಗೆ ಹಚ್ಚಿನ ತಿಳಿವಳಿಕೆಗೆ ಸಹಾಯ ಮಾಡಲಿದ್ದು ಮತ್ತು ಹಸಿರು ಮನೆ ಪರಿಣಾಮವನ್ನು ತಡೆಯಲು ಕೈಗೊಳ್ಳಲೇಬೇಕಾದ ಕ್ರಮಗಳ ಬಗ್ಗೆ ಎಲ್ಲೆಡೆಯು ಹೆಚ್ಚು ಹೆಚ್ಚು ಚರ್ಚೆಗಳನ್ನು ಹುಟ್ಟು ಹಾಕಿ, ಎಲ್ಲಾ ದೇಶಗಳು ಸೂಕ್ತ ಕ್ರಮಗಳನ್ನ ಕೈಗೊಳ್ಳುವಂತಾಗಲಿ ಎಂದು ಆಶಿಸೋಣ. ಈ ವಿಜ್ಞಾನಿಗಳ ಅಧ್ಯಯನಗಳು ಅದಕ್ಕೆ ಖಂಡಿತವಾಗಿಯೂ ಸಹಕರಿಸಲಿವೆ.

ವಿಶ್ವ ಕೀರ್ತಿ ಎಸ್
ವಿಜ್ಞಾನ ಮತ್ತು ಖಗೋಳದಲ್ಲಿ ಆಸಕ್ತಿ, ಹವ್ಯಾಸಿ ಆಕಾಶ ವೀಕ್ಷಣೆಗಾರ. ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಭೌತ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ ಸಂಸ್ಥೆಯಲ್ಲಿ ವೈಜ್ಞಾನಿಕಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.


ಇದನ್ನೂ ಓದಿ: ನೊಬೆಲ್ ಶಾಂತಿ ಪ್ರಶಸ್ತಿ-2021 ಘೋಷಣೆ

LEAVE A REPLY

Please enter your comment!
Please enter your name here