ಮದುವೆಯಾಗುವ ಮುನ್ನ ಜಾತಿ, ಧರ್ಮಗಳಾಚೆ ಯೋಚಿಸಲು ಸಾಧ್ಯವೇ? : ಡಾ. ಗಣೇಶ್ ದೇವಿಯವರ ಮನವಿ 

ಅಂಬೇಡ್ಕರ್ ಅವರ ಜಾತಿ ನಿರ್ಮೂಲನೆಯ ಕನಸು ಮತ್ತು ಗಾಂಧಿಯವರ 'ವೈಷ್ಣವ ಜನ' ಕನಸುಗಳನ್ನು ಸಾಕಾರಗೊಳಿಸೋಣ. ಜೊತೆಯಾಗಿ ನಮಗದನ್ನು ಮಾಡಲು ಸಾಧ್ಯವಿದೆ..

ಡಾ. ಗಣೇಶ್ ಎನ್. ದೇವಿ (69) ಅವರು ಪ್ರಸಿದ್ಧ ಲೇಖಕರು, ಭಾಷಾಶಾಸ್ತ್ರಜ್ಞರು ಮತ್ತು ಸಾಂಸ್ಕೃತಿಕ ಕಾರ್ಯಕರ್ತರು. ಅವರು ಭಾರತೀಯ ಜನಭಾಷಾ ಸರ್ವೇ (ಭಾಷೆಗಳ ಅತ್ಯಂತ ದೊಡ್ಡ ಸಮೀಕ್ಷೆ)ಗಾಗಿ ಮತ್ತು ಅವರು ಸ್ಥಾಪಿಸಿರುವ ಆದಿವಾಸಿ ಅಕಾಡೆಮಿಗಾಗಿ ಖ್ಯಾತರು. ಡಾ. ದೇವಿಯವರು ಮರಾಠಿ, ಗುಜರಾತಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಬರೆಯುತ್ತಾರೆ. ಅವರ ಹೆಚ್ಚಿನ ಕೆಲಸಗಳು ಗುಜರಾತ್ ಮತ್ತು ಮಹಾರಾಷ್ಟ್ರದ ಅದಿವಾಸಿಗಳ ನಡುವೆ ನಡೆಯುತ್ತವೆ.

ಅವರು ಅಕ್ಟೋಬರ್ 5ರಿಂದ ಕರ್ನಾಟಕ ಮತ್ತು ಮಹಾರಾಷ್ಟ್ರದ ಯುವ ಜನರಿಗೆ ಮನವಿಯೊಂದನ್ನು ಮಾಡುತ್ತಿದ್ದಾರೆ. ಅದೆಂದರೆ

ಮದುವೆಯಾಗುವ ಕುರಿತು ಯೋಚಿಸುವ ಮೊದಲು ಜಾತಿ, ಧರ್ಮಗಳಾಚೆ ನಿಂತು ಚಿಂತಿಸುವ ಸಂಕಲ್ಪ ಮಾಡುವುದು.

ದೇವಿಯವರು ಒಂದು ವಿಶಿಷ್ಟ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದಾರೆ. ದಿನಕ್ಕೆ 100 ಯುವಜನರು ಇಂತಹಾ ಸಂಕಲ್ಪ ಮಾಡಿ ಸಂದೇಶ ಕಳುಹಿಸಿದರೆ ಮಾತ್ರ ಅವರು ಆಹಾರ ಸೇವನೆ ಮಾಡುತ್ತಾರೆ. ಇಲ್ಲದಿದ್ದರೆ ಕೇವಲ ನೀರು ಮಾತ್ರ ಕುಡಿಯುತ್ತಾರೆ. ಅಕ್ಟೋಬರ್ 2ರಿಂದ ಅವರ ಈ ಉಪವಾಸ ಸತ್ಯಾಗ್ರಹ ನಡೆಯುತ್ತಿದೆ. ಮೊದಲ ಐದು ದಿನಗಳಲ್ಲಿ ಅವರಿಗೆ 2000ಕ್ಕೂ ಹೆಚ್ಚು ಪ್ರತಿಕ್ರಿಯೆಗಳು ಬಂದಿವೆ. ಅವರ ಈ ಸಂಕಲ್ಪಕ್ಕೆ ನೀವು ಜೊತೆಗೂಡುವುದಾದರೆ ಈ ಕೆಳಗಿನ ಇಮೈಲ್ ಅಥವಾ ಗೂಗಲ್‌ ಫಾರ್ಮ್‌ ಬಳಸಿ.

ಅವರ ಇ‌ಮೈಲ್ ಐಡಿ ಕೆಳಗಿದೆ.

 [email protected]

ಜೊತೆಗೆ ಈ ಕೆಳಗಿನ ಗೂಗಲ್ ಫಾರ್ಮ್ ಲಿಂಕ್ ಹೊಂದಿದ್ದು, ಅಲ್ಲಿ ಯುವಕರು ತಮ್ಮ ಹೆಸರು, ಮೊಬೈಲ್ ಸಂಖ್ಯೆ, ಇಮೈಲ್ ಇತ್ಯಾದಿಗಳನ್ನು ಬರೆಯಬಹುದು.

 https://forms.gle/fyUPTzdFfU6yNr7L9

ಅಭಿಯಾನದ ಉದ್ದೇಶ ಏನು?
ಸ್ವಭಾವತಃ ಕೋಮುವಾದಿಗಳಲ್ಲದ ಯುವಜನರನ್ನು ಜೊತೆಗೆ ತಂದು, ಜಾತ್ಯತೀತ ಚಿಂತನೆಯು ಮುಖ್ಯವಾಹಿನಿಗೆ ಬರುವಂತೆ ಮತ್ತು ಅದನ್ನು ಯಾರೂ ಅವಗಣಿಸದಂತೆ ಮಾಡುವುದು.

ಅವರು ‘ಮುಖ್ಯವಾಹಿನಿಯ ಭಾರತ’ (Mainstream-India) ಎಂಬ ಹೆಸರಿನಲ್ಲಿ ಡಿಸೆಂಬರ್ ತಿಂಗಳ ಕೊನೆಯ ವಾರದಲ್ಲಿ ನಾಗಪುರದಲ್ಲಿ ಸಮ್ಮೇಳನವೊಂದನ್ನು ಆಯೋಜಿಸಿದ್ದಾರೆ.

“ನಾನು ಇದನ್ನೊಂದು ಸಾರ್ವಜನಿಕ ಸಭೆ, ಯಾವುದೇ ಮಾಧ್ಯಮ ಸಭೆ, ಅಥವಾ ಆಧ್ಯಾತ್ಮಿಕ ಯಾತ್ರೆಯನ್ನಾಗಿ ಮಾಡಲು ಬಯಸುವುದಿಲ್ಲ. ಇದು ಈ ನಿರಾಶಾದಾಯಕ ಕಾಲದಲ್ಲಿ ಪ್ರತಿರೋಧ ಒಡ್ಡುವ ಸಲುವಾಗಿ ಯುವಜನರನ್ನು ಹತ್ತಿರಕ್ಕೆ ತರುವ ಪ್ರಾಯೋಗಿಕ ಅಭಿಯಾನವಾಗಿದೆ. ನನ್ನ ದಿನನಿತ್ಯದ ಕೆಲಸಗಳು ಎಂದಿನಂತೆ ಸಾಗುತ್ತವೆ” ಎಂದು ದೇವಿಯವರು ಹೇಳುತ್ತಾರೆ. 

“ಮೊದಲ ಮೂರು ದಿನಗಳಲ್ಲಿ ಮಹಾರಾಷ್ಟ್ರದಿಂದ ಸುಮಾರು 1600 ಇಮೈಲ್/ಸಂದೇಶಗಳು ಬಂದಿವೆ. ನಾನು ನನ್ನ ಮನವಿಯನ್ನು ಕರ್ನಾಟಕಕ್ಕೂ ವಿಸ್ತರಿಸಲು ಬಯಸುತ್ತೇನೆ” ಎಂದವರು ಹೇಳಿದ್ದಾರೆ.

“ಆಧುನಿಕ ಸಮಾಜದಲ್ಲಿ ಧರ್ಮ ಮತ್ತು ಜಾತಿ ಅನಪೇಕ್ಷಣೀಯ. ಆಧುನಿಕ ಸಮಾಜ ನಿರ್ಮಾಣಕ್ಕೆ ಜಾತಿ, ಧರ್ಮಗಳನ್ನು ಮೀರಿದ ಚಿಂತನೆ ಅಗತ್ಯ ಎಂದು ನೀವು ಭಾವಿಸುವುದಾದಲ್ಲಿ ದಯವಿಟ್ಟು ಈ ಸಂದೇಶವನ್ನು ಪ್ರಚಾರ ಮಾಡಿ, ಆದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಯುವಜನರಿಗೆ ತಲಪಿಸಿ. ಅಂಬೇಡ್ಕರ್ ಅವರ ಜಾತಿ ನಿರ್ಮೂಲನೆಯ ಕನಸು ಮತ್ತು ಗಾಂಧಿಯವರ ನಿಜವಾದ ವೈಷ್ಣವ ಜನರನ್ನು ನಿರ್ಮಿಸುವ ಕನಸನ್ನು ಸಾಕಾರಗೊಳಿಸೋಣ. ಜೊತೆಯಾಗಿ ಇದನ್ನು ಮಾಡಲು ನಮಗೆ ಸಾಧ್ಯವಿದೆ.” ಇದುವೇ ಡಾ. ದೇವಿಯವರ ಮನವಿಯಾಗಿದೆ..

ಡಾ.ದೇವಿಯವರ ಬಗ್ಗೆ ಮತ್ತೊಂದಿಷ್ಟು..

ಡಾ. ದೇವಿಯವರು 1980ರಿಂದ 1996ರ ತನಕ ಬರೋಡಾದ ಮಹಾರಾಜ ಸಯ್ಯಾಜಿರಾವ್ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದರು. ಅವರು ಅನಧಿಸೂಚಿತ ಅಲೆಮಾರಿ ಪಂಗಡಗಳು(ಡಿಎನ್‌ಟಿ) ಮತ್ತು ಆದಿವಾಸಿಗಳ ನಡುವೆ ಕೆಲಸ ಮಾಡುವ ಸಲುವಾಗಿ ತನ್ನ ಶೈಕ್ಷಣಿಕ ವೃತ್ತಿಯನ್ನು ತೊರೆದರು. ಈ ಕೆಲಸದ ವೇಳೆ ಅವರು ಬರೋಡಾದಲ್ಲಿ ಭಾಷಾ ಸಂಶೋಧನೆ ಮತ್ತು ಪ್ರಕಾಶನ ಕೇಂದ್ರವನ್ನು ಆರಂಭಿಸಿದರು. ಜೊತೆಗೆ ತೇಜ್‌ಗಢದಲ್ಲಿ ಆದಿವಾಸಿ ಅಕಾಡೆಮಿಯನ್ನೂ ಸ್ಥಾಪಿಸಿದರು. ಡಿಎನ್‌ಟಿ ಏಕ್ಷನ್ ಗ್ರೂಪ್ ಎಂಬ ಸಂಘಟನೆಯನ್ನೂ ಕಟ್ಟಿದರು. ಮೂರು ಸಾವಿರದಷ್ಟು ಸ್ವಯಂಸೇವಕರ ಸಹಾಯದಿಂದ ಪ್ರಪಂಚದಲ್ಲೇ ಅತ್ಯಂತ ದೊಡ್ಡ ಭಾಷಾ ಸಮೀಕ್ಷೆಯನ್ನು ಸಂಘಟಿಸಿ, 50 ಬಹುಭಾಷಾ ಸಂಪುಟಗಳನ್ನು ಪ್ರಕಟಿಸಿದರು. ಭಾರತದಾದ್ಯಂತ ಸಂಚರಿಸಿ 1000ಕ್ಕೂ ಹೆಚ್ಚು ಅಳಿಯುತ್ತಿರುವ ಭಾಷೆಗಳನ್ನು ದಾಖಲಿಸಿದರು.

ಧಾರವಾಡದಲ್ಲಿ ನೆಲೆಸಿರುವ ಅವರು, ದಕ್ಷಿಣಾಯನ ಎಂಬ ಚಳವಳಿಯನ್ನು ಆರಂಭಿಸಿದ್ದಾರೆ. ಇದು ಭಾರತದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆ ಮತ್ತು ಹಲವಾರು ಬುದ್ಧಿಜೀವಿಗಳ ಹತ್ಯೆಗೆ ಕಲಾವಿದರು, ಲೇಖಕರು ಮತ್ತು ಬುದ್ಧಿಜೀವಿಗಳ ಪ್ರತಿಕ್ರಿಯಾತ್ಮಕ ಚಳವಳಿಯಾಗಿದೆ. ಡಾ. ದೇವಿಯವರು ಪದ್ಮಶ್ರೀ ಮತ್ತು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರು. ಅವರು ದೇಶದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆ ಮತ್ತು ಭಿನ್ನಾಭಿಪ್ರಾಯದ ದಮನವನ್ನು ಪ್ರತಿಭಟಿಸಿ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನು ಮರಳಿಸಿದ್ದಾರೆ.

ಅವರ ದಕ್ಷಿಣಾಯನ ಚಳವಳಿಯು ಮಹಾತ್ಮಾ ಗಾಂಧಿ ಹಾಗೂ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಚಿಂತನೆಗಳನ್ನು ಅನುಸರಿಸುತ್ತದೆ. ಅವರ ಅಭಿಯಾನವು ಗುಜರಾತ್, ಮಹಾರಾಷ್ಟ್ರ, ಕರ್ನಾಟಕ,  ಗೋವಾ, ತೆಲಂಗಾಣ, ಉತ್ತರಖಂಡ, ಪಶ್ಚಿಮ ಬಂಗಾಳ, ಪಂಜಾಬ್, ದಿಲ್ಲಿ ಮುಂತಾದ ರಾಜ್ಯಗಳಿಗೆ ವಿಸ್ತರಿಸುತ್ತಿದೆ. ಅವರ ‘ಆಫ್ಟರ್ ಅಮ್ನೇಶಿಯಾ’ ಎಂಬ ಗ್ರಂಥವು ಸಾಹಿತ್ಯ ತತ್ವದಲ್ಲಿ ಶ್ರೇಷ್ಟ ಕೃತಿ ಎಂದು ಪರಿಗಣಿಸಲ್ಪಟ್ಟಿದೆ…

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here