ಪರಿಶಿಷ್ಟ ಜಾತಿ (ಎಸ್ಸಿ) ಮತ್ತು ಪರಿಶಿಷ್ಟ ಪಂಗಡಗಳ (ಎಸ್ಟಿ) ಮೀಸಲಾತಿಯನ್ನು ಶೇಕಡ 50ರ ಮಿತಿಗಿಂತ ಹೆಚ್ಚಿಸುವ ಕಾಯ್ದೆಯನ್ನು ಕರ್ನಾಟಕ ಹೈಕೋರ್ಟ್ ಸೋಮವಾರ (ಅ.12) ರದ್ದುಗೊಳಿಸಿದೆ. ಈ ಮೀಸಲಾತಿ ಹೆಚ್ಚಳವು ‘ಸಾಂವಿಧಾನಿಕವಾಗಿ ಅಸಮ್ಮತ’ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಕೆ.ಎಸ್. ಹೇಮಲೇಖಾ ಅವರನ್ನೊಳಗೊಂಡ ವಿಭಾಗೀಯ ಪೀಠವು, ಕರ್ನಾಟಕ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ (ಶೈಕ್ಷಣಿಕ ಸಂಸ್ಥೆಗಳಲ್ಲಿನ ಸೀಟುಗಳ ಮೀಸಲಾತಿ ಹಾಗೂ ರಾಜ್ಯದ ಅಧೀನದ ಸೇವೆಗಳಲ್ಲಿನ ನೇಮಕಾತಿ ಅಥವಾ ಹುದ್ದೆಗಳ ಮೀಸಲಾತಿ) ಕಾಯ್ದೆ, 2022ರ ಸೆಕ್ಷನ್ 3 ಮತ್ತು 4 ಅನ್ನು ಸಂವಿಧಾನಬಾಹಿರ ಎಂದು ಘೋಷಿಸಿ, ಈ ಎರಡೂ ನಿಬಂಧನೆಗಳನ್ನು ರದ್ದುಗೊಳಿಸಿದೆ.
ಹಿಂದಿನ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಬಿಜೆಪಿ ಸರ್ಕಾರದ ಅವಧಿಯಲ್ಲಿ ನವೆಂಬರ್ 1, 2022ರಿಂದ ಪೂರ್ವಾನ್ವಯವಾಗಿ ಜಾರಿಗೆ ಬಂದಿದ್ದ ಈ ಕಾಯ್ದೆಯು, ಪರಿಶಿಷ್ಟ ಜಾತಿಗಳ (ಎಸ್ಸಿ) ಮೀಸಲಾತಿಯನ್ನು ಶೇಕಡಾ 15 ರಿಂದ 17ಕ್ಕೆ ಮತ್ತು ಪರಿಶಿಷ್ಟ ಪಂಗಡಗಳ (ಎಸ್ಟಿ) ಮೀಸಲಾತಿಯನ್ನು ಶೇಕಡಾ 3 ರಿಂದ 7 ಕ್ಕೆ ಹೆಚ್ಚಿಸಿತ್ತು. ಇತರ ಹಿಂದುಳಿದ ವರ್ಗಗಳ (ಒಬಿಸಿ) ಶೇಕಡಾ 32 ರಷ್ಟು ಮೀಸಲಾತಿಯಲ್ಲಿ ಯಾವುದೇ ಬದಲಾವಣೆ ಮಾಡದ ಕಾರಣ, ರಾಜ್ಯದ ಒಟ್ಟು ಮೀಸಲಾತಿ ಪ್ರಮಾಣವು ಶೇಕಡಾ 50ರಿಂದ 56ಕ್ಕೆ ಏರಿಕೆ ಕಂಡಿತ್ತು. ಇದು ಸುಪ್ರೀಂ ಕೋರ್ಟ್ 1992ರ ‘ಇಂದಿರಾ ಸಾಹ್ನಿ ವರ್ಸಸ್ ಯೂನಿಯನ್ ಆಫ್ ಇಂಡಿಯಾ’ ಪ್ರಕರಣದಲ್ಲಿ ವಿಧಿಸಿದ್ದ ಹಾಗೂ ತದನಂತರದ ಹಲವಾರು ತೀರ್ಪುಗಳಲ್ಲಿ ಪುನರುಚ್ಚರಿಸಲ್ಪಟ್ಟಿದ್ದ ನ್ಯಾಯಾಂಗ ಸ್ಥಾಪಿತ ಶೇಕಡಾ 50ರ ಗರಿಷ್ಠ ಮಿತಿಯನ್ನು ಉಲ್ಲಂಘಿಸಿತ್ತು.
ಸಾಮಾಜಿಕ ಕಾರ್ಯಕರ್ತ ಮಹೇಂದ್ರ ಕುಮಾರ್ ಮಿತ್ರಾ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಹಾಗೂ ಸಿವಿಲ್ ಇಂಜಿನಿಯರಿಂಗ್ ಪದವೀಧರರಾದ ಸಾಗರ್ ಹೆಚ್.ಆರ್ ಮತ್ತು ಇತರರು ಸಲ್ಲಿಸಿದ್ದ ಅರ್ಜಿಗಳು ಸೇರಿದಂತೆ ಒಟ್ಟು ಅರ್ಜಿಗಳ ಬ್ಯಾಚ್ ಮೇಲಿನ ವಿಚಾರಣೆಯನ್ನು ನಡೆಸಿ ಪೀಠವು ಈ ತೀರ್ಪನ್ನು ನೀಡಿದೆ. ಇವರು ಹೆಚ್ಚಿಸಲಾದ ಮೀಸಲಾತಿ ಕೋಟಾದ ಆಧಾರದ ಮೇಲೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನೇಮಕಾತಿಯಲ್ಲಿ ನೀಡಲಾಗಿದ್ದ ಮೀಸಲಾತಿಯನ್ನು ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದರು.
ಮೀಸಲಾತಿಯ ಪ್ರಮಾಣವು ಶೇಕಡಾ 50ರ ಮಿತಿಯನ್ನು ಮೀರಬಹುದೇ ಎಂಬ ಪ್ರಶ್ನೆಯೇ ಈ ಪೀಠದ ತೀರ್ಪಿನ ಮುಖ್ಯ ಕೇಂದ್ರಬಿಂದುವಾಗಿತ್ತು. ಮೀಸಲಾತಿಯ ಗರಿಷ್ಠ ಮಿತಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪುಗಳನ್ನು ವ್ಯಾಪಕವಾಗಿ ಉಲ್ಲೇಖಿಸಿ 170 ಪುಟಗಳ ಸುದೀರ್ಘ ತೀರ್ಪು ನೀಡಿರುವ ಪೀಠವು, ಶೇಕಡಾ 50ರ ಮಿತಿಯು ಕೇವಲ ಒಂದು ವಿವೇಚನಾ ನಿಯಮವಲ್ಲ, ಬದಲಿಗೆ ಅದು ಸಮಾನ ಅವಕಾಶ ಹಾಗೂ ಸಕಾರಾತ್ಮಕ ಕ್ರಮಗಳ (ಮೀಸಲಾತಿ) ನಡುವೆ ಸಮತೋಲನವನ್ನು ಕಾಯ್ದುಕೊಳ್ಳುವ ಒಂದು ಕಡ್ಡಾಯ ಸಾಂವಿಧಾನಿಕ ತತ್ವವಾಗಿದೆ ಎಂದು ತೀರ್ಮಾನಿಸಿದೆ.
“ಹಿಂದುಳಿದ ವರ್ಗಗಳ ಜನಸಂಖ್ಯೆಯ ಬಲ ಎಷ್ಟೇ ಇದ್ದಾಗ್ಯೂ, ರಾಜ್ಯ ಸರ್ಕಾರವು ಮೀಸಲಾತಿಯನ್ನು ಒದಗಿಸುವ ತನ್ನ ಅಧಿಕಾರವನ್ನು ಶೇಕಡಾ 50ರ ನಿಗದಿತ ಮಿತಿಯ ಚೌಕಟ್ಟಿನೊಳಗೇ ಬಳಸಬೇಕೆಂದು ಅರ್ಥೈಸಿಕೊಳ್ಳಬೇಕಾಗುತ್ತದೆ” ಎಂದು ಪೀಠವು ಅಭಿಪ್ರಾಯಪಟ್ಟಿದೆ.
ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ (EWS) ಶೇಕಡಾ 10 ರಷ್ಟು ಮೀಸಲಾತಿಯನ್ನು ತಂದ 103ನೇ ಸಾಂವಿಧಾನಿಕ ತಿದ್ದುಪಡಿಯು ಶೇಕಡಾ 50ರ ನಿಯಮವನ್ನು ರದ್ದುಗೊಳಿಸಿದೆ ಎಂಬ ರಾಜ್ಯ ಸರ್ಕಾರದ ವಾದವನ್ನು ಪೀಠವು ತಿರಸ್ಕರಿಸಿದೆ. ಈ EWS ಕೋಟಾವನ್ನು ಸಾಮಾನ್ಯ ಅರ್ಹತಾ ಪಟ್ಟಿಯಿಂದಲೇ (ಜನರಲ್ ಮೆರಿಟ್ ಪೂಲ್) ಕಲ್ಪಿಸಲಾಗಿದೆ ಮತ್ತು ಇದು ಹಿಂದುಳಿದ ವರ್ಗಗಳ ಮೀಸಲಾತಿಯನ್ನು ನಿಗದಿತ ಗರಿಷ್ಠ ಮಿತಿಗಿಂತ ಹೆಚ್ಚು ವಿಸ್ತರಿಸಲು ರಾಜ್ಯ ಸರ್ಕಾರಕ್ಕೆ ಅನುಮತಿ ನೀಡುವುದಿಲ್ಲ ಎಂದು ಪೀಠವು ಸ್ಪಷ್ಟಪಡಿಸಿದೆ.
ಹೈಕೋರ್ಟ್ ತೀರ್ಪು ಕಳವಳಕಾರಿ
ಹೈಕೋರ್ಟ್ ತೀರ್ಪು ಕಳವಳಕಾರಿ. ಇದು ಮುಂಬರುವ ದಿನಗಳಲ್ಲಿ ರಾಜ್ಯದ ಸಾಮಾಜಿಕ ನ್ಯಾಯ, ಶಿಕ್ಷಣದ ಅವಕಾಶಗಳು ಮತ್ತು ಸರ್ಕಾರಿ ಉದ್ಯೋಗಗಳ ಮೇಲೆ ಪರಿಣಾಮ ಬೀರುವ ಸಂಭವ ಹೆಚ್ಚಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ.
ನಾವು ನ್ಯಾಯಾಂಗದ ಬಗ್ಗೆ ಗೌರವ ಹೊಂದಿದ್ದೇವೆ. ನ್ಯಾಯಾಂಗವು ಕಾರ್ಯನಿರ್ವಹಿಸುವ ಸಾಂವಿಧಾನಿಕ ವ್ಯವಸ್ಥೆಯ ಬಗ್ಗೆಯೂ ನಮಗೆ ಸಂಪೂರ್ಣ ಗೌರವವಿದೆ. ಆದರೆ, ಈ ತೀರ್ಪು ಹಿಂದಿನ ಬಿಜೆಪಿ ಸರ್ಕಾರದ ಬೇಜವಾಬ್ದಾರಿತನ ಹಾಗೂ ಕೇಂದ್ರದಲ್ಲಿರುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ನಿರಂತರ ನಿರ್ಲಕ್ಷ್ಯವನ್ನು ಎತ್ತಿ ತೋರಿಸುತ್ತಿದೆ ಎಂದು ಪರಮೇಶ್ವರ್ ಸಾಮಾಜಿಕ ಜಾಲತಾಣ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ.
ಹಿಂದಿನ ಬಿಜೆಪಿ ಸರ್ಕಾರವು ಮೀಸಲಾತಿ ಹೆಚ್ಚಳದ ಕಾಯ್ದೆಯನ್ನು ಜಾರಿಗೊಳಿಸುವ ಮುನ್ನ ಸೂಕ್ತ ಸಾಂವಿಧಾನಿಕ ತಳಹದಿಯನ್ನು ಹಾಕದೆ 2023ರ ವಿಧಾನಸಭಾ ಚುನಾವಣೆಗೆ ಮುನ್ನ ಏಕಾಏಕಿ ಜಾರಿಗೊಳಿಸಿದ್ದೇಕೆ? ಎಂಬ ಪ್ರಶ್ನೆ ಉದ್ಭವಿಸಿದೆ ಎಂದಿದ್ದಾರೆ.
2022ರ ಅಕ್ಟೋಬರ್ನಲ್ಲಿಯೇ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಳದಿಂದ ಕರ್ನಾಟಕದಲ್ಲಿ ಒಟ್ಟು ಮೀಸಲಾತಿ ಪ್ರಮಾಣ ಶೇ. 56ಕ್ಕೆ ಏರಿಕೆಯಾಗಲಿದ್ದು, ಅದು ಆಗಿನ ಶೇ. 50ರ ಮಿತಿಯನ್ನು ಮೀರುತ್ತದೆ ಎಂಬ ಅರಿವು ಅಂದಿನ ಬಿಜೆಪಿ ಸರ್ಕಾರಕ್ಕಿತ್ತು. ಈ ಹೆಚ್ಚಳಕ್ಕೆ ಸಾಂವಿಧಾನಿಕ ರಕ್ಷಣೆ ಒದಗಿಸಲು ಕಾಯ್ದೆಯನ್ನು ಸಂವಿಧಾನದ ಒಂಬತ್ತನೇ ಅನುಸೂಚಿಗೆ ಸೇರಿಸುವ ಅಗತ್ಯವಿದೆ ಎಂಬುದನ್ನು ಬಿಜೆಪಿ ನಾಯಕರು ಸಾರ್ವಜನಿಕವಾಗಿಯೇ ಒಪ್ಪಿಕೊಂಡಿದ್ದರು. ಆದರೆ, ಅಗತ್ಯವಾದ ಸಾಂವಿಧಾನಿಕ ಚೌಕಟ್ಟನ್ನು ಒದಗಿಸದೆ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳುಗಳಿರುವಾಗ ಮೀಸಲಾತಿ ಹೆಚ್ಚಳದ ಕಾಯ್ದೆಯನ್ನು ಜಾರಿಗೊಳಿಸಲಾಯಿತು ಎಂದು ಹೇಳಿದ್ದಾರೆ.
ಚುನಾವಣೆಗೆ ಮುನ್ನ ಮೀಸಲಾತಿ ಹೆಚ್ಚಳವನ್ನು ಘೋಷಿಸುವುದಕ್ಕೆ ಬಿಜೆಪಿ ಸರ್ಕಾರ ನೀಡಿದ್ದ ಆದ್ಯತೆ ಸಾಂವಿಧಾನಿಕ ತಳಹದಿ ರೂಪಿಸುವಲ್ಲಿ ಏಕೆ ಇರಲಿಲ್ಲ ಎಂಬ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ. ಲಕ್ಷಾಂತರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನರ ಆಶಯಗಳನ್ನು ಚುನಾವಣಾ ರಾಜಕೀಯದ ಅನುಕೂಲಕ್ಕೆ ತಕ್ಕಂತೆ ಪರಿಗಣಿಸಲು ಸಾಧ್ಯವಿಲ್ಲ. ಮೀಸಲಾತಿ ಎಂಬುದು ಯಾವುದೇ ಸರ್ಕಾರ ನೀಡುವ ರಾಜಕೀಯ ಕೊಡುಗೆಯಲ್ಲ. ತಲೆಮಾರುಗಳಿಂದ ಈ ಸಮುದಾಯಗಳು ಎದುರಿಸುತ್ತಿರುವ ತಾರತಮ್ಯ, ಅವಕಾಶಗಳ ನಿರಾಕರಣೆ ಮತ್ತು ಸಾಮಾಜಿಕ ಬಹಿಷ್ಕಾರವನ್ನು ನಿವಾರಿಸಿ, ಸಮಾನ ಅವಕಾಶಗಳನ್ನು ಕಲ್ಪಿಸುವ ಸಾಂವಿಧಾನಿಕ ನ್ಯಾಯದ ಸಾಧನವಾಗಿದೆ ಎಂದು ಪರಮೇಶ್ವರ್ ತಿಳಿಸಿದ್ದಾರೆ.


