Homeಮುಖಪುಟಕೇರಳದ 3 ರಾಜಕೀಯ ಕೊಲೆಗಳ ಸ್ಟೋರಿ...

ಕೇರಳದ 3 ರಾಜಕೀಯ ಕೊಲೆಗಳ ಸ್ಟೋರಿ…

- Advertisement -
- Advertisement -

ಕೇರಳದ ಅಲಪ್ಪುಝದಲ್ಲಿ ಡಿಸೆಂಬರ್ 18, 2021ರ ರಾತ್ರಿ ಎಸ್‌ಡಿಪಿಐ ರಾಜ್ಯ ಪದಾಧಿಕಾರಿಯಾಗಿದ್ದ ಕೆಎಸ್ ಶಾನ್ ಅವರನ್ನು ಆರೆಸ್ಸೆಸ್‌ ಕಾರ್ಯಕರ್ತರು ಕೊಲೆ ಮಾಡಿದ್ದರು. ಶಾನ್ ಹತ್ಯೆಯ 7 ಗಂಟೆಯ ಒಳಗಡೆ ಬಿಜೆಪಿಯ ಹಿರಿಯ ನಾಯಕ ರಂಜಿತ್ ಶ್ರೀನಿವಾಸನ್ ಹತ್ಯೆ ನಡೆದಿತ್ತು. ಕೊಲೆಗೀಡಾದ ಇಬ್ಬರೂ ಕೂಡ ವಕೀಲರಾಗಿದ್ದು, ಒಂದೇ ಜಿಲ್ಲೆಯಲ್ಲಿ ಕೊಲೆಗಳು ನಡೆದಿವೆ. ಎರಡು ಪ್ರಕರಣವನ್ನು ರಾಜಕೀಯ ಸೇಡಿನ ಕೃತ್ಯವೆಂದು ಪರಿಗಣಿಸಲಾಗಿತ್ತು. ರಂಜಿತ್ ಹತ್ಯೆಗೆ ಸಂಬಂಧಿಸಿ ಇತ್ತೀಚೆಗೆ ಕೇರಳದ ನ್ಯಾಯಾಲಯವು 14 ಮಂದಿ ಆರೋಪಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಿತ್ತು. ಇದು ಕೇರಳದ ಇತಿಹಾಸದಲ್ಲೇ ಅತಿ ಹೆಚ್ಚು ಜನರಿಗೆ ಮರಣದಂಡನೆ ಶಿಕ್ಷೆ ವಿಧಿಸಿರುವುದಾಗಿದೆ. ಆದರೆ ಶಾನ್‌ ಪ್ರಕರಣದಲ್ಲಿ ಇನ್ನೂ ವಿಚಾರಣೆ ಆರಂಭವಾಗಿಲ್ಲ.

2021ರ ಫೆಬ್ರವರಿಯಲ್ಲಿ ಇದೇ ಜಿಲ್ಲೆಯಲ್ಲಿ ನಡೆದ ಆರ್‌ಎಸ್‌ಎಸ್ ಕಾರ್ಯಕರ್ತ ನಂದು ಆರ್ ಕೃಷ್ಣ ಅವರ ಹತ್ಯೆಗೆ ಪ್ರತೀಕಾರವಾಗಿ ಶಾನ್ ಹತ್ಯೆ ನಡೆದಿದೆ ಎಂಬ ಆರೋಪಗಳಿವೆ. ಪ್ರಕರಣದ ಆರೋಪಪಟ್ಟಿಯನ್ನು ಫೆಬ್ರವರಿ 2022ರಲ್ಲಿ ಸಲ್ಲಿಸಲಾಗಿದ್ದು, ವಿಚಾರಣೆ ಇನ್ನಷ್ಟೇ ಆರಂಭವಾಗಬೇಕಿದೆ. ಹಾಗಾದರೆ ಧರ್ಮ ಮತ್ತು ರಾಜಕೀಯ ಹೆಣೆದುಕೊಂಡಿರುವ ಮೂರು ಪ್ರಕರಣಗಳು ಹೇಗೆ ಮುಂದುವರೆದವು ಮತ್ತು ಒಂದು ಇತರವುಗಳಿಗಿಂತ ಹೆಚ್ಚು ವೇಗದಲ್ಲಿ ಏಕೆ ಸಾಗಿತು? ತನಿಖೆ ಅಥವಾ ಕಾನೂನು ಕ್ರಮದ ಸಮಯದಲ್ಲಿ ವಿಳಂಬಗಳು ಉಂಟಾಗಿವೆಯೇ ಅಥವಾ ಅದರ ಹಿಂದೆ ಬೇರೆ ಕಾರಣವಿದೆಯೇ? ಕೇರಳದ ಮೂರು ರಾಜಕೀಯ ಕೊಲೆಗಳ ಪ್ರಕರಣದ ಬಗ್ಗೆ ಹಲವಾರು ಪ್ರಶ್ನೆಗಳು ಉದ್ಭವಿಸಿದ್ದವು.

ಶಾನ್ ಕೊಲೆ

ಡಿ.18, 2021ರ ಸಂಜೆ ಶಾನ್‌ ಅವರು ಪತ್ನಿ ಫನ್ಸಿಲಾ ಅವರಿಗೆ ಕರೆ ಮಾಡಿದ್ದರು. ಎಸ್‌ಡಿಪಿಐನ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಉದ್ಯಮಿಯಾಗಿದ್ದ ಶಾನ್‌, ಕೆಲಸಗಾರರೊಬ್ಬರು ಬರದ ಕಾರಣ ಮನೆಗೆ ಬರುವಾಗ ತಡವಾಗುತ್ತದೆ ಎಂದು ಹೇಳಿದ್ದರು. ಇದು ಶಾನ್‌ ತನ್ನ ಪತ್ನಿಗೆ ಮಾಡಿದ್ದ ಕೊನೆಯ ಕರೆಯಾಗಿತ್ತು.

ಇದಾದ ಒಂದು ಗಂಟೆಯ ನಂತರ, ಅಪರಿಚಿತ ಪೊಲೀಸರು ಆಕೆಗೆ ಕರೆ ಮಾಡಿ ಶಾನ್‌ಗೆ ಅಪಘಾತವಾಗಿರುವುದಾಗಿ ತಿಳಿಸಿದ್ದರು. ಅಲಪ್ಪುಝದ ಮನ್ನಂಚೇರಿಯಲ್ಲಿ ಆರೆಸ್ಸೆಸ್‌ ಕಾರ್ಯಕರ್ತರು ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಶಾನ್‌ಗೆ ಅಪಘಾತ ನಡೆಸಿ ಬಳಿಕ ಕೊಲೆ ಮಾಡಿದ್ದರು. ಘಟನೆಯ ದೃಶ್ಯ ಹತ್ತಿರದ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.  ಶಾನ್‌ ಅವರನ್ನು ಎರ್ನಾಕುಲಂನ ಮೆಡಿಕಲ್ ಟ್ರಸ್ಟ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು, ಅಲ್ಲಿ ಅವರು ರಾತ್ರಿ 11.30 ರ ಸುಮಾರಿಗೆ ನಿಧನರಾಗಿದ್ದರು. ಮರಣೋತ್ತರ ಪರೀಕ್ಷೆಯ ವರದಿಯಲ್ಲಿ 40 ಗಾಯಗಳು ದೇಹದ ಮೇಲೆ ಪತ್ತೆಯಾಗಿದ್ದವು.

ಕೊಲೆಯಾದ ಶಾನ್‌ಗೆ 36 ವರ್ಷ ವಯಸ್ಸಾಗಿತ್ತು ಮತ್ತು ಅವರಿಗೆ 11 ವರ್ಷದ ಇಬಾ ಫಾತಿಮಾ ಮತ್ತು 5 ವರ್ಷದ ಲಿಯಾ ಫಾತಿಮಾ ಎಂಬ ಇಬ್ಬರು ಮಕ್ಕಳಿದ್ದರು. ಅವರು ತಮ್ಮ ಮನೆಯ ಸಮೀಪವಿರುವ ಮನ್ನಂಚೇರಿಯಲ್ಲಿ ಕರ್ಟನ್ ಅಂಗಡಿಯನ್ನು ಹೊಂದಿದ್ದರು ಮತ್ತು ಅವರು ತರಬೇತಿ ಪಡೆದ ವಕೀಲರಾಗಿದ್ದರೂ ಅವರು ಕೋರ್ಟ್‌ನಲ್ಲಿ ಪ್ರಾಕ್ಟೀಸ್‌ ಮಾಡುತ್ತಿರಲಿಲ್ಲ. ಶಾನ್‌ ಸಾವಿನ ಎರಡು ಗಂಟೆಗಳ ನಂತರ, ಶಾನ್ ಸಂಬಂಧಿ ಶಾಜಿ ಮನ್ನಂಚೇರಿ ಪೊಲೀಸರಿಗೆ ದೂರು ನೀಡಿದ್ದರು. ಮರುದಿನವೇ ಜಿಲ್ಲಾ ಪೊಲೀಸ್ ಮುಖ್ಯಸ್ಥರು ಪ್ರಕರಣದ ತನಿಖೆಗೆ 34 ಸದಸ್ಯರ ಪೊಲೀಸ್ ಪಡೆಯನ್ನು ನೇಮಿಸಿದರು. ಘಟನೆ ನಡೆದ 86 ದಿನಗಳಲ್ಲಿ ಮಾರ್ಚ್ 16, 2022ರಂದು ಡಿವೈಎಸ್ಪಿ ಕೆವಿ ಬೆನ್ನಿ ಅವರು ಈ ಕುರಿತು ಆರೋಪಪಟ್ಟಿ ಸಲ್ಲಿಸಿದ್ದರು.

ರಂಜಿತ್ ಹತ್ಯೆ 

ಡಿಸೆಂಬರ್ 19, 2021ರಂದು ಬೆಳಿಗ್ಗೆ 6.30ರ ಸುಮಾರಿಗೆ ಅಲಪ್ಪುಝದಲ್ಲಿರುವ ರಂಜಿತ್ ಶ್ರೀನಿವಾಸನ್ ಅವರ ಮನೆಗೆ ನುಗ್ಗಿ ಅವರನ್ನು ಹತ್ಯೆ ಮಾಡಲಾಗಿತ್ತು. 12 ಮಂದಿಯ ತಂಡ 6 ದ್ವಿಚಕ್ರ ವಾಹನಗಳಲ್ಲಿ ರಂಜಿತ್ ಮನೆಗೆ ಆಗಮಿಸುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿತ್ತು.

ಮೂರು ದಿನಗಳ ನಂತರ ಡಿಸೆಂಬರ್ 22ರಂದು, ಆಲಪ್ಪುಝ ಡಿವೈಎಸ್ಪಿ ಎನ್ಆರ್ ಜಯರಾಜ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು (ಎಸ್ಐಟಿ) ರಚಿಸಲಾಗಿತ್ತು. 86 ದಿನಗಳ ನಂತರ ಮಾರ್ಚ್ 18, 2022 ರಂದು, ಪೊಲೀಸರು ಆರೋಪಪಟ್ಟಿ ಸಲ್ಲಿಸಿದರು ಮತ್ತು ಕೊಲೆಯ ಎಲ್ಲಾ 15 ಆರೋಪಿಗಳನ್ನು ಬಂಧಿಸಲಾಗಿತ್ತು.

2022ರಲ್ಲಿ ಎರಡೂ ಪ್ರಕರಣಗಳಿಗೆ ಪಬ್ಲಿಕ್ ಪ್ರಾಸಿಕ್ಯೂಟರ್‌ಗಳನ್ನು ನಿಯೋಜಿಸಲಾಯಿತು. ಕೊಟ್ಟಾಯಂ ಮೂಲದ ವಕೀಲ ಅಜಯನ್ ಅವರನ್ನು ಶಾನ್ ಮತ್ತು ಕಾಯಂಕುಲಂ ಮೂಲದ ಪ್ರತಾಪ್ ಜಿ ಪಡಿಕಲ್ ರಂಜಿತ್ ಪರ ನೇಮಿಸಲಾಯಿತು.

ರಂಜಿತ್‌ನ ಹತ್ಯೆಯು ಅಲಪ್ಪುಝ ಬಾರ್ ಕೌನ್ಸಿಲ್‌ನ ವಕೀಲರಲ್ಲಿ ಆಕ್ರೋಶಕ್ಕೆ ಕಾರಣವಾಗಿತ್ತು, ಅವರು ವಕೀಲರಾಗಿ ಕಾರ್ಯನಿರ್ವಹಿಸುತ್ತಿದ್ದರು. ಕೃತ್ಯ ಖಂಡಿಸಿ ಡಿಸೆಂಬರ್ 20, 2021ರಂದು ಪ್ರತಿಭಟನೆಗಳನ್ನು ಕೂಡ ಬಾರ್‌ ಕೌನ್ಸಿಲ್‌ ಪರವಾಗಿ ನಡೆಸಲಾಗಿತ್ತು. ಇದಲ್ಲದೆ ಆರೋಪಿಗಳ ಪರವಾಗಿ ಯಾರೂ ಹಾಜರಾಗುವುದಿಲ್ಲ ಎಂದು ಘೋಷಿಸಿದ್ದರು. ಇದರಿಂದಾಗಿ 15 ಆರೋಪಿಗಳು ಕೇರಳ ಹೈಕೋರ್ಟ್‌ನ್ನು ಸಂಪರ್ಕಿಸಿ ಪ್ರಕರಣವನ್ನು ಬೇರೆ ಜಿಲ್ಲೆಗೆ ವರ್ಗಾಯಿಸುವಂತೆ ಕೇಳಿದ್ದರು. ಹೈಕೋರ್ಟ್ ಇದಕ್ಕೆ ನಿರಾಕರಿಸಿತು ಆದರೆ ಪ್ರಕರಣವನ್ನು ಅಲಪ್ಪುಝ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಿಂದ ಮಾವೇಲಿಕರ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ -1ಗೆ ವರ್ಗಾಯಿಸಿತು. ಇದು ಅದೇ ಜಿಲ್ಲೆಯಲ್ಲಿದೆ ಆದರೆ 44 ಕಿಮೀ ದೂರದಲ್ಲಿದೆ. ಮಾವೇಲಿಕ್ಕರ ಇನ್ನೊಂದು ವಕೀಲರ ಸಂಘವನ್ನು ಹೊಂದಿದೆ.

ಶಾನ್ ಪ್ರಕರಣದಲ್ಲಿ ಪಬ್ಲಿಕ್ ಪ್ರಾಸಿಕ್ಯೂಟರ್ (ಪಿಪಿ) ಅಜಯನ್ ಅವರು ನೇಮಕಗೊಂಡ ಒಂದು ತಿಂಗಳೊಳಗೆ ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿ ರಾಜೀನಾಮೆ ನೀಡಿದ್ದರು. ಎರಡನೇ ಪಬ್ಲಿಕ್ ಪ್ರಾಸಿಕ್ಯೂಟರ್‌ ಸುರೇಶ್ ಬಾಬು ಥಾಮಸ್ ಅವರನ್ನು ನಿಯೋಜಿಸಲಾಗಿತ್ತು. ಆದರೆ ರಂಜಿತ್‌ ಹತ್ಯೆ ಪ್ರಕರಣದ ಆರೋಪಿಗಳನ್ನು ಕೂಡ ಇವರೇ ಪ್ರತಿನಿಧಿಸುವುದರಿಂದ ಪೊಲೀಸರು ಸಹಕಾರಕ್ಕೆ ನಿರಾಕರಿಸಿದ್ದರು.

2024ರ ಜನವರಿಯಲ್ಲಿ ರಂಜಿತ್ ಪ್ರಕರಣದ ವಿಚಾರಣೆ ಬಹುತೇಕ ಅಂತ್ಯವನ್ನು ತಲುಪಿದಾಗ ಶಾನ್ ಪ್ರಕರಣದಲ್ಲಿ ಹೊಸ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಆಗಿ ತ್ರಿಶೂರ್‌ ಮೂಲದ ವಕೀಲ ಪಿಪಿ ಹ್ಯಾರಿಸ್ ಅವರನ್ನು ನೇಮಿಸಲಾಗಿದೆ. ರಂಜಿತ್ ಕೊಲೆ ಪ್ರಕರಣದ ಆರೋಪಿಗಳ ಪರವಾಗಿ ಹ್ಯಾರಿಸ್ ಕೂಡ ವಕಾಲತ್ತು ವಹಿಸಿದ್ದರು. ಆದರೆ ಈ ಬಾರಿ ಪೊಲೀಸರು ಅವರಿಗೆ ಅಭ್ಯಂತರವನ್ನು ಹೇಳಲಿಲ್ಲ ಎನ್ನುವುದು ಗಮನಾರ್ಹ.

ರಂಜಿತ್ ಪ್ರಕರಣದ ವಿಚಾರಣೆ ಪೂರ್ಣಗೊಂಡಿತು ಮತ್ತು ಜನವರಿ 20, 2023 ರಂದು ನ್ಯಾಯಾಲಯವು ಅಪರಾಧಿಗಳನ್ನು ತಪ್ಪಿತಸ್ಥರೆಂದು ಘೋಷಿಸಿದೆ.

ನ್ಯಾಯದಲ್ಲಿ ವಿಳಂಬ ಮತ್ತು ಜಾಮೀನು ನಿರಾಕರಣೆ ಆರೋಪಗಳು

ರಂಜಿತ್ ಹತ್ಯೆ ಪ್ರಕರಣದ ಆರೋಪಿಗಳ ಹಲವು ಜಾಮೀನು ಅರ್ಜಿಗಳನ್ನು ನ್ಯಾಯಾಲಯ ತಿರಸ್ಕರಿಸಿದೆ. ಆದರೆ ಶಾನ್ ಕೊಲೆ ಪ್ರಕರಣದ ಆರೋಪಿಗಳು ಬಂಧನಕ್ಕೊಳಗಾದ 8 ತಿಂಗಳ ನಂತರ ಜಾಮೀನು ಪಡೆಯಲು ಸಾಧ್ಯವಾಯಿತು. ಇದು ವಿಚಾರಣೆಯ ಪ್ರಕ್ರಿಯೆಯಲ್ಲಿ ದ್ವಿಮುಖ ನೀತಿಯ ನಿದರ್ಶನವಾಗಿದೆ ಎಂದು SDPI ಆರೋಪಿಸಿದೆ.

ಡಿಸೆಂಬರ್ 2022ರಲ್ಲಿ ಶಾನ್ ಕೊಲೆ ಪ್ರಕರಣದಲ್ಲಿ ಮೂವರು ಆರೋಪಿಗಳು ಜಾಮೀನು ಕೋರಿದಾಗ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಅರ್ಜಿಯನ್ನು ವಿರೋಧಿಸಲಿಲ್ಲ. ವಿಚಾರಣೆ ವಿಳಂಬವೂ ಜಾಮೀನಿಗೆ ಕಾರಣ ಎಂದು ಹೇಳಲಾಗಿತ್ತು. ಮೊದಲಿನಿಂದಲೂ ತಮಗೆ ಅನ್ಯಾಯವಾಗುತ್ತಿದೆ ಎಂದು ಶಾನ್ ಕುಟುಂಬ ಆರೋಪಿಸಿದೆ. ರಂಜಿತ್ ಹತ್ಯೆ ಪ್ರಕರಣದ ಯಾವುದೇ ಆರೋಪಿಗಳಿಗೆ ಜಾಮೀನು ನೀಡಲಾಗಿಲ್ಲ, ಆದರೆ ಈ ಪ್ರಕರಣದ ಎಲ್ಲಾ ಆರೋಪಿಗಳಿಗೆ ಜಾಮೀನು ನೀಡಲಾಗಿದೆ. ಇದು ತುಂಬಾ ಅನ್ಯಾಯವಾಗಿದೆ ಎಂದು ನಾನು ಭಾವಿಸಿದೆ ಎಂದು  ಶಾನ್‌ ಪತ್ನಿ ಫನ್ಸಿಲಾ ಹೇಳಿದ್ದರು.

ನಂದು ಆರ್ ಕೃಷ್ಣ ಕೊಲೆ:

ಆಲಪ್ಪುಝದ ವಯಲಾರ್ ಮೂಲದ ನಂದು ಆರ್ ಕೃಷ್ಣ ಅವರನ್ನು ಫೆಬ್ರವರಿ 24, 2021ರಂದು ಪಿಎಫ್‌ಐ ಕಾರ್ಯಕರ್ತರು ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಇದು ಶಾನ್‌ ಹತ್ಯೆಗೆ ಪ್ರಚೋದಿಸಿದೆ ಎಂದು ಕೂಡ ಹೇಳಲಾಗಿತ್ತು. ಈ ಪ್ರಕರಣದಲ್ಲಿ ನಂದು ಕೃಷ್ಣನ ವಿಚಾರಣೆಯೂ ಮುಂದುವರಿಯಲಿಲ್ಲ ಮತ್ತು ಪ್ರಕರಣದ ಆರೋಪಪಟ್ಟಿಯನ್ನು ಮಾತ್ರ ಸಲ್ಲಿಸಲಾಗಿದೆ. ಆರೋಪಿಗಳನ್ನು ಬಂಧಿಸುವಲ್ಲಿ ಕೂಡ ವಿಳಂಬವಾಗಿದೆ.

ಇದನ್ನು ಓದಿ: ಇಸ್ರೇಲ್‌-ಪ್ಯಾಲೆಸ್ತೀನ್‌ ಯುದ್ಧ: ಅತಿಭಯಾನಕ ‘100 ದಿನಗಳು’..

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...