Homeಕರ್ನಾಟಕRSS ಗಣವೇಷಧಾರಿಗಳಾಗಿ ಲಾಠಿ ಹಿಡಿದ ಕೇಂದ್ರೀಯ ವಿವಿ ಪ್ರಾಧ್ಯಾಪಕರು: ಸಮರ್ಥಿಸಿಕೊಂಡ ಕುಲಸಚಿವರು

RSS ಗಣವೇಷಧಾರಿಗಳಾಗಿ ಲಾಠಿ ಹಿಡಿದ ಕೇಂದ್ರೀಯ ವಿವಿ ಪ್ರಾಧ್ಯಾಪಕರು: ಸಮರ್ಥಿಸಿಕೊಂಡ ಕುಲಸಚಿವರು

ಧಾರ್ಮಿಕ ಕಾರ್ಯಕ್ರಮಗಳಿಗೆ ಹೋಗುವವರಿಗೆ ವಿಶ್ವವಿದ್ಯಾನಿಲಯ ಕ್ರಮ ತೆಗೆದುಕೊಳ್ಳುವ ಪ್ರಶ್ನೆಯೇ ಬರುವುದಿಲ್ಲ ಎಂದು ಕೇಂದ್ರೀಯ ವಿವಿ ರಿಜಿಸ್ಟ್ರಾರ್ ಡಾ.ಬಸವರಾಜ ಡೋಣೂರ ತಿಳಿಸಿದ್ದಾರೆ.

- Advertisement -
- Advertisement -

ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಕಡಗಂಚಿಯ ಸಮೀಪ ಇರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಮೂವರು ಪ್ರಾಧ್ಯಾಪಕರು RSS ಗಣವೇಷ ಧರಿಸಿ, ಲಾಠಿ ಹಿಡಿದು ಪೋಸು ನೀಡಿರುವ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಪ್ರಾಧ್ಯಾಪಕರು ತಮ್ಮ ಸೇವಾ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಆದರೆ ಕೇಂದ್ರೀಯ ವಿ.ವಿಯ ಕುಲಸಚಿವರು ಪ್ರಾಧ್ಯಾಪಕರ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.

ಕೇಂದ್ರೀಯ ವಿವಿಯ ಸಹಾಯಕ ಪ್ರಾಧ್ಯಾಪಕರುಗಳಾದ ಸಾರ್ವಜನಿಕ ಆಡಳಿತ ವಿಭಾಗದ ಡಾ.ಅಲೋಕ್ ಕುಮಾರ್ ಗೌರವ್‌, ಮನಃಶಾಸ್ತ್ರ ವಿಭಾಗದ ಡಾ.ವಿಜಯೇಂದ್ರ ಪಾಂಡೆ ಮತ್ತು ಜೀವ ವಿಜ್ಞಾನ ವಿಭಾಗದ ಡಾ.ರಾಕೇಶ್ ಕುಮಾರ್ ಅವರು ವಿದ್ಯಾರ್ಥಿಯೊರ್ವ ತೆಗೆದ ಸೆಲ್ಫಿಗೆ ಗಣವೇ‍ಷದಲ್ಲಿ ಲಾಠಿ ಹಿಡಿದು ಪೋಸು ನೀಡಿದ್ದಾರೆ.

ಅದು ಇತ್ತೀಚೆಗೆ ವಿವಿಯ ಆವರಣದಲ್ಲಿ ನಡೆದ ಆರ್‌ಎಸ್‌ಎಸ್‌ ಪಥಸಂಚಲನದ ವೇಳೆ ತೆಗೆದ ಫೋಟೊ ಆಗಿದ್ದು, ಪ್ರಾಧ್ಯಾಪಕರು ಸಹ ಪಥಸಂಚಲನ ಮತ್ತು ಆರ್‌ಎಸ್‌ಎಸ್‌ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದೆ.

ಈ ಕುರಿತು ನಾನುಗೌರಿ.ಕಾಂ ಜೊತೆ ಮಾತನಾಡಿದ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ. ಬಸವರಾಜ ಡೋಣೂರರವರು, “ಆ ಫೋಟೊ ವಿಶ್ವವಿದ್ಯಾಲಯದ ಒಳಗೆ ತೆಗೆದುಕೊಂಡ ಫೋಟೊ ಅಲ್ಲ, ಬದಲಿಗೆ ವಿಶ್ವವಿದ್ಯಾಲಯದ ಹೊರಗೆ ತೆಗೆದುಕೊಂಡಿರುವುದರಿಂದ ಅದು ನಮಗೆ ಸಂಬಂಧಿಸಿಲ್ಲ” ಎಂದರು.

ಆರ್‌ಎಸ್‌ಎಸ್‌ ಕಾರ್ಯಕ್ರಮಗಳಲ್ಲಿ ಸರ್ಕಾರಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಭಾಗವಹಿಸಬಹುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ಅನೇಕ ಧಾರ್ಮಿಕ ಸಂಘಟನೆಗಳು, ಸಂಸ್ಥೆಗಳು ದೇಶದಲ್ಲಿ ಕೆಲಸ ಮಾಡುತ್ತಿವೆ. ನಾವು ವಿಶ್ವವಿದ್ಯಾಲಯದಿಂದ ಕೇಂದ್ರ ಸರ್ಕಾರದ ಕಾರ್ಯಕ್ರಮದ ಭಾಗವಾಗಿ ಧಾರ್ಮಿಕ ಕಾರ್ಯಕ್ರಮವಾದ ಹಜ್ ಯಾತ್ರೆಗೆ ಹೋಗುವವರಿಗೆ ರಜೆ ಕೊಟ್ಟು ಕಳಿಸುತ್ತೇವೆ. ಯಾರೋ ತೀರ್ಥಯಾತ್ರೆಗೆ ಹೋಗುವವರಿಗೆ, ಯಾವುದೇ ಸಂಘಟನೆಯ ಧಾರ್ಮಿಕ ಕಾರ್ಯಕ್ರಮಗಳಿಗೆ ಹೋಗುವವರಿಗೆ ವಿಶ್ವವಿದ್ಯಾನಿಲಯ ಕ್ರಮ ತೆಗೆದುಕೊಳ್ಳುವ ಪ್ರಶ್ನೆಯೇ ಬರುವುದಿಲ್ಲ. ಅದು ಸರ್ಕಾರದ ಮಟ್ಟದಲ್ಲಿ ಯೋಚನೆ ಮಾಡಬೇಕೆನೊ” ಎಂದರು.

ಧಾರ್ಮಿಕ ಕಾರ್ಯಕ್ರಮಗಳು ಬೇರೆ ಮತ್ತು ಆರ್‌ಎಸ್‌ಎಸ್‌ ಬೇರೆ. ಇದು ಸಮಾಜದಲ್ಲಿ ದ್ವೇಷ ಹರಡುತ್ತಿದೆ, ಹಿಂಸೆಗೆ ಪ್ರಚೋದನೆ ನೀಡುತ್ತಿದೆ ಎಂಬ ಆರೋಪವಿರುವಾಗ ಅವರ ಕಾರ್ಯಕ್ರಮಗಳಲ್ಲಿ ಪ್ರಾಧ್ಯಾಪಕರು ಭಾಗವಹಿಸುವುದು ಸೇವಾನಿಯಮಗಳ ಉಲ್ಲಂಘನೆಯಲ್ಲವೆ ಎಂದು ಡಾ.ಬಸವರಾಜ ಡೋಣೂರರವರನ್ನು ಪ್ರಶ್ನಿಸಲಾಯಿತು. ಅದಕ್ಕೆ ಅವರು, “ನನ್ನ ತಿಳಿದಂತೆ ಸೇವಾ ನಿಯಮಗಳ ಉಲ್ಲಂಘನೆಯಾಗುವುದಿಲ್ಲ. ಯಾವುದೇ ಒಂದು ಬ್ಯಾನ್ ಆದ, ದೇಶ ವಿರೋಧಿಯಾದ ಚಟುವಟಿಕೆಗಳಲ್ಲಿ ಭಾಗಿಯಾದ ಸಂಘಟನೆಗಳಿದ್ದರೆ, ಭಯೋತ್ಪಾದಕ ಸಂಘಟನೆಗಳ ಕಾರ್ಯಕ್ರಮಗಳ ಭಾಗವಹಿಸಬಾರದು. ಆರ್‌ಎಸ್‌ಎಸ್‌ ಅಂತಹ ಸಂಘಟನೆ ಎಂಬದು ಆರೋಪವಷ್ಟೆ. ಒಬ್ಬ ಸರ್ಕಾರಿ ನೌಕರನಾಗಿ ನಾನು ಹಾಗೆ ಮಾತನಾಡಲು ಬರುವುದಿಲ್ಲ. ನಮ್ಮ ವಿಶ್ವವಿದ್ಯಾಲಯದ ನಿಯಮಗಳ ಪ್ರಕಾರ ಆ ಪ್ರಾಧ್ಯಾಪಕರ ಮೇಲೆ ಯಾವುದೇ ಕ್ರಮ ತೆಗೆದುಕೊಳ್ಳಲು ಬರುವುದಿಲ್ಲ” ಎಂದು ಉತ್ತರಿಸಿದ್ದಾರೆ.

ಡಾ. ಬಸವರಾಜ ಡೋಣೂರ

ಈ ಹಿಂದೆಯೂ ಸಹ ಬಸವರಾಜ ಡೋಣೂರವರು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಲೆಟರ್‌ ಹೆಡ್‌ನಲ್ಲಿ ಆರ್‌ಎಸ್‌ಎಸ್‌ ಸರಸಂಚಾಲಕ ಮೋಹನ್ ಭಾಗವತ್‌ರವರಿಗೆ ಪತ್ರ ಬರೆದು ಭೇಟಿಗೆ ಅವಕಾಶ ಕೋರುವ ಮೂಲಕ ವಿವಾದಕ್ಕೆ ಕಾರಣರಾಗಿದ್ದರು.

“ನಾನು ಜನವರಿ 08, 2022ರಂದು ನಾಗಪುರ ಜಿಲ್ಲೆಯ ಕವಿಕುಲಗುರು ಕಾಳಿದಾಸ ಸಂಸ್ಕೃತ ವಿವಿ, ರಾಮ್‌ಟೆಕ್‌ಗೆ ಉಪನ್ಯಾಸ ನೀಡಲು ಬರುತ್ತಿದ್ದೇನೆ. ಇದು ಪೂಜನೀಯ ಗೋಳ್ವಾಲ್ಕರ್ ಅವರ ಹುಟ್ಟೂರು ಕೂಡಾ. ಈ ಸಂದರ್ಭದಲ್ಲಿ ಜನವರಿ 08 ಅಥವಾ 09 ರಂದು ನಾಗಪುರದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕೇಂದ್ರ ಕಚೇರಿಯಲ್ಲಿ ತಮ್ಮನ್ನು ಭೇಟಿ ಮಾಡಲು ಬಯಸಿದ್ದೇನೆ. ನೀವು ಸಮಾಜದ ವಿವಿಧ ವಿಭಾಗಗಳನ್ನು ಆರ್‌ಎಸ್‌ಎಸ್‌ ಮೂಲಕ ತಲುಪಲು ದೇಶಾದ್ಯಂತ ಪ್ರಯಾಣ ಮಾಡುತ್ತಾ ಬ್ಯುಸಿಯಾಗಿದ್ದೀರಿ ಎಂಬುದು ನನಗೆ ಗೊತ್ತು. ಆ ಬ್ಯುಸಿಯ ವೇಳಾಪಟ್ಟಿಯಲ್ಲಿ ಬಿಡುವಾದರೆ ನನ್ನ ಅಪಾಯಿಂಟ್‌ಮೆಂಟ್‌ ಅನ್ನು ದೃಢಪಡಿಸಬೇಕೆಂದು ಈ ಮೂಲಕ ವಿನಯ ಮತ್ತು ಕಾತರದಿಂದ ಕೇಳಿಕೊಳ್ಳುತ್ತೇನೆ” ಎಂದು ಪತ್ರದಲ್ಲಿ ಬರೆದಿದ್ದುದ್ದು ಟೀಕೆಗೆ ಕಾರಣವಾಗಿತ್ತು.

ಇದನ್ನೂ ಓದಿ: RSS ಮುಖ್ಯಸ್ಥರಿಗೆ ಕಲಬುರಗಿ ಕೇಂದ್ರೀಯ ವಿವಿ ರಿಜಿಸ್ಟ್ರಾರ್ ಡೋಣೂರರ ಪತ್ರ: ಅಕ್ರಮ ನೇಮಕಾತಿ ಕಾರಣವೇ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರೋಹಿತ್ ವೇಮುಲಾ ಪ್ರಕರಣ: ಪೊಲೀಸರ ವರದಿ ಸಂಪೂರ್ಣವಾಗಿ ಸುಳ್ಳಿನಿಂದ ಕೂಡಿದೆ; ಪ್ರತಿಕ್ರಿಯಿಸಿದ ಕುಟುಂಬ

0
ಹೈದರಾಬಾದ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ರೋಹಿತ್ ವೇಮುಲಾ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ತೆಲಂಗಾಣ ಪೊಲೀಸರು ಮುಕ್ತಾಯದ ವರದಿಯನ್ನು ಸಲ್ಲಿಸಿದ್ದಾರೆ. ಇದಲ್ಲದೆ ವರದಿಯಲ್ಲಿ ರೋಹಿತ್‌ ವೇಮುಲಾ 'ದಲಿತ ಅಲ್ಲ', ತನ್ನ “ನಿಜವಾದ ಜಾತಿಯ ಗುರುತು”...