Homeಮುಖಪುಟಅಮೆರಿಕಕ್ಕೆ ಹಾರಿದ ಚೀನಿ ಬಲೂನ್‌: ‘ಇದು ಹಿಂಡನ್‌ಬರ್ಗ್ ಅಲ್ಲ’ ಎಂದ ತಜ್ಞರು

ಅಮೆರಿಕಕ್ಕೆ ಹಾರಿದ ಚೀನಿ ಬಲೂನ್‌: ‘ಇದು ಹಿಂಡನ್‌ಬರ್ಗ್ ಅಲ್ಲ’ ಎಂದ ತಜ್ಞರು

- Advertisement -
- Advertisement -

ಶಂಕಿತ ಚೀನೀ ಕಣ್ಗಾವಲು ಬಲೂನ್ ಈಗ ಸುದ್ದಿಯಲ್ಲಿದೆ. ಸುರಕ್ಷತೆಯ ನಿಟ್ಟಿನಲ್ಲಿ ಅದನ್ನು ಹೊಡೆದುರುಳಿಸಿಲ್ಲ ಎಂದು ಅಮೆರಿಕ ಹೇಳಿಕೊಂಡರೆ, ಮತ್ತೊಂದೆಡೆ ಅಮೆರಿಕದ ತಜ್ಞರು, “ಈ ಬಲೂನುಗಳು ಅದ್ಭುತವಾದ ಕಣ್ಗಾವಲು ವ್ಯವಸ್ಥೆಯಾಗಿದ್ದು, ಅವುಗಳನ್ನು ಶೂಟ್ ಮಾಡಲು ಸಾಧ್ಯವಿಲ್ಲ” ಎಂದಿದ್ದಾರೆ.

ವಾಷಿಂಗ್ಟನ್‌ನಲ್ಲಿನ ಮ್ಯಾರಥಾನ್ ಇನಿಶಿಯೇಟಿವ್ ಥಿಂಕ್ ಟ್ಯಾಂಕ್‌ನಲ್ಲಿ ಕಣ್ಗಾವಲು ಬಲೂನ್‌ಗಳ ಪರಿಣಿತರಾಗಿರುವ ವಿಲಿಯಂ ಕಿಮ್ ಪ್ರತಿಕ್ರಿಯಿಸಿದ್ದು, “ಬೀಜಿಂಗ್ ಹೇಳಿಕೊಂಡಂತೆ ಅಮೆರಿಕ ಗಡಿಯ ಹೊರಗಿನಿಂದ ದತ್ತಾಂಶಗಳನ್ನು ಸಂಗ್ರಹಿಸಲು ಚೀನಾದ ಬಲೂನ್ ಉದ್ದೇಶಿಸಿರಬಹುದು, ಆದರೆ ಅಸಮರ್ಪಕವಾಗಿ ಕಾರ್ಯನಿರ್ವಹಿಸುವ ಸಾಧ್ಯತೆಯೂ ಇದೆ” ಎಂದಿದ್ದಾರೆ.

ಮೂರು ಬಸ್‌ಗಳಷ್ಟು ದೊಡ್ಡದಾದ ಬಿಳಿಯ ಗೋಳಾಕಾರದ ಬಲೂನ್‌ಗಳು ಅಮೆರಿಕದ ಮೇಲೆ ಹಾರಾಡುತ್ತಿವೆ. ಇದು ರಾಜತಾಂತ್ರಿಕ ಚರ್ಚೆಗೆ ಕಾರಣವಾಗಿದೆ. ಪರಮಾಣು ಸೂಕ್ಷ್ಮಪ್ರದೇಶವಾಗಿರುವ ಮೊಂಟಾನಾದಲ್ಲಿ ಈ ಬಲೂನ್‌ಗಳು ಹಾರಾಡುತ್ತಿವೆ ಎಂದು ಪೆಂಟಗನ್ ಹೇಳಿದೆ.

ಪೆಂಟಗನ್ ಪತ್ರಿಕಾ ಕಾರ್ಯದರ್ಶಿ ಬ್ರಿಗ್ ಜನರಲ್ ಪ್ಯಾಟ್ ರೈಡರ್ ಪ್ರತಿಕ್ರಿಯಿಸಿದ್ದು, “ಸೂಕ್ಷ್ಮ ಮಾಹಿತಿಗಳ ಸಂಗ್ರಹಣೆಯನ್ನು ತಪ್ಪಿಸಲು ಯುಎಸ್ ತಕ್ಷಣವೇ ಕಾರ್ಯನಿರ್ವಹಿಸಿದೆ” ಎಂದು  ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಉತ್ತರ ಅಮೆರಿಕಾದ ಏರೋಸ್ಪೇಸ್ ಡಿಫೆನ್ಸ್ ಕಮಾಂಡ್ ಜಾಗೃತವಾಗಿದ್ದು ಬಲೂನ್ ಅನ್ನು ಮೇಲ್ವಿಚಾರಣೆ ಮಾಡುವುದನ್ನು ಮುಂದುವರೆಸಿದೆ ಎಂದು ರೈಡರ್ ಮಾಹಿತಿ ನೀಡಿದ್ದಾರೆ.

ಏತನ್ಮಧ್ಯೆ, ಮುಂದಿನ ವಾರ ನಡೆಯಬೇಕಿದ್ದ ಬೀಜಿಂಗ್ ಪ್ರವಾಸವನ್ನು ಅಮೆರಿಕ ರಾಜ್ಯ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ರದ್ದುಗೊಳಿಸಿದ್ದಾರೆ.

ಹವಾಮಾನ ಸಂಶೋಧನಾ ಬಲೂನ್‌: ಚೀನಾ

ಅಮೆರಿಕಾಕ್ಕೆ ಬಲೂನ್ ಹಾರಿದ್ದರ ಕುರಿತು ಚೀನಾ ಸ್ಪಷ್ಟನೆ ನೀಡಿದ್ದು, “ಹವಾಮಾನ ಸಂಶೋಧನೆಗಾಗಿ ಬಳಸಲಾದ ನಾಗರಿಕ ವಾಯುನೌಕೆ ಇದಾಗಿದೆ. ಗಾಳಿಯ ರಭಸದಿಂದಾಗಿ ಹಾದಿ ತಪ್ಪಿ ಅಮೆರಿಕ ತಲುಪಿದೆ” ಎಂದು ತಿಳಿಸಿದೆ.

ಚೀನಾದ ವಿದೇಶಾಂಗ ಸಚಿವಾಲಯವು ತನ್ನ ಹೇಳಿಕೆಯಲ್ಲಿ “ವಾಯು ನೌಕೆಯು ಅನಪೇಕ್ಷಿತವಾಗಿ ಅಮೆರಿಕಕ್ಕೆ ಪ್ರವೇಶಿಸಿರುವುದಕ್ಕೆ ವಿಷಾದಿಸುತ್ತೇವೆ” ಎಂದಿದೆ.

ಅಮೆರಿಕ ಏಕೆ ಇನ್ನು ಬಲೂನ್‌ ಹೊಡೆದು ಹಾಕಿಲ್ಲ?

ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಆರಂಭದಲ್ಲಿ ಬಲೂನ್ ಅನ್ನು ಒಡೆದು ಹಾಕಲು ಬಯಸಿದ್ದರು. ಆದರೆ ಅಲ್ಲಿನ ಸ್ಥಳೀಯರ ಸುರಕ್ಷತೆಗಳ ಕುರಿತು ಉನ್ನತ ರಕ್ಷಣಾ ಅಧಿಕಾರಿಗಳು ಬಿಡೆನ್‌ ಅವರಿಗೆ ಸಲಹೆ ನೀಡಿದ್ದರಿಂದ ಕ್ರಮ ಜರುಗಿಸಿಲ್ಲ ಎಂದು ಹಿರಿಯ ಆಡಳಿತ ಅಧಿಕಾರಿಗಳನ್ನು ಉಲ್ಲೇಖಿಸಿ ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.

ಕಣ್ಗಾವಲು ಬಲೂನ್‌ಗಳ ಪರಿಣಿತರಾಗಿರುವ ವಿಲಿಯಂ ಕಿಮ್ ಕಾರ್ಯಸಾಧ್ಯತೆ ಬಗ್ಗೆ ವಿವರಿಸಿದ್ದು, “ಈ ಬಲೂನುಗಳಲ್ಲಿ ಹೀಲಿಯಂ ಬಳಸಲಾಗಿದೆ. ಇದು ಹಿಂಡೆನ್ಬರ್ಗ್ ಅಲ್ಲ, ನೀವು ಅದನ್ನು ಶೂಟ್ ಮಾಡಲು ಸಾಧ್ಯವಿಲ್ಲ” ಎಂದಿದ್ದಾರೆ.

ಮೇ 6, 1937ರಂದು ಸಂಭವಿಸಿದ ಹಿಂಡನ್‌ಬರ್ಗ್ ವಾಯುನೌಕೆ ದುರಂತ ಇತಿಹಾಸ ಪ್ರಸಿದ್ಧವಾಗಿದೆ. ಅದರಲ್ಲಿ ಹೈಡ್ರೋಜನ್ ಅನಿಲ ಬಳಸಲಾಗಿತ್ತು. ಅದು ಸುಮಾರು 90 ಸೆಕೆಂಡುಗಳಲ್ಲಿ ಸುಟ್ಟುಹೋಗಿತ್ತು.

“ನೀವು ಅದಕ್ಕೆ ಪಂಚ್ ಮೂಲಕ ರಂಧ್ರ ಮಾಡಿದರೆ, ಅದು ತುಂಬಾ ನಿಧಾನವಾಗಿ ಸೋರಿಕೆಯಾಗುತ್ತದೆ” ಎಂದಿದ್ದಾರೆ.

1998ರಲ್ಲಿ ಕೆನಡಾದ ವಾಯುಪಡೆಯು ಬೃಹದಾಕಾರದ ವಾಯುನೌಕೆಯನ್ನು ಹೊಡೆದುರುಳಿಸಲು ಎಫ್-18 ಫೈಟರ್ ಜೆಟ್‌ಗಳನ್ನು ಕಳುಹಿಸಿತ್ತು ಎಂದು ಕಿಮ್ ನೆನಪಿಸಿಕೊಂಡಿದ್ದಾರೆ.

“ಅವರು ಅದರೊಳಗೆ ಸಾವಿರದಷ್ಟು 20-ಮಿಲಿಮೀಟರ್ ಫಿರಂಗಿ ಸುತ್ತುಗಳನ್ನು ಹಾರಿಸಿದರು. ಅದು ಅಂತಿಮವಾಗಿ ಕೆಳಗೆ ಬೀಳಲು ಇನ್ನೂ ಆರು ದಿನಗಳನ್ನು ತೆಗೆದುಕೊಂಡಿತು. ನೀವು ಅವರ ಮೇಲೆ ಗುಂಡು ಹಾರಿಸಿದಾಗ ಇವು ಸ್ಫೋಟಗೊಳ್ಳುವ ವಸ್ತುಗಳಾಗಿರುವುದಿಲ್ಲ” ಎಂದಿದ್ದಾರೆ.

ಹಿಂಡನ್‌ಬರ್ಗ್ ದುರಂತದ ಬಗ್ಗೆ ಕನ್ನಡದ ವಿಜ್ಞಾನ ಲೇಖಕರಾದ ನಾಗೇಶ್ ಹೆಗಡೆಯವರು ಇತ್ತೀಚೆಗೆ ವಿವರಿಸಿದ್ದು, “ಹೈಡ್ರೊಜನ್‌ (ಜಲಜನಕ) ಇಡೀ ವಿಶ್ವದಲ್ಲೇ ಅತ್ಯಂತ ದಹನಶೀಲ ಅನಿಲ. ತುಸು ಕಿಡಿ ಹೊಮ್ಮಿದರೂ ಸಾಕು ಢಮಾರೆಂದು ಸ್ಫೋಟವಾಗಿ ಅನಿಲ ಉರಿಯುತ್ತದೆ. ಇಂಥ ಬಲೂನಿನಲ್ಲಿ ಸವಾರಿ ಮಾಡಿ, ಅದು ಸ್ಫೋಟವಾಗಿ ಅದಾಗಲೇ ಅನೇಕರು ಪ್ರಾಣ ಕಳಕೊಂಡಿದ್ದರು. ಆದರೆ ಹಿಂಡನ್‌ಬರ್ಗ್‌ ವಿಮಾನ ಎಂದರೆ (ಟೈಟಾನಿಕ್‌ ಥರಾ) ಅತ್ಯಂತ ಮಜಬೂತಾದ, ಅತ್ಯಂತ ಸುಭದ್ರ ವಿಮಾನಗಳೆಂಬ ಪ್ರತೀತಿ ಇತ್ತು” ಎಂದು ವಿವರಿಸಿದ್ದಾರೆ.

(ಹಿಂಡನ್‌ಬರ್ಗ್ ದುರಂತದ ಬಗ್ಗೆ ನಾಗೇಶ್‌ ಹೆಗಡೆಯವರು ಬರೆದಿರುವ ಲೇಖನವನ್ನು ಮೇಲಿನ ಫೇಸ್‌ಬುಕ್‌ ಲಿಂಕ್‌ ಕ್ಲಿಕ್‌ ಮಾಡಿ ಓದಬಹುದು.)

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ.ಬಂಗಾಳ: ಲೈಂಗಿಕ ದೌರ್ಜ್ಯನ್ಯದ ಆರೋಪದ ಬೆನ್ನಲ್ಲಿ ರಾಜಭವನಕ್ಕೆ ಪೊಲೀಸರಿಗೆ ಪ್ರವೇಶ ನಿಷೇಧಿಸಿದ ಗವರ್ನರ್‌

0
ಪಶ್ಚಿಮ ಬಂಗಾಳದ ರಾಜ್ಯಪಾಲ ಸಿ.ವಿ.ಆನಂದ ಬೋಸ್ ವಿರುದ್ಧ ನಿನ್ನೆ ರಾಜಭವನದ ಮಹಿಳಾ ಉದ್ಯೋಗಿಯೋರ್ವರು ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿದ್ದರು. ಇದರ ಬೆನ್ನಲ್ಲಿ ರಾಜ್ಯಪಾಲರು ತನಿಖೆಯ ನೆಪದಲ್ಲಿ ಪೊಲೀಸರು ರಾಜಭವನಕ್ಕೆ ಪ್ರವೇಶಿಸದಂತೆ ನಿಷೇಧಿಸಿದ್ದಾರೆ, ಇದಲ್ಲದೆ...