Homeಕರ್ನಾಟಕಸರ್ಕಾರಿ ವೈದ್ಯರ ಖಾಸಗಿ ಪ್ರಾಕ್ಟಿಸ್‌ ರದ್ದುಗೊಳಿಸಲು ಆಯೋಗ ಶಿಫಾರಸು; ಡಾಕ್ಟರ್‌ಗಳು ಏನಂತಾರೆ?

ಸರ್ಕಾರಿ ವೈದ್ಯರ ಖಾಸಗಿ ಪ್ರಾಕ್ಟಿಸ್‌ ರದ್ದುಗೊಳಿಸಲು ಆಯೋಗ ಶಿಫಾರಸು; ಡಾಕ್ಟರ್‌ಗಳು ಏನಂತಾರೆ?

ಟಿ.ಎಂ.ವಿಜಯ್ ಭಾಸ್ಕರ್ ನೇತೃತ್ವದ ‘ಕರ್ನಾಟಕ ಆಡಳಿತ ಸುಧಾರಣಾ ಆಯೋಗ’ವು ಈ ಕುರಿತು ಶಿಫಾರಸು ಮಾಡಿದೆ

- Advertisement -
- Advertisement -

ಸರ್ಕಾರಿ ವೈದ್ಯರು ಖಾಸಗಿಯಾಗಿಯೂ ವೈದ್ಯಕೀಯ ವೃತ್ತಿ (ಪ್ರಾಕ್ಟಿಸ್‌‌) ನಡೆಸುವುದನ್ನು ರದ್ದುಗೊಳಿಸುವ ಸಂಬಂಧ ಚರ್ಚೆಗಳು ಮುನ್ನೆಲೆಗೆ ಬಂದಿವೆ. ರಾಜ್ಯ ಸರ್ಕಾರದ ಮಾಜಿ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ್ ಭಾಸ್ಕರ್ ನೇತೃತ್ವದ ‘ಕರ್ನಾಟಕ ಆಡಳಿತ ಸುಧಾರಣಾ ಆಯೋಗ’ವು ಈ ಕುರಿತು ಶಿಫಾರಸ್ಸನ್ನೂ ಮಾಡಿದೆ.

ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಹೆಚ್ಚಿನ ಸಂಖ್ಯೆಯ ವೈದ್ಯರು ಅಧಿಕೃತ ಕರ್ತವ್ಯದ ಅವಧಿಯ ನಂತರ ಖಾಸಗಿಯಾಗಿ ವೈದ್ಯಕೀಯ ಅಭ್ಯಾಸದಲ್ಲಿ ತೊಡಗುವುದನ್ನು ಪರಿಗಣನೆಗೆ ತೆಗೆದುಕೊಂಡಿರುವ ಆಯೋಗ, ಎಲ್ಲ ಇಲಾಖೆಗಳಲ್ಲಿನ ಸರ್ಕಾರಿ ವೈದ್ಯರ ಖಾಸಗಿ ವೃತ್ತಿಯನ್ನು ನಿಷೇಧಿಸಲು ಶಿಫಾರಸು ಮಾಡಿದೆ.

ಫೆಬ್ರವರಿ 3ರಂದು ಸರ್ಕಾರಕ್ಕೆ ತನ್ನ ಶಿಫಾರಸುಗಳನ್ನು ಆಯೋಗ ಸಲ್ಲಿಸಿದ್ದು, “ಖಾಸಗಿ ಅಭ್ಯಾಸದ ಮೇಲಿನ ನಿಷೇಧದಿಂದಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ಸಂಜೆ ವೇಳೆ ಹೊರ ರೋಗಿಗಳ ವಿಭಾಗಗಳನ್ನು (OPDs) ಪ್ರಾರಂಭಿಸಲು ಸಾಧ್ಯವಾಗುತ್ತದೆ” ಎಂಬ ಅಂಶದತ್ತ ಗಮನ ಸೆಳೆಯಲಾಗಿದೆ.

“ವೈದ್ಯರು ಖಾಸಗಿ ಅಭ್ಯಾಸದಲ್ಲಿ ತೊಡಗುವುದನ್ನು ನಿರ್ಬಂಧಿಸಿದರೆ ಅವರನ್ನು ಖಾಲಿ ಹುದ್ದೆಗಳಲ್ಲಿ ಹೆಚ್ಚುವರಿ ಅವಧಿಯಲ್ಲಿ ಮುಂದುವರಿಸಬಹುದು. ಖಾಸಗಿ ಪ್ರಾಕ್ಟಿಸ್‌‌ ನಿಷೇಧಿಸಿದರೆ ಕರ್ತವ್ಯದ ಸಮಯದಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಹಾಜರಾತಿ ಖಚಿತಪಡಿಸಿಕೊಳ್ಳುವುದು ಸುಲಭವಾಗುತ್ತದೆ” ಎಂದು ಆಯೋಗದ ವರದಿ ತಿಳಿಸಿದೆ.

ಮೆಡಿಕಲ್ ವೈದ್ಯರು ಖಾಸಗಿ ಅಭ್ಯಾಸ ಮಾಡಬಹುದು ಅಥವಾ ಅಭ್ಯಾಸೇತರ ಭತ್ಯೆ (NPA) ಪಡೆಯಬಹುದು ಎಂಬ ಆಯ್ಕೆಯನ್ನೂ ಸರ್ಕಾರ ನೀಡುವುದನ್ನು ಆಯೋಗ ಗಮನಿಸಿದೆ. ಆದರೆ ನಗರ ಪ್ರದೇಶಗಳಲ್ಲಿ ಕಾರ್ಪೊರೇಟ್ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಂಗಳು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಸರ್ಕಾರಿ ವೈದ್ಯರು ಖಾಸಗಿ ಪ್ರಾಕ್ಟಿಸ್‌ ಮಾಡಲು ಸಾಕಷ್ಟು ಅವಕಾಶಗಳಿವೆ.

ಖಾಸಗಿ ಅಭ್ಯಾಸದ ವಿರುದ್ಧವಾಗಿ ವಾದ ಮಂಡಿಸಿರುವ ಆಯೋಗವು ಕರ್ನಾಟಕದಲ್ಲಿ ಸಾಕಷ್ಟು ಸಂಖ್ಯೆಯ ವೈದ್ಯರಿದ್ದಾರೆ ಎನ್ನುತ್ತಿದೆ.

“ಇಲ್ಲಿಯವರೆಗೆ, ಸುಮಾರು 20 ರಾಜ್ಯಗಳು ಖಾಸಗಿ ಅಭ್ಯಾಸವನ್ನು ನಿಷೇಧಿಸಿವೆ. ಭಾರತ ಸರ್ಕಾರದ ವೈದ್ಯಕೀಯ ಸಂಸ್ಥೆಗಳಲ್ಲಿ ಮತ್ತು ಕೇಂದ್ರ ಆರೋಗ್ಯ ಸೇವಾ ನಿಯಮಗಳಲ್ಲಿಯೂ ನಿಷೇಧ ಮಾಡಲಾಗಿದೆ. ಆದ್ದರಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಉತ್ತಮ ವೈದ್ಯಕೀಯ ಸೇವೆಯನ್ನು ಖಾತ್ರಿಪಡಿಸುವ ಹಿತದೃಷ್ಟಿಯಿಂದ ಎಲ್ಲಾ ಇಲಾಖೆಗಳ ಎಲ್ಲಾ ಸರ್ಕಾರಿ ವೈದ್ಯರ ಖಾಸಗಿ ಅಭ್ಯಾಸವನ್ನು ನಿಷೇಧಿಸಬೇಕು” ಎಂದು ಶಿಫಾರಸು ಮಾಡಲಾಗಿದೆ. ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯ, ಆರೋಗ್ಯ ಮತ್ತು ಕಲ್ಯಾಣ ಇಲಾಖೆ ಈ ನಿಟ್ಟಿನಲ್ಲಿ ಪ್ರಸ್ತಾವನೆಯನ್ನು ಸಲ್ಲಿಸಬಹುದು” ಎಂದು ಆಯೋಗ ಸೂಚಿಸಿದೆ.

ಅದೇ ರೀತಿಯಲ್ಲಿ ಸರ್ಕಾರಿ ಶಿಕ್ಷಕರು ಮತ್ತು ಉಪನ್ಯಾಸಕರು ಖಾಸಗಿ ಟ್ಯೂಷನ್ ತೆಗೆದುಕೊಳ್ಳುವುದನ್ನು ನಿರ್ಬಂಧಿಸಲಾಗಿದೆ ಎಂಬುದನ್ನು ಆಯೋಗವು ಗಮನಿಸಿದೆ.

ಬೆಂಗಳೂರಿನ ಪ್ರತಿಷ್ಠಿತ ವೈದ್ಯಕೀಯ ಕಾಲೇಜೊಂದರ ಹಿರಿಯ ವೈದ್ಯರೊಬ್ಬರು ಮಾತನಾಡಿ, “ಖಾಸಗಿ ಅಭ್ಯಾಸವನ್ನು ನಿಷೇಧಿಸುವ ವಿಷಯವು ಪದೇ ಪದೇ ಚರ್ಚೆಯಾಗುತ್ತಿದೆ, ಆದರೆ ಅದು ಎಂದಿಗೂ ಜಾರಿಗೆ ಬಂದಿಲ್ಲ” ಎಂದಿದ್ದಾರೆ.

ಮಧುಮೇಹ ತಜ್ಞರಾದ ಡಾ.ಎಚ್.ವಿ.ವಾಸು ಅವರು ‘ನಾನುಗೌರಿ.ಕಾಂ’ ಜೊತೆಯಲ್ಲಿ ಮಾತನಾಡಿ, “ಸರ್ಕಾರಿ ವೈದ್ಯರು ಖಾಸಗಿ ಪ್ರಾಕ್ಟಿಸ್‌ನಲ್ಲಿ ತೊಡಗುವುದನ್ನು ನಿರ್ಬಂಧಿಸುವುದು ಸೂಕ್ತ. ಅದು ಜಾರಿಯಾಗಲೇಬೇಕು. ಯಾಕೆಂದರೆ ಸರ್ಕಾರಿ ಆಸ್ಪತ್ರೆಗಳ ಪರಿಸ್ಥಿತಿ ಕೆಟ್ಟದ್ದಾಗಿದೆ. ಆದರೆ ವೈದ್ಯರನ್ನು ಸರ್ಕಾರಿ ಸೇವೆಯಲ್ಲಿ ಹಿಡಿದಿಟ್ಟುಕೊಳ್ಳಲು ಆಗುತ್ತಿಲ್ಲ ಎಂಬುದು ದೊಡ್ಡ ಸಮಸ್ಯೆ” ಎಂದು ವಿವರಿಸಿದರು.

ಮುಂದುವರಿದು, “ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ನೇಮಕಾತಿ ಮಾಡಿಕೊಳ್ಳಲು ಸಂದರ್ಶನ ನಡೆಸಿದಾಗ ಅಗತ್ಯವಿರುವಷ್ಟು ಹುದ್ದೆಗಳಿಗೆ ಅಭ್ಯರ್ಥಿಗಳೇ ಬರುವುದಿಲ್ಲ. ಯಾಕೆಂದರೆ ಖಾಸಗಿ ಪ್ರಾಕ್ಟಿಸ್ ತುಂಬಾ ಲಾಭದಾಯಕವಾಗಿದೆ. ಇದರ ಜೊತೆಗೆ ವೈದ್ಯಕೀಯ ಶಿಕ್ಷಣ ಕೂಡ ಸಾಕಷ್ಟು ದುಬಾರಿಯಾಗಿದೆ. ಇಡೀ ವೈದ್ಯಕೀಯ ವ್ಯವಸ್ಥೆಯೇ ಲಾಭಕೋರವಾಗಿದೆ. ಇದು ಬಗೆಹರಿಯದಿದ್ದರೆ ಬರೀ ನಿಯಮಗಳನ್ನು ರೂಪಿಸಿ ಪ್ರಯೋಜನವಿಲ್ಲ. ನೇಮಕಾತಿ ಮಾಡಿಕೊಂಡರೂ ವೈದ್ಯರು ಬಿಟ್ಟುಹೋಗುತ್ತಾರೆ” ಎಂದು ಅಭಿಪ್ರಾಯಪಟ್ಟರು.

“ಮೊದಲೆಲ್ಲ ವೈದ್ಯರಿಗೆ ಸಂಬಳ ತುಂಬಾ ಕಡಿಮೆ ಇತ್ತು. ಈಗ ಹೆಚ್ಚಳ ಮಾಡಿದ್ದರೂ ಸರ್ಕಾರಿ ಸೇವೆಗೆ ವೈದ್ಯರು ಬರುತ್ತಿಲ್ಲ. ಆಯೋಗದ ಶಿಫಾರಸ್ಸಿನಿಂದ ಖಾಸಗಿ ಪ್ರಾಕ್ಟಿಸ್ ತಡೆಯಬಹುದಾದ ಸಂಗತಿಯಲ್ಲ. ಇದರ ಹಿಂದೆ ವಿಶಾಲವಾದ ಪ್ರಶ್ನೆಗಳಿವೆ. ಅದನ್ನೂ ಗಣನೆಗೆ ತೆಗೆದುಕೊಳ್ಳಬೇಕು. ಖಾಸಗಿ ಪ್ರಾಕ್ಟಿಸ್‌ ರದ್ದು ಮಾಡಬೇಕೆಂಬುದರಲ್ಲಿ ಸಂಪೂರ್ಣ ಸಹಮತವಿದೆ” ಎಂದು ತಿಳಿಸಿದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

  1. I deeply appreciate the aforementioned recommendations and if implemented, State Government would have initiated an yemon service to the needy public in hospitals in Teaching and non- Teaching in government sector. This measure will go a long way in curbing extraordinary commercialization of Medical services and fleecing the poor and downtrodden public will be saved from clutches of Medical Mafia. HOPE KARNATAKA STATE GOVERNMENT WILL NOT YIELD TO LOBBYING BY SHARKS IN GOVERNMENT MEDICAL SERVICES. NOW, BALL IS IN GOVERNMENT’S COURT WHICH WILL TEST THE POLITICAL WILL, IF ANY.

  2. It’s definitely good idea, only theoritical.. when you charge crores of money for the MBBS, MD, DM/MCh, how can you expect a medical graduate to settle for meagre Rs.50 thousand to 1 lakh salary.. when His/Her peers in the engineering & other streams with below par merit, competency (read most) will be getting 3 to 5 lakhs immediately after completion, youngsters start comparing..
    First step by govt should be halting the mushrooming of low quality private medical institutes, mostly run by politicians& businessmen..
    Same holds true for Education sector. Pre-Primary n Lower Primary will be looted with 1.5 -5 lakhs from private schools, which again are run by greedy, unethical politicians n businessmen( read most)

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...