ರಾಜ್ಯ ಸರ್ಕಾರದ ವಿರುದ್ದ ಬಿಜೆಪಿ-ಜೆಡಿಎಸ್ ಹಮ್ಮಿಕೊಂಡಿರುವ ‘ಮೈಸೂರು ಚಲೋ’ ಪಾದಯಾತ್ರೆಯಲ್ಲಿ ಹಾಸನದ ಮಾಜಿ ಶಾಸಕ ಪ್ರೀತಂ ಗೌಡ ಭಾಗವಹಿಸಿದ್ದು, ಈ ವೇಳೆ ಬಿಜೆಪಿ-ಜೆಡಿಎಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದೆ.
ಬಿಜೆಪಿ-ಜೆಡಿಎಸ್‌ನ ಐದನೇ ದಿನದ ಪಾದಯಾತ್ರೆ ವೇಳೆ ಜೆಡಿಎಸ್ ಭದ್ರಕೋಟೆ ಎನ್ನಲಾಗುವ ಮಂಡ್ಯದಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಪ್ರೀತಂ ಗೌಡ ಕೇಸರಿ ಶಾಲು ಧರಿಸಿ ಕಾಣಿಸಿಕೊಂಡಿದ್ದಾರೆ. ಈ ವೇಳೆ ಬಿಜೆಪಿ ಕಾರ್ಯಕರ್ತರು ಅವರನ್ನು ಹೆಗಲ ಮೇಲೆ ಹೊತ್ತುಕೊಂಡು ‘ಹಾಸನದ ಹುಲಿ’ ಎಂದು ಘೋಷಣೆ ಕೂಗಿ ಸಂಭ್ರಮ ವ್ಯಕ್ತಪಡಿಸಿದ್ದಾರೆ.
ಜೆಡಿಎಸ್ ಕಾರ್ಯಕರ್ತರು ಎದುರು ಬರುತ್ತಿದ್ದಂತೆ ಪ್ರೀತಂ ಗೌಡ ಬೆಂಬಲಿಗರು, “ಗೌಡ ಗೌಡ.. ಪ್ರೀತಂ ಗೌಡ, ಗೌಡರ ಗೌಡ ಪ್ರೀತಂ ಗೌಡ” ಎಂದು ಘೋಷಣೆ ಕೂಗಿದ್ದಾರೆ. ಇದಕ್ಕೆ ಜೆಡಿಎಸ್ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದ್ದು, ನಾವೂ ಗೌಡರೇ ಎಂದಿದ್ದಾರೆ. ಈ ವೇಳೆ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರ ನಡುವೆ ಕ್ಷಣಕಾಲ ಮಾತಿನ ಚಕಮಕಿ ನಡೆದು, ಗಲಾಟೆ ಉಂಟಾಗಿದೆ.
ಪ್ರೀತಂ ಗೌಡ ಪಾದಯಾತ್ರೆಯಲ್ಲಿ ಭಾಗವಹಿಸಿರುವುದು ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿಯವರಿಗೆ ಮುಖಭಂಗ ಎಂದು ಹೇಳಲಾಗ್ತಿದೆ. ಏಕೆಂದರೆ, ಆರಂಭದಲ್ಲಿ ಪ್ರೀತಂ ಗೌಡ ನೇತೃತ್ವ ವಹಿಸುವ ಪಾದಯಾತ್ರೆಗೆ ಜೆಡಿಎಸ್ ಬೆಂಬಲವಿಲ್ಲ ಎಂದು ಕುಮಾರಸ್ವಾಮಿ ಹೇಳಿದ್ದರು.
“ಪ್ರೀತಂ ಗೌಡ ಅವರನ್ನು ಮುಂದಿಟ್ಟುಕೊಂಡು ಪಾದಯಾತ್ರೆ ನಡೆಸಲು ಮುಂದಾಗಿದ್ದಾರೆ. ಈ ಪ್ರೀತಂ ಗೌಡ ಯಾರು? ಹಾಸನದ ಬೀದಿ ಬೀದಿಗಳಲ್ಲಿ ಪೆನ್‌ಡ್ರೈವ್ ಸಿಗಲು ಕಾರಣನಾದ ವ್ಯಕ್ತಿ ಆತ. ಆತನ ಜೊತೆ ನಾನು ವೇದಿಕೆ ಹಂಚಿಕೊಳ್ಳಬೇಕಾ? ನಮ್ಮ ಕುಟುಂಬಕ್ಕೆ ವಿಷ ಹಾಕಿದವರ ಜೊತೆ ಪಾದಯಾತ್ರೆಯಲ್ಲಿ ಭಾಗಿಯಾಗಬೇಕಾ?” ಎಂದು ಕುಮಾರಸ್ವಾಮಿ ಕೇಳಿದ್ದರು. ಆದರೆ, ಈಗ ಪ್ರೀತಂ ಗೌಡ ಮಂಡ್ಯದಲ್ಲೇ ಪಾದಯಾತ್ರೆಯಲ್ಲಿ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ : ‘ನೀವು ಯಾವಾಗಲೂ ನಮ್ಮ ಚಾಂಪಿಯನ್ ಆಗಿರುತ್ತೀರಿ..’; ವಿನೇಶಾ ಅನರ್ಹತೆ ಕುರಿತು ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ