Homeನ್ಯಾಯ ಪಥವಿಶ್ವದೆಲ್ಲೆಡೆ ಬಹುತೇಕ ರದ್ದುಗೊಂಡಿರುವ ವಸಾಹತುಶಾಹಿ ಪಳೆಯುಳಿಕೆ ಕಾನೂನು ‘ನ್ಯಾಯಾಂಗ ನಿಂದನೆ’

ವಿಶ್ವದೆಲ್ಲೆಡೆ ಬಹುತೇಕ ರದ್ದುಗೊಂಡಿರುವ ವಸಾಹತುಶಾಹಿ ಪಳೆಯುಳಿಕೆ ಕಾನೂನು ‘ನ್ಯಾಯಾಂಗ ನಿಂದನೆ’

- Advertisement -
- Advertisement -

ಪ್ರಶಾಂತ್ ಭೂಷಣ್ ಅವರು ಮಾಡಿದ್ದ ಎರಡು ಟ್ವೀಟ್‌ಗಳಿಗೆ ಸಂಬಂಧಿಸಿದಂತೆ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಅವರನ್ನು ತಪ್ಪಿತಸ್ಥರೆಂದು ತೀರ್ಪಿತ್ತಿದೆ. ‘ಇವು ಭಾರತದ ಸುಪ್ರೀಂ ಕೋರ್ಟ್ ಸಂಸ್ಥೆಯ ಮತ್ತು ಮುಖ್ಯ ನ್ಯಾಯಮೂರ್ತಿಗಳ ಘನತೆಯನ್ನು ಮತ್ತು ಅಧಿಕಾರವನ್ನು ಕುಂದಿಸುವುದೂ ಅಲ್ಲದೆ ನ್ಯಾಯದಾನ ವ್ಯವಸ್ಥೆಯನ್ನು ನಿಂದಿಸಿವೆ’, ಎಂದು ಹೇಳಿರುವುದಲ್ಲದೆ ‘ನಿರ್ಭೀತ ಮತ್ತು ನಿಷ್ಪಕ್ಷಪಾತ ನ್ಯಾಯವನ್ನು ನೀಡುವ’ ನ್ಯಾಯಾಂಗದ ಸಾಮರ್ಥ್ಯದಲ್ಲಿ ‘ಜನರ ನಂಬಿಕೆ ಮತ್ತು ವಿಶ್ವಾಸವನ್ನು’ ಟ್ವೀಟ್‌ಗಳು ದುರ್ಬಲಗೊಳಿಸುತ್ತವೆೆ ಎಂದೂ ಹೇಳಿದೆ.

ಈ ತೀರ್ಪಿನಿಂದ ಸುಪ್ರೀಂ ಕೋರ್ಟ್, ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ‍್ಯಕ್ಕೆ ನೀಡಲಾದ ರಕ್ಷಣೆಯನ್ನು ಸಂಕುಚಿತಗೊಳಿಸಿದ್ದಲ್ಲದೆ ಸಾಮಾನ್ಯವಾಗಿ ಅತಿವಿರಳವಾಗಿ ಆರೋಪಿಸುವ ಅಧಿಕಾರದ ತನ್ನ ನ್ಯಾಯವ್ಯಾಖ್ಯಾನವನ್ನೆ ಉಪೇಕ್ಷಿಸಿದೆ.

ಇದನ್ನೂ ಓದಿ: ಪ್ರಶಾಂತ್ ಭೂಷಣ್ ಮೇಲಿನ ಸುಪ್ರೀಂಕೋರ್ಟ್ ಕ್ರಮ ಅಸಂವಿಧಾನಿಕ: ನ್ಯಾಯಮೂರ್ತಿ ಕರ್ಣನ್

ಎಸ್ ಮಳ್ಗಾಂವ್ಕರ್ ಪ್ರಕರಣದಲ್ಲಿ ಜಸ್ಟೀಸ್ ಕೃಷ್ಣ ಅಯ್ಯರ್ ಅವರ ತಿಳಿವಳಿಕೆಯನ್ನು ಇಲ್ಲಿ ನೆನಪಿಸಿಕೊಳ್ಳುವುದು ಸೂಕ್ತ: ಅವರು ಅಂದು ಹೇಳಿದ ವಿವೇಕದ ಮಾತುಗಳು ‘ಘನವಾದ ಉದಾರವಾದಿತನದಿಂದ ನ್ಯಾಯಾಲಯ ಕ್ಲುಲ್ಲಕ ಮತ್ತು ಲಘುವಾದ ಅಪರಾಧಗಳನ್ನು ಉಪೇಕ್ಷಿಸಲು ನಿರ್ಧರಿಸಿದೆ – ನಾಯಿಗಳು ಬೊಗಳಬಹುದು, ರಥ ಮುಂದುವರೆಯುತ್ತದೆ’ ಎಂದಿದ್ದವು.

ಪ್ರಶಾಂತ್‌ ಭೂಷಣ್ ಮಾಡಿದ್ದ ಟ್ವೀಟ್

ಆದರೆ ಈ ಟ್ವೀಟ್‌ಗಳ ವಿಚಾರದಲ್ಲಿ ಜಸ್ಟಿಸ್ ಅಯ್ಯರ್ ಅವರ ಮೇಲ್ಪಂಕ್ತಿಯನ್ನು ಸುಪ್ರೀಂ ಕೋರ್ಟ್ ಉಪೇಕ್ಷಿಸಿರುವುದು ಮಾತ್ರವಲ್ಲ ಆ ಟ್ವೀಟ್‌ಗಳು ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಸಾರ್ವಜನಿಕರ ಭರವಸೆಗೆ ಧಕ್ಕೆ ತಂದಿವೆ ಎನ್ನುವ ರೀತಿಯಲ್ಲಿ ಪರಿಗಣಿಸಿದ್ದಾರೆ.

ಜೊತೆಗೆ ತಮ್ಮ ಅಫಿಡವಿಟ್ ಮೂಲಕ ಪ್ರಶಾಂತ್ ಭೂಷಣ್ ತಾವು ಮಾಡಿರುವ ಟೀಕೆಗಳಿಗೆ ಪೂರಕವಾದ ವಿಸ್ತೃತ ದಾಖಲೆ ಒದಗಿಸಿರುವುದನ್ನು ನೋಡಿದ ಮೇಲೆ ಅಂತಹ ಟೀಕೆಗಳನ್ನು ಕೇವಲ ನ್ಯಾಯಾಂಗ ಕ್ಷೇತ್ರದ ಪಂಡಿತರು ಮತ್ತು ಮಾಧ್ಯಮ ಕ್ಷೇತ್ರದವರು ಮಾತ್ರವಲ್ಲದೆ ಹಲವು ಮಾಜಿ ನ್ಯಾಯಾಧೀಶರೂ ಕೂಡ ಮಾಡಿದ್ದಾರೆ ಎಂಬುದನ್ನು ಗಮನಿಸಿದ ಮೇಲೆ ಸುಪ್ರೀಂ ಕೋರ್ಟ್ ನಿರ್ಧಾರ ಅಚ್ಚರಿಯುಂಟುಮಾಡುತ್ತದೆ.

ಇದನ್ನೂ ಓದಿ: ಸುಪ್ರೀಂಕೋರ್ಟಿನಲ್ಲಿ ಪ್ರಶಾಂತ್ ಭೂಷಣ್ ಅವರ ಐತಿಹಾಸಿಕ ಹೇಳಿಕೆಯ ಪೂರ್ಣಪಾಠ

ಇಂಥ ಗಂಭೀರವಲ್ಲದ ಸಂಗತಿಗಳಿಗೆ ಕೋರ್ಟು ಅತಿ ಸೂಕ್ಷ್ಮತೆಯಿಂದ ಅಸಮಾಧಾನಗೊಂಡಂತೆ ಪ್ರತಿಕ್ರಿಯಿಸುತ್ತಿರುವುದು, ನ್ಯಾಯಾಂಗನಿಂದನೆ ಅಧಿಕಾರವನ್ನು ಸೀಮಿತವಾಗಿ ಪರಿಗಣಿಸುವ ಕೋರ್ಟುಗಳಿರುವ ಜಗತ್ತಿನ ಇತರೆ ಪ್ರಜಾಪ್ರಭುತ್ವ ವ್ಯವಸ್ಥೆಗಳ ಜೊತೆಗೆ ಹೊಂದಾಣಿಕೆಯಾಗುವುದಿಲ್ಲ.

ಮತ್ತೊಂದು ಟ್ವೀಟ್

ಇಂಗ್ಲೆಂಡಿನ ಲಾರ್ಡ್ ಡೆನ್ನಿಂಗ್ ಅವರ ಮಾತುಗಳು ಹೀಗಿವೆ: ‘ನ್ಯಾಯಾಂಗನಿಂದನೆ ಕಾನೂನಿನ ವ್ಯಾಪ್ತಿಯನ್ನು ನಮ್ಮ ಸ್ವಂತ ಘನತೆಯನ್ನು ಎತ್ತಿಹಿಡಿಯಲು ಎಂದಿಗೂ ಬಳಸುವುದಿಲ್ಲ. ನಮ್ಮ ವಿರುದ್ಧ ಮಾತನಾಡುವವರ ದನಿ ಅಡಗಿಸಲೂ ಬಳಸುವುದಿಲ್ಲ. ನಾವು ಟೀಕೆ ಟಿಪ್ಪಣಿಗಳಿಗೆ ಹೆದರಬೇಕಿಲ್ಲ, ಅಸಮಾಧಾನಗೊಳ್ಳಬೇಕಿಲ್ಲ.

ಅದಕ್ಕಿಂತಲೂ ಮಹತ್ವದ ಸಂಗತಿ ಅಪಾಯದಲ್ಲಿದೆ. ಅಭಿವ್ಯಕ್ತಿ ಸ್ವಾತಂತ್ಯ್ರ ಎನ್ನುವುದು ಪ್ರತಿಯೊಬ್ಬ ಮನುಷ್ಯನ ಹಕ್ಕಾಗಿದೆ. ಶಾಸನಸಭೆಯ ಒಳಗಿರಲಿ, ಹೊರಗಿರಲಿ. ಪತ್ರಿಕೆಯಲ್ಲಾಗಲಿ, ರೇಡಿಯೋ ಪ್ರಸಾರದಲ್ಲಾಗಲಿ ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ ಸಂಗತಿಗಳಲ್ಲಿ, ಅದು ಆವೇಶಭರಿತ ಪ್ರತಿಕ್ರಿಯೆಯೇ ಆಗಿದ್ದರೂ, ನ್ಯಾಯಸಮ್ಮತ ಅಭಿವ್ಯಕ್ತಿ ಮುಕ್ತವಾಗಿರಬೇಕು’.

ಇದನ್ನೂಓದಿ: ಅಪರಾಧದ ಮರುವ್ಯಾಖ್ಯಾನ; ಪ್ರಭುತ್ವ, ಪ್ರತಿರೋಧ ಮತ್ತು ಪ್ರಜಾಪ್ರಭುತ್ವ

ಅಮೆರಿಕದಲ್ಲಿ “ನ್ಯಾಯಾಲಯ ತೇಜೋವಧೆ” ಅಪರಾಧವನ್ನು ಹಲವು ದಶಕಗಳಿಂದ ಸೀಮಿತಗೊಳಿಸಲಾಗಿದೆ. ನಿಂದನೆ ಪ್ರಕರಣವನ್ನು ಆರೋಪಿಸಬೇಕು ಎಂದಿದ್ದರೆ, ಆರೋಪಿ ಪ್ರಕಟಣೆ ನ್ಯಾಯಾಂಗ ವ್ಯವಸ್ಥೆಗೆ ‘ಕ್ಲಿಯರ್ ಆ್ಯಂಡ್ ಪ್ರೆಸೆಂಟ್ ಡೇಂಜರ್’ (ಸ್ಪಷ್ಟ ಅಪಾಯ) ಸೃಷ್ಟಿಸಬೇಕು ಎಂದು ಹಲವು ಸರಣಿ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.

ಕೆನಡಾದ ಆರ್.ವಿ. ಕ್ಯೊಟೊ ಪ್ರಕರಣದಲ್ಲಿ ವಕೀಲರೊಬ್ಬರು ಕೋರ್ಟಿನ ತೀರ್ಪಿನ ಕುರಿತು ‘ಇದು ನ್ಯಾಯದ ವ್ಯಂಗ್ಯ ಮಾತ್ರವಲ್ಲ ಗಬ್ಬುನಾರುತ್ತಿದೆ’ ಎಂದಾಗ ಕೋರ್ಟ್ ಹೇಳಿದ್ದು ಹೀಗೆ: ‘ಈ ಟೀಕೆಯಲ್ಲಿ ಹಲವು ನಿಜವಾಗಿದ್ದಿರಬಹದು, ಕೆಲವು ಸುಧಾರಣೆಗೆ ಅಳವಡಿಸಿಕೊಳ್ಳಲು ತಕ್ಕನಾಗಿಯೂ ಇರಬಹುದು. ಆದರೆ ವಿವಾದದ ಧಗೆಯಲ್ಲಿ ಮುದುಡಿಹೋಗುವ ಹೂವಿನ ದಳಗಳಲ್ಲ ಕೋರ್ಟುಗಳು’ ಎಂದಿದ್ದರು.

ಆಸ್ಟ್ರೇಲಿಯಾದ ಕಾನೂನು ಆಯೋಗವು ನ್ಯಾಯಾಂಗ ನಿಂದನೆ ಕಾನೂನಿನ ಕುರಿತು ತನ್ನ ತಕರಾರನ್ನು ಹೀಗೆ ದಾಖಲಿಸಿದೆ. ‘ಈ ಅಪರಾಧಕ್ಕೆ ನೀಡುವ ಕಾರಣ ನ್ಯಾಯಾಂಗ ವ್ಯವಸ್ಥೆ ಬಗೆಗಿನ ಪ್ರಜೆಗಳ ವಿಶ್ವಾಸವನ್ನು ಕುಗ್ಗಿಸುತ್ತದೆ ಎಂಬುದು. ಇದು ತೀರ ಊಹಾತ್ಮಕ ಮತ್ತು ಅಭಿವ್ಯಕ್ತಿ ಸ್ವಾತಂತ್ರ‍್ಯವನ್ನು ದಮನ ಮಾಡಲು ಅಸ್ಪಷ್ಟ ಷರತ್ತುಗಳನ್ನು ಇದು ಹೇರುತ್ತದೆ ಎಂದು ಕೂಡ ಕೆಲವರು ಹೇಳಬಹುದು’ ಎಂದಿತ್ತು.

ಇವೆಲ್ಲವಕ್ಕೆ ತದ್ವಿರುದ್ಧವಾಗಿ ಹಿಂದೆ ವಸಾಹತುಗಳಾಗಿದ್ದ ದೇಶಗಳಲ್ಲಿ ಇನ್ನೂ ನ್ಯಾಯಾಂಗನಿಂದನೆಯ ಕಾನೂನನ್ನು ಜೀವಂತವಿಡಲಾಗಿದೆ. 19 ನೇ ಶತಮಾನದ ಮ್ಯಾಕ್ಲಿಯೋಡ್ ವರ್ಸಸ್ ಸೇಂಟ್ ಔಬ್ಯನ್ ಪ್ರಕರಣದಲ್ಲಿ ಪ್ರಿವಿ ಕೌನ್ಸಿಲ್ ವಾದಿಸಿದ್ದು ಏನೆಂದರೆ ‘ನ್ಯಾಯಾಲಯಗಳನ್ನು ತೇಜೋವಧೆಗೊಳಿಸಿ ನ್ಯಾಯಾಂಗನಿಂದನೆ ಮಾಡುವ ಕಾನೂನುಗಳೇ ಈ ದೇಶದಲ್ಲಿ ಈಗ ನಿರುಪಯೋಗ’ ….

‘ಆದರೆ ಈ ಕಾನೂನನ್ನು ಬಿಳಿಯರಲ್ಲದ ಜನರಿರುವ ಸಣ್ಣ ವಸಾಹತುಗಳಲ್ಲಿ ಪರಿಗಣಿಸಬಹುದು. ಅಲ್ಲಿ ನಮ್ಮ ಕೋರ್ಟು ಕಾನೂನು ಪದ್ಧತಿಯನ್ನು ಮತ್ತು ನ್ಯಾಯಾಧೀಶರನ್ನು ಟೀಕಾಕಾರರಿಂದ ಸಂರಕ್ಷಿಸಿಕೊಳ್ಳಲು ನ್ಯಾಯಾಂಗನಿಂದನೆ ಕಾನೂನನ್ನು ಹೇರಬಹುದು’ ಎಂದು.

ಇದನ್ನೂ ಓದಿ: ತುರ್ತು ಪರಿಸ್ಥಿತಿಯ ವಿರುದ್ದ ಹೋರಾಡಿದ ಹೋರಾಟಗಾರ ಹಿರೇಮಠ್ ಅವರ ನೆನಪುಗಳಲ್ಲಿ ಪ್ರಶಾಂತ್ ಭೂಷಣ್ ಜನಪರ ಹೋರಾಟದ ದಿನಗಳು

ನ್ಯಾಯಾಲಯಗಳನ್ನು ಟೀಕೆ-ವಿಮರ್ಶೆಗಳಿಂದ ರಕ್ಷಿಸಲು ಇರುವ ವಸಾಹತುಶಾಹಿಯ ಪಳೆಯುಳಿಕೆ ಕಾನೂನು ಇದು ಮತ್ತು ನ್ಯಾಯಾಂಗನಿಂದನೆ ವ್ಯಾಪ್ತಿಯನ್ನು ಮುಂದುವರೆಸಿಕೊಂಡು ಬಂದಿದೆ. ನಮ್ಮ ಸಂವಿಧಾನದಲ್ಲಿ ಇಂದು ಭಾರತೀಯರಿಗೆ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ‍್ಯದ ರಕ್ಷಣೆ ಒದಗಿಸಿರುವ ಅದೇ ಸಂದರ್ಭದಲ್ಲಿ, ಅದೇ ಸಂವಿಧಾನದಲ್ಲಿ ಮಾನ್ಯವಾಗಿರುವ ನ್ಯಾಯಾಂಗನಿಂದನೆ ಅಧಿಕಾರವನ್ನು ಸೀಮಿತವಾಗಿ ಮತ್ತು ಅತ್ಯಂತ ಸಂಯಮದಿಂದ ಬಳಸಬೇಕಾಗಿದೆ.

ಪ್ರಶಾಂತ್ ಭೂಷಣ್ ಅವರು ತಮ್ಮ ಆ ಎರಡು ಟ್ವೀಟ್‌ಗಳ ಕುರಿತು ಸಲ್ಲಿಸಿರುವ ಪ್ರಮಾಣಪತ್ರದಲ್ಲಿ (ನ್ಯಾಯಾಲಯ ತನ್ನ ತೀರ್ಪಿನಲ್ಲಿ ಇದನ್ನು ಪರಿಗಣಿಸದೆ ಇರುವುದು ವಿಚಾರಣೆಯ
ಸರಿಯಾದ ಮಾರ್ಗವನ್ನು ಅನುಸರಿಸಲು ಸೋತಿದೆ) ಅತ್ಯಂತ ಎಚ್ಚರದಿಂದ ಮತ್ತು ವಿವರವಾಗಿ ಅವುಗಳನ್ನು ಸಮರ್ಥಿಸಿಕೊಂಡಿದ್ದಾಗಲೂ, ನ್ಯಾಯಾಲಯ ತನ್ನ ಸಾಂವಿಧಾನಿಕ ಕರ್ತವ್ಯ ನಿರ್ವಹಣೆಯಲ್ಲಿ ವಿಫಲವಾಗಿದೆ ಎಂದು ತೋರಿಸಿಕೊಟ್ಟಿದ್ದಾರೆ.

ನಾಗರಿಕರು ಇಂದು ಎಚ್ಚೆತ್ತುಕೊಳ್ಳಬೇಕು ಏಕೆಂದರೆ ದೇಶ ಮತ್ತೊಮ್ಮೆ ತುರ್ತು ಪರಿಸ್ಥಿತಿಯಂತ ಕಾಲಘಟ್ಟಕ್ಕೆ ತಳ್ಳಲ್ಪಟ್ಟರೆ, ಭೂಷಣ್ ಅವರೇ ಹೇಳುವಂತೆ ‘ಸಂವಿಧಾನ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ರಕ್ಷಿಸುವ ವಿಚಾರದಲ್ಲಿ ಅತ್ಯಂತ ಸುಶಿಕ್ಷಿತ ಮತ್ತು ಪ್ರಬುದ್ಧ ಜನರಿರುವ ಸಂಸ್ಥೆಗಳು ವಿಫಲವಾದವು ಆದರೆ ಅದೇ ಸಮಯದಲ್ಲಿ ಸಾಮಾನ್ಯ ನಾಗರಿಕರು ತಮ್ಮ ಸಂವಿಧಾನಾತ್ಮಕ ಹಕ್ಕುಗಳ ರಕ್ಷಣೆಗೆ ಹೋರಾಡಿದರು ಎಂಬುದನ್ನು ಚರಿತ್ರೆ ದಾಖಲಿಸುತ್ತದೆ’ ಎನ್ನುತ್ತಾರೆ.

~ಟಿ ಅರವಿಂದ್ ನಾರಾಯಣ್
ಲೇಖಕರು ಸಂವಿಧಾನ ತಜ್ಞರು,
ಪರ್ಯಾಯ ಕಾನೂನು ವೇದಿಕೆ (ಎಎಲ್‌ಎಫ್‌ನ) ಸ್ಥಾಪಕ ಸದಸ್ಯರು.

ಅನುವಾದ: ರೋಹಿತ್


ಮರೆಯಲೆ ಬಾರದ ಸುದ್ದಿಗಳಿವು; ವಿಡಿಯೋ ನೋಡಿ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...