Homeಮುಖಪುಟಭಾರತದ ಇಂದಿನ ಪರಿಸ್ಥಿತಿಗೆ ಕನ್ನಡಿಯಂತಿರುವ 'Z'

ಭಾರತದ ಇಂದಿನ ಪರಿಸ್ಥಿತಿಗೆ ಕನ್ನಡಿಯಂತಿರುವ ‘Z’

- Advertisement -
- Advertisement -

Z ಅಂದರೆ ಗ್ರೀಕ್ ಭಾಷೆಯಲ್ಲಿ ’ಅವನು ಜೀವಂತವಾಗಿದ್ದಾನೆ’ ಎಂದರ್ಥ. ಗ್ರೀಕ್‌ನಲ್ಲಿ ಈ ಅಕ್ಷರವನ್ನ ಪ್ರತಿಭಟನೆಯ ಪ್ರಮುಖ ಸ್ಲೋಗನ್ ಆಗಿ ಬಳಸಲಾಗುತ್ತದೆ. ನಮ್ಮಲ್ಲಿ ಭಗತ್ ಸಿಂಗ್‌ರಿಂದ ಹೆಚ್ಚು ಪ್ರಚಲಿತಕ್ಕೆ ಬಂದ ’ಇಂಕ್ವಿಲಾಬ್ ಜಿಂದಾಬಾದ್’ ಎಂಬ ಸ್ಲೋಗನ್ನಿಗೆ ಇದು ಅರ್ಥದಲ್ಲಿ ಮತ್ತು ಉದ್ದೇಶದಲ್ಲಿ ಹೆಚ್ಚು ಸಮೀಪದ್ದಾಗಿದೆ. ಸಾಮಾಜಿಕ ಚಳವಳಿಗಳ ಜತೆಗೆ ಗುರುತಿಸಿಕೊಂಡಿದ್ದ, ಸಮುದಾಯ ರಂಗತಂಡದ ಸದಸ್ಯರಾಗಿದ್ದ ನಿವೃತ್ತ ಪ್ರಾಧ್ಯಾಪಕ ಎಚ್ ವಿ ವೇಣುಗೋಪಾಲ್ (ಜೂನ್ 24ರಂದು ಅವರು ನಮ್ಮನ್ನಗಲಿದರು) ಅವರು ಗ್ರೀಕ್‌ನ ಖ್ಯಾತ ಸಿನಿಮಾ ನಿರ್ದೇಶಕ ಕೊಸ್ಟ ಗವ್ರಾಸ್‌ನ ನೋಡಲೇಬೇಕಾದ ನಾಲ್ಕು ಸಿನಿಮಾಗಳನ್ನು ಪಟ್ಟಿ ಮಾಡುವಿರಾ ಎಂದಾಗ ನನಗೆ ತಟ್ಟನೆ ನೆನಪಾಗಿದ್ದು ಇವರ 1969ರ ಸಿನಿಮಾ ’Z’.

’Z’ ಸಿನಿಮಾವನ್ನು ನಾನು ನೋಡಿದ ಕಾಲಕ್ಕೆ, ನಮ್ಮದೇ ಪರಿಸ್ಥಿತಿಗೆ ನಿರ್ದಿಷ್ಟವಾಗಿ ರಿಲೇಟ್ ಮಾಡಿಕೊಳ್ಳಲು ಸಾಧ್ಯವಾಗಿಲ್ಲವಾಗಿದ್ದರೂ, ನಮ್ಮನ್ನಾಳುವ ಪ್ರಭುತ್ವ ಸಾಮಾನ್ಯವಾಗಿ ಜನಪರ ಧ್ವನಿಗಳನ್ನು ಮತ್ತು ಪ್ರತಿರೋಧ-ಪ್ರತಿಭಟನೆಗಳನ್ನು ಹೇಗೆ ಹತ್ತಿಕ್ಕುತ್ತವೆ ಎಂಬುದನ್ನು ಮನಗಾಣಿಸಿತ್ತು. ಆದರೆ, ಕಳೆದ ನಾಲ್ಕೈದು ವರ್ಷಗಳಲ್ಲಿ ಈ ದೇಶದಲ್ಲಿ ಜನಪರ ಚಳವಳಿ, ಪ್ರತಿಭಟನೆ, ಪ್ರತಿರೋಧಗಳನ್ನು ಪ್ರಭುತ್ವ ಹತ್ತಿಕ್ಕಿದ್ದು, ಇದಕ್ಕೆ ಪೂರಕವಾಗಿ ಮೂಲಭೂತವಾದವನ್ನು ತನ್ನ ಕಾರ್ಯಸಾಧನೆಗೆ ಬಳಸಿಕೊಂಡಿದ್ದು, ಅಲ್ಪಸಂಖ್ಯಾತ ಜನಪರ ದನಿಗಳನ್ನು ಸುಳ್ಳು ಪ್ರಕರಣದಲ್ಲಿ ಸಿಕ್ಕಿಸಿ ಜೈಲು ಪಾಲಾಗುವಂತೆ ಮಾಡಿದ್ದು- ಇವೆಲ್ಲವೂ ಕೊಸ್ಟ ಗವ್ರಾಸ್‌ನ ’Z’ ಸಿನಿಮಾದ ನಡೆಯುವ ಘಟನೆಗಳ ಪ್ರತಿಬಿಂಬದಂತೆ ಕಂಡವು.

’Z’ (1969): ’Z’ ಸಿನಿಮಾ ಗ್ರೀಕ್‌ನ ಲೇಖಕ ಮತ್ತು ರಾಜತಾಂತ್ರಿಕ ವಸ್ಸಿಲಿಸ್ ವಸ್ಸಿಲಿಕೊಸ್ 1966ರಲ್ಲಿ ಬರೆದ ಇದೇ ಹೆಸರಿನ ಕಾದಂಬರಿ ಆಧರಿಸಿದ್ದು. ಗ್ರೀಕ್‌ನ ರಾಜಕಾರಣಿ ಮತ್ತು ಯುದ್ಧ ವಿರೋಧಿ ಗ್ರಿಗೋರಿಸ್ ಲ್ಯಾಂಬ್ರಾಕಿಸ್‌ನನ್ನು ಅಂದು ಅಧಿಕಾರದಲ್ಲಿದ್ದ Regime of the Colonels ಎಂಬ ಬಲಪಂಥೀಯ ಮಿಲಿಟರಿ ಪಕ್ಷ, ಪೊಲೀಸ್ ಹಾಗೂ ತನ್ನ ಬಲಫಂಥೀಯ ಸಂಘಟನೆಯ ಗೂಂಡಾಗಳನ್ನು ಬಳಸಿಕೊಂಡು ಹೇಗೆ ಹತ್ಯೆಗೈಯ್ಯಲಾಯಿತು ಎಂಬುದನ್ನು ವಿವರವಾಗಿ ಪ್ರಸ್ತುತಪಡಿಸುತ್ತದೆ.

ಕೊಸ್ಟ ಗವ್ರಾಸ್‌

ಸಿನಿಮಾ ಪ್ರಾರಂಭದ ದೃಶ್ಯ, ಕೃಷಿ ಸಂಬಂಧಿತ ಒಂದು ಕಾರ್ಯಕ್ರಮ; ಮಿಲಿಟರಿ ಸರ್ಕಾರದ ಭಾಗವಾಗಿದ್ದ ಪೊಲೀಸ್ ಚೀಫ್ ತನ್ನ ಭಾಷಣದಲ್ಲಿ ಹೀಗೆ ಹೇಳುತ್ತಾನೆ: ’ಹೇಗೆ ಬೆಳೆಗಳಿಗೆ ಫಂಗಸ್ ತಗುಲಿ ಅದು ಇಡೀ ಬೆಳೆಯನ್ನೇ ನಾಶ ಮಾಡುತ್ತದೆಯೊ, ಈ ಐಡಿಯಾಲಜಿ ಎಂಬುದು ಕೂಡ ಒಂದು ರೀತಿಯ ಫಂಗಸ್ ಅಥವಾ ವೈರಸ್, ಇಸಮ್ ಎಂಬುದು ನಮ್ಮ ಆಂತರಿಕ ಭದ್ರತೆಗೆ ಮಾರಕವಾದದ್ದು. ಇದನ್ನು ಪ್ರಾರಂಭಿಕ ಹಂತದಲ್ಲೇ ನಾಶ ಮಾಡಬೇಕು ಮತ್ತು ಹೆಚ್ಚು ಹರಡದ ಹಾಗೆ ಮುಂಜಾಗ್ರತೆಯನ್ನು ವಹಿಸಬೇಕು. ಇದನ್ನು ಎರಡು ಹಂತಗಳಲ್ಲಿ ಮಾಡಬಹುದು; ಒಂದು ಶಾಲಾ ಹಂತದಲ್ಲಿ ಮತ್ತೊಂದು ಕಾಲೇಜು ಹಂತದಲ್ಲಿ. ಆಂತರಿಕ ಭದ್ರತೆಗೆ ಯುದ್ಧ ಅನಿವಾರ್ಯ’ ಈ ಮಾತುಗಳು ಈ ಬಲಪಂಥೀಯ ಸಿದ್ಧಾಂತದ ಆಲೋಚನೆ ಯಾವ ಮಾದರಿಯದ್ದು ಎಂಬುದಕ್ಕೆ ನಿದರ್ಶನವಾಗಿ ಕಾಣುತ್ತದೆ.

ಅಣು ಶಸ್ತ್ರಾಸ್ತ್ರಗಳನ್ನು ಹೊಂದುವ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಗ್ರಿಗೋರಿಸ್ ಲ್ಯಾಂಬ್ರಾಕಿಸ್ ಮಾಡಬೇಕಾದ ಭಾಷಣಕ್ಕಾಗಿ ಅಲ್ಲಿನ ವಿರೋಧ ಪಕ್ಷ ಮತ್ತು ಎಡಪಂಥೀಯ ಸಂಘಟನೆಗಳು ಕಾರ್ಯಕ್ರಮವೊಂದನ್ನು ಆಯೋಜಿಸುತ್ತಿರುತ್ತವೆ. ಆದರೆ ಅಲ್ಲಿನ ಸರ್ಕಾರ ತನ್ನ ಪ್ರಭಾವ ಬಳಸಿ ಆ ಕಾರ್ಯಕ್ರಮಕ್ಕೆ ಸಭಾಂಗಣ ಸಿಗದ ರೀತಿ ಮಾಡುತ್ತದೆ. ಕಾರ್ಯಕ್ರಮಕ್ಕೆ ಅನುಮತಿಯನ್ನು ನೀಡಲು ನಿರಾಕರಿಸುತ್ತದೆ. ಹೇಗಾದರೂ ಸರಿ, ಈ ಕಾರ್ಯಕ್ರಮ ಮಾಡಿಯೇ ತೀರಬೇಕು ಎಂದು ನಿರ್ಧರಿಸಿದಾಗ, ಗ್ರಿಗೋರಿಸ್‌ನ ಜೀವಕ್ಕೆ ಅಪಾಯವಿದೆ ಎಂಬ ಸುಳಿವು ಸಿಗುತ್ತದೆ. ಕಾರ್ಯಕ್ರಮ ರದ್ದುಮಾಡಲು ಆಯೋಜನೆಯ ಕೆಲವು ಸದಸ್ಯರು ಸೂಚಿಸಿದಾಗ ಗ್ರಿಗೋರಿಸ್ ನಿರಾಕರಿಸುತ್ತಾನೆ.

ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಉದ್ವಿಗ್ನತೆಯ ವಾತಾವರಣವಿದೆ; ಒಂದು ಕಡೆ ಗ್ರಿಗೋರಿಸ್ ಭಾಷಣವನ್ನು ವಿರೋಧಿಸುವ ಜನಸಮೂಹ, ಮತ್ತೊಂದು ಕಡೆ ಕಾರ್ಯಕ್ರಮ ಬೆಂಬಲಿಸಿ ಬಂದ ಜನಸಮೂಹ, ಇನ್ನೊಂದೆಡೆ ಪೊಲೀಸ್ ಸಿಬ್ಬಂದಿ. ಗ್ರಿಗೋರಿಸ್ ಭಾಷಣವನ್ನು ವಿರೋಧಿಸಿ ಬಂದ ಜನಸಮೂಹ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದವರನ್ನು ಮತ್ತು ಆಯೋಜಕರನ್ನು ಹೀಯಾಳಿಸುವುದು, ಎಳೆದಾಡುವುದನ್ನು ಮಾಡುವುದರ ಮುಖಾಂತರ ಅವರನ್ನು ಉದ್ರೇಕಿಸುತ್ತಿದ್ದಾರೆ. ಪೊಲೀಸರು ಮಾತ್ರ ಪರಿಸ್ಥಿಯನ್ನು ನಿಯಂತ್ರಿಸದೆ ನಿರ್ಲಿಪ್ತರಾಗಿದ್ದಾರೆ; ಇದನ್ನೆಲ್ಲ ಧಿಕ್ಕರಿಸಿ ಭಾಷಣ ಮಾಡಲು ತೆರಳುತ್ತಿದ್ದ ಗ್ರಿಗೋರಿಸ್‌ನ ಮೇಲೆ ಹಲ್ಲೆ ಮಾಡಲಾಗುತ್ತದೆ. ಆಗಲೂ ಪೊಲೀಸರು ಹಲ್ಲೆ ಮಾಡುತ್ತಿದ್ದವರನ್ನು ತಡೆಯುವುದಿಲ್ಲ. ಗ್ರಿಗೊರಿಸ್ ಭಾಷಣ ಮಾಡುತ್ತಿದ್ದಾಗಲೇ ಹೊರಗಡೆ ಕಾರ್ಯಕ್ರಮದ ಅಯೋಜಕರನೇಕರ ಮೇಲೆ ಹಲ್ಲೆ ಮಾಡಲಾಗುತ್ತದೆ. ಗ್ರಿಗೋರಿಸ್ ಎಂದು ತಿಳಿದು ಬೇರೊಬ್ಬನನ್ನು ಎಳೆದೊಯ್ದು ಸಾಯುವ ರೀತಿ ಹೊಡೆಯಲಾಗುತ್ತದೆ. ಭಾಷಣ ಮುಗಿಸಿ ಹೊರಬರುವ ಗ್ರಿಗೋರಿಸ್ ದೂರು ಹೇಳಲು ಪೊಲೀಸ್ ಮುಖ್ಯಸ್ಥನನ್ನು ಕೂಗಿ, ಅವನ ಬಳಿ ಹೋಗುತ್ತಿದ್ದಾಗಲೆ, ಅವನ ಕಡೆಗೆ ವೇಗವಾಗಿ ನುಗ್ಗುವ ಗೂಡ್ಸ್ ಆಟೋದಲ್ಲಿದ್ದ ಒಬ್ಬ ವ್ಯಕ್ತಿ ಗ್ರಿಗೋರಿಸ್ ತಲೆಗೆ ಬಲವಾಗಿ ಬಡಿದು ಪರಾರಿಯಾಗುತ್ತಾನೆ.

ಗ್ರಿಗೋರಿಸ್‌ಗೆ ಬಿದ್ದ ಪೆಟ್ಟಿನಿಂದ ಅವನ ಮೆದುಳು ತೀವ್ರವಾಗಿ ಗಾಯಗೊಂಡಿರುತ್ತದೆ. ಚಿಕಿತ್ಸೆ ಫಲಕಾರಿಯಾಗದೆ ಮರಣ ಹೊಂದುತ್ತಾನೆ. ಪೊಲೀಸರು ಅದೊಂದು ಆಕ್ಸಿಡೆಂಟ್ ಎಂದು ಬಿಂಬಿಸಿ ವರದಿ ತಯಾರು ಮಾಡುತ್ತಿರುತ್ತಾರೆ. ಆದರೆ, ಪೊಲೀಸ್‌ನವರಿಗೆ ಆಸ್ಪತ್ರೆ ವರದಿಯನ್ನು ತಿರುಚುವುದಕ್ಕಾಗಲಿ ಹಾಗು ಈ ಪ್ರಕರಣವನ್ನು ತನಿಖೆ ನಡೆಸುವ ನಿಷ್ಪಕ್ಷಪಾತಿಯಾದ ನ್ಯಾಯಾಧೀಶ ಕ್ರಿಸ್ಟೋಸ್ ಸರ್ಟ್ಝೆಟಕಿಸ್‌ನನ್ನು ದಾರಿ ತಪ್ಪಿಸುವುದಕ್ಕಾಗಲಿ ಸಾಧ್ಯವಾಗುವುದಿಲ್ಲ. ಮುಂದಿನ ಅರ್ಧ ಸಿನಿಮಾ ಗ್ರಿಗೋರಿಸ್ ಕೊಲೆಯ ಹಿಂದಿನ ಸಂಚನ್ನು ಯಾರ ಒತ್ತಡ ಅಥವಾ ಬೆದರಿಕೆಗೂ ಜಗ್ಗದ ನ್ಯಾಯಾಧೀಶ ಕ್ರಿಸ್ಟೋಸ್ ಬಯಲು ಮಾಡುವ ವೃತ್ತಾಂತ. ಇದು ಸಾಧ್ಯವಾಗುವುದು ಮಾತ್ರ ಫೋಟೊ ಜರ್ನಲಿಸ್ಟ್ ಗಿಯೊರ್ಗೊಸ್ ಬರ್ಟ್ಸೊಸ್‌ನ ಧೈರ್ಯವಂತಿಕೆಯಿಂದ.

ಅಂದು ಗ್ರಿಗೋರಿಸ್ ಕಾರ್ಯಕ್ರಮದ ಆಯೋಜಕರು ಮತ್ತು ಗ್ರಿಗೋರಿಸ್ ಮೇಲೆ ಹಲ್ಲೆ ಮಾಡಿದವರ ಗುರುತುಗಳನ್ನು ಬೆನ್ನಟ್ಟಿ ಹೋದಾಗ ಫೋಟೊ ಜರ್ನಲಿಸ್ಟ್ ಗಿಯೊರ್ಗೊಸ್ ಮತ್ತು ನ್ಯಾಯಾಧೀಶ ಕ್ರಿಸ್ಟೋಸ್‌ಗೆ ತಿಳಿಯುವುದು ಅವರೆಲ್ಲಾ ಒಂದೇ ಮೂಲಕ್ಕೆ ಸೇರಿದವರೆಂದು. ಇವರೆಲ್ಲರೂ ಬಲಪಂಥ ಅಲೋಚನೆಗಳನ್ನು ಪ್ರತಿಪಾದಿಸುತ್ತಿದ್ದ ಸಂಘಟನೆಯವರೇ ಆಗಿರುತ್ತಾರೆ. ಇವರನ್ನು ಗ್ರಿಗೋರಿಸ್ ಹತ್ಯೆಗೆ ನೇಮಿಸುವುದು ಅಂದಿನ ಸರ್ಕಾರದ ಭಾಗವಾಗಿದ್ದ ಪೊಲೀಸ್ ಮುಖ್ಯಸ್ಥ.

ಸಿನಿಮಾ ಒಂದರ ಘಟನೆಯನ್ನಾಗಲಿ ಅಥವಾ ಕಥೆಯನ್ನಾಗಲಿ ಇಷ್ಟು ವಿವರವಾಗಿ ಹೇಳುವುದು ಸಾಧುವಲ್ಲ. ಹೀಗೆ ಹೇಳುವುದಕ್ಕೆ ಕಾರಣ: ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ನಡೆಯುತ್ತಿರುವ ಕರಾಳ ಘಟನೆಗಳು ಮತ್ತು ಅದರ ಹಿಂದಿರುವ ಸಂಚನ್ನು ಯಾವ ಉತ್ಪ್ರೇಕ್ಷೆಯೂ ಇಲ್ಲದೆ ’Z’ ಸಿನಿಮಾಗೆ ಸಮೀಕರಿಸಿಕೊಂಡು ನೋಡಬಹುದಾಗಿರುವುದರಿಂದ. ಈ ರೀತಿಯ ಸಂಚಿನ ಬಗ್ಗೆ ಎರಡು ದಶಕಗಳ ಹಿಂದೆಯೇ ಭಾರತದ ಪಶ್ಚಿಮ ರಾಜ್ಯವೊಂದರಲ್ಲಿ ಮುಸ್ಲಿಂ ಸಮುದಾಯದ ಮೇಲೆ ನಡೆಸಲಾದ ಜನಾಂಗೀಯ ದೌರ್ಜನ್ಯದಿಂದದನೇ ತಿಳಿದಿತ್ತಾದರೂ, ಅದು ಸಂಖ್ಯೆಯಲ್ಲಿ ಈ ದಿನ ಕಾಣಿಸಿಕೊಳ್ಳುತ್ತಿರುವ ಮಟ್ಟಕ್ಕೆ ಅಥವಾ ವಿಸ್ತಾರದಲ್ಲಿ ಇಡೀ ದೇಶವನ್ನೆ ಆವರಿಸಿರುವ ಮಟ್ಟಕ್ಕೆ ಇರಲಿಲ್ಲವೇನೋ! ಈಗ ಇದು ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧದ ಸಂಚಾಗಿ ಮಾತ್ರ ಉಳಿಯದೆ, ಈ ದೇಶದ ಎಲ್ಲಾ ಹಿಂದುಳಿದ ಸಮುದಾಯಗಳ ವಿರುದ್ಧ ತಿರುಗಿ ತನ್ನ ಕಬಂಧ ಬಾಹುಗಳನ್ನು ಚಾಚಿದೆ.

ಭೀಮಾ ಕೋರೆಗಾಂವ್ ಘಟನೆ ಆದಿಯಾಗಿ, ಕೊರೊನಾ ಸಮಯದಲ್ಲಿ ತಬ್ಲಿಗಿ ಜಮಾತ್ ವಿರುದ್ಧ ಮಾಡಿದ ನಕಲಿ ಆರೋಪಗಳು, ಕರಾಳ ಕೃಷಿ ಮಸೂದೆಗಳನ್ನು ಹಾಗು ನಾಗರಿಕ ತಿದ್ದುಪಡಿ ಕಾಯ್ದೆ ಜಾರಿಗೆ ತರಲು ಪ್ರಯತ್ನಿಸಿದ್ದು, ಕರ್ನಾಟಕದಲ್ಲಿ ಪಠ್ಯ ಪರಿಷ್ಕರಣೆ ಹೀಗೆ ಅಸಂಖ್ಯಾತ ಪ್ರಭುತ್ವದ ದಬ್ಬಾಳಿಕೆಗಳು, ಅವುಗಳ ವಿರುದ್ಧ ನಡೆದ ರೈತ ಹೋರಾಟ, ಮುಸ್ಲಿಂ ತಾಯಂದಿರು ಶಹೀನ್‌ಬಾಗ್‌ನಲ್ಲಿ ನಡೆಸಿದ ಚಳವಳಿ, ಕರ್ನಾಟಕದಲ್ಲಿ ನಡೆಯುತ್ತಿರುವ ಪಠ್ಯ ಪರಿಷ್ಕರಣೆ ಚಳವಳಿಗಳನ್ನು ಹತ್ತಿಕ್ಕುವ ಸಂಚುಗಳನ್ನು ಮಾಡಿದ್ದು ಇವೆಲ್ಲಾ ಸಿನಿಮಾದ ಘಟನೆಗಳಿಗೆ ರಿಲೇಟ್ ಆಗುತ್ತವೆ. ಹಿಂದೂ ಧಾರ್ಮಿಕ ಮೂಲಭೂತವಾದಿಗಳು ನಡೆಸುತ್ತಿರುವ ಭಯೋತ್ಪಾದನೆ ಕೃತ್ಯಗಳಿಗೆ ಪ್ರಭುತ್ವ ನಿರ್ಲಿಪ್ತವಾಗಿರುವುದು ಮತ್ತು ಬಹಳಷ್ಟು ಸಂದರ್ಭಗಳಲ್ಲಿ ಒಬ್ಬರಿಗೊಬ್ಬರು ಒತ್ತಾಸೆಯಾಗಿರುವುದು ಇವತ್ತು ಗೌಪ್ಯವಾಗಿಯೇನು ಉಳಿದಿಲ್ಲ.

1963ರ ಗ್ರೀಸ್‌ನಲ್ಲಿ ನಡೆದ ನೈಜ ಘಟನೆಯನ್ನು ಆಧರಿಸಿದ ’Z’ ಸಿನಿಮಾಗೆ ಹೋಲಿಕೆ ಮಾಡಿ ನೋಡಿದರೆ ಭಾರತದ್ದು ಇನ್ನೂ ಚಿಂತಾಜನಕ ಸ್ಥಿತಿ. ಈ ಸಿನಿಮಾದಲ್ಲಿ ಪ್ರಭುತ್ವದ ದಬ್ಬಾಳಿಕೆ ಮತ್ತು ರಾಜಕೀಯ ಒಳಸಂಚನ್ನು ಭೇದಿಸಿದ ಫೋಟೊ ಜರ್ನಲಿಸ್ಟ್ ಗಿಯೊರ್ಗೊಸ್ ಆವತ್ತಿನ ಪತ್ರಿಕೋದ್ಯಮದ ಪ್ರತಿನಿಧಿಯಾಗಿಯೂ ನ್ಯಾಯಾಧೀಶ ಕ್ರಿಸ್ಟೋಸ್ ಅಂದಿನ ನ್ಯಾಯಾಂಗದ ಪ್ರತಿನಿಧಿಯಾಗಿಯೂ ಆಶಾವಾದಿಯಾಗಿ ಕಾಣುತ್ತಾರೆ. ಇಲ್ಲಿ?

ಕೊಸ್ಟ ಗವ್ರಾಸ್

ಕೊಸ್ಟ ಗವ್ರಾಸ್ ಈಗ 89ರ ಹರೆಯ. Adults in the Room ಸಿನಿಮಾ ಮಾಡಿದಾಗ ಗವ್ರಾಸ್‌ಗೆ 86 ವರ್ಷ. ಬಹಳ ಜನಪ್ರಿಯ ಸಿನಿಮಾಗಳಿಗೆ ಕೊಡುವ ಆಸ್ಕರ್‌ನಿಂದ ಹಿಡಿದು, ವಸ್ತು ಮತ್ತು ಅದನ್ನು ಕಟ್ಟುವ ಕಲಾತ್ಮಕತೆಯನ್ನು ಗುರುತಿಸಿ ನೀಡುವ ಕಾನ್ ಸಿನಿಮೋತ್ಸವದ ಪಾಮ್ ಡಿ ಓರ್ ಪ್ರಶಸ್ತಿಗಳನ್ನು ಪಡೆದಿರುವುದು ಗವ್ರಾಸ್‌ನ ವಿಶೇಷತೆ. ಗವ್ರಾಸ್ ಬಹಳ ಮುಖ್ಯವಾಗಿ ಪೊಲಿಟಿಕಲ್ ಫಿಲಂಮೇಕರ್. ಇವನ ರಾಜಕೀಯ ಸಿನಿಮಾಗಳಿಂದ ಒಲಿವರ್ ಸ್ಟೋನ್, ವಿಲಿಯಂ ಫ್ರೈಡ್ಕಿನ್, ಸ್ಟೀವನ್ ಸೊಡೆರ್ಬರ್ಗ್ ಮುಂತಾದ ಸಿನಿಮಾ ನಿರ್ಮಾತೃಗಳು ಪ್ರಭಾವಿತರಾಗಿದ್ದಾರೆ. ಅದರಲ್ಲೂ ’Z’ ಕೊಸ್ಟ ಗವ್ರಾಸ್ ವೃತ್ತಿ ಜೀವನದ ಮೈಲಿಗಲ್ಲು. ಈ ಸಿನಿಮಾ ನೋಡಿದ ಓಲಿವರ್ ಸ್ಟೋನ್ ’ಕೊಸ್ಟ ಗವ್ರಾಸ್ ನನ್ನ ಪ್ರಾರಂಭ ದಿನಗಳ ಆದರ್ಶ ಪುರುಷ’ ಅಂತ ಹೇಳಿಕೊಂಡಿದ್ದಾರೆ. ವಿಲಿಯಂ ಫ್ರೈಡ್ಕಿನ್ ‘Z’ ನನ್ನ ಯಾವತ್ತಿನ ಅತಿ ಮೆಚ್ಚುಗೆಯ ಸಿನಿಮಾ’ ಎಂದಿದ್ದಾರೆ. ಸೊಡೆರ್ಬರ್ಗ್ ’ತನ್ನ Traffic ಸಿನಿಮಾಗೆ ’Z’ ಸ್ಪೂರ್ತಿ ಎಂದು ಸ್ಮರಿಸುತ್ತಾರೆ. ಇವನ 1970ರ The Confession, 1982ರ Missing, 2002 ಮತ್ತು 2019ರ Adults in The Room ನಾನು ನೋಡಿರುವ ಮತ್ತು ಎಲ್ಲರೂ ನೋಡಬೇಕೆಂದು ಬಯಸುವ ಸಿನಿಮಾಗಳು.


ಇದನ್ನೂ ಓದಿ: ಪಿಕೆ ಟಾಕೀಸ್: ಕ್ರಾಂತಿಕಾರಿ ಕೊಸ್ತಾರ ದಿಟ್ಟ ಪೊಲಿಟಿಕಲ್ ಸಿನಿಮಾಗಳು

ಇದನ್ನೂ ಓದಿ: ವಿಕ್ರಾಂತ್‌ ರೋಣ: ದಲಿತರನ್ನು ‘ಪಾತಕಿ’ಗಳಂತೆ ತೋರಿಸಿ ಸಾಧಿಸಿದ್ದೇನು?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಬಿಎಂಪಿ ಆಸ್ತಿ ತೆರಿಗೆ ತಿದ್ದುಪಡಿ ವಿಧೇಯಕ ಅಂಗೀಕಾರ: ತೆರಿಗೆ ಬಾಕಿ ಮೇಲಿನ ದಂಡ ಶೇ....

0
ಬಿಬಿಎಂಪಿ ವ್ಯಾಪ್ತಿಯಲ್ಲಿ ಬಾಕಿ ಉಳಿಸಿಕೊಂಡಿರುವ ಆಸ್ತಿ ತೆರಿಗೆ ಮೇಲಿನ ದಂಡದ ಪ್ರಮಾಣ ಶೇಕಡ 50ರಷ್ಟು ಕಡಿತ ಸೇರಿದಂತೆ ತೆರಿಗೆದಾರರ ಸ್ನೇಹಿ ಬಿಬಿಎಂಪಿ (ತಿದ್ದುಪಡಿ) ವಿಧೇಯಕ 2024 ಅನ್ನು ವಿಧಾನಸಭೆಯಲ್ಲಿ ಬುಧವಾರ ಅಂಗೀಕರಿಸಲಾಗಿದೆ. ವಿಧಾನಸಭೆಯಲ್ಲಿ ಭೋಜನ...