Homeಮುಖಪುಟವಿಕ್ರಾಂತ್‌ ರೋಣ ಸಿನಿಮಾ ದಲಿತರನ್ನು ಚಿತ್ರಿಸಿರುವ ರೀತಿ ಅಪಾಯಕಾರಿ ಏಕೆ?

ವಿಕ್ರಾಂತ್‌ ರೋಣ ಸಿನಿಮಾ ದಲಿತರನ್ನು ಚಿತ್ರಿಸಿರುವ ರೀತಿ ಅಪಾಯಕಾರಿ ಏಕೆ?

- Advertisement -
- Advertisement -

‘ಸಿನಿಮಾವೊಂದು ಪ್ರಧಾನವಾಗಿ ಕಟ್ಟಿಕೊಡುವ ಕಥನ ಮಾತ್ರ ಮುಖ್ಯವೇ? ಮುಖ್ಯ ಕಥೆಯ ಜೊತೆಗೆ ಬೆಸೆಯುವ ಉಪಕಥೆಗಳು, ಕಟ್ಟುವ ಸನ್ನಿವೇಶಗಳು, ಸಂಭಾಷಣೆಯ ತುಣುಕುಗಳು ಕೂಡ ವೀಕ್ಷಕರ ಮೇಲೆ ಬೀರುವ ಪರಿಣಾಮಗಳನ್ನು ನಾವು ಗಂಭೀರವಾಗಿ ಚಿಂತಿಸಬಾರದೆ?’ ಎಂಬ ಪ್ರಶ್ನೆಯನ್ನು ನಾವು ಕೇಳಿಕೊಳ್ಳಬೇಕಾಗುತ್ತದೆ. ‘ಸಿನಿಮಾವನ್ನು ಸಿನಿಮಾವಾಗಿಯಷ್ಟೇ ನೋಡಬೇಕು’, ಅಂದರೆ ಮನರಂಜನೆಯ ದೃಷ್ಟಿಯಲ್ಲಿ ನೋಡಿ ಬಿಟ್ಟುಬಿಡಬೇಕು ಎಂದು ವಾದಿಸುವವರಿಗೆ ಸಿನಿಮಾವೊಂದು ಸಾಮಾಜಿಕ ಪರಿಸರದ ಮೇಲೆ ಬೀರುವ ಪರಿಣಾಮಗಳ ಅರಿವು ಇರುವುದಿಲ್ಲವೇ? ಎಂಬ ಪ್ರಶ್ನೆಯೂ ಅಷ್ಟೇ ಮುಖ್ಯವಾಗುತ್ತದೆ.

ಇತ್ತೀಚೆಗೆ ತೆಲುಗು, ತಮಿಳು, ಕನ್ನಡದಲ್ಲಿ ತೆರೆಕಂಡ ಸಾಯಿಪಲ್ಲವಿ ಅಭಿನಯದ ‘ಗಾರ್ಗಿ’ ಸಿನಿಮಾ ಗಂಭೀರ ಸಂಗತಿಯೊಂದರ ಕುರಿತು ಚರ್ಚಿಸಿತ್ತು. ಬಾಲಕಿಯೊಬ್ಬಳ ಮೇಲೆ ಆಗುವ ಅತ್ಯಾಚಾರದ ಕಥೆಯನ್ನು ಒಳಗೊಂಡ ‘ಗಾರ್ಗಿ’ ಎತ್ತುವ ಪ್ರಶ್ನೆಗಳು ವಿಚ್ಛಿದ್ರಕಾರಿಯಾಗಿವೆ ಎಂಬ ಆಕ್ಷೇಪವನ್ನು ವ್ಯಕ್ತಪಡಿಸುತ್ತಾರೆ ಸಿನಿಮಾ ವಿಮರ್ಶಕರಾದ ವಿ.ಎಲ್.ಬಾಲು. “ಅತ್ಯಾಚಾರ ಎಂಬ ಗಂಭೀರ ಸಂಗತಿಯ ಕುರಿತು ಇರುವ ಈ ಸಿನಿಮಾ ಸಾಯಿ ಪಲ್ಲವಿಯವರ ಪಾತ್ರವನ್ನು ವೈಭವೀಕರಿಸಲು ಮಾಡಿದಂತಿದೆ. ಬಾಲಕಿಯನ್ನು ಅತ್ಯಾಚಾರ ಮಾಡಿರುವವರಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿರುವ ಮುದುಕನೂ ಇದ್ದಾನೆ. ಇದು ಸಮಾಜದ ಮೇಲೆ ಯಾವ ಪರಿಣಾಮ ಬೀರುತ್ತದೆ? ಸೆಕ್ಯುರಿಟಿಗಳನ್ನೆಲ್ಲ ಅನುಮಾನದ ದೃಷ್ಟಿಯಲ್ಲಿ ನೋಡಲು ಗಾರ್ಗಿ ಪ್ರೇರೇಪಿಸುತ್ತದೆ” ಎನ್ನುತ್ತಾರೆ ಬಾಲು. “ಸೆಕ್ಯುರಿಟಿ ಗಾರ್ಡ್ ಬದಲು ಆ ಅತ್ಯಾಚಾರದ ಕಥೆ ಹೇಳಲು ಮೇಲ್ವರ್ಗದ ಪಾತ್ರವೊಂದನ್ನು ಸೃಷ್ಟಿಸಬಹುದಿತ್ತೆಲ್ಲಾ” ಎಂಬ ಪ್ರಶ್ನೆ ಕೇಳುತ್ತಾರೆ. ಕಿಚ್ಚ ಸುದೀಪ್‌ ಅಭಿನಯದ, ಅನೂಪ್ ಬಂಡಾರಿ ನಿರ್ದೇಶನದ ‘ವಿಕ್ರಾಂತ್ ರೋಣ’ ನೋಡಿದ ಬಳಿಕ, ಈ ಸಿನಿಮಾ ಅಂತಿಮವಾಗಿ ಅಪಾಯಕಾರಿ ಸಂಗತಿಯೊಂದನ್ನು ಪ್ರೇಕ್ಷಕರ ಮನದಲ್ಲಿ ನಾಟುತ್ತದೆಂಬ ಅನುಮಾನ ಸುಳಿಯುತ್ತದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಪತ್ತೆದಾರಿ ಸಿನಿಮಾವೊಂದು ರೋಚಕತೆಯ ಭರದಲ್ಲಿ ವಿಚ್ಛಿದ್ರಕಾರಿ ಸಂಗತಿಯೊಂದನ್ನು ಜನ ಸಮ್ಮತಿಸುವಂತೆ ನಿರೂಪಿಸಿರುವುದನ್ನು ಇಲ್ಲಿ ಗಮನಿಸಬಹುದು. ಈ ಹಿಂದೆ ವಿಮರ್ಶಕರೊಬ್ಬರು ಬರೆದದ್ದು ನೆನಪಾಗುತ್ತಿದೆ. ‘ಕಲೆಯ ಮೂಲಕ ಸಮಾಜವನ್ನು ವಂಚಿಸುವ ಪ್ರವೃತ್ತಿಯ ಕುರಿತು ಎಚ್ಚರಿಕೆ ವಹಿಸಬೇಕು. ಜನಪ್ರಿಯ ಸಿನಿಮಾವೊಂದು ಜನರನ್ನು ರಂಜಿಸುತ್ತಾ ಅಸ್ವೀಕೃತ ವಿಷಯವನ್ನು ಸ್ವಿಕೃತವಾಗಿಸುವ ಅಪಾಯವನ್ನು ಮರೆಯಬಾರದು’ ಎಂದು ಎಚ್ಚರಿಸಿದ್ದರು.

ಸಿನಿಮಾ ತಾಂತ್ರಿಕವಾಗಿ ಚೆನ್ನಾಗಿದೆ. ಎರಡೂವರೆ ಗಂಟೆ ಕತ್ತಲಲ್ಲಿ ಕೂತು ಬಂದ ಅನುಭವವಾಗುತ್ತದೆ. ಅಜನೀಶ್ ಅವರ ಹಿನ್ನೆಲೆ ಸಂಗೀತ ಗುಂಗು ಹಿಡಿಸುತ್ತದೆ. ಜಾಕ್ಲಿನ್‌ ಫರ್ನಾಂಡೀಸ್‌ ಡಾನ್ಸ್‌, ಕಿಚ್ಚ ಸುದೀಪ್‌, ನಿರೂಪ್‌ ಬಂಡಾರಿ ಮೊದಲಾದವರ ಅಭಿನಯವೂ ಇಷ್ಟವಾಗಬಹುದು. ಎಲ್ಲ ಪತ್ತೆದಾರಿ ಸಿನಿಮಾಗಳಂತೆ ಕೊನೆಯವರೆಗೂ ಸೆಸ್ಪೆನ್ಸ್‌ ಕಾಪಾಡಿಕೊಂಡು ಹೋಗುತ್ತದೆ. ಅಂತಿಮವಾಗಿ ಒಂದು ಟ್ವಿಸ್ಟ್‌ ಸಿಗುತ್ತದೆ. ಸುದೀಪ್‌ ಅವರ ಮಾಸ್ ಎಂಟ್ರಿ, ಫೈಟಿಂಗ್‌, ಡಾನ್ಸಿಂಗ್‌- ಹೀಗೆ ಎಲ್ಲ ಮಸಾಲ ಸಂಗತಿಗಳಿವೆ. ರಂಗಿತರಂಗದ ಪಾರ್ಟ್- 2 ನೋಡಿದಂತೆ ಭಾಸವಾಗುತ್ತದೆ. ಕೊಮರಟ್ಟು, ಭೂತ, ಬ್ರಹ್ಮರಾಕ್ಷಸ ಇತ್ಯಾದಿಗಳು ಇಲ್ಲಿಯೂ ಪುನರಾವರ್ತನೆಯಾಗುತ್ತವೆ.

ಇದನ್ನೂ ಓದಿರಿ: ‘ಮಾರಿ ಸೆಲ್ವರಾಜ್‌‌’ ಸಿನಿಮಾಗಳಲ್ಲಿನ ರೂಪಕಗಳ ಸುತ್ತ…

ಎಲ್ಲ ಕೊಲೆಯ ಹಿಂದೆಯೂ ಒಂದು ಪ್ರತಿಕಾರ ಇದ್ದೇ ಇರುತ್ತದೆ ಎಂಬುದು ಜನಪ್ರಿಯ ಮಾದರಿ. ‘ವಿಕ್ರಾಂತ್ ರೋಣ’ದಲ್ಲಿಯೂ ಸಾಕಷ್ಟು ಮಕ್ಕಳ ಕೊಲೆಗಳಾಗುತ್ತಿವೆ. ಎಲ್ಲ ಕೊಲೆಗಳಿಗೂ ಒಂದು ಕಾರಣವನ್ನು ಶೋಧಿಸುವುದು ಪತ್ತೆದಾರಿ ಕಥೆಗಳ ಆಯಾಮ. ಇಲ್ಲಿಯೂ ಅಂತಿಮವಾಗಿ ಆ ಸತ್ಯ ಹೊರಬೀಳುತ್ತದೆ. ಆಗುತ್ತಿರುವ ಮಕ್ಕಳ ಸರಣಿ ಕೊಲೆಗಳಿಗೆ ಸಿನಿಮಾ ನಿರ್ದೇಶಕ ಅನೂಪ್‌ ಬಂಡಾರಿ ಕಟ್ಟಿಕೊಡುವ ಕಾರಣ – ರಂಜನೆಯ ಮೂಲಕ ಅಸೂಕ್ಫ್ಮ ಸಂಗತಿಯೊಂದನ್ನು ಪ್ರೇಕ್ಷಕರ ಮನಸ್ಸಿಗೆ ತುರುಕುತ್ತಿರುವಂತೆ ಭಾಸವಾಗುತ್ತದೆ.

ಅಸ್ಪೃಶ್ಯ ಸಮುದಾಯದ ಮಕ್ಕಳ ವಿದ್ಯಾಭ್ಯಾಸಕ್ಕೆ, ಸಾಮಾಜಿಕ ಉನ್ನತೀಕರಣಕ್ಕೆ ತಡೆಯೊಡ್ಡುತ್ತಿರುವ ಜಾತಿಗ್ರಸ್ತ ಸಮಾಜ; ಕ್ರೈಸ್ತ ಶಿಕ್ಷಕನೊಬ್ಬ ಈ ಮಕ್ಕಳಿಗೆ ಶಿಕ್ಷಣ ನೀಡಲು ಮುಂದಾದಾಗ, ಈ ಅಸ್ಪೃಶ್ಯ ಸಮುದಾಯದ ಮಕ್ಕಳಿಗೆ ಕಿರುಕುಳ ನೀಡುವ ಸ್ಪೃಶ್ಯ ಜಾತಿಯ ಮಕ್ಕಳು; ಅಸ್ಪೃಶ್ಯ ವ್ಯಕ್ತಿ ನಿಟ್ಟಾನಿ ಕುಟುಂಬದ ಮೇಲೆ ಕಳ್ಳತನದ ಆರೋಪವನ್ನು ಹೊರಿಸಿ, ಬಲಾಢ್ಯರು ಹಿಂಸೆ ನೀಡುತ್ತಾರೆ. ಅವಮಾನ ತಾಳಲಾರೆ ಪೋಷಕರು ಸಾಯುತ್ತಾರೆ. ಇಬ್ಬರು ಸಹೋದರಿಯರು ಸಾವಿಗೀಡಾದದ್ದನ್ನು ಕಣ್ಣಾರೆ ಕಂಡ ಸಹೋದರರು ಬಲಾಢ್ಯರ ಮೇಲೆ ಪ್ರತಿಕಾರಕ್ಕೆ ಹಾತೊರೆಯುತ್ತಾರೆ. ಸುಮಾರು 25 ವರ್ಷಗಳ ಈ ಪಯಣದಲ್ಲಿ ಹಲವರನ್ನು ಕೊಲೆ ಮಾಡಲಾಗುತ್ತದೆ. ಸತ್ತವರಲ್ಲಿ ಬಹುತೇಕರು ಮಕ್ಕಳು. ಆ ದಾರಿಯಲ್ಲಿ ಬರುವ ಎಲ್ಲ ಮಕ್ಕಳನ್ನು ಕೊಲ್ಲುವುದು ಅವರ ಉದ್ದೇಶವಾಗುತ್ತದೆ. ‘ವಿಕ್ರಾಂತ್ ರೋಣ’ನ ಹೆಂಡತಿ ಮತ್ತು ಮಗು ಇದೇ ಮಾರ್ಗದಲ್ಲಿ ಸಾಗಿ ಬಂದಾಗ ಮಗು ಕೊಲೆಯಾಗುತ್ತದೆ. ಪೊಲೀಸ್ ಅಧಿಕಾರಿ ವಿಕ್ರಾಂತ್ ರೋಣ, ತನ್ನ ಮಗುವನ್ನು ಕೊಂದವರನ್ನು ಮುಗಿಸಲು ಕೊಮರಟ್ಟು ಗ್ರಾಮಕ್ಕೆ ಬರುತ್ತಾನೆ. ಸರಣಿ ಕೊಲೆಗಳ ಹಿಂದಿನ ಮರ್ಮವನ್ನು ಬೇಧಿಸಿ, ಮಕ್ಕಳನ್ನು ಕೊಲ್ಲುತ್ತಿರುವ ಈ ಇಬ್ಬರನ್ನೂ ಮುಗಿಸುವುದು ಕ್ಲೈಮ್ಯಾಕ್ಸ್‌. ಮಕ್ಕಳನ್ನು ಕೊಲ್ಲುತ್ತಿರುವವರು ‘ನಾಮರ್ಧರು’ ಎಂದು ವಿಕ್ರಾಂತ್ ರೋಣ ಮೂದಲಿಸುತ್ತಾನೆ. ಇಷ್ಟು ಕಥೆಯ ಸಾರ.

ಅನೂಪ್‌ ಬಂಡಾರಿಯವರು ಏನನ್ನು ಹೇಳಲು ಹೊರಟಿದ್ದಾರೆ? ಅಸ್ಪೃಶ್ಯ ಸಮುದಾಯದ ಕುರಿತು ನಿರ್ದೇಶಕನಿಗಿರುವ ಅಜಾಗರೂಕ ಮತ್ತು ಅಸೂಕ್ಷ್ಮ ಪೂರ್ವಾಗ್ರಹ ಇಲ್ಲಿ ಅನಾವರಣಗೊಳ್ಳುತ್ತದೆ. ಶ್ರೇಣಿಕೃತ ಜಾತಿಯಲ್ಲಿ ನೋವುಂಡ ಮತ್ತು ಶೋಷಣೆಗೆ ಒಳಗಾದ ಜನ ಯಾರನ್ನೂ ಹಿಂಸೆ ಮಾಡಿಲ್ಲ, ತಲೆ ಒಡೆದಿಲ್ಲ, ಪ್ರತಿಕಾರಕ್ಕಾಗಿ ಈ ನಮೂನೆಯ ರಕ್ತ ಹರಿಸಿಲ್ಲ; ಈ ಅಮಾಯಕರು ಮತ್ತೊಬ್ಬ ಅಮಾಯಕರನ್ನು ಕೊಂದಿಲ್ಲ.‌ ಶತಮಾನದಿಂದ ಶೋಷಣೆಗೆ ಒಳಗಾಗಿದ್ದರೂ ಸಮುದಾಯವಾಗಿ ಬುದ್ಧನ ಕಾರುಣ್ಯ, ಅಂಬೇಡ್ಕರ್ ಅವರು ಕಟ್ಟಿಕೊಟ್ಟ ಭ್ರಾತೃತ್ವವನ್ನು ಮೈಗೂಡಿಸಿಕೊಂಡ ಜನರಿವರು. ಅಂಥವರ ಮೇಲೆ ಕೊಲೆಪಾತಕದ ಕಥೆ ಕಟ್ಟಿ, ರೋಣ ಪಾತ್ರದಿಂದ ‘ನಾಮರ್ಧರು’ ಎಂದು ಜರಿಸಿದ ಕಥೆಗಾರ-ನಿರ್ದೇಶಕನ ಅಸೂಕ್ಷ್ಮತೆ ಕಸಿವಿಸಿಕೊಗೊಳಿಸುತ್ತದೆ.

ದಲಿತ ಪ್ರತಿರೋಧದ ಕತೆಗಳು- ಈ ರೀತಿಯ ಮಸಲಿತ್ತಿನದ್ದಾಗಿರುವುದಿಲ್ಲ. ದೌರ್ಜನ್ಯದ ವಿರುದ್ಧ ಸ್ಪೋಟಿಸುವ ಮಾದರಿಯದ್ದಾಗಿರುತ್ತದೆ. ಬಲಾಢ್ಯರನ್ನು ಅಸಹಾಯಕರನ್ನಾಗಿ, ಬಲಿಪಶುಗಳೆನ್ನುವಂತೆ ನೋಡುವುದೇ ಕ್ರೌರ್ಯ ಮತ್ತು ಶೋಷಕರ ಹುನ್ನಾರವೆನ್ನದೆ ಇರಲಾಗದು.

ಮತ್ತೊಂದು ಸಂಗತಿ…

ಸಸ್ಪೆನ್ಸ್‌, ಪತ್ತೆದಾರಿ ಕಥೆಗಳು ರೋಚಕತೆಯನ್ನು ಹೊಂದಿರುತ್ತವೆ. ಟ್ರಷರ್‌ ಹಂಟ್ ಅಥವಾ ಕೊಲೆಯೊಂದರ ಸುತ್ತ ಸಾಗುವ ಪತ್ತೆದಾರಿ ಕತೆಗಳು ಎಂದ ತಕ್ಷಣ ಅಲ್ಲಿ ಕತೆಗಾರನ, ನಿರ್ದೇಶಕನ ಬುದ್ಧಿಶಕ್ತಿ ಕೆಲಸ ಮಾಡಿರುತ್ತದೆ. ಯಾವುದೋ ಒಂದು ತನಿಖೆಯ ಹಿಂದೆ ಕತೆ ಓಡುತ್ತಿರುತ್ತದೆ. ಮೈ ಜುಮ್ಮೆನಿಸುವ ರೋಚಕ ಸಂಗತಿಗಳು-ಘಟನೆಗಳು ಕ್ಷಣಕ್ಷಣವೂ ಬಂದುಹೋಗುತ್ತಿರುತ್ತವೆ. ಯಾವುದೋ ಒಂದು ಸತ್ಯವನ್ನು ಪತ್ತೆಹಚ್ಚುವುದಕ್ಕೆ ಪ್ರಧಾನ ಪಾತ್ರವೊಂದು ಯತ್ನಿಸುತ್ತಿರುತ್ತದೆ. ಪ್ರೇಕ್ಷಕನ ಊಹೆಗಳನ್ನು ತಲೆಕೆಳಗುಮಾಡುತ್ತಾ ಕೊನೆಕ್ಷಣದವರೆಗೂ ಪ್ರೇಕ್ಷಕನನ್ನು ಹಿಡಿದಿಟ್ಟುಕೊಳ್ಳಬೇಕು. ಯಾಕೆಂದರೆ ಪ್ರೇಕ್ಷಕನ ತಲೆಯೊಳಗೊಬ್ಬ ಡಿಟೆಕ್ಟರ್ ಇದ್ದೇ ಇರುತ್ತಾನೆ. ನಿರ್ದೇಶಕನ ಇಡೀ ಶಕ್ತಿ ವ್ಯಯವಾಗುವುದು, ವ್ಯಯಿಸಬೇಕಾಗಿರುವುದು ಇಲ್ಲಿಯೇ. ದಲಿತ ಪ್ರತಿರೋಧವನ್ನು ಪತ್ತೆದಾರಿ ಕಥೆಯಾಗಿಸಿದಾಗ- ಅಲ್ಲಿ ಪ್ರತಿರೋಧದ ಉದ್ದೇಶವೇ ಗೌಣವಾಗಿ ರೋಚಕತೆ ಮನೆಮಾಡುತ್ತದೆ.

ಪತ್ತೆದಾರಿ ಸಿನಿಮಾದ ಶೋಧದಲ್ಲಿ ಸಾಮಾನ್ಯವಾಗಿ ಭಾವುಕ ಘಟನೆಯೊಂದು ಹೆಣೆಯಲ್ಪಟ್ಟಿರುತ್ತದೆ. ತನ್ನ ಮೆದುಳಿನ ಆಟವನ್ನು ಮಹತ್ವವಾಗಿಸಲು ನಿರ್ದೇಶಕ ಕಟ್ಟಿದ ಸನ್ನಿವೇಶವದು. ಉದಾಹರಣೆಗೆ ‘ಶಿವಾಜಿ ಸುರತ್ಕಲ್’ ಸಿನಿಮಾ ತೆಗೆದುಕೊಳ್ಳಿ. ಕೊಲೆಯೊಂದರ ರಹಸ್ಯ ಬೇಧಿಸಲು ಹೊರಟ ಕಥಾನಾಯಕ ಕೊನೆಗೆ ಕಂಡುಕೊಳ್ಳುವ ಸತ್ಯವೇನು? ಒಂದು ಮುಗ್ಧ ಹೆಣ್ಣುಮಗಳನ್ನು ಅತ್ಯಾಚಾರವೆಸಗಿದ ವ್ಯಕ್ತಿಯನ್ನು ಒಂದು ಕಲಾತಂಡ ಮುಗಿಸಿರುತ್ತದೆ. ಇಲ್ಲಿ ಅತ್ಯಾಚಾರವೆಂಬುದು ಒಂದು ಭಾವುಕ ಘಟನೆ. ಅದಕ್ಕೆ ಪ್ರತಿಯಾಗಿ ಕೊಲೆ ಮಾಡಲಾಗಿದೆ. ಇದು ಕೃತಿಕಾರ ಕೊಡುವ ಕಾರಣ. ಕೊಲೆಗೈದವರು ಯಾರು, ಯಾವುದಕ್ಕಾಗಿ ಕೊಲೆ ಮಾಡಿದ್ದಾರೆ ಎಂಬುದನ್ನು ಪತ್ತೆ ಹಚ್ಚುವುದೇ ಒಂದು ಸಿನಿಮಾವಾಗುತ್ತದೆ. ಅಪರಾಧಿ ಯಾರು, ಕಾರಣವೇನು ಎಂದು ಪ್ರೇಕ್ಷಕನಿಗೆ ತಿಳಿಸುವುದು ಮತ್ತು ಕೊನೆಯವರೆಗೂ ಪ್ರೇಕ್ಷಕನಿಗೆ ಅಪರಾಧಿ ಹಾಗೂ ಕಾರಣ ತಿಳಿಯದಂತೆ ಕತೆಯನ್ನು ಕಟ್ಟುವುದು ನಿರ್ದೇಶಕನ ಉದ್ದೇಶವಾಗಿರುತ್ತದೆಯೇ ಹೊರತು ಇಲ್ಲಿ ಅತ್ಯಾಚಾರಕ್ಕೆ ನ್ಯಾಯ ಒದಗಿಸುವುದಾಗಿರುವುದಿಲ್ಲ. ಇಲ್ಲಿ ಟ್ರಷರ್ ಹಂಟ್ ಮುಖ್ಯವೇ ಹೊರತು ಸಂವೇದನೆಯಲ್ಲ.

ಹಾಗಾದರೆ ಸಂವೇದನೆಗಳು ಹೇಗಿರುತ್ತವೆ?- ಅವು ಅಮೂರ್ತವಾಗಿರಬಹುದು ಅಥವಾ ಸಮಾಜಕ್ಕೆ ಹಿಡಿದ ಕನ್ನಡಿಯಾಗಿರಬಹುದು. ‘ಆರ್ಟಿಕಲ್-15’ ಸಿನಿಮಾವನ್ನೇ ಉದಾಹರಣೆಯಾಗಿ ನೋಡಿ. ಇಲ್ಲಿ ಟ್ರಷರ್ ಹಂಟ್ ಪರಿಭಾಷೆ ಇರುವುದಿಲ್ಲ. ಕ್ಷಣಕ್ಷಣವೂ ಮೈನವಿರೇಳಿಸುವ ದೃಶ್ಯಗಳು ಇರುವುದಿಲ್ಲ.‌ ಅತ್ಯಾಚಾರ ಮಾಡಿದ ಅಪರಾಧಿ ಯಾರೆಂದು ನಿಮಗೂ ಗೊತ್ತು, ನಮಗೂ ಗೊತ್ತು. ಆ ಅಪರಾಧಿ- ಕರಾಳ ಜಾತಿ ಮನಸ್ಥಿತಿ, ಮನು ಪ್ರೇರಿತ ವ್ಯವಸ್ಥೆ. ಈ ಸತ್ಯವನ್ನು ಹೇಳುವುದಕ್ಕೆ ಅದನ್ನು ದೃಶ್ಯರೂಪದಲ್ಲಿ ಕಟ್ಟಿಕೊಡುವುದಕ್ಕೆ ಇರುವ ಧೈರ್ಯವೇ ಸಂವೇದನೆ. ಜಾತಿ, ಮತ, ಹಸಿವು, ನೋವು ಈ ಜನತೆಗೆ ತಿಳಿದಿದೆ- ಅದಕ್ಕೆ ನಿಧಿಶೋಧದ ಪರಿಸ್ಥಿತಿ ಬರುವುದಿಲ್ಲ. ಆದರೆ ಅದನ್ನು ಜನರ ಮನಸ್ಸನ್ನು ಕಲಕುವಂತೆ ಹೇಳುವ ಕಲಾತ್ಮಕತೆ ಬೇಕು.‌

ಇದನ್ನೂ ಓದಿರಿ: ಡಬ್‌‌ ಸಿನಿಮಾ ‘ಡೊಳ್ಳು’ ಸಿಂಕ್‌ಸೌಂಡ್‌ ವಿಭಾಗದಲ್ಲಿ ಆಯ್ಕೆ: ‘ರಾಷ್ಟ್ರಪ್ರಶಸ್ತಿ ಲಾಬಿ’ ರಾಜಕಾರಣದ ಕಥೆ ಇದು!

ಒಂದು ಫಾಂಡ್ರಿ, ಒಂದು ಅಸುರನ್, ಒಂದು ಜಟ್ಟ, ಒಂದು ಕಮ್ಮಟ್ಟಿಪಾಡಂ ನಮ್ಮನ್ನು ಕಾಡುವಷ್ಟು ಟ್ರಷರ್ ಹಂಟ್ ಸಿನಿಮಾಗಳು ಎಷ್ಟೇ ಬಂದರೂ ಕಾಡುವುದಿಲ್ಲ. ಸಿನಿಮಾದಂತಹ ಪ್ರಭಾವಶಾಲಿ ಮಾಧ್ಯಮ ಒಂದು ನಿಧಿ ಶೋಧದಲ್ಲಿ ಪರ್ಯವ್ಯಸನವಾಗಬಾರದು. ಸಿನಿಮಾ ಮುಗಿದ ಮೇಲೂ ಹಾಂಟ್ ಮಾಡುವಂತಿರಬೇಕು.

ಮತ್ತೊಂದು ಸಂಗತಿ, ‘ಮುಸ್ಲಿಮರು ಹೆಚ್ಚು ಮಕ್ಕಳನ್ನು ಹೆರುತ್ತಾರೆ’ ಎಂಬ ವಿಕೃತ ಪ್ರೊಪಗಾಂಡವನ್ನು ಕೋಮುದ್ವೇಷಿಗಳು ಈ ಹಿಂದಿನಿಂದಲೂ ಮಾಡುತ್ತಾ ಬಂದಿದ್ದಾರೆ. ಮುಸ್ಲಿಮರಷ್ಟೇ ಅಲ್ಲ, ಹಿಂದೂಗಳಲ್ಲೂ ಈ ಸಮಸ್ಯೆ ಇದೆ ಎಂಬುದು ವಾಸ್ತವ. ಶೈಕ್ಷಣಿಕ ವ್ಯವಸ್ಥೆ ಗಟ್ಟಿಯಾದಂತೆ ಬದಲಾವಣೆಯನ್ನು ಕಾಣುತ್ತಿದ್ದೇವೆ. ದುರಾದೃಷ್ಟವಶಾತ್‌ ಮುಸ್ಲಿಂ ಸಮುದಾಯದ ಕುರಿತು ಹಾಸ್ಯದ ನೆಪದಲ್ಲಿ ಅಪಹಾಸ್ಯ ಮಾಡುವುದು ಸಿನಿಮಾಗಳಲ್ಲಿ ಈಗಲೂ ಮುಂದುವರಿದಿದೆ. ವಿಕ್ರಾಂತ್‌ ರೋಣದಲ್ಲೂ ಈ ಸಮಸ್ಯೆ ಕಾಣುತ್ತದೆ.

ಕೊನೆಯದಾಗಿ, ‘ಜೈ ಭೀಮ್‌’ ಸಿನಿಮಾ ಬಂದಾಗ ತಮಿಳುನಾಡಿನ ವಣ್ಣಿಯಾರ್‌ ಸಮುದಾಯ, “ನಮ್ಮ ಜಾತಿಯನ್ನು ಸಾಂಕೇತಿಕವಾಗಿ ಪ್ರಸ್ತಾಪಿಸಿ ಅವಮಾನ ಮಾಡಲಾಗಿದೆ” ಎಂದು ಕೋರ್ಟ್ ಮೆಟ್ಟಿಲೇರಿತು. ಹೀಗಾಗಿ ಜಾತಿ ಸೂಕ್ಷ್ಮಗಳನ್ನು ಸಾಂಕೇತಿಕರಣಗೊಳಿಸುವಾಗ ನಿರ್ದೇಶಕರು ಎಚ್ಚರಿಕೆ ವಹಿಸಬೇಕಾದ ಅಗತ್ಯವಿದೆ. ವಿಕ್ರಾಂತ್ ರೋಣ ಕಥೆಯನ್ನು ‘ಜಾತಿ ನಮೂನೆ’ಯಿಂದ ಹೊರಗಿಟ್ಟು ನಿರ್ದೇಶಿಸಲು ಸಾಧ್ಯವಿತ್ತು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

3 COMMENTS

  1. Sum sumne ista bandange baritayiri alli helirodu Namardha andre Sedu tirskoloke maklana saysodu alla avrna yaru saysdro avarna saysoke agde irror na anta,, sumne heltira shoshane anta heli hagidmele yav movie nu mado hagillavalla nim lekka hodre aden baritira sumne nive jangalana tappu dari ge karkondu hogtidira

  2. Cinima na cinima tharaaa arthaa madkolli elli yaru yarunnu keelagi thorsillaaaa nimm mansththi na sari madkobeku astee yak Andree adhu ondhu cinimaa matharaaa nivu cinimaaa nalli thappu udkodhu bittu samajadhalli yestondhu samsyeee edee adru bagge mathadi adhunna sari madi adunna bittu prathiyobbaa director cinima madi release maddhgaaa adhu thappu edhu thappu anthaa helodhu alaaa alwaa sir

  3. Nijaaa bro
    Prathiyobbaa kanndiganu hemme paduvanthaaa cinimaaa kanndhalli barthiddee adree kelvobbaru cinima nalli nammunna kelagi thorsovareee beree samajaa naa highlight madidhareee annodhee agideee agadree Mahabharata and Ramayana nalli baruvaaa pathraglu bagge thappunna hudukthaa oddhree edi Ramayana nd mahabarathaaa na ennodh salaa baribrkagutthe

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...