Homeಮುಖಪುಟಕೊರೋನಾ ವೈರಾಣುವಿನಿಂದಾಗಿ ಹೆಚ್ಚು ನ್ಯಾಯಯುತ ಸಮಾಜ ಸಾಧ್ಯವಾಗಬಹುದೆ? ಥಾಮಸ್ ಪಿಕೆಟ್ಟಿ ಸಂದರ್ಶನ

ಕೊರೋನಾ ವೈರಾಣುವಿನಿಂದಾಗಿ ಹೆಚ್ಚು ನ್ಯಾಯಯುತ ಸಮಾಜ ಸಾಧ್ಯವಾಗಬಹುದೆ? ಥಾಮಸ್ ಪಿಕೆಟ್ಟಿ ಸಂದರ್ಶನ

ಚಾರಿತ್ರಿಕವಾಗಿ ನೋಡಿದಾಗ ಪಿಡುಗು ಪರಕೀಯರನ್ನು ದ್ವೇಷಿಸುವಂತೆ ಮತ್ತು ದೇಶಗಳೊಳಗೇ ಪರಿಹಾರ ಹುಡುಕುವುದಕ್ಕೆ ಪ್ರೇರೇಪಿಸಿರುವುದು ಕಂಡುಬರುತ್ತದೆ ಎನ್ನುತ್ತಾರೆ ಥಾಮಸ್ ಪಿಕೆಟ್ಟಿ.

- Advertisement -
- Advertisement -

ಥಾಮಸ್ ಪಿಕೆಟ್ಟಿ ಫ್ರಾನ್ಸಿನ ಅರ್ಥಶಾಸ್ತ್ರಜ್ಞ. ಅವರ ಮೊದಲ ಪುಸ್ತಕ ಕ್ಯಾಪಿಟಲ್ ದೊಡ್ಡ ಸಂಚಲನವನ್ನು ಉಂಟುಮಾಡಿತ್ತು. ಜಗತ್ತಿನಾದ್ಯಂತ ಅವರ ವಾದದ ಸಮರ್ಥಕರ ದಂಡೇ ಇದೆ. ಈಗ ಅವರ ಸಾವಿರ ಪುಟಗಳ ಕ್ಯಾಪಿಟಲ್ ಅಂಡ್ ಐಡಿಯಾಲಜಿ ಪುಸ್ತಕ ಬಿಡುಗಡೆಯಾಗಿದೆ. ಅಸಮಾನತೆಯನ್ನು ಕುರಿತು ಆಳವಾದ ಅಧ್ಯಯನ ಮಾಡಿರುವ ಅವರು ಈ ಪುಸ್ತಕದಲ್ಲಿ ಒಂದು ಸಾವಿರ ವರ್ಷಗಳ ಅಸಮಾನತೆಯ ಇತಿಹಾಸವನ್ನು ದಾಖಲು ಮಾಡಲು ಪ್ರಯತ್ನಿಸಿದ್ದಾರೆ. ಗಾರ್ಡಿಯನ್ ಪತ್ರಿಕೆಗೆ ನೀಡಿರುವ ಈ ಸಂದರ್ಶನದಲ್ಲಿ ಕೊರೋನಾ ಪಿಡುಗು ನ್ಯಾಯಯುತವಾದ, ಹೆಚ್ಚು ಸಮಾನವಾದ ಒಂದು ಸಮಾಜದ ನಿರ್ಮಾಣಕ್ಕೆ ಅವಕಾಶ ಮಾಡಿಕೊಡಬಹುದೇ ಎಂಬುದರ ಬಗ್ಗೆ ಥಾಮಸ್ ಪಿಕೆಟ್ಟಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆಶ

ಅನುವಾದ: ಟಿ ಎಸ್ ವೇಣುಗೋಪಾಲ್

ಪ್ರಶ್ನೆ: ಚಾರಿತ್ರಿಕವಾಗಿ ನೋಡಿದಾಗ ಈ ಪಿಡುಗು ಹೇಗೆ ಕಾಣುತ್ತದೆೆ?

ಥಾಮಸ್ ಪಿಕೆಟ್ಟಿ : ಏನೂ ಕ್ರಮ ತೆಗೆದುಕೊಳ್ಳದೇ ಹೋದರೆ ಈ ಪಿಡುಗಿನಿಂದ ಪ್ರಪಂಚದಲ್ಲಿ ಅತಿ ಅಂದರೆ 40 ಮಿಲಿಯನ್ ಜನ ಸಾಯಬಹುದು. 1918ರ ಫ್ಲೂ ಪಿಡುಗಿನಲ್ಲಿ ಇದರ ಮೂರುಪಟ್ಟು ಜನ ಸತ್ತಿದ್ದರು. ಅಂದಿನ ಜನಸಂಖ್ಯೆಯನ್ನು ಗಣನೆಗೆ ತೆಗೆದುಕೊಂಡು ಈ ಲೆಕ್ಕಾಚಾರ ಮಾಡಲಾಗಿದೆ. ಆದರೆ ಪಿಡುಗಿನ ಲೆಕ್ಕಾಚಾರ ಮಾಡುವಾಗ ನಾವು ಅಸಮಾನತೆಯನ್ನು ಗಣನಗೆ ತೆಗೆದುಕೊಳ್ಳುತ್ತಿಲ್ಲ. ಪಿಡುಗಿನ ಪರಿಣಾಮ ಎಲ್ಲಾ ಸಾಮಾಜಿಕ ಗುಂಪುಗಳ ಮೇಲೆ ಒಂದೇ ರೀತಿಯಲ್ಲಿ ಆಗುವುದಿಲ್ಲ. ಹಾಗೆಯೇ ಎಲ್ಲಾ ರಾಷ್ಟ್ರಗಳ ಮೇಲೂ ಅದರ ಪರಿಣಾಮ ಭಿನ್ನವಾಗಿಯೇ ಇರುತ್ತದೆ. ಶ್ರೀಮಂತರ ರಾಷ್ಟ್ರಗಳ ಮೇಲೆ ಅದರ ಪರಿಣಾಮ ಬಡ ರಾಷ್ಟ್ರಗಳ ಮೇಲೆ ಆಗುವುದಕ್ಕಿಂತ ಭಿನ್ನವಾಗಿರುತ್ತದೆ. 1918ರ ಫ್ಲೂನಲ್ಲಿ ಇದನ್ನು ಗಮನಿಸಬಹುದು. ಅಮೇರಿಕೆ ಹಾಗೂ ಯೂರೋಪಿನಲ್ಲಿ ಈ ಪಿಡುಗಿನಿಂದ ಶೇಕಡ 0.5ರಿಂದ ಶೇಕಡ 1ರವರಗೆ ಜನ ಸತ್ತರು. ಆದರೆ ಭಾರತದಲ್ಲಿ ಹಾಗೆ ಸತ್ತವರ ಸಂಖ್ಯೆ ಶೇಕಡ 6ರಷ್ಟು ಇತ್ತು. ಈ ಪಿಡುಗಿನಲ್ಲೂ ಅದರ ಪರಿಣಾಮದಲ್ಲಿ ತೀವ್ರ ಅಸಮಾನತೆಯನ್ನು ನೋಡಬಹುದು. ಲಾಕ್‌ಡೌನ್ ಪರಿಣಾಮ ದೊಡ್ಡ ಅಪಾರ್ಟಮೆಂಟಿನಲ್ಲಿರುವವರಿಗೂ ಮನೆಯೇ ಇಲ್ಲದ ನಿರ್ಗತಿಕರಿಗೂ ಒಂದೇ ರೀತಿಯಲ್ಲಿ ಇರುವುದಕ್ಕೆ ಸಾಧ್ಯವಿಲ್ಲ.

1918ಕ್ಕೆ ಹೋಲಿಸಿದರೆ ಪಾಶ್ಚಾತ್ಯ ದೇಶಗಳಲ್ಲಿ ಈಗ ಹೆಚ್ಚು ಅಸಮಾನತೆ ಹೆಚ್ಚಿದೆ ಅನ್ನಿಸುತ್ತದೆಯೇ?

ಥಾಮಸ್ ಪಿಕೆಟ್ಟಿ: ಇಂದು ನಾವು ನೋಡುತ್ತಿರುವ ಅಸಮಾನತೆ ಒಂದು ಶತಮಾನದ ಹಿಂದಕ್ಕೆ ಹೋಲಿಸಿದರೆ ತುಂಬಾ ಕಡಿಮೆ. ಒಂದರ್ಥದಲ್ಲಿ ಇದು ನನ್ನ ಮೆಸೇಜ್. ನಾನು ತುಂಬಾ ಆಶಾವಾದಿ. ನಾನು ಹೇಳುತ್ತಿರುವ ಕಥೆ ಧೀರ್ಘಾವದಿಯಲ್ಲಿನ ಒಂದು ಕಲಿಕೆಯ ಕಥೆ, ಒಂದು ಪ್ರಗತಿಯ ಕಥೆ. ಈ ಪ್ರಗತಿ ಸಾಧ್ಯವಾಯಿತು ಯಾಕೆಂದರೆ, ರಾಜಕೀಯ ಹಾಗೂ ಬೌದ್ಧಿಕ ಸಾಮಾಜಿಕ ಭದ್ರತೆಯನ್ನು, ಪ್ರಗತಿಪರ ತೆರಿಗೆ ವ್ಯವಸ್ಥೆಯನ್ನು ಸ್ಥಾಪಿಸುವುದಕ್ಕೆ ಸಾಧ್ಯವಾಯಿತು. ನಮ್ಮ ಆಸ್ತಿಯ ವ್ಯವಸ್ಥೆಯನ್ನು ಮಾರ್ಪಡಿಸುವುದಕ್ಕೆ ಬೇಕಾದ ರಾಜಕೀಯ ಹಾಗೂ ಬೌದ್ಧಿಕ ಚಳುವಳಿ ನಡೆಯಿತು. ಹಾಗಾಗಿ ಪ್ರಗತಿ ಸಾಧ್ಯವಾಯಿತು.

ಆಸ್ತಿ ಅನ್ನೋದು 19ನೇ ಶತಮಾನದಲ್ಲಿ ಪರಮ ಪವಿತ್ರವಾದ ಕಲ್ಪನೆಯಾಗಿತ್ತು. ಆದರೆ ಅದು ಕ್ರಮೇಣ ತನ್ನ ಪಾವಿತ್ರತೆಯನ್ನು ಕಳೆದುಕೊಂಡಿತು. ಇಂದು ಮಾಲೀಕರ, ಕೆಲಸಗಾರರ, ಬಳಕೆದಾರರ ಹಾಗೂ ಸ್ಥಳೀಯ ಸರ್ಕಾರಗಳ ಹಕ್ಕುಗಳ ಬಗ್ಗೆ ಒಂದು ಉತ್ತಮ ಸಮತೋಲನ ಸಾಧ್ಯವಾಗಿದೆ. ಆಸ್ತಿಯನ್ನು ಕುರಿತ ನಮ್ಮ ಗ್ರಹಿಕೆ ಸಂಪೂರ್ಣ ಬದಲಾಗಿದೆ. ಜೊತೆಗೆ ನಮಗೆ ಆರೋಗ್ಯ ಹಾಗೂ ಶಿಕ್ಷಣಕ್ಕೆ ಹೆಚ್ಚಿನ ಅವಕಾಶ ಸಿಕ್ಕಿದೆ.
ಆದರೆ ಅಸಮಾನತೆ ಅನ್ನುವುದು 1980ಕ್ಕೆ ಹೋಲಿಸಿದರೆ ಈಗ ಹೆಚ್ಚಾಗಿದೆ. ಇದನ್ನು ಸರಿಪಡಿಸಬೇಕು ಅಲ್ಲವೇ?
ಹೌದು, ಈ ಬಿಕ್ಕಟ್ಟಿಗೆ ಪರಿಹಾರ ಅಂದರೆ, ಸಾಮಾಜಿಕ ಪ್ರಭುತ್ವವನ್ನು ಜಗತ್ತಿನ ಉತ್ತರದಲ್ಲಿ ಮರುಸ್ಥಾಪಸಿಸುವುದಕ್ಕೆ ಸಾಧ್ಯವಾಗಬೇಕು. ಮತ್ತು ಜಗತ್ತಿನ ದಕ್ಷಿಣದಲ್ಲಿ ಅದರ ಬೆಳವಣಿಗೆಯನ್ನು ತೀವ್ರಗೊಳಿಸಬೇಕು. ಈ ಹೊಸ ಸಾಮಾಜಿಕ ಪ್ರಭುತ್ವವು ಒಂದು ನ್ಯಾಯಯುತವಾದ ತೆರಿಗೆ ವ್ಯವಸ್ಥೆಯನ್ನು ಜಾರಿಗೆ ತರಬೇಕು. ಒಂದು ಅಂತರರಾಷ್ಟ್ರೀಯ ಹಣಕಾಸು ರಿಜಿಸ್ಟ್ರರನ್ನು ತಯಾರಿಸಬೇಕು. ದೊಡ್ಡ ಶ್ರೀಮಂತ ಉದ್ದಿಮೆಗಳು ಅದರಲ್ಲಿ ಸೇರಬೇಕು. ಈಗ ಚಾಲ್ತಿಯಲ್ಲಿರುವ ಬಂಡವಾಳದ ಮುಕ್ತ ಚಲಾವಣೆಯ ವ್ಯವಸ್ಥೆ 1980 ಮತ್ತು 90ರಲ್ಲಿ ಜಾರಿಗೆ ಬಂದಿದೆ. ಅದು ಶ್ರೀಮಂತ ರಾಷ್ಟ್ರಗಳ ಅದರಲ್ಲೂ ವಿಶೇಷವಾಗಿ ಯುರೋಪಿನ ಪ್ರಭಾವದಿಂದ ಜಾರಿಗೆ ಬಂದಿದೆ. ಅದರಲ್ಲಿ ಮಿಲಿಯನೇರುಗಳು ಮತ್ತು ಬಹುರಾಷ್ಟ್ರೀಯ ಉದ್ದಿಮೆಗಳು ತಪ್ಪಿಸಿಕೊಂಡು ಬಿಡಬಹುದು. ಜೊತೆಗೆ ಬಡದೇಶಗಳಿಗೆ ನ್ಯಾಯಯುತವಾದ ಒಂದು ತೆರಿಗೆ ವ್ಯವಸ್ಥೆಯನ್ನು ಜಾರಿಗೆ ತರುವುದಕ್ಕೆ ಸಾಧ್ಯವಾಗುವುದಿಲ್ಲ. ಹಾಗಾಗಿ ಒಂದು ಸಾಮಾಜಿಕ ಪ್ರಭುತ್ವವನ್ನು ಕಟ್ಟುವುದಕ್ಕೆ ಬೇಕಾದ ಸಾಮರ್ಥ್ಯವು ಅವುಗಳಿಗೆ ಇರುವುದಿಲ್ಲ.

ಕ್ಯಾಪಿಟಲ್ ಅಂಡ್ ಐಡಿಯಾಲಜಿ ಪುಸ್ತಕದಲ್ಲಿ ನೀವು ಯುದ್ಧಗಳು ಹಾಗೂ ಸಾಂಕ್ರಮಿಕಗಳಂತಹ ಹೊಡೆತಗಳು ಅಸಮಾನತೆಯನ್ನು ಸರಿಪಡಿಸುವ ನಿಟ್ಟಿನಲ್ಲಿ ಹೇಗೆ ಒತ್ತಡ ತರಬಲ್ಲವು ಅನ್ನುವುದನ್ನು ವಿವರಿಸಿದ್ದೀರಿ. ಹಾಗೆಯೇ ತೀವ್ರವಾದ ಅಸಮಾನತೆ ಅಂತಹ ಶಾಕ್‌ಗಳನ್ನೂ ಪ್ರೇರೇಪಿಸುವ ಸಾಧ್ಯತೆಯೂ ಇರಬಹುದೇ? ಅಂದರೆ ಅಸಮಾನತೆಗೆ ದೀರ್ಘಾವಧಿಯಲ್ಲಿ ತನ್ನಷ್ಟಕ್ಕೆ ಸರಿಪಡಿಸಿಕೊಳ್ಳುವ ಸಾಧ್ಯತೆ ಇದೆಯೇ?

ಹೌದು ಆ ಥರದ್ದು ಏನೋ ಇದೆ ಎಂದು ತೋರುತ್ತದೆ. ಯುದ್ಧಪೂರ್ವ ಐರೋಪ್ಯ ದೇಶಗಳಲ್ಲಿ ಇದ್ದಂತಹ ತೀವ್ರವಾದ ಅಸಮಾನತೆ ಎರಡು ಜಾಗತಿಕ ಯುದ್ಧಗಳಿಗೆ ಬಹುಪಾಲು ಕಾರಣ ಎಂದು ನಾನು ನಾನು ನನ್ನ ಪುಸ್ತಕದಲ್ಲಿ ಪ್ರತಿಪಾದಿಸಿದ್ದೇನೆ. ಆ ರಾಷ್ಟ್ರಗಳ ವಸಾಹತುಶಾಹಿ ಆಸ್ತಿಯನ್ನು ಕ್ರೋಢೀಕರಿಸಿಕೊಂಡಿದ್ದರ ಫಲವಾಗಿ ದೇಶದೊಳಗೆ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಅಸಮಾನತೆ ತೀವ್ರಗೊಂಡಿತ್ತು. ಅಸಮಾನತೆ ಹಾಗೇ ಮುಂದುವರಿಯುವುದು ಸಾಧ್ಯವಿರಲಿಲ್ಲ. ಅದರಿಂದ ಸಮಾಜ ದಂಗೆ ಎದ್ದವು. ಈ ವಿರೋಧ ಮೊದಲ ಜಾಗತಿಕ ಯುದ್ಧ, ರಷ್ಯಾದ ಕ್ರಾಂತಿ, 1918ರ ಪಿಡುಗು ಹೀಗೆ ಹಲವು ರೀತಿಯಲ್ಲಿ ಕಾಣಿಸಿಕೊಂಡಿತು. ಆ ಪಿಡುಗು ಸಮಾಜದ ಬಡ ಸಮುದಾಯದವರನ್ನು ತೀವ್ರವಾಗಿ ಕಾಡಿಸಿತು. ಈ ಎಲ್ಲಾ ಕ್ರೋಢೀಕೃತ ಶಾಕ್‌ಗಳ ಪರಿಣಾಮ ಅಂದರೆ ಮುಂದಿನ ಅರ್ಧಶತಮಾನದಲ್ಲಿ ಅಸಮಾನತೆ ಕಡಿಮೆಯಾಯಿತು.

ಪಿಡುಗಿನಿಂದ ಅಸಮಾನತೆ ಕಡಿಮೆಯಾಗುವ ಪ್ರಕ್ರಿಯೆಗೆ ನೀವು 14ನೇ ಶತಮಾನದ ಪ್ಲೇಗ್ ಮಾರಿಯನ್ನು ಉದಾಹರಣೆಯನ್ನಾಗಿ ಕೊಡುತ್ತೀರಿ. ಪ್ಲೇಗ್ ಮಾರಿಯ ನಂತರ ಏನಾಯಿತು?

ಜಮೀನ್ದಾರೀ ಪದ್ಧತಿ ಹೆಚ್ಚು ಕಡಿಮೆ ಕೊನೆಗೊಂಡದ್ದು ಪ್ಲೇಗ್ ಪಿಡುಗಿನಿಂದಲೇ ಅಂತ ಒಂದು ದೊಡ್ಡ ಸಿದ್ದಾಂತವೇ ಇದೆ. ಆಗ ಶೇಕಡ 50ರಷ್ಟು ಜನ ಕೆಲವು ಪ್ರಾಂತ್ಯಗಳಲ್ಲಿ ನಿರ್ನಾಮವಾಗಿ ಹೋಗಿಬಿಟ್ಟರು. ಕೆಲಸಗಾರರ ಕೊರತೆ ತೀವ್ರವಾಯಿತು. ಹಾಗಾಗಿ ಉಳಿದಿದ್ದ ಕೆಲಸಗಾರರಿಗೆ ಉತ್ತಮ ಹಕ್ಕುಗಳು ಮತ್ತು ಸ್ಥಾನಮಾನಕ್ಕೆ ಒತ್ತಾಯಿಸುವುದಕ್ಕೆ, ಪಡೆದುಕೊಳ್ಳುವುದಕ್ಕೆ ಸಾಧ್ಯವಾಯಿತು ಅನ್ನುವುದು ಅವರ ವಾದ. ಆದರೆ ವಾಸ್ತವ ಅದಕ್ಕಿಂತ ಸಂಕೀರ್ಣವಾಗಿದೆ. ಕೂಲಿಯವರ ಕೊರತೆಯಿಂದಾಗಿ ಭೂಮಾಲಿಕರಿಗೆ ಅವರು ತುಂಬಾ ಅಮೂಲ್ಯವೆನಿಸಿಬಿಟ್ಟರು. ಹಾಗಾಗಿ ಉಳಿದಿದ್ದ ಕಾರ್ಮಿಕರನ್ನು ಬಲವಂತವಾಗಿ ನಿಯಂತ್ರಿಸುವುದಕ್ಕೆ ಭೂಮಾಲೀಕರನ್ನು ಅದು ಪ್ರೇರೇಪಿಸಿತು. ಪಿಡುಗು, ಯುದ್ಧಗಳು ಅಥವಾ ಆರ್ಥಿಕ ಬಿಕ್ಕಟ್ಟುಗಳು ಇವೆಲ್ಲಾ ಸಮಾಜದ ಮೇಲೆ ಪರಿಣಾಮ ಬೀರಿಯೇ ಬೀರುತ್ತದೆ. ಆದರೆ ಅಂತಹ ಪರಿಣಾಮದ ಸ್ವಭಾವ ಪ್ರದೇಶದಿಂದ ಪ್ರದೇಶಕ್ಕೆ ಬದಲಾಗುತ್ತದೆ. ಅದು ಚರಿತ್ರೆಯನ್ನು, ಸಮಾಜವನ್ನು, ಅಧಿಕಾರವನ್ನು ಕುರಿತಂತೆ ಜನರ ನಂಬಿಕೆಗಳನ್ನು ಅವಲಂಬಿಸಿರುತ್ತದೆ. ಅಂದರೆ ಜನರ ಸಿದ್ಧಾಂತವನ್ನು ಅವಲಂಬಿಸಿರುತ್ತದೆ. ಸಮಾಜ ಸಮಾನತೆಯ ಹಾದಿಯಲ್ಲಿ ಸಾಗಬೇಕಾದರೆ ಅದಕ್ಕೆ ದೊಡ್ಡ ಸಾಮಾಜಿಕ ಹಾಗೂ ರಾಜಕೀಯ ಸಂಘಟನೆ ಬೇಕಾಗುತ್ತದೆ.

ಈ ಪಿಡುಗು ನೀವು ಪ್ರತಿಪಾದಿಸುವ ಮಾದರಿಯ ಪಾಲ್ಗೊಳ್ಳುವಿಕೆಯ ಸಮಾಜವಾದದ ಕಡೆಗೆ ನಮ್ಮನ್ನು ಒಯ್ಯಬಹುದು ಅನ್ನಿಸುತ್ತದೆಯೇ?

ಅದನ್ನು ಹೇಳುವುದಕ್ಕೆ ಇದು ತುಂಬಾ ಬೇಗ ಆಗುತ್ತದೆ. ಪಿಡುಗುಗಳು ರಾಜಕೀಯ ಸಂಘಟನೆ ಮತ್ತು ಚಿಂತನೆಯ ಮೇಲೆ ತೀರಾ ವಿರೋಧಾತ್ಮಕವಾದ ಪರಿಣಾಮಗಳನ್ನು ಉಂಟುಮಾಡಬಹುದು. ಆದರೆ ಈ ಪಿಡುಗು ಕನಿಷ್ಠ ಆರೋಗ್ಯ ರಕ್ಷಣೆಯ ಮೇಲೆ ಸಾರ್ವಜನಿಕ ಹೂಡಿಕೆಗೆ ಒಂದು ಸಮರ್ಥನೆಯನ್ನು ಒದಗಿಸಬಹುದು. ಆದರೆ ಅದು ತೀರಾ ವ್ಯತಿರಿಕ್ತವಾದ ಪರಿಣಾಮವನ್ನೂ ಉಂಟುಮಾಡಬಹುದು. ಉದಾಹರಣೆಗೆ ಚಾರಿತ್ರಿಕವಾಗಿ ನೋಡಿದಾಗ ಪಿಡುಗು ಪರಕೀಯರನ್ನು ದ್ವೇಷಿಸುವಂತೆ ಮತ್ತು ದೇಶಗಳೊಳಗೇ ಪರಿಹಾರ ಹುಡುಕುವುದಕ್ಕೆ ಪ್ರೇರೇಪಿಸಿರುವುದು ಕಂಡುಬರುತ್ತದೆ. ಫ್ರಾನ್ಸಿನಲ್ಲಿ ಬಲಪಂಥೀಯ ರಾಜಕಾರಣಿಯಾದ ಮಾರಿನ್ ಲೆ ಪೆನ್ ಯುರೋಪಿಯನ್ ಯೂನಿಯನ್ ಒಳಗೆ ನಾವು ಮುಕ್ತವಾಗಿ ಚಲಿಸುವುದಕ್ಕೆ ಈಗಲೇ ಪ್ರಾರಂಭಿಸಿಬಿಡಬಾರದು ಅಂತ ಹೇಳಿದ್ದಾನೆ. ಬೇರೆ ಪ್ರಾಂತ್ಯಗಳಿಗಿಂತ ಯುರೋಪಿನಲ್ಲಿ ಸಾವಿನ ಪ್ರಮಾಣ ಹೆಚ್ಚಾಗಿಬಿಟ್ಟರೆ ಟ್ರಂಪ್ ಹಾಗೂ ಲಿ ಪೆನ್ ಪ್ರಾತಿಪಾದಿಸುತ್ತಿರುವ ಐರೋಪ್ಯ ವಿರೋಧಿ ಕಥನದ ಸೆಳೆತ ಹೆಚ್ಚಾಗಬಹುದು.

ಸಾರ್ವಜನಿಕ ಸಾಲದ ಬಗ್ಗೆ ಏನನ್ನಿಸುತ್ತದೆ? ಈ ಪಿಡುಗಿನಿಂದಾಗಿ ಅದು ತುಂಬಾ ಜಾಸ್ತಿಯಾಗುತ್ತಿದೆ. ಅದನ್ನು ನಿಯಂತ್ರಿಸಲು ಸರ್ಕಾರಗಳು ಕ್ರಮತೆಗೆದುಕೊಳ್ಳುವ ಸಾಧ್ಯತೆ ಇದೆಯಲ್ಲವೇ?

ಹೌದು ಹಾಗೆ ಆಗುವ ಸಾಧ್ಯತೆ ಹೆಚ್ಚು. ನಮ್ಮ ಐರೋಪ್ಯ ದೇಶಗಳಲ್ಲಿ ಹಾಗೂ ಅಮೇರಿಕೆಯಲ್ಲಿ ಆದಂತೆ ಸಾರ್ವಜನಿಕ ಸಾಲ ತುಂಬಾ ಹೆಚ್ಚಾದಾಗ ಅಸಂಪ್ರದಾಯಿಕ ಪರಿಹಾರಗಳು ಅನಿವಾರ್ಯವಾಗುತ್ತವೆ. ಯಾಕೆಂದರೆ ಮರುಪಾವತಿ ಕಷ್ಟವಾಗುತ್ತದೆ ಮತ್ತು ನಿಧಾನವಾಗುತ್ತದೆ. ಅದಕ್ಕೂ ಚರಿತ್ರೆಯಲ್ಲಿ ನಿಮಗೆ ಹೇರಳವಾಗಿ ಉದಾಹರಣೆಗಳು ಸಿಗುತ್ತವೆ. 19ನೇ ಶತಮಾನದಲ್ಲಿ ಬ್ರಿಟನ್ ಸಾಲದ ಹೊರೆ ಜಾಸ್ತಿಯಾಗಿತ್ತು. ಮೇಲ್ವರ್ಗದ ಬಾಂಡ್‌ಹೋಲ್ರ‍್ಸ್ಗಳಿಗೆ ಮರುಪಾವತಿ ಮಾಡುವುದಕ್ಕೆ ಅದು ಕೆಳ ಮಧ್ಯಮವರ್ಗದ ಜನರ ಮೇಲೆ ತೆರಿಗೆ ವಿಧಿಸಿತು. 19ನೇ ಶತಮಾನದ ಮೊದಲಲ್ಲಿ ಅದು ಸಾಧ್ಯವಾಯಿತು. ಯಾಕೆಂದರೆ ಆಗ ಶ್ರೀಮಂತರಷ್ಟೇ ಮತ ಚಲಾಯಿಸುತ್ತಿದ್ದರು.

ಈಗ ಅದು ಸಾಧ್ಯವಿಲ್ಲ. ಎರಡನೆಯ ಜಾಗತಿಕ ಯುದ್ಧದ ನಂತರ ಜರ್ಮನಿ ಮತ್ತು ಜಪಾನ್ ಬೇರೆ ಪರಿಹಾರ ಕಂಡುಕೊಂಡಿತು. ನನಗೆ ಅದು ಉತ್ತಮ ಪರಿಹಾರ ಅನ್ನಿಸುತ್ತದೆ. ಅವರು ತಾತ್ಕಾಲಿಕವಾಗಿ ಶ್ರೀಮಂತರ ಮೇಲೆ ತೆರಿಗೆ ವಿಧಿಸಿದರು. ಅದು ಅನುಕೂಲವಾಯಿತು. 1950ರ ಮಧ್ಯ ಭಾಗದಿಂದ ಸಾರ್ವಜನಿಕ ಸಾಲವಿಲ್ಲದೆ ವ್ಯವಸ್ಥೆಯ ಮರು ನಿರ್ಮಾಣ ಸಾಧ್ಯವಾಯಿತು. ಅವಶ್ಯಕತೆ ನಿಮ್ಮನ್ನು ಅನ್ವೇಷಣೆಗೆ ದೂಡುತ್ತದೆ. ಉದಾಹರಣೆಗೆ ಯುರೋಜೋನ್ ಅನ್ನು ರಕ್ಷಿಸುವುದಕ್ಕೆ ಐರೋಪ್ಯ ಕೇಂದ್ರ ಬ್ಯಾಂಕ್ ತನ್ನ ಸದಸ್ಯ ರಾಷ್ಟ್ರಗಳ ಸಾಲದ ಹೆಚ್ಚಿನ ಹೊರೆಯನ್ನು ಹೊತ್ತುಕೊಳ್ಳಬಹುದು. ನೋಡೋಣ ಏನಾಗುತ್ತದೆ.

ಅದರಿಂದ ಯುರೋಪಿಯನ್ ಯುನಿಯನ್ ಮಾರ್ಪಾಡಾಗಬಹುದು?

ನಾವು ಪರಿಹರಿಸಲೇಬೇಕಾದ ಸಮಸ್ಯೆಯನ್ನು ಪರಿಹರಿಸುವುದಕ್ಕೆ ಬಿಕ್ಕಟ್ಟನ್ನು ಅವಲಂಬಿಸಬಾರದು. ಅದರೆ ಅದು ಬದಲಾವಣೆಯನ್ನು ಪ್ರೇರೇಪಿಸಬಹುದು. ಬ್ರೆಕ್ಸಿಟ್‌ನಿಂದಾಗಿ ಯುರೂಪಿಯನ್ ಯೂನಿಯನ್ ಒಡೆಯಲು ಪ್ರಾರಂಭವಾಯಿತು. ಬಡವರು ರಾಷ್ಟ್ರೀಯವಾದಿಗಳು ಅನ್ನುವ ಬ್ರೆಕ್ಸಿಟ್ ವಾದ ತುಂಬಾ ಪೇಲವವಾದದ್ದು. ಯಾವುದೇ ಸಾಮಾಜಿಕ ಉದ್ದೇಶಗಳಿಲ್ಲದೆ ಕೇವಲ ಮುಕ್ತ ವ್ಯಾಪಾರ ಹಾಗು ಒಂದು ಕರೆನ್ಸಿಯನ್ನಷ್ಟೇ ಇಟ್ಟುಕೊಂಡು ಹೊರಟರೆ ಕೊನೆಗೆ ಬಂಡವಾಳದ ಮುಕ್ತ ಚಲನೆಯಿಂದ ತೀರಾ ಚಲನಶೀಲ ಹಾಗೂ ಶ್ರೀಮಂತ ಜನರಿಗೆ ಅನುಕೂಲವಾಗುತ್ತದೆ. ಮಧ್ಯಮ ಹಾಗೂ ಕೆಳವರ್ಗದ ಜನ ಹೊರಗುಳಿಯುತ್ತಾರೆ. ಮುಕ್ತವಾದ ಚಲನೆಯನ್ನು ಉಳಿಸಿಕೊಳ್ಳಬೇಕಾದರೆ ಅದರ ಜೊತೆಗೆ ಒಂದು ಸಮಾನ ತೆರಿಗೆ ಹಾಗೂ ಸಮಾನ ಸಾಮಾಜಿಕ ನೀತಿಯೂ ಇರಬೇಕು. ಆರೋಗ್ಯ ಹಾಗೂ ಶಿಕ್ಷಣಕ್ಕೆ ಎಲ್ಲಾ ಸದಸ್ಯ ರಾಷ್ಟ್ರಗಳ ಬಂಡವಾಳ ಹೂಡುವುದು ಆ ನೀತಿಯ ಭಾಗವಾಗಬೇಕು. ಇದಕ್ಕೂ ಚರಿತ್ರೆಯಲ್ಲಿ ಉದಾಹರಣೆಗಳಿವೆ. ದೇಶದೊಳಗೆ ಒಂದು ಕಲ್ಯಾಣ ರಾಜ್ಯವನ್ನು ಕಟ್ಟುವುದು ಆ ಕಾಲದಲ್ಲಿ ಒಂದು ದೊಡ್ಡ ಸವಾಲಾಗಿತ್ತು. ಅದೊಂದು ದೊಡ್ಡ ರಾಜಕೀಯ ಸಮರವಾಗಿತ್ತು. ಶ್ರೀಮಂತರು ಹಾಗೂ ಬಡವರು ಒಂದು ಒಪ್ಪಂದಕ್ಕೆ ಬರಬೇಕಾಯಿತು. ಅದನ್ನು ದೇಶಗಳಾಚೆಗೆ ಮಾಡುವುದು ಸುಲಭವಾಗಬಹುದು. ಪ್ರಾರಂಭದಲ್ಲಿ ಕೆಲವು ರಾಷ್ಟ್ರಗಳಷ್ಟೇ ಸೇರಿಕೊಂಡು ಪ್ರಾರಂಭಿಸಬೇಕಾಗಬಹುದು. ಅನಂತರ ಒಪ್ಪಿಗೆಯಾದರೆ ಉಳಿದ ರಾಷ್ಟ್ರಗಳೂ ಸೇರಿಕೊಳ್ಳಬಹುದು. ಐರೋಪ್ಯ ಸಂಘಟನೆಯನ್ನು ಒಡೆಯದೆಯೇ ಇದನ್ನು ಸಾಧಿಸಬಹುದು. ಅಂತಿಮವಾಗಿ ಬ್ರಿಟನ್ ವಾಪಸ್ಸು ಬರುತ್ತದೆ ಅಂತ ನಿರೀಕ್ಷಿಸುತ್ತೇನೆ.

ಈ ಬಿಕ್ಕಟ್ಟಿನ ನಂತರ ಅ-ಜಾಗತೀಕರಣವಾಗುತ್ತದೆ ಎಂಬ ಮಾತುಗಳು ಕೇಳಿಬರುತ್ತಿದೆ. ಎನಾಗಬಹುದು?

ಕೆಲವು ಕ್ಷೇತ್ರಗಳಲ್ಲಿ ಇದು ಆಗಬಹುದು ಅನ್ನಿಸುತ್ತದೆ. ಉದಾಹರಣೆಗೆ ಔಷಧಿಯ ಪೂರೈಕೆಗೆ ಸಂಬಂಧಿಸಿದಂತೆ. ಮುಂದಿನ ಪಿಡುಗಿಗೆ ನಾವು ಇನ್ನೂ ಹೆಚ್ಚು ಸಿದ್ದರಾಗಬೇಕೆಂಬ ಕಾರಣಕ್ಕೆ ಇದು ಆಗಬಹುದು. ಎಲ್ಲಾ ಕಡೆಯೂ ಇದು ಸಾಧ್ಯವಾಗಬೇಕಾದರೆ ಅದಕ್ಕೆ ಹೆಚ್ಚಿನ ತಯಾರಿ ಬೇಕಾಗುತ್ತದೆ. ಸಧ್ಯಕ್ಕೆ ನಮ್ಮ ಸೈದ್ಧಾಂತಿಕ ಆಯ್ಕೆ ಅಂದರೆ ಅಂತರರಾಷ್ಟ್ರೀಯ ವ್ಯಾಪಾರದ ಮೇಲೆ ಯಾವುದೇ ತೆರಿಗೆಯೂ ಇರಬಾರದು (0%) ಅನ್ನುವುದು. ಯಾಕೆಂದರೆ ನಮಗೆ ಇರುವ ಗಾಬರಿ ಅಂದರೆ ಎಲ್ಲರೂ ತೆರಿಗೆ ಏರಿಸುತ್ತಾ ಹೋದರೆ ಅದಕ್ಕೆ ಕೊನೆ ಎಲ್ಲಿ? ಅದು 19ನೇ ಶತಮಾನದಲ್ಲಿ ನಡೆದ ಆಸ್ತಿಯ ಮರುಹಂಚಿಕೆಯನ್ನು ಕುರಿತ ಚರ್ಚೆಯ ಮಾದರಿಯಲ್ಲೇ ಇದೆ. ಆಸ್ತಿಯ ಮರುಹಂಚಿಕೆಯ ಬಗ್ಗೆ ಆಗ ಜನರಿಗೆ ಅಪಾರ ಆತಂಕವಿತ್ತು. ಒಮ್ಮೆ ಇದು ಪ್ರಾರಂಭವಾಗಿಬಿಟ್ಟರೆ ಕೊನಗೆ ಎಲ್ಲಾ ಆಸ್ತಿಯನ್ನು ವಶಪಡಿಸಿಕೊಂಡುಬಿಡಬಹುದು ಎಂಬ ಗಾಬರಿ ಅವರಿಗಿತ್ತು. ಹಾಗಾಗಿ ಜನ ಆಸ್ತಿಯ ಒಡೆತನದಲ್ಲಿ ತೀವ್ರ ಅಸಮಾನತೆಯನ್ನು ಸಮರ್ಥಿಸುವುದಕ್ಕೆ ಪ್ರಾರಂಭಿಸಿದರು. ಕೊನೆಗೆ ಗುಲಾಮರ ಒಡೆತನವನ್ನೂ ಸಮರ್ಥಿಸುವ ಮಟ್ಟಕ್ಕೆ ಹೋದರು. ಇಂತಹ ವಾದ ಸಮಸ್ಯೆಯನ್ನು ಹೆಚ್ಚು ಮಾಡುತ್ತದೆ. ಇದು ಚರಿತ್ರೆಯುದ್ದಕ್ಕೂ ಎಲ್ಲಾ ಸಂಪ್ರದಾಯಸ್ಥರು ಮಾಡಿಕೊಂಡು ಬಂದಿರುವ ವಾದ. ನಾವು ಶೂನ್ಯತೆರಿಗೆ ಮನಸ್ಥಿತಿಯಿಂದ ಹೊರಬರಬೇಕು. ಆಗಷ್ಟೇ ಹವಾಮಾನ ಬದಲಾವಣೆ ಹಾಗೂ ಪಿಡುಗುಗಳಂತಹ ಜಾಗತಿಕ ಅಪಾಯಗಳಿಗೆ ಹಣ ಹೂಡಲು ಸಾಧ್ಯವಾಗುತ್ತದೆ. ತೆರಿಗೆಗೆ ಸಂಬಂಧಿಸಿದಂತೆ ಎಲ್ಲಿಗೆ ನಿಲ್ಲಿಸಬೇಕು ಅನ್ನುವುದನ್ನು ಕುರಿತಂತೆಯೂ ಒಂದು ಹೊಸ ಕಥನವನ್ನು ಕಂಡುಕೊಳ್ಳಬೇಕಾಗಿದೆ. ಹಾಗಂತ ಒಂದೇ ಪರಿಹಾರ ಅಂತ ಇರಲ್ಲ. ಇದನ್ನೂ ಚರಿತ್ರೆಯಲ್ಲಿ ನೋಡಿದ್ದೇವೆ.


ಇದನ್ನೂ ಓದಿ: ಕೊರೊನಾ ಮತ್ತು ಲಾಕ್‌ಡೌನ್‌ಅನ್ನು ಅರ್ಥ ಮಾಡಿಕೊಂಡು ಸರಿಯಾದ ಯೋಜನೆಗಾಗಿ ಆಗ್ರಹಿಸುವ ಈ ಅಧ್ಯಯನದಲ್ಲಿ ನೀವೂ ಭಾಗಿಯಾಗಬಹುದು 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...