Homeಮುಖಪುಟದೇಶದಲ್ಲಿ ಹೆಚ್ಚಿನ ತೆರಿಗೆ ಕಟ್ಟುವವರು ಬಡವರೆ ಹೊರತು ಶ್ರೀಮಂತರಲ್ಲ: ಇಲ್ಲಿದೆ ಪೂರ್ಣ ವಿವರ

ದೇಶದಲ್ಲಿ ಹೆಚ್ಚಿನ ತೆರಿಗೆ ಕಟ್ಟುವವರು ಬಡವರೆ ಹೊರತು ಶ್ರೀಮಂತರಲ್ಲ: ಇಲ್ಲಿದೆ ಪೂರ್ಣ ವಿವರ

- Advertisement -
- Advertisement -

ನಾನು ಕಟ್ಟುವ ತೆರಿಗೆ ಹಣ ದೇಶದ ಅಭಿವೃದ್ದಿಗಾಗಿಯೇ ಹೊರತು ಉಚಿತ ಹಂಚಿಕೆಗೆ ಅಲ್ಲ ಎಂಬ ಕಥನವೊಂದು ಚರ್ಚೆಗೆ ಕಾರಣವಾಗುತ್ತಿದೆ. ಈ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರು ರೆವ್ಡಿ (ಬಿಟ್ಟಿ) ಸಂಸ್ಕೃತಿ ಎಂದು ಅಣಕ ಮಾಡುತ್ತಿದ್ದರು. ಅದರ ಮುಂದುವರಿದ ಭಾಗವಾಗಿ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಜಯಗಳಿಸಿ ಅಧಿಕಾರ ಹಿಡಿದಿದ್ದು 5 ಗ್ಯಾರಂಟಿ ಯೋಜನೆಗಳ ಮೂಲಕ ಬಡಜನರ ಸ್ನೇಹಿ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೊಳಿಸಲು ಮುಂದಾಗಿದೆ. ಇದನ್ನು ವಿರೋಧಿಸುತ್ತಿರುವ ಮೇಲ್ವರ್ಗದ, ಪ್ರಬಲ ಸಮುದಾಯದ ಜನರು ನಾನು ಕಟ್ಟುವ ತೆರಿಗೆಯನ್ನು ಬಿಟ್ಟಿ ಭಾಗ್ಯಗಳಿಗೆ ಬಳಸಬೇಡಿ ಎನ್ನುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಈ ದೇಶದಲ್ಲಿ ಯಾರು ಹೆಚ್ಚು ತೆರಿಗೆ ಕಟ್ಟುತ್ತಿದ್ದಾರೆ? ಯಾರ ಹಣ ಯಾರಿಗೆ ಬಳಕೆಯಾಗುತ್ತಿದೆ ಎಂಬುದನ್ನು ನೋಡೋಣ.

ನಮ್ಮ ಭಾರತ ದೇಶದಲ್ಲಿ ಸದ್ಯಕ್ಕೆ ಎರಡು ರೀತಿಯ ತೆರಿಗೆ ಪದ್ದತಿ ಇದೆ. ಅವುಗಳೆಂದರೆ

  1. ಪ್ರತ್ಯಕ್ಷ ತೆರಿಗೆ – ಆದಾಯ ತೆರಿಗೆ: ಅಂದರೆ ಸಂಬಳ, ಉದ್ಯಮ ಸೇರಿದಂತೆ ಇತರ ಮೂಲಗಳಿಂದ ಗಳಿಸುವ ವಾರ್ಷಿಕ ಆದಾಯದ ಮೇಲೆ ತೆರಿಗೆ ಕಟ್ಟಬೇಕಿರುತ್ತದೆ. ಇದರಲ್ಲಿ ಐದು ಸ್ಲ್ಯಾಬ್‌ಗಳಲ್ಲಿ ತೆರಿಗೆ ಕಟ್ಟಿಸಿಕೊಳ್ಳಲಾಗುತ್ತದೆ. ಇದನ್ನು ಪ್ರಗತಿಪರ ತೆರಿಗೆ ಪದ್ಧತಿ ಎನ್ನುತ್ತಾರೆ. ಏಕೆಂದರೆ ಇದರಲ್ಲಿ ಬಡವರಿಗೆ ಕಡಿಮೆ ತೆರಿಗೆ ಇದ್ದರೆ, ಶ್ರೀಮಂತರಿಗೆ ಹೆಚ್ಚಿನ ತೆರಿಗೆ ವಿಧಿಸಲಾಗುತ್ತದೆ. ತೆರಿಗೆ ಸ್ಲ್ಯಾಬ್‌ಗಳು ಕೆಳಗಿನಂತಿವೆ.

3 ಲಕ್ಷ ರೂವರೆಗೆ ಆದಾಯ – ತೆರಿಗೆ ಇಲ್ಲ

3 ಲಕ್ಷ ರೂ ಯಿಂದ 6 ಲಕ್ಷ ರೂ ವರೆಗೆ – ಶೇ 5ರಷ್ಟು ತೆರಿಗೆ

6 ರಿಂದ 9 ಲಕ್ಷ ರೂವರೆಗೆ – ಶೇ 10 ರಷ್ಟು ತೆರಿಗೆ

9 ರಿಂದ 12 ಲಕ್ಷ ರೂ ವರೆಗೆ– ಶೇ 15ರಷ್ಟು ತೆರಿಗೆ

12 ರಿಂದ 15 ಲಕ್ಷ ರೂವರೆಗೆ – ಶೇ 20ರಷ್ಟು ತೆರಿಗೆ

15 ಲಕ್ಷಕ್ಕಿಂತ ಮೇಲ್ಪಟ್ಟ ಆದಾಯಕ್ಕೆ ಶೇ 30ರಷ್ಟು ತೆರಿಗೆ ಹೇರಲಾಗಿದೆ.

ಇದರೊಟ್ಟಿಗೆ 50 ಕೋಟಿ ರೂಗಳಿಗೂ ಹೆಚ್ಚಿನ ವಾರ್ಷಿಕ ವ್ಯವಹಾರ ನಡೆಸುವ ಕಂಪನಿಗಳು ಕಾರ್ಪೋರೇಟ್ ಟ್ಯಾಕ್ಸ್ ಕಟ್ಟಬೇಕು. ಈ ಮೊದಲು ಅತಿ ಹೆಚ್ಚು ಸಂಪತ್ತು ಹೊಂದಿರುವವರಿಗೆ ಸರ್ಕಾರ ತೆರಿಗೆ ವಿಧಿಸುತ್ತಿತ್ತು. ಆದರೆ ಸಂಪತ್ತಿನ ಮೇಲಿನ ತೆರಿಗೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ತೆಗೆದುಹಾಕಿದ್ದಾರೆ.

2. ಪರೋಕ್ಷ ತೆರಿಗೆ – ಪ್ರತಿಯೊಬ್ಬರೂ ಪಾವತಿಸುವ ತೆರಿಗೆ: ಯಾವುದೇ ವಸ್ತುಗಳನ್ನು ಕೊಳ್ಳುವ ಮೂಲಕ ಪ್ರತಿಯೊಬ್ಬರೂ ತೆರಿಗೆ ಕಟ್ಟುತ್ತಾರೆ. ದುಡಿಯಲು ಸಾಧ್ಯವಾಗದವರು ಸಹ ಕಟ್ಟುವ ತೆರಿಗೆ ಇದಾಗಿದೆ. ಇದನ್ನು ಪ್ರತಿಗಾಮಿ ತೆರಿಗೆ ವ್ಯವಸ್ಥೆ ಎನ್ನಲಾಗುತ್ತದೆ. ಏಕೆಂದರೆ ದಿನಕ್ಕೆ 100 ರೂ ಸಂಪಾದಿಸುವವರು ಮತ್ತು ದಿನಕ್ಕೆ 100 ಕೋಟಿ ರೂ ಸಂಪಾದಿಸುವವರಿಬ್ಬರೂ ಒಂದೇ ತೆರಿಗೆ ಪಾವತಿಸಬೇಕಿರುತ್ತದೆ. ಅಂದರೆ ಇದು ಎಲ್ಲರಿಗೂ ಸಮಾನ ತೆರಿಗೆಯಾಗಿದೆ.

2021-22ರ ಹಣಕಾಸು ವರ್ಷದಲ್ಲಿ ಆದಾಯ ತೆರಿಗೆಯಾಗಿ ಭಾರತೀಯರು ಪಾವತಿಸಿದ 6.73 ಲಕ್ಷ ಕೋಟಿ ರೂಗಳಿಗೆ ಹೋಲಿಸಿದರೆ, ಪರೋಕ್ಷ ತೆರಿಗೆಯಿಂದ 20.73 ಲಕ್ಷ ಕೋಟಿ ರೂ ಸಂಗ್ರಹಿಸಲಾಗಿದೆ. ಅಂದರೆ ಈ ದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಬಡವರು ಮತ್ತು ಮಧ್ಯಮ ವರ್ಗದವರು ಕಟ್ಟುವ ಪರೋಕ್ಷ ತೆರಿಗೆಯ ಪಾಲು ಬೃಹತ್ ಪ್ರಮಾಣದಲ್ಲಿದೆ.

ಅದರಲ್ಲಿಯೂ ಅತ್ಯಂತ ಪ್ರತಿಗಾಮಿ ತೆರಿಗೆ ವ್ಯವಸ್ಥೆಯಾದ ಜಿಎಸ್‌ಟಿ ಜಾರಿಯಾದ ನಂತರ ಈ ದೇಶದ ಶೇ.50 ರಷ್ಟು ಬಡವರು ಶೇ.64.3% ರಷ್ಟು ಜಿಎಸ್‌ಟಿ ಕಟ್ಟುತ್ತಿದ್ದಾರೆ ಎಂದು ಆಕ್ಸ್‌ಫಾಮ್ ವರದಿ ಹೇಳಿದೆ. ಏಕೆಂದರೆ ಅಂದು ದುಡಿದು ಅಂದು ತಿನ್ನುವ ಜನರು ಪ್ರತಿಯೊಂದು ವಸ್ತುಗಳನ್ನು ಕೊಳ್ಳಬೇಕಿದ್ದು ಸದ್ಯ 18% ವರೆಗೂ ಜಿಎಸ್‌ಟಿ ತೆರಿಗೆ ಇರುವುದರಿಂದ ಬಡವರೆ ಈ ದೇಶದ ಅತಿ ದೊಡ್ಡ ತೆರಿಗೆದಾರರಾಗಿದ್ದಾರೆ. ಮಧ್ಯಮ ವರ್ಗದ ಶೇ.40 ರಷ್ಟು ಜನ 33% ರಷ್ಟು ಜಿಎಸ್‌ಟಿ ಪಾವತಿಸಿದರೆ, ಮೇಲ್ವರ್ಗದ 10% ಜನರು ಕೇವಲ 3% ಜಿಎಸ್‌ಟಿ ಪಾವತಿಸುತ್ತಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಭಾರತದ ಕೇಂದ್ರ ಸರ್ಕಾರ ಮತ್ತು ಎಲ್ಲಾ ರಾಜ್ಯಗಳ ತೆರಿಗೆ ಆದಾಯದಲ್ಲಿ ಶೇ.67 ರಷ್ಟು ಭಾಗ ಪರೋಕ್ಷ ಭಾಗದಿಂದ ಬರುತ್ತದೆ.  ಕಾರ್ಪೋರೇಟ್ ಮತ್ತು ನೇರ ಆದಾಯ ತೆರಿಗೆ 33% ಬರುತ್ತದೆ. ಅದರಲ್ಲಿಯೂ ಈ 33% ತೆರಿಗೆಯನ್ನು ಕೇವಲ ಶ್ರೀಮಂತ ಉದ್ಯಮಿಗಳು ಮಾತ್ರ ಕಟ್ಟುವುದಿಲ್ಲ. ಬದಲಿಗೆ ಸಂಬಳ ಪಡೆಯುವ ಮಧ್ಯಮ ವರ್ಗದ ಜನರು ಸಹ ಆದಾಯ ತೆರಿಗೆಯ ಮೂಲಕ ಪ್ರತ್ಯಕ್ಷ ತೆರಿಗೆ ಕಟ್ಟುತ್ತಾರೆ. ಒಟ್ಟಾರೆಯಾಗಿ ಹೇಳುವುದಾದರೆ ಈ ದೇಶದಲ್ಲಿ ಹೆಚ್ಚಿನ ತೆರಿಗೆ ಕಟ್ಟುವವರು ಬಡವರೆ ಹೊರತು ಶ್ರೀಮಂತರಲ್ಲ. ಹಾಗಾಗಿ ನನ್ನ ತೆರಿಗೆ ಹಣ ಪೋಲು ಮಾಡಬೇಡಿ ಎಂದು ಹೇಳುವುದಕ್ಕೆ ಯಾವುದೇ ಅರ್ಥವಿರುವುದಿಲ್ಲ.

ಇದನ್ನೂ ಓದಿ: ರಾಜ್ಯ ಸರ್ಕಾರಿ ನೌಕರರಿಗೆ ಹೊಸ ಸರ್ಕಾರದಿಂದ ಮೊದಲ ಸಿಹಿ ಸುದ್ದಿ: ಶೇ. 4ರಷ್ಟು ತುಟ್ಟಿಭತ್ಯೆ…

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read