Homeಮುಖಪುಟಒಬ್ಬ ವ್ಯಕ್ತಿಯ 'ಅಹಂ'ನಿಂದ ರಾಷ್ಟ್ರಪತಿಗಳ ಸಾಂವಿಧಾನಿಕ ಹಕ್ಕಿಗೆ ವಂಚನೆ: ಕಾಂಗ್ರೆಸ್ ಟೀಕೆ

ಒಬ್ಬ ವ್ಯಕ್ತಿಯ ‘ಅಹಂ’ನಿಂದ ರಾಷ್ಟ್ರಪತಿಗಳ ಸಾಂವಿಧಾನಿಕ ಹಕ್ಕಿಗೆ ವಂಚನೆ: ಕಾಂಗ್ರೆಸ್ ಟೀಕೆ

- Advertisement -
- Advertisement -

ಮೇ 28ರಂದು ನೂತನ ಸಂಸತ್ ಭವನ ಉದ್ಘಾಟನೆ ನಡೆಯಲಿದ್ದು, ಈ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಕಾಂಗ್ರೆಸ್‌ ಸೇರಿದಂತೆ ಇತರ ವಿರೋಧ ಪಕ್ಷಗಳು ಗುರುವಾರ ಮತ್ತೆ ವಾಗ್ದಾಳಿ ನಡೆಸಿವೆ.

ಈ ಬಗ್ಗೆ ಮಾತನಾಡಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ”ಒಬ್ಬ ವ್ಯಕ್ತಿಯ ಅಹಂ ಹಾಗೂ ತನ್ನ ಏಳಿಗೆ ಕುರಿತ ಹಂಬಲದಿಂದಾಗಿ, ರಾಷ್ಟ್ರಪತಿಯಾಗಿರುವ ದೇಶದ ಮೊದಲ ಬುಡಕಟ್ಟು ಮಹಿಳೆಯು ನೂತನ ಸಂಸತ್ ಭವನ ಉದ್ಘಾಟಿಸುವ ಸಾಂವಿಧಾನಿಕ ಹಕ್ಕಿನಿಂದ ವಂಚಿತರಾಗಬೇಕಾಗಿದೆ” ಎಂದು ಟೀಕಿಸಿದ್ದಾರೆ.

”ಮೋದಿ ನೇತೃತ್ವದ ಸರ್ಕಾರದ ಅಹಂಕಾರವು ಸಂಸದೀಯ ವ್ಯವಸ್ಥೆಯನ್ನೇ ನಾಶಗೊಳಿಸಿದೆ” ಎಂದು ಖರ್ಗೆ ಆರೋಪಿಸಿದ್ದಾರೆ.

ಇದನ್ನೂ ಓದಿ: ನೂತನ ಸಂಸತ್ ಭವನದ ಉದ್ಘಾಟನಾ ಸಮಾರಂಭ ಬಹಿಷ್ಕರಿಸಿದ ವಿರೋಧ ಪಕ್ಷಗಳು

”ಸಂಸತ್ ಭವನ ಎಂಬುದು ಪ್ರಜಾತಂತ್ರದ ದೇವಾಲಯ ಇದ್ದಂತೆ. ರಾಷ್ಟ್ರಪತಿಗಳು ಸಂಸತ್‌ನ ಮುಖ್ಯಸ್ಥರು. ನೂತನ ಸಂಸತ್‌ ಭವನವನ್ನು ರಾಷ್ಟ್ರಪತಿ ಉದ್ಘಾಟಿಸಬೇಕು. ಆದರೆ, ಅವರಿಂದ ಈ ಹಕ್ಕನ್ನು ಕಸಿದುಕೊಳ್ಳುವ ಮೂಲಕ ನೀವು ಏನು ಹೇಳಲು ಹೊರಟಿದ್ದೀರಿ ಎಂಬುದನ್ನು ತಿಳಿದುಕೊಳ್ಳಲು ದೇಶದ 140 ಕೋಟಿ ಜನರು ಬಯಸುತ್ತಾರೆ” ಎಂದು ಹೇಳಿದ್ದಾರೆ.

ಇನ್ನು ಈ ಬಗ್ಗೆ ವ್ಯಂಗ್ಯವಾಡಿರುವ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಟ್ವಿಟ್ ಮೂಲಕ ಪ್ರಧಾನಿ ವಿರುದ್ಧ ಮತ್ತೊಮ್ಮೆ ಹರಿಹಾಯ್ದಿದ್ದಾರೆ. ”ಅಶೋಕ ದಿ ಗ್ರೇಟ್, ಅಕ್ಟ‌ ದಿ ಗ್ರೇಟ್, ಮೋದಿ ದಿ ಇನಾಗುರೇಟ್” ಎಂದು ಇಂಗ್ಲಿಷ್‌ನಲ್ಲಿ ಟ್ವಿಟ್ ಮಾಡಿದ್ದಾರೆ.

ಸಂಸತ್‌ ಭವನವನ್ನು ಸಾಂವಿಧಾನಿಕ ಮೌಲ್ಯಗಳಿಂದ ನಿರ್ಮಿಸಬೇಕೇ ಹೊರತು ಗರ್ವದ ಇಟ್ಟಿಗೆಗಳಿಂದಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರು ನೂತನ ಸಂಸತ್ ಭವನವನ್ನು ಲೋಕಾರ್ಪಣೆ ಮಾಡುವ ಸಮಾರಂಭವನ್ನು ಕಾಂಗ್ರೆಸ್, ಆಮ್ ಆದ್ಮಪಾರ್ಟಿ (ಎಎಪಿ), ತೃಣ ಮೂಲ ಕಾಂಗ್ರೆಸ್ (ಟಿಎಂಸಿ) ಸೇರಿದಂತೆ 19 ವಿರೋಧ ಪಕ್ಷಗಳು ಬಹಿಷ್ಕರಿಸಿವೆ. ಇದರ ಬೆನ್ನಲ್ಲೇ ರಾಹುಲ್ ಹೇಳಿಕೆ ನೀಡಿದ್ದಾರೆ.

”ರಾಷ್ಟ್ರಪತಿಯವರನ್ನು ಉದ್ಘಾಟನೆಗೆ ಕರೆತರದಿರುವುದು ಅಥವಾ ಅವರಿಗೆ ಆಹ್ವಾನ ನೀಡದಿರುವುದು ದೇಶದ ಅತ್ಯುನ್ನತ ಸಾಂವಿಧಾನಿಕ ಹುದ್ದೆಗೆ ಮಾಡುವ ಅವಮಾನ. ಸಂಸತ್‌ ಭವನವನ್ನು ಸಾಂವಿಧಾನಿಕ ಮೌಲ್ಯಗಳಿಂದ ನಿರ್ಮಿಸಬೇಕೇ ಹೊರತು ಗರ್ವದ ಇಟ್ಟಿಗೆಗಳಿಂದಲ್ಲ” ಎಂದು ರಾಹುಲ್ ಟ್ವಿಟ್ ಮಾಡಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read