ಚಕ್ಕಾ ಜಾಂ

ಶನಿವಾರ ಮೂರು ಗಂಟೆಗಳ ಚಕ್ಕಾ ಜಾಮ್ (ರಸ್ತೆ ಸಂಚಾರ ತಡೆ) ಅನ್ನು ದೇಶಾವ್ಯಾಪಿ ಯಶಸ್ವಿಯಾಗಿ, ಶಾಂತಿಯುತವಾಗಿ ಕೈಗೊಂಡ ರೈತ ಸಂಘಗಳು ತಮ್ಮ ಆಂದೋಲನವನ್ನು ಜೀವಂತವಾಗಿಡಲು ಪ್ರತಿ ವಾರ ಅಂತಹ ಒಂದು ಕಾರ್ಯಕ್ರಮವನ್ನು ಆಯೋಜಿಸುವ ಪ್ರಯತ್ನಗಳನ್ನು ಪ್ರಾರಂಭಿಸುವುದಾಗಿ ಹೇಳಿವೆ ಎಂದು ದಿ ಪ್ರಿಂಟ್ ವರದಿ ಮಾಡಿದೆ.

ಮೋದಿ ಸರ್ಕಾರದ ಮೂರು ಕೃಷಿ ಕಾನೂನುಗಳನ್ನು ವಾಪಸ್ ಪಡೆಯಬೇಕೆಂದು ಮತ್ತು ಎಂಎಸ್‌ಪಿ ಖಾತ್ರಿಗಾಗಿ ಕಾಯ್ದೆ ಜಾರಿಗೊಳಿಸಬೇಕೆಂದು ಪ್ರತಿಭಟಿಸುತ್ತಿರುವ ರೈತ ಸಂಘಟನೆಗಳ ಒಕ್ಕೂಟವಾದ ಸಂಯುಕ್ತ ಕಿಸಾನ್ ಮೋರ್ಚಾ, ಸರ್ಕಾರ ಸಂವಾದಕ್ಕೆ ಮುಕ್ತವಾಗಿದ್ದರೂ, ಮಾತುಕತೆಗಳನ್ನು ಅನುಕೂಲಕರ ವಾತಾವರಣದಲ್ಲಿ ಮಾತ್ರ ನಡೆಸಬಹುದು ಎಂದು ಹೇಳಿದೆ.

ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಶನಿವಾರ ಮಧ್ಯಾಹ್ನ 12 ರಿಂದ ಮಧ್ಯಾಹ್ನ 3 ರವರೆಗೆ ದಿಗ್ಬಂಧನ ನಡೆಸಲಾಯಿತು. ಪ್ರತಿಭಟನೆ ಶಾಂತಿಯುತವಾಗಿದ್ದರೂ, ರೈತರಿಗೆ ಬೆಂಬಲವಾಗಿ ಪ್ರತಿಭಟನೆ ನಡೆಸಿದ್ದಕ್ಕಾಗಿ ಸುಮಾರು 50 ಜನರನ್ನು ದೆಹಲಿಯಲ್ಲಿ ಬಂಧಿಸಲಾಗಿದೆ. ಇದೇ ರೀತಿ ದೇಶಾದ್ಯಂತ ಬಂಧನ, ಬಿಡುಗಡೆಗಳು ನಡೆದಿವೆ.

ಬೆಂಗಳೂರಿನಲ್ಲೂ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ಬಿಡುಗಡೆ ಮಾಡಲಾಗಿದೆ. ದೇಶದ ವಿವಿಧೆಡೆ ಈ ಶಾಂತಿಯುತ ಪ್ರತಿಭಟನೆಗೆ ಪೊಲೀಸರು ಅಡ್ಡಗಾಲು ಹಾಕಿದ ವರದಿಗಳು ಬಂದಿವೆ.
ಮೂರು ಕೃಷಿ ಕಾನೂನುಗಳನ್ನು ವಿರೋಧಿಸಿ ರೈತ ಸಂಘಟನೆಗಳ ಪ್ರಾತಿನಿಧಿಕ ಸಂಸ್ಥೆಯಾದ ಸಂಯುಕ್ತ್ ಕಿಸಾನ್ ಮೋರ್ಚಾ ಶುಕ್ರವಾರ ದೆಹಲಿ, ಉತ್ತರ ಪ್ರದೇಶ ಮತ್ತು ಉತ್ತರಾಖಂಡ್ ಹೊರತುಪಡಿಸಿ ಭಾರತದಾದ್ಯಂತ ರಸ್ತೆ ದಿಗ್ಬಂಧನ ನಡೆಸಲಾಗುವುದು ಎಂದು ತಿಳಿಸಿತ್ತು.

ಎರಡೂವರೆ ತಿಂಗಳಿನಿಂದ ಲಕ್ಷಾಂತರ ರೈತರು ದೆಹಲಿಯ ಗಡಿಯಲ್ಲಿ ಪ್ರತಿಭಟನೆ ಮುಂದುವರೆಸುತ್ತಿದ್ದು, ಪ್ರತಿಭಟನಾ ಸ್ಥಳಗಳಲ್ಲಿ ಇಂಟರ್‌ನೆಟ್ ಸ್ಥಗಿತ, ಅಧಿಕಾರಸ್ಥರ ಕಿರುಕುಳ ಮತ್ತು ಬಜೆಟ್‌ನಲ್ಲಿ ರೈತಾಪಿಗಳ ನಿರ್ಲಕ್ಷ್ಯ ವಿರೋಧಿಸಿ ಶನಿವರ ಚಕ್ಕಾ ಬಂದ್ ನಡೆಸಲಾಗಿತು.

“ಚಕ್ಕಾ ಜಾಮ್ ಭಾರತದಾದ್ಯಂತ ಬಹಳ ಯಶಸ್ವಿಯಾಗಿದೆ. ಪ್ರತಿ ರಾಜ್ಯದಲ್ಲಿ ಕನಿಷ್ಠ 100 ಗ್ರಾಮಗಳು, ಪಟ್ಟಣಗಳು ದಿಗ್ಬಂಧನದಲ್ಲಿ ಪಾಲ್ಗೊಂಡಿವೆ” ಎಂದು ಅಖಿಲ ಭಾರತ ಕಿಸಾನ್ ಸಭೆಯ ಪ್ರಧಾನ ಕಾರ್ಯದರ್ಶಿ ಹನ್ನನ್ ಮೊಲ್ಲಾ ಹೇಳಿದ್ದಾರೆ. “ದೆಹಲಿಯ ಗಡಿಯಲ್ಲಿ ಪ್ರತಿಭಟನೆ ಮುಂದುವರಿಯುತ್ತದೆಯಾದರೂ, ಪ್ರತಿಭಟನೆಯನ್ನು ಜೀವಂತವಾಗಿಡಲು ಪ್ರತಿ ವಾರವೂ ಅಂತಹ ಒಂದು ಕಾರ್ಯಕ್ರಮವನ್ನು ಆಯೋಜಿಸುವ ಪ್ರಯತ್ನಗಳು ನಡೆಯುತ್ತಿವೆ. ಇಲ್ಲದಿದ್ದರೆ ಪ್ರತಿಭಟನೆ ಮುಗಿದಿದೆ ಎಂದು ಸರ್ಕಾರ ಭಾವಿಸಬಹುದು” ಎಂದು ಅವರು ಹೇಳಿದ್ದಾರೆ.

ಈ ಒಂದು ಮೊಮೆಂಟಮ್ ಅನ್ನು (ಆವೇಗವನ್ನು ) ಮುಂದುವರೆಸಲು, ಸಾಧ್ಯವಾದಷ್ಟು ಹೆಚ್ಚಿನ ರಾಜ್ಯಗಳನ್ನು ಒಳಗೊಳ್ಳಲು ಪ್ರಯತ್ನಿಸಲಾಗುವುದು ಎಂದು ರೈತ ನಾಯಕರು ಹೇಳಿದರು. “ದೆಹಲಿಯ ಗಡಿಯಲ್ಲಿ ಪ್ರತಿಭಟನೆ ಮುಂದುವರಿಯುತ್ತದೆ, ಆದರೆ ಅದು ಸಾಕಾಗುವುದಿಲ್ಲ. ಇಂದಿನ ಚಕ್ಕಾ ಜಾಮ್‌ನಲ್ಲಿ ರಾಷ್ಟ್ರವ್ಯಾಪಿ ಭಾಗವಹಿಸುವಿಕೆಯನ್ನು ನಾವು ನೋಡಿದಂತೆಯೇ, ಭವಿಷ್ಯದಲ್ಲಿ ನಾವು ಇತರ ರಾಜ್ಯಗಳ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳಬೇಕು” ಎಂದು ಜಮ್ಹುರಿ ಕಿಸಾನ್ ಸಭೆಯ ಪ್ರಧಾನ ಕಾರ್ಯದರ್ಶಿ ಕುಲ್ವಂತ್ ಸಿಂಗ್ ಸಂಧು ಹೇಳಿದರು.

ದೆಹಲಿ ಮತ್ತು ಉತ್ತರ ಪ್ರದೇಶವನ್ನು ಸಂಪರ್ಕಿಸುವ ಗಾಜಿಪುರ ಗಡಿಯಲ್ಲಿ ಪ್ರತಿಭಟನೆಯನ್ನು ಸಂಘಟಿಸುತ್ತಿರುವ ಭಾರತೀಯ ಕಿಸಾನ್ ಯೂನಿಯನ್ ವಕ್ತಾರ ರಾಕೇಶ್ ಟಿಕಾಯತ್, ಚಕ್ಕಾ ಜಾಮ್ ಕೊನೆಯಲ್ಲಿ ಸರ್ಕಾರಕ್ಕೆ ಒಂದು ಗಡುವನ್ನು ರವಾನಿಸಿದ್ದಾರೆ. “ನಾವು ಕಾನೂನುಗಳನ್ನು ರದ್ದುಗೊಳಿಸಲು ಅಕ್ಟೋಬರ್ 2 ರವರೆಗೆ ಸರ್ಕಾರಕ್ಕೆ ಸಮಯ ನೀಡಿದ್ದೇವೆ. ಇದರ ನಂತರ, ನಾವು ಹೆಚ್ಚಿನ ಯೋಜನೆಯನ್ನು ಮಾಡುತ್ತೇವೆ” ಎಂದು ಅವರು ಎಎನ್‌ಐಗೆ ತಿಳಿಸಿದ್ದಾರೆ.

ಇತರ ರೈತ ಮುಖಂಡರು ದಿ ಪ್ರಿಂಟ್‌ಗೆ ಅಂತಹ ಯಾವುದೇ ದಿನಾಂಕವನ್ನು ನಿಗದಿಪಡಿಸಿಲ್ಲ ಎಂದು ಹೇಳಿದ್ದಾರೆ. “ಅವರು (ಟಿಕಾಯತ್) ದಿನಾಂಕವನ್ನು ಪ್ರಸ್ತಾಪಿಸಿರಬಹುದು, ಆದರೆ ಇನ್ನೂ ಅಂತಹ ಬದ್ಧತೆಯ ಕಾರ್ಯಕ್ರಮ ರೂಪಿಸಿಲ್ಲ” ಎಂದಿದ್ದಾರೆ.

ಭಾರತೀಯ ಕಿಸಾನ್ ಯೂನಿಯನ್ (ರಾಜೇವಾಲ್) ಪ್ರಧಾನ ಕಾರ್ಯದರ್ಶಿ ಓಂಕರ್ ಸಿಂಗ್, “ಅಕ್ಟೋಬರ್ 2 ರೊಳಗೆ ಸರ್ಕಾರ ಕಾನೂನುಗಳನ್ನು ರದ್ದುಗೊಳಿಸಿದರೆ ನಾವು ಮನೆಗೆ ಹಿಂದಿರುಗುತ್ತೇವೆ. ಕಾನೂನುಗಳನ್ನು ರದ್ದುಗೊಳಿಸದಿದ್ದರೆ ನಾವು ನಮ್ಮ ಪ್ರತಿಭಟನೆಯನ್ನು ಮುಂದುವರಿಸುತ್ತೇವೆ. ಅಂತಹ ಯಾವುದೇ ದಿನಾಂಕವನ್ನು ಡೆಡ್‌ಲೈನ್ ಎಂದು ಈವರೆಗೂ ನಿಗದಿಪಡಿಸಲಾಗಿಲ್ಲ ” ಎಂದಿದ್ದಾರೆ.

ಅನುಕೂಲಕರ ವಾತಾವರಣವಿದ್ದರಷ್ಠೇ ಮಾತುಕತೆ

ಪ್ರತಿಭಟನಾ ನಿರತ ರೈತರು ಮತ್ತು ಮೋದಿ ಸರ್ಕಾರದ ನಡುವೆ ಈಗಾಗಲೇ 11 ಸುತ್ತಿನ ಚರ್ಚೆ ನಡೆದಿದ್ದರೂ, ಯಾವುದೇ ಪರಿಹಾರವನ್ನು ತಲುಪಿಲ್ಲ. ಮೂರು ಕಾನೂನುಗಳನ್ನು ಸಂಪೂರ್ಣವಾಗಿ ರದ್ದುಗೊಳಿಸುವಂತೆ ರೈತರು ಒತ್ತಾಯಿಸಿದ್ದಾರೆ, ಆದರೆ ಸರ್ಕಾರವು ಕಾನೂನುಗಳನ್ನು 18 ತಿಂಗಳು ತಡೆ ಹಿಡಿಯುವುದರ ಬಗ್ಗೆ ಮತ್ತು ತಿದ್ದುಪಡಿಗಳನ್ನು ಮಾಡುವ ಬಗ್ಗೆ ಮಾತ್ರ ಭರವಸೆ ನೀಡಿದೆ.

ರೈತ ಮುಖಂಡರು ತಾವು ಮಾತುಕತೆಗೆ ಮುಕ್ತವಾಗಿದ್ದರೂ, ಸರ್ಕಾರ ಮೊದಲ ಹೆಜ್ಜೆ ಇಟ್ಟರೆ ಮಾತ್ರ ಮಾತುಕತೆ ನಡೆಯುತ್ತದೆ ಎಂದು ಹೇಳಿದ್ದಾರೆ. “ಸರ್ಕಾರವು ಸಂಸತ್ತಿನಲ್ಲಿ ಮಾತುಕತೆಗೆ ಸಿದ್ಧವಾಗಿದೆ ಎಂದು ಹೇಳುತ್ತಿದೆ, ಕೇವಲ ಒಂದು ದೂರವಾಣಿ ಕರೆ ಮಾತ್ರ ಎಂದು ಪ್ರಧಾನಿ ಹೇಳುತ್ತಿದ್ದಾರೆ. ಆದರೆ ಆ ಫೋನ್ ಕರೆ ಬರಲಿ, ನೋಡೋಣ” ಎಂದು ಸಂಧು ಹೇಳಿದರು. “ಮಾತುಕತೆಗಾಗಿ ಸರ್ಕಾರವನ್ನು ಸಂಪರ್ಕಿಸಲು ನಾವು ಸಾಧ್ಯವಿಲ್ಲ; ಅದು ಅವರಿಂದ ಬರಬೇಕು’ ಎಂಬುದು ಬಹುತೇಕ ರೈತರ ಅಭಿಪ್ರಾಯವಾಗಿದೆ.

ಸರ್ಕಾರವು ಅನುಕೂಲಕರ ವಾತಾವರಣವನ್ನು ಸೃಷ್ಟಿಸಿದರೆ ಮಾತ್ರ ಮಾತುಕತೆ ನಡೆಸಬಹುದು ಎಂದು ರೈತರು ಹೇಳಿದರು. “ಅವರು ನಮ್ಮ ನಾಯಕರನ್ನು ಬಂಧಿಸುತ್ತಿದ್ದಾರೆ, ನಮ್ಮನ್ನು ದೇಶ ವಿರೋಧಿಗಳು ಎಂದು ಕರೆಯುತ್ತಾರೆ. ಅಂತಹ ಸನ್ನಿವೇಶದಲ್ಲಿ ನಾವು ಅವರೊಂದಿಗೆ ಹೇಗೆ ಮಾತುಕತೆ ನಡೆಸಬಹುದು?’ ಎಂದು ಮೊಲ್ಲಾ ಕೇಳಿದರು. “ಆದರೆ ನಾವು ಯಾವಾಗಲೂ ಈ ಸಮಸ್ಯೆಯನ್ನು ಸರ್ಕಾರ ಮತ್ತು ರೈತರ ನಡುವೆ ಇಟ್ಟುಕೊಂಡಿದ್ದೇವೆ ಮತ್ತು ಸಂವಾದದ ಮೂಲಕ ಮಾತ್ರ ಇದನ್ನು ಪರಿಹರಿಸಬಹುದು’ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
ಏನಿದ್ದರೂ, ಪ್ರಾತಿನಿಧಿಕ ಸಂಸ್ಥೆ ಸಂಯುಕ್ತ್ ಕಿಸಾನ್ ಮೋರ್ಚಾ ಯಾವ ನಿರ್ಣಯ ತೆಗೆದುಕೊಳ್ಳಲಿದೆ ಎಂಬುದು ಮಹತ್ವದ್ದಾಗಿದೆ.


ಇದನ್ನೂ ಓದಿ: ಎಚ್ಚರಿಕೆಯ ಪೋಸ್ಟರ್‌‌‌: ’ಬಿಜೆಪಿಗರೆ ಗ್ರಾಮಕ್ಕೆ ಪ್ರವೇಶಿಸಿದರೆ ನಿಮ್ಮ ಜೀವಕ್ಕೆ ನೀವೆ ಜವಾಬ್ದಾರಿ’

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
+ posts

LEAVE A REPLY

Please enter your comment!
Please enter your name here