Homeಕರ್ನಾಟಕಕಾಂತಾರ, ಕಾಶ್ಮೀರ್‌ ಫೈಲ್ಸ್‌ಗೆ ಸಿಕ್ಕ ದಾದಾ ಸಾಹೇಬ್‌ ಪಾಲ್ಕೆ ಪ್ರಶಸ್ತಿ ನಿಜವಾದದ್ದಲ್ಲ; ಅಸಲಿಯತ್ತೇನು?

ಕಾಂತಾರ, ಕಾಶ್ಮೀರ್‌ ಫೈಲ್ಸ್‌ಗೆ ಸಿಕ್ಕ ದಾದಾ ಸಾಹೇಬ್‌ ಪಾಲ್ಕೆ ಪ್ರಶಸ್ತಿ ನಿಜವಾದದ್ದಲ್ಲ; ಅಸಲಿಯತ್ತೇನು?

- Advertisement -
- Advertisement -

ಫೆಬ್ರವರಿ 21ರಂದು #DadaSahebPhalkeAwards2023 ಎಂಬ ಹ್ಯಾಶ್‌ಟ್ಯಾಗ್ ಟ್ವಿಟರ್‌ನಲ್ಲಿ ಟ್ರೆಂಡ್‌ ಆಗಿದೆ. ವಿವೇಕ್ ಅಗ್ನಿಹೋತ್ರಿ ಅವರ ವಿವಾದಾತ್ಮಕ ಚಲನಚಿತ್ರ ‘ದಿ ಕಾಶ್ಮೀರ್ ಫೈಲ್ಸ್’ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಯನ್ನು ಪಡೆದಿದೆ ಎಂದು ಅನೇಕ ಮಾಧ್ಯಮಗಳು, ನ್ಯೂಸ್‌ ಏಜೆನ್ಸಿಗಳು ಸುದ್ದಿ ಮಾಡಿವೆ.

“ದಾದಾಸಾಹೇಬ್ ಪಾಲ್ಕೆ ಅವಾರ್ಡ್ಸ್ 2023” ಎಂಬ ಹ್ಯಾಷ್‌ಟ್ಯಾಗ್ ಮೂಲಕ ಕೆಲವೊಂದು ಗೊಂದಲವನ್ನು ಹರಿಬಿಡಲಾಗುತ್ತಿದೆ. ಸಿನಿಮಾ ಕ್ಷೇತ್ರದ ಜೀವನಮಾನ ಸಾಧನೆಗೆ ದೇಶದಲ್ಲಿ ಅತ್ಯುನ್ನತ ಪ್ರಶಸ್ತಿಯಾಗಿ ನೀಡಲಾಗುವ ‘ದಾದಾ ಸಾಹೇಬ್‌ ಪಾಲ್ಕೆ ಪ್ರಶಸ್ತಿ’ ಇದೆಂಬ ಭಾವನೆಯನ್ನು ಈ ಮೂಲಕ ತುಂಬಲಾಗುತ್ತಿದೆ.

‘ಕಾಂತಾರ’ದ ಸಿನಿಮಾದ ನಟ ರಿಷಬ್‌ ಶೆಟ್ಟಿ, ಮಲಯಾಳಂ ನಟ ದುಲ್ಕರ್‌ ಸಲ್ಮಾನ್‌ ಮೊದಲಾದವರಿಗೆ ವಿವಿಧ ವಿಭಾಗಗಳಲ್ಲಿ ‘ದಾದಾ ಸಾಹೇಬ್‌ ಪಾಲ್ಕೆ ಪ್ರಶಸ್ತಿಗಳು’ ದೊರೆತಿವೆ ಎಂದು ಸುದ್ದಿಯಾಗುತ್ತಿವೆ.

ಸಿನಿಮಾ ಕ್ಷೇತ್ರದಲ್ಲಿ ನೀಡಲಾಗುವ ಅತ್ಯುನ್ನತ ಹಾಗೂ ಕೇಂದ್ರ ಸರ್ಕಾರವು ಕೊಡಮಾಡುವ ಪ್ರಶಸ್ತಿ ಇದಾಗಿದೆ ಎಂಬ ಭಾವನೆಯನ್ನು ಹ್ಯಾಷ್‌ಟ್ಯಾಗ್‌ಗಳು ಸೃಷ್ಟಿಸುತ್ತಿವೆ. ಆದರೆ ವಾಸ್ತವಗಳು ಬೇರೆ ಇವೆ.

ಫೆಬ್ರವರಿ 20 ರಂದು ಮುಂಬೈನಲ್ಲಿ ಸಮಾರಂಭ ನಡೆದಿದ್ದು, ಅಗ್ನಿಹೋತ್ರಿ ಅವರ ಚಲನಚಿತ್ರ ‘ಕಾಶ್ಮೀರ್‌ ಫೈಲ್ಸ್‌’ ಸೇರಿದಂತೆ  ಇತರ ಚಲನಚಿತ್ರಗಳು ‘ದಾದಾಸಾಹೇಬ್ ಪಾಲ್ಕೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ’ ಗೆದ್ದಿವೆ.

‘ದಾದಾಸಾಹೇಬ್ ಪಾಲ್ಕೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ’ವನ್ನು (ಡಿಪಿಐಎಫ್‌ಎಫ್‌) 2012 ರಲ್ಲಿ ಆರಂಭವಾಯಿತು. 2016ರಿಂದ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ ಎಂದು ಡಿಫಿಐಎಫ್‌ಎಫ್‌ ವೆಬ್‌ಸೈಟ್ ಹೇಳುತ್ತದೆ.

“ದಾದಾಸಾಹೇಬ್ ಪಾಲ್ಕೆ ಎಂದು ಪ್ರೀತಿಯಿಂದ ಕರೆಯಲ್ಪಡುವ ದಿವಂಗತ ಧುಂಡಿರಾಜ್ ಗೋವಿಂದ್ ಪಾಲ್ಕೆ ಅವರ ಪರಂಪರೆಯನ್ನು ಮುಂದುವರಿಸಲು” ಈ ಪ್ರಶಸ್ತಿ ಸ್ಥಾಪಿಸಿರುವುದಾಗಿ ವೆಬ್‌ಸೈಟ್‌ ಹೇಳಿಕೊಂಡಿದೆ. “ಭಾರತದ ಏಕೈಕ ಸ್ವತಂತ್ರ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ” ಎಂದೂ ಡಿಪಿಐಎಫ್‌ಎಫ್‌ ಪ್ರಚಾರ ಮಾಡಿಕೊಂಡಿದೆ.

ಈ ಪ್ರಶಸ್ತಿಗಳನ್ನು ಉದ್ಯಮಿ ಅನಿಲ್ ಮಿಶ್ರಾ ಸ್ಥಾಪಿಸಿದ್ದಾರೆ ಎಂದು ವೆಬ್‌ಸೈಟ್ ಸ್ಪಷ್ಟಪಡಿಸಿದೆ. ಐಎಂಡಿಬಿ ಆನ್‌ಲೈನ್ ಫಿಲ್ಮ್ ಡೇಟಾಬೇಸ್‌ನಲ್ಲಿ ಮಿಶ್ರಾ ಅವರನ್ನು ‘ಸಿಬಿಎಫ್‌ಸಿಯ ಸಲಹಾ ಮಂಡಳಿಯ ಸದಸ್ಯ’ ಎಂದು ನಮೂದಿಸಲಾಗಿದೆ. ಆದರೆ ಸಿಬಿಎಫ್‌ಸಿ ವೆಬ್‌ಸೈಟ್‌ನಲ್ಲಿ ನೀಡಲಾಗಿರುವ ಮಂಡಳಿಯ ಸದಸ್ಯರ ಪ್ರಸ್ತುತ ಪಟ್ಟಿಯಲ್ಲಿ ಮಿಶ್ರಾ ಅವರ ಹೆಸರಿಲ್ಲ.

ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಭಾರತದ ಮಾಜಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರನ್ನು ತಮ್ಮ “ಹಿತೈಷಿಗಳು” ಎಂದು ಡಿಪಿಐಎಫ್‌ಎಫ್‌ ವೆಬ್‌ಸೈಟ್‌ನಲ್ಲಿ ಪಟ್ಟಿ ಮಾಡಲಾಗಿದೆ. 2023ರ ಪ್ರಶಸ್ತಿಗಳಿಗೆ ಸಂಬಂಧಿಸಿದಂತೆ ಅಮಿತ್ ಶಾ ಅವರು ಶುಭ ಹಾರೈಕೆ ಮಾಡಿರುವ ಪತ್ರವನ್ನೂ ವೆಬ್‌ಸೈಟ್‌ನಲ್ಲಿ ಪ್ರದರ್ಶಿಸಲಾಗಿದೆ.

ದಾದಾಸಾಹೇಬ್ ಪಾಲ್ಕೆಯವರ ಮೊಮ್ಮಗ ಎಂದು ಗುರುತಿಸಲಾದ ಚಂದ್ರಶೇಖರ್ ಪುಸಲ್ಕರ್ ಅವರು ತೀರ್ಪುಗಾರರ ಅಧ್ಯಕ್ಷರಾಗಿದ್ದಾರೆ.

2022ರಲ್ಲಿ ಉದ್ಘಾಟನೆಗೊಂಡ ಪ್ರಧಾನಮಂತ್ರಿ ಸಂಗ್ರಹಾಲಯವು ಈ ಪ್ರಶಸ್ತಿಗಳನ್ನು ‘ಬೆಂಬಲಿಸುತ್ತದೆ’ ಎಂದೂ ಡಿಫಿಐಎಫ್‌ಎಫ್‌ ಪ್ರಚಾರ ಮಾಡಿಕೊಂಡಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಈ ಪ್ರಶಸ್ತಿಗೂ 1969ರಲ್ಲಿ ಸ್ಥಾಪಿಸಲಾದ ವಾರ್ಷಿಕ ‘ದಾದಾಸಾಹೇಬ್ ಪಾಲ್ಕೆ’ ಪ್ರಶಸ್ತಿಗೂ ಯಾವುದೇ ಸಂಬಂಧವಿಲ್ಲ. ಭಾರತೀಯ ಚಿತ್ರರಂಗಕ್ಕೆ ಅತ್ಯುತ್ತಮ ಕೊಡುಗೆ ನೀಡಿದ ಒಬ್ಬರನ್ನು ಆಯ್ಕೆ ಮಾಡಿ ಪ್ರತಿವರ್ಷ ಪ್ರಖ್ಯಾತ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿಯನ್ನು ಕೊಡಮಾಡಲಾಗುತ್ತಿದೆ. ಡಾ.ರಾಜ್‌ಕುಮಾರ್‌ (1995), ಆಶಾ ಪರೇಖ್ (2020), ರಜನಿಕಾಂತ್ (2019), ಗುಲ್ಜಾರ್ (2013), ಅಡೂರ್ ಗೋಪಾಲಕೃಷ್ಣನ್ (2004), ಸತ್ಯಜಿತ್ ರೇ (1984), ಪೃಥ್ವಿರಾಜ್ ಕಪೂರ್ (1971) ಮತ್ತು ದೇವಿಕಾ ರಾಣಿ (1969) ಮೊದಲಾದವರು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಅಧಿಕೃತವಾಗಿ ‘ದಾದಾಸಾಹೇಬ್ ಪಾಲ್ಕೆ ಪ್ರಶಸ್ತಿ’ಯನ್ನು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಅಡಿಯಲ್ಲಿ ಚಲನಚಿತ್ರೋತ್ಸವಗಳ ನಿರ್ದೇಶನಾಲಯವು ನೀಡುತ್ತದೆ.

‘ದಾದಾಸಾಹೇಬ್ ಪಾಲ್ಕೆ ಪ್ರಶಸ್ತಿಗಳು’ ಎಂಬ ಹೆಸರು ಉಂಟು ಮಾಡಿರುವ ಗೊಂದಲದ ಬಗ್ಗೆ ‘ಹಿಂದೂಸ್ಥಾನ್‌ ಟೈಮ್‌ 2018’ರಲ್ಲಿ ವರದಿ ಮಾಡಿತ್ತು. ಪಾಲ್ಕೆ ಅವರ ಹೆಸರಿನಲ್ಲಿ ಎರಡು ಸ್ವತಂತ್ರ ಪ್ರಶಸ್ತಿಗಳು ಹುಟ್ಟಿಕೊಂಡಿರುವುದನ್ನು ಉಲ್ಲೇಖಿಸಿತ್ತು. ‘ದಾದಾಸಾಹೇಬ್ ಪಾಲ್ಕೆ ಎಕ್ಸಲೆನ್ಸ್ ಅವಾರ್ಡ್ಸ್’ ಮತ್ತು ‘ದಾದಾಸಾಹೇಬ್ ಪಾಲ್ಕೆ ಫಿಲ್ಮ್ ಫೌಂಡೇಶನ್ ಅವಾರ್ಡ್ಸ್’ ಎಂಬ ಎರಡು ಸ್ವತಂತ್ರ ಪ್ರಶಸ್ತಿಗಳು ಉಂಟು ಮಾಡಿರುವ ಗೊಂದಲದ ಕುರಿತು ವರದಿ ಬೆಳಕು ಚೆಲ್ಲಿತ್ತು.

ಪ್ರಸ್ತುತ ಸಂದರ್ಭದಲ್ಲಿ ಅಗ್ನಿಹೋತ್ರಿಯಂಥವರು ಮಾಡುತ್ತಿರುವ ಟ್ವಿಟ್‌ಗಳು ಈ ಗೊಂದಲವನ್ನೇ ಮುಂದುವರಿಸಿವೆ.

ಪ್ರಶಸ್ತಿಯ ಕುರಿತು ಟ್ವೀಟ್ ಮಾಡಿರುವ ಅಗ್ನಿಹೋತ್ರಿ, “ಘೋಷಣೆ: #TheKashmirFiles #DadaSahebPhalkeAwards2023ರಲ್ಲಿ ‘ಅತ್ಯುತ್ತಮ ಚಲನಚಿತ್ರ’ ಪ್ರಶಸ್ತಿಯನ್ನು ಗೆದ್ದಿದೆ. ಈ ಪ್ರಶಸ್ತಿಯನ್ನು ಭಯೋತ್ಪಾದನೆಯಿಂದ ತೊಂದರೆಗೊಳಗಾದ ಸಂತ್ರಸ್ತರಿಗೆ, ಆಶೀರ್ವದಿಸಿದ ಭಾರತದ ಎಲ್ಲಾ ಜನರಿಗೆ ಸಮರ್ಪಿಸುತ್ತೇನೆ” ಎಂದು ಬರೆದುಕೊಂಡಿದ್ದಾರೆ.

ವಾರ್ಷಿಕವಾಗಿ ಕೊಡುವ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿಯೆಂದೇ ಜನಸಾಮಾನ್ಯರು ಭಾವಿಸಿಬಿಡುವಂತೆ ವಿವೇಕ್ ಅಗ್ನಿಹೋತ್ರಿಯವರು ಟ್ವೀಟ್ ಮಾಡಿದ್ದಾರೆ. ವಾರ್ಷಿಕ ಪ್ರಶಸ್ತಿಗೂ ಈಗ ಅಗ್ನಿಹೋತ್ರಿ ಪಡೆದಿರುವ ಪ್ರಶಸ್ತಿಗೂ ಯಾವುದೇ ಸಂಬಂಧವಿಲ್ಲ. ಅದನ್ನು ಮನವರಿಕೆ ಮಾಡಿಕೊಡುವ ಪ್ರಯತ್ನವನ್ನೂ ಅಗ್ನಿಹೋತ್ರಿ ತಮ್ಮ ಟ್ವೀಟ್‌ನಲ್ಲಿ ಮಾಡಿಲ್ಲ.

ವಿಚಿತ್ರವೆಂದರೆ ಕೆಲವು ಸುದ್ದಿ ವಾಹಿನಿಗಳು ಕೂಡ ಅಗ್ನಿಹೋತ್ರಿಯವರು ಹಾಕಿರುವ ಹ್ಯಾಶ್‌ಟ್ಯಾಗ್ ಬಳಸಿವೆ. ಈ ಪ್ರಶಸ್ತಿಯ ಇತಿಹಾಸದ ಕುರಿತು ತಮ್ಮ ಟ್ವೀಟ್‌ಗಳಲ್ಲಿ ಏನನ್ನೂ ಉಲ್ಲೇಖಿಸಿಲ್ಲ. ಕೆಲವು ವರದಿಗಳು ಪ್ರಶಸ್ತಿಗಳ ಪೂರ್ಣ ಹೆಸರನ್ನು ಉಲ್ಲೇಖಿಸಿವೆ, ಅನೇಕ ಸುದ್ದಿ ಸಂಸ್ಥೆಗಳು ಕೇವಲ ‘ದಾದಾಸಾಹೇಬ್ ಪಾಲ್ಕೆ ಪ್ರಶಸ್ತಿಗಳು’ ಎಂಬ ಶೀರ್ಷಿಕೆಗಳೊಂದಿಗೆ ಸುದ್ದಿ ಮಾಡಿವೆ. ಗೂಗಲ್‌ನಲ್ಲೂ ಈ ಪ್ರಶಸ್ತಿಗಳ ಕುರಿತು ಹುಡುಕಾಟ ಜೋರಾಗಿದೆ. ವಾರ್ಷಿಕವಾಗಿ ಸರ್ಕಾರ ಕೊಡಮಾಡುವ ಪ್ರಶಸ್ತಿ ಇದಲ್ಲ ಎಂದು ಎಂದು ಸ್ಪಷ್ಟಪಡಿಸದಿರುವ ಸುದ್ದಿ ಸಂಸ್ಥೆಗಳಲ್ಲಿ ಎಎನ್‌ಐ ಕೂಡ ಸೇರಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

LEAVE A REPLY

Please enter your comment!
Please enter your name here

- Advertisment -

Must Read

ಅಮಿತ್‌ ಶಾ ಸ್ಪರ್ಧಿಸುವ ಗಾಂಧಿನಗರದಲ್ಲಿ ಸ್ಪರ್ಧಿಸದಂತೆ ಅಭ್ಯರ್ಥಿಗಳಿಗೆ ಬಿಜೆಪಿ ನಾಯಕರು ಮತ್ತು ಪೊಲೀಸರಿಂದ ಬೆದರಿಕೆ?

0
ಗುಜರಾತ್‌ನ ಸೂರತ್ ಲೋಕಸಭಾ ಕ್ಷೇತ್ರವನ್ನು ಬಿಜೆಪಿ ಈಗಾಗಲೇ ಅವಿರೋಧವಾಗಿ ಗೆದ್ದುಕೊಂಡಿದೆ. ಇದರ ಬೆನ್ನಲ್ಲಿ ಅಮಿತ್ ಶಾ ಪ್ರತಿನಿಧಿಸುವ ಗಾಂಧಿನಗರ ಕ್ಷೇತ್ರದಲ್ಲಿ ಅಭ್ಯರ್ಥಿಗಳಿಗೆ ತಮ್ಮ ನಾಮಪತ್ರವನ್ನು ಹಿಂತೆಗೆದುಕೊಳ್ಳುವಂತೆ ಬೆದರಿಕೆ ಹಾಕಿರುವ ಆರೋಪ ಕೇಳಿ ಬಂದಿದೆ. ಗುಜರಾತ್‌ನ...