Homeಮುಖಪುಟಕೊರೊನಾ ಸೋಂಕಿನಿಂದ ಕೆಲವರ ಸಾವು - ಲಾಕ್‌ಡೌನ್‌ನಿಂದ ಮಿಲಿಯಾಂತರ ಜನರ ಮಾರಣ ಹೋಮ

ಕೊರೊನಾ ಸೋಂಕಿನಿಂದ ಕೆಲವರ ಸಾವು – ಲಾಕ್‌ಡೌನ್‌ನಿಂದ ಮಿಲಿಯಾಂತರ ಜನರ ಮಾರಣ ಹೋಮ

ಕುಡಿಯಲು ನೀರಿಲ್ಲದವರು ಹಲವಾರು ಬಾರಿ ಸೋಪಿನಿಂದ ಕೈತೊಳೆಯಲು ಸಾಧ್ಯವೇ ಎಂಬ ಪ್ರಶ್ನೆಗೆ ನಮ್ಮನ್ನು ಆಳುವವರು ಪ್ರಾಮಾಣಿಕವಾಗಿ ಉತ್ತರ ಕಂಡುಕೊಳ್ಳಬೇಕು.

- Advertisement -
- Advertisement -

ಚೀನಾ ದೇಶದಿಂದ ಹರಡಿದ ಕೊರೊನಾ ವೈರಸ್ ಇಂದು ಇಡೀ ಜಗತ್ತನ್ನು ಆವರಿಸಿ ಸಹಸ್ರಾರು ಜನರ ಸಾವಿಗೆ ಕಾರಣವಾಗಿದೆ. ಚೀನಾ, ಅಮೇರಿಕಾ, ಇಟಲಿ, ಇರಾನ್, ಸ್ಪೇನ್, ಇಂಗ್ಲೇಂಡ್, ದಕ್ಷಿಣ ಕೊರಿಯಾ, ಪಾಕಿಸ್ತಾನ ಮೊದಲಾದ ದೇಶಗಳಲ್ಲಿ ಸೋಂಕಿನಿಂದಾಗಿ ಜನಜೀವನ ಸ್ತಬ್ದಗೊಂಡಿದ್ದು ಸಾರ್ವಜನಿಕರು ಜೀವವನ್ನು ಕೈಯಲ್ಲಿಡಿದು, ಆತಂಕದಿಂದ ಬದುಕುತ್ತಿರುವುದು ನೋವಿನ ಸಂಗತಿಯಾಗಿದೆ. ಪ್ರಧಾನಿ ನರೇಂದ್ರಮೋದಿಯವರು ದೇಶದಲ್ಲಿ ಮಾರ್ಚ್ 25 – ಏಪ್ರಿಲ್ 14ರ ಅವಧಿಗೆ ಸಾರ್ವಜನಿಕ ಆರೋಗ್ಯ ಮತ್ತು ಹಿತದೃಷ್ಟಿಗಳ ಕಾರಣದಿಂದ ಲಾಕ್‌ಡೌನ್ ನಿರ್ಧಾರ ಕೈಗೊಂಡಿರುವುದು ವಿವಾದಕ್ಕೆ ಗುರಿಯಾಗಿದೆ. ಇದುವರೆಗೆ ನಾವು ತಿಳಿದಿರುವಂತೆ ಲಾಕ್‌ಡೌನ್ ನಿರ್ಧಾರದಿಂದಾಗಿ ಭಾರತದೆಲ್ಲೆಡೆ ಕೋಟ್ಯಾಂತರ ಅಸಂಘಟಿತ ವಲಯದ ಅಸಹಾಯಕರು ಉದ್ಯೋಗ, ವೇತನ, ಆಹಾರ, ಆರೋಗ್ಯ, ಸುರಕ್ಷತೆ ಮೊದಲಾದ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಭಾರತ ಸರ್ಕಾರ ಇಂತಹ ತೀರ್ಮಾನವನ್ನು ಕೈಗೊಳ್ಳುವ ಮೊದಲು ವಸ್ತು ಸ್ಥಿತಿಯ ವಸ್ತುನಿಷ್ಟ ವಿಶ್ಲೇಷಣೆ ನಡೆಸಿ ಅಸಂಘಟಿತ ವಲಯದ ಕೋಟ್ಯಾಂತರ ಜನರಿಗೆ ಮುಂಚಿತವಾಗಿಯೇ ಅವಶ್ಯಕ ಜೀವನೋಪಾಯ ಸೌಲಭ್ಯಗಳನ್ನು ಒದಗಿಸಿದ್ದರೆ ಒಳ್ಳೆಯದಾಗುತ್ತಿತ್ತು ಎಂಬ ಭಾವನೆ ಪ್ರಜ್ಞಾವಂತ ಹಾಗೂ ಜವಾಬ್ದಾರಿಯುತ ದೇಶ ಬಾಂಧವರ ಮನಸ್ಸಿನಲ್ಲಿದೆ.

ಭಾರತದಲ್ಲಿ ಇತ್ತೀಚಿನ ವರ್ಷಗಳಲ್ಲಿ ಕ್ಷಯರೋಗದಿಂದ ಪ್ರತಿ ವರ್ಷ ಸುಮಾರು 8 ಮಿಲಿಯನ್ ಬಡವರು, ನಿರುದ್ಯೋಗಿಗಳು, ಆಹಾರ ವಂಚಿತರು, ಅಪೌಷ್ಟಿಕತೆವುಳ್ಳವರು ಮತ್ತು ಅಸುರಕ್ಷಿತ ಜನ ಸಾಯುತ್ತಿರುವುದಾಗಿ ವಿಶ್ವ ಆರೋಗ್ಯ ಸಂಸ್ಥೆ ಮತ್ತು ಕೇಂದ್ರ ಸರ್ಕಾರದ ಆರೋಗ್ಯ ಇಲಾಖೆ ವರದಿ ಮಾಡಿದೆ. ಆದರೂ ಸಹ ನಮ್ಮನ್ನು ಆಳುವವರು ಜಾಣ ಪೆದ್ದುತನ ವ್ಯಕ್ತಪಡಿಸಿ ತಮಗೆ ಏನೂ ಗೊತ್ತಿಲ್ಲ- ತಮಗೆ ಏನೂ ಆಗಿಲ್ಲದಂತೆ ಅಮಾನವೀಯವಾಗಿ ವರ್ತಿಸುತ್ತಿರುವುದನ್ನು ದೇವರು – ಪ್ರಕೃತಿ ಮಾತೆ ನಿಜಕ್ಕೂ ಕ್ಷಮಿಸುವುದಿಲ್ಲ. ಕ್ಷಯರೋಗದಿಂದ ನರಳಿ ಸಾಯುತ್ತಿರುವವರು ನಮ್ಮವರಲ್ಲ ಎಂಬ ನಿರ್ಲಕ್ಷ್ಯ ದೇಶವನ್ನಾಳುತ್ತಿರುವ ದೊಡ್ಡವರಲ್ಲಿ ಕಂಡುಬಂದಿರುವುದು ಭಾರತದಲ್ಲಿ ಸಾಮಾಜಿಕ ಸುರಕ್ಷತೆ ಮತ್ತು ರಕ್ಷಣೆಗಳಿಗೆ ಮೂರು ಕಾಸಿನ ಬೆಲೆಯಿಲ್ಲವೆಂಬುದನ್ನು ಸಾಬೀತುಪಡಿಸುತ್ತದೆ. ಭಾರತದ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಜಗತ್ತಿನಲ್ಲೇ ಅತ್ಯಂತ ಕೆಳಮಟ್ಟದಲ್ಲಿದೆಯೆಂದು ಅಂತರರಾಷ್ಟ್ರೀಯ ಮಾನವ ಹಕ್ಕುಗಳ ವೇದಿಕೆ ಮತ್ತು ವಿಶ್ವ ಆರೋಗ್ಯ ಸಂಸ್ಥೆ ಸ್ಪಷ್ಟವಾಗಿ ಹಲವು ಸಂದರ್ಭಗಳಲ್ಲಿ ತಿಳಿಸಿವೆ. ಅನರ್ಹರನ್ನು ಚುನಾವಣೆಯಲ್ಲಿ ಗೆಲ್ಲಿಸುವ ಸಲುವಾಗಿ ಕೋಟ್ಯಾಂತರ ರೂಪಾಯಿಗಳನ್ನು ಸುರಿಯುವ ನಮ್ಮ ರಾಜಕೀಯ ನಾಯಕರು ಮತ್ತು ವಾಣಿಜ್ಯೋದ್ಯಮಿಗಳಿಗೆ ಭಾರತವನ್ನು ಕ್ಷಯರೋಗ ಮುಕ್ತ ದೇಶವನ್ನಾಗಿ ಮಾಡುವ ಬದ್ಧತೆ ಇಲ್ಲದೇ ಇರುವುದು ಅತ್ಯಂತ ನಾಚಿಕೆಗೇಡಿನ ಸಂಗತಿಯಾಗಿದೆ.

21ದಿನಗಳ ಲಾಕ್‌ಡೌನ್ ಅವಧಿಯಲ್ಲಿ ಮನೆಯಲ್ಲೇ ಕುಳಿತು ಕೆಲಸ ಮಾಡಿ, ಕೆಲವಾರು ಬಾರಿ ಸೋಪಿನಲ್ಲೇ ಕೈ ತೊಳೆಯಿರಿ, ದೈಹಿಕವಾಗಿ ಅಂತರ ಕಾಯ್ದುಕೊಳ್ಳಿ ಮತ್ತು ಸಮಾಜದಿಂದ ದೂರದಲ್ಲೇ ಇರಿ ಎಂಬ ಷರತ್ತುಗಳನ್ನು ಪಾಲಿಸುವ ಸಾಮರ್ಥ್ಯ ಬಹುಸಂಖ್ಯಾತ ಬಡಭಾರತೀಯರಿಗೆ ಇಲ್ಲದಿರುವುದನ್ನು ಮೋದಿಜಿ ಸರ್ಕಾರ ಮನಗಂಡಿಲ್ಲದಿರುವುದು ಅತ್ಯಂತ ದುಃಖಕರ ಸಂಗತಿಯಾಗಿದೆ. ಇಂತಹ ಲಾಕ್‌ಡೌನ್ ಅರ್ಥಾತ್ ಅಘೋಷಿತ ತುರ್ತುಪರಿಸ್ಥಿತಿ ಭಾರತಕ್ಕೆ ಬೇಕಿತ್ತೇ ಎನ್ನುವುದರ ಬಗ್ಗೆ ಆರೋಗ್ಯ ತಜ್ಞರು ಮತ್ತು ಅರ್ಥಶಾಸ್ತ್ರಜ್ಞರ ನಡುವೆ ವಿಭಿನ್ನ ಧೋರಣೆಗಳಿವೆ. ಮಧ್ಯಮ ವರ್ಗ ಹಾಗೂ ಶ್ರೀಮಂತರಿಗೆ ಲಾಕ್‌ಡೌನ್ ಸ್ಥಿತಿಯ ನಡುವೆಯೂ ಉತ್ತಮ ಸಂಪಾದನೆ, ಆರ್ಥಿಕ ಭದ್ರತೆ, ಜೀವವಿಮೆ, ಆರೋಗ್ಯ ಸೌಲಭ್ಯ, ಸುಸಜ್ಜಿತ ವಸತಿ ಸೌಲಭ್ಯ ಮೊದಲಾದ ಕಾರಣಗಳಿಂದಾಗಿ ಸುರಕ್ಷಿತವಾಗಿ ಬದುಕಲು ಸಾಧ್ಯವಾಗಿದೆ.

ಆದರೆ ಸುಮಾರು 100 ಮಿಲಿಯನ್ ಭಾರತೀಯರು ಉದ್ಯೋಗ, ವಸತಿ, ಆರೋಗ್ಯ, ಮೂಲಸೌಕರ್ಯ, ಸಾಮಾಜಿಕ ಸುರಕ್ಷತೆ ಮೊದಲಾದವುಗಳಿಂದ ವಂಚಿತರಾಗಿ ಲಾಕ್‌ಡೌನ್ ಪರಿಸ್ಥಿತಿಯ ಬಲಿಪಶುಗಳಾಗಿರುವುದನ್ನು ನಾವು ಕಣ್ಣಾರೆ ನೋಡುತ್ತಿದ್ದೇವೆ. ಚಿಂದಿ ಹಾಯುವವರು, ಬೀದಿಬದಿ ವ್ಯಾಪಾರಿಗಳು, ಮನೆಗೆಲಸದವರು, ಆಟೋ ಓಡಿಸುವವರು, ಗುಡಿ ಕಾರ್ಮಿಕರು, ಚಿಲ್ಲರೆ ವ್ಯಾಪಾರಿಗಳು, ರೈತರು ಮತ್ತು ಅಸಂಘಟಿತ ವಲಯದ ನಿರಾಶ್ರಿತ ಜನ ಲಾಕ್‌ಔಟ್ ಸ್ಥಿತಿಯಿಂದಾಗಿ ಇಂದು ತಮ್ಮ ಬದುಕುವ ಮೂಲಭೂತ ಹಕ್ಕುಗಳಿಂದ ವಂಚಿತರಾಗಿದ್ದಾರೆ. ಮೋದಿಜಿ ಸರ್ಕಾರಕ್ಕೆ ಇಂತಹ ಹಸಿವಿನಿಂದ ಸಾಯುವವರು, ಸೈಜುಗಲ್ಲು ಹೊರುವವರು, ಬದುಕಿನಲ್ಲಿ ಅತಂತ್ರರಾದವರು ಸುರಕ್ಷಿತವಾಗಿ ಬದುಕುವುದು ಬೇಕಿಲ್ಲವೆಂಬುದನ್ನು ಇಂದಿನ ಲಾಕ್‌ಔಟ್ ಸ್ಥಿತಿ ಸ್ಪಷ್ಟವಾಗಿ ಮನದಟ್ಟು ಮಾಡಿಕೊಡುತ್ತದೆ. ವಿಶೇಷವಾಗಿ ವೃದ್ಧರು, ವಿಕಲಚೇತನರು ಮತ್ತು ಅನಾಥರ ಬದುಕು ಮತ್ತು ಬವಣೆಗಳು ಕರುಳನ್ನು ಹಿಂಡುತ್ತವೆ. ಪುಟ್ಟ ಮಕ್ಕಳು ಮತ್ತು ಅಸುರಕ್ಷಿತ ಮಹಿಳೆಯರ ಜೀವಗಳು ಇಂದು ನಮ್ಮನ್ನು ಆಳುತ್ತಿರುವವರಿಗೆ ಲೆಕ್ಕಕ್ಕಿಲ್ಲದಂತಾಗಿವೆ.

ಕುಡಿಯಲು ನೀರಿಲ್ಲದವರು ಹಲವಾರು ಬಾರಿ ಸೋಪಿನಿಂದ ಕೈತೊಳೆಯಲು ಸಾಧ್ಯವೇ ಎಂಬ ಪ್ರಶ್ನೆಗೆ ನಮ್ಮನ್ನು ಆಳುವವರು ಪ್ರಾಮಾಣಿಕವಾಗಿ ಉತ್ತರ ಕಂಡುಕೊಳ್ಳಬೇಕು. ಕೊಳಚೆ ಪ್ರದೇಶಗಳಲ್ಲಿ ಮೂಲಸೌಕರ್ಯಗಳಿಲ್ಲದೆ (ಶುದ್ಧ ಕುಡಿಯುವ ನೀರು, ಶೌಚಾಲಯ, ಚರಂಡಿ ವ್ಯವಸ್ಥೆ, ವಿದ್ಯುಚ್ಛಕ್ತಿ, ರಸ್ತೆ, ಆಸ್ಪತ್ರೆ, ಶಾಲೆ, ಶಿಕ್ಷಕರು, ವೈದ್ಯಕೀಯ ಸಿಬ್ಬಂದಿ, ಜೀವನೋಪಾಯ ಅವಕಾಶಗಳು ಇತ್ಯಾದಿ) ಬದುಕಿದ್ದೂ ಸತ್ತಂತಿರುವ ದೇಶಬಾಂಧವರು ಸುರಕ್ಷಿತವಾಗಿ ಬದುಕಲು ಸರ್ಕಾರ ಇದುವರೆಗೆ ಕೈಗೊಂಡಿರುವ ಕ್ರಮಗಳು ಹತಾಶೆವುಂಟು ಮಾಡುತ್ತವೆ. ರೈಲ್ವೆ ನಿಲ್ದಾಣ, ಬಸ್‌ನಿಲ್ದಾಣ, ಸಾರ್ವಜನಿಕ ಮೋರಿಗಳು, ಕೊಳಚೆ ಪ್ರದೇಶಗಳು ಮೊದಲಾದೆಡೆ ತಲೆ ಮೇಲೆ ಸೂರಿಲ್ಲದೇ ಹಲವಾರು ವರ್ಷಗಳಿಂದ ನರಳಿ ಸಾಯುತ್ತಿರುವ ದೇಶ ಬಾಂಧವರನ್ನು ರಕ್ಷಿಸುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೈಗೊಂಡಿರುವ ಸುರಕ್ಷತೆ ಹಾಗೂ ಅಭಿವೃದ್ಧಿ ಕ್ರಮಗಳು ದೇಶದಲ್ಲಿ ಬಡವರ ಜೀವಗಳಿಗೆ ಎಳ್ಳಷ್ಟೂ ಬೆಲೆಯಿಲ್ಲವೆಂಬುದನ್ನು ತಿಳಿಸುತ್ತವೆ.

ದೇಶದ ಉದ್ದಗಲಕ್ಕೂ ಸಂಚರಿಸಿದಾಗ ಬಹುಸಂಖ್ಯಾತ ಬಡವರಿಗೆ ಸಂವಿಧಾನದತ್ತವಾಗಿ ಸಿಗಬೇಕಾದ ಕನಿಷ್ಟ ಅಗತ್ಯತೆಗಳು, ಮೂಲ ಸೌಕರ್ಯಗಳು, ಜೀವನೋಪಾಯ ಮಾರ್ಗಗಳು ಮತ್ತು ಸುರಕ್ಷತಾ ಅವಕಾಶಗಳು ನಿಚ್ಛಳವಾಗಿ ಕಂಡುಬರುವುದಿಲ್ಲ. ಸುಸಜ್ಜಿತ ಶಾಲೆಗಳು ಮತ್ತು ಆಸ್ಪತ್ರೆಗಳು ಭಾರತದಲ್ಲಿ ಇಂದಿಗೂ ಕೂಡ ಅನುಷ್ಟಾನಗೊಳ್ಳದ ಆಶಯಗಳಾಗಿಯೇ ಉಳಿದಿವೆ. ಭಾರತ ಸರ್ಕಾರ ರಕ್ಷಣೆ ನಿರ್ವಹಣೆಗೆ ಮಾಡಿರುವ ವೆಚ್ಚಕ್ಕೆ ಹೋಲಿಸಿದಾಗ ಶಿಕ್ಷಣ, ಆರೋಗ್ಯ, ಕೃಷಿ, ಮೂಲ ಸೌಕರ್ಯ ಮೊದಲಾದವುಗಳಿಗೆ ಮಾಡಿರುವ ವೆಚ್ಚ ಅತ್ಯಂತ ಕಡಿಮೆಯೆಂದೇ ಅಂಕಿ ಅಂಶಗಳ ಆಧಾರದ ಮೇಲೆ ಹೇಳಬಹುದಾಗಿದೆ. ಭಾರತದಲ್ಲಿ ಆರೋಗ್ಯ ವ್ಯವಸ್ಥೆ ನಿರ್ವಹಣೆಗೆ ಸರ್ಕಾರ ನೀಡಿರುವ ಮಹತ್ವ ಮತ್ತು ಮಾಡಿರುವ ವೆಚ್ಚ ವಿಶ್ವದಲ್ಲಿಯೇ ಅತ್ಯಂತ ಕಡಿಮೆ ಪ್ರಮಾಣದಲ್ಲಿರುವುದಾಗಿ ಮಾನವಾಭಿವೃದ್ಧಿ ವರದಿಗಳು ತಿಳಿಸುತ್ತವೆ. ಇಂತಹ ದಯನೀಯ ಸಂದರ್ಭದಲ್ಲಿ ಕೊರೊನಾ ವೈರಸ್‌ನಿಂದಾಗಿ ಬೃಹತ್ ಪ್ರಮಾಣದಲ್ಲಿ ವ್ಯಾಧಿ ಉಲ್ಬಣಿಸಿದಾಗ ಅನಾರೋಗ್ಯ ಪೀಡಿತ ಮಿಲಿಯಾಂತರ ಮಂದಿಗೆ ಆರೋಗ್ಯ ಮತ್ತು ಆಶ್ರಯಗಳನ್ನು ಒದಗಿಸುವ ಸ್ಥಿತಿಯಲ್ಲಿ ಸದ್ಯದ ಆರೋಗ್ಯ ನಿರ್ವಹಣೆ ವ್ಯವಸ್ಥೆ ಇಲ್ಲದಿರುವುದನ್ನು ಕಂಡಾಗ ಆಘಾತವುಂಟಾಗುತ್ತದೆ.

ಕೇಂದ್ರ ಸರ್ಕಾರ ಜನಧನ ಯೋಜನೆ, ಮುಂಚಿತವಾಗಿ ಪಿಂಚಣಿ ಹಣವಿತರಣೆ, ನರೇಗಾ ಯೋಜನೆಯ ಕಾರ್ಮಿಕರಿಗೆ ಆರ್ಥಿಕ ನೆರವು, ಆಹಾರ ಪಡಿತರ ವಿತರಣೆ ಮೊದಲಾದವುಗಳನ್ನು ಘೋಷಿಸಿದೆ. ಆದರೆ ಸಾವಿರಾರು ಜನರು ಲಾಕ್‌ಡೌನ್ ಸ್ಥಿತಿಯಿಂದಾಗಿ ದೆಹಲಿ, ಮುಂಬಯಿ, ಗೋವಾ, ಈಶಾನ್ಯ ಭಾರತ ಮೊದಲಾದೆಡೆ ನೂರಾರು ಮೈಲುಗಳಷ್ಟು ದೂರ ನಡೆದು ರಸ್ತೆಯಲ್ಲೇ ನಿತ್ರಾಣರಾಗಿ ಬಿದ್ದಂತಹ ಸಂದರ್ಭದಲ್ಲಿ ಸರ್ಕಾರ ಇವರಿಗೆ ಸೂಕ್ತ ರಕ್ಷಣೆ ನೀಡದಿರುವುದು ಶೋಚನೀಯ ಸಂಗತಿಯಾಗಿದೆ. ಲಾಕ್‌ಡೌನ್ ಸಂದರ್ಭದಲ್ಲಿ ನಾಗರೀಕರು ಹೇಗೆ ವರ್ತಿಸಬೇಕೆಂಬುದರ ಬಗ್ಗೆ ಪುಂಖಾನುಪುಂಖವಾಗಿ ಮಾತನಾಡುವ ರಾಜಕಾರಣಿಗಳು ಮತ್ತು ಅಧಿಕಾರಿಗಳು ಬದುಕನ್ನು ಕಳೆದುಕೊಂಡವರನ್ನು ಮಾನವೀಯ ನೆಲೆಗಟ್ಟಿನಲ್ಲಿ ಪುನರ್ವಸತಿಗೊಳಿಸುವ ನಿಟ್ಟಿನಲ್ಲಿ ತಾವೇನು ಕ್ರಮ ಕೈಗೊಳ್ಳಬೇಕು ಎಂಬುದರ ಬಗ್ಗೆ ದಿವ್ಯ ಮೌನ ವಹಿಸಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಆರೋಗ್ಯ ತುರ್ತುಸ್ಥಿತಿ ಸಂದರ್ಭದಲ್ಲಿ ಬಹುದೊಡ್ಡ ಪಾತ್ರವನ್ನು ವಹಿಸಬೇಕಾದದ್ದು ಸರ್ಕಾರವೇ ಹೊರತು ನಾಗರೀಕ ಸಮಾಜವಲ್ಲ. ಸರ್ಕಾರದ ಅರ್ಥಪೂರ್ಣ ಆದೇಶಗಳನ್ನು ನಾಗರೀಕ ಸಮಾಜ ಪರಿಪಾಲಿಸಲೇ ಬೇಕು. ಆದರೆ ನಾಗರೀಕ ಸಮಾಜವನ್ನು ಇಂತಹ ಸವಾಲಿನ ಸಂದರ್ಭದಲ್ಲಿ ಸಮರ್ಥವಾಗಿ ರಕ್ಷಿಸುವ ಬದ್ಧತೆ, ಸಿದ್ಧತೆ ಮತ್ತು ಹೊಣೆಗಾರಿಕೆಗಳಿಂದ ಸರ್ಕಾರ ವಿಮುಖವಾಗಬಾರದು.

ಅಸಂಘಟಿತ ವಲಯದ ಕಾರ್ಮಿಕರಿಗೆ 3 ತಿಂಗಳ ವೇತನವನ್ನು ಮುಂಚಿತವಾಗಿ ನೀಡುವುದು. 3 ತಿಂಗಳ ಅವಧಿಗೆ ಆಹಾರ ಪಡಿತರ ಪೂರೈಸುವುದು, ಆರೋಗ್ಯ ಮೂಲ ಸೌಕರ್ಯಗಳನ್ನು ಅಭಿವೃದ್ಧಿಪಡಿಸುವುದು, ಬಡವರಿಗೆ ಸುರಕ್ಷಿತ ಪರಿಸರದಲ್ಲಿ ಜೀವಿಸಲು ಮನೆ ನಿರ್ಮಿಸುವುದು, ಅತಂತ್ರರಾದ ಕಾರ್ಮಿಕರಿಗೆ ಸರ್ಕಾರದ ಖರ್ಚಿನಲ್ಲಿ ಉಚಿತವಾಗಿ ತಮ್ಮ ಊರುಗಳಿಗೆ ತೆರಳುವ ವ್ಯವಸ್ಥೆ ಮಾಡುವುದು, ಪಿಂಚಣಿ ದರವನ್ನು ದ್ವಿಗುಣಗೊಳಿಸುವುದು, ಪೌಷ್ಟಿಕ ಆಹಾರ ವಸ್ತುಗಳನ್ನು ಸಾರ್ವಜನಿಕರಿಗೆ ವಿತರಿಸುವುದು, ವಲಸೆ ಹೋದವರಿಗೆ ಆದ್ಯತೆ ಮೇರೆಗೆ ಮೂಲ ಸೌಕರ್ಯಗಳನ್ನು ಒದಗಿಸುವುದು, ವಿಕಲ ಚೇತನರು ಮತ್ತು ಅಶಕ್ತ ವೃದ್ಧರಿಗೆ ಮನೆ ಬಾಗಿಲಿಗೆ ಆಹಾರ ಮತ್ತು ಔಷಧಿ ಪೂರೈಸುವುದು ಮೊದಲಾದ ಸೌಲಭ್ಯಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸೂಕ್ತ ಸಂಯೋಜನೆ ಆಧಾರದ ಮೇಲೆ ಒದಗಿಸಬೇಕು. ಸೆರೆಮನೆಗಳಲ್ಲೂ ಕೂಡ ಖೈದಿಗಳಿಗೆ ಸೂಕ್ತ ವಸತಿ, ನೀರು, ಆಹಾರ, ಆರೋಗ್ಯ ಸೌಲಭ್ಯ, ಸುರಕ್ಷಿತ ಪರಿಸರ ಮೊದಲಾದವುಗಳನ್ನು ಒದಗಿಸಿ ಅವರನ್ನೂ ಕೂಡ ಮನುಷ್ಯರಂತೆ ನೋಡಿಕೊಳ್ಳುವುದು ಸರ್ಕಾರದ ಬಹುದೊಡ್ಡ ಜವಾಬ್ದಾರಿಯಾಗಿದೆ. ಸನ್ನಡತೆ ಆಧಾರದ ಮೇಲೆ ಬಿಡುಗಡೆ ಹೊಂದುವವರಿಗೆ ಶೀಘ್ರದಲ್ಲೇ ಬಿಡುಗಡೆ ಮಾಡುವುದು ಮತ್ತು ವಿಚಾರಣೆ ಹಂತದಲ್ಲಿರುವ ಖೈದಿಗಳನ್ನು ಪೆರೋಲ್ ಮೇಲೆ ಬಿಡುಗಡೆ ಮಾಡುವುದು ಮೊದಲಾದ ಕ್ರಮಗಳನ್ನು ಸರ್ಕಾರ ಸಕಾಲದಲ್ಲಿ ಕೈಗೊಳ್ಳಬೇಕು. ಸ್ಪೇನ್ ಮತ್ತು ನ್ಯೂಜಿಲ್ಯಾಂಡ್ ದೇಶಗಳಲ್ಲಿ ಆರೋಗ್ಯ ವಲಯವನ್ನು ಸರ್ಕಾರೀಕರಣಗೊಳಿಸಿರುವ ಹಾಗೆ ಭಾರತದಲ್ಲಿಯೂ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳ ರಾಷ್ಟ್ರೀಕರಣವನ್ನು ಮಾನವೀಯ ನೆಲೆಗಟ್ಟಿನಲ್ಲಿ ಕೈಗೊಳ್ಳಬೇಕು.

ಇಷ್ಟೆಲ್ಲಾ ಸಮಸ್ಯೆಗಳು, ಸಂಕೀರ್ಣತೆಗಳು ಮತ್ತು ಸವಾಲುಗಳ ನಡುವೆ ಪ್ರಧಾನಿ ಮೋದಿಜಿಯವರು ಏಪ್ರಿಲ್ 05 ಭಾನುವಾರದಂದು ರಾತ್ರಿ 9 ಗಂಟೆಗೆ ವಿದ್ಯುಚ್ಛಕ್ತಿಯನ್ನು ತಾತ್ಕಾಲಿಕವಾಗಿ ಸುಮಾರು 09 ನಿಮಿಷಗಳ ಕಾಲ ನಿಲ್ಲಿಸಿ ಮೇಣದ ಬತ್ತಿ ಅಥವಾ ಎಣ್ಣೆಯ ದೀಪಗಳನ್ನು ಉರಿಸಬೇಕೆಂದು ನೀಡಿರುವ ಕರೆ ದೇಶಾದ್ಯಂತ ಜನರಿಗೆ ಸರಿಯೆಂದು ಕಂಡುಬಂದಿಲ್ಲ. ಇಂತಹ ಗಿಮಿಕ್‌ಗಳಿಂದ ಪ್ರಧಾನಿಯವರು ದೂರವುಳಿದು ಮೇಲೆ ಸೂಚಿಸಿದ ರಚನಾತ್ಮಕ ಸುರಕ್ಷತೆ ಹಾಗೂ ಅಭಿವೃದ್ಧಿ ಕ್ರಮಗಳನ್ನು ಕೈಗೊಂಡು ತಾವೊಬ್ಬ 56 ಇಂಚು ಎದೆ ಅಳತೆಯುಳ್ಳ ಮಾನವೀಯ ಮೌಲ್ಯಗಳಿಗೆ ಶರಣಾದ ಹೃದಯವಂತ ಪ್ರಧಾನಿಯೆಂದು ಸಾಬೀತುಪಡಿಸಲು ಕಾಲ ಮಿಂಚಿಲ್ಲ. ಎಷ್ಟು ಅವಧಿಯವರೆಗೆ ಅಧಿಕಾರದಲ್ಲಿ ಮುಂದುವರೆಯುತ್ತೇವೆ ಎನ್ನುವುದಕ್ಕಿಂತ ಸಿಕ್ಕಿರುವ ಅಧಿಕಾರವನ್ನು ಜನರ ಒಳಿತಿಗಾಗಿ ಎಷ್ಟು ಸಮರ್ಥವಾಗಿ ಸದ್ಬಳಕೆ ಮಾಡಿಕೊಳ್ಳುತ್ತೇವೆ ಎಂಬುದು ಬಹಳ ಮುಖ್ಯವೆಂಬ ಸತ್ಯವನ್ನು ಮೋದಿಜಿ ಆದಷ್ಟೂ ಬೇಗನೇ ಅರಿತು ದೇಶವನ್ನು ವಿನಾಶದಿಂದ ಪಾರು ಮಾಡಬೇಕು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಾಸನ ಪೆನ್‌ಡ್ರೈವ್ ಪ್ರಕರಣ: ಎಸ್‌ಐಟಿ ರಚಿಸಲು ಕೋರಿ ಮಹಿಳಾ ಆಯೋಗದಿಂದ ಸಿಎಂಗೆ ಪತ್ರ

0
ಹಾಸನ ಜಿಲ್ಲೆಯಲ್ಲಿ ಹರಿದಾಡುತ್ತಿರುವ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ವಿಶೇಷ ತಂಡ ರಚನೆ ಮಾಡುವಂತೆ ಕೋರಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ಅವರು ಸಿಎಂ ಸಿದ್ದರಾಮಯ್ಯ, ಗೃಹ ಸಚಿವ...