Homeಮುಖಪುಟರಾಹುಲ್ ವಿರುದ್ಧ ಮಾನಹಾನಿ ಪ್ರಕರಣ: ವಿಚಾರಣಾ ನ್ಯಾಯಾಲಯದ ವಿಚಾರಣೆಗೆ ಪಾಟ್ನಾ ಹೈಕೋರ್ಟ್ ತಡೆ

ರಾಹುಲ್ ವಿರುದ್ಧ ಮಾನಹಾನಿ ಪ್ರಕರಣ: ವಿಚಾರಣಾ ನ್ಯಾಯಾಲಯದ ವಿಚಾರಣೆಗೆ ಪಾಟ್ನಾ ಹೈಕೋರ್ಟ್ ತಡೆ

- Advertisement -
- Advertisement -

ಮೋದಿ ಉಪನಾಮ ಬಳಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ವಿರುದ್ಧ ದಾಖಲಾಗಿರುವ ಮಾನನಷ್ಟ ಪ್ರಕರಣವನ್ನು ಪಾಟ್ನಾ ಹೈಕೋರ್ಟ್ ಕೈಗೆತ್ತಿಕೊಂಡಿದ್ದು, ವಿಚಾರಣಾ ನ್ಯಾಯಾಲಯದ ವಿಚಾರಣೆಗೆ ತಡೆಯಾಜ್ಞೆ ನೀಡಿದೆ.

2019ರಲ್ಲಿ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ರಾಹುಲ್ ಗಾಂಧಿಯವರು, ‘ಮೋದಿ ಉಪನಾಮ ಇರುವವರೇ ಏಕೆ ಕಳ್ಳರಿದ್ದಾರೆ’ ಎಂಬ ಟೀಕೆಯನ್ನು ಮಾಡಿದ್ದರು. ಭಾರತೀಯ ಜನತಾ ಪಕ್ಷದ ನಾಯಕ ಸುಶೀಲ್ ಕುಮಾರ್ ಮೋದಿ ಅವರು ಬಿಹಾರದಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ. ಗುಜರಾತ್‌ನಲ್ಲಿ ಇದೇ ರೀತಿಯ ಪ್ರಕರಣ ದಾಖಲಾಗಿ ಸೂರತ್‌ ನ್ಯಾಯಾಲಯದಿಂದ ಶಿಕ್ಷೆಯೂ ಆಗಿರುವುದರಿಂದ, ಮತ್ತೊಂದು ಪ್ರಕರಣದ ವಿಚಾರಣೆಯನ್ನು ರಾಹುಲ್ ಗಾಂಧಿ ಪ್ರಶ್ನಿಸಿದ್ದರು.

ತಮ್ಮ ಭಾಷಣದ ವೇಳೆ ರಾಹುಲ್ ಅವರು, ದೇಶದ ಉನ್ನತ ಮಟ್ಟದ ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ದರು. ಪ್ರಧಾನಿ ನರೇಂದ್ರ ಮೋದಿ ಮತ್ತು ಪರಾರಿಯಾದ ಭಾರತೀಯ ಉದ್ಯಮಿಗಳಾದ ನೀರವ್ ಮೋದಿ, ಲಲಿತ್ ಮೋದಿ ಅವರನ್ನು ಉಲ್ಲೇಖಿಸಿದ್ದರು.

ರಾಹುಲ್ ಗಾಂಧಿಯವರು ಸಲ್ಲಿಸಿದ ಅರ್ಜಿಯನ್ನು ಕೈಗೆತ್ತಿಕೊಂಡಿರುವ ಪಾಟ್ನಾ ಹೈಕೋರ್ಟ್‌ನ ನ್ಯಾಯಮೂರ್ತಿ ಸಂದೀಪ್ ಕುಮಾರ್ ಅವರು ವಿಚಾರಣಾ ನ್ಯಾಯಾಲದ ವಿಚಾರಣೆಗಳಿಗೆ ತಡೆ ನೀಡಿದ್ದಾರೆ.

ಹೇಳಿಕೆಗೆ ಸಂಬಂಧಿಸಿದಂತೆ ಈಗಾಗಲೇ ಗುಜರಾತ್‌ನ ಸೂರತ್‌ ನ್ಯಾಯಾಲಯದಿಂದ ಶಿಕ್ಷೆ ವಿಧಿಸಲಾಗಿದೆ. ಅದೇ ವಿಷಯಕ್ಕಾಗಿ ಮತ್ತೆ ವಿಚಾರಣೆಗೆ ಒಳಪಡಿಸಲು ಸಾಧ್ಯವಿಲ್ಲ ಎಂದು ರಾಹುಲ್ ಗಾಂಧಿಯವರು ತಮ್ಮ ಮನವಿಯಲ್ಲಿ ವಾದಿಸಿದ್ದಾರೆ.

ನ್ಯಾಯಾಧೀಶರು ವಿಚಾರಣೆಯನ್ನು ಮೇ 16ರವರೆಗೆ ತಡೆಹಿಡಿದರು. ಈ ಪ್ರಕರಣದಲ್ಲಿ ತಮ್ಮ ಹೇಳಿಕೆಯನ್ನು ದಾಖಲಿಸಲು ಏಪ್ರಿಲ್ 25ರಂದು ತಮ್ಮ ಮುಂದೆ ಹಾಜರಾಗುವಂತೆ ಪಾಟ್ನಾದ ವಿಚಾರಣಾ ನ್ಯಾಯಾಲಯ ರಾಹುಲ್‌ ಗಾಂಧಿಯವರಿಗೆ ಸೂಚಿಸಿತ್ತು.

ಬಿಜೆಪಿ ನಾಯಕ ಮತ್ತು ಸೂರತ್ ಪಶ್ಚಿಮ ಶಾಸಕ ಪೂರ್ಣೇಶ್ ಮೋದಿ ಅವರು ದಾಖಲಿಸಿದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಗುಜರಾತ್‌ನ ನ್ಯಾಯಾಲಯವು ರಾಹುಲ್ ಅವರಿಗೆ ಎರಡು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ. ಹೀಗಾಗಿ ಲೋಕಸಭೆ ಸದಸ್ಯತ್ವದಿಂದ ರಾಹುಲ್‌ ಅವರನ್ನು ಅನರ್ಹಗೊಳಿಸಲಾಗಿದೆ.

“ಮೋದಿ ಎಂಬ ಉಪನಾಮವನ್ನು ಹೊಂದಿರುವ, ಇಡೀ ಭಾರತದಲ್ಲಿ ವಾಸಿಸುವ 13 ಕೋಟಿ ಜನರನ್ನು ಗಾಂಧಿಯವರು ಅಪಮಾನಗೊಳಿಸಿದ್ದಾರೆ” ಎಂದು ಪೂರ್ಣೇಶ್ ಮೋದಿ ಹೇಳಿದ್ದರು. “ಭ್ರಷ್ಟಾಚಾರವನ್ನು ಎತ್ತಿ ಹಿಡಿಯಲು ಈ ಹೇಳಿಕೆ ನೀಡಿದ್ದೇನೆಯೇ ಹೊರತು ಯಾವುದೇ ಸಮುದಾಯದ ವಿರುದ್ಧ ಅಲ್ಲ” ಎಂದು ರಾಹುಲ್‌ ಗಾಂಧಿ ನ್ಯಾಯಾಲಯಕ್ಕೆ ಸ್ಪಷ್ಟನೆ ನೀಡಿದ್ದರು.

ತನಗೆ ವಿಧಿಸಲಾಗಿರುವ ಶಿಕ್ಷೆಗೆ ತಡೆ ನೀಡಬೇಕೆಂದು ರಾಹುಲ್ ಗಾಂಧಿಯವರು ಸಲ್ಲಿಸಿದ್ದ ಮನವಿಯನ್ನು ಸೂರತ್ ಸೆಷನ್ಸ್ ನ್ಯಾಯಾಲಯವು ಏಪ್ರಿಲ್ 20 ರಂದು ತಿರಸ್ಕರಿಸಿತು. “ಸಂಸತ್ತಿನ ಸದಸ್ಯರಾಗಿ ಮತ್ತು ದೇಶದ ಎರಡನೇ ಅತಿದೊಡ್ಡ ರಾಜಕೀಯ ಪಕ್ಷದ ಮಾಜಿ ಅಧ್ಯಕ್ಷರಾಗಿ ನೀವು ಮಾತನಾಡುವಾಗ ಹೆಚ್ಚು ಜಾಗರೂಕರಾಗಿರಬೇಕು” ಎಂದು ನ್ಯಾಯಾಲಯ ಪ್ರತಿಕ್ರಿಯಿಸಿತ್ತು.

ಇದನ್ನೂ ಓದಿರಿ: ಸಲಿಂಗ ವಿವಾಹ ವಿಚಾರ ಸಂಸತ್ತಿಗೆ ಬಿಡುವಂತೆ ಸುಪ್ರೀಂ ಕೋರ್ಟ್‌ಗೆ ಬಾರ್ ಕೌನ್ಸಿಲ್ ಮನವಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯವರು ಬಜೆಟ್ ಓದುವುದೂ ಇಲ್ಲ, ಆರ್ಥಿಕತೆ ಬಗ್ಗೆ ಗೊತ್ತೂ ಇಲ್ಲ: ಸಿಎಂ ಸಿದ್ದರಾಮಯ್ಯ

0
ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗ್ಯಾರಂಟಿ ಯೋಜನೆಗಳನ್ನೇ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ" ಎಂಬ ಬಿಜೆಪಿಗರ ಆರೋಪಕ್ಕೆ...