ಬಿಜೆಪಿ ನಾಯಕ ಅಮಿತ್ ಮಾಳವಿಯಾ ದಾಖಲಿಸಿದ್ದ ಎಫ್‌ಐಆರ್‌ಗೆ ಸಂಬಂಧಿಸಿದಂತೆ ಕಳೆದ ವರ್ಷ ಅಕ್ಟೋಬರ್‌ನಲ್ಲಿ ದೆಹಲಿ ಪೊಲೀಸರು ನಡೆಸಿದ ಶೋಧದ ವೇಳೆ ಆನ್‌ಲೈನ್ ಪೋರ್ಟಲ್ “ದಿ ವೈರ್” ಸಂಪಾದಕರಿಂದ ವಶಪಡಿಸಿಕೊಂಡ ಎಲೆಕ್ಟ್ರಾನಿಕ್ ಸಾಧನಗಳನ್ನು ಹಿಂತಿರುಗಿಸುವಂತೆ (ಬಿಡುಗಡೆ) ದೆಹಲಿ ನ್ಯಾಯಾಲಯ ನಿನ್ನೆ ಆದೇಶಿಸಿದೆ.
ಪೋರ್ಟಲ್‌ನ ಸಂಸ್ಥಾಪಕ ಸಂಪಾದಕರಾದ ಸಿದ್ಧಾರ್ಥ್ ವರದರಾಜನ್, ಎಂಕೆ ವೇಣು, ಸಿದ್ಧಾರ್ಥ್ ಭಾಟಿಯಾ, ಉಪ ಸಂಪಾದಕ ಜಾಹ್ನವಿ ಸೇನ್ ಮತ್ತು ಮಿಥುನ್ ಕಿಡಂಬಿ ಅವರಿಂದ ವಶಪಡಿಸಿಕೊಂಡ ಸಾಧನಗಳನ್ನು ಬಿಡುಗಡೆ ಮಾಡದಿರಲು ಯಾವುದೇ ಸಮಂಜಸವಾದ ಕಾರಣವಿಲ್ಲ ಎಂದು ತೀಸ್ ಹಜಾರಿ ನ್ಯಾಯಾಲಯದ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಸಿದ್ಧಾರ್ಥ ಮಲಿಕ್ ಹೇಳಿದ್ದಾರೆ ಮತ್ತು 15 ದಿನಗಳಲ್ಲಿ ಸಾಧನಗಳನ್ನು ಬಿಡುಗಡೆ ಮಾಡುವಂತೆ ನ್ಯಾಯಾಧೀಶರು ಸೂಚಿಸಿದ್ದಾರೆ.
ತನಿಖೆಯ ಸಮಯದಲ್ಲಿ ವಶಪಡಿಸಿಕೊಂಡ ಸಾಧನಗಳು ಬಹಳ ಸಮಯದಿಂದ ತನಿಖಾಧಿಕಾರಿಯ ವಶದಲ್ಲಿವೆ ಮತ್ತು ಯಾವುದೇ ಮುಂದುವರಿದ ತನಿಖೆಗೆ ಬೇಕಾದ ದಾಖಲೆ ಎಫ್‌ಎಸ್‌ಎಲ್ ಸಂಗ್ರಹಿಸಿದೆ ಎಂದು ನ್ಯಾಯಾಲಯವು ಗಮನಿಸಿದೆ.
ವಶಪಡಿಸಿಕೊಂಡ ಸಾಧನಗಳು ಮುಂದಕ್ಕೆ ತನಿಖೆಗೆ ಅಗತ್ಯವಾಗಬಹುದು ಎಂಬ ಪೊಲೀಸರ ವಾದವನ್ನು ತಳ್ಳಿಹಾಕಿದ ನ್ಯಾಯಾಧೀಶರು ಸಾಧನಗಳನ್ನು ಅನಿರ್ದಿಷ್ಟವಾಗಿ ವಶಕ್ಕೆ ಅನುಮತಿ ನಿರಾಕರಿಸಿದೆ.
ತನಿಖೆಯ ವೇಳೆ ಪೊಲೀಸರು ವಶಪಡಿಸಿಕೊಂಡ ಎಲೆಕ್ಟ್ರಾನಿಕ್ ಸಾಧನಗಳನ್ನು ಬಿಡುಗಡೆ ಮಾಡುವಂತೆ ಕೋರಿ ಸಂಪಾದಕರು ಸಲ್ಲಿಸಿದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಾಧೀಶರು ಈ ಆದೇಶವನ್ನು ನೀಡಿದ್ದಾರೆ.
ಮಾಳವೀಯ ಅವರು ಸಾಮಾಜಿಕ ಮಾಧ್ಯಮ ಸಂಸ್ಥೆ ಮೆಟಾದಲ್ಲಿ (ಫೇಸ್‌ಬುಕ್ ಮಾತೃಸಂಸ್ಥೆ) ತಮ್ಮ ವಿಶೇಷ ಅಧಿಕಾರ ಬಳಸಿಕೊಂಡು 700ಕ್ಕೂ ಹೆಚ್ಚು ಪೋಸ್ಟ್‌ಗಳನ್ನು ಸಾಮಾಜಿಕ ಮಾಧ್ಯಮಗಳಿಂದ ತೆಗೆದುಹಾಕಿದ್ದಾರೆ ಎಂಬ ವರದಿಗೆ ಸಂಬಂಧಿಸಿದಂತೆ ದಿ ವೈರ್ ಮತ್ತು ಅದರ ಸಂಪಾದಕರ ವಿರುದ್ಧ ಅಮಿತ್ ಮಾಳವೀಯ ಎಫ್‌ಐಆರ್ ದಾಖಲಿಸಿದ್ದರು.
ದಿ ವೈರ್ ಮತ್ತು ಸಂಪಾದಕರ ವಿರುದ್ಧ ಸೆಕ್ಷನ್ 420, 468, 469 , 120 ಬಿ ಮತ್ತು 34 ರಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಇದನ್ನು ಓದಿ: ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಮಹಿಳಾ ಮೀಸಲಾತಿ ಮಸೂದೆಗೆ ತಿದ್ದುಪಡಿ: ಕಾಂಗ್ರೆಸ್