ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶವೆನಿಕೊಂಡಿರುವ ಭಾರತದ ಪ್ರಧಾನಿ ಅಮೆರಿಕಾ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರಿಂದ ಪ್ರಜಾಪ್ರಭುತ್ವದ ಪಾಠ ಕೇಳುವಂತಾಗಿದ್ದು ದೇಶದ ಅತಿ ದೊಡ್ಡ ವಿಪರ್ಯಾಸ ಎಂದು ರಾಜ್ಯ ಕಾಂಗ್ರೆಸ್ ಶನಿವಾರ ಆಕ್ರೋಶ ವ್ಯಕ್ತಪಡಿಸಿದೆ.
ಮೂರು ದಿನಗಳ ಅಮೆರಿಕಾ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಶುಕ್ರವಾರ ಅಮೆರಿಕಾ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಜೊತೆ ಮಾತುಕತೆ ನಡೆಸಿದ್ದಾರೆ. ಈ ವೇಳೆ ಅವರು, ‘‘ವಿಶ್ವದೆಲ್ಲೆಡೆ ಪ್ರಜಾಪ್ರಭುತ್ವಕ್ಕೆ ಅಪಾಯವಿದ್ದು, ಇದನ್ನು ತಡೆಗಟ್ಟಲು, ನಮ್ಮ ದೇಶಗಳಲ್ಲಿ ಪ್ರಜಾಸತ್ತಾತ್ಮಕ ನೀತಿಗಳು ಮತ್ತು ಪ್ರಜಾಸತ್ತಾತ್ಮಕ ಸಂಸ್ಥೆಗಳನ್ನು ರಕ್ಷಿಸಿಕೊಳ್ಳುವ ತುರ್ತು ಅಗತ್ಯವಿದೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ರೈತ ಹೋರಾಟ: ಹೋರಾಟನಿರತ ರೈತರ ಬಗ್ಗೆ ಅಮೆರಿಕಾದ ರೈತರ ಮಾತುಗಳು
“ನಮ್ಮ ದೇಶಗಳಲ್ಲಿ ಪ್ರಜಾಪ್ರಭುತ್ವವನ್ನು ಬಲಪಡಿಸಲು ನಾವೆಲ್ಲಾ ಏನು ಮಾಡಬೇಕು ಎಂಬುದನ್ನು ಗಂಭೀರವಾಗಿ ಪರಿಗಣಿಸಬೇಕು. ನಮ್ಮ ದೇಶದ ಹಿತಾಸಕ್ತಿಗಾಗಿ ನಾವಿದನ್ನು ಮಾಡಲೇಬೇಕಿದೆ. ಪ್ರಜಾಪ್ರಭುತ್ವದ ಬಗ್ಗೆ ಭಾರತೀಯರ ಬದ್ಧತೆಯ ಬಗ್ಗೆ ಸ್ವತಃ ನನ್ನ ಕುಟುಂಬದವರನ್ನು ನೋಡಿ, ಅರ್ಥೈಸಿಕೊಂಡಿದ್ದೇನೆ. ಪ್ರಜಾಸತ್ತಾತ್ಮಕ ನೀತಿಗಳು ಮತ್ತು ಸಂಸ್ಥೆಗಳನ್ನು ಕಾಪಾಡಿಕೊಳ್ಳಲು ಏನೆಲ್ಲಾ ಮಾಡಬೇಕು ಎಂಬುದು ನನಗೆ ತಿಳಿದಿದೆ” ಎಂದು ಕಮಲಾ ಅವರು ಹೇಳಿದ್ದಾರೆ.
Ghana and the U.S. have a strong relationship and shared commitments. Yesterday, I met with President @NAkufoAddo of Ghana at the White House to discuss deepening the close ties that connect our countries. pic.twitter.com/bXz6Fe4Wzp
— Vice President Kamala Harris (@VP) September 24, 2021
ಅಮೆರಿಕಾ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರ ತಾಯಿ ಶ್ಯಾಮಲಾ ಗೋಪಾಲನ್ ಅವರು ತಮಿಳುನಾಡಿನಲ್ಲಿ ನಾಗರಿಕ ಹಕ್ಕುಗಳ ಹೋರಾಟಗಾರರಾಗಿದ್ದರು.
ಇದನ್ನೂ ಓದಿ: ಮೋದಿ ಪ್ರವಾಸ ವಿರೋಧಿಸಿ ವೈಟ್ ಹೌಸ್ ಮುಂದೆ ಅನಿವಾಸಿ ಭಾರತೀಯರ ಪ್ರತಿಭಟನೆ
ಪ್ರಧಾನಿ ಮೋದಿಗೆ ಅಮೆರಿಕಾ ಉಪಾಧ್ಯಕ್ಷೆ ಪ್ರಜಾಪ್ರಭುತ್ವದ ಬಗ್ಗೆ ಪಾಠ ಮಾಡಿರುವುದಕ್ಕೆ ಪ್ರತಿಕ್ರಿಯಿಸಿರುವ ರಾಜ್ಯ ಕಾಂಗ್ರೆಸ್, ಭಾರತದಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳು ಕುಸಿಯುತ್ತಿರುವುದನ್ನು ಜಗತ್ತು ಗಮನಿಸುತ್ತಿದೆ, ಪ್ರಧಾನಿ ತಮ್ಮ ಸರ್ವಾಧಿಕಾರಿ ಧೋರಣೆ ಬಿಡುವರೇ? ಎಂದು ಪ್ರಶ್ನಿಸಿದೆ.
ತನ್ನ ಅಧೀಕೃತ ಟ್ವಿಟರ್ ಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡಿರುವ ಕಾಂಗ್ರೆಸ್, “ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶವೆನಿಸಿಕೊಂಡಿದ್ದ ಭಾರತದ ಪ್ರಧಾನಿ ಅಮೆರಿಕಾ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರಿಂದ ಪ್ರಜಾಪ್ರಭುತ್ವದ ಪಾಠ ಕೇಳುವಂತಾಗಿದ್ದು ದೇಶದ ಅತಿ ದೊಡ್ಡ ವಿಪರ್ಯಾಸ. ಭಾರತದಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳು ಕುಸಿಯುತ್ತಿರುವುದನ್ನು ಜಗತ್ತು ಗಮನಿಸುತ್ತಿದೆ, ಪ್ರಧಾನಿ ತಮ್ಮ ಸರ್ವಾಧಿಕಾರಿ ಧೋರಣೆ ಬಿಡುವರೇ?” ಎಂದು ಕೇಳಿದೆ.
ಕಮಲಾ ಹ್ಯಾರಿಸ್ ಭೇಟಿಯ ನಂತರ ಶ್ವೇತಭವನದಲ್ಲಿ ಅಮೆರಿಕಾ ಅಧ್ಯಕ್ಷ ಜೊ ಬೈಡನ್ ಅವರನ್ನು ಭೇಟಿಯಾದ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. ದ್ವಿಪಕ್ಷೀಯ ಮಾತುಕತೆಯ ನಂತರ ಕ್ವಾಡ್ ಶೃಂಗ ಸಭೆಯಲ್ಲಿ ಪ್ರಧಾನಿ ಮೋದಿ ಭಾಗಿಯಾಗಿದ್ದಾರೆ. ಪ್ರಧಾನಿಯ ಮೂರು ದಿನದ ಅಮೆರಿಕಾ ಪ್ರವಾಸದಲ್ಲಿ ಇಂದು ಕೊನೆಯ ದಿನವಾಗಿದ್ದು, ಇಂದು ಸಂಜೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆಗೆ ತೆರಳಿ ಅಲ್ಲಿ ಭಾಷಣ ಮಾಡಲಿದ್ದಾರೆ.
ಇದನ್ನೂ ಓದಿ: ರೈತ ಹೋರಾಟದ ಕುರಿತು ಮೋದಿಯೊಂದಿಗೆ ಮಾತನಾಡಿ: ಬೈಡನ್‌ಗೆ ರಾಕೇಶ್ ಟಿಕಾಯತ್ ಒತ್ತಾಯ