Homeಮುಖಪುಟಮಾಂಸಾಹಾರಿ ಸಮುದಾಯಗಳ ರಾಕ್ಶಸೀಕರಣ ನಿಲ್ಲಲಿ

ಮಾಂಸಾಹಾರಿ ಸಮುದಾಯಗಳ ರಾಕ್ಶಸೀಕರಣ ನಿಲ್ಲಲಿ

- Advertisement -
- Advertisement -

(ಇದು ಹೊಸ ಬರಹದಲ್ಲಿದೆ. ಮಹಾಪ್ರಾಣಗಳ ಬಳಕೆಯನ್ನು ಕಡಿತಗೊಳಿಸಲಾಗಿದೆ)

ಹೆಸರಾಂತ ಚಿತ್ರಸಾಹಿತಿ ಮತ್ತು ಸಂಗೀತ ನಿರ್ದೇಶಕ ಹಂಸಲೇಖ ಅವರು ಸಾರ್‍ವಜನಿಕ ಸಭೆಯಲ್ಲಿ ಆಹಾರ ವಿಧಾನಕ್ಕೆ ಸಂಬಂಧಿಸಿದಂತೆ ಪ್ರಾಸಂಗಿಕವಾಗಿ ಆಡಿದ ಮಾತು ತೀವ್ರ ವಿವಾದಕ್ಕೆ ಕಾರಣವಾದುದು ಈಗ ಎಲ್ಲರಿಗೂ ತಿಳಿದಿರುವ ವಿಚಾರ. ಆ ನಂತರ ಕೆಲವರು ಮಾಂಸಾಹಾರ ಸೇವಿಸುವವರ ಬಗೆಗೆ ಆಡಿದ ಕೀಳು ಧೋರಣೆಯ ಮಾತುಗಳು ಮಾಂಸಾಹಾರಿಗಳು ತೀವ್ರವಾಗಿ ಪ್ರತಿಭಟಿಸುವಂತೆ ಮಾಡಿತು. ’ಬಾಡೇ ನಮ್‌ಗಾಡು’ ಎಂಬ ಆಂದೋಲನವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ನಡೆಸುವಂತಾಯಿತು. ಮಾಂಸಾಹಾರಿಗಳು ಮಾಂಸಾಹಾರವನ್ನು ತಮ್ಮ ಬದುಕಿನಿಂದ ಬೇರ್‍ಪಡಿಸಲಾಗದ ಆಹಾರ ಪದ್ದತಿಯಾಗಿ ಸಮರ್‍ಥಿಸಿಕೊಂಡರು. ಹೀಗೆ ಸಾರ್‍ವಜನಿಕವಾಗಿ ತಮ್ಮ ಆಹಾರ ಪದ್ಧತಿಯನ್ನು ಸಮರ್‍ಥಿಸಿಕೊಳ್ಳುವಂತಹ ಅನಿವಾರ್‍ಯತೆಗೆ ದೂಡಲಾಯಿತು. ಇದು ನಮ್ಮ ದೇಶದ ಬಹುಸಂಖ್ಯಾತ ಜನರ ಆಹಾರ ಪದ್ಧತಿ ವಿವಾದದ ಕೇಂದ್ರವಾಗಿರುವುದನ್ನು ಎತ್ತಿ ತೋರಿಸಿತು. ಹೀಗೆ ಚರ್‍ಚಾಸ್ಪದವಾಗುವ ಘಟನೆಗಳು ನಡೆಯುತ್ತಲೇ ಇವೆ.

ನಮ್ಮ ದೇಶದಲ್ಲಿ ದೇವರು, ಧರ್‍ಮ, ಉಡುಗೆ-ತೊಡುಗೆಗಳು, ಭಾಶೆಗಳು ವಿವಾದ ಕೇಂದ್ರವಾಗಿರುವಂತೆ ಆಹಾರವೂ ವಿವಾದಕ್ಕೆ ಗುರಿಯಾಗುವುದು ದೊಡ್ಡ ದುರಂತ. ಈ ದುರಂತವು ದೇಶವಾಸಿಗಳ ಸಾಮಾಜಿಕ
ನಂಟನ್ನು ನಾಶ ಮಾಡುತ್ತದೆ. ಸಾಮಾಜಿಕವಾದ ಗುದ್ದಾಟಗಳಿಗೆ ಕಾರಣವಾಗಿದೆ. ಇದು ನಮ್ಮ ಸಮಾಜದಲ್ಲಿ ವಿವಿಧ ವರ್‍ಗದ ಜನರ ನಡುವೆ ಇರಬೇಕಾದ ಹಾಸುಹೊಕ್ಕಿನ ಕೊಡುಕೊಳೆಯ ನಂಟು ಇಲ್ಲದಿರುವುದನ್ನು ಎತ್ತಿತೋರುತ್ತದೆ. ಯಾವ ದೇವರನ್ನು ಪೂಜಿಸಬೇಕು; ಯಾವ ಆಹಾರವನ್ನು ತಿನ್ನಬೇಕು; ಯಾವ ಉಡುಗೆಯನ್ನು ಉಡಬೇಕು ಎಂದು ತೀರ್‍ಮಾನಿಸುವ ಹಕ್ಕನ್ನು, ಅಧಿಕಾರವನ್ನು ಸಾಮಾಜಿಕವಾಗಿ ಬಲಿಶ್ಟವಾಗಿರುವ ವರ್‍ಗ-ಜಾತಿ ತನಗೆ ತಾನೇ ಪಡೆದುಕೊಂಡು ಅದು ಎಲ್ಲವನ್ನೂ ನಿರ್ದೇಶಿಸತೊಡಗಿದಾಗ ಇಂತಹ ವಿವಾದ ಹುಟ್ಟಿಕೊಳ್ಳುತ್ತದೆ. ಇಂತಹ ನಿರ್ದೇಶನದ ಪರಿಣಾಮವಾಗಿಯೇ ಈ ದೇಶದ ಬಹುಸಂಖ್ಯಾತ ಆಹಾರ ಪದ್ದತಿ ಕೂಡ ವಿವಾದಕ್ಕೆ ಒಳಗಾಗಿದೆ.

ಪ್ರಸ್ತುತ ನಮ್ಮ ದೇಶದ ಆಹಾರ ಪದ್ದತಿಯು ಸಸ್ಯಾಹಾರ ಮತ್ತು ಮಾಂಸಾಹಾರ ಪದ್ದತಿಗಳೆಂದು ಎರಡು ತುದಿಗಳಲ್ಲಿ ಒಡೆದುಹೋಗಿದೆ. ಪುರೋಹಿತಶಾಹಿ ಬ್ರಾಹ್ಮಣ ವರ್‍ಗ ಸಸ್ಯಾಹಾರವನ್ನು ತನ್ನ ಆಹಾರ ಸಂಸ್ಕೃತಿಯಾಗಿ ಒಪ್ಪಿಕೊಂಡು ಅದನ್ನು ಅನುಸರಿಸುತ್ತಿದೆ. ಅದನ್ನೇ ಸರ್‍ವಶ್ರೇಶ್ಟವೆಂದು ಭಾವಿಸಿದೆ. ಎಲ್ಲರ ಮೇಲೆ ಹೇರಲು ಬಯಸುತ್ತಿದೆ. ಇದರಂತೆ ಜೈನ, ಲಿಂಗಾಯತ ಧರ್‍ಮಗಳ ಜನರು ಸಸ್ಯಾಹಾರವನ್ನು ತಿನ್ನುತ್ತಾರೆ. ಆದರೆ ಇವರು ಕೂಡ ಬ್ರಾಹ್ಮಣರಂತೆ ಸಸ್ಯಾಹಾರವೇ ಶ್ರೇಶ್ಟವೆಂದು ಭಾವಿಸಿದ್ದಾರೆ. ಹೀಗೆ ಭಾವಿಸಿರುವ ಕಾರಣಕ್ಕಾಗಿಯೇ ಸರ್‍ಕಾರಿ ಶಾಲೆಗಳಲ್ಲಿ ಮಧ್ಯಾಹ್ನದ ಊಟಕ್ಕೆ ಮೊಟ್ಟೆ ಕೊಡುವುದನ್ನು ವಿರೋಧಿಸುತ್ತಿದ್ದಾರೆ. ಪ್ರಮುಖವಾಗಿ ಸನಾತನ ವೈದಿಕ, ಜೈನ ಮತ್ತು ಲಿಂಗಾಯತ ತತ್ವವನ್ನು ಪ್ರತಿಪಾದಿಸುವವರು ಮಾಂಸಾಹಾರವನ್ನು ವಿರೋಧಿಸುತ್ತ ಬರುತ್ತಿದ್ದಾರೆ. ಮಾಂಸಾಹಾರವನ್ನು ಕೀಳು, ಹೊಲಸು ಎಂದು ಪ್ರಚಾರ ಮಾಡುತ್ತಲೇ ಬರುತ್ತಿದ್ದಾರೆ.

ಇದರ ಪರಿಣಾಮವಾಗಿ ಶೂದ್ರ-ದಲಿತ ಸಮುದಾಯಗಳ ಮಾಂಸಾಹಾರಿಗಳು ಕೂಡ ತಮ್ಮ ಆಹಾರವನ್ನು ’ಹೊಲಸು’ ಎಂದೇ ಭಾವಿಸುವ ಉದಾಹರಣೆಗಳಿವೆ. ಆದರೆ ಈ ಸಮುದಾಯಗಳು ಪ್ರಧಾನವಾಗಿ ಮಾಂಸಾಹಾರವನ್ನು ಬಳಸುತ್ತವೆ. ಇದು ಸಾವಿರಾರು ವರ್‍ಶಗಳಿಂದ ರೂಢಿಯಾಗಿ ಬಂದಿರುವ ಆಹಾರ ಪದ್ದತಿ. ಹೀಗೆ ಮಾಂಸ ತಿನ್ನುವುದನ್ನು ಈ ಸಮುದಾಯಗಳು ರೂಢಿಸಿಕೊಂಡಿದ್ದರೂ ಬರೀ ಮಾಂಸವನ್ನೇ ತಿಂದು ಬದುಕುವುದಿಲ್ಲ. ಎಲ್ಲರಂತೆ ಸಸ್ಯಾಹಾರವನ್ನೇ ಪ್ರಧಾನವಾಗಿ ಬಳಸುತ್ತಾರೆ. ಅದರ ಜೊತೆಗೆ ಮಾಂಸವನ್ನು ಸೇವಿಸುತ್ತಾರೆ. ಮಾಂಸಾಹಾರ ಮಾನವರ ವಿಕಾಸದ ಜೊತೆಗೆ ಬೆಳೆದು ಬಂದಿರುವ ಬಹುಮುಖ್ಯ ಪದ್ದತಿ. ವಿಕಾಸದ ಹಾದಿಯಲ್ಲಿ ಸಿಡಿದು ಹೊರಹೋದ ಕೆಲವು ಪಂಗಡಗಳು ಮಾಂಸಾಹಾರವನ್ನು ತ್ಯಜಿಸಿವೆ. ಹಾಗೆ ತ್ಯಜಿಸಿದ ಸಮುದಾಯಗಳೇ ಇಂದು ಮಾಂಸಾಹಾರವನ್ನು ತೀವ್ರವಾಗಿ ದ್ವೇಶಿಸುತ್ತಿರುವುದು ಮತ್ತು ಅಪಮಾನ ಮಾಡುತ್ತಿರುವುದು. ಅಲ್ಲದೆ ಜನರ ಮಾಂಸಾಹಾರದ ಹಕ್ಕನ್ನೇ ಕಸಿಯುವ ಸ್ಥಿತಿಗೆ ಈ ಪಂಗಡಗಳು ಬೆಳೆದಿವೆ. ಈ ಬೆಳವಣಿಗೆಯೇ ಬಹುಸಂಖ್ಯಾತ ಶೂದ್ರ-ದಲಿತರ ಆಹಾರ ಪದ್ದತಿ ವಿವಾದಕ್ಕೆ ಕಾರಣವಾಗಲು ವೇದಿಕೆ ಸೃಶ್ಟಿಸಿರುವುದು.

ಹೀಗೆ ಮಾಂಸಾಹಾರವನ್ನು ವಿರೋಧಿಸುವುದರ ಹಿಂದೆ ತಮ್ಮ ವರ್‍ಗದ ಶ್ರೇಶ್ಟತೆಯನ್ನು ಕಾಪಾಡಿಕೊಳ್ಳುವ ಉದ್ದೇಶವಿದೆ. ತಮ್ಮ ಶ್ರೇಶ್ಟತೆಯನ್ನು ಪ್ರತಿಪಾದಿಸುವ ಯಾವುದೇ ಸಮುದಾಯಗಳು ತನ್ನ ಭಾಶೆ, ಜೀವನಕ್ರಮ, ಆಚರಣೆಗಳು, ದೇವರು ಮತ್ತು ಅದರ ನಿಯಮಗಳನ್ನು ಶ್ರೇಶ್ಟವೆಂದು ಭಾವಿಸುತ್ತವೆ. ಹೀಗೆ ಭಾವಿಸಿ ಅದನ್ನು ಎಲ್ಲರ ಮೇಲೂ ಹೇರಲಾಗುತ್ತದೆ. ತನ್ನ ಆಹಾರ ಪದ್ದತಿಯನ್ನು ಹೇರುವ ಹಾದಿಯಲ್ಲಿ ಮಾಂಸಾಹಾರವನ್ನು ಕೀಳುಗಳೆದು ಅಪಮಾನಿಸಿ ಜನರು ಕೀಳರಿಮೆಯಿಂದ ನರಳುವಂತೆ ಮಾಡಲಾಗುತ್ತದೆ. ಅಲ್ಲದೆ ದನದಂತಹ ಕೆಲವು ಪ್ರಾಣಿಗಳನ್ನು ಪವಿತ್ರೀಕರಿಸಿ ಅದನ್ನು ಯಾರೂ ಆಹಾರದ ಭಾಗವಾಗಿ ಸ್ವೀಕರಿಸದಂತೆ ನಿಶೇಧಿಸಲಾಗುತ್ತದೆ. ಆ ಮೂಲಕ ಬಹುಸಂಖ್ಯಾತರ ಆಹಾರದ ಹಕ್ಕನ್ನು ಕಸಿಯಲಾಗುತ್ತದೆ. ಇದರ ಹಿಂದೆ ಇರುವುದು, ಬಲಿಶ್ಟರಾದ ಅಲ್ಪಸಂಖ್ಯಾತರ ಸಾಂಸ್ಕೃತಿಕ ಯಜಮಾನಿಕೆಯನ್ನು ಉಳಿದೆಲ್ಲರೂ ಒಪ್ಪಿಕೊಳ್ಳುವಂತೆ ಒತ್ತಾಯಿಸಲಾಗುವ ಹುನ್ನಾರ. ತಮಗೆ ಪ್ರಾಪ್ತವಾಗಿರುವ ಸಾಮಾಜಿಕ ರಾಜಕೀಯ ಆರ್ಥಿಕ ಅಧಿಕಾರವನ್ನು ಬಳಸಿ ಜನರನ್ನು ನಿಯಂತ್ರಿಸಲಾಗುತ್ತದೆ. ಇದು ಈ ದೇಶದ ಇಂದಿನ ವಿದ್ಯಮಾನವಾಗಿದೆ.

ಹಾಗಾಗಿ ಇಲ್ಲಿನ ಸಮಸ್ಯೆ ಆಹಾರ ಪದ್ದತಿಯಲ್ಲ. ಬದಲಿಗೆ ಈ ದೇಶದ ಮೇಲಿನ ಅಧಿಕಾರವನ್ನು ಸ್ವಾಧೀನಪಡಿಸಿಕೊಂಡಿರುವ ಬಲಿಶ್ಟ ಜಾತಿಗಳು. ಇವು ತಮ್ಮ ಸಾಮಾಜಿಕ ಯಜಮಾನಿಕೆಯನ್ನು ಇಡೀ ಸಮಾಜದ ಮೇಲೆ ಹೇರುವುದರ ಭಾಗವಾಗಿ ಈ ಸಮಸ್ಯೆಯನ್ನು ಹುಟ್ಟಿಹಾಕಿವೆ. ಅಲ್ಲದೆ ತನ್ನ ನೆರೆಹೊರೆಯ ಆಹಾರ ಪದ್ದತಿಯನ್ನು ಸಹಿಸದೆ ಈ ಸಮಸ್ಯೆಯನ್ನು ಉಲ್ಬಣಿಸುವಂತೆ ಮಾಡಿವೆ. ಹೀಗೆ ಹುಟ್ಟಿಹಾಕುವುದರ ಹಿಂದಿರುವುದು ಅಧಿಕಾರದ ಗರ್‍ವ. ಅಲ್ಲದೆ ಈ ಗರ್‍ವದ ಜೊತೆಗೆ ಈ ದೇಶದಲ್ಲಿ ವೈವಿಧ್ಯಮಯ ಆಹಾರ ಪದ್ದತಿಗಳಲ್ಲಿ ತಮ್ಮದೇ ಶ್ರೇಶ್ಟವಾದ ಪದ್ದತಿ ಎಂಬ ಅಜ್ಞಾನ. ಇದೆಲ್ಲದರ ಪರಿಣಾಮವಾಗಿ ಮಾಂಸಾಹಾರದ ಸುತ್ತ ವಿವಾದ ಹುಟ್ಟಿಕೊಂಡಿದೆ. ಈ ವರ್‍ಗಗಳು ತನ್ನಂತೆಯೇ ಬೇರೆಯವರ ಆಹಾರ ಪದ್ದತಿಯೂ ಇದೆಯೆಂದು ಭಾವಿಸಿ ಅದನ್ನು ಗೌರವಿಸಿದ್ದರೆ ಈ ಸಮಸ್ಯೆಯೇ ಹುಟ್ಟುತ್ತಿರಲಿಲ್ಲ. ಇವುಗಳ ರೋಗ್ರಗ್ರಸ್ತ ಚಿಂತನೆಯ ಕ್ರಮವು ವಿವಿಧ ಆಹಾರ ಪದ್ದತಿಗಳನ್ನು ಪರಸ್ಪರ ವಿರೋಧದ ನೆಲೆಯಲ್ಲಿ ನಿಲ್ಲಿಸಿದೆ. ಲೋಕದಲ್ಲಿ ಬೇರೆಲ್ಲಾ ಬಗೆಯ ವೈವಿಧ್ಯಗಳಿದ್ದಂತೆ ಆಹಾರ ಸಂಸ್ಕೃತಿಯಲ್ಲಿಯೂ ವೈವಿಧ್ಯವಿದೆ. ಈ ವೈವಿಧ್ಯತೆ ಜನರ ಆರೋಗ್ಯವನ್ನು ಮತ್ತು ಪ್ರಾಕೃತಿಕ ವೈವಿಧ್ಯವನ್ನೂ ಕಾಪಾಡುತ್ತದೆ. ಇದನ್ನು ಮರೆಮಾಚಿ ವಿವಾದವನ್ನು ಸೃಶ್ಟಿಸುವುದು ಕೇಡಿನ ಮನಸ್ಥಿತಿಯೇ ಸರಿ.

ಬಲಿಶ್ಟ ವರ್‍ಗ-ಜಾತಿಗಳಲ್ಲಿನ ಕೇಡಿನ ಬುದ್ದಿಯೇ ನಮ್ಮ ಸಮಾಜದ ಜನರ ಬದುಕಿನಎಲ್ಲ ಮಗ್ಗುಲುಗಳನ್ನು ನಾಶ ಮಾಡುತ್ತಿದೆ. ಅಲ್ಲದೆ ಈ ವರ್‍ಗಗಳು ಪೊಳ್ಳು ನೈತಿಕತೆಯನ್ನು ಬೋಧಿಸುತ್ತಿವೆ. ಈ ನೈತಿಕತೆಯಲ್ಲಿ ಯಾವುದೇ ಹುರುಳಿಲ್ಲ. ಇಂತಹ ಹುಸಿ ನೈತಿಕತೆಗಳ ಮುಖವಾಡಗಳನ್ನು ಧರಿಸಿ ಅವುಗಳ ಮರೆಯಲ್ಲಿ ತಮ್ಮ ಅಧಿಕಾರವನ್ನು ಎಲ್ಲರ ಮೇಲೆ ಹೇರಲಾಗುತ್ತದೆ. ಸಸ್ಯಾಹಾರವಾಗಲಿ ಮಾಂಸಾಹಾರವಾಗಲಿ ಅದು ಪ್ರದೇಶ, ಹವಾಮಾನ, ಜನಸಮುದಾಯಗಳ ವೈವಿಧ್ಯ ಮತ್ತು ಅವರ ಆಯ್ಕೆಯನ್ನು ಆಧರಿಸಿ ರೂಪುಗೊಳ್ಳುತ್ತದೆ. ಇದಲ್ಲದೆ ಸಸ್ಯಾಹಾರವೂ ಏಕರೂಪವಲ್ಲ. ಮಾಂಸಾಹಾರವೂ ಏಕರೂಪಿಯಲ್ಲ. ಎಲ್ಲವೂ ಆಯಾ ಪ್ರದೇಶಗಳ, ಹವಾಮಾನ ಮತ್ತು ಜನಸಮುದಾಯಗಳ ಅಭಿರುಚಿಗೆ ತಕ್ಕಂತೆ ವಿಕಾಸವಾಗಿರುತ್ತವೆ. ಆಹಾರ ಪದಾರ್ಥಗಳನ್ನು ತಯಾರು ಮಾಡುವುದು ಮತ್ತು ಅದರ
ರುಚಿಯನ್ನು ಸವಿಯುವುದರಲ್ಲಿ ನಮ್ಮ ಇಂದ್ರಿಯಗಳು ಸಿದ್ಧವಾಗಿರುತ್ತವೆ. ಇಂತಹ ಸಿದ್ದತೆಗೆ ಶತಮಾನಗಳ ಚರಿತ್ರೆಯಿದೆ. ಇಂತಹ ಪದ್ದತಿಯನ್ನು ಇಂದು ಬಹುರಾಶ್ಟ್ರೀಯ ಆಹಾರೋದ್ಯಮಗಳು ಧೂಳಿಪಟ ಮಾಡುತ್ತಿವೆ. ಮೆಕ್‌ಡೊನಾಲ್ಡ್, ಡೊಮಿನೋಸ್ ತರಹ ಉದ್ಯಮಗಳು ಜನರ ನಾಲಿಗೆಯ ರುಚಿ ತಿದ್ದುವ ಹಾದಿಯಲ್ಲಿವೆ. ದೇಶದ ಆಹಾರದ ಮಾರುಕಟ್ಟೆಯ ಮೇಲೆ ವಿದೇಶಿ ಸಂಸ್ಥೆಗಳು ಹಿಡಿತ ಸಾಧಿಸುತ್ತಿವೆ. ಇದು ಚರ್‍ಚೆ ಮಾಡಬೇಕಾದ ವಿಚಾರ.

ಆದರೆ ಇಂದು ಇಂತಹ ವಿಚಾರಗಳನ್ನು ಚರ್‍ಚೆಗೆ ತೆಗೆದುಕೊಳ್ಳದೆ ಜನರು ಸಾವಿರಾರು ವರ್‍ಶಗಳಿಂದ ಅನುಸರಿಸಿಕೊಂಡು ಬಂದಿರುವ ಜನರ ಆಹಾರ ಸಂಸ್ಕೃತಿಯ ಮೇಲೆ ಹಲ್ಲೆ ನಡೆಸಲಾಗುತ್ತಿದೆ. ಆಹಾರ ಹಕ್ಕನ್ನು ಕಸಿಯಲಾಗುತ್ತಿದೆ. ತನಗಿಂತ ಭಿನ್ನವಾದ ಆಹಾರ ಪದ್ದತಿ, ಭಾಶೆ, ಆಚರಣೆಗಳು, ಉಡುಗೆತೊಡುಗೆಗಳ ಮೇಲೆ ಅನೈತಿಕ ಪೋಲಿಸುಗಿರಿಯನ್ನು ಪೋಲಿಸರ ಸಮ್ಮುಖದಲ್ಲಿಯೇ ನಡೆಸಿದಂತೆ ಆಹಾರದ ಮೇಲೂ ದಾಳಿ ಮಾಡಲಾಗುತ್ತಿದೆ. ಇಂದಿನ ಬಲಿಶ್ಟ ವರ್‍ಗಗಳ ಅಧಿಕಾರ ರಾಜಕಾರಣದ ಭಾಗವಾಗಿಯೇ ಈ ಸಮಸ್ಯೆ ಹುಟ್ಟಿಕೊಂಡಿದೆ. ಮಾಂಸಾಹಾರದ ವಿರುದ್ಧ ಮೊದಲಿನಿಂದಲೂ ಒಳಗೊಳಗೆ ಕುದಿಯುತ್ತಿದ್ದ ದ್ವೇಶವನ್ನು ಇಂದು ಲಜ್ಜೆಬಿಟ್ಟು ಹೊರಹಾಕಲಾಗುತ್ತಿದೆ. ಇದರ ಪರಿಣಾಮವೇ ಮಾಂಸಾಹಾರಿಗಳ ರಾಕ್ಶಸೀಕರಣ.

PC: Anthony D’Souza (www.cntraveller.in)

ಹೀಗೆ ಮಾಂಸಾಹಾರ ಸೇವಿಸುವ ಸಮುದಾಯಗಳನ್ನು ರಾಕ್ಶಸೀಕರಿಸುವ ದುಶ್ಟತನವನ್ನು ಶೂದ್ರ ಮತ್ತು ದಲಿತ ಸಮುದಾಯಗಳು ಒಗ್ಗೂಡಿ ಎದುರಿಸಬೇಕಾಗಿದೆ. ಆದರೆ ಶೂದ್ರ ಮತ್ತು ದಲಿತ ಎಂದು ಚರ್‍ಚೆಯ ಅನುಕೂಲಕ್ಕೆ ಬಳಸಲಾಗುವ ಈ ಪರಿಭಾಶೆಗಳು ಸಮುದಾಯಗಳ ನೆಲೆಯಲ್ಲಿ ಏಕರೂಪಿಯಾಗಿಲ್ಲ. ಇದರ ಪರಿಧಿಯಲ್ಲಿ ಸಾವಿರಾರು ಜಾತಿಗಳು ಬರುತ್ತವೆ. ಇವುಗಳ ನಡುವೆ ಯಾವುದೇ ಐಕ್ಯತೆ ಇಲ್ಲ. ಇವುಗಳ ನಡುವಿನ ಒಡಕನ್ನು ಬಳಸಿಕೊಂಡೇ ಶ್ರೇಶ್ಟತೆಯ ವ್ಯಸನಿಗಳು ಮತ್ತು ಬಲಿಶ್ಟ ಜಾತಿಗಳು, ಮಾಂಸಾಹಾರ ತಿನ್ನುವ ಶೂದ್ರ ಮತ್ತು ದಲಿತ ಸಮುದಾಯಗಳ ಮೇಲೆ ದೈಹಿಕವಾಗಿ ಮತ್ತು ಮಾನಸಿಕವಾಗಿ ದಾಳಿ ಮಾಡುತ್ತವೆ. ಇದಕ್ಕೆ ಬ್ರಾಹ್ಮಣ ಶ್ರೇಶ್ಟತೆಯ ವ್ಯಸನದಲ್ಲಿ ನಾಶವಾಗಿರುವ ಮಾಧ್ಯಮಗಳ ಕೊಡುಗೆ ದೊಡ್ಡದಿದೆ. ಹಾಗಾಗಿ ಬಲಿಶ್ಟ ವರ್‍ಗಗಳ ಈ ಕೇಡಿನ ರಾಜಕಾರಣವನ್ನು ಬಹುಸಂಖ್ಯಾತ ಜನರಿಂದ ಕೂಡಿರುವ ಮಾಂಸಾಹಾರ ತಿನ್ನುವ ಸಮುದಾಯಗಳು ಒಗ್ಗೂಡಿ ಎದುರಿಸಬೇಕಾಗಿದೆ. ಅಂದರೆ ಜನರ ಮೇಲೆ ದಬ್ಬಾಳಿಕೆ ನಡೆಸುವ ಬಲಿಶ್ಟ ಜನರನ್ನು ಮಣಿಸಬೇಕಾಗಿದೆ. ಇದನ್ನು ಸೈದ್ಧಾಂತಿಕವಾಗಿಯೂ, ರಾಜಕೀಯವಾಗಿಯೂ ಸಾಮಾಜಿಕವಾಗಿಯೂ ಎದುರಿಸಬೇಕಾಗಿದೆ. ಇದಕ್ಕೆ ಬೇಕಾದ ವೇದಿಕೆಗಳನ್ನು ರೂಪಿಸಬೇಕಿದೆ. ಇದೇ ಇಂದಿನ ತುರ್‍ತು ಅಗತ್ಯ.

ಡಾ. ರಂಗನಾಥ ಕಂಟನಕುಂಟೆ

ಡಾ. ರಂಗನಾಥ ಕಂಟನಕುಂಟೆ
ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿರುವ ರಂಗನಾಥ ಕಂಟನಕುಂಟೆ ಹೊಸ ತಲೆಮಾರಿನ ಚಿಂತಕ, ವಿಮರ್ಶಕ ಮತ್ತು ಕವಿ. ’ಓದಿನ ಜಾಡು’, ’ತೀರದ ನಡಿಗೆ’, ’ಗೋಡೆಯ ಚಿತ್ರ’ ರಂಗನಾಥ ಅವರ ಕೆಲವು ಪುಸ್ತಕಗಳು.


ಇದನ್ನೂ ಓದಿ: ಮಾಂಸಾಹಾರದ ಮೇಲಿನ ಕೀಳರಿಮೆ ತೊಲಗಬೇಕಿದೆ: ಚಿತ್ರಸಾಹಿತಿ ಕವಿರಾಜ್‌ ಬರಹಕ್ಕೆ ಮಿಡಿದ ಕನ್ನಡಿಗರು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೇಂದ್ರ ಸಚಿವ ಅಮಿತ್‌ ಶಾ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲು

0
ಚುನಾವಣೆ ಪ್ರಚಾರದಲ್ಲಿ ಮಕ್ಕಳನ್ನು ಬಳಸಿಕೊಂಡ ಹಿನ್ನೆಲೆ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಆರೋಪದಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸೇರಿದಂತೆ ಬಿಜೆಪಿ ನಾಯಕರ ವಿರುದ್ಧ ತೆಲಂಗಾಣದ ಹೈದರಾಬಾದ್‌ನಲ್ಲಿ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಲಾಗಿದೆ. ಚುನಾವಣಾ...