Homeಕರ್ನಾಟಕಕನ್ನಡವೆಂಬ ಒಡಕಲು ಬಿಂಬದ ಸ್ವಗತ

ಕನ್ನಡವೆಂಬ ಒಡಕಲು ಬಿಂಬದ ಸ್ವಗತ

- Advertisement -
- Advertisement -

ಅಕ್ಟೋಬರ್ ತಿಂಗಳ 15 ಮತ್ತು 16ರಂದು ಬೆಂಗಳೂರಿನ ಬಸವನಗುಡಿ ನ್ಯಾಶನಲ್ ಕಾಲೇಜಿನಲ್ಲಿ ’ಕನ್ನಡವೆಂದರೆ ಬರಿ ನುಡಿಯಲ್ಲ’ ಎಂಬ ಎರಡು ದಿನಗಳ ಕಾಲ ಕನ್ನಡ ಕಟ್ಟೋಣದ ಬಗೆಗೆ ಕಾರ್‍ಯಕ್ರಮ ನಡೆಯಿತು. ಕಾರ್‍ಯಕ್ರಮದಲ್ಲಿ ಭಾಗವಹಿಸಿದ್ದ ಇಬ್ಬರು ಹಿರಿಯ ವಿದ್ವಾಂಸರು ತಮ್ಮ ಖಾಸಗಿ ಮಾತುಕತೆಯಲ್ಲಿ ಪ್ರಸ್ತಾಪಿಸಿದ ವಿಚಾರ ಕೇಳಿಸಿಕೊಂಡ ಗೆಳೆಯರೊಬ್ಬರು ಆತಂಕದಿಂದ ಹೇಳಿದರು; ಅದೇನೆಂದರೆ, ಆ ಇಬ್ಬರೂ ವಿದ್ವಾಂಸರು, ತಮ್ಮ ಪುಸ್ತಕಗಳನ್ನು ಪ್ರಕಟಿಸಲು ಅನ್ಯಜಾತಿಯ ಪ್ರಕಾಶಕರಿಗೆ ಕೊಡುವುದನ್ನು ನಿಲ್ಲಿಸಿ, ಇನ್ನು ಮುಂದೆ ತಮ್ಮದೇ ಜಾತಿಯ ಓರ್‍ವ ಪ್ರಸಿದ್ಧ ಪ್ರಕಾಶಕರಿಗೆ ನೀಡುವುದಾಗಿ ಪರಸ್ಪರ ವಿಚಾರವನ್ನು ಹಂಚಿಕೊಳ್ಳುತ್ತಿದ್ದರಂತೆ. ಇದರ ಬಗೆಗೆ ಸಾಕಷ್ಟು ಗೊತ್ತಿದ್ದ ಕಾರಣ, ’ಇದೇನು ಹೊಸದಲ್ಲ; ಇದು ಕನ್ನಡದಲ್ಲಿ ಮಾಮೂಲಿಯಾಗಿರುವ ವಿದ್ಯಮಾನ’ ಎಂದೆ.

ಮೇಲೆ ಪ್ರಸ್ತಾಪಿಸಿದ ವಿಚಾರಗಳನ್ನು ಅವರು ವೇದಿಕೆಯ ಮೇಲೆ ಹೇಳಿಲ್ಲ. ಅಲ್ಲಿ ಬೇರೆಯದೇ ಆದ ವಿಚಾರಗಳನ್ನು ಮಾತನಾಡಿ ಕನ್ನಡ ಕಟ್ಟುವುದರ ಬಗೆಗೆ ಬಿಟ್ಟಿ ಸಲಹೆಗಳನ್ನು ನೀಡಿರಲೇಬೇಕು. ವೇದಿಕೆಯ ಮೇಲಣ ಮಾತುಗಳಿಗೂ, ಖಾಸಗಿ ಮಾತುಗಳಿಗೂ ನಡುವೆ ಎಶ್ಟೊಂದು ಅಂತರ ಇರುತ್ತದೆಯಲ್ಲವೇ? ಇದು ಕನ್ನಡ ಕಾಯಕದಲ್ಲಿ ನಿರತರಾಗಿರುವ, ಕನ್ನಡ ಕಟ್ಟುವ ಮನಸ್ಸುಗಳ ದ್ವಂದ್ವ ಮತ್ತು ಟೊಳ್ಳುತನವನ್ನು ಎತ್ತಿತೋರಿಸುತ್ತದೆ. ನಮ್ಮಲ್ಲಿ ಮಾತು ಮತ್ತು ಬರೆಹಗಳು ಜಾತಿಗಳ ಗೋಡೆಗಳನ್ನು ದಾಟಲು ಪ್ರಯತ್ನಿಸುವುದಿಲ್ಲ. ಬಹಿರಂಗದಲ್ಲಿ ಎಲ್ಲರನ್ನು ಒಳಗೊಳ್ಳುವ ಮಾತನಾಡುವುದು. ಅಂತರಂಗದಲ್ಲಿ ತಮ್ಮ ಜಾತಿಯಲ್ಲದವರನ್ನು ಹೊರಗಿಡುವುದು ಇಲ್ಲಿನ ಇಬ್ಬಂದಿತನ. ಇದು ಯಾರೋ ಇಬ್ಬರು ಹಿರಿಯ ವಿದ್ವಾಂಸರ ಸಮಸ್ಯೆ ಮಾತ್ರವಲ್ಲ. ಮತ್ತು ಯಾವುದೋ ಒಂದು ಜಾತಿಯವರ ಸಮಸ್ಯೆಯೂ ಅಲ್ಲ. ಇದು ಇಂದಿನ ಕನ್ನಡ ಸಾಹಿತ್ಯ ಜಗತ್ತಿನ ಸಾಮಾನ್ಯ ಚಹರೆಯಂತಾಗಿದೆ.

ಕುವೆಂಪು

ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ, ತಮ್ಮ ಜಾತಿಯ ಪ್ರಕಾಶಕ, ’ಇವ ನಮ್ಮವ’ ಎಂಬ ಕಾರಣಕ್ಕಾಗಿಯೇ ಪ್ರಕಟಿಸಲು ಪುಸ್ತಕ ನೀಡೋಣ ಎನ್ನುವ ಮನೋಭಾವ ತೀರ ಸಂಕುಚಿತವಾದುದು. ಇಂತಹ ಸಂಕುಚಿತ ಮನೋಭಾವವೇ ಇಂದಿನ ಕನ್ನಡದ ದೊಡ್ಡ ಶತ್ರು. ಯಾಕೆಂದರೆ ಇಂತಹ ಸಂಕುಚಿತ ಮನೋಭಾವಗಳಿಂದಲೇ ಇಂದು ಕನ್ನಡ ಜಗತ್ತು ಚಿದ್ರವಾಗಿರುವುದು; ಮತ್ತು ಯಾವುದೇ ಮಹತ್ವದ ದೊಡ್ಡ ಚಿಂತನೆ ಹುಟ್ಟದೇ ಇರುವುದು; ಅಲ್ಲದೆ ಹುಟ್ಟುವ ಚಿಂತನೆಗಳನ್ನು, ಬೆಳೆಯುವ ಸಾಧ್ಯತೆಯಿರುವ ಬರೆಹಗಾರರನ್ನು ವ್ಯವಸ್ಥಿತವಾಗಿ ನಾಶಮಾಡುವುದು; ಸಾಹಿತ್ಯದ ಚರ್‍ಚೆಗಳು, ಚಟುವಟಿಕೆಗಳು ಆರೋಗ್ಯಕರವಾಗಿ ನಡೆಯದಂತೆ ತಡೆದಿರುವುದು ಕೂಡ ಇಂತಹ ಸಂಕುಚಿತ ಮನೋಭಾವವೇ ಆಗಿದೆ. ಇಂತಹ ಮನಸ್ಥಿತಿಯಿರುವ ಕಡೆ ಪರಸ್ಪರ ವಿಶ್ವಾಸ ನಂಬಿಕೆಗಳು ಇರುವುದಿಲ್ಲ. ಅಪನಂಬಿಕೆಗಳು ತುಂಬಿರುತ್ತವೆ. ನಗುಮುಖದ ಮಾತುಗಳು ಮುಖವಾಡ ತೊಟ್ಟಿರುತ್ತವೆ. ಮಾತುಗಳು ಪೊಳ್ಳು ಎನ್ನಿಸುತ್ತವೆ. ಒಬ್ಬರ ಮಾತು ಇನ್ನೊಬ್ಬರಿಗೆ ಪೊಳ್ಳು ಎನ್ನಿಸುತ್ತಾ ಹೋದಂತೆ ಪರಸ್ಪರ ನಂಬಿಕೆ ವಿಶ್ವಾಸಗಳು ನಾಶವಾಗುತ್ತವೆ. ಮೊದಲೇ ಇದು ಮಧ್ಯಮ ವರ್‍ಗದ ಕಂಫರ್ಟ್ ಜೋನಿನ ಪ್ರಗತಿಪರ ಸೃಜನಶೀಲ ಚಟುವಟಿಕೆ. ಇಲ್ಲಿ ಎಲ್ಲರೂ ಅವರವರದೇ ವೈಯಕ್ತಿಕ ದಂತಗೋಪುರಗಳಲ್ಲಿ ಜೀವಿಸುವುದರಿಂದ ಇಲ್ಲಿ ಪ್ರಚ್ಚನ್ನ ವ್ಯಕ್ತಿವಾದ ಬೆಳೆದಿರುತ್ತದೆ. ಇದು ಬಂಡವಾಳಶಾಹಿ ಸಮಾಜದ ಮತ್ತೊಂದು ಪ್ರಮುಖ ಲಕ್ಶಣವೂ ಹೌದು. ಇಂತಹ ವ್ಯಕ್ತಿವಾದಿ ಚಿಂತನೆಗಳಿಂದ ಕನ್ನಡ ಜಗತ್ತು ಹೇಗೆ ಉನ್ನತಿ ಸಾಧಿಸಲು ಸಾಧ್ಯ? ಎಲ್ಲಿ ಎಶ್ಟೇ ಕ್ರಾಂತಿಕಾರ ವಿಚಾರಗಳನ್ನು ಮಾತನಾಡಿದರೂ ಅದು ಪ್ರಗತಿಪರತೆಯ ನಟನೆ ಎನ್ನಿಸುವ ಅಪಾಯಗಳಿರುತ್ತವೆ. ಇಂತಹ ಸನ್ನಿವೇಶದಲ್ಲಿ ಸೃಜನಶೀಲ ಲೇಖಕರಿಗೆ ದೊಡ್ಡ ಸವಾಲುಗಳಿರುತ್ತವೆ ಮತ್ತು ಅತಿ ಹೆಚ್ಚು ಜಾಗರೂಕವಾಗಿರಬೇಕಾಗುತ್ತದೆ.

ಇಲ್ಲಿನ ಪ್ರಶ್ನೆಯೆಂದರೆ ಈ ಇಬ್ಬರೂ ವಿದ್ವಾಂಸರು ಕನ್ನಡವನ್ನು ’ವಿಶ್ವಪ್ರಜ್ಞೆ’ಯಾಗಿ ಕಟ್ಟುವುದರ, ಅದರ ಅನನ್ಯತೆಯನ್ನು ಸಂಗೋಪಿಸುವ ಬಗೆಗೆ ಚರ್ಚಿಸಲು ಕಾರ್‍ಯಕ್ರಮಕ್ಕೆ ಆಗಮಿಸಿದ್ದರು. ಆದರೆ ತಮ್ಮ ನೆತ್ತರಿನ ಕಣಕಣದಲ್ಲಿ ಜಾತಿಮೋಹ ತುಂಬಿಕೊಂಡವರು ಜಾತ್ಯತೀತ ಮತ್ತು ’ಅನಿಕೇತನ ಕನ್ನಡ ಪ್ರಜ್ಞೆ’ಯನ್ನು ಕಟ್ಟಲು ಹೇಗೆ ಸಾಧ್ಯ? ವಿಶಾಲ ಜನಸಮುದಾಯಗಳನ್ನು ಒಳಗೊಳ್ಳುವ, ಪ್ರತಿನಿಧಿಸುವ ಮತ್ತು ಸಮಾನತೆಯ ಸಮಾಜದ ಆಶಯವುಳ್ಳ ಕನ್ನಡ ಚಿಂತನೆ ಪ್ರತಿಪಾದಿಸಲು ಸಾಧ್ಯವೇ? ಇಂತಹ ಜಾತಿ ರೋಗಗ್ರಸ್ತ ಮನಸ್ಸುಗಳು ಕನ್ನಡದಲ್ಲಿ ಮೆರೆವ ಕಾರಣಕ್ಕಾಗಿ ಕನ್ನಡದಲ್ಲಿ ಕ್ಶುದ್ರ ಚಿಂತನೆಗಳ ಹಾವಳಿ ಹೆಚ್ಚಾಗಿದೆ. ಕುರುಚಲು ಪ್ರತಿಭೆಗಳು ಹುಟ್ಟುತ್ತಿವೆ. ಕವಿಗಳ ಫೋಸು ಕೊಡುವವರ ಸಂಖ್ಯೆ ಹೆಚ್ಚಿದೆ. ನಕಲಿ ಮತ್ತು ಪೊಳ್ಳು ಲೇಖಕರ ಮೆರವಣಿಗೆ ವ್ಯಾಪಕವಾಗಿ ನಡೆದಿದೆ. ಅಕಾಡೆಮಿಗಳು, ಪರಿಶತ್ತುಗಳು ಅನರ್ಹರ ಅಪಾತ್ರರ ಸಂಗೋಪನೆಯ ಕೇಂದ್ರಗಳಾಗಿವೆ. ಇಂತಹ ಪೊಳ್ಳು ಮತ್ತು ನಕಲಿ ಲೇಖಕರ ಸಂತತಿ ಬೆಳೆದಶ್ಟು ಆಳುವವರಿಗೆ ಹೆಚ್ಚು ಪ್ರಿಯವಾಗುತ್ತದೆ. ಇಂತಹ ನಕಲಿಗಳನ್ನೇ ಎಲ್ಲೆಡೆ ಮೆರೆಸುತ್ತ ಅದನ್ನೇ ಕನ್ನಡ ನಿಜವಾದ ಸಂವೇದನೆಯಂತೆ ಮೆರೆಸಲಾಗುತ್ತದೆ. ಇಲ್ಲಿ ಕನ್ನಡ ನುಡಿ ಮತ್ತು ಸಾಹಿತ್ಯವು ಸ್ವಾರ್ಥದ ಮೆಟ್ಟಿಲುಗಳಾಗಿರುತ್ತವೆ. ಕೀರ್‍ತಿಶನಿ ಮತ್ತು ಪ್ರಶಸ್ತಿಗಳ ಹುಚ್ಚು ಹಿಡಿಸಿಕೊಂಡವರಿಂದ ಕನ್ನಡ ಸಂವೇದನೆ ನರಳುತ್ತದೆ. ಅವುಗಳಲ್ಲಿ ಸಮುದಾಯಗಳ ಬಗೆಗೆ ಪ್ರಾಮಾಣಿಕ ಕಾಳಜಿಯೇ ಇರುವುದಿಲ್ಲ. ಲೇಖಕ, ಪ್ರಗತಿಪರ ಎಂಬ ತೋರಿಕೆ ಎದ್ದು ಕಾಣಿಸುತ್ತದೆ. ಇದು ಅತಿಗೆ ತಲುಪಿ ಕೊಂಚ ಎಚ್ಚರವುಳ್ಳವರು, ಪ್ರಜ್ಞಾವಂತರು ಎನ್ನುವವರು ಮೂಲೆಗೆ ಸರಿಯುತ್ತಾರೆ. ಅಲ್ಲದೆ ಅವರು ಎಲ್ಲವನ್ನೂ ಸಿನಿಕತನದಿಂದ ನೋಡುವ, ನಿರಾಕರಿಸುವ ಧೋರಣೆ ಬೆಳೆಸಿಕೊಳ್ಳುತ್ತಾರೆ. ಇದೆಲ್ಲವನ್ನೂ ಮೀರಿ ಕನ್ನಡ ಕಟ್ಟುವ ಕೆಲಸದಲ್ಲಿ ತೊಡಗುವ ಜನರು ಬೆರಳೆಣಿಯಶ್ಟು ಮಾತ್ರ. ಇಂತಹ ಸನ್ನಿವೇಶದಲ್ಲಿ ನಡೆಯುವ ಕನ್ನಡ ಚಟುವಟಿಕೆಗಳು ಬೂಟಾಟಿಕೆಯಂತೆ ಕಾಣಿಸುತ್ತವೆ. ಅವುಗಳ ಬಗೆಗೆ ಯಾರಲ್ಲಿಯೂ ಯಾವುದೇ ವಿಶ್ವಾಸ ಭರವಸೆ ಉಳಿದಿರುವುದಿಲ್ಲ. ಇದು ದೊಡ್ಡ ದುರಂತ.

ಇದನ್ನೂ ಓದಿ: ಕನ್ನಡ ರಾಜ್ಯೋತ್ಸವದಂದು ‘ಪುನೀತ್ ರಾಜ್‌ಕುಮಾರ್‌‌’ ಅವರಿಗೆ ಮರಣೋತ್ತರ ‘ಕರ್ನಾಟಕ ರತ್ನ’ ಪ್ರಶಸ್ತಿ ಪ್ರದಾನ

’ಇದು ಬೇಂದ್ರೆ ಕವಿತಾ ಅಲ್ಲ; ಇದು ಕನ್ನಡ ಕವಿತಾ’ ಎಂದು ಬೇಂದ್ರೆಯವರು ತಮ್ಮ ಕೃತಿಯ ಮುನ್ನುಡಿಯಲ್ಲಿ ಹೇಳುತ್ತಾರೆ. ಅವರು ತಮ್ಮ ಎಲ್ಲ ಮಿತಿಗಳನ್ನು ಮೀರಿ ಕನ್ನಡವನ್ನು ವಿಶ್ವನುಡಿಯಾಗಿಸಬೇಕೆಂಬ ಹಂಬಲ ಹೊಂದಿದ್ದರು. ಕುವೆಂಪು ಅವರಿಗೆ ಎಲ್ಲ ತತ್ವದೆಲ್ಲೆಗಳನ್ನು ಮೀರಿ ಕನ್ನಡವನ್ನು ಅನಿಕೇತನದ ಮತ್ತು ಸರ್‍ವೋದಯದ ಪ್ರಜ್ಞೆಯನ್ನಾಗಿಸುವ ಆಶಯವಿತ್ತು. ಶಿವರಾಮ ಕಾರಂತರಿಗೆ ಸಾಹಿತ್ಯ ಮಾತ್ರವಲ್ಲದೆ ಕನ್ನಡವನ್ನು ವಿಶಾಲ ತಳಹದಿಯಲ್ಲಿ ಸಮಸ್ಟಿಯಾಗಿ ಕಟ್ಟುವ ಕನಸಿತ್ತು. ಅವರ ಬರೆಹಗಳ ಹಿಂದೆ ಕನ್ನಡದ ಬಗೆಗೆ ವಿಶಾಲ ಕಲ್ಪನೆ ಮತ್ತು ದಾರ್ಶನಿಕತೆಯಿತ್ತು. ಅಂತಹ ದಾರ್ಶನಿಕತೆಗಳೇ ಅವರನ್ನು ಕನ್ನಡದ ದೊಡ್ಡ ಲೇಖಕರನ್ನಾಗಿಸಿದ್ದು. ಇಂದಿನ ಕನ್ನಡ ಬರೆಹಗಾರರಲ್ಲಿ ಅಂತಹ ಹಂಬಲವೇ ನಿಚ್ಚಳವಾಗಿ ಕಾಣುತ್ತಿಲ್ಲ. ಬರೆಹಗಳ ಹಿಂದೆ ದೊಡ್ಡ ತಾತ್ವಿಕತೆಯೊಂದು ಹಿನ್ನೆಲೆಯಲ್ಲಿ ಕೆಲಸ ಮಾಡುತ್ತಿದೆ ಎನ್ನಿಸುವುದಿಲ್ಲ. ಯಾಕೆಂದರೆ ತಾವು ಕಟ್ಟಿಕೊಂಡಿರುವ ತಾತ್ವಿಕನೋಟಗಳೇ ಕುಬ್ಜವಾಗಿವೆ. ತಮ್ಮ ಲೋಕದ ಕಲ್ಪನೆಯೇ ಸಂಕುಚಿತವಾಗಿವೆ. ತಮ್ಮ ಅಂತರಂಗ ಜಾತಿಯ ಬೇಲಿಯ ಆಚೆಗೆ ಯೋಚಿಸದಾದಾಗ ಅಲ್ಲಿ ಹೊಸ ವಿಚಾರ, ದೊಡ್ಡ ತತ್ವವೊಂದು ಚಿಗುರಲು ಸಾಧ್ಯವಿಲ್ಲ. ನಮ್ಮ ಹಿರಿಯರಿಗಿದ್ದ ವಿಶಾಲ ಕನ್ನಡ ಪ್ರಜ್ಞೆ ಇಂದಿನ ಲೇಖಕರಲ್ಲಿ ಕಾಣುತ್ತಿಲ್ಲ. ಎಲ್ಲರೂ ತಮ್ಮ ವೈಯಕ್ತಿಕ ಅಸ್ಮಿತೆಗಳಲ್ಲಿಯೇ ಕಳೆದುಹೋಗುತ್ತಿದ್ದಾರೆ. ಕನ್ನಡ ನುಡಿ ಮತ್ತು ಸಾಹಿತ್ಯವೆಂಬ ಬೃಹತ್ ಕ್ಯಾನ್ವಾಸಿನಲ್ಲಿ ಬರೆಯುವವರ ಸಂಖ್ಯೆ ತೀರ ವಿರಳ. ಹಾಗೆ ಬರೆದರೂ ಅದು ಹೊರಗಣ ಸಮಾಜದ ಎದುರು ತಾನು ಲೇಖಕನೆಂಬ ತೋರುಗಾಣಿಕೆಗೆ ನೀಡುವ ಇಮೇಜಾಗಿರುತ್ತದೆ. ಅಂತರಂಗದಲ್ಲಿ ಜಾತಿಯ ತಮಂಧವೇ ಹರಡಿ ಅದರ ನೆರಳಲ್ಲಿ ವಾಸಿಸುವವರ ಸಂಖ್ಯೆಯೇ ಹೆಚ್ಚು. ಹಾಗಾಗಿ ಇಂದಿನ ಕನ್ನಡ ಸಾಹಿತ್ಯ ವಲಯ ತೀವ್ರವಾದ ಸೈದ್ಧಾಂತಿಕ ಮತ್ತು ವೈಯಕ್ತಿಕ ಭ್ರಶ್ಟತನದ ದ್ವಂದ್ವ ನೀತಿಗಳಿಂದ ನರಳುತ್ತಿದೆ. ’ಕನ್ನಡಂ ಗೆಲ್ಗೆ’ ಎನ್ನುವುದು ಕೇವಲ ಮಾತಶ್ಟೆ.

ಅಂದರೆ ಕನ್ನಡವೆಂಬ ಸಮಶ್ಟಿ ಅಸ್ಮಿತೆಯ ಟೂಲ್ ಬಳಸಿದರೂ ಅದು ಜಾತಿ ಅಸ್ಮಿತೆಯ ಆಚೆಗೆ ವಿಸ್ತರಿಸುವುದಿಲ್ಲ. ಅದು ವಿಶಾಲ ಕನ್ನಡ ಪ್ರಜ್ಞೆಯಾಗಿ, ವಿಶ್ವಪ್ರಜ್ಞೆಯಾಗಿ ಬೆಳೆಯುವುದಿಲ್ಲ. ಒಂದೊಮ್ಮೆ ಹಾಗೆ ಬರೆದರೂ ಆಯಾ ಲೇಖಕರ ಸಾಮಾಜಿಕ ವರ್‍ತನೆಯಿಂದ ಅವರೂ ಕುಬ್ಬಗೊಳ್ಳುತ್ತಿದ್ದಾರೆ. ಹಾಗಾಗಿ ಇಂದು ಬಹಿರಂಗದಲ್ಲಿ ಕನ್ನಡ ಸಾಹಿತ್ಯದ ಇಮೇಜಿದ್ದರೂ ಆಳದಲ್ಲಿ ಜಾತಿಜೈಲುಗಳಲ್ಲಿ ವಾಸಿಸುವ ಜನರ ಸಂತತಿ ಹೆಚ್ಚುತ್ತಿದೆ. ಅಂದರೆ ಇಂದಿನ ಕನ್ನಡ ಲೇಖಕರು ಜಾತಿ, ವರ್‍ಗ, ಧರ್ಮ, ಸಿದ್ಧಾಂತ ಮುಂತಾದ ಹಲವು ನೆಲೆಗಳಲ್ಲಿ ವಿಭಜನೆಗೊಂಡಿದ್ದಾರೆ. ಇವು ಒಂದೊಂದು ದ್ವೀಪಗಳ ಹಾಗೆ ವಿನ್ಯಾಸಗೊಂಡಿವೆ. ಲೇಖಕ ಕೇಂದ್ರಿತ, ಜಾತಿ ಕೇಂದ್ರಿತ, ಪ್ರದೇಶ ಕೇಂದ್ರಿತ, ಸಿದ್ದಾಂತ ಕೇಂದ್ರಿತ ಗುಂಪುಗಳಾಗಿ ಸ್ಥಾಪನೆಯಾಗಿವೆ. ಇವು ಒಟ್ಟು ಕನ್ನಡದ ಹಿತಾಸಕ್ತಿಗಿಂತ ತಮ್ಮತಮ್ಮ ಸ್ವಾರ್ಥ ಲೆಕ್ಕಾಚಾರಗಳಲ್ಲಿಯೇ ಹೆಚ್ಚು ಸಮಾಧಾನ ಕಾಣುತ್ತಿವೆ. ಇವುಗಳ ನಡುವೆ ಮುಕ್ತ ಸಂವಾದ ನಡೆಯುವುದಿಲ್ಲ. ಒಂದು ಇನ್ನೊಂದನ್ನು ಒಳಗೊಳ್ಳುವ ಪ್ರಯತ್ನವನ್ನೂ ಮಾಡುವುದಿಲ್ಲ. ಇದರ ನಡುವೆ ಸಮಾಜದಲ್ಲಿ ಪ್ರಚ್ಚನ್ನ ವ್ಯಕ್ತಿವಾದ ಬೆಳೆದಿದೆ. ಅದು ಲೇಖಕರನ್ನೂ ಬಾಧಿಸುತ್ತಿದೆ. ತಮ್ಮ ವಿಚಾರಗಳ ಸರಿತನದ ಅಹಂಕಾರ ಬೆಳೆದಿದೆ. ಈ ಅಹಂಕಾರ ಬಹಳ ಆಕ್ರಮಣಕಾರಿಯಾಗಿದೆ. ಅದರಲ್ಲಿ ಸಾಮಾಜಿಕ ಮಾಧ್ಯಮಗಳು ಮುಂಚೂಣಿಗೆ ಬಂದ ಮೇಲೆ ಇದು ಇನ್ನಶ್ಟು ಆಕ್ರಮಣಕಾರಿಯಾಗಿದೆ. ಇದು ಕನ್ನಡ ಮನಸ್ಸುಗಳನ್ನು ಚಿದ್ರಗೊಳಿಸಲು ಹೆಚ್ಚಿನ ಕಾಣಿಕೆ ನೀಡುತ್ತಿದೆ. ಇಲ್ಲಿ ವಾದ ಗೆಲ್ಲುವ ಹಠಮಾರಿತನ ಎದ್ದು ಕಾಣುತ್ತದೆಯೇ ಹೊರತು ಮುಕ್ತ ಮಾತುಕತೆಗಳ ಮೂಲಕ ಪರಸ್ಪರ ತಿದ್ದಿಕೊಳ್ಳುವ ಕೆಲಸ ನಡೆಯುವುದೇ ಇಲ್ಲ. ತಮ್ಮ ಎದುರು ಪಕ್ಶದವರ ಜೊತೆಗೆ ಸಂವಾದ ಮಾಡುವ ಹೊತ್ತಿನಲ್ಲಿ ಅವರ ಅಭಿಪ್ರಾಯಕ್ಕೂ ಗೌರವ ನೀಡಬೇಕು ಎಂಬ ಎಚ್ಚರವೂ ಇರುವುದಿಲ್ಲ. ಬದಲಿಗೆ ವಾದ ಗೆಲ್ಲುವ ಉಮೇದಿನಲ್ಲಿ ಎದುರಾಳಿಗಳ ಮೇಳೆ ಆಕ್ರಮಣ ನಡೆಸಿ ಸ್ವಹತ್ಯೆಯ ಜೊತೆಗೆ ಮಿತ್ರಹತ್ಯೆಯನ್ನು ಮಾಡಲಾಗುತ್ತದೆ. ಕನ್ನಡದಲ್ಲಿ ಈ ಸ್ವಹತ್ಯೆ ಮತ್ತು ಮಿತ್ರಹತ್ಯೆಗಳು ಯಾವುದೇ ಎಗ್ಗಿಲ್ಲದೆ ಜೋರಾಗಿ ನಡೆದಿದೆ.

ಇದನ್ನು ಗಮನಿಸಿದರೆ ಕನ್ನಡದ ಜಗತ್ತು ಒಡೆದ ಕನ್ನಡಿಯಾಗಿರುವುದು ಖಚಿತವಾಗುತ್ತದೆ. ಇಂತಹ ಹೊತ್ತಿನಲ್ಲಿ ಪ್ರಜಾಪ್ರಭುತ್ವದ ಬಸಿರನ್ನು ಸ್ಪೋಟಿಸಿ ಚುನಾಯಿತ ಸರ್‍ವಾಧಿಕಾರ ವ್ಯವಸ್ಥೆಯು ಇಂದು ದೇಶವನ್ನು ಆಳುತ್ತಿದೆ. ಪ್ರಜಾಪ್ರಭುತ್ವದ ಎಲ್ಲ ಮೌಲ್ಯಗಳನ್ನು ಗಾಳಿಗೆ ತೂರಿ ಅದರ ಅಣುಕು ಪ್ರದರ್‍ಶನ ಜೋರಾಗಿ ನಡೆದಿದೆ. ಚರಿತ್ರೆಯ ಪುಸ್ತಕಗಳಲ್ಲಿ ಓದುತ್ತಿದ್ದ ಫ್ಯಾಸಿಸಂ ಎಲ್ಲ ಮನೆಗಳ ಬಾಗಿಲು ಬಡಿಯುತ್ತಿದೆ. ಅದರ ಎದುರು ಬಿದ್ದವರ ಗುಂಡಿಗೆ ಸೀಳುವ, ಜೈಲುಗಳಲ್ಲಿ ಕೊಳೆಸುವ ಕೆಲಸ ಮಾಡುತ್ತಿದೆ. ದುಡಿಯುವ ಜನರನ್ನು ಕಾಲೊರೆಸುವ ಡೋರ್ ಮ್ಯಾಟ್ ಮಾಡಿಕೊಳ್ಳಲಾಗಿದೆ. ಅಧಿಕಾರಸ್ಥರ ದೆವ್ವಂಗುಣಿತದ ಆಡುಂಬೊಲವಾಗಿ ದೇಶ ಬದಲಾಗಿದೆ. ಸಂಸ್ಕೃತ ಮತ್ತು ಹಿಂದಿಗಳ ದಬ್ಬಾಳಿಕೆ ಹೆಚ್ಚಾಗಿ ಕನ್ನಡವನ್ನು ಕೊಲ್ಲಲು ಹವಣಿಸುತ್ತಿವೆ. ಇದನ್ನು ಅಧಿಕಾರಸ್ಥರು ಹಠ ಹಿಡಿದು ಮಾಡುತ್ತಿದ್ದಾರೆ. ಇದರಿಂದ ಕನ್ನಡದ ಬೇರುಗಳು ಮತ್ತಶ್ಟು ಸಡಿಲವಾಗುತ್ತಲೇ ಇವೆ. ಜನರ ಜೀವನ ಅತ್ಯಂತ ಹೀನಾಯ ಸ್ಥಿತಿ ಮುಟ್ಟಿದೆ.

ಇದನ್ನೂ ಓದಿ: ರಾಷ್ಟ್ರೀಯ ಭಾಷೆಯ ಕಲ್ಪನೆ ಮತ್ತು ಕನ್ನಡದ ಅಸ್ಮಿತೆ

ಹೀಗೆ ಅಸಂಖ್ಯ ಸಮಸ್ಯೆಗಳು ನಮ್ಮ ನಾಡನ್ನು ಕಾಡುತ್ತಿವೆ. ಇಂತಹ ಹೊತ್ತಿನಲ್ಲಿ ಜೀವನ್ಮರಣದ ಪ್ರಶ್ನೆಯಾಗಿಸಿಕೊಂಡು ಅದರ ಎದುರು ಹೋರಾಡಬೇಕಾದ ಅನಿವಾರ್‍ಯತೆ ಎದುರಾಗಿದೆ. ಆದರೆ ಒಡಕಲು ಬಿಂಬದಂತಿರುವ ಕನ್ನಡ ಜಗತ್ತು ಇದನ್ನು ಸಂಘಟಿತವಾಗಿ ಎದುರಿಸಲು ಸಾಧ್ಯವೇ? ಎಂಬ ಕೇಳ್ವಿ ಹುಟ್ಟುತ್ತದೆ. ಕನ್ನಡದ ವಿದ್ವತ್ ಪ್ರಪಂಚ ಕೇವಲ ಎಡ-ಬಲಗಳಲ್ಲಿ ಮಾತ್ರವಲ್ಲದೆ ವಿವಿಧ ಅಸ್ಮಿತೆಗಳಲ್ಲಿ ಸಿದ್ದಾಂತಗಳ ನೆಲೆಯಲ್ಲಿ ಒಡೆದುಕೊಂಡಿರುವಾಗ ಕನಿಶ್ಟ ಇಲ್ಲೊಂದು ಗಟ್ಟಿಯಾದ ಬದಲಿ ಚಿಂತನೆಯನ್ನು ಸೃಶ್ಟಿಸಲು, ಅದನ್ನು ವ್ಯಾಪಕವಾಗಿ ಪ್ರಚಾರ ಮಾಡಲು ಸಾಧ್ಯವೇ? ಪರಸ್ಪರ ನಂಬಿಕೆ ವಿಶ್ವಾಸಗಳಿಲ್ಲದೆ ಒಬ್ಬರು ಮತ್ತೊಬ್ಬರ ಕಾಲೆಳೆಯುತ್ತ ಕಾಲ ಕಳೆವ ಸ್ಥಿತಿಯಿದೆ. ಹೀಗಿರುವಾಗ ಫ್ಯಾಸಿಸಂ ಅನ್ನು ಸೈದ್ಧಾಂತಿಕವಾಗಿ ಎದುರಿಸಲು ಇಂದಿನ ಕನ್ನಡ ಚಿಂತಕರಿಗೆ ಸಾಧ್ಯವೇ? ಎಂಬ ಪ್ರಶ್ನೆಯನ್ನು ನಮಗೆ ನಾವೇ ಕೇಳಿಕೊಳ್ಳಬೇಕಿದೆ. ಸ್ವವಿಮರ್ಶೆ ಮಾಡಿಕೊಳ್ಳಬೇಕಿದೆ.

ಇಂದು ಮತ್ತೊಂದು ಕನ್ನಡ-ಕರ್ನಾಟಕ ರಾಜ್ಯೋತ್ಸವ ಬಂದಿದೆ. ಈ ಹೊತ್ತಿನಲ್ಲಿ ಉತ್ಸವ, ಸಂಭ್ರಮಗಳಿಗೆ ಯಾವುದೇ ಅರ್ಥವಿಲ್ಲ. ಅವುಗಳಿಗೆ ಮಹತ್ವ ಉಳಿದಿಲ್ಲ. ನಾಡಿಗೆ ಎದುರಾಗಿರುವ ಸಮಸ್ಯೆಗಳ ವಿರುದ್ಧ ಹೋರಾಡುವುದೇ ನಾಡು ಕಟ್ಟೋಣದ ಇಲ್ಲವೇ ಕನ್ನಡ ಕಟ್ಟೋಣದ ಕೆಲಸ. ಅದಕ್ಕೆ ಈ ನಾಡು ಸಿದ್ದವಾಗಿದೆಯೇ? ಕನ್ನಡದ ಕಾಲಾಳುಗಳು ಸಿದ್ದವಾಗಿದ್ದಾರೆಯೇ? ಎಂಬ ಕೇಳ್ವಿಗಳು ಹುಟ್ಟುತ್ತವೆ. ಮೇಲಿನ ಚರ್‍ಚೆಯಿಂದ ಕನ್ನಡ ಜಗತ್ತು ಅಲಿಯಾಸ್ ಕನ್ನಡದ ಸಾರಸ್ವತಲೋಕ ಒಂದು ಒಡಕಲು ಬಿಂಬ ಎಂಬುದು ಸ್ಪಶ್ಟವಾಗಿದೆ. ಅದು ಯಾವುದೇ ಎದುರಾಳಿಯನ್ನು ಒಂದುಗೂಡಿ ಎದುರಿಸುವ ಶಕ್ತಿಯನ್ನು ಪಡೆದೇ ಇಲ್ಲ. ನಿರ್ಣಾಯಕ ಸಂದರ್ಭದಲ್ಲಿ ಅದು ಹೋರಾಡುವುದಕ್ಕಿಂತ ಮೌನವನ್ನು ಊರುಗೋಲಾಗಿ ಬಳಸುವುದೇ ಹೆಚ್ಚು.

ಶಿವರಾಮ ಕಾರಂತ

ಈ ಎಲ್ಲ ದ್ವೀಪಗಳನ್ನು ಅಡೆತಡೆಗಳನ್ನು ದಾಟಿ ಎಲ್ಲರನ್ನೂ ಬೆಸೆಯುವ ಒಂದು ಆಂದೋಲನವೇ ನಡೆಯಬೇಕು. ಅದು ಮೊದಲು ಎಲ್ಲರ ಮನಸ್ಸಿನಲ್ಲಾಗಬೇಕು. ಪರಸ್ಪರ ಗೆಳೆತನದ ಮಾತುಕತೆಯಿಂದ ಆರಂಭವಾಗಿ ಸಾಮೂಹಿಕ ಸಂವಾದಗಳು ನಡೆಯಬೇಕು. ಅಲ್ಲಿ ವಿಶ್ವಾಸಮರದ ಬೇರುಗಳು ಗಟ್ಟಿಯಾಗಿ ಬೇರುಬಿಡಬೇಕು. ಅದು ನಿಧಾನವಾಗಿ ಸಮುದಾಯದಲ್ಲಿ ಹರಡಿ ಮನಸ್ಸುಗಳನ್ನು ಬೆಸೆಯಬೇಕು. ಎಲ್ಲ ವೈವಿಧ್ಯಮಯ ಆಲೋಚನೆಗಳ ನಡುವೆ ಒಂದು ಸಮಾನ ಚಿಂತನೆ ಬೆಳೆಯಬೇಕು. ವ್ಯಕ್ತಿವಿಶಿಶ್ಟತೆಯ ಜೊತೆಗೆ ಸಮುದಾಯ ನಿಶ್ಟೆಯೂ ಬೆಳೆಯಬೇಕು. ಸ್ವಾರ್ಥದ ಹುದುಲಿನಿಂದಾಚೆ ಬಂದು ’ಕನ್ನಡ ಕನ್ನಡವ ಕನ್ನಡಿಸುತಿರುವಂತೆ’ ಮಾಡಬೇಕು.

ಹಾಗಾದಾಗ ಮಾತ್ರ ಸದ್ಯದ ಕನ್ನಡದ ಒಡಕಲು ಬಿಂಬಗಳು ಕೊಂಚವಾದರೂ ಕೂಡಿಕೊಳ್ಳಲು ಸಾಧ್ಯ. ಅದಿಲ್ಲವಾದರೆ ಈಗಿನ ಒಡಕಲು ಸನ್ನಿವೇಶ ಮತ್ತೂ ಮುಂದುವರಿಯುತ್ತದೆ. ನಮ್ಮ ಸಮಾಜ ಈ ಮೊದಲೇ ಜಾತಿ ವರ್‍ಗ ಮತ್ತು ಲಿಂಗತ್ವದ ನೆಲೆಯಲ್ಲಿ ರಾಚನಿಕವಾಗಿ ಚಿದ್ರಗೊಂಡಿದೆ. ಆ ಚಿದ್ರಗೊಂಡ ವ್ಯವಸ್ಥೆಗೆ ಬಂಡವಾಳಶಾಹಿ ವರ್‍ಗ ಇನ್ನಶ್ಟು ವಿಕಾರಗಳನ್ನು ಸೇರಿಸುತ್ತಿದೆ. ಇಂತಹ ಹೊತ್ತಿನಲ್ಲಿ ಆಳವಾದ ಸಮುದಾಯ ಪ್ರಜ್ಞೆಯಿಂದ ಸ್ವವಿಮರ್ಶೆ ಮಾಡಿಕೊಂಡು ಕ್ರಿಯಾಶೀಲಗೊಳ್ಳದ ಹೊರತು ಇಲ್ಲಿ ಹೊಸನೀರು ಹರಿಯುವುದಿಲ್ಲ. ಹೊಸಚಿಂತನೆ ಹುಟ್ಟುವುದಿಲ್ಲ. ಹೊಸ ಸಮಾಜ ಹುಟ್ಟುವುದಿಲ್ಲ. ಅಂತಹ ಸ್ವವಿಮರ್ಶೆಯನ್ನು ಮಾಡಿಕೊಳ್ಳದ ಹೊರತು ಇಲ್ಲಿ ಹೊಸ ಸಾಹಿತ್ಯ ಕೂಡ ಹುಟ್ಟದು. ಇಂದು ಕನ್ನಡ ಬಯಸುತ್ತಿರುವುದು ಅಂತಹ ಆತ್ಮವಿಮರ್ಶೆಯನ್ನೇ. ಅಂತಹ ಸ್ವವಿಮರ್ಶೆಯೊಂದಿಗೆ ವಚನಕಾರರು ತಮ್ಮ ವಚನಗಳನ್ನು ಚಿಂತನೆಯನ್ನೂ ಕಟ್ಟಿ ಬೆಳೆಸಿದರು. ಆ ಕಾರಣಕ್ಕಾಗಿಯೇ ಅದು ಇಂದಿಗೂ ಪ್ರಸ್ತುತವಾಗಿರುವುದು. ಅನುಭವ ಮಂಟಪಗಳು ಇಂದು ಎಲ್ಲೆಡೆ ಕ್ರಿಯಾಶೀಲವಾಗಬೇಕು. ಅದನ್ನು ಪ್ರಾಮಾಣಿಕವಾಗಿ ಮಾಡದ ಹೊರತು ಕನ್ನಡವನ್ನು, ಕನ್ನಡ ಸಾಹಿತ್ಯವನ್ನು ಮತ್ತು ಕನ್ನಡ ಜಗತ್ತನ್ನು ವಿಶ್ವಮಟ್ಟಕ್ಕೆ ಕೊಂಡೊಯ್ಯಲು ಸಾಧ್ಯವಾಗದು. ಇಂತಹ ಮಹತ್ವಾಕಾಂಕ್ಶೆಯಿಲ್ಲದೆ ಏನನ್ನೂ ಹೊಸತು ಕಟ್ಟಲಾಗದು. ಇದು ಸಂಘಟಿತವಾದ ಪ್ರಯತ್ನವಿಲ್ಲದೆ ಆಗುವ ಕೆಲಸವಲ್ಲ. ಮುಂದಿನ ದಿನಗಳಲ್ಲಿ ಸುಭದ್ರ ಕರ್ನಾಟಕ ಕಟ್ಟಲು ಸಂಘಟಿತ ಪ್ರಯತ್ನ ಅತ್ಯಗತ್ಯ. ಇಂತಹ ಸುಭದ್ರ ಕನ್ನಡ ನಾಡನ್ನು ಕಟ್ಟಲು, ಮೊದಲು ನಾವು ಕನ್ನಡದ ಮನಸ್ಸುಗಳನ್ನು ಕಟ್ಟುವ ಅಗತ್ಯವಿದೆ. ಯಾಕೆಂದರೆ ಇಂದು ಚಿದ್ರವಾಗಿರುವುದು ಕನ್ನಡದ ಮನಸ್ಸುಗಳು. ಅವುಗಳನ್ನು ಜೋಡಿಸುವುದೇ ಇಂದಿನ ಆದ್ಯ ಕೆಲಸ. ಇದು ಸಾಧ್ಯವಾದರೆ ಕನ್ನಡ ನಾಡು ಕಟ್ಟುವ ಕೆಲಸ ತನಗೆ ತಾನೇ ನಡೆಯುತ್ತದೆ. ಈ ಆಶಯದಿಂದ ಕನ್ನಡವೆಂಬ ಒಡಕಲು ಬಿಂಬದ ಸ್ವಗತದಂತೆ ಇಲ್ಲಿ ಕೆಲವು ಅನಿಸಿಕೆಗಳನ್ನು ಹಂಚಿಕೊಳ್ಳಲಾಗಿದೆ. ಈ ಬಗೆಗೆ ವ್ಯಾಪಕವಾದ ಚರ್‍ಚೆ ಅಗತ್ಯವಿದೆ.

ಡಾ.ರಂಗನಾಥ್ ಕಂಟನಕುಂಟೆ

ರಂಗನಾಥ ಕಂಟನಕುಂಟೆ
ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿರುವ ರಂಗನಾಥ ಕಂಟನಕುಂಟೆ ಹೊಸ ತಲೆಮಾರಿನ ಚಿಂತಕ ಮತ್ತು ಕವಿ. ಹಂಪಿ ವಿಶ್ವವಿದ್ಯಾಲಯದಿಂದ ಜನಭಾಷೆ ಮತ್ತು ಪ್ರಭುತ್ವದ ಬಾಷೆಗಳ ನಡುವಿನ ಸಂಘರ್ಷದ ನೆಲೆಗಳು ಎಂಬ ವಿಷಯದಲ್ಲಿ ಪಿಎಚ್‌ಡಿ ಅಧ್ಯಯನ ಮಾಡಿದ್ದಾರೆ. ‘ಓದಿನ ಜಾಡು’, ‘ತೀರದ ನಡಿಗೆ’, ‘ಗೋಡೆಯ ಚಿತ್ರ’ ರಂಗನಾಥ ಅವರ ಕೆಲವು ಪುಸ್ತಕಗಳು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹೆಚ್ಚುವರಿ ಹಣ ಬೇಕಾದರೆ ಸುಪ್ರೀಂಕೋರ್ಟ್‌ನಿಂದ ಮೊಕದ್ದಮೆ ಹಿಂಪಡೆಯಿರಿ: ಕೇರಳ ಸರಕಾರಕ್ಕೆ ಹೇಳಿದ ಕೇಂದ್ರ

0
ಕೇರಳದ ಪ್ರಸ್ತುತ ಅನಿಶ್ಚಿತ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಹೆಚ್ಚುವರಿಯಾಗಿ 11,731 ಕೋಟಿ ರೂ.ಗಳ ಸಾಲವನ್ನು ಪಡೆಯಲು ಕೇರಳಕ್ಕೆ ಅವಕಾಶ ನೀಡುವ ಬಗ್ಗೆ ಪರಿಗಣಿಸಲು ಸಿದ್ಧ ಎಂದು ಕೇಂದ್ರ ಸರ್ಕಾರ ಹೇಳಿದೆ. ಆದರೆ ರಾಜ್ಯ...